ಚಿಕ್ಕಮಗಳೂರು: ಕ್ಷೇತ್ರವ್ಯಾಪ್ತಿಯ ೨೩ ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ನಿವೇಶನ ನೀಡಲು ಭೂಮಿ ಗುರ್ತಿಸುವಂತೆ ಹಾಗೂ ವಸತಿ ರಹಿತ, ನಿವೇಶನ ರಹಿತರ ಪಟ್ಟಿಯನ್ನು ಒಂದು ತಿಂಗಳ ಒಳಗೆ ಸಿದ್ಧಪಡಿಸಲು ಶಾಸಕ ಹೆಚ್.ಡಿ ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್, ಇಓ, ಪಡಿಓ, ಎಡಿಎಲ್‌ಆರ್, ಎಸಿಎಫ್, ಆರ್‌ಐ, ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಆದೇಶದಂತೆ ಆಡಳಿತಕ್ಕೆ ಚುರುಕು ಮುಟ್ಟಿಸಲು ಇಂದು ಸಭೆ ನಡೆಸಿ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಗ್ರಾಮಾಂತರದಲ್ಲಿ ಈಗಾಗಲೇ ಒಟ್ಟು ೨೦೯೦ ಜನ ನಿವೇಶನ ರಹಿತ ಫಲಾನುಭವಿಗಳು ಇದ್ದು, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಅಧಿಕಾರಿಗೆ ಸೂಚನೆ ನೀಡಿದ ಅವರು, ಅತೀ ಶೀಘ್ರದಲ್ಲಿ ಪಟ್ಟಿಯನ್ನು ತಯಾರಿಸುವಂತೆ ತಿಳಿಸಿರುವುದಾಗಿ ಹೇಳಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ಇ-ಖಾತೆಗಳ ಬಗ್ಗೆ ಸಮಸ್ಯೆ ಇದ್ದು, ಎಲ್ಲಾ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಿ ಈ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಇಓ ಹಾಗೂ ತಮ್ಮ ಗಮನಕ್ಕೆ ತೊಡಕುಗಳ ವಿವರಿಸಿದ ಹಿನ್ನೆಲೆಯಲ್ಲಿ ಸರ್ಕಾರದ ತಂತ್ರಾಂಶದಲ್ಲಿ ಕ್ರಯಪತ್ರ ಕಡ್ಡಾಯವಾಗಿರಬೇಕೆಂದು ತಿಳಿಸಿದ್ದಾರೆ, ಪತ್ರಾರ್ಜಿತ ಆಸ್ತಿಗೆ ಕ್ರಯಪತ್ರ ಇರುವುದಿಲ್ಲ. ಈ ಸಂಬಂಧ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಲಕ್ಯಾ ಮತ್ತು ಸಖರಾಯಪಟ್ಟಣ ಹೋಬಳಿ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ರೈತರು ಅರ್ಜಿ ಸಲ್ಲಿಸಿದ್ದಾರೆ, ಈ ಬಗ್ಗೆ ಪರಿಶೀಲಿಸಿ, ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Instructions to identify land for shelter sites within the constituency
