Tag: May the deserving ones get the benefits of the five guarantee schemes.

  • ಅರ್ಹರಿಗೆ ಪಂಚ ಗ್ಯಾರಂಟಿ ಯೋಜನೆಗಳ ಲಾಭ ದೊರೆಯಲಿ

    ಅರ್ಹರಿಗೆ ಪಂಚ ಗ್ಯಾರಂಟಿ ಯೋಜನೆಗಳ ಲಾಭ ದೊರೆಯಲಿ

    ಚಿಕ್ಕಮಗಳೂರು: ರಾಜ್ಯ ಸರ್ಕಾರವು ರಾಜ್ಯದ ಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಢಗೊಳಿಸುವ ದೃಷ್ಟಿಯಿಂದ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಇಂದು ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ನಿಗಾ ವಹಿಸಿ ಶೇ.೧೦೦ ರಷ್ಟು ಪ್ರಗತಿ ಸಾಧಿಸುವಂತೆ ತಿಳಿಸಿದರು.

    ಹಸಿವು ಮುಕ್ತ ಕರ್ನಾಟಕ, ಮಹಿಳೆಯರ ಸಬಲೀಕರಣ, ಸ್ವಾವಲಂಬಿ ಬದುಕಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಯಾರ ಹಸ್ತಕ್ಷೇಪ, ಮಧ್ಯವರ್ತಿಗಳ ಹಾವಳಿ ಇಲ್ಲದೆ ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು, ಇಂತಹ ಅನುಕೂಲಕರ ವಾತಾವರಣ ಸೃಷ್ಟಿಸಿರುವ ಗ್ಯಾರಂಟಿ ಯೋಜನೆಗಳ ಅನುಕೂಲದ ಬಗ್ಗೆ ತಾಲ್ಲೂಕು, ಹೋಬಳಿ ಪಂಚಾಯಿತಿವಾರು ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

    ಇ-ಕೆವೈಸಿ ಅಡಿ ಕುಟುಂಬದ ಯಾವುದೇ ಸದಸ್ಯರು ಬಯೋಮೆಟ್ರಿಕ್ ಮರುದೃಢೀಕರಿಸಿದಲ್ಲಿ ಮುಂಬರುವ ದಿನಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆಯಬಹುದು. ಜುಲೈ ಮಾಹೆಯಿಂದ ತರೀಕೆರೆ, ಕಡೂರು, ಚಿಕ್ಕಮಗಳೂರು, ಅಜ್ಜಂಪುರ ತಾಲ್ಲೂಕುಗಳಿಗೆ ಅಕ್ಕಿಯ ಜೊತೆಗೆ ರಾಗಿಯನ್ನು ಕೂಡ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ (ಪ್ರಭಾರ) ನಾಗರತ್ನ ಸಭೆಗೆ ಮಾಹಿತಿ ನೀಡಿದರು.

    ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ಯುವನಿಧಿ ಯೋಜನೆಯಡಿ ಸವಲತ್ತುಗಳನ್ನು ಪಡೆಯುತ್ತಿರುವ ಪದವಿ ಹಾಗೂ ಡಿಪ್ಲೊಮಾ ಫಲಾನುಭವಿಗಳ ಮಾಹಿತಿ ಪಡೆದು ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಿ ಸ್ವಂತ ಉದ್ದಿಮೆ ನಡೆಸಲು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಶಂಕರ ಕೊರವರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮುಂತಾದವರು ಹಾಜರಿದ್ದರು.