ಅಹಮದಾಬಾದ್‌ನಲ್ಲಿ 265 ಜನರು ಪ್ರಾಣ ಕಳೆದುಕೊಂಡ ಏರ್ ಇಂಡಿಯಾ AI 171 ವಿಮಾನ ಅಪಘಾತದ ಸ್ಥಳಕ್ಕೆ ಇಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಇಲ್ಲಿನ ನಾಗರಿಕ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಮೋದಿ, ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಿಂದ ನಾವೆಲ್ಲರೂ ತೀವ್ರ ಆಘಾತಗೊಂಡಿದ್ದೇವೆ. ಇಷ್ಟೊಂದು ಹಠಾತ್ ಮತ್ತು ಹೃದಯವಿದ್ರಾವಕ ರೀತಿಯಲ್ಲಿ ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ಪದಗಳಿಗೆ ನಿಲುಕದಷ್ಟು ದೊಡ್ಡ ದುರಂತ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು” ಎಂದು ಬರೆದುಕೊಂಡಿದ್ದಾರೆ.
ತಮ್ಮವರನ್ನು ಕಳೆದುಕೊಂಡವರ ನೋವು ನಮಗೆ ಅರ್ಥವಾಗುತ್ತದೆ. ವರ್ಷಗಳವರೆಗೆ ಈ ಆಘಾತ ನಮ್ಮನ್ನು ಕಾಡಲಿದೆ ಎಂದಿದ್ದಾರೆ. ನಿನ್ನೆ ಮಧ್ಯಾಹ್ನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಮೇಘನಿನಗರ ಪ್ರದೇಶದ ಬಿಜೆ ವೈದ್ಯಕೀಯ ಕಾಲೇಜಿನ ಸಂಕೀರ್ಣಕ್ಕೆ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ (AI171) ಅಪ್ಪಳಿಸಿದ ಸ್ಥಳವನ್ನು ಇಂದು ಪ್ರಧಾನಿ ಸುಮಾರು 20 ನಿಮಿಷಗಳ ಕಾಲ ಪರಿಶೀಲಿಸಿದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅವರು ವಿಮಾನ ಕಾಲೇಜು ಹಾಸ್ಟೆಲ್ ಹೇಗೆ ಅಪ್ಪಳಿಸಿತು ಎಂಬುದರ ಬಗ್ಗೆ ಮೋದಿಗೆ ವಿವರಿಸಿದರು.
ನಂತರ ಪ್ರಧಾನಿಯವರು ನಗರದ ಸಿವಿಲ್ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿಯಾದರು. ಒಂದು ದಿನದ ಹಿಂದೆ ನಡೆದ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಶ್‌ಕುಮಾರ್ ರಮೇಶ್ ಅವರನ್ನು ಭೇಟಿಯಾದರು.
Prime Minister Modi visits the site of the plane crash
