ಚಿಕ್ಕಮಗಳೂರು: ಸಖರಾಯಪಟ್ಟಣ ಹಾಗೂ ದೇವನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಸರ್ಕಾರ ೩೧ ಕೋಟಿ ರೂ ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ಚಿಕ್ಕದೇವನೂರಿನಲ್ಲಿ ಏರ್ಪಡಿಸಲಾಗಿದ್ದ ನಾಗರಾಳು, ಚಿಕ್ಕದೇವನೂರು, ದೇವನೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಮೂರು ಪಂಚಾಯಿತಿಗಳಿಗೂ ತಲಾ ೪೦ ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಕಬಳಿ ಬಸ್ ತಂಗುದಾಣದಿಂದ ಗುಣಸಾಗರದವರೆಗೆ ೧.೭೫ ಕೋಟಿ ರೂ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗುವುದೆಂದು ಹೇಳಿದರು.
ಈ ಭಾಗದ ಬಹುತೇಕ ಎಲ್ಲಾ ಕಾಮಗಾರಿಗಳು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಅವರು, ಕಬಳಿ ಗ್ರಾಮದಲ್ಲಿ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಎರಡು ಕೋಟಿ ರೂ ವೆಚ್ಚದಲ್ಲಿ ಚಂದ್ರಶೇಖರ್‌ಪುರದಿಂದ ಬಾಣಾವರ ರಸ್ತೆವರೆಗೆ, ೧ ಕೋಟಿ ರೂ ವೆಚ್ಚದಲ್ಲಿ ಚಿಕ್ಕಬಾಣಾವರ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಒಟ್ಟಾರೆಯಾಗಿ ಈ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದೆಂದು ಹೇಳಿದರು.
ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ೫೯ ಸಾವಿರ ಕೋಟಿ ರೂ ಖರ್ಚು ಮಾಡುವ ಮೂಲಕ ಅನುಷ್ಠಾನ ಮಾಡಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೂಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಭಾಗದ ರೈತರ ಜೀವನಾಡಿಯಾಗಿರುವ ಕೆರೆ ತುಂಬಿಸುವ ಯೋಜನೆಗೆ ಎತ್ತಿನ ಹೊಳೆ ಮೂಲಕ ಬೆಳವಾಡಿ, ದೇವನೂರು ಕೆರೆ, ಮಾಚೇನಹಳ್ಳಿ ಕೆರೆ ಭರ್ತಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಭದ್ರಾ ಉಪಕಣಿವೆ ಯೋಜನೆಗೆ ಮೂರನೇ ಹಂತದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಅನುಮೋದನೆ ದೊರೆಯಲಿದೆ. ನಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಕೆರೆ ತುಂಬಿಸುವ ಯೋಜನೆ ಅಭಿವೃದ್ಧಿಗೆ ಬದ್ಧ ಎಂದು ಹೇಳಿದರು.
ಬಿಜೆಪಿಯವರು ಜನಾಕ್ರೋಶ ಯಾತ್ರೆಯನ್ನು ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕು, ಗ್ಯಾಸ್ ದರ ಹೆಚ್ಚಳವಾಗಿರುವುದನ್ನು ಮರೆಮಾಚಲು ರಾಜ್ಯಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳ ದರವನ್ನು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರ ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದ ಅವರು, ನುಡಿದಂತೆ ನಡೆದ ರಾಜ್ಯ ಸರ್ಕಾರಕ್ಕೆ ಮಸಿ ಬಳಿಯುವ ಯತ್ನವನ್ನು ಬಿಜೆಪಿ ಅವರು ಮಾಡುತ್ತ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆಂದು ದೂರಿದರು.
ಈ ಸಂದರ್ಭದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಮೂರೂ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.
Sakharayapattana-Devanoor area development at a cost of Rs. 31 crore
