ಚಿಕ್ಕಮಗಳೂರು: ಕಡೂರು ತಾಲೂಕಿನ ನಿಡಘಟ್ಟ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ಅವರ ನೂತನ ದೇವಾಲಯ ಮತ್ತು ಗೋಪುರ ಕಲಶಾರೋಹಣ ಹಾಗೂ ಧಾರ್ಮಿಕ ಸಮಾರಂಭ ಮೇ.೧ ರಿಂದ ೩ ರವರೆಗೆ ನಡೆಯಲಿದೆ ಎಂದು ಊರಿನ ಮುಖಂಡರಾದ ಪಿಗ್ಮಿರಾಜಣ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಇದ್ದ ಶ್ರೀಕಲ್ಲೇಶ್ವರಸ್ವಾಮಿ ಹಳೆಯ ದೇವಾಲಯವನ್ನು ಕೆಡವಿ ೨೦೧೫ ರಿಂದ ನೂತನ ದೇವಾಲಯ ನಿರ್ಮಿಸಲು ಅಡಿಗಲ್ಲು ಹಾಕಿದೆವು. ಇದೀಗ ಸರಕಾರ, ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ೧.೫೦ ಕೋಟಿ ರೂ .ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಶಾಸಕ ಎಚ್.ಡಿ.ತಮ್ಮಯ್ಯ, ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಆರ್ಥಿಕ ನೆರವು ಒದಗಿಸಿದ್ದಾರೆ ಎಂದರು.
ದೇವಾಲಯದ ಉದ್ಗಾಟನಾ ಕಾರ್ಯಕ್ರಮಗಳು ಮೇ.೧ ರಿಂದ ನಡೆಯಲಿವೆ ಎಂದು ಹೇಳಿದರು. ಮೇ.೨ ರಂದು ಗಂಗಾಪೂಜೆ, ಗೋಪೂಜೆ, ಪ್ರವೇಶ, ಕಲಶಪ್ರತಿಷ್ಠಾಪನೆ, ಶ್ರೀ ಕಲ್ಲೇಶ್ವರ ಸ್ವಾಮಿ ಅವರ ಪ್ರಾಣ ಪ್ರತಿಷ್ಠಾಪನೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮೇ.೩ ರಂದು ಬೆಳಗ್ಗೆ ೧೧ ಕ್ಕೆ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಸಿರಿಗೆರೆ ಶ್ರೀ ಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಲ್ಲೇಶಗೌಡ ಆಧ್ಯಕ್ಷತೆ ವಹಿಸಲಿದ್ದು, ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಎಂಎಲ್‌ಸಿ ಸಿ.ಟಿ.ರವಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಬೆಳ್ಳಿಪ್ರಕಾಶ್, ಬಿ.ಎಚ್.ಹರೀಶ್, ಕೆ.ಎಸ್.ಆನಂದ್, ಡಾ.ಧನಂಜಯ ಸರ್ಜಿ, ಗಾಯತ್ರಿ ಶಾಂತೇಗೌಡ, ಎಸ್.ಎಲ್.ಬೋಜೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಶಾಂತಕುಮಾರ್, ಖಜಾಂಚಿ ಮಲ್ಲಿಕಾರ್ಜುನ ಮತ್ತಿತರರಿದ್ದರು.
Shri Kalleswaraswamy Lokarpane of Nidaghatta village
