ಚಿಕ್ಕಮಗಳೂರು: ದೈಹಿಕ ಶಿಕ್ಷಣ ಶಿಕ್ಷಕರ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡಾಕೂಟಗಳು ಸಹಕಾರಿ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೈರೇಗೌಡ ಕರೆ ನೀಡಿದರು.
ಅವರು ಇಂದು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ಗ್ರೇಡ್-೧, ಪ್ರಾಥಮಿಕ ಶಾಲಾ ಗ್ರೇಡ್-೨, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರುಗಳ ಸಂಯುಕ್ತಾಶ್ರಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ೨೦೨೪-೨೫ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಹೋರಾಟದ ಫಲವಾಗಿ ಬಹುದಿನಗಳ ಬೇಡಿಕೆಯಾಗದ್ದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾಕೂಟ ಏರ್ಪಡಿಸಬೇಕೆಂಬ ಉದ್ದೇಶದಿಂದ ಸರ್ಕಾರ ಅನುಮತಿ ನೀಡಿರುವುದರಿಂದ ಇಂದು ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದು ಶ್ಲಾಘಿಸಿದರು.
ದೈಹಿಕ ಶಿಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬ ಆಶಾಭಾವನೆ ವ್ಯಕ್ತಪಡಿಸಿದ್ದು, ಕ್ರೀಡೆಯಲ್ಲಿ ಪರಿಣಿತಿ ಪಡೆದು ಕ್ರೀಡಾಕೂಟದಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸಿದ್ದೀರಿ, ಅರಣ್ಯ, ದೈಹಿಕ, ಪೊಲೀಸ್ ಈ ಇಲಾಖೆಗಳ ನೌಕರರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿ ಇರಲಿಲ್ಲ. ಈಗ ಸಾಮಾನ್ಯ ನೌಕರರೊಂದಿಗೆ ಒಡಗೂಡಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವ ಬಗ್ಗೆ ಸರ್ಕಾರವನ್ನು ಅಭಿನಂದಿಸಿದರು.
ಈ ಬಿಸಿಲಿನ ವಾತಾವರಣದಲ್ಲಿ ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ದೈಹಿಕ ಶಿಕ್ಷಕರ ದೇಹ ಸದೃಢತೆಗೆ ಸರ್ಕಾರ ಒಳ್ಳೆಯ ನಿರ್ಧಾರ ಮಾಡಿದೆ. ಮಕ್ಕಳನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ದೈಹಿಕ ಶಿಕ್ಷಕರು, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ರಾಷ್ಟ್ರೀಯ ಹಬ್ಬಗಳಲ್ಲಿ ತಮ್ಮ ಉಪಸ್ಥಿತಿಯಲ್ಲಿ ಕ್ರೀಡೆಗಳನ್ನು ಯಶಸ್ವಿಗೊಳಿಸುತ್ತಿದ್ದೀರಿ ಎಂದು ಹೇಳಿದರು.
ಜಿಲ್ಲಾ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ. ಕುಮಾರಸ್ವಾಮಿ ಮಾತನಾಡಿ, ಇಂದು ಉತ್ತಮ ರೀತಿಯಲ್ಲಿ ಈ ಕ್ರೀಡಾಕೂಟ ಆಯೋಜನೆಯಾಗಿದ್ದು, ಎಲ್ಲಾ ಸೌಲಭ್ಯಗಳನ್ನು ನೀಡಿರುವ ಇಲಾಖೆ ಹಾಗೂ ಸಕ್ರಿಯವಾಗಿ ಪಾಲ್ಗೊಂಡಿರುವ ದೈಹಿಕ ಶಿಕ್ಷಕರಿಗೆ ಶುಭಾಶಯ ಕೋರಿದರು.
ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ದೈಹಿಕ ಶಿಕ್ಷಕರ ಶ್ರಮ ಅವಿಸ್ಮರಣೀಯ, ರಾಜ್ಯ, ರಾಷ್ಟ್ರಮಟ್ಟಕ್ಕೆ ತಂಡವನ್ನು ಆಯ್ಕೆಮಾಡಿ ಕಳುಹಿಸುವಲ್ಲಿ ಪರಿಶ್ರಮ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲೆಯ ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಯಟ್ ದೈಹಿಕ ಶಿಕ್ಷಣ ಉಪನ್ಯಾಸಕ ಜ್ಞಾನಮೂರ್ತಿ ದೈಹಿಕ ಶಿಕ್ಷಕರಿಗೆ ಕ್ರೀಡಾಕೂಟದ ಮೂಲಕ ಉಲ್ಲಾಸ ಉತ್ಸಾಹ ಮೂಡಿಸಲು ಸರ್ಕಾರ ಉತ್ತೇಜನ ನೀಡಿದೆ ಎಂದು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಯು.ವಿ ಪಾಲಾಕ್ಷಮೂರ್ತಿ ಮಾತನಾಡಿ, ಜಿಲ್ಲಾಮಟ್ಟದ ಪ್ರಥಮ ಕ್ರೀಡಾಕೂಟವನ್ನು ಆಯೋಜನೆ ಮಾಡಲು ಸರ್ಕಾರ ಅನುಮತಿ ನೀಡಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿದ ಅವರು, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ ಇಲ್ಲಿ ಗೆದ್ದು ಆಯ್ಕೆಯಾದ ತಂಡ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಪರಿವೀಕ್ಷಕರು ಷೇರ್ ಅಲಿ.ಎಂ.ಆರ್, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಜಿ.ಚಂದ್ರನಾಯಕ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ಪಿ.ಚಂದ್ರಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕರು , ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರೇಗೌಡ, ಫೈರೋಜ್ ಅಹ್ಮದ್, ಚಂದ್ರಯ್ಯ, ವಿನುತ, ಮಹೇಶ್, ಬಿ.ವಿ.ಗಂಗಾಧರ್, ಕೆ.ಎನ್.ಮಂಜುನಾಥ್, ಬಿ.ಆರ್.ಕಿರಣ್‌ಕುಮಾರ್, ಶ್ರೀನಿವಾಸ್, ಪ್ರವೀಣ್ ಪಿಂಟೋ, ಉಮೇಶ್, ಶಿವಪ್ಪ, ಪರಮೇಶ್, ರವಿಕುಮಾರ್ ಉಪಸ್ಥಿತರಿದ್ದರು. ಪಾಂಡುಕುಮಾರ್ ಸ್ವಾಗತಿಸಿದರು.
ಮೊದಲಿಗೆ ಪಾಂಡುಕುಮಾರ್ ಸ್ವಾಗತಿಸಿ, ನಾಗರಾಜ್ ನಿರೂಪಿಸಿ ಕೊನೆಯಲ್ಲಿ ಪರಮೇಶ್ವರಪ್ಪ ವಂದಿಸಿದರು.
Sports events are helpful for physical and mental fitness.
