ಚಿಕ್ಕಮಗಳೂರು: ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಗೌರವ ಎನ್ನುವುದು ಪ್ರಾಪ್ತವಾಗುತ್ತದೆ ಸವಿತಾ ಸಮಾಜದ ಬಂಧುಗಳು ಶಿಕ್ಷಣ ಕ್ಷೇತ್ರದಲ್ಲೂ ಮತ್ತು ಸರ್ಕಾರದಿಂದ ಸಿಗುವ ನೆರವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬರಾಗುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳೀದರು.
ಜಿಲ್ಲಾ ಸವಿತಾ ಸಮಾಜದ ವತಿಯಿಂದ ನಗರದ ಆಜಾದ್ ಪಾರ್ಕ್ ವೃತದಲ್ಲಿ ಇಂದು ಆಯೋಜಿಸಿದ್ದ ಶ್ರೀರಾಮನವಮಿಯ ಹಾಗೂ ಹನುಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯೆಯ ಮೂಲಕ ಬದುಕನ್ನು ಬದಲಾಯಿಸುವುದಕ್ಕೆ ಸಾಧ್ಯವಿದೆ ಎಂದರು.
ಬದುಕು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ, ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟು ಆ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು. ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸವಿತಾ ಸಮಾಜದ ಬಂಧುಗಳು ಏಳಿಗೆ ಕಾಣಬೇಕು ಎಂದು ಹೇಳಿದರು.
ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಸಂಕಲ್ಪ ವಿಶ್ವನಾಥ್ ಸಂಕಲ್ಪ ಪ್ರಾಸ್ತಾವಿಕವಾಗಿ ಮಾತನಾಡಿ ನಾಲ್ಕು ಗೋಡೆಗೆ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದೊಂದಿಗೆ ಗುರುತಿಸಿಕೊಳ್ಳಬೇಕು. ಸವಿತಾ ಸಮಾಜದ ಬಾಂಧವರು ಸಂಘಟಿತರಾಗುವ ಮೂಲಕ ಆಧುನಿಕ ಸಮಾಜದಲ್ಲೂ ಶೋಷಿತರಾಗುತ್ತಿರುವ ನಾವು ನಮ್ಮ ಘರ್ಜನೆ ಸರ್ಕಾರಕ್ಕೆ ಕೇಳುವಂತಾಗಬೇಕು ಎಂದು ಹೇಳಿದರು.
ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರುವ ಸವಿತಾ ಸಮಾಜದ ವಿದ್ಯಾರ್ಥಿಗಳಾದ ಮದನ್ ಸಿ, ಶ್ರೇಯಸ್ ಡಿಕೆ ಇವರುಗಳನ್ನು ಸನ್ಮಾನಿಸಲಾಯಿತು. ಗ್ಲಾಮರ್ ಕೇರ್ ಸಂಸ್ಥೆಯ ವತಿಯಿಂದ ಜೀವಿತ್ ಭಾರತೀಯ ಅವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಶ್ರೀ ರಾಮನವಮಿಯ ಮತ್ತು ಹನುಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕೋಸಂಬರಿ ಮತ್ತು ಪಾನಕ ವಿತರಣೆಗೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಚಾಲನೆ ನೀಡಿದರು.
ಶಾಸಕರಾದ ಎಚ್ ಡಿ ತಮ್ಮಯ್ಯನವರು ಕಾರ್ಯಕ್ರಮಕ್ಕೆ ಆಗಮಿಸಿ ಸವಿತಾ ಮಹರ್ಷಿಗಳಿಗೆ ಪುಷ್ಪಾರ್ಚನೆಯನ್ನು ಮಾಡಿ ಸಮಾಜದ ಬಂಧುಗಳಿಗೆ ಶುಭ ಹಾರೈಕೆಯನ್ನು ಹೇಳಿದರು.
ಕಾರ್ಯಕ್ರಮದಲ್ಲಿ ದೀಪಕ್ ದೊಡ್ಡಯ್ಯ, ಕಲ್ಮುರುಡಪ್ಪ, ಮಂಜೇಗೌಡ, ಎ. ಎನ್. ಮಹೇಶ್,ಕುರುವಂಗಿ ವೆಂಕಟೇಶ್, ಜಿಲ್ಲಾ ಸವಿತಾ ಸಮಾಜ ದ ಜಿ ಉಮೇಶ್, ಜೆ ಸತ್ಯನಾರಾಯಣ,ಹೆಚ್ ವಿ ಮಹೇಶ್, ಸೇರಿದಂತೆ ಹಲವರಿದ್ದರು.
Sri Ram Navami-Hanuman Jayanti by District Savita Samaj
