ಚಿಕ್ಕಮಗಳೂರು-ಕಾಫಿನಾಡು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಷಯರೋಗದ ಬಗ್ಗೆ ವಿವಿಧ ರೀತಿಯ ಜನಜಾಗೃತಿಯನ್ನು ಮೂಡಿಸುವ ಮೂಲಕ ೨೦೨೫ ರ ಅಂತ್ಯಕ್ಕೆ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಲು ಗುರಿಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು ತಿಳಿಸಿದರು.
ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಸರ್ಕಾರೇತರ ಸಂಘ-ಸಂಸ್ಥೆಗಳು, ವಿವಿಧ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಕ್ಷಯರೋಗದ ದಿನ ೨೦೨೫ ಮತ್ತು ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷ ಮಾ.೨೪ ಅನ್ನು ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಣೆ ಮಾಡುತ್ತಿದ್ದು, ಟಿಬಿ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಈ ಕಾಯಿಲೆಯಿಂದಾಗುವ ಅನಾನುಕೂಲಗಳ ಬಗ್ಗೆ ಜಾತಾ ನಡೆಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂಬಂಧ ಜಿಲ್ಲಾದ್ಯಂತ ತಾಲೂಕು ಮಟ್ಟದಲ್ಲಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದ ಜನಪ್ರತಿನಿಧಿಗಳಿಗೆ ವಿವಿಧ ರೀತಿಯ ಜನಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಹರೀಶ್ ಬಾಬು ಮಾತನಾಡಿ, ಟಿ ಬಿ ರೋಗವನ್ನು ಪತ್ತೆ ಹಚ್ಚಿ ಗುಣಮುಖರಾಗಲು ಬೇಕಾದ ಚಿಕಿತ್ಸಾ ವಿಧಾನಗಳ ಮೂಲಕ ಈ ಕಾಯಿಲೆಗೆ ಇರುವ ಕಳಂಕವನ್ನು ಹೋಗಲಾಡಿಸುವ ಉದೇಶದೊಂದಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿ ಅಡಿಯಲ್ಲಿ ೫೭ ಗ್ರಾಮ ಪಂಚಾಯಿತಿಗಳನ್ನು ಟಿ.ಬಿ ಮುಕ್ತಗೊಳಿಸಿದ್ದೇವೆ. ೨೦೨೫ರ ಅಂತ್ಯಕ್ಕೆ ಜಿಲ್ಲೆಯ ೫೨೭ ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತಗೊಳಿಸಲು ಗುರಿಹೊಂದಲಾಗಿದೆ ಎಂದರು.
ಜಿಲ್ಲೆಯನ್ನು ಟಿಬಿ ಮುಕ್ತಗೊಳಿಸಲು ಹಲವಾರು ರೀತಿಯ ವಿವಿಧ ಹೋರಾಟಗಳನ್ನು ಮಾಡುತ್ತಿದ್ದು, ಈ ವರ್ಷದ ಘೋಷವಾಕ್ಯ ಹೌದು! ನಾವು ಕ್ಷಯರೋಗವನ್ನು ಕೊನೆಗಾಣಿಸಬಹುದು (ಬದ್ಧತೆ, ಹೂಡಿಕೆ, ವಿತರಣೆ) ಈ ಮೂಲಕ ಕ್ಷಯರೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ವಿದ್ಯಾಸಾಗರ್ ವಿಶೇಷ ಉಪನ್ಯಾಸ ನೀಡಿದರು, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ ಎನ್.ವಿ.ಬಿ.ಡಿ.ಸಿ.ಪಿ ಅಧಿಕಾರಿ ಡಾ. ಬಾಲಕೃಷ್ಣ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮಂಜುನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ, ಪ್ರಭುಕುಮಾರ್, ಕಿರಣ್‌ಕುಮಾರ್ ಉಪಸ್ಥಿತರಿದ್ದರು.
ಕ್ಷಯ ಮತ್ತು ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು, ಕಾರ್ಯಕ್ರಮಕ್ಕು ಮೊದಲು ತಾಲ್ಲೂಕು ಪಂಚಾಯಿತಿ ಕಛೇರಿಯಿಂದ ಜಾಥಾ ಕಾರ್ಯಕ್ರಮ ನೆಡೆಯಿತು.
The goal is to make the district tuberculosis-free by the end of 2025.
