ಮೈಸೂರು: ‘ಪತ್ರಿಕಾ ವಿತರಕರ ಕ್ಷೇಮಾ ಭಿವೃದ್ಧಿ ನಿಧಿಯನ್ನು ಮರು ಸ್ಥಾಪಿಸಬೇಕು, ಮಾಧ್ಯಮ ಅಕಾಡೆಮಿಯಲ್ಲಿ ಸದಸ್ಯತ್ವ ನೀಡಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಲ್ಲಿ ನಡೆದ 5ನೇ ರಾಜ್ಯ ಮಟ್ಟದ ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ಮಂಡಿಸಲಾಯಿತು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಗರದ ಕೆಎಸ್‌ಒಯು ಘಟಿಕೋತ್ಸವ ಭವನದ ‘ತಾತಯ್ಯನವರ ವೇದಿಕೆ’ಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಸಮ್ಮೇಳನದಲ್ಲಿ, ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ‘ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ಕ್ಷೇಮಾಭಿವೃದ್ಧಿ ನಿಧಿಯನ್ನು ಮರು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
‘ಮಾಧ್ಯಮ ಅಕಾಡೆಮಿಯಲ್ಲಿ ಪ್ರಾತಿನಿಧ್ಯ ದೊರಕಿಸಬೇಕು. ಅಕಾಲಿಕ ಮರಣ ಹೊಂದಿದವರ ಕುಟುಂಬ ದವರಿಗೆ ₹10 ಲಕ್ಷ ಪರಿಹಾರ ನೀಡಬೇಕು. 60 ವರ್ಷ ಮೀರಿದವರಿಗೆ ₹5 ಸಾವಿರ ಪಿಂಚಣಿ ಕೊಡಬೇಕು. ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಮೈಸೂರಿನಲ್ಲಿ ಪತ್ರಿಕಾ ವಿತರಣಾ ಕೇಂದ್ರ ನಿರ್ಮಿಸಬೇಕು ಹಾಗೂ ಎಂಡಿಎಯಿಂದ ಸಿಎ ನಿವೇಶನ ಮಂಜೂರು ಮಾಡಬೇಕು’ ಎಂದು ಆಗ್ರಹಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ‘ವಿತರಕರನ್ನು ಮೊದಲು ಗುರುತಿಸಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ವಿತರಕರ ಬೇಡಿಕೆಗಳನ್ನು ಅವರ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿತರಕರ ಮಕ್ಕಳನ್ನು ಪುರಸ್ಕರಿಸಲಾಯಿತು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿತರಕ ಎಂ.ಎನ್. ನಾಗರಾಜ್ ಅವರಿಗೆ ಸಮ್ಮೇಳನದ ‘ಅಧ್ಯಕ್ಷ ಸ್ಥಾನದ ಗೌರವ’ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಜವರಪ್ಪ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ತುಮಕೂರಿನ ಲಕ್ಷ್ಮೀನರಸಪ್ಪ ಅವರನ್ನು ಅಭಿನಂದಿಸ ಲಾಯಿತು. ಆರಂಭದಲ್ಲಿ ನಾಡಗೀತೆಯೊಂದಿಗೆ, ಪತ್ರಿಕಾ ವಿತರಕರ ಗೀತೆಯನ್ನೂ ಹಾಡಿದ್ದು ವಿಶೇಷವಾಗಿತ್ತು.
The newspaper distributors’ welfare fund should be re-established.
