ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿಯ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್‌ನ ಫ್ಲ್ಯಾಟ್‌ನಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಚನ್ನಮ್ಮನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕ ನಾಗರಾಜ್ ನೀಡಿರುವ ದೂರು ಆಧರಿಸಿ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
₹3 ಲಕ್ಷ ನಗದು ಕಳ್ಳತನವಾಗಿದೆ ಎಂದು ದೂರು ನೀಡಲಾಗಿದೆ. ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲಸದವರನ್ನು ಕರೆಸಿ, ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.
‘ಹತ್ತು ವರ್ಷಗಳಿಂದ ವಿಜಯಲಕ್ಷ್ಮಿ ಅವರ ಮನೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಸೆ.4ರಂದು ವಿಜಯಲಕ್ಷ್ಮಿ ಅವರು ಕರೆದು ಬೆಡ್ ರೂಮ್‌ನ ಕಾಟನ್ ಬಾಕ್ಸ್‌ನಲ್ಲಿ ಹಣವಿದೆ. ಅದನ್ನು ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಅವರು ಹೇಳಿದಷ್ಟು ಹಣ ತೆಗೆದುಕೊಂಡು ಉಳಿದ ಹಣವನ್ನೇ ಅಲ್ಲೇ ಬಿಟ್ಟು ಬಂದಿದ್ದೆ. ಆ ಹಣವನ್ನು ತೆಗೆದುಕೊಂಡು ವಿಜಯಲಕ್ಷ್ಮಿ ಅವರು ಮೈಸೂರಿಗೆ ತೆರಳಿದ್ದರು.
ಮನೆಯ ಬಾಗಿಲಿಗೆ ಬೀಗ ಹಾಕಿ ಕೀ ನನಗೆ ಕೊಟ್ಟು ಹೋಗಿದ್ದರು. ವಿಜಯಲಕ್ಷ್ಮಿ ಅವರ ತಾಯಿಗೆ ಮನೆ ಕೀ ಕೊಟ್ಟು ನಾನೂ ಹೊರಗೆ ಹೋಗಿದ್ದೆ. ಸೆ.5ರಂದು ನಾನೂ ಮೈಸೂರಿಗೆ ತೆರಳಿ, ಸೆ.7ರಂದು ವಿಜಯಲಕ್ಷ್ಮಿ ಅವರನ್ನು ಕರೆದುಕೊಂಡು ಬಂದು ಹೊಸಕೆರೆಹಳ್ಳಿಯಲ್ಲಿ ಇರುವ ಅವರ ಫ್ಲ್ಯಾಟ್‌ಗೆ ಬಿಟ್ಟು ನನ್ನ ಮನೆಗೆ ತೆರಳಿದ್ದೆ.
ಮರು ದಿನ ವಿಜಯಲಕ್ಷ್ಮಿ ಅವರು ಕರೆ ಮಾಡಿ ರೂಮ್‌ನಲ್ಲಿದ್ದ ಹಣ ಕಾಣಿಸುತ್ತಿಲ್ಲ ಎಂಬುದಾಗಿ ತಿಳಿಸಿದ್ದರು’ ಎಂದು ನಾಗರಾಜ್ ಅವರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
Theft at actor Darshan’s flat
