ಬಾಳೆಹೊನ್ನೂರು: ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯು ವವರು ದೊಡ್ಡವರಾಗುವುದಿಲ್ಲ. ಬಿದ್ದ ವ್ಯಕ್ತಿಗಳನ್ನು ಕೈ ಹಿಡಿದು ಮೇಲೆತ್ತುವವರು ದೊಡ್ಡವರಾಗುತ್ತಾರೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ರಂಭಾಪುರಿ ಪೀಠದಲ್ಲಿ ನಡೆದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಹಾಲಿನ ಜೊತೆ ಸೇರಿದ ನೀರು ಸಹ ಹಾಲು ಆಗುತ್ತದೆ. ಅದೇ ರೀತಿ ಗುಣವಂತರ ಜೊತೆ ಆಶ್ರಯ ಪಡೆದ ಗುಣಹೀನನು ಸಹ ಗುಣವಂತನಾಗುತ್ತಾನೆ. ಮಾನವ ಜೀವನಕ್ಕೆ ಗುರಿ ಮತ್ತು ಗುರು ಬಹಳ ಮುಖ್ಯ. ಜೀವನದಲ್ಲಿ ಹಣದ ಕೊರತೆಯಿದ್ದರೂ, ಗುಣದ ಕೊರತೆಯಾಗಬಾರದು. ನಿರಂತರ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಜೀವನದಲ್ಲಿ ಹೊಂದಾಣಿಕೆ ಎಷ್ಟು ಮುಖ್ಯವೋ ಅರ್ಥ ಮಾಡಿಕೊಳ್ಳುವ ಮನಸ್ಸು ಅಷ್ಟೇ ಮುಖ್ಯ. ನಡೆಯುವ ದಾರಿಯಲ್ಲಿ ನಿಯತ್ತು ಇದ್ದರೆ ತಡೆಯುವ ತಾಕತ್ತು ಯಾರಿಗೂ ಇರವುದಿಲ್ಲ. ಬೇಡ ಅಂದವರಿಗೆ ಭಾರ ಆಗುವುದರ ಬದಲು ಬೇಕು ಅನ್ನುವವರಿಗೆ ಬೆಳಕಾಗು ಸಾಕು ಎಂದು ಅನುಭಾವಿಗಳು ಹೇಳಿದ್ದುಂಟು ಎಂದು ಹೇಳಿದರು.
ಆಂಧ್ರಪ್ರದೇಶ ನಂದ್ಯಾಲದ ವಿದ್ವಾನ್ ಎಸ್.ಎಂ.ರೇವಣಸಿದ್ಧಾಂತಿ ರಚಿಸಿದ ಚಂದ್ರ ಜ್ಞಾನಾಗಮದ ವ್ಯಾಖ್ಯಾನದ ತೆಲುಗು ಕೃತಿಯನ್ನು ರಂಭಾಪುರಿ ಶ್ರೀ ಬಿಡುಗಡೆ ಮಾಡಿದರು.
ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿ, ರಟ್ಟೀಹಳ್ಳಿ ವಿಶ್ವೇಶ್ವರ ದೇವರು ಮತ್ತು ರೇಣುಕಾ ಚಾರ್ಯ ಗುರುಕುಲದ ಸಿದ್ಧಲಿಂಗಯ್ಯ ಸ್ವಾಮಿ ಹಿರೇಮಠ, ರಿಪ್ಪನ್ ಪೇಟೆ ಶಿವಮಂದಿರದ ಜಿ.ಎಂ. ದುಂಡರಾಜಪ್ಪ ಗೌಡ್ರು, ಪೀಠದ ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪನವರ, ಕನ್ನೂರು ನಾನಾಗೌಡ, ಹಳೇಬೀಡು ಚಂದ್ರಶೇಖರ ಇದ್ದರು.
The full moon religious ceremony held at Rambhapuri Peetha