ಚಿಕ್ಕಮಗಳೂರು: ರೋಟರಿ ಎಂದರೆ ಕಲಿಕೆ, ಕೌಶಲಾಭಿವೃದ್ಧಿಗೆ ಉತ್ತಮ ವೇದಿಕೆ. ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಅವಕಾಶ. ಇಲ್ಲಿ ಕ್ರೀಡೆ, ಸಂಸ್ಕೃತಿ, ಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಡಿ.ಎಸ್.ರವಿ ತಿಳಿಸಿದರು.
ಅವರು ಭಾನುವಾರ ಆವತಿ ಪ್ಲಾಂಟರ್‍ಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಆವತಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾದ ಮಹೇಂದ್ರ ಮತ್ತು ಕಾರ್ಯದರ್ಶಿಯಾದ ಪ್ರಥಮ್ ರವರಿಗೆ ಅಧಿಕಾರ ನೀಡಿ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ರೋಟರಿ ಸಂಸ್ಥೆ ೧೨೦ ವರ್ಷದ ಹಿಂದೆ ಕೇವಲ ೪ ಜನರಿಂದ ಆರಂಭವಾಗಿ ಇಂದು ೧೨ ಲಕ್ಷ ಸದಸ್ಯರನ್ನು ಹೊಂದಿಗೆ ಪ್ರಪಂಚದ ಸುಮಾರು ೨೦೦ ದೇಶಗಳಲ್ಲಿ ಸಂಸ್ಥೆ ಅಸ್ಥಿತ್ವದಲ್ಲಿದೆ. ೧೯೧೨ ರಲ್ಲಿ ರೊಟರಿ ಸಂಸ್ಥೆ ಅಂತರಾಷ್ಟ್ರೀಯ ಮಟ್ಟಕ್ಕೆ ಕಾಲಿಟ್ಟಿತು. ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಆರಂಭವಾಗಿ ನಮ್ಮ ದೇಶದಲ್ಲಿ ೧೯೨೦ ರಲ್ಲಿ ಕಲ್ಕತ್ತಾದಲ್ಲಿ ಆರಂಭವಾದರೂ ದುರಾದೃಷ್ಟ ನಮ್ಮ ದೇಶದವರು ಯಾರೂ ಸದಸ್ಯರಾಗಿರಲಿಲ್ಲ. ಎಲ್ಲರೂ ಬ್ರಿಟೀಷರಿದ್ದರು. ಆದರೆ ಸದಸ್ಯ ಕಾರ್ಯದರ್ಶಿಯಾಗಿದ್ದ ಕಲ್ಕತ್ತದ ಲಹೋರಿ ಅವರು ಅಂತರಾಷ್ಟ್ರೀಯ ಮಟ್ಟಕ್ಕೆ ಅಧ್ಯಕ್ಷರಾಗಿದ್ದರು. ೧೯೩೪ ಕ್ಕೆ ಬೆಂಗಳೂರು, ೧೯೫೪ ಕ್ಕೆ ಚಿಕ್ಕಮಗಳೂರು ಒಳಗೊಂಡ ಹಾಸನ ಕ್ಲಬ್ ಆರಂಭವಾಯಿತು. ಚಿಕ್ಕಮಗಳೂರು ಕ್ಲಬ್ ೧೯೫೯ರಲ್ಲಿ ಚಿಕ್ಕಮಗಳೂರು ಕ್ಲಬ್ ಆರಂಭವಾಯಿತು ಎಂದರು.
ರೋಟರಿಯ ಮುಖ್ಯ ಧ್ಯೇಯ ಸತ್ಸಂಗ, ಸ್ನೆಹವಾಗಿದ್ದರೂ ಅದು ಸೇವೆಗೆ ಮಾರ್ಪಾಡಾಗಿದೆ. ಇದರಲ್ಲಿ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮ ಪ್ರಮುಖವಾದದ್ದು, ಸತತವಾದ ಪ್ರಯತ್ನದಿಂದ ೧೯೮೫ ರಿಂದ ಅಭಿಯಾನ ನಡೆಸಿದ ಪರಿಣಾಮ ೨೦೧೪ ರಲ್ಲಿ ನಮ್ಮ ದೇಶ ಪೋಲಿಯೋ ಮುಕ್ತ ರಾಷ್ಟ್ರ ನಮ್ಮದಾಗಿದೆ. ಇದರೊಂದಿಗೆ ಆಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ನೈಜೀರಿಯಾ ದೇಶಗಳಲ್ಲಿ ಇನ್ನೂ ಪೊಲೀಯೋ ನಿರ್ಮೂಲನಾ ಕಾರ್ಯಕ್ರಮವನ್ನು ರೋಟರಿ ಕೈಗೆತ್ತಿಕೊಳ್ಳುತ್ತಿದೆ ಎಂದರು.
ರೋಟರಿ ಸದಸ್ಯತ್ವ ಅಭಿವೃದ್ಧಿಯ ಅಧ್ಯಕ್ಷ ಸಿ.ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋಣಿಬೀಡು ಕ್ಲಬ್ ೮೬ನೆಯದ್ದಾಗಿ ಉದಯವಾಗಿದೆ. ಇನ್ನೂ ಮೂರು ಕ್ಲಬ್‌ಗಳು ಈ ವರ್ಷ ಅಸ್ಥಿತ್ವಕ್ಕೆ ಬರಲಿವೆ. ಒಟ್ಟು ೩೬೬೬ಸದಸ್ಯರು ಇದ್ದಾರೆ. ಕಳೆದ ಒಂದು ವರ್ಷದಲ್ಲಿ ೧೧೨ ಮಂದಿ ಹೊಸದಾಗಿ ಸದಸ್ಯರಾಗಿದ್ದಾರೆ ಎಂದರು.
ರೋಟರಿ ಎಂದಾಕ್ಷಣ ಬಾಂಧವ್ಯವನ್ನ ಹೆಚ್ಚುಗೊಳಿಸುವುದು. ತನ್ಮೂಲಕ ಬೇರೆ ಬೇರೆ ಚಟುವಟಿಕೆಗಳನ್ನು ಆರಂಭಿಸಲು ಆಧ್ಯತೆ ಕೊಡುತ್ತಿದೆ. ಬಾಂಧವ್ಯದ ಕೊರತೆ ಕಾರಣಕ್ಕೆ ವೃದ್ಧಾಶ್ರಮಗಳು ಹುಟ್ಟಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಸಣ್ಣ ಸಣ್ಣ ವಿಚಾರಕ್ಕೆ ಇಂದು ದುಡುಕಿನ ನಿರ್ಧಾರ ತೆಗೆದುಕೊಳ್ಳು ಒಂಟಿತನ ಕಾರಣವಾಗುತ್ತಿದೆ. ಇದನ್ನು ನಿವಾರಿಸುವ ದೃಷ್ಠಿಯಿಂದ ರೋಟರಿ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು.
ಮನೆಯಲ್ಲಿ ಮದುವೆ ಕಾರ್ಯಕ್ರಮ ಇದ್ದರೂ ಮನೆ ಮಕ್ಕಳೇ ಇಂದು ಬುರುವುದಿಲ್ಲ. ಅವರ ಆಲೋಚನಾ ದೃಷ್ಠಿಯೇ ಇಂದು ಬೇರೆ ಆಗಿದೆ. ತರಾತುರಿಯಲ್ಲಿ ಮದುವೆಯಾದವರು ಅಷ್ಟೇ ತರಾತುರಿಯಲ್ಲಿ ವಿಚ್ಛೇಧನಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಅವಶ್ಯಕತೆ ಹೆಚ್ಚಿರುವುದರಿಂದ ಯುವಕರನ್ನು ಹೆಚ್ಚಾಗಿ ರೋಟರಿಗೆ ಕರೆತರಬೇಕಿದೆ ಎಂದು ಕರೆ ನೀಡಿದರು.
ಆವತಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಹೆಚ್.ಬಿ.ಮಹೇಂದ್ರ ಮಾತನಾಡಿ ಈ ಬಾಗದಲ್ಲಿ ಸ್ನೇಹಿತರೆಲ್ಲ ಸೇರಿ ಸಮಾಜಸೇವೆ ಕೆಲಸಗಳನ್ನು ಮಾಡುತ್ತಿದ್ದೇವೆ, ಇದರ ಜೊತೆಯಲ್ಲಿ ರೋಟರಿ ಕ್ಲಬ್ ಸದಸ್ಯರಾಗಿ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಅನುಕೂಲವಾಗುತ್ತದೆ, ಎಲ್ಲಾ ಸದಸ್ಯರು ಸಭೆಗಳಿಗೆ ಆಗಮಿಸಿ ತಮ್ಮ ಸಲಹೆ ಸಹಕಾರ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಹಾಯಕ ಗೌರ್‍ನರ್ ಅರುಣ್ ರಕ್ಷಿದಿ, ಕ್ಲಬ್‌ನ ಸಲಹೆಗಾರ ಸಿ.ಸಿ.ಸವಿನ್, ಗೋಣಿಬೀಡು ಕ್ಲಬ್‌ನ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ರತನ್, ಝೋನಲ್ ಲೆಫ್ಟಿನೆಂಟ್ ವೈ.ಡಿ.ಲೋಕೇಶ್, ಆವತಿ ಕ್ಲಬ್ ಕಾರ್ಯಧರ್ಶಿ ಪ್ರಥಮ್, ಮತ್ತಿತರರು ಹಾಜರಿದ್ದರು.
Avati Rotary Club
