May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಮುಗುಳವಳ್ಳಿ ಗ್ರಾ.ಪಂ ನೂತನ ಅಧ್ಯಕ್ಷೆ ಶೃತಿಉಮೇಶ್ ಅವಿರೋಧ ಆಯ್ಕೆ

ಮುಗುಳವಳ್ಳಿ ಗ್ರಾ.ಪಂ ನೂತನ ಅಧ್ಯಕ್ಷೆ ಶೃತಿಉಮೇಶ್ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ತಾಲ್ಲೂಕು ಮುಗುಳವಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶೃತಿ ಉಮೇಶ್ ಹಾಗೂ ಉಪಾಧ್ಯಕ್ಷರಾಗಿ ಮಾಗಡಿ ಮಲ್ಲೇಶಪ್ಪ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಅಂಕಿಸಂಖ್ಯೆ ಇಲಾಖೆಯ ಅಧಿಕಾರಿ ಶಿವಶಂಕರ್ ಘೋಷಿಸಿದರು.

ಇಂದು ಪಂಚಾಯಿತಿ ಕಚೇರಿಯಲ್ಲಿ ನಡೆದ ಅಧ್ಯಕ್ಷರು-ಉಪಾಧ್ಯಕ್ಷರ ಆಯ್ಕೆಯ ಬಳಿಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಪಂಚಾಯಿತಿಯಲ್ಲಿ ಜನಪರ ಕೆಲಸಗಳನ್ನು ಕೈಗೊಳ್ಳುವ ಮೂಲಕ ಮುಂಬರುವ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಬೇಕು. ಈ ನಿಟ್ಟಿನಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿ ಎಂದು ಶುಭ ಹಾರೈಸಿದರು.

ಪಂಚಾಯಿತಿಯಲ್ಲಿ ಸುಸಜ್ಜಿತ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣ ಮಾಡಲು ನಿರ್ಣಯ ಮಾಡಿ ಎಂದು ಸಲಹೆ ಮಾಡಿದ ಅವರು, ನಗರಕ್ಕೆ ಸಮೀಪ ಇರುವ ಈ ಗ್ರಾ.ಪಂ ಗೆ ಬಹಳ ದೊಡ್ಡ ಪ್ರಮಾಣದಲ್ಲಿ ರೆವಿನ್ಯೂ ಬರುತ್ತದೆ, ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಲೇಔಟ್ ಪ್ರಾರಂಭವಾಗಿವೆ ಎಂದರು.

ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಇಂದು ಶಾಲು, ಹಾರ ಹಾಕಿ ಗೌರಿವಿಸುತ್ತಿದ್ದಾರೆ, ಅದು ಇವತ್ತಿಗೆ ಮಾತ್ರ, ನಾಳೆ ಕೆಲಸ ಮಾಡಲಿಲ್ಲ ಎಂದಾದರೆ ಬಯ್ಯುತ್ತಾರೆ, ಸಿಕ್ಕಿರುವ ಅಲ್ಪಾವಧಿಯಲ್ಲಿ ಸಮಾಜದ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸಿ ಉತ್ತಮ ಕೆಲಸವನ್ನು ಮಾಡಿ ಎಂದು ಹೇಳಿದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಅಧಿಕಾರ ವಿಕೇಂದ್ರಿಕರಣ ಜಾರಿಯಾದ ಪರಿಣಾಮ ಇಂದು ಸಮಾನವಾಗಿ ಎಲ್ಲರಿಗೂ ಅಧಿಕಾರ ಸಿಗಲು ಸಾಧ್ಯವಾಗಿದೆ, ಈ ನಿಟ್ಟಿನಲ್ಲಿ ರಾಜಕೀಯ ಹಿನ್ನೆಲೆ ಇಲ್ಲದ ಶೃತಿ ಉಮೇಶ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲೇಶಪ್ಪ ಆಯ್ಕೆಯಾಗಿದ್ದಾರೆ ಎಂದರು.

ಗ್ರಾಮ ಪಂಚಾಯಿತಿಗಳು ಪ್ರಜಾಪ್ರಭುತ್ವದ ಬೇರು ಇದ್ದ ಹಾಗೆ, ಪಂಚಾಯಿತಿ ಮೂಲಕ ನಾಗರೀಕರಿಗೆ ದೊರೆಯಬಹುದಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ನಿರಂಜನ್ ಮಾತನಾಡಿ, ರೆಸಾರ್ಟ್ ಸಂಸ್ಕೃತಿ, ಪ್ರವಾಸದಿಂದ ಹೊರತುಪಡಿಸಿ ಮುಗುಳವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಉಪಾಧ್ಯಕ್ಷರ ಆಯ್ಕೆ ವಿಶೇಷವಾಗಿದೆ. ಸದಸ್ಯರು ಪಕ್ಷದ ಒಪ್ಪಂದದಂತೆ ನಡೆದುಕೊಂಡು ಒಗ್ಗಟ್ಟು ಪ್ರದರ್ಶಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ, ಅದನ್ನು ಪದವಿ ಎಂದು ಭಾವಿಸದೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಮಾಧಾನದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಿ. ಜೊತೆಗೆ ಪಂಚಾಯಿತಿಗೆ ತಮ್ಮ ಸಮಸ್ಯೆಗಳನ್ನು ಹೊತ್ತು ಬರುವ ನಾಗರೀಕರೊಂದಿಗೆ ಸೌಜನ್ಯದಿಂದ ವರ್ತಿಸಿ ಆದ್ಯತೆ ಮೇರೆಗೆ ಅವರ ಕೆಲಸ ಮಾಡಿಕೊಡಿ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಮುಖಂಡ ಕೆ.ಪಿ. ವೆಂಕಟೇಶ್ ಮಾತನಾಡಿ, ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಂದ ಬರುವ ಸಾರ್ವಜನಿಕರು ತಮ್ಮ ವಿವಿಧ ರೀತಿಯ ಸಮಸ್ಯೆಗಳನ್ನು ಹೇಳಿದಾಗ ಸಮರ್ಪಕವಾಗಿ ಸ್ಪಂದಿಸಿ ಸಿಕ್ಕಿರುವ ಕಾಲಾವಕಾಶದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಯೋಗೀಶ್, ಪರಮೇಶ್, ವಿಜಯಕುಮಾರ್, ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸವಿತ, ಉಮೇಶ್, ವನಿತ, ರಘುನಂದನ್, ಕಲಾವತಿ, ಶೇಖರ್, ಭಾಗ್ಯ, ಪಿಡಿಓ ಸುಮ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ರಾಜು ಸ್ವಾಗತಿಸಿದರು.

Shruti Umesh elected unopposed as new president of Mugulavalli Gram Panchayat

Related posts

ಯುವಪೀಳಿಗೆ ಪ್ರಜಾಪ್ರಭುತ್ವದ ಮಹತ್ವ ಅರಿಯಬೇಕು

Team Suddigara

ಬಾಳ ಉನ್ನತಿ ಅವನತಿಗಳಿಗೆ ಮನಸ್ಸು ಮೂಲ

Team Suddigara

ಸರ್ಕಾರಿ ನೌಕರರಿಗೆ ರಾಜ್ಯದ 8 ಕೋಟಿ ಜನರ ಜವಾಬ್ದಾರಿ

Team Suddigara

Leave a Comment