ಚಿಕ್ಕಮಗಳೂರು: ಹೊರರಾಜ್ಯದವರಿಂದ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಮಾ.೨೨ ರಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದು ಜಿಲ್ಲೆಯಲ್ಲಿನ ವರ್ತಕರು, ವಿವಿಧ ಪಕ್ಷ ಸಂಘಟನೆಗಳ ಕಾರ್ಯಕರ್ತರು ಸಹಕರಿಸಬೇಕು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾ.೨೨ ರಂದು ಬೆಳಗ್ಗೆ ೬ ರಿಂದ ಸಂಜೆ ೬ ರವರೆಗೆ ಬಂದ್‌ಗೆ ಕರೆ ನೀಡಿದ್ದು, ಎಲ್ಲಾ ಕನ್ನಡಪರ ಸಂಘಟನೆಗಳು, ರೈತ, ದಲಿತ ಸಂಘಟನೆಗಳು,ವಿವಿಧ ರಾಜಕೀಯ ಪಕ್ಷಗಳು, ಆಟೋ ಮಾಲೀಕರ ಮತ್ತು ಚಾಲಕರ ಸಂಘ, ವಿವಿಧ ಮಹಿಳಾ ಸಂಘಟನೆಗಳು, ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರ ಸಂಘ ಸಮಸ್ತ ಕನ್ನಡ ಮನಸ್ಸುಗಳು ಈ ಬಂದ್‌ಗೆ ಬೆಂಬಲಿಸಿದ್ದಾರೆ ಎಂದರು.
ಅಂದು ೧೦ನೇ ತರಗತಿ ಪರೀಕ್ಷೆ ಇರುವುದಿಲ್ಲ. ೧ ರಿಂದ ೯ ರವರೆಗೆ ಇರುವ ಕೆಲವು ಪರೀಕ್ಷೆಗಳನ್ನು ಮುಂದೂಡುವಂತೆ ಸರಕಾರಕ್ಕೆ ಮನವಿ ಮಾಡಿದ್ದು, ಸರಕಾರ ಸ್ಪಂದಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಈ ಬಂದ್‌ಗೆ ಪ್ರತಿ ಧರ್ಮದವರು, ಪಕ್ಷಾತೀತವಾಗಿ ಭಾಗವಹಿಸಬೇಕು. ಇಲ್ಲವಾದಲ್ಲಿ ಅವರನ್ನು ಕನ್ನಡ ವಿರೋಧಿಗಳು ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳಗಾವಿ ಕೆಎಸ್‌ಆರ್‌ಟಿಸಿ ನೌಕರನ ಮೇಲೆ ಹಲ್ಲೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಶೇ.೭೦ ರಷ್ಟು ಉದ್ಯೋಗ ನೀಡುವುದು, ಎಂಇಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ಬಂದ್ ಮಾಡಬೇಕು. ಮೇಕೆದಾಟು ಮತ್ತು ಮಹಾದಾಯಿ ಯೋಜನೆಗೆ ಕೇಂದ್ರ ಸರಕಾರ ಎನ್‌ಓಸಿ ನೀಡಬೇಕು. ಬೆಂಗಳೂರು ಮೆಟ್ರೋ ದರ ಇಳಿಸಬೇಕು.
ಶಾಲೆ ಕಾಲೇಜುಗಳಲ್ಲಿ ಕನ್ನಡ ಶಿಕ್ಷಣ ಕಡ್ಡಾಯಗೊಳಿಸಬೇಕು. ಕೇಂದ್ರ ಸರಕಾರದ ಕಡ್ಡಾಯ ಹಿಂದಿ ಹೇರಿಕೆ ನೀತಿಯನ್ನು ವಾಪಸ್ಸು ಪಡೆಯಬೇಕು, ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಗಟ್ಟಬೇಕು. ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತಾಗಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಡಾ.ಸುಂದರಗೌಡ, ಐ.ಕೆ. ಓಂಕಾರೇಗೌಡ, ರಘು, ಅನ್ವರ್, ಶಂಕರೇಗೌಡ, ಸಂತೋಷ್ ಮತ್ತಿತರರಿದ್ದರು.
The people of the district should cooperate in calling for a state bandh on March 22.
