ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲಿನ ಮರಾಠಿಗರ ದೌರ್ಜನ್ಯ ಖಂಡಿಸಿ, ಕಳಸಬಂಡೂರಿ, ಮಹದಾಯಿ, ಎತ್ತಿನಹೊಳೆ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿ ಮಾಡುವಂತೆ ಆಗ್ರಹಿಸಿ, ಕನ್ನಡಪರ ಸಂಘಟನೆಗಳಿಂದ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲೆಯ ಕನ್ನಡಪರ ಸಂಘಟನೆಗಳ ಜತೆಗೆ ದಲಿತ ಸಂಘರ್ಷ ಸಮಿತಿ, ರೈತ ಸಂಘ, ಬಿಎಸ್ಪಿ, ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಜಿಲ್ಲಾ ಬಂದ್‌ಗೆ ಕರೆ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದವು. ಆದರೆ, ನಿರೀಕ್ಷಿಸಿದಷ್ಟು ಬಂದ್‌ಗೆ ಬೆಂಬಲ ವ್ಯಕ್ತವಾಗಲಿಲ್ಲ. ಬೆಳಗ್ಗೆಯಿಂದಲೇ ಪ್ರತಿಭಟನಾ ಕಣಕ್ಕಿಳಿದ ವಿವಿಧ ಪಕ್ಷ, ಸಂಘಟನೆಯ ಕಾರ್ಯಕರ್ತರು ಅಂಗಡಿ ಬಾಗಿಲು ಮುಚ್ಚಿಸಲು ಮುಂದಾದರು.
ಈ ಸಂದರ್ಭ ಪ್ರತಿರೋಧ ತೋರಿದ ಕೆಲವರ ಅಂಗಡಿಗಳನ್ನು ಬಲವಂತದಿಂದ ಮುಚ್ಚಿಸಲಾಯಿತು. ಸಾರಿಗೆ ನಿರ್ವಾಹಕನ ಮೇಲೆ ಮರಾಠಿಗರಿಂದ ದೌರ್ಜ್ಯನ್ಯ ನಡೆದಿದ್ದರೂ ಮೇಲಧಿಕಾರಿಗಳ ಆದೇಶದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಆರಂಭವಾಯಿತು.
ಈ ಸಂದರ್ಭ ಪ್ರತಿಭಟನಾಕಾರರು ಬಸ್‌ಗಳನ್ನು ಅಡ್ಡಗಟ್ಟಿ ಚಾಲಕ ನಿರ್ವಾಹರನ್ನು ತರಾಟೆಗೆ ತೆಗೆದುಕೊಂಡರು. ನಿಮಗಾಗಿ ನಾವು ಪ್ರತಿಭಟನೆ ಮಾಡಿ ಜೈಲಿಗೆ ಹೋಗುತ್ತೇವೆ ನೀವು ಮಾತ್ರ ಕರ್ತವ್ಯ ನಿರ್ವಹಿಸಿ ಕುಟುಂಬದೊಂದಿಗೆ ಸುಖವಾಗಿರಿ ಎಂದು ಹರಿಹಾಯ್ದರು. ಇನ್ನೂ ಕೆಲವು ಬಸ್ ಚಾಲಕ ನಿರ್ವಾಹಕರಿಗೆ ಮಾತಿನ ಚಾಟಿ ಬೀಸಿ ಕನ್ನಡದ ಶಾಲು ಹೊದಿಸಿ ಬೀಳ್ಕೊಟ್ಟರು.
ಬಂದ್ ಕಾರಣಕ್ಕೆ ಸಾರಿಗೆ ಬಸ್ ಇರುವುದಿಲ್ಲ ಎಂದು ಕೆಲವರು ಅವತ್ತಿನ ಕಾರ್ಯಚಟುವಟಿಕೆಗೆ ಬ್ರೇಕ್ ಹಾಕಿದ್ದರು. ಆದರೆ, ರಸ್ತೆಯಲ್ಲಿ ಬಸ್ ಸಂಚರಿಸಿದ್ದರಿಂದ ಮತ್ತೆ ಯಥಾಸ್ಥಿತಿಯಲ್ಲಿ ಪ್ರಯಾಣಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು ಎಂದಿನಂತೆ ಪ್ರಯಾಣಿಸಿದರು. ಅಂತೂ ಕೆಎಸ್ಸಾರ್ಟಿಸಿ ಬಸ್ಸುಗಳು ಹಗಲೆಲ್ಲಾ ಯಾವುದೇ ಅಡಚಣೆಯಿಲ್ಲದೆ ಸಂಚಾರ ನಡೆಸಿದವು.
ಆಸ್ಪತ್ರೆ, ಔಷಧಿ ಮಳಿಗೆಗೆಳು, ಹಾಲುಮಾರಾಟದ ಅಂಗಡಿಗಳು, ಹಣ್ಣು, ಎಳೆನೀರು ಅಂಗಡಿಗಳಲ್ಲಿ ಎಂದಿನಂತೆ ವ್ಯಾಪಾರ ನಡೆಯಿತು. ನಾಲ್ಕನೇ ಶನಿವಾರ ಆಗಿದ್ದರಿಂದ ಎಲ್ಲ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ರಜೆ ಇತ್ತು. ಕೆಲವು ಶಾಲೆಗಳಲ್ಲಿ ಪರೀಕ್ಷೆ ನಿರಾತಂಕವಾಗಿ ನಡೆಯಿತು.
ಆಟೋ ಸಂಘದಿಂದ ಬಂದ್‌ಗೆ ಬೆಂಬಲ ಘೋಷಿಸಿದ್ದರೂ ಬಹುತೇಕ ಆಟೋಗಳು ರಸ್ತೆಗಿಳಿದಿದ್ದವು. ಹೊಟೇಲ್‌ಗಳು ಅರ್ಧಬಾಗಿಲು ತೆರೆದು ವ್ಯಾಪಾರ ಮುಂದುವರಿಸಿದವು, ಪ್ರತಿಭಟನೆಕಾರರು ಸ್ವಲ್ಪ ಮರೆಯಾಗುತ್ತಿದ್ದಂತೆ ನಗರದ ಎಲ್ಲ ರಸ್ತೆಗಳಲ್ಲಿ ವರ್ತಕರು ವ್ಯಾಪಾರ ವಹಿವಾಟು ನಡೆಸಿದರು. ಕೆಲವರು ದಿನವಿಡಿ ಅಂಗಡಿ ಮುಚ್ಚಿದ್ದರು.
ಕನ್ನಡಪರ ಸಂಘಟನೆಗಳ ಜತೆಗೆ ವಿವಿಧ ಪಕ್ಷ, ಸಂಘಟನೆಗಳ ನೂರಾರು ಕಾರ್ಯಕರ್ತರು ಕನ್ನಡದ ಬಾವುಟ ಹಿಡಿದು ನಗರದ ಎಂ.ಜಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾರ್ಗಮಧ್ಯೆ ಬಾಗಿಲು ತೆರೆದಿದ್ದ ಅಂಗಡಿಗಳ ಮಾಲೀಕರಿಗೆ ತರಾಟೆಗೆ ತೆಗೆದುಕೊಂಡು ಬಾಗಿಲು ಮುಚ್ಚಿಸಿದರು.
ಕನ್ನಡಿಗರಿಗೆ ಅನ್ಯಾಯವಾದಾಗ ರಸ್ತೆಗಿಳಿದು ಪ್ರತಿಭಟಿಸಬೇಕು. ಆದರೆ, ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವ ನೀವು ಕನ್ನಡ ದ್ರೋಹಿಗಳು ಎಂದು ಕಿಡಿಕಾರಿದರು. ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕಿನಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಅಲ್ಲಿ ಬಹಿರಂಗ ಸಭೆ ನಡೆಸಿದರು.
ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಆಟೋ ಚಾಲಕರು ಬೀದಿಗಿಳಿಯಲ್ಲ ಎಂದು ಮಾತುಕೊಟ್ಟಿದ್ದರು. ಆದರೆ, ಇಂದು ಬೀದಿಗಿಳಿದಿದ್ದಾರೆ. ಸಾರಿಗೆ ಸಿಬ್ಬಂದಿ ಕೂಡ ಸಹಮತ ಸೂಚಿಸಿದ್ದರು. ಕರ್ತವ್ಯ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ನಿನ್ನೆ ನೀಡಿರುವ ಹೇಳಿಕೆ ಕಾರಣ ಎಂದರು.
ಸರಕಾರದ ಮಾತಿನಿಂದ ಅವರು ಮನಸ್ಸು ಬದಲಾಯಿಸಿದ್ದಾರೆ. ಕನ್ನಡಗರಿಗೆ ಅನ್ಯಾಯವಾದಾಗ ಎಲ್ಲರೂ ಬೀದಿಗಿಳಿಯುವುದು ಅನಿವಾರ್ಯವಾಗಬೇಕು ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿದರು. ವಿವಿ ಸಂಘಟನೆಗಳ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಐ.ಕೆ ಓಂಕಾರೇಗೌಡ, ಅನಿಲ್‌ಆನಂದ್, ಜಂಷಿದ್‌ಖಾನ್, ಸುನಿಲ್‌ಕುಮಾರ್ ಮತ್ತತರೆ ರೈತ, ದಲಿತ, ವಿವಿಧ ಪಕ್ಷ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Mixed response in the district to Karnataka bandh
