ಚಿಕ್ಕಮಗಳೂರು: ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಸಂವಿಧಾನ ತಿದ್ದುಪಡಿ ಮಾಡಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡುತ್ತೇವೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಇಂದು ನಗರದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇಂದು ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಮೆರವಣಿಗೆ ಹೊರಟ ಬಿಜೆಪಿ ಕಾರ್ಯಕರ್ತರು ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವಚಿತ್ರ ಇದ್ದ ಅನ್ನಭಾಗ್ಯ ಪೋಸ್ಟರ್‌ಗೆ ಕಲ್ಲು, ಮೊಟ್ಟೆಗಳಿಂದ ತೂರಾಟ ನಡೆಸಿ, ಡಿ.ಕೆ. ಶಿವಕುಮಾರ್ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ದಲಿತರು ಸೇರಿದಂತೆ ಎಲ್ಲಾ ವರ್ಗದ ಜನಾಂಗದ ವಿರೋಧಿ ಎಂಬಂತೆ ಡಿ.ಕೆ. ಶಿವಕುಮಾರ್‌ರವರು ಹೇಳಿಕೆ ನೀಡಿರುವುದು ಕನ್ನಡಿಗರ ಕನ್ನಡಿಯಾಗಿದೆ ಎಂದು ಆರೋಪಿಸಿದರು.
ಈ ದೇಶದಲ್ಲಿ ಹಲವಾರು ಬಾರಿ ಪರಿಸ್ಥಿತಿಗೆ ಅನುಗುಣವಾಗಿ ಸಂವಿಧಾನ ತಿದ್ದುಪಡಿ ಮಾಡಿರುವುದರಲ್ಲಿ ಕಾಂಗ್ರೆಸ್ ಪಕ್ಷ ಅಗ್ರ ಸ್ಥಾನದಲ್ಲಿದೆ. ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಕೆಲವು ಅಗತ್ಯ ಇರುವ ವಿಷಯಗಳಿಗೆ ಮಾತ್ರ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಈ ದೇಶದ ಸಂವಿಧಾನ ಬದಲಿಸುತ್ತಾರೆ ಎಂಬ ಸುಳ್ಳು ಹೇಳುತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶದ ಉದ್ದಗಲಕ್ಕೂ ಜೋಡೋ ಪಾದಯಾತ್ರೆ ಮೂಲಕ ಪ್ರವಾಸ ಮಾಡಿ ಮತಪ್ರಚಾರ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದರು ಎಂದು ಟೀಕಿಸಿದರು.
ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ.೪ ರಷ್ಟು ಮೀಸಲಾತಿ ಕೊಡಬೇಕೆಂಬ ಸರ್ಕಾರದ ತೀರ್ಮಾನ ಕೈಗೊಂಡಾಗ ಸದನದ ಒಳಗೆ-ಹೊರಗೆ ನಾಯಕರುಗಳು ಪ್ರತೀರೋಧ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಅಂದರೆ ಕೇವಲ ಮುಸಲ್ಮಾನರಲ್ಲ ಎಂದು ಹೇಳಿದ ಕಾಂಗ್ರೆಸ್ ಪಕ್ಷ ಈ ಬಾರಿ ಮಂಡಿಸಿದ ಬಜೆಟ್ ಮುಸಲ್ಮಾನರ ಪರವಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದಂತ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿಸಿದರು.
ಬಹುಸಂಖ್ಯಾತ ಹಿಂದುಗಳಿಗಾಗಿ ಈ ರಾಜ್ಯದ ಜನರ ಕಲ್ಯಾಣಕ್ಕಾಗಿ ಮಾಡಿರುವ ಪ್ರಸ್ತುತ ಬಜೆಟ್ ಅಲ್ಲ, ಇದರ ಮುಂದುವರೆದ ಭಾಗವಾಗಿ ಡಿ.ಕೆ. ಶಿವಕುಮಾರ್‌ರವರು ಸಂವಿಧಾನ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುತ್ತೇವೆಂಬ ಹೇಳಿಕೆಯನ್ನು ಖಂಡಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ, ಸಂವಿಧಾನ ಬದಲಿಸಿಯಾದರೂ ಮುಸಲ್ಮಾನರಿಗೆ ಗುತ್ತಿಗೆಯಲ್ಲಿ ಶೇ.೪ ರಷ್ಟು ಮೀಸಲಾತಿ ಕೊಡುತ್ತೇವೆಂದು ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಖಂಡಿಸಿದ ಅವರು, ಕೂಡಲೇ ಇದರ ನೈತಿಕ ಹೊಣೆ ಹತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಸಿ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವೆಂಕಟೇಶ್, ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಬಿಜೆಪಿ ಮುಖಂಡರಾದ ರಾಜಪ್ಪ, ರಂಗನಾಥ್, ಸೀತಾರಾಂಭರಣ್ಯ, ಬೀಕನಹಳ್ಳಿ ಸೋಮಣ್ಣ, ಕನಕರಾಜ್ ಅರಸ್, ಸಿ.ಆರ್. ಪ್ರೇಮ್‌ಕುಮಾರ್, ನರೇಂದ್ರ, ಲಕ್ಕಪ್ಪ, ಸಂತೋಷ್ ಕೋಟ್ಯಾನ್, ಜೆಸೆಂತ ಅನಿಲ್‌ಕುಮಾರ್, ಸುಜಾತ ಶಿವಕುಮಾರ್, ಜಯವರ್ಧನ್, ಮತ್ತಿತರರು ಭಾಗವಹಿಸಿದ್ದರು.
District BJP protests against DK Shivakumar’s statement
