ಚಿಕ್ಕಮಗಳೂರು: ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗದೆ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿರುವ ಜೊತೆಗೆ ಅಭಿವೃದ್ಧಿ ಪರ್ವ ಆರಂಭಿಸಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮಲ್ಲೇನಹಳ್ಳಿ ಗ್ರಾಮದಿಂದ ಭಕ್ತರಹಳ್ಳಿ ತರೀಕೆರೆ ರಸ್ತೆ ಸಿಆರ್‌ಎಫ್ ಯೋಜನೆಯಡಿಯಲ್ಲಿ ೬ ಕೋಟಿ ರೂ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಪರವಾಗಿ ಯಾವುದೇ ಜಾತಿಬೇಧವಿಲ್ಲದೆ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣಕ್ಕೆ ಪಣತೊಟ್ಟು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ರೀತಿಯಲ್ಲಿ ಅಭಿವೃದ್ಧಿಯನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಕಳೆದ ಹಲವಾರು ದಿನಗಳಿಂದ ಹಿಂದೆ ಬಿಳಿಕೆರೆ-ತರೀಕೆರೆ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಈಗ ತುಂಬಾ ಕಡೆ ಗುಂಡಿಬಿದ್ದಿರುವುದರಿಂದ ಆಯ್ದ ಭಾಗದಲ್ಲಿ ಮರು ಡಾಂಬರೀಕರಣ ಮಾಡಲು ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಸುಮಾರು ೬ ಕೋಟಿ ರೂ ವೆಚ್ಚದಲ್ಲಿ ಮಲ್ಲೇನಹಳ್ಳಿಯಿಂದ ಭಕ್ತರಹಳ್ಳಿ ವರೆಗೆ ೭ ಕಿ.ಮೀ ರಸ್ತೆಯನ್ನು ಮರು ಡಾಂಬರೀಕರಣ ಮಾಡುವುದರಿಂದ ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ಮಳೆಗಾಲ ಆರಂಭವಾಗುದರೊಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕೆಂದು ಸೂಚನೆ ನೀಡಿದರು.
ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹಲವಾರು ಜನಪರವಾದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಆರ್‌ಎಫ್ ಯೋಜನೆಯಡಿ ರಾಜ್ಯಸರ್ಕಾರ ನೀಡುವ ಅನುದಾನದ ಮೂಲಕ ಅಭಿವೃದ್ಧಿಪಡಿಸಿ ನಂತರ ಕೇಂದ್ರ ಸರ್ಕಾರದಿಂದ ಹಣವನ್ನು ವಾಪಸ್ ಪಡೆದುಕೊಳ್ಳಲಿದೆ. ಅದಕ್ಕಾಗಿ ಸಚಿವರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ಜಾಗರದಲ್ಲಿ ೧೦ ಕೋಟಿ ರೂಗಳ ಕಾಮಗಾರಿ, ಗಂಗೆಗಿರಿ ಕೊಂಡದಖಾನ್ ವರೆಗೆ ರಸ್ತೆ ಅಭಿವೃದ್ಧಿಗೆ ೫ ಕೋಟಿ ರೂ, ಜಾಗರದಿಂದ ನೆತ್ತಿನ ಕೋಟೆಗೆ ೫ ಕೋಟಿ ರೂ ಸೇರಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ೧೪ ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿದೆ ಎಂದರು.
ಇದಲ್ಲದೆ ಪಿಆರ್‌ಡಿಯಲ್ಲಿ ಹಳ್ಳಿಗಳ ಒಳಭಾಗದ ರಸ್ತೆಗಳ ಅಭಿವೃದ್ಧಿಗೆ ೧೦ ಕೋಟಿ ರೂ ನೀಡಲಾಗಿದ್ದು, ನಗರದ ಮುಖ್ಯರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ವಿಶೇಷ ಅನುದಾನದಲ್ಲಿ ೧೦ ಕೋಟಿ ರೂ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕೆ. ಮಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಗ್ರಾ.ಪಂ ಸದಸ್ಯ ದಿನೇಶ್, ಶಿವು, ಸುರೇಶ್, ಬಿಂಡಿಗ ದೇವಿರಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕುಲಶೇಖರ್, ಮುಖಂಡರಾದ ಕಲ್ಲೇಶ್, ಜಯರಾಂ, ಜಗದೀಶ್, ಅಧಿಕಾರಿ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Foundation stone laid for re-asphalting work costing Rs. 6 crore
