May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಬೆಲೆ ಏರಿಕೆ ಖಂಡಿಸಿ ಆಮ್‌ಆದ್ಮಿ ಪಕ್ಷ ಜನಜಾಗೃತಿ ಅಭಿಯಾನ

ಚಿಕ್ಕಮಗಳೂರು:  ರಾಜ್ಯಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಹಾಗೂ ಕೇಂದ್ರ ಸರ್ಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸದಿರುವುದನ್ನು ವಿರೋಧಿಸಿ ಏಪ್ರಿಲ್ ಮಾಹೆಯಲ್ಲಿ ಜನಜಾಗೃತಿ ಹಮ್ಮಿಕೊಂಡು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲು ಆಮ್‌ಆದ್ಮಿ ಪಕ್ಷ ನಿರ್ಧರಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಕ್ಷದ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೇಮಂತ್ ಕುಮಾರ್ ಎಂ.ಎಸ್ ಅವರು ರಾಜ್ಯಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಲೆ ಏರಿಕೆ ಮಾಡುತ್ತಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗಕ್ಕೆ ಹಾಗೂ ಜನಸಾಮಾನ್ಯರಿಗೆ ಜೀವನ ನಡೆಸುವುದು ತುಂಬ ಕಷ್ಟಕರವಾಗಿದೆ ಎಂದು ಹೇಳಿದರು.

ಸುಮಾರು ೧ ತಿಂಗಳಲ್ಲಿ ಬಸ್ ದರ, ಮೆಟ್ರೋ ದರ, ಹಾಲಿನ ಉತ್ಪನ್ನಗಳ ದರ, ಡೀಸೆಲ್ ದರ ಏರಿಸಿರುವುದರಿಂದ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿರುವುದರಿಂದ ಸರ್ಕಾರದ ಗಮನ ಸೆಳೆಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಿದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಸಾಮಾನ್ಯ ಜನರ ಬಗ್ಗೆ ಈ ಎರಡು ಸರ್ಕಾರಗಳಿಗೆ ಕಾಳಜಿ ಇಲ್ಲ. ಈ ಹಿನ್ನೆಲೆಯಲ್ಲಿ ಸುಗಮ ಜೀವನ ನಡೆಸಲು ಅನುಕೂಲವಾಗುವಂತೆ ಎಲ್ಲಾ ದರಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಜಿಲ್ಲೆಯ ಐದೂ ಶಾಸಕರು ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿದರು.

ನಗರದ ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್ ನಿಲ್ದಾಣ ಮಳೆಗಾಲ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಕೆಸರುಗದ್ದೆಯಂತಾಗುತ್ತಿದ್ದು, ತಕ್ಷಣ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಕಾಂಕ್ರೀಟ್ ನೆಲಹಾಸು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿ ಕೆರೆ ಏರಿಮೇಲೆ ರಾತ್ರಿ ಸಮಯದಲ್ಲಿ ತುಂಬಾ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಗೆ ಬೀದಿದೀಪ ಅಳವಡಿಸುವಂತೆ ಆಗ್ರಹಿಸಿದ ಅವರು, ನಗರದ ಎಲ್ಲಾ ರಸ್ತೆಗಳು ಯುಜಿಡಿ ಅಮೃತ್ ಯೋಜನೆ ಕಾಮಗಾರಿ ಸಂದರ್ಭದಲ್ಲಿ ಹಾನಿಯಾಗಿದ್ದು, ಅವ್ಯವಸ್ಥೆಯ ಆಗರವಾಗಿದೆ ಎಂದು ದೂರಿದರು.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಇನ್ನೊಂದು ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಅಭಿವೃದ್ಧಿಪಡಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಂಥೋಣಿ, ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಪ್ರಭು, ಸಂಘಟನಾ ಕಾರ್ಯದರ್ಶಿ ರಂಗನಾಥ್, ಅಲ್ಪಸಂಖ್ಯಾತ ಘಟಕದ ಮುಖಂಡ ವಸೀಂ ಪಾಶ ಉಪಸ್ಥಿತರಿದ್ದರು.

Aam Aadmi Party launches public awareness campaign against price hike

Related posts

Vajpayee is a model politician:ಮಾಜಿ ಪ್ರಧಾನಿ ವಾಜಪೇಯಿ ಮಾದರಿ ರಾಜಕಾರಣಿ

Team Suddigara

ಜಾತಿ ಗಣತಿಯ ಅರ್ಜಿ ನಮೂನೆಯಲ್ಲಿ ಕುರುಬ ಎಂದು ಬರೆಸಿರಿ

Team Suddigara

ಸಂವಿಧಾನದ ಆಶಯದಂತೆ ನಡೆಯುತ್ತಿದೆ ಕಾಂಗ್ರೆಸ್ ಸರ್ಕಾರ

Manju Mc

Leave a Comment