ಚಿಕ್ಕಮಗಳೂರು: ಈ ಕ್ಷೇತ್ರದ ಜಾಗರ ಹೋಬಳಿಯೊಂದಕ್ಕೆ ಅಭಿವೃದ್ಧಿ ಕಾಮಗಾರಿಗಳಿಗೆ ೨೧ ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದ್ದು, ಕಾಮಗಾರಿ ಆರಂಭವಾಗಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.
ಜಾಗರ ಹೋಬಳಿಯ ಶಿರವಾಸೆ ಹಾಗೂ ಮೇಲಿನಹುಲುವತ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಂi ಸೋಮವಾರ ನಡೆದ ಜನ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಕಸಬಾ, ಲಕ್ಯಾ, ಸಖರಾಯಪಟ್ಟಣ, ದೇವನೂರು ಕ್ಷೇತ್ರಕ್ಕೆ ೨೦ ಕೋಟಿ ರೂ.ಗಳಿಗೂ ಕಡಿಮೆ ಅನುದಾನವನ್ನು ಒದಗಿಸಲಾಗಿದೆ. ಜಾಗರ ಹೋಬಳಿಯೊಂದಕ್ಕೆ ಆದರೆ ಒಟ್ಟು ೨೧ ಕೋಟಿ ರೂ.ಗಳಲ್ಲಿ ೧೩ ಕೋಟಿ ರೂ.ಗಳನ್ನು ವಿಸ್ತೀರ್ಣ ದೊಡ್ಡದಾಗಿರುವ ಶಿರವಾಸೆ ಗ್ರಾ.ಪಂ.ಗೆ ನೀಡಲಾಗಿದ್ದು, ಕಡಿಮೆ ವಿಸ್ತೀರ್ಣವಿರುವ ಮೇಲಿನ ಹುಲುವತ್ತಿಗೂ ಉಳಿದ ಹಣ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಹೆಚ್ಚಿನ ಅವಶ್ಯಕತೆ ಇರುವಲ್ಲಿಗೆ ಪ್ರಥಮ ಆದ್ಯತೆ ನೀಡಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಜಾಗರದಿಂದ ನೆತ್ತಿಚೌಕದವರೆಗೆ ಐದು ಕೋಟಿ ರೂ.ನ ರಸ್ತೆ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ಹೊಂಡದಕಾನ್ವರೆಗೆ ೫ ಕೋಟಿ ರೂ.ವೆಚ್ಚದ ಪಿಡಬ್ಲ್ಯುಡಿ ರಸ್ತೆ ನಿರ್ಮಾಣವಾಗಲಿದೆ. ಹೊನ್ನಾಳದಿಂದ ಗಾಳಿಗುಡ್ಡದವರೆಗಿನ ೨ ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇಲ್ಲಿಂದ ಮುಂದುವರಿದ ಭಾಗಕ್ಕೂ ಒಂದೊಂದು ಕೋಟಿ ರೂ.ನ ಎರಡು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ೨೫ ಲಕ್ಷ ರೂ.ಗಳ ಶಿರವಾಸೆ ಕಾಂಕ್ರೀಟ್ ರಸ್ತೆ ಈಗಾಗಲೇ ಉದ್ಘಾಟಿಸಲಾಗಿದೆ. ಮೇಲಿನ ಹುಲುವತ್ತಿ ಗ್ರಾ.ಪಂ.ವ್ಯಾಪ್ತಿಯ ೪೦ ಲಕ್ಷ ರೂ. ವೆಚ್ಚದ ಸೇತುವೆಯನ್ನು ಉದ್ಘಾಟಿಸಲಾಗಿದೆ.
ಹೊನ್ನಾಳದಿಂದ ಸಿದ್ದರಬಾನುವರೆಗಿನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ೨ ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇವಲ್ಲದೆ ೫, ೧೦, ೨೦ ಲಕ್ಷ ರೂ.ಗಳ ಸಣ್ಣ ಸಣ್ಣ ರಸ್ತೆ ಕಾಮಗಾರಿಗಳನ್ನು ಕೂಡ ಕೈಗೆತ್ತಿಕೊಳ್ಳಲಾಗಿದೆ. ಬಿಲ್ಲವ ಸಮುದಾಯದ ಸಮುದಾಯ ಭವನ ಮುಕ್ತಾಯಗೊಳಿಸಲು ೧೦ ಲಕ್ಷ ರೂ.ಗಳನ್ನು ಒದಗಿಸಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.
ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಬೆನ್ನತ್ತಿ ನಗರಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಆಗಬಾರದು. ಹಾಗಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆತಂದು ಸಮಸ್ಯೆಗಳನ್ನು ಆಲಿಸುವ ಕೈಜೋಡಿಸಲಾಗಿದೆ. ಇಲ್ಲಿ ಗ್ರಾಮಸ್ಥರು ನೀಡುವ ಅರ್ಜಿಗಳನ್ನು ಪಡೆದುಕೊಂಡು ಆ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಯವರು ಬಗೆಹರಿಸಬೇಕು. ಆ ಸಮಸ್ಯೆಗಳನ್ನು ತಹಸೀಲ್ದಾರರು ಹಾಗೂ ತಾ.ಪಂ. ಇಒಗಳು ತಿಂಗಳಿಗೊಮ್ಮೆ ಸಮಸ್ಯೆಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಸಭೆಯಲ್ಲಿ ಮೊದಲು ಪ್ರಸ್ತಾಪಿಸಿದ ಸಮಸ್ಯೆಗಳು ಪುನರಾವರ್ತನೆಯಾಗಬಾರದು. ಇಲ್ಲಿ ನಡೆಸುವ ಜನ ಸಂಪರ್ಕ ಸಭೆಗಳು ಕಾಟಾಚಾರದ ಸಭೆಗಳಾಗಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.
೨೦೨೩ರಲ್ಲಿ ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳು, ಎಲ್ಲಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಮ್ಮ ಕ್ಷೇತ್ರದಲ್ಲಿ, ತಾಲ್ಲೂಕು ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಶಾಸಕರು ಜನಸಂಪರ್ಕ ಸಭೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭ ಮಾಡಲಾಯಿತು. ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಿದರೆ ರಾಜ್ಯಮಟ್ಟಕ್ಕೆ ಹೋಗುವ ಪರಿಸ್ಥಿತಿ ಒದಗುವುದಿಲ್ಲ ಎಂದು ಎನ್ನುವ ಕಾರಣಕ್ಕಾಗಿ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾ ಮಟ್ಟದಲ್ಲಿ ಹಾಗೂ ತಾವು ತಾಲ್ಲೂಕು ಮಟ್ಟದಲ್ಲಿ ಈ ಸಭೆಯನ್ನು ಉದ್ಘಾಟಿಸಿದ್ದಾಗಿ ತಿಳಿಸಿದರು. ತಾಲ್ಲೂಕು ಮಟ್ಟಕ್ಕೂ ಬರಲು ಗ್ರಾಮಸ್ಥರಿಗೆ ತೊಂದರೆಯಾಗಬಹುದೆಂದು ನೇರವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆದೊಯ್ದು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎರಡೆರಡು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಜನ ಸಂಪರ್ಕ ಸಭೆಗಳನ್ನು ನಡೆಸುವ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.
ಶಿರವಾಸೆ ಗ್ರಾ,ಪಂ ಅಧ್ಯಕ್ಷ ರಘುನಾಥ್ ಬಿ.ಆರ್., ಮೇಲಿನಹುಲುವತ್ತಿ ಗ್ರಾ.ಪಂ. ಅಧ್ಯಕ್ಷೆ ಜಾನಕೀರಾಮ್, ಜಿ.ಪಂ. ಉಪ ಕಾರ್ಯದರ್ಶಿ ಶಂಕರ್ ಕೊರವರ್, ತಾಲ್ಲೂಕು ತಹಸೀಲ್ದಾರ್ ಸುಮಂತ್ಕುಮಾರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್, ಶಿರವಾಸೆ ಗ್ರಾ.ಪಂ ಉಪಾಧ್ಯಕ್ಷೆ ರಾಧ, ಮೇಲಿನ ಹುಲುವತ್ತಿ ಗ್ರಾ.ಪಂ.ಉಪಾಧ್ಯಕ್ಷೆ ಕೆ.ಸಿ.ಭಾರತಿ, ಸದಸ್ಯರಾದ ಪ್ರೇಮಾಕ್ಷಿ ಎಸ್.ಅಮೀನ್, ದಾಕ್ಷಾಯಿಣಿ, ಶಿರವಾಸೆ ಗ್ರಾ.ಪಂ. ಸದಸ್ಯರಾದ ವಿಮಲಾ, ಪಾರ್ವತಿ, ಎಸ್. ಉಮಾ, ಗಣೇಶ್, ಟಿ.ಎಸ್.ರಘು, ಎನ್.ಪ್ರೀತಿ, ರವಿ ರೇವಣ್ಣ, ಮೇಲಿನ ಹುಲುವತ್ತಿ ಗ್ರಾಪಂ ಸದಸ್ಯೆ ಶಾರದಾಂಬ, ಡಿಹೆಚ್ಒ ಡಾ.ಅಶ್ವತ್ಥ್ ಬಾಬು, ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Grant of Rs. 21 crore for Jagar Hobli development works

Leave a Reply