May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಭಾರತೀಯ ಸೇನೆ ಆಪರೇಷನ್ ಸಿಂಧೂರ – ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

ಚಿಕ್ಕಮಗಳೂರು: ಹಲ್ಗಾಮ್‌ನಲ್ಲಿ ೨೬ ಹಿಂದೂಗಳನ್ನು ಹತ್ಯೆಮಾಡಿದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ಥಾನಕ್ಕೆ ನುಗ್ಗಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ನಗರದ ಬಸವನಹಳ್ಳಿ ಶಂಕರ ಮಠದ ಶ್ರೀ ಶಾರದಾದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಪಾಕಿಸ್ಥಾನ ಹಾಗೂ ಭಯೋತ್ಪಾದಕರ ವಿರುದ್ಧ ಭಾರತ ಸರ್ಕಾರ ಮುಂದೆ ಕೈಗೊಳ್ಳುವ ಎಲ್ಲಾ ಕಾರ್ಯಾಚರಣೆಯಲ್ಲಿ ಯಶಸ್ಸು ಸಿಗಲಿ ಹಾಗೂ ಸೈನಿಕರಲ್ಲಿ ಆತ್ಮಸೈರ್ಯ ಹೆಚ್ಚಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಭಾರತೀಯ ಸೇನೆಗೆ ನಮ್ಮ ಬೆಂಬಲ ಎಂಬ ಬಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಲಾಯಿತು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಈ ಸಂದರ್ಭದಲ್ಲಿ ಮಾತನಾಡಿ, ಭಯೋತ್ಪಾದಕರ ವಿರುದ್ಧ ಭಾರತ ಸರ್ಕಾರ, ನಮ್ಮ ಸೈನ್ಯ ತೆಗೆದುಕೊಂಡಿರುವ ಕ್ರಮಕ್ಕೆ ತಾಯಿ ಶಾರದೆ ಎಲ್ಲಾ ದೃಷ್ಟಿಯಿಂದಲೂ ಶಕ್ತಿಯನ್ನು ನೀಡಿ ಭಾರತವನ್ನ ಕಾಪಾಡಲಿ, ಭಾರತಾಂಭೆಯ ಸಿಂಧೂರವನ್ನು ಅಳಿಸಬೇಕೆಂದು ಭಯೋತ್ಪಾದನೆ ಮೂಲಕ ಷಡ್ಯಂತ್ರ ನಡೆಸುತ್ತಿರುವ ಪಾಪಿಗಳಿಗೆ ಶಿಕ್ಷೆಯಾಗಲಿ. ಸೈನ್ಯ ಮತ್ತು ರೈತರನ್ನು ಮರೆತ ದೇಶಕ್ಕೆ ಭವಿಷ್ಯವಿಲ್ಲ. ಸೈನಿಕರು ಪ್ರಾಣವನ್ನು ಕೊಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ. ಅವರಿಗಾಗಿ ಕನಿಷ್ಠ ಪ್ರಾರ್ಥನೆ ಮಾಡುವ ಮೂಲಕ ನಾವು ನಿಮ್ಮ ಜೊತೆಗಿದ್ದೇವೆ ಎನ್ನುವ ಸಂದೇಶ ಕೊಡುವ ಸಲುವಾಗಿ ಇಂದು ತಾಯಿ ಶಾರದೆಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವ ಸಲುವಾಗಿ ಸಂವಿಧಾನವನ್ನು ಒಪ್ಪುವ ಜನ, ರಾಷ್ಟ್ರ ಪ್ರೇಮ ಇರುವ ಪ್ರತಿಯೊಬ್ಬರು ಒಂದಾಗಿ, ಒಟ್ಟಾಗಿ ನಿಂತು ಭಾರತ ಸೈನ್ಯ, ಭಾರತ ಸರ್ಕಾರದ ಜೊತೆ ನಾವಿದ್ದೇವೆ. ಹೋರಾಟದಲ್ಲಿ ನಾವೂ ಸಹ ತನು, ಮನ, ಧನದೊಂದಿಗೆ ಸರ್ಕಾದ ಜೊತೆ ನಿಲ್ಲುತ್ತೇವೆ ಎನ್ನುವ ಸಂದೇಶ ಕೊಡುವ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲಾಗಿದೆ. ನವಕಾಲದ ರಾಕ್ಷಸರಂತೆ ಮಾನವೀಯತೆ ಇಲ್ಲದೆ ವರ್ತಿಸುತ್ತಿರುವ ಭಯೋತ್ಪಾದಕರನ್ನು ಮಟ್ಟಹಾಕಲು ನೆರವಾಗುವಂತೆ ತಾಯಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ ಮಾತನಾಡಿ, ೧೩ ದಿನಗಳ ಹಿಂದೆ ಪಹಲ್ಗಾಮ್‌ನಲ್ಲಿ ೨೬ ಮಂದಿ ಅಮಾಯಕ ಪ್ರವಾಸಿಗರನ್ನ ಭಯೋತ್ಪಾದಕರು ಹತ್ಯೆ ಮಾಡಿದರು. ಅಂದಿನಿಂದ ಶತಕೋಟಿ ಭಾರತೀಯರು ಪ್ರತೀಕಾರಕ್ಕೆ ಕಾಯುತ್ತಿದ್ದರು. ಯಾವ ಭಯೋತ್ಪಾದಕರು ಗುಂಡಿಟ್ಟು ರಕ್ತವನ್ನು ಚೆಲ್ಲಿದ್ದರೋ ಅದೇ ಭಯೋತ್ಪಾದಕರ ರಕ್ತವನ್ನು ಇಂದು ನಮ್ಮ ಸೈನಿಕರು ಹರಿಸಿ ತಾಯಿ ಭಾರತಿಗೆ ಸಿಂಧೂರವನ್ನು ಹಚ್ಚುವ ಕೆಲಸ ಮಾಡಿದೆ. ಇದಕ್ಕಾಗಿ ಭಾರತೀಯ ಸೈನ್ಯ ಹಾಗೂ ಕೇಂದ್ರ ಸರ್ಕಾರವನ್ನ ನಾವು ಅಭಿನಂದಿಸುತ್ತೇವೆ ಎಂದರು.

ಯಾವುದೇ ಕಾರಣಕ್ಕೆ ಸೈನಿಕರ ಆತ್ಮಸ್ಥೈರ್ಯವನ್ನು ಕುಂದಿಸುವ ಕೆಲಸವನ್ನು ಮಾಡಬಾರದು. ಒಂದೆಡೆ ದೇಶದ ನಾಗರೀಕರ ಮಾರಣ ಹೋಮ ನಡೆಯುತ್ತಿದ್ದರೂ ಕಾಂಗ್ರೆಸ್ ನಾವು ಶಾಂತಿ ಬಯಸುತ್ತೇವೆ ಎಂದು ಬೆಳಗ್ಗೆ ಒಂದು ಪೋಸ್ಟ್ ಹಾಕಿತ್ತು. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಭಯೋತ್ಪಾದಕರ ಪರ ನಿಲ್ಲುವ ಕಾಂಗ್ರೆಸ್‌ನ ಆಂತರಿಕ ಭಯೋತ್ಪಾದನೆ ಅಥವಾ ಅರ್ಬನ್ ನಕ್ಸಲ್ ಮನೋಸ್ಥಿತಿಯನ್ನು ಆ ಪಕ್ಷ ಬದಲಿಸಿಕೊಳ್ಳಬೇಕು. ಅದರ ಹೊರತು ಇದೇ ಮನಸ್ಥಿತಿ ಮುಂದುವರಿಸಿದರೆ ಜನರು ಕಾಂಗ್ರೆಸ್‌ಗೆ ಬುದ್ಧಿ ಕಲಿಸುತ್ತಾರೆ ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಪಾಕಿಸ್ಥಾನದ ಉಗ್ರರ ನೆಲೆ ಮೇಲೆ ನಡೆಸಿದ ದಾಳಿಯಲ್ಲಿ ಭಾರತೀಯ ಸೈನಿಕರಿಗೆ ಜಯ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಜಮ್ಮು-ಕಾಶ್ಮೀರ ಶಾರದೆಯ ನಾಡು ಅಲ್ಲಿ ಉಗ್ರರು ಅಟ್ಟಹಾಸ ನಡೆಸಿ ನಮ್ಮ ಮಹಿಳೆಯರ ಸಿಂಧೂರ ತೆಗೆಯುವ ಕೆಲಸ ಮಾಡಿದ್ದರು. ಅದಕ್ಕೆ ಭಾರತ ಸರ್ಕಾರ ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರನ್ನು ಹೊಡೆದುರುಳಿಸುವ ಕೆಲಸ ಮಾಡಿದೆ. ಮುಂದೆಯೂ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇನ್ನಷ್ಟು ಶಕ್ತಿ ಸಿಗಲಿ, ದೇಶದ ಸೈನಿಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಧೈರ್ಯ, ಸ್ಥೈರ್ಯ, ಶಕ್ತಿ ಸಿಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.

ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಕಾರ್ಯದರ್ಶಿ ಆಟೋ ಶಿವಣ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಜಸಿಂತ ಅನಿಲ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್, ಮುಂಖಂಡರುಗಳಾದ ಡಾ.ನರೇಂದ್ರ, ವೈ.ಜಿ.ಸುರೇಶ್, ಜೆ.ಡಿ.ಲೋಕೇಶ್, ಹಿರೇಮಗಳೂರು ಕೇಶವ ಮತ್ತಿತರರು ಭಾಗವಹಿಸಿದ್ದರು.

Indian Army Operation Sindoor – Special puja by BJP workers

Related posts

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ನಗರ ಮಂಡಲ ಪ್ರತಿಭಟನೆ

Team Suddigara

ನಗರ ರಸ್ತೆಗಳ ಪರಿಶೀಲನೆಗೆ ಮುಖ್ಯಮಂತ್ರಿಗಳ ಸಿಟಿರೌಂಡ್ಸ್

Team Suddigara

ಒಂಟಿ ಸಲಗ ಸೇರಿಯಲು ಸರ್ಕಾರ ಆದೇಶ

Team Suddigara

Leave a Comment