ಮಹಲ್-ಕೆಮ್ಮಣ್ಣುಗುಂಡಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಗುರಿ

ಚಿಕ್ಕಮಗಳೂರು:  ಜಿಲ್ಲೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಮಹಲ್‌ನಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಗುರಿಹೊಂದಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

ಅವರು ಇಂದು ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಅತ್ತಿಗುಂಡಿಯಿಂದ ಕೊಳಗಾಮೆಗೆ ಹೋಗುವ ರಸ್ತೆ ಅಭಿವೃದ್ಧಿಗೆ ೧.೫೦ ಕೋಟಿ ರೂ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಈಗಾಗಲೇ ಮಹಲ್‌ನಿಂದ ಕೆಮ್ಮಣ್ಣುಗುಂಡಿ ಸಂಪರ್ಕಿಸುವ ರಸ್ತೆಗೆ ಸುಮಾರು ೩೩ ಕೋಟಿ ರೂ ವೆಚ್ಚದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ತಾಂತ್ರಿಕ ತೊಂದಿರೆಯಿಂದಾಗಿ ವಾಪಸ್ ಬಂದಿದೆ ಎಂದು ಹೇಳಿದರು.

ಈ ರಸ್ತೆ ಅಭಿವೃದ್ಧಿಯಾದರೆ ವಾಹನ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಕೆಮ್ಮಣ್ಣುಗುಂಡಿಯಿಂದ ತರೀಕೆರೆ ಮಾರ್ಗವಾಗಿ ಪ್ರವಾಸಿಗರು ವಾಪಸ್ ಹೋಗುತ್ತಾರೆಂದು ವಿವರಿಸಿದರು.

ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಸೇರಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಪರಿಸರಕ್ಕೆ ಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ೧೪ ಕೋಟಿ ರೂ ವಿಶೇಷ ಅನುದಾನದಲ್ಲಿ ಅತ್ತಿಗುಂಡಿ ಗ್ರಾ.ಪಂ ಗೆ ೧ ಕೋಟಿ ರೂ ಕಾಂಕ್ರೀಟ್ ರಸ್ತೆ ಕಾಮಗಾರಿ, ಕೊಳಗಾಮೆಗೆ ಹೋಗುವ ರಸ್ತೆಗೆ ೧.೫೦ ಕೋಟಿ ರೂ ವೆಚ್ಚದ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲಾಗುವುದೆಂದರು.

ಈ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುವುದರಿಂದ ರಸ್ತೆಗಳು ಹಾನಿಯಾಗುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಂಡು ಅತೀ ಶೀಘ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಿಸಬೇಕೆಂದು ಸೂಚಿಸಿದರು.

ಇದು ಪ್ರವಾಸಿ ತಾಣಗಳ ಪ್ರದೇಶವಾಗಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗದಂತೆ ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗದ ರೀತಿ ಕಾಮಗಾರಿ ಹೊಂದಾಣಿಕೆ ಮಾಡಿಕೊಂಡು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಮುಂದಾಗಬೇಕೆಂದು ಹೇಳಿದರು.

ಈಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹೆಚ್.ಪಿ ಮಂಜೇಗೌಡ, ನಗರಸಭೆ ಸದಸ್ಯ ಶಾದಬ್ ಆಲಂ ಖಾನ್, ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಮಾಜಿ ಅಧ್ಯಕ್ಷ ಶಾಂತಕುಮಾರ್, ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

Mahal-Kemmannugundi connecting road targeted for construction

Comments

Leave a Reply

Your email address will not be published. Required fields are marked *