ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ ಮಾಡುವ ಉದ್ದೇಶ ಹೊಂದಿರುವ ಜಾಗತಿಕ ಲಿಂಗಾಯತ ಮಹಾಸಭಾಗಳು ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ವೀರಶೈವರು ಲಿಂಗ ಧರಿಸುವುದರಿಂದ ಧರ್ಮದ ಮಾನ್ಯತೆಯ ಹೋರಾಟಕ್ಕೆ ಕೈಜೋಡಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹೆಚ್. ಗಂಗಾಧರಪ್ಪ ಶಿವಪುರ ಮನವಿ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಧರ್ಮದ ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಮನವಿ ಮಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಧರ್ಮಗಳ ಬಗ್ಗೆ ಇರುವ ಗೊಂದಲಗಳನ್ನು ಹೋಗಲಾಡಿಸಲು ನಿರ್ಧರಿಸಿರುವುದು ಶ್ಲಾಘನೀಯ ಎಂದರು.
ಈ ಆಯೋಗವು ವೀರಶೈವ ಮತ್ತು ಲಿಂಗಾಯತರು ಇಬ್ಬರನ್ನೂ ಆಹ್ವಾನಿಸಿ ದಾಖಲೆಗಳನ್ನು ಪರಿಶೀಲಿಸಿ ವೀರಶೈವವು ದಾಖಲೆ ಸರಿಯಿಲ್ಲವೆಂದು ಧರ್ಮ ಲಕ್ಷಣಗಳನ್ನು ಹೊಂದಿಲ್ಲ. ಲಿಂಗಾಯತರು ಆಧಾರ ಸಹಿತಿ ದಾಖಲೆ ಸಲ್ಲಿಸಿದ್ದರಿಂದ ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ನಿರ್ಧರಿಸಿ ಮಂತ್ರಿಮಂಡಲದಲ್ಲಿ ಅನುಮೋದಿಸಿ ಮಾನ್ಯತೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಹಿಂದೆ ಬಿ.ಎಸ್. ಯಡೀಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವೀರಶೈವ ಧರ್ಮಕ್ಕೆ ಮಾನ್ಯತೆ ಕೊಡಬೇಕೆಂದು ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಿದಾಗ ವೀರಶೈವ ಒಂದು ಶಾಖೆಯಾಗಿದ್ದು, ಮಾನ್ಯತೆಗೆ ಯೋಗ್ಯವಾಗಿಲ್ಲ ಎಂದು ತಿರಸ್ಕರಿಸಿದರು ಎಂದು ಮಾಹಿತಿ ನೀಡಿದರು.
ಪ್ರಾರಂಭದಲ್ಲಿ ವೀರಶೈವ ಮಹಾಸಭಾ ಎಂದಿತ್ತು. ಇತ್ತೀಚೆಗೆ ವೀರಶೈವ ಲಿಂಗಾಯತ ಎಂದು ಲಿಂಗಾಯತರಿಗೆ ಜಂಟಿಯಾಗಿ ಮಾನ್ಯತೆ ಸಿಗಬಾರದೆಂದು ಸಮಾಜದಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆಂದು ದೂರಿದರು.
ಈ ಹಿನ್ನೆಲೆಯಲ್ಲಿ ವೀರಶೈವರ ಸಹವಾಸವೇ ಬೇಡವೆಂದು ಹಿರಿಯ ಐಎಎಸ್ ನಿವೃತ್ತ ಅಧಿಕಾರಿ ಎಂ. ಶಿವಾನಂದ ಜಾಮ್‌ದಾರ್ ರವರು ಜಾಗತಿಕ ಲಿಂಗಾಯತ ಮಹಾಸಭಾವನ್ನು ಸ್ಥಾಪಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಘಟಿಸುತ್ತಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಾಳೂರು ಚನ್ನಪ್ಪ, ಕಡೂರು ತಾಲ್ಲೂಕು ಅಧ್ಯಕ್ಷ ಗಣೇಶ್, ತರೀಕೆರೆ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಘಟಕದ ಎಸ್. ಗಾಯಿತ್ರಮ್ಮ ಉಪಸ್ಥಿತರಿದ್ದರು.
Support for recognition of Lingayat independent religion
