May 19, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಬೆಲೆ ಏರಿಕೆಯನ್ನೇ ಸಾಧನೆ ಎಂದು ಪರಿಗಣಿಸಿ ಸಮಾವೇಶ ಮಾಡಲು ಹೊರಟಿದೆ

ಚಿಕ್ಕಮಗಳೂರು:  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಬೆಲೆ ಏರಿಕೆಯನ್ನೇ ಸಾಧನೆ ಎಂದು ಪರಿಗಣಿಸಿ ಸಮಾವೇಶ ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ೨ ವರ್ಷದಲ್ಲಿ ೬೪ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿದೆ. ಜನನ-ಮರಣ ಪ್ರಮಾಣ ಪತ್ರಗಳಿಂದ ಹಿಡಿದು ವಿದ್ಯುತ್, ನೀರು, ಹಾಲು, ಆಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ, ಎಕ್ಸೈಸ್ ಡ್ಯೂಟಿ, ಸ್ಟಾಂಪ್ ಪೇಪರ್, ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ. ಇದು ಕಾಂಗ್ರೆಸ್‌ನ ಹೇಳಿಕೊಳ್ಳಲಾಗದ ಸಾಧನೆ ಎಂದು ವ್ಯಂಗ್ಯವಾಡಿದರು.

ಮತ್ತೊಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೂಡಾ ಹಗರಣ, ವಾಲ್ಮೀಕಿ ಹಗರಣ, ಸ್ಮಾರ್ಟ್ ಮೀಟರ್ ಹಗರಣ, ಪ್ಲಾನ್ ಅನುಮೋದನೆಗೆ ೧೦೦ ಲಂಚ ವಸೂಲಿ ಹಗರಣ, ಗುತ್ತಿಗೆದಾರರರಿಂದ ಶೇ.೬೦ ರಷ್ಟು ವಸೂಲಿ ಹಗರಣ ಇದೂ ಸಹ ಕಾಂಗ್ರೆಸ್ ಹೇಳಿಕೊಳ್ಳಲಾಗದ ಸಾಧನೆಗಳು ಎಂದು ಕುಟುಕಿದರು.

ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ ಆದರೆ ಜಾತಿ, ಜಾತಿ ನಡುವೆ ಸಂಘರ್ಷವನ್ನು ಹುಟ್ಟು ಹಾಕಿ ಸಾಮಾಜಿಕ ಕ್ಷೆಭೆಗೆ ನಾಂದಿ ಹಾಡಿದ್ದಾರೆ. ೨೦೧೬ ರಲ್ಲೇ ಕಾಂvರಾಜ ವರದಿ ಸಲ್ಲಿಕೆ ಆಗಿದ್ದರೂ ಇನ್ನೂ ಮಂಡನೆ ಮಾಡಲಾಗಿಲ್ಲ. ನಂತರ ಜಯಪ್ರಕಾಶ ಹೆಗ್ಡೆ ವರದಿ ಎಂದರು ಅದೂ ಸಹ ಸೋರಿಕೆಯಾಗಿದ್ದು ಬಿಟ್ಟರೆ ಟೇಬಲ್ ಆಗಲಿಲ್ಲ ಇದು ಅವರಿಗೆ ಸಾಮಾಜಿಕ ನ್ಯಾಯ ಕೊಡಬೇಕೆನ್ನುವ ಬದ್ಧತೆ ಇಲ್ಲ ಎನ್ನುವುದನ್ನು ತೋರುತ್ತದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹತ್ಯೆಗಳು, ಆತ್ಮಹತ್ಯೆಗಳು ದಾಖಲೆ ಪ್ರಮಾಣದಲ್ಲಿ ನಡೆದಿವೆ. ಸುಮಾರು ೩೦೦೦ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಅತೀ ಹೆಚ್ಚು ಸರ್ಕಾರಿ ನೌಕರರು, ಎಸ್‌ಐಗಳು, ವೈದ್ಯರು, ಸೂಪರಿಂಟೆಂಡೆಂಟ್‌ಗಳು ಆತ್ಮ ಹತ್ಯೆ ಮಾಡಿಕೊಂಡಿರುವುದು ಈ ಸರ್ಕಾರದ ಸಾಧನೆ ಎಂದು ಮೂದಲಿಸಿದರು.

ಬಾಣಂತಿಯರು, ಹಸುಗೂಸುಗಳ ಸಾವಿನಲ್ಲೂ ಈ ಸರ್ಕಾರ ದಾಖಲೆ ಬರೆದಿದೆ. ೨ ವರ್ಷದಲ್ಲಿ ರಾಜ್ಯದಲ್ಲಿ ೭೩೬ ಕ್ಕೂ ಹೆಚ್ಚು ಬಾಣಂತಿಯರು ಅನುಮಾನಾಸ್ಪದವಾಗಿ ಸಾವಪ್ಪಿದ್ದಾರೆ. ೧೧೦೦ ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವಿಗೀಡಾಗಿವೆ. ಇದರಲ್ಲಿ ಬೆಳಗಾವಿ ಮತ್ತು ದಾವಣಗೆರೆ ಮೊದಲೆರಡು ಸ್ಥಾನದಲ್ಲಿದೆ ಎಂದರು.

ಇದೇ ವೇಳೆ ಸಿದ್ದರಾಮಯ್ಯ ಅವರ ಕುಟುಂಬದ ಆಸ್ತಿ ವೃದ್ಧಿ ಆಗಿದ್ದರೆ ರಾಜ್ಯದ ಸಾಲ ಮಾತ್ರ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ೭.೬೪ ಲಕ್ಷ ಕೋಟಿ ಸರ್ಕಾರದ ಈ ವರೆಗಿನ ಸಮಗ್ರ ಸಾಲವಾಗಿದೆ. ಇದರಲ್ಲಿ ಶೇ.೫೦ ಕ್ಕಿಂತ ಹೆಚ್ಚು ಅಂದರೆ ೩.೯೦ ಲಕ್ಷ ಕೋಟಿ ರೂ ಸಿದ್ದರಾಮಯ್ಯ ಸಿಎಂ ಆದ ನಂತರವೇ ಮಾಡಲಾದ ಸಾಲವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಕ್ರಿಮಿನಲ್ ಮತ್ತು ಕಮ್ಯುನಲ್ ಪಡೆಗಳು ಮೇಲುಗೈ ಸಾಧಿಸಿವೆ ಎಂದು ಆರೋಪಿಸಿದರು.

ಪಂಚ ಗ್ಯಾರಂಟಿ ಹೆಸರಲ್ಲಿ ಜಾಹಿರಾತು ಕೊಟ್ಟು ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ ಮಾಡಲು ಹೊರಟಿದ್ದಾರೆ. ೬೬೨ ಕೋಟಿ ರೂ. ಹಾಲಿನ ಸಬ್ಸಿಡಿ ಬಾಕಿ ಇದೆ. ಕೇರಳದಲ್ಲಿ ೨ ಸಾವಿರ ರೂ. ಇರುವ ವಿದ್ಯುತ್ ಸ್ಮಾರ್ಟ್ ಮೀಟರ್‌ಗೆ ನಮ್ಮ ರಾಜ್ಯದಲ್ಲಿ ೧೫ ಸಾವಿರ ರೂ. ವಸೂಲಿ ಮಾಡಿ ಸ್ಮಾರ್ಟ್‌ಆಗಿ ಜನರನ್ನು ಬೋಳಿಸಲು ಹೊರಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

೨೦೨೩ ರಲ್ಲಿ ೬೧೫ ಇದ್ದ ರೈತ ಆತ್ಮಹತ್ಯೆ ಪ್ರಕರಣ ೨೦೨೪ ರಲ್ಲಿ ೭೩೪ಕ್ಕೇರಿದೆ. ೨೦೨೫ ಕ್ಕೆ ೧೦೦೦ದ ಗಡಿ ದಾಟಲಿದೆ. ಕೇವಲ ಒಂದು ವರ್ಷದಲ್ಲಿ ೧೯೨೭ ಕೊಲೆಗಳು, ೧೯೧೦ ಸುಲಿಗೆ, ೫೮೧೦ ಅಪರಹರಣ, ೨೬೩ ದರೋಡೆ ಪ್ರಕರಣಗಳು ದಾಖಲಾಗಿವೆ. ಇದೆಲ್ಲವೂ ಕಾಂಗ್ರೆಸ್ ಸಾಧನೆ ಎಂದರು

ಸಿಎಂ ಸಿದ್ದರಾಮಯ್ಯ ಮೇಲೆ ಮೂಡಾ ಹಗರಣದ ಆರೋಪವಿದೆ. ನಮ್ಮ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮೇಲೆ ಸ್ಮಾರ್ಟ್ ಮೀಟರ್ ಹಗರಣದ ಆರೋಪವಿದೆ. ಅವರಿಗೆ ಕೋರ್ಟ್ ಸಹ ಛೀಮಾರಿ ಹಾಕಿದೆ. ವಾಲ್ಮೀಕಿ ಹಗರಣದಲ್ಲಿ ೧೮೭ ಕೋಟಿ ಗುಳುಂ ಆಗಿದೆ ಎನ್ನುವುದನ್ನು ಸರ್ಕಾರವೇ ಒಪ್ಪಿದೆ. ಅಬಕಾರಿ ಸಚಿವರ ತಿಮ್ಮಾಪುರ ವಿರುದ್ಧ ವಾರ್ಷಿಕ ೫೦೦ ಕೋಟಿ ರೂ. ಭ್ರಷ್ಟಾಚಾರದ ಆರೋಪದ ಆಡಿಯೋ ವೈರಲ್ ಆಗಿದೆ. ಎಂದು ದೂರಿದರು.

ಪಂಚ ಗ್ಯಾರಂಟಿ ಪಂಕ್ಚರ್ ಆಗಿದೆ. ಗೃಹ ಲಕ್ಷ್ಮಿ ಪ್ರತಿ ತಿಂಗಳು ಬರುತ್ತಿಲ್ಲ. ಶಕ್ತಿ ಯೋಜನೆ ಬಂದ ಮೇಲೆ ರೂಟ್‌ಗಳಿಗೆ ಬಸ್ಸೇ ಇಲ್ಲ. ಶಾಲಾ ಮಕ್ಕಳು, ಪುರುಷರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಗುತ್ತಿಗೆ, ಸರೆ ಸರ್ಕಾರಿ ನೌಕರರಿಗೆ ೩ ರಿಂದ ೫ ತಿಂಗಳಿನಿಂದ ವೇತನ ಇಲ್ಲ. ಕಿಸಾನ್ ಸಮ್ಮಾನ್ ಸದ್ದಿಲ್ಲದೆ ರದ್ದಾಗಿದೆ. ರೈತ ವಿದ್ಯಾನಿಧಿ, ಎಸ್ಸಿಪಿ, ಟಿಎಸ್‌ಪಿ ೨೮ ಸಾವಿರ ಕೋಟಿ ಹಣ ದುರುಪಯೋಗವಾಗಿದೆ ಎಂದರು.

ಪಿಎಫ್‌ಐ, ಎಸ್‌ಡಿಪಿಐ ಪ್ರಕರಣ ಹಿಂದಕ್ಕೆ ಪಡೆದ ಪರಿಣಾಮ ಹುಬ್ಬಳ್ಳಿ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮತಾಂಧರಿಂದ ದಾಳಿ ನಡೆದಿದೆ. ಗ್ಯಾರಂಟಿಗೆ ಪ್ರತಿ ತಿಂಗಳು ತುಂಗಲು ದುಡ್ಡಿಲ್ಲದೆ ಸಾಲ ಮಾಡಿ ಸರ್ಕಾರ ದಿವಾಳಿ ಆಗಿದೆ. ಬರೇ ಜಾಹಿರಾತು ನೀಡಿ ಸಾಧನೆ ಸರ್ಕಾರ ಎಂದು ಬಿಂಬಿಸಿಕೊಳ್ಳಲು ಹೊರಟಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ರೈತ ಮೊರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಡಿ.ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿ ಮಹೇಶ್ ಇದ್ದರು.

Considering the price hike as an achievement the convention is set to be held

Related posts

ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ವರ್ತಕರಿಂದ 15 ಸಾವಿರ ರೂ ದಂಡ ವಸೂಲಿ

Team Suddigara

ಜಿಲ್ಲೆಯ ಸರ್ಕಾರಿ ಕೆರೆಗಳ ಸಮಗ್ರ ವರದಿ ಸಲ್ಲಿಸಲು ಸೂಚನೆ

Team Suddigara

ವಿವಿಧ ಬೇಡಿಕೆಗೆ ಆಗ್ರಹಿಸಿ ವಸತಿ ಶಾಲೆಗಳ ಖಾಯಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

Team Suddigara

Leave a Comment