May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಚಿಕ್ಕಮಗಳೂರು ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಭರವಸೆ

ಚಿಕ್ಕಮಗಳೂರು: ಜಿಲ್ಲೆ ಮತ್ತು ತಾಲ್ಲೂಕಿಗೆ ಅನುಕೂಲವಾಗುವಂತೆ ಮೊದಲ ಆದ್ಯತೆ ನೀಡಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವುದಾಗಿ ಮಾನ್ಯ ಲೋಕೋಪಯೋಗಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ ತಿಳಿಸಿದರು.

ಅವರು ಇಂದು ತಾಲ್ಲೂಕಿನ ಗಿರಿ ಭಾಗದ ಮಹಲ್, ಕೆಮ್ಮಣ್ಣುಗುಂಡಿ, ಮುಳ್ಳಯ್ಯನಗಿರಿ ಭಾಗಕ್ಕೆ ಭೇಟಿ ನೀಡಿ ರಸ್ತೆಗಳನ್ನು ಪರಿಶೀಲಿಸಿ ಮಾತನಾಡಿದರು.

ಪ್ರಮುಖವಾಗಿ ಮಹಲ್‌ನಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಇದೆ. ಕಳೆದ ೧೦ ವರ್ಷಗಳಿಂದ ಈ ರಸ್ತೆ ಮುಚ್ಚಲ್ಪಟ್ಟಿದೆ. ಈ ಹಿಂದೆ ಇದ್ದ ರಸ್ತೆಯನ್ನು ಮತ್ತೆ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಕಡೆಯಿಂದ ಸಮಸ್ಯೆ ಬರುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಅವಶ್ಯಕತೆ ಇದ್ದಲ್ಲಿ ಆ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಮಲೆನಾಡು ಪ್ರದೇಶವಾದ ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಮಾಡುವುದೊಂದೇ ಪರಿಹಾರ. ಈಗಾಗಲೇ ಮೂಡಿಗೆರೆ ತಾಲ್ಲೂಕಿನ ಚಂಡಗೋಡು-ಸಾರಗೋಡು ರಸ್ತೆಯನ್ನು ಕಾಂಕ್ರೀಟಿಕರಣ ಗೊಳಿಸಲಾಗುತ್ತಿದೆ ಎಂದು ಹೇಳಿದರು.

ಚಿಕ್ಕಮಗಳೂರು ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿರುವ ಕುರಿತು ಮಾತನಾಡಿ, ಈ ವಿಚಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದಿದೆ. ಮುಂಬರುವ ಸಭೆಯಲ್ಲಿ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದರು.

ಗಿರಿ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳು ಹಾಳಾಗುತ್ತಿವೆ ಎನ್ನುವ ದೂರುಗಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ರಸ್ತೆಯ ಒಂದು ಬದಿಯಲ್ಲಿ ಚರಂಡಿಗಳನ್ನು ಬಿಡಿಸುವ ಕೆಲಸ ಆಗುತ್ತಿದೆ. ಮುಳ್ಳಯ್ಯನಗಿರಿಗೆ ಬದಲಿ ರಸ್ತೆ ಇಲ್ಲದಿರುವ ಬಗ್ಗೆ ಗಮನ ಹರಿಸಲಾಗಿದೆ. ಮಲ್ಲಂದೂರಿನಿಂದ ಮುತ್ತೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಬಗ್ಗೆಯೂ ಪರಿಶೀಲಿಸುತ್ತೇವೆ ಎಂದರು.

ಬೇಲೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ಕೆ ಇನ್ನೆರಡು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

ಕಳೆದ ತಿಂಗಳು ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ರಸ್ತೆಗಳು ಹದಗೆಟ್ಟಿದ್ದು, ಈ ಬಗ್ಗೆಯೂ ಪರಿಶೀಲಿಸಿದ ಸಚಿವರು, ಕವಿಕಲ್ ಬಳಿ ಉಂಟಾಗಿದ್ದ ಭೂಕುಸಿತಕ್ಕೆ ಗೋಡೆ ನಿರ್ಮಿಸುವ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಅತ್ತಿಗುಂಡಿ ಹಾಗೂ ಮಹಲ್ ಬಳಿ ಉಂಟಾಗಿರುವ ರಸ್ತೆ ಹಾನಿಯನ್ನು ಪರಿಶೀಲನೆ ನಡೆಸಿದರಲ್ಲದೆ, ವಿವಿಧ ಕಾಮಗಾರಿಗಳ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಶೀಘ್ರ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಮುಖಂಡರಾದ ಹೆಚ್.ಪಿ.ಮಂಜೇಗೌಡ, ಬೆಟ್ಟಗೆರೆ ಪ್ರವೀಣ್ ಮತ್ತಿತರ ಪ್ರಮುಖರು ಇದ್ದರು.

More funding promised for road development in Chikkamagaluru district

Related posts

ಕಳಸ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

Team Suddigara

ಮಾದಕ ವ್ಯಸನದಿಂದ ದೂರವಿರಲು ಕ್ರೀಡೆ ಸಹಕಾರಿ

Team Suddigara

ವಾಸಿಸುವವನೇ ಮನೆಯೊಡೆಯ ಯೋಜನೆಯ ಸದುಪಯೋಗಕ್ಕೆ ಕರೆ

Team Suddigara

Leave a Comment