ಚಿಕ್ಕಮಗಳೂರು: ತುರ್ತು ಪರಿಸ್ಥಿತಿ ಘೋಷಣೆ, ಪ್ರಜಾತಂತ್ರ ವ್ಯವಸ್ಥೆಯ ಕತ್ತನ್ನು ಹಿಚುಕಿದ. ಸಂವಿಧಾನದ ಹತ್ಯೆ ಮಾಡಿರುವ ದಿನ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಹೇಳಿದರು.
ನಗರದ ರಂಗಣ್ಣನವರ ಛತ್ರದಲ್ಲಿ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ತುರ್ತು ಪರಿಸ್ಥಿತಿ – ಒಂದು ಕರಾಳ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಅತ್ಯಂತ ಘೋರವಾದ ಪ್ರಜಾಪ್ರಭುತ್ವದ ದಕ್ಕೆ ತರುವ ಘಟನೆಯಾಗಿದೆ ಎಂದರು.
ಬಡವರ ಕೇರಿಗಳಿಗೆ ನುಗ್ಗಿ ಗಂಡಸರ ಸಂತಾನಹರಣ ಮಾಡಿಸುವಂತಹ ಘೋರ ಕೃತ್ಯ ಮಾಡಿದರು. ಸುಮಾರು ಒಂದು ಕೋಟಿ ಜನರಿಗೆ ಬಲವಂತವಾಗಿ ಸಂತಾನಹರಣ ಮಾಡಿದರು. ಕರ್ನಾಟಕದಲ್ಲಿ ಐದು ಜನ ಜೈಲಿನಲ್ಲಿ ಸಾವನ್ನಪಿದರು. ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಜೈಲಿನಲ್ಲಿಯೇ ಸತ್ತರು. ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದರು. ಪ್ರಜಾಪ್ರಭುತ್ವದ ದೇಗುಲವಾಗಿರುವ ಪಾರ್ಲಿಮೆಂಟ್, ವಿಧಾನಸಭೆ, ವಿಧಾನಪರಿಷತ್ ಆಳುವವರ ಆಟದ ಅಂಗಳವಾದವು ಎಂದು ಹೇಳಿದರು.
ಸಂವಿಧಾನ ಹತ್ಯೆ ಮಾಡಿದರು, ಕೋರ್ಟ್‌ಗಳ ಬಾಯಿ ಬಂದ್ ಮಾಡಿದರು, ಪತ್ರಿಕೆಗಳನ್ನು ನಿರ್ಬಂಧಿಸಿದವರು ಇಂದು ಸಂವಿಧಾನವನ್ನು ಕೈಯಲ್ಲಿ ಹಿಡಿದು ಸಂವಿಧಾನದ ರಕ್ಷಣೆ ಮಾಡಿ ಎಂದು ಹೇಳುತ್ತಿದ್ದಾರೆ. ಸಂವಿಧಾನ ಗಂಡಾಂತರದಲ್ಲಿ ಇಲ್ಲ, ಇವರು ಗಂಡಾಂತರದಲ್ಲಿ ಇದ್ದಾರೆ ಎಂದರು.
ಪ್ರಧಾನ ಭಾಷಣ ಮಾಡಿದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಅವರು, 1975 ರ ಕರಾಳ ದಿನಗಳು ಇಂದಿನ ಯುವ ಪೀಳಿಗೆಗೆ ಗೊತ್ತಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಯಾವ ಯಾವ ಹಂತದಲ್ಲಿ ಕಗ್ಗೊಲೆ ಮಾಡಬಹುದು ಎಂಬುದನ್ನು ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ಕಾಂಗ್ರೆಸ್ ನಾಯಕರಿಗೆ ಹೇಳಿಕೊಟ್ಟಿದ್ದಾರೆ ಎಂದರು.
ಆರ್‌ಎಸ್‌ಎಸ್ ಸ್ಥಾಪನೆ ಆಗದೆ ಹೋಗಿದ್ದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾವು ಎಲ್ಲಿಗೋ ಹೋಗುತ್ತಿದ್ದೇವು, ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಸುಮ್ಮನೆ ಕೋರಲಿಲ್ಲ. ಹೋರಾಟವನ್ನು ಹತ್ತಿಕ್ಕುವ ಕೆಲಸ ಅವರು ಮಾಡಿದರು. ಜಯಪ್ರಕಾಶ್ ನಾರಾಯಣ ನೇತೃತ್ವದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದರು. 1.25 ಲಕ್ಷ ಜನ ಕೈದಿಯಲ್ಲಿ ಇರಬೇಕಾದ ಜೈಲಿನಲ್ಲಿ 1.75 ಲಕ್ಷ ಜನರನ್ನು ತುಂಬುವ ಕೆಲಸ ಮಾಡಿದರು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ನೆರೆಯ ರಾಷ್ಟ್ರಗಳು ಯುದ್ಧ ಘೋಷಣೆ ಮಾಡಿಲ್ಲ, ಭೂಕಂಪ ಪ್ರಳಯ ನೆರೆ ಪ್ರಾಕೃತಿಕ ವಿಕೋಪಗಳು ಸಹ ತಲೆದೋರಿಲ್ಲ, ಆದರೂ ತುರ್ತು ಪರಿಸ್ಥಿತಿ ಹೇರಿದರು. ಇಂದಿರಾಗಾಂಧಿ ಅವರು ಆಯ್ಕೆ ಸಂಬಂಧ ಅಲಹಬಾದ್ ನ್ಯಾಯಾಲಯ ತೀರ್ಪು ನೀಡಿತು. ಗುಜರಾತ್‌ನಲ್ಲಿ ಕಾಂಗ್ರೆಸ್ ವಿರುದ್ಧ ಜನತಾ ತೀರ್ಪು ಬಂದಿತ್ತು. ಒಂದೆಡೆ ಜನತಾ ತೀರ್ಪು, ಇನ್ನೊಂದೆಡೆ ನ್ಯಾಯಾಲಯದ ತೀರ್ಪು. ಹೀಗಾಗಿ ಜನ ಆಕ್ರೋಶ, ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದರು. ಇಂದಿರಾಗಾಂಧಿಯವರು ದೇಶದ ರಕ್ಷಣೆಗಾಗಿ ಅಲ್ಲ, ತನ್ನ ಖುರ್ಚಿಯ ರಕ್ಷಣೆಗಾಗಿ ತುರ್ತು ಪರಿಸ್ಥಿತಿ ಹೇರಿದರು ಎಂದರು.
ತುರ್ತು ಪರಿಸ್ಥಿತಿ ಹೇರಿ ಸಂವಿಧಾನದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು.
ಸಂವಿಧಾನ ಕೋಮ ಸ್ಥಿತಿಯಲ್ಲಿತ್ತು. ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ನಡೆಸಿದ ಮಾರಣಾಂತಿಕ ಹಲ್ಲೆ ಕಾರಣದಿಂದ ಸಂವಿಧಾನ ಕೋಮದಲ್ಲಿತ್ತು. ದೇಶಕ್ಕಿಂತ ತಾವು ದೊಡ್ಡವರೆಂದು ಕೆಲವರು ಭಾವಿಸಿದ್ದಾರೆ. ದೇಶಕ್ಕಿಂತ ಯಾರೂ ಕೂಡ ದೊಡ್ಡವರು ಇಲ್ಲ. ಆದರೆ, ಕಾಂಗ್ರೆಸ್ಸಿಗರು ಭಾವಿಸಿದ್ದರೂ, ಸಂವಿಧಾನಕ್ಕಿಂತ ತಾವು ದೊಡ್ಡವರೆಂದು ಇಂದಿರಾಗಾಂಧಿ ಭಾವಿಸಿದ್ದರು ಎಂದು ಹೇಳಿದರು.
ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಲೋಕಸಭೆ ಅಧ್ಯಕ್ಷರನ್ನು ಯಾವುದೇ ನ್ಯಾಯಾಲಯ ಪ್ರಶ್ನಿಸುವಂತ್ತಿಲ್ಲ. ಪೂರ್ವಾನ್ವ ಯವಾಗುವಂತೆ, ಸಂವಿಧಾನಕ್ಕಿಂತ ತಾವು ದೊಡ್ಡವರೆಂದು ಇಂದಿರಾಗಾಂಧಿ ಭಾವಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರಿಂದ ಕ್ಷಮಾಪಣೆ ಬರುತ್ತದೆ ಎಂದಿದ್ದೇವೆ. ಆದರೆ, ಬರಲಿಲ್ಲ, ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂದರು.
ಕುರ್ಚಿ ಉಳಿಸಲು ಅಲ್ವ ಸರ್ವಾಧಿಕಾರಿಯಂತೆ ವರ್ತಿಸಿದರು. ಜಗಜೀವನ್‌ರಾಂ ಕಾಂಗ್ರೆಸ್ ಯಾಕೆ ಬಿಟ್ರೂ ಗೊತ್ತಾ ಖರ್ಗೆಯವರೇ, ರಾಜಕೀಯ ನೇತಾರರು, ವಕೀಲರು, ಡಾಕ್ಟರ್‌ಗಳನ್ನು ಜೈಲಿಗೆ ಹಾಕಿದ್ರಲಾ ನಿಮಗೆ ನಾಚಿಕೆಯಾಗಬೇಕು. ಅಂಬೇಡ್ಕರ್ ಬದುಕಿದ್ರೆ ಈ ಕಾಂಗ್ರೆಸ್ಸಿಗರು ಅವರನ್ನು ಸಹ ಜೈಲಿಗೆ ಹಾಕುತ್ತಿದ್ದರು. ಇವರುಗಳು ಸಂವಿಧಾನದ ಭಕ್ಷಕರು. ನಿರಂತರ ಜಾಗೃತಿ ಮಾತ್ರ ಸಂವಿಧಾನದ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಸ್ವಾಗತಿಸಿದರು. ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ಕಾರ್ಯಕ್ರಮ ನಿರೂಪಿಸಿದರು.
The day the Constitution was assassinated, the state of emergency declared
