ಚಿಕ್ಕಮಗಳೂರು: ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)- ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗುರಿಗಳಿಲ್ಲದ ಜೀವನ ಮತ್ತು ಹಣ ಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಚಿಂತೆ ಚಿಂತನಗೊಂಡಾಗ ಮಾನವನ ಬದುಕು ಸಾರ್ಥಕಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಕೈಗೊಂಡ ೩೪ನೇ ವರ್ಷದ ಶ್ರಾವಣ ತಪೋನುಷ್ಠಾನದ ಅಂಗವಾಗಿ ಜರುಗಿದ ಪುರಾಣ ಪ್ರವಚನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾರತೀಯ ಪುಣ್ಯ ಭೂಮಿಯಲ್ಲಿ ಬಹಳಷ್ಟು ಆಚರಣೆಗಳು ಬೆಳೆದು ಬಂದಿವೆ. ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ಮಠ ಮಂದಿರಗಳಲ್ಲಿ ಶಿವನಾಮ ಸ್ಮರಣೆ ಸತ್ಕಥಾ ಶ್ರವಣಗಳು ನಡೆಯುತ್ತಾ ಬಂದಿವೆ. ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಬುದ್ಧಿ ವಿಕಾಸಗೊಂಡಂತೆ ಭಾವನೆಗಳು ಬೆಳೆದು ಬರುವ ಅವಶ್ಯಕತೆಯಿದೆ. ಸಹನೆಯ ಗುಣ ತಾಳ್ಮೆ ಇದ್ದು ಮನಸ್ಸು ವಿಕಾಸಗೊಳ್ಳಬೇಕು. ಈ ನಾಡಿನ ಸಂಸ್ಕೃತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುವುದು ಎಲ್ಲರ ಧ್ಯೇಯವಾಗಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ಧಾರ್ಮಿಕ ಮತ್ತು ಸಾಮಾಜಿಕ ವಿಚಾರ ಧಾರೆಗಳು ಬಾಳಿ ಬದುಕುವ ಮನುಷ್ಯನಿಗೆ ದಾರಿ ದೀಪವೆಂದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಮಾತನಾಡಿ ಮನುಷ್ಯನಿಗೆ ಮನುಷ್ಯತ್ವ ಮುಮುಕ್ಷತ್ವ ಮತ್ತು ದೊಡ್ಡವರ ಸಹವಾಸ ದೊರಕಲು ಭಗವಂತನ ಕೃಪೆಯಿದ್ದಾಗ ಮಾತ್ರ ದೊರಕಲು ಸಾಧ್ಯ. ಅರಿವು ಆದರ್ಶಗಳನ್ನು ಬೋಧಿಸಿ ಸನ್ಮಾರ್ಗಕ್ಕೆ ಜನ ಸಮುದಾಯ ಬರುವಂತೆ ಪ್ರೇರಣೆ ನೀಡಿದ ಮಹಾನ್ ಶಕ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂದ ಅವರು ಶ್ರಾವಣ ಒಂದು ತಿಂಗಳ ಕಾಲ ಅವರ ಆದರ್ಶ ಚಿಂತನಗಳನ್ನು ಅರಿಯಲು ಎಲ್ಲರಿಗೂ ಸುವರ್ಣಾವಕಾಶ ದೊರೆತಿರಲು ಗುರುವೇ ಕಾರಣಿಭೂತನಾಗಿರುವುನೆಂಬುದನ್ನು ಮರೆಯಬಾರದೆಂದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿವಮೊಗ್ಗದ ಎಸ್.ಹೆಚ್.ಸಿದ್ಧಣ್ಣ, ನಾಗರನವಿಲೆಯ ಪವನಕುಮಾರ್, ಸಿದ್ದೇಶ್ವರ ಶಾಸ್ತ್ರಿಗಳು, ಶಂಕರನಹಳ್ಳಿ ಸದ್ಭಕ್ತರು ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕುಲಪತಿ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗಯ್ಯ ಶಾಸ್ತ್ರಿಗಳು ಸ್ವಾಗತಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಬೆಳಿಗ್ಗೆ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವದಿಸಿದರು. ಶ್ರಾವಣ ನಿಮಿತ್ಯ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು.
Life is meaningful when you are free from worry and contemplation.
