ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಸಮುದಾಯ ಭವನ ಕಾಮಗಾರಿಗೆ ಚಾಲನೆ

ಚಿಕ್ಕಮಗಳೂರು:  ಹಿರಿಯರ ಮಾರ್ಗದರ್ಶನದಂತೆ ದಾನಿಗಳಿಂದ ವಂತಿಕೆ ಸಂಗ್ರಹಿಸಿ ಸಮುದಾಯ ಭವನ ನಿರ್ಮಿಸಬೇಕೆಂಬ ಉದ್ದೇಶದೊಂದಿಗೆ ಮಹಿಳಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ದೇಣಿಗೆ ಸಂಗ್ರಹಿಸಿರುವುದು ಸಂಘದಲ್ಲಿ ಭಾವನಾತ್ಮಕ ಸಂಬಂಧ ಬೆಳೆಯಲು ಸಹಕಾರಿ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು.

ಅವರು ಇಂದು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಸಮುದಾಯ ಭವನ ಕಾಮಗಾರಿ ಪುನರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮುದಾಯ ಭವನ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡರೂ ದೇಣಿಗೆ ಸಂಗ್ರಹ ನಿಲ್ಲಿಸಬಾರದು, ಇದರಿಂದ ಮುಂಬರುವ ಸಂಘದ ಪದಾಧಿಕಾರಿಗಳಿಗೆ ಹಾಗೂ ಸಂಘದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಲಹೆ ನೀಡಿದರು.

ಮುಂದಿನ ವರ್ಷ ಮಾರ್ಚ್ ವೇಳೆಗೆ ಈ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಈ ಕಾರ್ಯದಲ್ಲಿ ಎಲ್ಲಾ ಮಾಜಿ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರದೊಂದಿಗೆ ಮಾತೃ ಸಂಘವು ನಿಮ್ಮೊಂದಿಗೆ ಸದಾ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಅಧ್ಯಕ್ಷ ಡಾ. ಡಿ.ಎಲ್ ವಿಜಯ್‌ಕುಮಾರ್ ಮಾತನಾಡಿ, ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಮಹಿಳಾ ಒಕ್ಕಲಿಗರ ಸಮುದಾಯ ಭವನ ಕಾಮಗಾರಿ ಇಂದು ಎಲ್ಲರ ಸಹಕಾರ ಸಲಹೆಯೊಂದಿಗೆ ಪ್ರಾರಂಭವಾಗಿರುವುದು ಶ್ಲಾಘನೀಯ ಎಂದರು. ಸಮುದಾಯದ ಹೆಣ್ಣುಮಕ್ಕಳು ಹೆಚ್ಚು ಉತ್ಸಾಹದಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಸಂತಸ ತಂದಿದೆ. ಇದೇ ಹುರುಪು ಸದಾ ಮುಂದುವರೆಯಲಿ ಎಂದು ಹಾರೈಸಿದರು.

ಭವನ ನಿರ್ಮಾಣದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ಪಾರದರ್ಶಕತೆ, ಸಮಯದ ಗುರಿ ನಿಗದಿಮಾಡಬೇಕು. ಜೊತೆಗೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು. ಇದು ಸಮರ್ಪಕವಾಗಿ ಆದಾಗ ಮಾತ್ರ ಸಮುದಾಯ ಭವನ ನೂರಾರು ವರ್ಷಗಳ ಕಾಲ ಉಳಿಯಲು ಸಾಧ್ಯ ಎಂದರು.

ಮಹಿಳಾ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷೆ ರೀನಾ ಸುಜೇಂದ್ರ ಮಾತನಾಡಿ, ತನು ಮನ ಧನ ಸಹಾಯ ಮಾಡುವುದರ ಜೊತೆಗೆ ಸಂಘದ ಕಾರ್ಯಚಟುವಟಿಕೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಗುರಿ ಹೊಂದಲಾಗಿದ್ದು, ತಮ್ಮ ಅಧಿಕಾರವಧಿಯಲ್ಲಿ ಗುಣಮಟ್ಟದ ಸಮುದಾಯ ಭವನ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಕಾವ್ಯಸುಕುಮಾರ, ಗೌರವ ಕಾರ್ಯದರ್ಶಿ ಅಮಿತ ವಿಜೇಂದ್ರ, ಸಹಕಾರ್ಯದರ್ಶಿ ಕೋಮಲ ರವಿ, ನಿರ್ದೇಶಕರುಗಳಾದ ವಿನುತ ಪ್ರಸಾದ್, ಕೀರ್ತಿ ಕೌಶಿಕ್, ಅನುಪಮ ರಮೇಶ್, ವೇದಾ ಚಂದ್ರಶೇಖರ್, ಶಕುಂತಲಾ ವೀರೇಗೌಡ, ಮಾಜಿ ಅಧ್ಯಕ್ಷರುಗಳಾದ ಗಾಯಿತ್ರಿ ಗೋವಿಂದಸ್ವಾಮಿ, ಹರಿಣಾಕ್ಷಿ ನಾಗರಾಜ್, ಸವಿತಾ ರಮೇಶ್, ಮಾಜಿ ಉಪಾಧ್ಯಕ್ಷೆ ವಸಂತಕುಮಾರಿ ಮಂಜುನಾಥ್, ಮಾಜಿ ಕಾರ್ಯದರ್ಶಿಗಳಾದ ಸ್ಮಿತಾ ಸುನಿಲ್, ಆರತಿನಾರಾಯಣ್, ಸಾದ್ವಿ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.

District Women’s Vokkaligara Association Community Hall construction work launched

Comments

Leave a Reply

Your email address will not be published. Required fields are marked *