ಚಿಕ್ಕಮಗಳೂರು: ಅಮೇರಿಕಾದೊಂದಿಗೆ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದವನ್ನಾಗಲೀ ಮತ್ತು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಾರದು. ಅಮೇರಿಕ ವಿಧಿಸಿರುವ ಶೇ.೨೫ ರಷ್ಟು ಆಮದು ಸುಂಕವನ್ನು ಪ್ರತಿಭಟಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಮನವಿ ಸಲ್ಲಿಸಿದರು.
ಯುನೈಟೆಡ್ ಕಿಂಗ್‌ಡಮ್ ಜೊತೆಗಿನ ಸಮಗ್ರ ಹಾಗೂ ವಾಣಿಜ್ಯ ಒಪ್ಪಂದವು ಹೈನುಗಾರಿಕೆ, ತರಕಾರಿಗಳು ಮತ್ತು ಹಣ್ಣುಗಳು ಸೇರಿದಂತೆ ಸಂಸ್ಕರಿತ ಆಹಾರಗಳ ಆಮದನ್ನು ಹೆಚ್ಚಿಸುತ್ತದೆ. ಇದು ಭಾರತದಲ್ಲಿ ಆಹಾರ ಸಂಸ್ಕರಣೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿ ದೇಶದ ರೈತರ ಗಳಿಕೆ ಮತ್ತು ಸಣ್ಣ ಕೃಷಿ ವ್ಯಾಪಾರ ಸಂಸ್ಥೆಗಳ ಗಳಿಕೆಯನ್ನು ಇದರಿಂದಾಗಿ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕುಲಾಂತರಿ ತಳಿಗಳ ಬೆಳೆಗಳು ಆಹಾರಗಳು, ಆಹಾರ ಧಾನ್ಯಗಳು, ಸೋಯಾ, ಜೋಳ, ಹತ್ತಿ ಇತ್ಯಾದಿಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಅಮೇರಿಕಾದೊಂದಿಗೆ ಮಾತುಕತೆ ನಡೆಯುತ್ತಿದ್ದು, ಇದು ಭಾರತದ ಆರ್ಥಿಕತೆಗೆ ಅನಿಯಂತ್ರಿತವಾಗಿ ಬಹು ರಾಷ್ಟ್ರೀಯ ಕಂಪನಿಗಳ ಪ್ರವೇಶವನ್ನು ಉತ್ತೇಜಿಸಲಾಗುತ್ತದೆ. ಇದನ್ನು ಕೂಡಲೇ ನಿಲ್ಲಿಸಿ ಏಕಪಕ್ಷೀಯವಾಗಿ ಅಮೇರಿಕ ಭಾರತದ ಮೇಲೆ ವಿಧಿಸಿರುವ ಶೇ. ೨೫ ರಷ್ಟು ಆಮದು ಸುಂಕವು ದೇಶದ ಸಾರ್ವಭೌಮತೆಗೆ ಗಂಭೀರ ಆಕ್ರಮಣವಾಗಿದ್ದು, ಕೂಡಲೇ ಭಾರತ ಸರ್ಕಾರ ಇದನ್ನು ವಿರೋಧಿಸುವಂತೆ ಒತ್ತಾಯಿಸಿದ್ದಾರೆ.
ಎನ್‌ಪಿಎಫ್‌ಎಎಂ ಹಾಗೂ ಎನ್‌ಸಿಪಿಗಳನ್ನು ರದ್ದುಪಡಿಸಲು ಆಗ್ರಹಿಸಿ ಕೇಂದ್ರ ಸರ್ಕಾರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟು ಮೂಲಭೂತವಾಗಿ ಎಪಿಎಂಸಿ ಆಧುನೀಕರಣ, ಆಹಾರ ಧಾನ್ಯ ನಿರ್ವಹಣೆ, ಆಹಾರ ದಾಸ್ತಾನು ಮತ್ತು ಆಹಾರ ಸಂಸ್ಕರಣೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಖಾಸಗಿ ಬಂಡವಾಳವನ್ನು ಉತ್ತೇಜಿಸುವ ನೀತಿಯಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಲಪಡಿಸಬೇಕು, ಕೋಮುವಾದಿ ಹಾಗೂ ವಿಚಿತ್ರಕಾರಿ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಶಾಂತಿ ಸೌಹಾರ್ಧತೆ ಬಲಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ, ರಾಜ್ಯ ಉಪಾಧ್ಯಕ್ಷ ಎಂ. ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭರಾಜ್, ಜಿಲ್ಲಾ ಸಂಚಾಲಕ ಸವಿಂಜಯ್ ಜೈನ್, ಮುಖಂಡರಾದ ಓಂಕಾರಪ್ಪ, ಹೆಚ್.ಆರ್. ಬಸವರಾಜಪ್ಪ, ಯು.ಡಿ. ಅಣ್ಣೇಗೌಡ, ಸಂತೋಷ್ ಹಗ್ಡೆ, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು
Farmers’ association appeals to not sign trade deal with America
