ಚಿಕ್ಕಮಗಳೂರು: ಭದ್ರಾ ಉಪ ಕಣಿವೆ ಯೋಜನೆಯಡಿ ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳ ಕೆರೆಗಳಿಗೆ ನೀರು ತುಂಬಿಸಲು ರೂ.೪೦೭ ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಮಾನ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ನಗರದಲ್ಲಿಂದು ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಡೂರು ತಾಲ್ಲೂಕು ವ್ಯಾಪ್ತಿಯಲ್ಲಿ ೨೫ ಕೆರೆಗಳಿಗೆ ನೀರು ಪೂರೈಸುವ ಮದಗದ ಕೆರೆ ಮತ್ತು ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ರೂ.೫೦ ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನೀಡಲಾಗಿದೆ. ಅಜ್ಜಂಪುರ ತಾಲ್ಲೂಕು ಗಡಿರಂಗಾಪುರ ಮತ್ತು ಇತರೆ ೧೯ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ೪೮ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ಒಟ್ಟು ರೂ. ೧೫೦ ಕೋಟಿಯ ೮೯ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಎನ್.ಆರ್.ಪುರ ಪಟ್ಟಣದ ರಸ್ತೆ ಅಭಿವೃದ್ಧಿಗಾಗಿ ರೂ ೬೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲೆಯು ಸತತವಾಗಿ ಎರಡು ವರ್ಷಗಳಿಂದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಾರಿಗೊಳಿಸುವಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ವರ್ಷ ೨೧ ಅಂಗನವಾಡಿ ಕೇಂದ್ರಗಳನ್ನು ಮಾದರಿ ಅಂಗನವಾಡಿ ಕೇಂದ್ರಗಳಾಗಿ ಉನ್ನತೀಕರಿಸಲಾಗಿದೆ. ಕೊಪ್ಪ ತಾಲ್ಲೂಕಿನಲ್ಲಿ ೫೦ ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಂಡಿದ್ದು, ಜಯಪುರ ಮತ್ತು ಲಕ್ಕವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ೩೦ ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಹೇಳಿದರು.
೨೦೨೪-೨೫ನೇ ಸಾಲಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳ ಎಸ್.ಎಫ್.ಸಿ. ವಿಶೇಷ ಅನುದಾನದಡಿ ರೂ. ೧೦.೦೦ ಕೋಟಿಗಳ ಅನುದಾನ ಮಂಜೂರು ಮಾಡಲಾಗಿದೆ. ನಗರದಲ್ಲಿ ರೂ.೧೯.೮೦ ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ತರೀಕೆರೆಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರೂ.೯.೦೦ ಕೋಟಿಗಳು ಹಾಗೂ ಬಸ್ ಡಿಪೋ ನಿರ್ಮಿಸಲು ರೂ.೮.೮೦ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕಡೂರಿನಲ್ಲಿ ಹಾಲಿ ಬಸ್ ನಿಲ್ದಾಣವನ್ನು ವಿಸ್ತರಿಸಲು ರೂ. ೬ ಕೋಟಿ ಹಾಗೂ ಬೀರೂರಿನಲ್ಲಿ ಬಸ್ ಘಟಕ ನಿರ್ಮಿಸಲು ರೂ.೨.೫೦ ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆಡಳಿತ ಸೌಧದ ಎರಡನೇ ಹಂತದಲ್ಲಿ ರೂ. ೨೬.೪೮ ಕೋಟಿ ಕಾಮಗಾರಿಗೆ ಅನುಮೋದನೆ ದೊರೆತಿದೆ. ಕಳಸ ಹಾಗೂ ಅಜ್ಜಂಪುರ ತಾಲ್ಲೂಕುಗಳ ಆಡಳಿತ ಸೌಧ, ಕೊಪ್ಪ ತಾಲ್ಲೂಕಿನ ಎರಡು ನಾಡಕಚೇರಿ ಕಟ್ಟಡ ಕಾಮಗಾರಿಗಳಿಗೆ ರೂ.೧೨ ಕೋಟಿಗಳಿಗೆ ಅನುಮೋದನೆ ನೀಡಲಾಗಿದೆ. ತರೀಕೆರೆ ತಾಲ್ಲೂಕಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣ, ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ಬಾಲಕರ ವಿದ್ಯಾರ್ಥಿಗಳ ನಿಲಯ ಕಟ್ಟಡ ನಿರ್ಮಾಣಕ್ಕೆ ರೂ.೬.೫೯ ಕೋಟಿ ಬಿಡುಗಡೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಜನ್ನಾಪುರದಲ್ಲಿ ರೂ.೧೦.೭೫ ಕೋಟಿ ವೆಚ್ಚದ ೩೩/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಕಾಮಗಾರಿ ಪುಗತಿಯಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಸಿ.ಎಸ್.ಆರ್. ಅನುದಾನದಡಿ ಜಿಲ್ಲೆಗೆ ಒಟ್ಟು ೧೦ ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ತರೀಕೆರೆ ತಾಲ್ಲೂಕಿನ ಅಮೃತಾಪುರ, ಕಡೂರು ತಾಲ್ಲೂಕಿನ ಸಿಂಗಟಗೆರೆ, ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಗ್ರಾಮಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮತ್ತು ಚಿಕ್ಕಮಗಳೂರು ತಾಲ್ಲೂಕಿಗೆ ೨ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಹಾಗೂ ಪರಿಶಿಷ್ಟ ಜಾತಿ ಕಾಲೋನಿಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಒಟ್ಟು ರೂ. ೧೦೧.೨೧ ಕೋಟಿ ಬಿಡುಗಡೆಯಾಗಿದೆ. ಕಡೂರು ತಾಲ್ಲೂಕಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಯನ್ನು ನಿರ್ಮಾಣ ಮಾಡುವ ಉದ್ದೇಶಕ್ಕೆ ರೂ. ೩೪.೨೫ ಕೋಟಿ ಅನುದಾನ ಒದಗಿಸಲಾಗಿದೆ. ಜಿಲ್ಲೆಯ ೯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನದಡಿ ಈವರೆವಿಗೂ ಒಟ್ಟು ೪೮೯೨ ಇ-ಖಾತೆಗಳನ್ನು ಸೃಜಿಸಿ ಆಸ್ತಿಗಳ ಮಾಲೀಕರುಗಳಿಗೆ ವಿತರಿಸಲಾಗಿದೆ ಎಂದರು.
`ಭೂ ಸುರಕ್ಷಾ ಯೋಜನೆ’ಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗಣಕೀಕರಣ ಆರಂಭಿಸಲಾಗಿದೆ. ಚಿಕ್ಕಮಗಳೂರು, ಶೃಂಗೇರಿ ಹಾಗೂ ಕಳಸ ತಾಲ್ಲೂಕುಗಳಲ್ಲಿ ಈ ಕಾರ್ಯ ಮುಕ್ತಾಯಗೊಂಡಿದ್ದು, ಇದುವರೆಗೆ ಒಟ್ಟು ಒಂದು ಕೋಟಿ ಪುಟಗಳನ್ನು ಗಣಕೀಕರಣಗೊಳಿಸಲಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಶೀಘ್ರದಲ್ಲಿಯೇ ಮುಕ್ತಾಯಗೊಳಿಸಲಾಗುವುದು. ಇದುವರೆಗೆ ೧೪,೦೮೮ ಡಿಜಿಟಲೀಕರಣಗೊಂಡ ಕಂದಾಯ ದಾಖಲೆಗಳನ್ನು ಆನ್‌ಲೈನ್ ಮೂಲಕ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಇ-ಪೌತಿ ಖಾತೆ ಅಂದೋಲನದಲ್ಲಿ ಒಟ್ಟು ೯೭,೧೬೭ ಸರ್ವೆ ನಂಬರ್‌ಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ೨೪೨೩ ಸರ್ವೆ ನಂಬರ್‌ಗಳ ಖಾತೆಯನ್ನು ಮೃತರ ವಾರಸುದಾರರ ಹೆಸರಿಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೧೧೭ ಕಂದಾಯ ಗ್ರಾಮಗಳನ್ನು ಈ ಹಿಂದೆ ಗುರುತಿಸಲಾಗಿದ್ದು, ೯೫ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹೊಸದಾಗಿ ೩೨೦ ಉಪ ಗ್ರಾಮಗಳನ್ನು ಗುರುತಿಸಿದ್ದು, ಹಕ್ಕು ಪತ್ರಗಳನ್ನು ನೀಡಲು ಕ್ರಮ ವಹಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಇದುವರೆಗೆ ೧೭೨೬ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ದಾಖಲು ಮಾಡಿಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ, ಟಿ.ಡಿ ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ,ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ,ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್ ಹರೀಶ್, ನಗರಸಭೆ ಅಧ್ಯಕಷೆ ಶೀಲಾದಿನೇಶ್, ರಾಜ್ಯ ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ತಹಸೀಲ್ದಾರ್ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
Tender process launched for filling the lake with water
