ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇದುವರೆವಿಗೆ ಐದು ಗ್ಯಾರಂಟಿ ಯೋಜನೆಗಳಿಂದ ೯ ಲಕ್ಷ ಫಲಾನುಭವಿಗಳಿಗೆ ೨ ಸಾವಿರ ಕೋಟಿ ರೂ. ಸಂದಾಯವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.
ಇಂದು ನಗರದ ಜಿ.ಪಂ. ಮಿನಿ ಸಭಾಂಗಣದಲ್ಲಿ ಇಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಐದು ಇಲಾಖೆಗಳಿಗೆ ಸಂಬಂಧಪಟ್ಟಂತೆ ಯೋಜನೆಗಳು ಕಾರ್ಯಗತವಾಗಿರುವ ಬಗ್ಗೆ ಯಾವುದಾದರೂ ಕುಂಠಿತ ವಿಚಾರಗಳನ್ನು ಸುದೀರ್ಘವಾಗಿ ಚರ್ಚೆ ಮಾಡುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಶೇ.೯೭ರಷ್ಟು ಯಶಸ್ವಿಯಾಗಿವೆ ಎಂದು ಹೇಳಿದರು.
ಇದುವರೆಗೆ ಜಿಲ್ಲೆಯಲ್ಲಿ ೨ ಲಕ್ಷದ ೬೨ ಸಾವಿರದ ೯೪೪ ಯಜಮಾನಿಯರಿಗೆ ಗೃಹಲಕ್ಷ್ಮೀ ಮೂಲಕ ಮಾಸಿಕ ಸುಮಾರು ೫೩ ಕೋಟಿ ರೂ.ಗಳನ್ನು ೨೧ ಕಂತುಗಳ ಮೂಲಕ ನೀಡಲಾಗಿದೆ. ಮಾಸಿಕವಾಗಿ ಇದುವರೆಗೂ ೧ ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ತಲಾ ೨೦೦೦ ರೂ. ಜಮಾ ಮಾಡಿದೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿ ೬೦ ಸಾವಿರ ಜನ ಪ್ರತಿದಿನ ಮಹಿಳಾ ಫಲಾನುಭವಿಗಳು ಪ್ರಯಾಣ ಮಾಡುತ್ತಿದ್ದಾರೆ, ೨೪ ತಿಂಗಳಲ್ಲಿ ೪ ಕೋಟಿ ೬೭ ಟ್ರಿಪ್ ಬಸ್‌ಗಳು ಓಡಾಡಿವೆ. ಅದಕ್ಕೆ ಸಂಬಂಧಪಟ್ಟಂತೆ ೧೮೮ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಹಿಳೆಯರ ಪ್ರಯಾಣಕ್ಕೆ ಒದಗಿಸಿದೆ ಎಂದ ಅವರು, ಮಲೆನಾಡು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ನರಸಿಂಹರಾಜಪುರ, ಬಾಳೆಹೊನ್ನೂರಿಗೆ ಸದಾ ಓಡಾಡಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯಡಿ ಒಟ್ಟು ಜಿಲ್ಲೆಯಲ್ಲಿ ೩೫೦೬ ಜನ ಪದವೀಧರರಿಗೆ ೧ ಕೋಟಿ ೫ ಲಕ್ಷ ೧೨ ಸಾವಿರ ರೂ. ನೀಡಲಾಗಿದೆ. ೩೬ ಜನ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ೫೪ ಸಾವಿರ ರೂ. ನೀಡಲಾಗಿದೆ. ಇದೂವರೆಗೂ ೯ ಕೋಟಿ ೪೮ ಲಕ್ಷ ೨೯ ಸಾವಿರ ರೂ.ಗಳ ಸಂದಾಯವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಸಭೆಗೆ ಮಾಹಿತಿ ನೀಡಿದರು.
೪೪೮೮ ವಿದ್ಯಾರ್ಥಿಗಳು ಹೊಸದಾಗಿ ನೋಂದಣಿಯಾಗಿದ್ದು, ಅದರಲ್ಲಿ ೪೪೩೧ ವಿದ್ಯಾರ್ಥಿಗಳು ಪದವೀಧರರಾಗಿದ್ದು, ಡಿಪ್ಲೊಮಾ ಆಗಿರುವ ೫೭ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ ಎಂದ ಅವರು, ಈಗಾಗಲೇ ಎಲ್ಲಾ ತಾಲ್ಲೂಕಿನ ಕಾಲೇಜಿನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಜೊತೆಗೆ ಎಲ್ಲಾ ಕಡೆ ತರಬೇತಿ ಶಿಬಿರಗಳು ಪ್ರಾರಂಭವಾಗಿದ್ದು, ಅದನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ೨ ಲಕ್ಷದ ೪೯ ಸಾವಿರದ ೧೨೮ ಬಿಪಿಎಲ್ ಕಾರ್ಡ್‌ಗಳ ೮ ಲಕ್ಷದ ಒಂದು ಸಾವಿರದ ಐನೂರ ಮೂವತ್ತಾರು ಫಲಾನುಭವಿಗಳಿಗೆ ೫ ಕೆ.ಜಿ. ಅಕ್ಕಿಯ ಹಣದ ಬದಲು ೫ ಕೆ.ಜಿ ಅಕ್ಕಿಯನ್ನು ನೀಡಲಾಗಿದ್ದು, ಆಗಸ್ಟ್ ಮಾಹೆಗೆ ೪೩೪೨೦ ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗಿದ್ದು, ಇದಕ್ಕೆ ಅಂದಾಜು ೯ ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಿದರು. ಯೋಜನೆ ಆರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ೨೯೪ ಕೋಟಿ ರೂಪಾಯಿ ಹಣ ಸಲ್ಲಿಕೆಯಾಗಿದೆ ಎಂದು ಅಧಿಕಾರಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ್ ಹೇಳಿದರು.
ಇದೇ ವೇಳೆ ಮಾತನಾಡಿದ ಅಧ್ಯಕ್ಷರು, ಅನ್ನಭಾಗ್ಯ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಐರೀಷ್ ತಂತ್ರಜ್ಞಾನದ ಮೂಲಕ ಫಲಾನುಭವಿಗಳನ್ನು ಗುರುತಿಸಿ ಪಡಿತರ ಅಕ್ಕಿ ವಿತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನಮ್ಮ ಜಿಲ್ಲೆಯಲ್ಲೂ ಕೂಡ ಈ ತಂತ್ರಜ್ಞಾನದ ಮೂಲಕ ಫಲಾನುಭವಿಗಳನ್ನು ಗುರುತಿಸಿ ವಿತರಿಸಬೇಕೆಂದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ೩ ಲಕ್ಷದ ೧೨ ಸಾವಿರ ಮೀಟರ್‌ಗಳಿಗೆ ಸಂಬಂಧಿಸಿದಂತೆ ಸುಮಾರು ೯ ಲಕ್ಷ ಜನರಿಗೆ ಪ್ರತಿ ತಿಂಗಳಿಗೆ ಉಚಿತ ವಿದ್ಯುತ್ ಒದಗಿಸುವ ಸಲುವಾಗಿ ೧೨ ಕೋಟಿ ರೂ.ಗಳನ್ನು ಸರ್ಕಾರ ಮೆಸ್ಕಾಂಗೆ ಸಂದಾಯ ಮಾಡುತ್ತಿದ್ದು, ಇದುವರೆಗೆ ೩೦೦ ಕೋಟಿ ರೂ. ವಿನಿಯೋಗವಾಗಿದೆ ಎಂದು ಅಧೀಕ್ಷಕ ಅಭಿಯಂತರ ಪ್ರದೀಪ್ ತಿಳಿಸಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆ ಉಪಾಧ್ಯಕ್ಷರುಗಳಾದ ಎಸ್.ಎನ್. ಮಂಜುನಾಥ್, ಹೆಚ್.ಎಸ್.ಕೃಷ್ಣೇಗೌಡ, ಹೇಮಾವತಿ ಹಾಗೂ ಚಂದ್ರಮೌಳಿ, ಪ್ರಾಧಿಕಾರದ ಸದಸ್ಯರು, ಹಾಗೂ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರುಗಳು, ಜಿ.ಪಂ. ಮುಖ್ಯ ಯೋಜನಾಧಿಕಾರಿಗಳಾದ ರಾಜ್‌ಗೋಪಾಲ್ ಐದೂ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
2 thousand crores paid to 9 lakh people in the district
