ಚಿಕ್ಕಮಗಳೂರು: ಮನುಷ್ಯನ ಮನಸ್ಸೆಂಬ ಚಂಚಲ ಅಲೌಕಿಕ ಹೊಯ್ದಾಟವನ್ನು ಶಾಂತ ಪ್ರಶಾಂತಗೊಳಿಸುವ ಮಾರ್ಗವೇ ಆಧ್ಯಾತ್ಮವಾಗಿದೆ. ಜ್ಯೋತಿ ಉರಿದು ಬೆಳಕು ಬೀರುವ ಹಾಗೆ ಆಚಾರ್ಯ ಸಂತ ಶ್ರೇಷ್ಠರು ಬಾಳಿ ಬೆಳಕಾದರು. ಸತ್ಯ ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಶ್ರೀಮಂತಗೊಳ್ಳಬೇಕಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಶ್ರದ್ಧಾವಂತರಾದ ಭಾರತೀಯರು ಮಣ್ಣು ಜಲ ಬೆಂಕಿ ಗಾಳಿ ಮತ್ತು ಕಲ್ಲಿನಲ್ಲಿ ದೇವರನ್ನು ಕಂಡು ಪೂಜಿಸಿದವರು. ದೇಹ ಮನ ಬುದ್ಧಿ ಕೈ ಕಾಲು ಇವುಗಳೆಲ್ಲವೂ ನಿಜವಾದ ಸಂಪತ್ತು. ಕೈ ಬೆರಳುಗಳು ಇಲ್ಲದಿದ್ದರೆ ಉಂಗುರ ಹೇಗೆ ಇಡಲು ಸಾಧ್ಯ.
ಮನೆಯ ಕಿಡಕಿ ಬಾಗಿಲುಗಳನ್ನು ತೆರೆದಾಗ ಶುದ್ಧವಾದ ಗಾಳಿ ಬೆಳಕು ಬೀಳುವ ರೀತಿ ನಮ್ಮ ಮನದ ಬಾಗಿಲು ಕಿಟಕಿ ತೆರೆದರೆ ಭಗವಂತನ ಕಾರುಣ್ಯದ ಬೆಳಕು ಬೀಳುತ್ತದೆ. ಜೀವನ ಜೋಕಾಲಿ ಎಷ್ಟೇ ಎತ್ತರಕ್ಕೆ ತೂಗಿದರೂ ಕೆಳಗೆ ಬೀಳದಂತೆ ಎಚ್ಚರ ತಪ್ಪದಂತೆ ಜಾಗರೂಕರಾಗಿ ಬಾಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂವಿಧಾನದಲ್ಲಿ ಬೋಧಿಸಿದ್ದಾರೆ. ಅವರು ಬೋಧಿಸಿದ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಸರ್ವ ಜನಾಂಗಕ್ಕೂ ಅನ್ವಯಿಸುತ್ತವೆ ಎಂದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಹಣ ಚಿನ್ನ ಬೆಳ್ಳಿ ವಸ್ತು ವಡವೆಗಳಿಂದ ಬದುಕು ಕಟ್ಟಿಕೊಳ್ಳುವುದು ಒಳ್ಳೆಯದಲ್ಲ. ಮೌಲ್ಯಾಧಾರಿತ ಸದ್ಗುಣ ಸದಾಚಾರದಿಂದ ಬದುಕು ಆದರ್ಶಗೊಳ್ಳಬೇಕು. ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ. ಋಷಿ ಮುನಿಗಳು ಆಚಾರ್ಯ ಶ್ರೇಷ್ಠರು ಭೌತಿಕ ಬದುಕಿಗಾಗಿ ಹಂಬಲಿಸದೇ ಆಧ್ಯಾತ್ಮ ಲೋಕದಲ್ಲಿ ಬಾಳಿ ಇನ್ನಿತರರಿಗೆ ದಾರಿ ದೀಪವಾದರು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾಡಿದ ಲೀಲೆ ಪವಾಡಗಳು ಭಕ್ತರ ಬಾಳಂಗಣದಲ್ಲಿ ಸಂಸ್ಕಾರ ಸದ್ವಿಚಾರ ಮತ್ತು ಸೌಹಾರ್ದತೆಯ ಪುನರುತ್ಥಾನಕ್ಕೆ ಸ್ಫೂರ್ತಿಯಾಗಿವೆ ಎಂದರು.
ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯರು, ಮಳಲಿ ಮಠದ ಡಾ|| ನಾಗಭೂಷಣ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಮಾನೂರು ವಿರುಪಾಕ್ಷ ಶಿವಾಚಾರ್ಯರು, ಮೊರಬದ ಮಹೇಶ್ವರ ಶಿವಾಚಾರ್ಯರು, ಕೊ.ಶಿವಪುರದ ಜಡತಲೆ ಮರುಳಸಿದ್ಧ ಶಿವಾಚಾರ್ಯರು, ಕಲಕೇರಿ ಸಿದ್ಧರಾಮ ಶಿವಾಚಾರ್ಯರು, ಚಿಮ್ಮಲಗಿ ಸಿದ್ಧರೇಣುಕ ಶಿವಾಚಾರ್ಯರು, ಇಂಗಳೇಶ್ವರ ಭೃಂಗೀಶ ಶಿವಾಚಾರ್ಯರು, ಮುಳವಾಡದ ವಿರುಪಾಕ್ಷ ಶಿವಾಚಾರ್ಯರು ಉಪಸ್ಥಿತರಿದ್ದರು. ಗುರುಕುಲದ ಕುಲಪತಿ ಸಿದ್ಧಲಿಂಗ ಶಾಸ್ತ್ರಿಗಳು, ಶ್ರೀ ಪೀಠದ ಲೆಕ್ಕಾಧಿಕಾರಿ ಸಂಕಪ್ಪನವರ, ಅರ್ಚಕ ರೇಣುಕ-ರುದ್ರೇಶ, ಬೊಮ್ಮನಹಳ್ಳಿ ಪ್ರಭುದೇವ ಸಾರಂಗಮಠ ಇನ್ನಿತರರು ಭಾಗವಹಿಸಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಮತ್ತು ಪ್ರಾರ್ಥನಾ ಗೀತೆ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಬೆಳಿಗ್ಗೆ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶುಭ ಹಾರೈಸಿದರು.
Life should be enriched by virtue and good conduct.
