ಚಿಕ್ಕಮಗಳೂರು: ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿದಾಗ ಸದೃಢ ಆರೋಗ್ಯವಂತರಾಗಲು ಸಹಕಾರಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಮತ್ತಿತರೆ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ದಸರಾ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಳೆದ ೨೫ ವರ್ಷಗಳಿಂದ ವೈವಿದ್ಯಮಯವಾಗಿ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಕ್ರೀಡಾಕೂಟ ಇತ್ತೀಚೆಗೆ ಕಳೆಗುಂದಿದೆ ಎಂದು ವಿಷಾಧಿಸಿದ ಅವರು, ಈ ಕ್ರೀಡಾಕೂಟ ತಾಲ್ಲೂಕು, ಜಿಲ್ಲಾ , ವಿಭಾಗ ಮಟ್ಟದ ನಂತರ ರಾಜ್ಯಮಟ್ಟದ ಕ್ರೀಡಾಕೂಟ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆಯಲಿದೆ ಎಂದರು.
ಧಾರ್ಮಿಕವಾಗಿ ಇತಿಹಾಸ ಇರುವ ದಸರಾ ಕ್ರೀಡಾಕೂಟ ಮೈಸೂರಿನಲ್ಲಿ ವಿಜಯ ದಶಮಿ ದಿನ ಚಾಮುಂಡೇಶ್ವರಿ ದಸರಾ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿದೆ. ತೀರ್ಪುಗಾರರು ಪ್ರಾಮಾಣಿಕವಾಗಿ ತೀಪು ನೀಡಿ, ಸಮಸ್ತರನ್ನು ಆಯ್ಕೆಮಾಡಬೇಕೆಂದು ಮನವಿ ಮಾಡಿದರು.
ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲು ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಧಾರೆಯೆರೆದು ಚಾಮುಂಡೇಶ್ವರಿಗೆ ಕೊಡುತ್ತಾರೆ. ಈ ದುಷ್ಟಶಕ್ತಿ ಸಂಹಾರ ಹಿಂದಿನ ಕಾಲದಲ್ಲಿ ಮಾತ್ರ ಇರದೆ ಈಗಾಲೂ ಬೇರೆ ಬೇರೆ ರೂಪದಲ್ಲಿ ನಮ್ಮ ನಡುವೆ ಇದ್ದಾರೆ ಎಂದು ಹೇಳಿದರು.
ಗ್ರಾಮೀಣ ಕ್ರೀಡೆಗಳು ಈ ದಸರಾ ಕ್ರೀಡಾಕೂಟದಲ್ಲಿ ಹೆಚ್ಚು ಪ್ರೋತ್ಸಾಹಿಸುವ ಜೊತೆಗೆ ಕಬ್ಬಡ್ಡಿ, ಖೋಖೋ, ಲಾಂಗ್ ಜಂಪ್, ಹೈ ಜಂಪ್, ಗುಂಡು ಎಸೆತ ಮುಂತಾದವುಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸಲು ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ಮುಂದಾಗಬೇಕೆಂದು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ನಾಡಹಬ್ಬ ದಸರಾ ಉತ್ಸವಕ್ಕೆ ಧಾರ್ಮಿಕ, ಚಾರಿತ್ರಿಕ ಇತಿಹಾಸ ಇದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದಸರೆ ಕೇಂದ್ರ ಬಿಂದುವಾಗಿದ್ದು, ಹೊರದೇಶಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ಪ್ರವಾಸಿಗರು ದಸರಾ ಕ್ರೀಡಾಕೂಟವನ್ನು ವೈಭವೀಕರಿಸಿದ್ದನ್ನು ನೋಡಿದ್ದೇವೆ ಎಂದರು.
ನಮ್ಮೊಳಗಿರುವ ಅಸುರ ಶಕ್ತಿ ದಮನಗೊಳಿಸಲು ಸಜ್ಜನ ಶಕ್ತಿ ವಿಜಯವಾಗಬೇಕು, ಅಸುರ ದಹನವಾಗಬೇಕು. ಆ ರೀತಿ ಪೌರಾಣಿಕ, ಧಾರ್ಮಿಕ ಹಿನ್ನೆಲೆಯಾದರೆ ದಸರಾ ಕ್ರೀಡಾಕೂಟವನ್ನು ವಿಜಯನಗರ ಸಾಮ್ರಾಜ್ಯ ಪಥನದ ನಂತರ ಮೈಸೂರು ಅರಸರು ಅದರ ಪರಂಪರೆಯನ್ನು ದಸರಾ ಕ್ರೀಡಾಕೂಟದ ನೆಪದಲ್ಲಿ ನಡೆಸುತ್ತಿದ್ದಾರೆಂದು ವಿವರಿಸಿದರು.
ಯುವಕರು ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಮನರಂಜನೆಯ ಜೊತೆಗೆ ಗರಡಿ ಮನೆಗಳಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ. ಈ ಮೂಲಕ ತರಬೇತಿ ನೀಡಿ ಸೈನ್ಯಕ್ಕೆ ಆಯ್ಕೆಮಾಡುವ ಪ್ರತೀತಿ ಇತ್ತು ಎಂದು ಹೇಳಿದರು.
ಪ್ರತಿಯೊಬ್ಬರಲ್ಲಿ ಗೆಲುವಿನ ಹಂಬಲ, ಆತ್ಮವಿಶ್ವಾಸ ಮೂಡಿಸುವ ಈ ದಸರಾ ಕ್ರೀಡಾಕೂಟ ಕ್ರೀಡೆಯ ಜೊತೆಗೆ ಬದುಕಿನಲ್ಲಿ ಹಂಬಲ ಮೂಡಿಸಲು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಮೊತ್ತೋರ್ವ ವಿಧಾನ ಪರಿಷತ್ ಸದಸ್ಯ ಎಸ್.ಭೋಜೇಗೌಡ ಮಾತನಾಡಿ, ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ತಮ್ಮ ಪ್ರತಿಭೆ ಹೊರಬರುವಲ್ಲಿ ಈ ಕ್ರೀಡಾಕೂಟ ಯಶಸ್ವಿಯಾಗಲಿ, ಎಲ್ಲಾ ಕ್ರೀಡಾಪಟುಗಳಲ್ಲಿ ಸಾಧನೆ ಮಾಡುತ್ತೇನೆ ಎಂಬ ಛಲದೊಂದಿಗೆ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಮಂಜುಳಹುಲ್ಲಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Sports events contribute to good health

Leave a Reply