ದುಷ್ಟರ ಸಂಹಾರ, ಸಜ್ಜನರ ರಕ್ಷಣೆ ಮಾಡುವುದೇ ನಾಡಹಬ್ಬ ದಸರಾಉದ್ದೇಶ

ಚಿಕ್ಕಮಗಳೂರು: ದುಷ್ಟರ ಸಂಹಾರ ಮಾಡಿ ಸಜ್ಜನರನ್ನು ರಕ್ಷಣೆ ಮಾಡುವ ಮಹಾ ತಾಯಿಯಾಗಿ ಚಾಮುಂಡಿ ದೇವಿಯನ್ನು ಪೂಜಿಸುವ ವಿಧಾನವೇ ನಾಡಹಬ್ಬ ದಸರಾ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಅವರು ಇಲ್ಲಿನ ಬೀಕನಹಳ್ಳಿ ಶ್ರೀ ಚಾಮುಂಡೇಶ್ವರ ಶ್ರೀಕ್ಷೇತ್ರದಲ್ಲಿ ಆರಂಭವಾದ ೭೪ನೇ ವರ್ಷದ ದಸರಾ ಮಹೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಾಡಹಬ್ಬ ದಸರಾ ಜನರ ಮನ ಸೆಳೆಯಿತು. ಇದು ಹಿಂದುಗಳ ಹಬ್ಬವಾಗಿದ್ದು, ವಿಜಯನಗರ ಪಥನವಾದ ನಂತರ ಇದನ್ನು ವೈಭವವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಮೈಸೂರಿನಲ್ಲಿ ನಾಡದೇವತೆಯಾಗಿ ಚಾಮುಂಡೇಶ್ವರಿಯನ್ನು ಆಚರಿಸುತ್ತೇವೆ. ಇದೊಂದು ಸಾಂಸ್ಕೃತಿಕ ಉತ್ಸವವಾಗದೆ ದೇವಿ ಆರಾಧನೆಯನ್ನು ಒಂದೊಂದು ದಿನ ಒಂದೊಂದು ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು. ಇಂದು ರಾಕ್ಷಸರಿಲ್ಲ, ರಾಕ್ಷಸಿ ಮನಸ್ಥಿತಿಯ ಜನರಿದ್ದಾರೆ. ಮಲಗಿದ್ದ ಹಸುವಿನ ಕೆಚ್ಚಲು ಕುಯ್ಯುತ್ತಾರೆ. ಎಲ್ಲಾ ದೇವತೆಗಳು ವಾಸಮಾಡುವುದೇ ಗೋವಿನಲ್ಲಿ ಎಂದು ಹಿಂದೂಗಳು ಭಾವಿಸಿದ್ದೇವೆ ಎಂದರು.

ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ. ಸುಟ್ಟರೆ ನುಸುಳಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಗೊಬ್ಬರವಾದೆ ಎಂಬಂತೆ ಗೋವುಗಳನ್ನು ನಾವು ಪೂಜಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಗಂಭೀರವಾಗಿ ಯೋಚಿಸುವ ಅಗತ್ಯ ಇದೆ ಎಂದು ಹೇಳಿದರು. ರಾಜಕಾರಣ ಕೇವಲ ಅಧಿಕಾರ ಬಳಕೆಗೆ ಸೀಮಿತವಾಗದೆ ಅಧಿಕಾರ ಗಳಿಕೆಯಾಗಿ ಅಭಿವೃದ್ಧಿಗೂ ಬಳಕೆಯಾಗಬೇಕು. ಸಮಾಜ ಮತ್ತು ದೇಶವನ್ನು ಬಲಗೊಳಿಸಲು ಉಪಯೋಗವಾಗಬೇಕೆಂದು ಸಲಹೆ ನೀಡಿದರು.

ಜಾತಿಗಣತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆಯುವ ಕೆಲಸಗಳಾಗಬಾರದು. ವಿವಿಧತೆ ಇದೆ, ಅದಕ್ಕೆ ತಕ್ಕ ಸೂತ್ರವೂ ಇದೆ. ದೇವನೊಬ್ಬ ನಾಮ ಹಲವು ಎಂದು ಭಾವಿಸುತ್ತೇವೆ. ಹಲವು ಹೆಸರಿನಲ್ಲಿ ದೇವತೆಯನ್ನು ತಾಯಿ ಚಾಮುಂಡೇಶ್ವರಿ ಒಬ್ಬಳೇ ಎಂದು ಪೂಜಿಸುತ್ತೇವೆ ಎಂದರು. ಭಿನ್ನತೆ ಇದೆ. ಅಂದರೆ ಏಕತೆಯ ಸೂತ್ರವೂ ಇದ್ದು, ಈ ಏಕತೆಗೆ ಧಕ್ಕೆ ತರುವಂತಹ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಸಮಸ್ತ ಹಿಂದೂಗಳ ಭಕ್ತಿಯ ಸ್ಥಳ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಕೀರ್ತಿ, ಅಪನಂಬಿಕೆ ಮೂಡಿಸುತ್ತಿರುವುದು ಭಕ್ತಿಗೆ ಭಂಗ ತರುವ ಷಡ್ಯಂತ್ರ ಎಂದು ಖಂಡಿಸಿದರು.

ದುಷ್ಟಶಕ್ತಿ, ದ್ವೇಷ ಮನಸ್ಸು ನಾಶವಾಗಬೇಕು, ಇದಕ್ಕೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ ಎಂದ ಅವರು, ತಾಯಿ ಚಾಮುಂಡೇಶ್ವರಿ ಸಜ್ಜನ ಶಕ್ತಿ ಒಟ್ಟು ಮಾಡಲಿ, ದುರ್ಜನ ಶಕ್ತಿ ನಾಶ ಮಾಡಲಿ, ರಾಷ್ಟ್ರಘಾತುಕ ಶಕ್ತಿಯಾಗುವ ಎಲ್ಲವೂ ನಾಶವಾಗಲಿ ಎಂದು ಪ್ರಾರ್ಥಿಸುತ್ತೇನೆಂದರು. ದಸರಾ ಕೇವಲ ಸಾಂಸ್ಕೃತಿಕ ಉತ್ಸವವಲ್ಲ, ಕಲೆ, ಸಾಹಿತ್ಯ, ಸಂಸ್ಕೃತಿ ಜೊತೆಗೆ ಸಾಮರ್ಥ್ಯದ ಶಕ್ತಿ ಪ್ರದರ್ಶನ ಕೂಡ ನಡೆಯುತ್ತಿದ್ದು, ಕುಸ್ತಿ ಪಂದ್ಯ ನಡೆಯುತ್ತವೆ. ಕುಸ್ತಿಪಟುಗಳನ್ನು ದೇಶ ಸೇವೆ ಸಮರ್ಪಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಕುಸ್ತಿ ಸ್ಪರ್ಧೆ ಹಿಂದೆ ಲೋಕವಿಖ್ಯಾತವಾಗಿತ್ತು ಎಂದರು.

ಇಸ್ಲಾಂ ಹೆಸರಿನಲ್ಲಿ ಹತ್ತಾರು ಕೋಟಿ ಜನರ ಮಾರಣಹೋಮ, ದೇವಾಲಯಗಳ ನಾಶ, ದೇಶ ತುಂಡಾಯಿತು, ಹತ್ಯಾಚಾರ ನಡೆಯಿತು. ಇದಾಗಬಾರದು ಎಂಬುದು ನಮ್ಮ ಚಿಂತನೆ. ಮುಂದೆ ಬಲತ್ಕಾರವಾಗಿ ಊರು ತೊರೆಯುವ ಸ್ಥಿತಿ ಬಂದರೆ ಅದಕ್ಕಿಂತ ಸಂಕಷ್ಟ ಇನ್ನೊಂದಿಲ್ಲ. ಈ ರೀತಿ ೧೯೪೭ರ ಆ.೧೪ ರಂದು ಕೋಟ್ಯಾಂತರ ಜನ ಊರು ತೊರೆಯಬೇಕಾಯಿತು. ಲಕ್ಷಾಂತರ ಜನರು ಕತ್ತಿಗೆ ಬಲಿಯಾಗಬೇಕಾಯಿತು. ಅಂತಹ ಪರಿಸ್ಥಿತಿ ಮತ್ತೊಮ್ಮೆ ಮರುಕಳಿಸಬಾರದು ಎಂದು ಎಚ್ಚರಿಸಿದರು.

ನಾಡದೇವತೆ ಮತ್ತು ನಾಡಿನ ಬಗ್ಗೆ ಶ್ರದ್ಧಾಭಕ್ತಿ ಇರುವವರು ನಾಡಹಬ್ಬ ದಸರಾವನ್ನು ಉದ್ಘಾಟನೆ ಮಾಡಲಿ, ಅದಿಲ್ಲದೆ ಉದ್ಘಾಟಿಸಿದರೆ ಅದಕ್ಕೆ ಬೆಲೆ ಮತ್ತು ನೈತಿಕತೆ ಇರುವುದಿಲ್ಲ ಎಂದು ಹೇಳಿದ ಅವರು, ನಮ್ಮದು ಎಂಬ ಭಾವನೆಯಿಂದ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರೂ ಬರಲಿ. ಆದರೆ, ಧಾರ್ಮಿಕ ಭಾವನೆ ಬರದಿದ್ದರೆ ಬೆಲೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಳೆಯ ವಯಸ್ಸಿನಲ್ಲೇ ದ್ವೇಷ ಭಾವನೆ ಬಿತ್ತಿದ ಪರಿಣಾಮ ಜಗತ್ತಿನ ನೆಮ್ಮದಿ ಕೆಡಿಸಿ ಮತಾಂಧತೆಯ ತತ್ವ ದೇಶವನ್ನು ತುಂಡುಮಾಡಿದೆ. ಹಿಂದುತ್ವದ ಈ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದೇವೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದು ಹೇಳಿದರು.

ಮಾಜಿ ಜಿ.ಪಂ ಉಪಾಧ್ಯಕ್ಷ ಬಿ.ಜಿ ಸೋಮಶೇಖರ್ ಮಾತನಾಡಿ, ನಾಲ್ಕುನೂರು ವರ್ಷಗಳ ಪರಂಪರೆ ಇತಿಹಾಸ ಇರುವ ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಅದರ ಭಾಗವಾಗಿ ಬೀಕನಹಳ್ಳಿ ಸುಕ್ಷೇತ್ರ ಚಾಮುಂಡೇಶ್ವರಿ ಸನ್ನಿದಾನದಲ್ಲಿ ದಸರಾ ನಡೆಯುತ್ತಿದ್ದು, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಇದರ ಉದ್ದೇಶ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಮೊರ್ಚಾ ಕಾರ್ಯದರ್ಶಿ ಹೆಚ್.ಸಿ ಕಲ್ಮುರಡಪ್ಪ, ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರ ಅಧ್ಯಕ್ಷರಾದ ಬಿ.ಪಿ ನಂಜಪ್ಪ, ಉಪಾಧ್ಯಕ್ಷರಾದ ಹೆಚ್, ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ ಯೋಗಾನಂದ್, ಖಜಾಂಚಿ ಬಿ.ಹೆಚ್ ಸೋಮೇಗೌಡ, ಸದಸ್ಯರುಗಳಾದ ಬಿ.ಹೆಚ್ ನಂಜುಂಡಪ್ಪ, ಬಿ.ಸಿ ಗುರುಸಿದ್ಧಪ್ಪ, ಬಿ.ವಿ ಯತಿರಾಜ್, ಎಂ. ಲೋಕನಾಥ್, ಶ್ರೀ ರಂಗಪ್ಪ, ಹೆಚ್.ಪಿ ಮಂಜೇಗೌಡ, ಬಿ.ಎಂ ನಾಗರಾಜ್, ಬಿ.ಎಸ್ ಪರಮೇಶ್ವರಪ್ಪ, ಬಿ.ಹೆಚ್ ವಿಜಯಕುಮಾರ್, ಚಂದ್ರಚಾರ್, ಎಸ್.ಎನ್ ಲಲಿತಾ ಬಸವರಾಜ್ ಉಪಸ್ಥಿತರಿದ್ದರು.

The purpose of the national festival of Dussehra is to destroy the wicked and protect the righteous.

Comments

Leave a Reply

Your email address will not be published. Required fields are marked *