ಚಿಕ್ಕಮಗಳೂರು: ರಸ್ತೆ ಗುಂಡಿ, ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಸೇರಿ ಆರು ಸ್ವಯಂ ಪ್ರೇರಿತ ಪ್ರಕರಣಗಳನ್ನು ಉಪಲೋಕಾಯುಕ್ತರು ದಾಖಲಿಸಿಕೊಂಡಿದ್ದಾರೆ.
‘ಮೊದಲ ದಿನ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಪ್ರಯಾಣ ಮಾಡಿದೆವು. ಹಾಸನದಿಂದ ಚಿಕ್ಕಮಗಳೂರಿಗೆ ತಲುಪುವುದೇ ಕಷ್ಟವಾಗಿದೆ. ರಸ್ತೆ ತುಂಬೆಲ್ಲಾ ಹೊಂಡಗಳೇ ಇವೆ. ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು.
ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಸಮಸ್ಯೆಗಳ ಆಗರವಾಗಿದೆ. ಗ್ರಾಮೀಣ ಸಾರಿಗೆ ಬಸ್‌ಗಳು ನಿಲ್ಲುವ ಜಾಗದಲ್ಲಂತೂ ಪ್ರಯಾಣಿಕರಿಗೆ ಯಾವುದೇ ಸೌಕರ್ಯ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಇದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ವರದಿ ನೀಡಿದ ಬಳಿಕ ಪ್ರಕರಣ ಇತ್ಯರ್ಥಪಡಿಸಲಾಗುವುದು ಎಂದರು. ‘ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲೊಂದು ಕಸದ ಗುಡ್ಡವೇ ಇರುವುದನ್ನು ನೋಡಿದ್ದೇನೆ.
ಸಂಸ್ಕರಿಸಲು ಹಲವು ತಂತ್ರಜ್ಞಾನಗಳಿವೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ವೈಜ್ಞಾನಿಕ ಕ್ರಮ ಕೈಗೊ ಳ್ಳುವ ಆಲೋಚನೆಯನ್ನು ಅಧಿಕಾರಿಗಳು ಮಾಡಿಯೇ ಇಲ್ಲ. ಸ್ಥಳೀಯರಿಗೆ ಆಗುತ್ತಿರುವ ತೊಂದರೆಯನ್ನೂ ಸುತ್ತಮುತ್ತಲ ಜನ ತಿಳಿಸಿದರು. ಆದ್ದರಿಂದ ಈ ವಿಷಯದ ಸಂಬಂಧವೂ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.
ಕಸ ವಿಲೇವಾರಿ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಗರಸಭೆ ಆಯುಕ್ತರು ಮತ್ತು ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡಲು ತಿಳಿಸಲಾಗಿದೆ ಎಂದು ವಿವರಿಸಿದರು.
‘ಮೊದಲ ದಿನವೇ ಎರಡು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ್ದೆವು. ಅಲ್ಲಿಯೂ ಕೆಲವು ಲೋಪಗಳನ್ನು ಗುರುತಿಸಿ ಪ್ರಕರಣ ದಾಖಲಿಸಲಾಗಿದೆ. ಸಮಸ್ಯೆ ಸರಿಪಡಿಸಿದ ಬಳಿಕ ಪ್ರಕರಣ ಇತ್ಯರ್ಥವಾಗಲಿದೆ’ ಎಂದರು.
