ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯ ೬೯೮೫೦ ರೈತರಿಗೆ ೯೮೩ ಕೋಟಿ ರೂ.ಗಳಷ್ಟು ಕೆಸಿಸಿ ಬೆಳೆ ಸಾಲವನ್ನು ನೀಡಲು ಇರಿಸಿಕೊಂಡಿದ್ದ ಗುರಿಯಲ್ಲಿ ಕಳೆದ ಮಾರ್ಚ್ ಅಂತ್ಯಕ್ಕೆ ೫೬೯೧೫ ರೈತರಿಗೆ ೮೫೮.೨೪ ಕೋಟಿ ರೂ.ಗಳಷ್ಟು ಕೆಸಿಸಿ ಬೆಳೆಸಾಲ ವಿತರಿಸಿದೆ.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು ಅವರ ಸಮ್ಮುಖದಲ್ಲಿ ನಡೆದ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್ ಅವರು ಬ್ಯಾಂಕ್‌ನ ಪ್ರಗತಿ ವರದಿಯನ್ನು ಮಂಡಿಸಿ ಈ ಮಾಹಿತಿ ನೀಡಿದರು.
೨೦೨೫-೨೬ನೇ ಸಾಲಿಗೆ ಹಣಕಾಸಿನ ಲಭ್ಯತೆ ಆಧರಿಸಿ ೧೦೦೦ ಕೋಟಿ ರೂ. ಕೃಷಿ ಸಾಲ ನೀಡುವ ಗುರಿ ಹೊಂದಲಾಗಿದೆ. ೨೦೨೪-೨೫ನೇ ಸಾಲಿಗೆ ಶೇ.೩ರ ಬಡ್ಡಿ ದರದಲ್ಲಿ ೩೩೯ ರೈತರಿಗೆ ೧೭ ಕೋಟಿ ರೂ. ಮಧ್ಯಮಾವಧಿ ಸಾಲ ವಿತರಣಾ ಗುರಿ ನಿಗದಿಪಡಿಸಿಕೊಂಡಿದ್ದು. ಕಳೆದ ಮಾರ್ಚ್ ಅಂತ್ಯಕ್ಕೆ ೨೩೨ ರೈತರಿಗೆ ೧೫.೯೦ ಕೋಟಿ ರೂ. ವಿತರಿಸಲಾಗಿದೆ. ೨೦೨೪-೨೫ನೇ ಸಾಲಿಗೆ ಒಟ್ಟು ೧೨೭೫೯ ಸಾಲಗಾರ ಸದಸ್ಯರಿಗೆ ೪೭೪.೬೭ ಕೋಟಿ ರೂ. ಕೃಷಿಯೇತರ ಸಾಲ ನೀಡಲಾಗಿದೆ. ಪ್ರಸ್ತುತ ವರ್ಷ ೩೭೦ ಕೋಟಿ ರೂ.ಗಳ ಕೃಷಿಯೇತರ ಸಾಲ ವಿತರಣಾ ಗುರಿ ಹೊಂದಿದ್ದು, ಇದರೊಂದಿಗೆ ಎಲ್ಲ ವರ್ಗದ ಜನರ ಶ್ರೇಯೋಭೀವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಬ್ಯಾಂಕ್‌ನಲ್ಲಿ ಕಳೆದ ಮಾರ್ಚ್ ಅಂತ್ಯದವರೆಗೆ ಒಟ್ಟು ೬೪೦೦ ಸ್ವಸಹಾಯ ಗುಂಪುಗಳಿದ್ದು, ೨೦೨೪-೨೫ ರಲ್ಲಿ ೬೧ ಸ್ವಸಹಾಯ ಗುಂಪುಗಳಿಗೆ ೮೯ ಲಕ್ಷ ರೂ.ಗಳ ಸಾಲ ವಿತರಿಸಲಾಗಿದೆ. ಈ ಮೂಲಕ ಜಿಲ್ಲೆಯ ಬಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಹು ಸೇವಾ ಯೋಜನೆಯ ಮೂಲಕ ೪೩ ಸಂಘಗಳಿಗೆ ೧೫.೯೭ ಕೋಟಿ ರೂ.ಗಳ ಸಾಲವನ್ನು ಕನಿಷ್ಠ ಬಡ್ಡಿ (ಶೇ.೪) ದರದಲ್ಲಿ ಗೋದಾಮು ನಿರ್ಮಾಣಕ್ಕೆ ನೀಡಲಾಗಿದೆ.
೨೦೨೪-೨೫ನೇ ಸಾಲಿನ ಅಂತ್ಯಕ್ಕೆ ೬೫.೧೦ ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ೨.೨೦ ಲಕ್ಷಕ್ಕೂ ಹೆಚ್ಚು ಠೇವಣಿದಾರರ ಮೂಲಕ ೧೪೨೬.೭೮ ಕೋಟಿ ರೂ.ಗಳ ವಿವಿಧ ರೀತಿಯ ಠೇವಣಿಯನ್ನು ಸಂಗ್ರಹಿಸಲಾಗಿದೆ. ೨೦೨೩-೨೪ನೇ ಸಾಲಿನಲ್ಲಿ ಶಾಸನಬದ್ಧ ಲೆಕ್ಕಪರಿಶೋಧನೆ ಹಾಗೂ ನಬಾರ್ಡ್ ನಡೆಸಿದ ತಪಾಸಣೆಯಲ್ಲಿ ಈ ಬ್ಯಾಂಕ್ ಸತತವಾಗಿ ಎ.ವರ್ಗೀಕೃತ ಶ್ರೇಣಿಯನ್ನು ಹೊಂದಿದೆ. ಅದೇ ವರ್ಷ ರಾಜ್ಯ ಅಪೆಕ್ಸ್ ಬ್ಯಾಂನಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕ್‌ಗಳಿಗೆ ನೀಡುವ ಪ್ರಶಸ್ತಿ ಪೈಕಿ ಈ ಬ್ಯಾಂಕ್‌ಗೆ ೨ನೇ ಸ್ಥಾನ ಲಭಿಸಿದ್ದು, ೨ ಲಕ್ಷ ರೂ.ಗಳ ನಗದು ಪುರಸ್ಕಾರಕ್ಕೂ ಭಾಜನವಾಗಿದೆ.
ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್ ಬ್ಯಾಂಕಿಂಗ್ ಸೇವೆ ಹಾಗೂ ಶಾಖೆಗಳಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡುತ್ತಿರುವ ಐಎಂಪಿಎಸ್ ಮತ್ತು ಯುಪಿಐ-ಫೋನ್ ಪೇ ಸೇವೆಯನ್ನು ನಮ್ಮ ಬ್ಯಾಂಕ್‌ನ ಗ್ರಾಹಕರಿಗೂ ಒದಗಿಸಿದ್ದು, ಸಹಕಾರ ಬ್ಯಾಂಕ್‌ಗಳು ಸಹ ಷೆಡ್ಯೂಲ್ ಬ್ಯಾಂಕ್‌ಗಳಿಗೆ ಸರಿಸಮಾನವಾದ ಎಲ್ಲ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಸೇವೆ ನೀಡಲಾಗುತ್ತಿದೆ. ಪ್ಯಾಕ್ಸ್ ಗಣಕೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಜಿಲ್ಲೆಯ ೬ ಪ್ಯಾಕ್ಸ್‌ಗಳನ್ನು ಕೇಂದ್ರ ಸರ್ಕಾರದಿಂದ ಇ-ಪ್ಯಾಕ್ಸ್ ಎಂದು ಗುರುತಿಸಿದ್ದು, ಈ ಪೈಕಿ ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ ಪ್ಯಾಕ್ಸ್ ರಾಜ್ಯದ ಪ್ರಥಮ ಇ-ಪ್ಯಾಕ್ಸ್ ಎಂದು ಗುರುತಿಸಲ್ಪಟ್ಟಿದೆ.
ಬ್ಯಾಂಕ್‌ನ ಅಭಿವೃದ್ಧಿ ಹಾಗೂ ತಾಂತ್ರಿಕ ವ್ಯವಸ್ಥೆ ಬಗ್ಗೆ ಮತ್ತು ಬ್ಯಾಂಕ್‌ನಲ್ಲಿ ಯುಪಿಐ-ಫೋನ್ ಪೇ ವ್ಯವಸ್ಥೆ ಜಾರಿಗೊಳಿಸಿರುವ ಬಗ್ಗೆ ನಬಾರ್ಡ್ ಅಧಿಕಾರಿ ಡಾ.ಸುರೇಂದ್ರ ಬಾಬು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ನೀಡಿದರು. ಬ್ಯಾಂಕ್‌ನ ಠೇವಣಿ ಸಂಗ್ರಹಣೆ, ಗುಣಮಟ್ಟದ ಸಾಲ ನೀಡಿಕೆ, ಸಾಲ ವಸೂಲಾತಿ ಮತ್ತು ತಾಂತ್ರಿಕ ಅಂಶಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿರುವುದನ್ನು ಶ್ಲಾಘಿಸಿದರಲ್ಲದೆ, ಉಪಸ್ಥಿತರಿದ್ದ ಬ್ಯಾಂಕ್ ಅಧ್ಯಕ್ಷರಾದ ಡಿ.ಎಸ್.ಸುರೇಶ್, ಉಪಾಧ್ಯಕ್ಷ ಹೆಚ್.ಬಿ.ಸತೀಶ್, ನಿರ್ದೇಶಕರಾದ ಮುಗಳವಳ್ಳಿ ಪರಮೇಶ್ವರಪ್ಪ, ಎಂ.ಎಸ್.ನಿರಂಜನ್ ಅವರನ್ನು ಅಭಿನಂದಿಸಿದರು. ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಇಮ್ಯಾನ್ಯುಯೆಲ್ ರೆಜಿಸ್ ಹಾಜರಿದ್ದರು.
KCC disburses crop loans worth Rs 858 crore from Cooperative Central Bank
