ಚಿಕ್ಕಮಗಳೂರು: ‘ಬಸವ ಸಂಸ್ಕೃತಿ ಅಭಿಯಾನದ ಉದ್ದೇಶ ಲಿಂಗಾಯತ ಧರ್ಮವನ್ನು ಪ್ರಚಾರ ಮಾಡುವುದೇ ಹೊರತು ಸಮಾಜ ಒಡೆಯುವುದಲ್ಲ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ನೇತೃತ್ವದಲ್ಲಿ ಶನಿವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಚನೆ ಮಾಡಿಕೊಂಡಿದ್ದೇವೆ. ನಮ್ಮ ಧರ್ಮ ಪ್ರಚಾರವನ್ನು ಮಾಡಲು ಹೊರಟಿದ್ದೇವೆ. ಇದಕ್ಕೆ ಆರೋಪ, ಪ್ರತಿರೋಧ ಬಂದಿದೆ. ನಮಗೆ ಬಸವಣ್ಣನ ಹೆಸರನ್ನು ಕೆಡಿಸುವ ಅಥವಾ ಸಮಾಜವ ಒಡೆಯುವ ಉದ್ದೇಶವಿಲ್ಲ’ ಎಂದು ತಿಳಿಸಿದರು.
‘ಬಸವಣ್ಣನ ತತ್ವ ಆದರ್ಶಗಳನ್ನು ಪಸರಿಸಲು ಟೊಂಕಕಟ್ಟಿ ನಿಂತಿದ್ದೇವೆ. ಇದಕ್ಕೆ ಯಾವುದೇ ಟೀಕೆ ಬಂದರೂ ಪ್ರೀತಿಯಿಂದ ಸ್ವಾಗತ ಮಾಡುತ್ತೇವೆ. ಯಾರನ್ನೂ ದ್ವೇಷಿಸುವುದಿಲ್ಲ. ಟೀಕಿಸುವವರು ಸಹ ನಾಳೆ ನಮ್ಮ ಜತೆ ಸೇರಿಕೊಳ್ಳುವ ವಿಶ್ವಾಸ ಇದೆ’ ಎಂದರು.
‘ಈ ಅಭಿಯಾನವನ್ನು ಪ್ರಮಾಣಿಕವಾಗಿ ಮಾಡುತ್ತಿದ್ದೇವೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋದಾಗ ಹೊಸ ರೂಪ ಪಡೆದುಕೊಳ್ಳುತ್ತಿವೆ. ಇದು ಬಸವಣ್ಣನ ಶಕ್ತಿ ಎಂದು ಅಭಿಪ್ರಾಯಪಟ್ಟರು.
ಮನೆಯಲ್ಲಿ ಬಸವಣ್ಣನ ಭಾವಚಿತ್ರದ ಜತೆಗೆ ಅವರ ತತ್ವಗಳು ಮನಸ್ಸಿನಲ್ಲಿ ಇಸಿಸಿಕೊಂಡು ಮುನ್ನಡೆಯಬೇಕು. ಕೇವಲ ಭಾವಚಿತ್ರ ಇರಿಸಿ ಪೂಜಿಸಿದರೆ ಪ್ರಯೋಜನವಿಲ್ಲ. ಬಸವಣ್ಣನ ವಚನಗಳನ್ನು ಕಲಿತು ಅವರ ತತ್ವಗಗಳನ್ನು ಬದುಕಿನಲ್ಲಿ ಆಚರಣೆಗೆ ತರಬೇಕು ಎಂದು ಹೇಳಿದರು.
ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ಬಸವ ಸಂಸ್ಕೃತಿಯ ಅಭಿಯಾನದಿಂದ ಇಡೀ ವಿಶ್ವವೇ ಬಸವಣ್ಣನ ಹಿಂದೆ ಬರುವ ವಾತಾವರಣ ಮೂಡುತ್ತಿದೆ’ ಎಂದರು.
‘ಇಂದಿನ ಪಾದಯಾತ್ರೆ ನೋಡಿದರೆ ವಿರೋಧಿಸುವವರಿಗೆ ಪಾಠ ಹೇಳಿದಂತಿತ್ತು. ಬಸವಣ್ಣನನ್ನು ಬಿಟ್ಟರೆ ಗತಿ ಇಲ್ಲ, ಮತಿ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಮುಂದಾದರೂ ಬಸವಣ್ಣನನ್ನು ಒಪ್ಪಿಕೊಂಡು ಮುನ್ನಡೆಯಬೇಕು’ ಎಂದರು.
ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಸಾಕಷ್ಟು ಗೊಂದಲಮಯವಾಗಿದೆ. ಒಳ ಪಂಗಡಗಳು, ಜಾತಿಗಳ ಕಾಲಂನಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಇದರಿಂದ ಒಂದೇ ಆಶಯ ಇಟ್ಟುಕೊಂಡು ಸಾಗುತ್ತಿರುವ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಮೀಕ್ಷೆಯ ವೇಳೆ ಎಚ್ಚರಿಕೆಯಿಂದ ಧರ್ಮ, ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಧರ್ಮ, ಜಾತಿ ನಮೂದು ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ‘ಸಮ ಸಮಾಜ ನಿರ್ಮಾಣದಲ್ಲಿ ಬಸವಣ್ಣನ ಕೊಡುಗೆ ಅಪಾರ. ಬಸವ ಸಂಸ್ಕೃತಿ ಉಳಿಯಬೇಕೆಂದರೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಬಸವಣ್ಣನ ಭಾವಚಿತ್ರ ಇರಿಸಿಕೊಳ್ಳಬೇಕು. ಯುವ ಪೀಳಿಗೆಗೆ ಬಸವಣ್ಣನ ವಿಚಾರ ತಿಳಿಸಬೇಕು.’ ಎಂದರು.
ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎನ್.ಚಿದಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ನಾ ದೇವನಲ್ಲದೆ, ನೀ ದೇವನೇ’ ವಿಷಯದ ಕುರಿತು ಮಹಾಂತ ಸ್ವಾಮೀಜಿ, ‘ಅರಿದೊಡೆ ಶರಣ, ಮರೆದೊಡೆ ಮಾನವ’ ವಿಷಯದ ಕುರಿತು ಗಂಗಾಬಿಕೆ ಬಸವರಾಜ್ ಉಪನ್ಯಾಸ ನೀಡಿದರು.
ತೋಂಟದ ಸಿದ್ಧರಾಮ ಸ್ವಾಮೀಜಿ, ಹಿರೇಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಯಳನಾಡು ಸಂಸ್ಥಾನ ಮಠದ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಮುಖಂಡರಾದ ಬೆಳ್ಳಿ ಪ್ರಕಾಶ್, ಡಿ.ಎಸ್. ಸುರೇಶ್, ಎಚ್.ಸಿ. ಕಲ್ಮರುಡಪ್ಪ, ಮಹಡಿಮನೆ ಸತೀಶ್, ಬಿ.ಜಿ. ಸೋಮಶೇಖರಪ್ಪ ಇದ್ದರು.
The Lingayat Muttah Dipati Association has no intention of dividing the society.
