Category: ಚಿಕ್ಕಮಗಳೂರು ನಗರ

  • ತಂದೆ-ತಾಯಿ ಪೋಷಣೆ ಮಾಡದಿದ್ದರೆ ಆಸ್ತಿ ವಾಪಸು

    ತಂದೆ-ತಾಯಿ ಪೋಷಣೆ ಮಾಡದಿದ್ದರೆ ಆಸ್ತಿ ವಾಪಸು

    ಚಿಕ್ಕಮಗಳೂರು: ತಂದೆ ತಾಯಿಯಿಂದ ಆಸ್ತಿಯನ್ನು ಪಡೆದ ನಂತರ ಅವರ ಪಾಲನೆ, ಪೋಷಣೆ ಮಾಡದಿದ್ದರೆ ಕಾನೂನಿನ ಮೂಲಕ ಆಸ್ತಿ ವಾಪಸ್ಸು ಪಡೆದುಕೊಳ್ಳುವ ಅವಕಾಶವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕೆಂಪನಹಳ್ಳಿಯ ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಇಂದು ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಹಿರಿಯರ ಹಿತದೃಷ್ಟಿಯನ್ನು ಕಾಪಾಡುವ ಸಲುವಾಗಿ ಹಿರಿಯರ ಪೋಷಣೆ ಮತ್ತು ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿದೆ ಎಂದ ಅವರು, ಜಿಲ್ಲಾ ಕಾನೂನು ಪ್ರಾಧಿಕಾರವು ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ತಮ್ಮ ಹಕ್ಕುಗಳು ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ಮಾಡುತ್ತಿದೆ ಎಂದು ಹೇಳಿದರು.

    ಈ ದಿನ ಹಿರಿಯರ ಹಕ್ಕುಗಳನ್ನು ಗೌರವಿಸಲು ಮತ್ತು ಅವರ ಮಾರ್ಗದರ್ಶನವನ್ನು ಅನುಸರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ದಿನವನ್ನು ಸುಂದರಗೊಳಿಸಲು, ನಿಮ್ಮ ಪೋ?ಕರು, ಅಜ್ಜಿಯರು ಮತ್ತು ಮನೆಯಲ್ಲಿ ವಾಸಿಸುವ ಇತರ ಹಿರಿಯರೊಂದಿಗೆ ಸಮಯ ಕಳೆಯಿರಿ. ಅವರಿಗೆ ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೊಂದಿಲ್ಲ ಎಂದು ಹೇಳಿದರು.

    ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆ ಅಧ್ಯಕರಾದ ಡಾ.ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಡೀ ಜಗತ್ತಿನಲ್ಲಿ ೮೦೦ ಕೋಟಿ ಜನ ೨೨೧ ದೇಶಗಳಲ್ಲಿ ಇಂದು ವಿಶೇಷವಾಗಿ ಹಿರಿಯರನ್ನು ಗೌರವಿಸುವ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
    ಈ ದಿನವು ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆಯನ್ನು ಗುರುತಿಸಲು ಹಾಗೂ ಅವರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು, ಅವರಿಗೆ ಪರಿಹರಿಸುವ ಮಾರ್ಗಗಳನ್ನು ತಿಳಿಸಲು ಅವಕಾಶ ಕಲ್ಪಿಸುತ್ತದೆ. ಯುವಕರ ಜೀವನವು ವೇಗವಾಗಿ ಓಡುತ್ತಿದೆ. ಈ ಸಮಯದಲ್ಲಿ ಮನೆಯಲ್ಲಿರುವ ವೃದ್ಧರು ಒಂಟಿತನಕ್ಕೆ ಗುರಿಯಾಗುತ್ತಾರೆ. ಇಂದು ವಿಶ್ವ ಹಿರಿಯ ನಾಗರಿಕರ ದಿನದ ಸಂದರ್ಭದಲ್ಲಿ ನಿಮ್ಮ ಮನೆಯ ಹಿರಿಯರೊಂದಿಗೆ ಕೆಲವು ಸುಂದರ ಕ್ಷಣಗಳನ್ನು ಕಳೆಯುವಂತೆ ಸಲಹೆ ನೀಡಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ವೈ.ಆಲದಾರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದಿನದ ಅಂಗವಾಗಿ ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದವರಿಗೆ ಬಹುಮಾನ ವಿತರಣೆ ಅಥವಾ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

    ಯುವಜನತೆ ಹಿರಿಯರಿಗೆ ಭಾರತೀಯ ಸಂಪ್ರದಾಯದಂತೆ ಗೌರವ ನೀಡಬೇಕು. ಜೊತೆಗೆ ಅವರ ಅನುಭವಗಳನ್ನು ಪಡೆದುಕೊಂಡು ಮುಂದೆ ತಮ್ಮ ಜೀವನಕ್ಕೂ ಕೂಡ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಅಭಿವೃದ್ದಿ ಇಲಾಖೆಯ ಡಿ.ಸಂತೋಷ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಗೋಪಾಲಕೃಷ್ಣ, ಜಿ.ಪಂ. ಉಪ ಕಾರ್ಯದರ್ಶಿ ಶಂಕರ ಕೊರವರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    Property returned if parents do not provide for them

  • ಅಣುವ್ರತ ಕ್ರಿಯೆಟಿವ್ ಕಾಂಟೆಸ್ಟ್‌ನಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

    ಅಣುವ್ರತ ಕ್ರಿಯೆಟಿವ್ ಕಾಂಟೆಸ್ಟ್‌ನಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

    ಚಿಕ್ಕಮಗಳೂರು: ಜೈನ್ ಸಮುದಾಯದ ಗುರುಗಳ ಕೃಪಾಶೀರ್ವಾದದಿಂದ ಸುಖ, ಶಾಂತಿ, ನೆಮ್ಮದಿ ಕಾಣುತ್ತಿದ್ದೇವೆ ಎಂದು ಅಣುವ್ರತ ಸಂಘದ ಅಧ್ಯಕ್ಷೆ ಮಂಜುಳಾ ಬನ್ಸಾಲಿ ಹೇಳಿದರು.

    ಅವರು ತೇರಾಪಂಥ್ ಭವನದಲ್ಲಿ ಏರ್ಪಡಿಸಲಾಗಿದ್ದ ಅಣುವ್ರತ ಕ್ರಿಯೆಟಿವ್ ಕಾಂಟೆಸ್ಟ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ರಾಜ್ಯದಿಂದ ಐವರು ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಯ್ಕೆಮಾಡಿ ಕಳುಹಿಸಲಾಗಿದ್ದು ಇದರಲ್ಲಿ ಮೂವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಸ್ಪರ್ಧೆಗಳು ಸಹಕಾರಿ ಎಂದರು.

    ವಿದ್ಯಾರ್ಥಿಗಳ ಪರಿಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿ ಬಹುಮಾನ ತಂದಿರುವುದು ಅಣುವ್ರತ ಸಮಿತಿಗೆ ಸಫಲತೆ ತರುವುದರ ಜೊತೆಗೆ ಸಮಾಜಕ್ಕೆ ಒಳ್ಳೆಯ ಹೆಸರು ತಂದಿದ್ದಾರೆಂದು ಶ್ಲಾಘಿಸಿದರು.

    ಅಣುವ್ರತ ಸಂಘದಿಂದ ಕಳೆದ ಮೂರು ವರ್ಷಗಳಿಂದ ಈ ಸ್ಪರ್ಧೆಗಳನ್ನು ನಡೆಸುತ್ತ ಬರುತ್ತಿದ್ದು, ಇದಕ್ಕಾಗಿ ನಗರದ ೨೫ ಶಾಲೆಗಳಲ್ಲಿ ಮನವರಿಕೆ ಮಾಡಲಾಗಿದ್ದು, ೨ ಸಾವಿರ ಮಕ್ಕಳು ಭಾಗವಹಿಸಿದ್ದರು. ಶಾಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ತೇರಾಪಂಥ್ ಭವನದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ನಡೆಸಿ ರಾಜ್ಯಮಟ್ಟಕ್ಕೆ ಅಯ್ಕೆಮಾಡಿ ಕಳಿಸುತ್ತೇವೆ ಎಂದು ಹೇಳಿದರು.

    ರಾಜ್ಯಮಟ್ಟದ ಸ್ಪರ್ಧೆ ಈ ವರ್ಷ ಬೆಂಗಳೂರಿನಲ್ಲಿ ನಡೆದಿದ್ದು, ಜಿಲ್ಲೆಯ ಐವರು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಅವರನ್ನು ಅಹಮದಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದ್ದು, ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

    ಕೋ-ಆರ್ಡಿನೇಟರ್ ಗೌತಮ್ ಅಚ್ಚ ಮಾತನಾಡಿ, ಪ್ರಬಂಧ ಸ್ಪರ್ಧೆಯಲ್ಲಿ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಮಾನ್ವಿತ್, ಸಾಯಿ ಏಂಜಲ್ಸ್ ಶಾಲೆಯ ಧವನ್ ಇವರುಗಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.

    ಚಿತ್ರಕಲೆ ಸ್ಪರ್ಧೆಯಲ್ಲಿ ಸಾಯಿ ಏಂಜಲ್ಸ್ ಶಾಲೆಯ ಇಂಚನಗೌಡ ಮೂರನೇ ಸ್ಥಾನ, ಸಮಂತ್, ಚಿರಂತ್ ಇವರುಗಳು ಸೋಲೋ ಗಾಯನ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಒಟ್ಟು ೬೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ವಿವರಿಸಿದರು.

    ತೇರಾಪಂಥ್ ಮಹಾ ಸಭಾದ ಅಧ್ಯಕ್ಷ ಮಹೇಂದ್ರ ಡೋಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಆಚಾರ್ಯ ಮಹಾ ಸಮಾನ್ ಜೀ ವಹಿಸಿದ್ದರು. ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಪುರಸ್ಕಾರ ನೀಡಿದರು.

    ಕಾರ್ಯಕ್ರಮದಲ್ಲಿ ಸಂತೋಷ್ ಗಾಧಿಯಾ, ಲಾಲ್‌ಚಂದ್ ಬನ್ಸಾಲಿ, ನರಿತಾ ಗಾಡಿಯಾ, ಪುಷ್ಪರಾಜ್ ಗಾಡಿಯಾ, ಚಂದ್ರ ಗಾಡಿಯಾ, ಸುರೇಂದ್ರ ಗೋಖ್ರು, ಮದನ್‌ಚಂದ್ ಗಾಡಿಯಾ, ಜಯಂತಿ ಲಾಲ್, ನಿಖಿಲ್ ಗಾಡಿಯಾ, ಅಭಿಷೇಕ್ ಅಚ್ಚ ಉಪಸ್ಥಿತರಿದ್ದರು

    Congratulations to the students who won the Aṇuvrata Vrat Creative Contest

  • ಫ್ಲವರ್ ಬಾಯ್ಸ್ ವತಿಯಿಂದ ಗಣೇಶೋತ್ಸವ ಮೆರವಣಿಗೆ

    ಫ್ಲವರ್ ಬಾಯ್ಸ್ ವತಿಯಿಂದ ಗಣೇಶೋತ್ಸವ ಮೆರವಣಿಗೆ

    ಚಿಕ್ಕಮಗಳೂರು: ದೇಶಭಕ್ತಿ ಮತ್ತು ದೈವಭಕ್ತಿಯನ್ನು ಜನರಲ್ಲಿ ಮೂಡಿಸುವುದೇ ಗಣೇಶೋತ್ಸವದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

    ಅವರು ಇಂದು ನಗರದ ರಾಮನಹಳ್ಳಿ ಬಡಾವಣೆಯಲ್ಲಿ ಫ್ಲವರ್ ಬಾಯ್ಸ್ ವತಿಯಿಂದ ಏರ್ಪಡಿಸಲಾಗಿದ್ದ ೨೬ನೇ ವರ್ಷದ ಗಣೇಶೋತ್ಸವ ಮೆರವಣಿಗೆಗೆ ಚಾಲನೆ ನೀಡಿ ಜಿಲ್ಲೆಯಲ್ಲಿ ಪ್ರಥಮವಾಗಿ ಅದ್ದೂರಿ ರಥ ಸಿದ್ಧಪಡಿಸಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

    ಜಾತೀಯತೆ ಮತ್ತು ಅಸ್ಪೃಶ್ಯತೆಗೆ ಜಾಗ ಇಲ್ಲದಂತೆ ನೋಡಿಕೊಳ್ಳುವುದು ಗುರಿಯಾಗಿದ್ದು, ನಾವೆಲ್ಲಾ ಹಿಂದೂ ಬಂಧು ಎಂಬ ಮನೋಭಾವ ಬೆಳೆಸಬೇಕೆಂಬುದು ಗಣೇಶೋತ್ಸವ ಆಚರಣೆಯ ಉದ್ದೇಶ ಎಂದರು.

    ರಾಮನಹಳ್ಳಿಯಲ್ಲಿ ಆಯೋಜಿಸಿರುವ ಗಣೇಶೋತ್ಸವ ದೈವಭಕ್ತಿ ಜೊತೆಗೆ ದೇಶಭಕ್ತಿ ಜೋಡಿಸುವ ಪ್ರತೀಕವಾಗಿದೆ. ಜಾತೀಯತೆ, ಅಸ್ಪೃಶ್ಯತೆ ದೂರಮಾಡಿ, ನಾವೆಲ್ಲಾ ಹಿಂದೂ ಬಂಧುತ್ವ ಭಾವನೆ ಬೆಳೆಯಲು ಗಟ್ಟಿಗೊಳಿಸಲಿ ಎಂದು ಶುಭಹಾರೈಸಿದರು.

    ಅರ್ಜುನನ ನೇತೃತ್ವದಲ್ಲಿ ಅಭಿಮನ್ಯು ಎಲ್ಲಾ ಸವಾಲುಗಳನ್ನು ಎದುರಿಸಿದ್ದು ಇತಿಹಾಸವಾಗಿದ್ದು, ಅದೇ ರೀತಿ ಹಿಂದೂ ಸಮಾಜಕ್ಕೆ ಬರುವ ಸವಾಲು ಮತ್ತು ದೇಶಕ್ಕೆ ಬರುವ ಸವಾಲನ್ನು ಎದುರಿಸಿ ಜಯಶಾಲಿಯಾಗಲಿ ಎಂದು ಹೇಳಿದರು.

    ಹೂವಾಡಿಗರ ಸಮುದಾಯ ಭವನ ನಿರ್ಮಾಣಕ್ಕೆ ತನು, ಮನ, ಧನ ನೀಡಿ ಸಹಕರಿಸಿ ಬೆಂಬಲಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಫ್ಲವರ್ ಬಾಯ್ಸ್ ಯುವಕರ ಬಳಗದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    Flower Boys’ Ganesh Festival procession

  • ಯುವಪೀಳಿಗೆ ಪ್ರಜಾಪ್ರಭುತ್ವದ ಮಹತ್ವ ಅರಿಯಬೇಕು

    ಯುವಪೀಳಿಗೆ ಪ್ರಜಾಪ್ರಭುತ್ವದ ಮಹತ್ವ ಅರಿಯಬೇಕು

    ಚಿಕ್ಕಮಗಳೂರು: ಯುವ ಪೀಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ಅರಿಯಬೇಕೆಂಬ ಸದುದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್,ಎಲ್ ಭೋಜೇಗೌಡ ಹೇಳಿದರು.

    ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮತ್ತಿತರ ಅಧಿಕಾರಿಗಳೊಂದಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

    ದೇಶದ ಏಕತೆ, ಅಖಂಡತೆ, ರಾಷ್ಟ್ರೀಯತೆ ಈ ಎಲ್ಲಾ ವಿಚಾರವನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಪ್ರಜಾಪ್ರಭುತ್ವದ ಮಹತ್ವವನ್ನು ನಮ್ಮ ಯುವಜನತೆ ಅರಿಯಬೇಕು. ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ ಮತ್ತು ಆರೋಗ್ಯ ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯವಾಗಿದ್ದು, ಈ ಆಶಯದಂತೆ ಪ್ರತಿಯೊಬ್ಬ ಪ್ರಜೆಯು ಅರಿತು ನಡೆದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

    ಸಂವಿಧಾನದ ಆಶಯಗಳನ್ನು ಆಧರಿಸಿ ಹಿಂದಿನವರು ಈಗಾಗಲೇ ನಮ್ಮ ನಾಡಿಗೆ ಕೊಟ್ಟಿದ್ದಾರೆ. ಅವೆಲ್ಲವುಗಳನ್ನು ಕೂಡ ಕಾರ್ಯಗತ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಕೆಲವು ಯಶಸ್ಸಿನ ಹಾದಿಯಲ್ಲಿವೆ. ನಮ್ಮ ಪೀಳಿಗೆಯವರಿಗೆ ಈ ದಿನ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸ ಅವರದ್ದಾಗಿದೆ. ಮತದಾನ ನಮ್ಮ ಹಕ್ಕು. ಮತದಾನ ಮಾಡುವಾಗ ಸರಿಯಾದ ರೀತಿಯಲ್ಲಿ ಚಿಂತನೆ ಮಾಡುವುದು ಅಗತ್ಯ. ಈ ವಿಚಾರದಲ್ಲಿ ಬಹಳ ಜಾಗರೂಕತೆ ವಹಿಸಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ಮಾಲತಿ ಸ್ವಾಗತಿಸಿ, ಮಾತನಾಡಿ ನಮ್ಮದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಇದಕ್ಕೆ ಮೂಲ ಕಾರಣ ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್. ಅವರು ಸಂವಿಧಾನದಲ್ಲಿ ನೀಡಿದ ಅವಕಾಶಗಳಿಂದಾಗಿ ಮಹಿಳೆ ಇಂದು ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತಾಗಿದೆ ಎಂದರು.

    ಇಂದು ರಾಜ್ಯಾದ್ಯಂತ ಸೈಕಲ್ ಜಾಥವನ್ನು ಆಯೋಜನೆ ಮಾಡಲಾಗಿದೆ. ಭಾರತದ ಭವ್ಯ ಭವಿಷ್ಯ ಶಾಲಾಕಾಲೇಜುಗಳ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ ಎಂದು ಕೊಠಾರಿ ಆಯೋಗ ಹೇಳಿದ್ದು,ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ,ಮುಖಂಡರಾದ ಕೆ.ಟಿ ರಾಧಾಕೃಷ್ಣ ಮುಂತಾದವರು ಭಾಗವಹಿಸಿದ್ದರು.

    ನೇತಾಜಿ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಿಂದ ಹೊರಟ ಸೈಕಲ್ ರ್‍ಯಾಲಿಯು ಆಜಾದ್ ಪಾರ್ಕ್, ಹಿರೇಮಗಳೂರು, ಎಐಟಿ ಸರ್ಕಲ್, ದಂಟರಮಕ್ಕಿ, ಎಂ.ಜಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬಂದು ತಲುಪಿತು.

    The younger generation should understand the importance of democracy.

  • ಮತಗಳ್ಳತನಕ್ಕೆ ಅವಕಾಶ ನೀಡಬೇಡಿ-ರಾಜ್ಯದ ಜನರಿಗೆ ಸಿಎಂ ಕರೆ

    ಮತಗಳ್ಳತನಕ್ಕೆ ಅವಕಾಶ ನೀಡಬೇಡಿ-ರಾಜ್ಯದ ಜನರಿಗೆ ಸಿಎಂ ಕರೆ

    ಬೆಂಗಳೂರು: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ದೇ ನಿರ್ವಹಿಸಲೇಬೇಕು.ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ದೇಶದಲ್ಲಿ ವಿವಿಧ ಜಾತಿಧರ್ಮಗಳ ವ್ಯವಸ್ಥೆಯಿದೆ. ಬಹುಸಂಸ್ಕೃತಿಯುಳ್ಳ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತರಲಾಗಿದೆ. ಜಾತಿವ್ಯವಸ್ಥೆಯಿಂದಾಗಿ ಅಸಮಾನತೆ ಉಂಟಾಗಿದೆ. ಆದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನ ಜಾರಿಗೊಂಡ ಸಂಧರ್ಭದಲ್ಲಿ- ವೈರುಧ್ಯತೆಯಿರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಅಸಮಾನತೆಗಳಿವೆ. ದೇಶದಲ್ಲಿ ಜನರಿಗೆ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಯಶಸ್ವಿಯಾಗುತ್ತದೆ. 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಬಸವಣ್ಣನವರು ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಜೀವತುಂಬಿದ್ದರು. ಅತ್ಯಂತ ತಳಸಮುದಾಯದವರಾದ ಅಲ್ಲಮ ಪ್ರಭು ಅವರನ್ನು ಅನುಭವ ಮಂಟಪದ ಅಧ್ಯಕ್ಷರಾಗಿಸಿದ್ದರು. ಇದರಲ್ಲಿ ಮಹಿಳೆಯರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರೂ ಪ್ರಾತಿನಿಧ್ಯವನ್ನು ಹೊಂದಿದ್ದರು. ಎಲ್ಲಿ ಎಲ್ಲ ವರ್ಗದವರ ಅಭಿಪ್ರಾಯಕ್ಕೆ ಬೆಲೆ ದೊರಕುವುದೇ, ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿತವಾಗಿದೆ ಎಂದು ಹೇಳಬಹುದು ಎಂದರು.

    ಮತಗಳ್ಳತನದಿಂದ ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದೆ

    ಇಂದಿನ ಪ್ರಜಾಪ್ರಭುತ್ವ ದಿನಾಚರಣೆಯ ಘೋಷವಾಕ್ಯ ‘ನನ್ನ ಮತ ನನ್ನ ಹಕ್ಕು’. ಈ ಶಕ್ತಿಯನ್ನು ದುರ್ಬಲಗೊಳಿಸುವ ಹುನ್ನಾರ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆದಿದೆ. ಶ್ರೀಮಂತರಿಗೆ ಅಧಿಕಾರ ದೊರೆಯುವ ಕಾಲವೊಂದಿತ್ತು. ಆದರೆ ಈಗ ಶ್ರೀಮಂತ ಬಡವ ಬಲ್ಲಿದ ಎಂಬ ಬೇಧವಿಲ್ಲದೇ, ಎಲ್ಲರಿಗೂ ಒಂದೇ ಮತದ ಅಧಿಕಾರ ನೀಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ‘’ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ’ ಎಂದರು. ಆದರೆ ಇದರ ದುರುಪಯೋಗಪಡಿಸಿಕೊಂಡು, ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದ್ದು, ಇದನ್ನು ನಡೆಯದಂತೆ ನೋಡಿಕೊಳ್ಳಬೇಕಿದೆ. ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ದೇ ನಿರ್ವಹಿಸಲೇಬೇಕು.ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯವಾಗುತ್ತದೆ ಎಂದರು.

    ಸಹಿಷ್ಣುತೆ ಹಾಗೂ ಸಹಬಾಳ್ವೆ ಅವಶ್ಯ

    ನಮ್ಮ ಜಾತಿ ವ್ಯವಸ್ಥೆಗೆ ಚಲನೆಯಿಲ್ಲದೇ,ಸಮಾಜದಲ್ಲಿ ಆಳವಾಗಿ ಬೇರೂರಿದೆ.ಆರ್ಥಿಕ, ಸಾಮಾಜಿಕ ಸಮಾನತೆ ತರದೇ ಜಾತಿ ವ್ಯವಸ್ಥೇ ನಿರ್ಮೂಲಗೊಳಿಸಲು ಸಾಧ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗಮಾತ್ರ ಬದಲಾವಣೆ ಸಾಧ್ಯ. ಹಿಂದಿನಿಂದಿಲೂ ಮಹಿಳೆಯರು ಹಾಗೂ ಶೂದ್ರರು ಅಕ್ಷರ ಸಂಸ್ಕೃತಿ ಹಾಗೂ ಅವಕಾಶಗಳಿಂದ ವಂಚಿಕತರಾಗಿದ್ದ ಕಾರಣ, ಅಸಮಾನತೆ ತಲೆದೋರಿದೆ. ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಅಂಬೇಡ್ಕರ್ ಅವರು ಬೋಧಿಸಿದರು. ಸಮಾಜದಲ್ಲಿ ಬಹುಸಂಖ್ಯಾತರು ಎಚ್ಚರದಿಂದಿರಬೇಕು ಎಂದರು.

    ಪ್ರಜಾಪ್ರಭುತ್ವದಲ್ಲಿ ಎಲ್ಲಾ ಜಾತಿ, ಧರ್ಮವೂ ಸಮಾನ

    ಅಧಿಕಾರವನ್ನು ಉಳಿಸಿಕೊಳ್ಳಲು ಮತಗಳ್ಳತನದ ಹಾದಿಯನ್ನು ಹಿಡಿದಿದ್ದಾರೆ. ಆದ್ದರಿಂದ ನನ್ನ ಮತ ನನ್ನ ಹಕ್ಕು ಎಂಬುದು ಇಂತಹ ಸನ್ನಿವೇಶದಲ್ಲಿ ಪ್ರಮುಖವಾಗಿದ್ದು, ಮತಗಳ ದುರುಪಯೋಗವಾಗಬಾರದು. ಮತಗಳ್ಳತನಕ್ಕೆ ಅವಕಾಶ ನೀಡಬೇಡಿ. ಪ್ರಜಾಪ್ರಭುತ್ವ ಉಳಿಸಿ, ಹಕ್ಕುಗಳನ್ನು ರಕ್ಷಿಸುವ ಪ್ರಮಾಣವನ್ನು ಸ್ವೀಕರಿಸಲಾಗಿದೆ. ಸಂವಿಧಾನ ನೀಡುವ ಹಕ್ಕು ಹಾಗೂ ಕರ್ತವ್ಯಗಳ ಪಾಲನೆಯಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಜಾತಿ, ಧರ್ಮವೂ ಸಮಾನವಾಗಿದೆ. ಇಂತಹ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸವನ್ನು ಮನುವಾದಿಗಳು ಪ್ರಯತ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸಂವಿಧಾನ ವಿರೋಧಿಗಳು ಇದ್ದಾರೆ. ಅಸಮಾನತೆ ನಿವಾರಣೆಯಾದರೆ ಶೋಷಣೆ ಸಾಧ್ಯವಿಲ್ಲ.

    ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು

    ಸಾಹಿತಿ ಬಾನು ಮುಷ್ತಾಕ್ ಅವರು ಅನ್ಯಧರ್ಮದವರೆಂದು , ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಎಲ್ಲರೂ ರೂಢೀಸಿಕೊಳ್ಳಬೇಕು. ಜಾತಿಧರ್ಮ, ವರ್ಗವ್ಯವಸ್ಥೆಯನ್ನು ಮೀರಿ, ಸಮಾನತೆ ನೆಲೆಸಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಪಟ್ಟಭದ್ರಹಿತಾಸಕ್ತಿಗಳು, ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು. ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ. ಜನರನ್ನು ತಪ್ಪದಾರಿಗೆಳೆಯುವ ಪ್ರಯತ್ನಗಳು ಖಂಡನೀಯ. ಆರ್ಥಿಕ ಅಸಮಾನತೆ ನಿವಾರಣೆಗಾಗಿ ಗ್ಯಾರಂಟಿ ಯೋಜನೆಗಳ ಮೂಲಕ 98950 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

    ಸಂವಿಧಾನ ಆಶಯಗಳ ಅರಿವು ಅಗತ್ಯ

    ಸಂವಿಧಾನ ಆಶಯಗಳ ಅರಿವು ಎಲ್ಲರೂ ಹೊಂದಬೇಕೆಂಬ ದೃಷ್ಟಿಯಿಂದ ಸರ್ಕಾರ, ಎಲ್ಲ ಶಾಲೆಗಳಲ್ಲಿ ಸಂವಿಧಾನಪೀಠಿಕೆಯನ್ನು ಓದಲು ಕ್ರಮ ಕೈಗೊಳ್ಳಲಾಗಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಸಂವಿಧಾನದ ಬಗ್ಗೆ ಅರಿವಿಲ್ಲದೇ, ಅದರ ದುರುಪಯೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದರು.

    Don’t allow vote rigging – CM appeals to the people of the state

  • ಪ್ರತಿಭೆಯನ್ನು ಕಲಾವಿದರು ಅಂಜಿಕೆಯಿಲ್ಲದೆ ಪ್ರದರ್ಶಿಸಬೇಕು

    ಪ್ರತಿಭೆಯನ್ನು ಕಲಾವಿದರು ಅಂಜಿಕೆಯಿಲ್ಲದೆ ಪ್ರದರ್ಶಿಸಬೇಕು

    ಚಿಕ್ಕಮಗಳೂರು: ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಅಂಜಿಕೆಯಿಲ್ಲದೆ ಪ್ರದರ್ಶಿಸಬೇಕು. ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡು ಆತ್ಮಸ್ಥೈರ್ಯದಿಂದ ಮುಂದೆ ಬರಬೇಕು ಎಂದು ಮಿಸೆಸ್ ಇಂಡಿಯಾ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ಸಾಲಿಯಾನ್ ಹೇಳಿದರು.

    ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿ.ಕೆ.ರಘು ವಾಯ್ಸ್ ಆಫ್ ನೇಚರ್ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಬಹುತೇಕ ಕಲಾವಿದರಿಗೆ ಅವಕಾಶಗಳು ದೊರೆಯುವುದು ವಿರಳ. ಇಲ್ಲಿನ ವಾಯ್ಸ್ ಆಫ್ ನೇಚರ್ ಇಂತಹ ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಮಟ್ಟದ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷ. ದನಿಯಿದ್ದವರಿಗೆ ಇದೊಂದು ಸುವರ್ಣ ಅವಕಾಶ. ಇಲ್ಲಿ ಅರಳಿದ ಕಲಾವಿದರ ಪಯಣ ರಾಜ್ಯಮಟ್ಟದವರೆಗೂ ಸಾಗಲಿ ಎಂದು ಹಾರೈಸಿದರು.

    ಮೇಘಮಾಲೆ ಚಲನಚಿತ್ರದ ನಾಯಕ ನಟ ಸುನಾದ್ ರಾಜ್ ಮಾತನಾಡಿ, ತಮ್ಮಲ್ಲಿರುವ ಕಲೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ ನಮ್ಮ ಮನಸ್ಸು ಅರಳುತ್ತದೆ. ವೀಕ್ಷಕರಿಗೂ ಮುದ ನೀಡುತ್ತದೆ. ಸಂಗೀತ ಎಂತಹವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ ಎಂದರು.

    ಸಿನೆಮಾ ನಿರ್ದೇಶಕ ಅಶೋಕ್ ಕಡಬ ಮಾತನಾಡಿ, ಎಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅಂತಹ ಪ್ರತಿಭೆಯನ್ನು ಹೊರತರಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

    ಕಾರ್ಯಕ್ರಮದ ಆಯೋಜಕ ವಕೀಲ, ನೋಟರಿ, ಕಲಾವಿದ ವಿ.ಕೆ.ರಘು ಮಾತನಾಡಿ ಶುಭಹಾರೈಸಿದರು. ಬೆಂಗಳೂರು, ಮಂಗಳೂರು, ಕಾರವಾರ, ಮೈಸೂರು, ಹಾಸನ ಮತ್ತಿತರೆ ಜಿಲ್ಲೆಯಿದ ೧೦೦ ಕ್ಕೂ ಹೆಚ್ಚು ಕಲಾವಿದರು ಆಗಮಿಸಿದ್ದರು. ಮೂಡಿಗೆರೆ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾವಿದರ ತಂಡ ಜಾನಪದ ಗೀತಗಳ ಮೂಲಕ ಜನಮನ ಸೆಳೆಯಿತು.

    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಕಲಾವಿದ ಎ.ಎನ್.ಮೂರ್ತಿ, ಜಯರಾಂ ಮತ್ತಿತರರಿದ್ದರು. ಕಲಾವಿದರಾದ ಬಕ್ಕಿ ಮಂಜುನಾಥ, ಸ್ವಾಮಿ ಸೋಮಶೇಖರ, ಮೂರ್ತಿ, ಹರೀಶ್, ವಿರೂಪಾಕ್ಷ, ನಿರ್ಮಾಪಕ ಮಾದೇಶ್, ಸಿನೆಮಾ ಕೆಮೆರಾಮನ್ ಸಿದ್ದು, ಪ್ರತಿಭಾ ಸಾಲಿಯಾನ್ ಮತ್ತಿತರರನ್ನು ಗೌರವಿಸಲಾಯಿತು. ಮಾಗಡಿ ವಿರೂಪಾಕ್ಷ ನಿರೂಪಣೆ ಮಾಡಿದರು.

    Artists should display their talent without fear.
    .

  • ದೇಶಕ್ಕೆ ಯುವಜನರ ಪಾತ್ರ ಬಹುದೊಡ್ಡದು

    ದೇಶಕ್ಕೆ ಯುವಜನರ ಪಾತ್ರ ಬಹುದೊಡ್ಡದು

    ಚಿಕ್ಕಮಗಳೂರು:  ವಿದ್ಯಾರ್ಥಿ ಬದುಕು ಅತ್ಯಮೂಲ್ಯ. ಕಲಿಕೆಯ ವಯಸ್ಸಿನಲ್ಲಿ ದುಶ್ಚ ಟ, ವ್ಯಾಮೋಹಕ್ಕೆ ಬಲಿಯಾಗದೇ ಆರೋಗ್ಯಪೂರ್ಣ ಹವ್ಯಾಸಗಳನ್ನು ಅಳವಡಿಸಿಕೊಂಡು ನಿಗಧಿತ ಗುರಿ ಯೆಡೆಗೆ ಹೆಜ್ಜೆ ಹಾಕಬೇಕು ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಹೇಳಿದರು.

    ನಗರದ ಉಪ್ಪಳ್ಳಿ ಸಮೀಪದ ಜ್ಞಾನರಶ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ, ಶ್ರೀ ಶಕ್ತಿ ಮಧ್ಯಪಾನ ಸೇವಾನಿಗಳ ಸಮಗ್ರ ಪುನರ್ವಸತಿ ಕೇಂದ್ರ, ಸಹಯೋಗದೊಂದಿಗೆ ಆಯೋ ಜಿಸಿದ್ದ ‘ನಶ ಮುಕ್ತ ಭಾರತ ಅಭಿಯಾನ’ದ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ ದರು.

    ಭಾರತವನ್ನು ನಶೆ ಮುಕ್ತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬ ಯುವಜನರ ಪಾತ್ರ ಬಹುದೊಡ್ಡದು. ಸದೃಢ ದೇಹ ಇದ್ದರೆ ಮಾತ್ರ, ಸದೃಢದ ದೇಶ ಕಟ್ಟಲು ಸಾಧ್ಯ. ಮದ್ಯಪಾನ, ಧೂಮಪಾನ, ಗುಟ್ಕಾ, ಗಾಂ ಜಾ ಸೇವನೆ ಇನ್ನಿತರೆ ಪದಾರ್ಥಗಳಿಂದ ವಿದ್ಯಾರ್ಥಿಗಳು, ಯುವಜನರು ದೂರವಿರಬೇಕು ಎಂದು ಹೇಳಿ ದರು.

    ದುಶ್ಚಟಗಳಿಗೆ ಒಳಗಾಗಿರುವ ವ್ಯಕ್ತಿಯಿಂದ ಅವರ ಮಕ್ಕಳು ಹಾಗೂ ಕುಟುಂಬದ ಮೇಲೂ ಬಹಳ ಪರಿ ಣಾಮ ಬೀರುತ್ತದೆ. ಆದ್ದರಿಂದ ಅಂತಹ ವ್ಯಕ್ತಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದರ ಜೊತೆಗೆ ನೈತಿಕ ಮೌಲ್ಯಗಳ ನ್ನು ತಿಳಿಸುವ ಮೂಲಕ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

    ವೈದ್ಯ ಡಾ|| ಅನಿತ್‌ಕುಮಾರ್ ಮಾದಕ ಮಾತನಾಡಿ ತಂಬಾಕು, ಮದ್ಯಪಾನ ಹಾಗೂ ಇತರೆ ಮಾದಕ ವಸ್ತುಗಳ ಸೇವನೆಯಿಂದ ಗಂಟಲು, ಅನ್ನನಾಳ, ಹೊಟ್ಟೆ ಮತ್ತು ಯಕೃತ್ತಿನಂತಹ ಪ್ರಮುಖ ಅಂಗಗಳು ಹಾನಿ ಗೊಳಗಾಗುತ್ತವೆ. ಇದು ಕೇವಲ ಶಾರೀರಿಕ ಆರೋಗ್ಯವನ್ನು ಮಾತ್ರವಲ್ಲದೆ, ಮೆದುಳಿನ ಮೇಲೆ ಪರಿಣಾಮ ಬೀರಿ, ಜ್ಞಾಪಕ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎಂದು ಎಚ್ಚರಿಸಿದರು.

    ಶಾಲೆಯ ಕಾರ್ಯದರ್ಶಿ ಶ್ರೀ ನಂದಕುಮಾರ್ ಅವರು ಶಾಲೆಯಲ್ಲಿ ಇಂತಹ ದುಶ್ಚಟಗಳನ್ನು ತಡೆಗಟ್ಟಲು ಕೈಗೊಂಡಿರುವ ಶಿಸ್ತು ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ವೈಯಕ್ತಿಕ ಸಲಹೆಗಾರ ಶ್ರೀ ಶಶಿಧರ್ ವ್ಯಸನಮುಕ್ತ ಕೇಂದ್ರಗಳಲ್ಲಿ ವ್ಯಸನಿಗಳ ಮನಪರಿವರ್ತನೆ ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಡೆಸಲಾಗುವ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.

    ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ಜಾಗೃತಿ ಕುರಿತು ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ಯಾವುದೇ ಮಾದಕ ವಸ್ತುಗಳನ್ನು ಸೇವಿಸುವುದಿಲ್ಲವೆಂದು ಪ್ರತಿಜ್ಞಾವಿಧಿ ಸ್ವೀಕರಿಸಿ ದರು.

    ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಹೆಚ್.ಪಾಲಾಕ್ಷಮ್ಮ, ವ್ಯವಸ್ಥಾಪಕರಾದ ಹೆಚ್. ಮಂಜು ನಾಥ್ ಡಾ. ಕೆ.ಆರ್.ರಶ್ಮಿ, ಆಡಳಿತಾಧಿಕಾರಿ ಎನ್.ಪಿ.ಲಿಖಿತ್ ಉಪಸ್ಥಿತರಿದ್ದರು.

    The role of youth in the country is immense.

  • ಪ್ರಜಾಪ್ರಭುತ್ವ ವಿಶ್ವದ ಬಹು ದೊಡ್ಡ ಅಸ್ತ್ರ

    ಪ್ರಜಾಪ್ರಭುತ್ವ ವಿಶ್ವದ ಬಹು ದೊಡ್ಡ ಅಸ್ತ್ರ

    ಚಿಕ್ಕಮಗಳೂರು: :ಪ್ರಜೆಗಳೇ ಪ್ರಜೆಗಳಿಗಾಗಿ ಆಳ್ವಿಕೆ ಮಾಡಿಕೊಳ್ಳುವ ವ್ಯವಸ್ಥೆಯಾದ ಪ್ರಜಾಪ್ರಭುತ್ವವು ಇಡೀ ವಿಶ್ವದಲ್ಲಿ ಬಹು ದೊಡ್ಡ ಅಸ್ತ್ರ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಪ್ರತಿಪಾದಿಸಿದರು.

    ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ಸಸನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭಗೊಂಡ ಬೈಕ್ ಜಾಥಾಕ್ಕೆ ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳೊಂದಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

    ಪ್ರಪಂಚದ ೧೬೨ ದೇಶಗಳಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ನಾಳೆ ಆಚರಿಸಲಾಗುತ್ತದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಈ ದಿನವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ ರಾಜ್ಯದಲ್ಲೇ ಅತ್ಯಂತ ಅದ್ಧೂರಿಯಾಗಿ ಈ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯ ಸರ್ಕಾರವು ‘ನಮ್ಮ ಮತ ನಮ್ಮ ಹಕ್ಕು’ ಘೋಷಣೆಯಡಿ ಪ್ರಜಾಪ್ರಭುತ್ವವನ್ನು ಆಚರಿಸುವ ಮೂಲಕ ನಾವೆಲ್ಲರೂ ಒಟ್ಟಿಗೆ ಇರೋಣ. ಯದು ಅವರ ನೇತೃತ್ವದಲ್ಲಿ ಇಲ್ಲಿಂದ ತೆರಳಲಿರುವ ಬೈಕ್ ಜಾಥಾವು ಯಶಸ್ವಿಯಾಗಿ ಗುರಿ ತಲುಪಲಿ ಎಂದು ಹಾರೈಸಿದರು.

    ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ಪ್ರಜಾಪ್ರಭುತ್ವದ ಮಹತ್ವ ಹಾಗೂ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ನಡೆಸಲಾಗುತ್ತಿದ್ದು, ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.

    ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಂದ ತಲಾ ಹತ್ತು ಮಂದಿ ಬೈಕ್ ಸವಾರರು ಈ ಜಾಥಾದಲ್ಲಿ ಭಾಗವಹಿಸಲಿದ್ದು, ನಾಳೆ ಸೋಮವಾರ ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಜಿಲ್ಲೆಯಿಂದ ಕೂಡ ೧೦ ಮಂದಿ ಪ್ರತಿನಿಧಿಸಲಿದ್ದು, ಬೈಕ್ ಸವಾರರಿಗೆ ಜಿಲ್ಲಾಡಳಿತದಿಂದ ಶುಭ ಹಾರೈಸುವುದಾಗಿ ಅವರು ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ರಾಜ್ಯ ಸರ್ಕಾರ ಕಳೆದ ಬಾರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಬಾರಿ ಸಹ ಉತ್ತಮ ಕಾರ್ಯಕ್ರಮಗಳನ್ನು ನೀಡಿದೆ. ಬೈಕ್ ಜಾಥಾ, ಅದಾದ ಬಳಿಕ ನಾಳೆ ಸೈಕಲ್ ಜಾಥಾ, ಚಿತ್ರ ಬಿಡಿಸುವ ಸ್ಪರ್ಧೆ, ಛಾಯಾಗ್ರಹಣ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳನ್ನು ಸಾರ್ವಜನಿಕರನ್ನು ಒಳಗೊಂಡಂತೆ ನಡೆಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ ನುರಿತ ಬೈಕ್ ಸವಾರರು ಇದೀಗ ಜಾಥಾದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರಲ್ಲದೆ, ಅವರಿಗೆ ಶುಭ ಕೋರಿದರು.

    ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಲತಿ ಸ್ವಾಗತಿಸಿದರು. ಬೈಕ್ ಜಾಥಾವು ನಗರದಿಂದ ಹೊರಟು, ಹಿರೇಮಗಳೂರು ಸರ್ಕಲ್, ಬೇಲೂರು, ಹಾಸನ, ಕುಣಿಗಲ್ ಮಾರ್ಗವಾಗಿ ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ಅನ್ನು ನಾಳೆ ತಲುಪಲಿದೆ.

    Democracy is the world’s greatest weapon

  • ಜಿಲ್ಲಾ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ

    ಜಿಲ್ಲಾ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ

    ಚಿಕ್ಕಮಗಳೂರು: : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟೆಂಬರ್ ೧೭ ರಿಂದ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನ  ಆಕ್ಟೋಬರ್ ೨ ರವರೆಗೆ ಜಿಲ್ಲಾ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಹೇಳಿದರು.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಜಿಲ್ಲೆ ಹಾಗೂ ಮಂಡಲಗಳಲ್ಲಿ  ತಂಡ ರಚನೆಯಾಗಿದ್ದು ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಅಭಿಮಾನಿಗಳು ನಾಗರಿಕರನ್ನು ಒಳಗೊಂಡತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
    ಸ್ವಚ್ಛತಾ ಅಭಿಯಾನ, ಶಾಲೆ-ಶಾಲೇಜು, ಅಂಗನವಾಡಿ, ದೇವಾಲಯಗಳ ಆವರಣ, ಬಸ್ ಸ್ಟಾಂಡ್, ಆಸ್ಪತ್ರೆ, ಹಾಸ್ಟೆಲ್‌ಗಳು ಹಾಗೂ ಪಾರ್ಕ್‌ಗಳು ಹೀಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡುವ ಮೂಲಕ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದರು. ತಾಯಿಯ ಹೆಸರಿನಲ್ಲಿ ಸಸಿ ನೆಡುವುದು. ಸೆಪ್ಟೆಂಬರ್ ೨೫ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರವರ ಹಾಗೂ ಗಾಂಧೀಜಿ ಮತ್ತು ಮೋದಿಜೀ ಯವರ ಹೆಸರಿನಲ್ಲಿ ಸಸಿ ನೇಡಲಾಗುವುದು.
    ಮಂಡಲ ಹಾಗೂ ಜಿಲ್ಲಾ ಮಟ್ಟದಲ್ಲಿ ನರೇಂದ್ರ ಮೋದಿ ಅವರಿಗೆ ೭೫ ವರ್ಷ ತುಂಬಿದ ಈ ಸಂಧರ್ಭದಲ್ಲಿ ೭೫ ಯೂನಿಟ್‌ಗಿಂತನೂ ಹೆಚ್ಚು ರಕ್ತವನ್ನು ದಾನ ಮಾಡಲಾಗುವುದು. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪಕ್ಷದ ಕಡೆಯಿಂದ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದರು.
    ಎಲ್ಲಾ ಮಂಡಲ ಮತ್ತು ಜಿಲ್ಲೆಯಲ್ಲಿ ಮೋದಿಜೀಯವರ ಜೀವನ ಕುರಿತಾದ ಸಾಕ್ಷ್ಯಚಿತ್ರ ಹಾಗೂ ಪ್ರದರ್ಶಿನಿಯನ್ನು ಸಾರ್ವಜನಿಕ ಸ್ಥಳಗಳಲ್ಲೂ ಕೂಡ ಏರ್ಪಡಿಸಲಾಗುವುದು. ಜಿಲ್ಲೆಯ ಆಯ್ದ ಭಾಗಗಳಲ್ಲಿ ಬೌದ್ಧಿಕ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಜಿಲ್ಲೆಯ ವಿಶೇಷ ಚೇತನರು, ದಿವ್ಯಾಂಗರು ಮತ್ತು ಗೌರವಾನ್ವಿತರಿಗೆ ಮೋದಿಯವರ ಕುರಿತಾದ ಆಯ್ದ ಪುಸ್ತಕಗಳನ್ನು ವಿತರಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಗುವುದು.
    ವೋಕಲ್ ಫಾರ್ ಲೋಕಲ್ ಪ್ರಚಾರದ ಮೂಲಕ ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಸಣ್ಣ ಸಣ್ಣ ಕೈಗಾರಿಕೆಗಳ ಉತ್ಪನ್ನಗಳನ್ನು ಪ್ರಚಾರ  ಹಾಗೂ ಮಾರಾಟ ಮಾಡಿಸುವುದು. ವಿಶ್ವ ಕರ್ಮ ಯೋಜನೆಯಡಿಯಲ್ಲಿ ಕುಶಲಕರ್ಮಿಗಳು, ವೃತ್ತಿ ಪರರನ್ನು ಪ್ರೋತ್ಸಾಯಿಸುವುದು. ವಿಶೇಷವಾಗಿ ಮೋದಿ ವಿಕಾಸ್ ಮ್ಯಾರಥಾನ್, ವಿಕಸಿತ ಭಾರತ ಪರಿಕಲ್ಪನೆಯ ಚಿತ್ರ ಕಲಾ ಸ್ಪರ್ಧೆ ಹಾಗೂ ಸಂಸತ್ ಖೇಲ್ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
    ಗಾಂಧಿ ಜಯಂತಿ, ಲಾಲ್ ಬಹುದ್ದೂರ್ ಶಾಸ್ರ್ತಿಯವರ ಜಯಂತಿಯಂದು ಖಾದಿ ಗ್ರಾಮೋದ್ಯೋಗವನ್ನು ಪ್ರೋತ್ಸಾಯಿಸುವ ಮೂಲಕ ಖಾದಿ ಬಟ್ಟೆಗಳನ್ನು ಖರೀದಿಸುವುದು ಮತ್ತು ಸ್ವದೇಶಿ ವಸ್ತುಗಳನ್ನು ಬಳಸಲು ಪ್ರೇರೇಪಿಸುವ ಮೂಲಕ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಿಲ್ಲೆಯಾದ್ಯಂತ ನಡೆಸಲಾಗುವುದು ಎಂದರು.
    ಹಾಸನದದಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಅನಾಹುತದಲ್ಲಿ ಮೃತಪಟ್ಟವರಿಗೆ ಜಿಲ್ಲಾ ಬಿಜೆಪಿ ಸಂತಾಪ ಸೂಚಿಸುತ್ತದೆ. ಘಟನೆಗೆ ಅಲ್ಲಿನ ಪೊಲೀಸ್ ವೈಫಲ್ಯವೇ ಕಾರಣವಾಗಿದೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ನಗರಾಧ್ಯಕ್ಷ ಸಂತೊಷ್ ಕೋಟ್ಯಾನ್, ಮುಖಂಡರುಗಳಾದ ರವೀಂದ್ರ ಬೆಳವಾಡಿ, ಚಮಿನ್ ಇದ್ದರು.
    Service Fortnightly Program by District BJP
  • ಮಾನಸಿಕ ಸ್ವಾಸ್ಥ್ಯಬಲಪಡಿಸುವ ಪ್ರಯತ್ನಗಳಲ್ಲಿ ಕರ್ನಾಟಕ ಅಗ್ರ ಸ್ಥಾನ

    ಮಾನಸಿಕ ಸ್ವಾಸ್ಥ್ಯಬಲಪಡಿಸುವ ಪ್ರಯತ್ನಗಳಲ್ಲಿ ಕರ್ನಾಟಕ ಅಗ್ರ ಸ್ಥಾನ

    ಚಿಕ್ಕಮಗಳೂರು: ರಾಷ್ಟ್ರ ಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಬಲಪಡಿಸುವ ಎಲ್ಲಾ ಪ್ರಯತ್ನಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಿಮಾನ್ಸ್‌ನ ಮಾಜಿ ನಿರ್ದೇಶಕರು ಹಾಗೂ ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ ಮಾಜಿ ಆಧ್ಯಕ್ಷರೂ ಆದ ಡಾ. ಬಿ.ಎನ್.ಗಂಗಾಧರ್ ಹೇಳಿದರು.

    ಅವರು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಭಾರತೀಯ ಮನೋವೈದ್ಯರ ಸಂಘ ಕರ್ನಾಟಕ ಶಾಖೆ, ಚಿಕ್ಕಮಗಳೂರು ಮನೋವೈದ್ಯರ ಸಂಘ ಮತ್ತು ಮಾನಸಿಕ ಆರೋಗ್ಯ ವಿಭಾಗ ಹಾಗೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ರಾಜ್ಯಮಟ್ಟದ ಮಾನಸಿಕ ಆರೋಗ್ಯ ತಜ್ಞರ ೩೫ನೇ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

    ಮಾನಸಿಕ ಸ್ವಾಸ್ಥ್ಯ ಕಾಪಾಡುವ ಪ್ರಯತ್ನದ ಪ್ರಮುಖ ರೂವಾರಿಗಳು, ಅದರ ಚುಕ್ಕಾಣಿ ಹಿಡಿದ ಅನೇಕರು ಇಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಮಾನಸಿಕ ಆರೋಗ್ಯದ ಎನ್‌ಎಂಎಚ್‌ಬಿ ಜೊತೆಗೆ ಈಗ ಜಿಲ್ಲಾ ಮಟ್ಟದಲ್ಲಿ ಡಿಎಂಎಚ್‌ಬಿ ವ್ಯವಸ್ಥೆ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾವನ್ನು ಪ್ರಾರಂಭಿಸಿರುವ ಟೆಲಿ ಮಾನಸ್ ಪ್ರಾರಂಭಿಸಲಾಗಿದೆ. ಅದಕ್ಕೂ ಸಹ ಕರ್ನಾಟಕವೇ ಚುಕ್ಕಾಣಿ ಹಿಡಿದಿದೆ. ಎಲ್ಲ ವೈದ್ಯಕೀಯ ತಜ್ಞರೂ ಸಹ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

    ರಾಷ್ಟ್ರಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯದ ಧ್ವಜವನ್ನು ಎತ್ತಿ ಹಿಡಿಯಲು ಕರ್ನಾಟಕದ ದೊಡ್ಡ ಪಾಲುದಾರಿಕೆ ಇದೆ. ಆ ಹೊಣೆಗಾರಿಕೆ ಸಹ ನಮಗೆ ಮುಂದಿನ ದಿನಗಳಲ್ಲಿ ಇರಬೇಕು. ಕಳೆದ ೨೫-೩೦ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಹಾಗೂ ಅತ್ಯಂತ ವೈಜ್ಞಾನಿಕವಾಗಿ ಮುಂದೆ ಹೋಗಿರುವ ಮನೋವೈದ್ಯಕೀಯ ಪ್ರಾಂತದ ಶಾಖೆ ಎಂದರೆ ಅದು ಕರ್ನಾಟಕ ಎಂದು ಹೇಳಿದರು.

    ಕರ್ನಾಟಕ ಶಾಖೆಗೆ ಈಗಾಗಲೆ ಭಾರತೀಯ ಮನೋ ವೈದ್ಯಕೀಯ ಸಂಘದ ಮುಖೇನ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಎಲ್ಲರೂ ಒಟ್ಟಿಗೆ ಸೇರಿ, ಹೊಣೆಗಾರಿಕೆ ಅರಿತುಕೊಂಡು ಕೆಲಸ ಮಾಡಿರುವುದು ಇದಕ್ಕೆ ಕಾರಣವಾಗಿರುವುದು ಹೆಮ್ಮೆಯ ವಿಷಯ ಎಂದರು.

    ಬೆಂಗಳೂರು ಎಸ್‌ಜೆಐಸಿ ನಿವೃತ್ತ ಪ್ರಾಧ್ಯಾಪಕರು, ಹೆಸರಾಂತ ಹೃದ್ರೋಗ ತಜ್ಞರೂ ಆದ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಮಾತನಾಡಿ, ಕೃಷ್ಣಶಕ ೫೦೦೦ ವರ್ಷಗಳ ಹಿಂದೆಯೇ ಕೃಷ್ಣ ಪರಮಾತ್ಮ ಕೊಟ್ಟಂತಹ ಭಗವದ್ಗೀತೆಗಿಂತಲೂ ಅದ್ಭುತವಾದ ಮನೋತಜ್ಞ ಪುಸ್ತಕ ಮತ್ತೊಂದಿಲ್ಲ ಎಂದರು.

    ಭಗವದ್ಗೀತೆಗೂ ಮೊದಲು ಸ್ವತಃ ಶಿವ ತನ್ನ ಪತ್ನಿ ಪಾರ್ವತಿಗೆ ಸ್ಮೃತಿ ಹೋದಾಗ ಯೋಗ, ಧ್ಯಾನ, ಅಪಸ್ಮಾರವನ್ನು ಕಾಲಿನಲ್ಲಿ ನಿಯಂತ್ರಿಸಿ ನಟರಾಜನಾಗಿ ಅಜ್ಞಾನ, ಅಂಧಕಾರವನ್ನು ನಿಯಂತ್ರಿಸುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ಶಿವನಿಗೆ ವೈದ್ಯನಾಥೇಶ್ವರ, ಜ್ಯೋತಿರ್ಲಿಂಗ, ಪರಂಜ್ಯೋತಿ ಎನ್ನುತ್ತೇವೆ. ಆ ಮೂಲಕ ವಿಶ್ವಕ್ಕೆ ಪ್ರಥಮ ಮನೋರೋಗ ತಜ್ಞ ಎನಿಸಿಕೊಂಡಿದ್ದಾನೆ ಎಂದರು.

    ನಮ್ಮ ಸಮಾಜದಲ್ಲಿ ಆಗುತ್ತಿರುವ ಆತ್ಮಹತ್ಯೆ ಪ್ರವೃತ್ತಿಯನ್ನು ಕಡಿಮೆ ಮಾಡುವ ಕಡೆಗೆ ಎಲ್ಲ ತಜ್ಞರು ಗಂಭೀರವಾಗಿ ಗಮನಹರಿಸಬೇಕು. ಯುವಕರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೋರೊಗ ತಜ್ಞರು ಬರವಣಿಗೆ ಮೂಲಕ ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸಬೇಕು. ಪ್ರತಿ ತಿಂಗಳು ಕನಿಷ್ಠ ೧ ಗಂಟೆ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದರಿಂದ ಆತ್ಮಹತ್ಯೆ ಪ್ರವೃತ್ತಿ ಕಡಿಮೆ ಆಗುತ್ತದೆ ಎಂದರು.

    ದುರಂತ ಎಂದರೆ ನಿಮಾನ್ಸ್‌ನಲ್ಲಿ ಮಹಿಳಾ ವ್ಯಸನ ಮುಕ್ತ ವಾರ್ಡ್ ತೆರೆಯಲಾಗಿದೆ. ಅಲ್ಲಿ ಹಾಸಿಗೆಗಳು ಸಾಕಾಗದ ಸ್ಥಿತಿ ಇದೆ. ಇದು ದೇಶದ ಅತ್ಯಂತ ಕೆಟ್ಟ ಸಂಗತಿ. ಇಡೀ ಕುಟುಂಬವನ್ನು ಕಾಪಾಡಬೇಕಾದ ತಾಯಂದಿರೆ ಇಂತಹ ಹೀನ ಕೃತ್ಯಕ್ಕೆ ಹೋದರೆ ಬರೇ ಕುಟುಂಬವಲ್ಲ, ಇಡೀ ಸಮಾಜ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಇಡೀ ಸಂಘಟನೆಯು ಮಕ್ಕಳು, ಯುವಕರು ವ್ಯಸನಕ್ಕೆ ದಾಸರಾಗದಿರುವಂತೆ ತಡೆಯುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

    ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಡೀನ್ ಡಾ. ಎಂ.ಆರ್.ಹರೀಶ್, ಕರ್ನಾಟಕ ಭಾರತಿಯ ಮನೋವೈದ್ಯ ಸಂಘದ ಅಧ್ಯಕ್ಷ ಡಾ.ಸೋಮಶೇಖರ್ ಬಿಜ್ಜಳ್, ಡಾ. ಹರೀಶ್ ದೇಲಂತಬೆಟ್ಟು, ಡಾ. ಅನಿಲ್ ಕುಮಾರ್ ನಾಗರಾಜ್, ಡಾ. ಟಿಎಸ್. ಸತ್ಯನಾರಾಯಣ ರಾವ್, ಖಜಾಂಚಿ ಡಾ. ಚಂದ್ರಶೇಖರ್ ಸಹ ಕಾರ್ಯದರ್ಶಿ ಕೆ.ಎಸ್ ವಿನಯ್ ಕುಮಾರ್, ರವೀಂದ್ರ ಮುನೋಳಿ, ಡಾ. ಪವಿತ್ರ, ಡಾ. ವೆಂಕಟೇಶ್, ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು. ಚಿಕ್ಕಮಗಳೂರು ಮನೋವೈದ್ಯರ ಸಂಘದ ಸಂಘಟನಾ ಅಧ್ಯಕ್ಷ ಡಾ. ವೆಂಕಟೇಶ್ ಸ್ವಾಗತಿಸಿ ಡಾ. ಲೋಕೇಶ್ ಬಾಬು ವಂದಿಸಿದರು,

    Karnataka tops efforts to strengthen mental health