Category: ಚಿಕ್ಕಮಗಳೂರು

  • ರಾಜ್ಯದಲ್ಲಿ ಅನರ್ಹ 3.65 ಲಕ್ಷ ಕಾರ್ಡ್‌ ರದ್ದು

    ರಾಜ್ಯದಲ್ಲಿ ಅನರ್ಹ 3.65 ಲಕ್ಷ ಕಾರ್ಡ್‌ ರದ್ದು

    ಬೆಂಗಳೂರು:  ರಾಜ್ಯದಲ್ಲಿ ಅನರ್ಹರಿಗೆ ನೀಡಲಾಗಿದ್ದ ಬಿಪಿಎಲ್‌ ಪಡಿತರ ಕಾರ್ಡ್‌ಗಳ ಪೈಕಿ 3.65 ಲಕ್ಷ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

    ಅವರು ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತನಾಡಿ  ಇನ್ನೂ ಸಾಕಷ್ಟು ಮಂದಿ ಅನರ್ಹರು ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ್ದು, ಅವುಗಳನ್ನೂ ರದ್ದುಪಡಿಸಿ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ‘ಈ ಕಾರ್ಯಾ ಚರಣೆಯಲ್ಲಿ ಅರ್ಹರಿಗೆ ಯಾವುದೇ ತೊಂದರೆ ಆಗಬಾರದು. ಒಬ್ಬ ಅರ್ಹ ವ್ಯಕ್ತಿಯ ಬಿಪಿಎಲ್‌ ಕಾರ್ಡ್‌ ಸಹ ರದ್ದಾಗಬಾರದು. ಅರ್ಹರಿಗೆ ಈವರೆಗೆ ಬಿಪಿಎಲ್‌ ಕಾರ್ಡ್‌ ನೀಡಿಲ್ಲದೇ ಇದ್ದರೆ, ವಿತರಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳ ಬೇಕು’ ಎಂದು ತಾಕೀತು ಮಾಡಿದರು.

    ‘ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು. ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತಿರುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್‌ಗಳನ್ನು ಅಳವಡಿಸಬೇಕು. ರಾಜ್ಯದಲ್ಲಿರುವ ಎಲ್ಲಾ ಗೋದಾಮುಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಿದ್ದರಾಮಯ್ಯ ಸೂಚಿಸಿದರು.

    ‘ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿಯ ಜತೆಗೆ ಪೌಷ್ಟಿಕ ಧಾನ್ಯ, ಅಗತ್ಯ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ ಒದಗಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಿ’ ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

    ‘ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮದ ಅಡಿಯಲ್ಲಿ, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಮತ್ತು ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಆಹಾರ ಧಾನ್ಯಗಳನ್ನು ಖರೀದಿಸಬೇಕು’ ಎಂದಿದ್ದಾರೆ.

    3.65 lakh ineligible cards cancelled in the state

  • ನಾನಾ ಕಾರಣಗಳಿಂದ ಆತ್ಮಹತ್ಯೆ ಮನಸ್ಥಿತಿ ಬದಲಾಗಬೇಕು

    ನಾನಾ ಕಾರಣಗಳಿಂದ ಆತ್ಮಹತ್ಯೆ ಮನಸ್ಥಿತಿ ಬದಲಾಗಬೇಕು

    ಚಿಕ್ಕಮಗಳೂರು:  ಮಾನಸಿಕ ಮತ್ತು ಮಾದಕ ವ್ಯಸನಿಗಳು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಇದು ಬದಲಾಗುವ ಮನಸ್ಥಿತಿ ಬರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ ಹೇಳಿದರು.

    ಅವರು ಇಂದು ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ, ವಾರ್ತಾ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಯುವ ರೆಡ್‌ಕ್ರಾಸ್ ಘಟಕ, ಐಡಿಎಸ್‌ಜಿ ಸರ್ಕಾರಿ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ-೨೦೨೫’ ನ್ನು ಉದ್ಘಾಟಿಸಿ ಮಾತನಾಡಿದರು.

    ಜೀವನ ಜಿಗುಪ್ಸೆಯಾದಾಗ, ಜೂಜಿನಲ್ಲಿ ಹಣ ಕಳೆದುಕೊಂಡಾಗ, ಪ್ರೀತಿಸಿದವರು ಕೈಕೊಟ್ಟಾಗ ಬೇಸರ, ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ದುಃಖಿತರಾಗಿ ಆತ್ಮಹತ್ಯೆ ಆಲೋಚನೆಗಳು ಮೂಡುತ್ತವೆ. ಇಂತಹ ಸಂದರ್ಭದಲ್ಲಿ ಕಾನೂನು ಮತ್ತು ಆರೋಗ್ಯ ಇಲಾಖೆ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ ಎಂದರು.

    ಕಾನೂನು ಸೇವಾ ಪ್ರಾಧಿಕಾರ ಈ ರೀತಿಯ ಪ್ರಕರಣಗಳ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಮನಃಪರಿವರ್ತನೆ ಮಾಡುವ ಉದ್ದೇಶ ಹೊಂದಿದೆ. ಮಾನಸಿಕ ವ್ಯಕ್ತಿಗಳನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಯೋಜನೆಯೂ ಇದರಲ್ಲಿದೆ ಎಂದು ಹೇಳಿದರು.

    ಮಾನಸಿಕ ವೇದನೆ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಅವರ ಕುಟುಂಬಗಳೇ ಸ್ಪಂದಿಸುತ್ತಿಲ್ಲದಿರುವುದು ಇದಕ್ಕೆ ಕಾರಣ. ಇನ್ನಾದರೂ ಸಂಬಂಧಪಟ್ಟವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಅವರು ನಮ್ಮಂತೆ ಸಮಾನರು ಎಂದು ಅವರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.

    ದೇಶದಲ್ಲಿ ನಾನಾ ಕಾರಣಗಳಿಂದ ವಾರ್ಷಿಕ ಒಂದು ಲಕ್ಷಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ವರ ಪ್ರಯತ್ನದ ಅವಶ್ಯಕತೆ ಇದೆ ಎಂದು ಹೇಳಿದರು.

    ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರು ಕಂಡಾಗ ಸಹಾಯವಾಣಿ ಸಂಖ್ಯೆ-೧೫೧೦೦ ಗೆ ದೂರವಾಣಿ ಕರೆಮಾಡಿ ತಿಳಿಸಬಹುದಾಗಿದ್ದು, ಕಾನೂನು ಸಮಸ್ಯೆಗೆ ಸಂಬಂಧಿಸಿದ ಈ ದೂರವಾಣಿ ಸಂಖ್ಯೆ ದಿನದ ೨೪ ಗಂಟೆ ಮುಕ್ತವಾಗಿರುತ್ತದೆ ಎಂದರು.

    ಮಕ್ಕಳ ಸಹಾಯವಾಣಿ ಸಂಖ್ಯೆ-೧೦೫೮ ಹಾಗೂ ಮಹಿಳೆಯರು ೧೧೨ ಗೆ ಕರೆಮಾಡಿ ತೊಂದರೆಯಲ್ಲಿರುವ ಬಗ್ಗೆ ಖಚಿತಪಡಿಸಬೇಕೆಂದು ವಿನಂತಿಸಿದರು.
    ೧೫ ವರ್ಷಕ್ಕಿಂತ ಕಡಿಮೆ ಇರುವ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವಾದರೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ಅವಕಾಶವಿದ್ದು, ಯುವಕರು ಬಾಲಕಿಯರನ್ನು ಪ್ರೀತಿ ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಹೈಟೆನ್ಸನ್ ವೈರ್ ಹಿಡಿದಂತೆ ಎಂದು ಎಚ್ಚರಿಸಿದರು.

    ಡಾ. ವಿನಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೆ.೧೦ ನೇ ದಿನದಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು, ನಾನಾ ಕಾರಣಗಳಿಂದ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಪ್ರತೀ ವರ್ಷ ಜೀವನ ಜಿಗುಪ್ಸೆ, ಮಾದಕ ವ್ಯಸನ ಮುಂತಾದ ಕಾರಣಗಳಿಂದಾಗಿ ೧.೬೩ ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದನ್ನು ತಡೆಯಲು ೧೪೪೧೬ ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಡಾ. ಶಶಿಕಲಾ, ಡಾ. ಮಂಜುನಾಥ್, ಡಾ. ಬಾಲಕೃಷ್ಣ, ಡಾ. ಸೀಮಾ ಮತ್ತಿತರರು ಭಾಗವಹಿಸಿದ್ದರು. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಚಿಕಿತ್ಸಾ ಮನೋಶಾಸ್ತ್ರಜ್ಞ ಹೆಚ್.ಪಿ ಸತೀಶ್ ಉಪನ್ಯಾಸ ನೀಡಿದರು.

    ಅಧ್ಯಕ್ಷತೆಯನ್ನು ಐಡಿಎಸ್‌ಜಿ ಕಾಲೇಜು ಪ್ರಾಂಶುಪಾಲರಾದ ತಸ್ನಿಮ ಕೌಸರ್ ವಹಿಸಿದ್ದರು. ಮೊದಲಿಗೆ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ. ಎಂ.ಲೋಕೇಶ್ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ವಂದಿಸಿದರು. ಡಿಹೆಚ್‌ಇಓ ಲಲಿತಾ ನಿರೂಪಿಸಿದರು.

    Suicide mindset needs to change for various reasons

  • ರಾಜ್ಯದಲ್ಲಿ ಕಿರು ಆಹಾರ ಸಂಸ್ಕರಣೆಯ 5000 ಘಟಕಗಳ ಗುರಿ

    ರಾಜ್ಯದಲ್ಲಿ ಕಿರು ಆಹಾರ ಸಂಸ್ಕರಣೆಯ 5000 ಘಟಕಗಳ ಗುರಿ

    ಚಿಕ್ಕಮಗಳೂರು: ಈ ವರ್ಷ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಐದು ಸಾವಿರ ಘಟಕಗಳು ರಾಜ್ಯದಲ್ಲಿ ರೂಪುಗೊಳ್ಳಬೇಕೆಂಬ ಗುರಿಯನ್ನು ಹೊಂದಿರುವುದಾಗಿ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.

    ಕೇಂದ್ರದ ಆಹಾರ ಸಂಸ್ಕರಣಾ ಸಚಿವಾಲಯ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ರಫ್ತು ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಇಂದು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕಳೆದ ಐದು ವರ್ಷಗಳಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಆರು ಸಾವಿರ ಘಟಕಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಆದರೆ ರಾಜ್ಯ ಸರ್ಕಾರ ಈ ಒಂದೇ ವರ್ಷದಲ್ಲಿ ಹೆಚ್ಚುವರಿಯಾಗಿ ೫ ಸಾವಿರ ಘಟಕಗಳ ಗುರಿಯನ್ನು ಹೊಂದಿದೆ. ನಮ್ಮದು ಶೇ. ೬೦ ರಿಂದ ೭೦ ರಷ್ಟು ಕೃಷಿ ಪ್ರಧಾನವಾದ ರಾಷ್ಟ್ರ. ಈ ಕಾರಣಕ್ಕಾಗಿಯೇ ಈ ಘಟಕಗಳ ಆರಂಭಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಈ ಯೋಜನೆಗೆ ಇಡೀ ರಾಷ್ಟ್ರದಲ್ಲಿ ಕೇಂದ್ರದಿಂದ ಶೇ.೬೦ ಹಾಗೂ ರಾಜ್ಯದಿಂದ ಶೇ.೪೦ ರಷ್ಟು ಪಾಲನ್ನು ನೀಡುತ್ತಿದ್ದರೆ, ನಮ್ಮ ರಾಜ್ಯದಲ್ಲಿ ಮಾತ್ರ ಕೇಂದ್ರ ಸರ್ಕಾರದಿಂದ ಶೇ.೪೦ ಹಾಗೂ ರಾಜ್ಯ ಸರ್ಕಾರದಿಂದ ಶೇ.೬೦ ರಷ್ಟು ಪಾಲನ್ನು ನೀಡಲಾಗುತ್ತಿದೆ. ಕೃಷಿಕರಿಗೆ ಈ ಸರ್ಕಾರ ಎಷ್ಟು ಮನ್ನಣೆ ನೀಡುತ್ತಿದೆ ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು ಎಂದರು.

    ರಾಜ್ಯದಲ್ಲಿ ಘಟಕ ಆರಂಭಿಸಲು ಈಗಾಗಲೇ ೫ ಸಾವಿರ ಅರ್ಜಿಗಳು ಬಂದಿದ್ದರೆ, ಈ ಜಿಲ್ಲೆಯಲ್ಲಿ ೩೫೬ ಅರ್ಜಿಗಳು ಬಂದಿವೆ. ಹೊಸ ಘಟಕಗಳನ್ನು ಸ್ಥಾಪಿಸಲು ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ಅನ್ವಯಿಸುವುದಿಲ್ಲ. ಬ್ಯಾಂಕ್‌ಗಳು ಜಾಮೀನು ರಹಿತವಾಗಿ ಹೊಸ ಉದ್ದಿಮೆ ಸ್ಥಾಪಿಸುವ ಕೃಷಿಕರಿಗೆ ಸಾಲ ಒದಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಬ್ಯಾಂಕರ್‍ಸ್‌ಗಳ ಸಭೆ ಕರೆದು ಸೂಕ್ತ ಸೂಚನೆ ನೀಡುವಂತೆ ತಿಳಿಸುವುದಾಗಿ ಹೇಳಿದರು.

    ಬದುಕಿಗೋಸ್ಕರ ಶಿಕ್ಷಣ ಪಡೆಯುವುದಾಗಬಾರದು. ಶಿಕ್ಷಣ ಜ್ಞಾನ ಸಂಪಾದನೆಗಾಗಿ ಮತ್ತು ಇಂದಿನ ವಿದ್ಯಮಾನಗಳನ್ನರಿತು ವಿಚಾರ ವಿನಿಮಯ ಮಾಡಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿ ಜೀವನ ಮುಗಿದ ಬಳಿಕ ಕಂಪನಿಗಳು, ಸಚಿವರು, ಶಾಸಕರ ಮನೆಯ ಕದ ತಟ್ಟುವುದು ಸೂಕ್ತವಲ್ಲ. ಕೃಷಿ ಆಧಾರಿತ ಉದ್ಯಮವನ್ನು ಅವಲಂಬಿಸಿದರೆ ಆರ್ಥಿಕವಾಗಿ ಸದೃಢರಾಗಬಹುದು. ಇತರರಿಗೂ ಉದ್ಯೋಗಾವಕಾಶವನ್ನು ಕಲ್ಪಿಸಬಹುದು ಎಂದು ತಿಳಿಸಿದರು.

    ಮಹಿಳೆಯರಿಗೆ, ಕೃಷಿಕರಿಗೆ ಬಡ್ಡಿ ಇಲ್ಲದ ಸಾಲ ನೀಡಲಾಗುತ್ತಿದೆ. ಆದರೆ ಈ ಬಡ್ಡಿಯನ್ನು ನಮ್ಮ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಭರಿಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆ ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ನೀಡುವ ಕಾರ್ಯಕ್ರಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಮತ್ತಿತರ ಇಲಾಖೆಗಳ ಕಾರ್ಯಕ್ರಮವನ್ನು ಹೆಚ್ಚು ಮಾಡಿದ್ದೇವೆಯೇ ಹೊರತು ನಿಲ್ಲಿಸಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆಯಾಗದಂತೆ ನೋಡಿಕೊಂಡು ಎರಡು ವರ್ಷದಲ್ಲಿ ಗ್ಯಾರಂಟಿ ಯೋಜನೆಗೆ ೯೦ ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

    ಕ್ರೆಡಿಲ್ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಹೆಚ್.ಡಿ.ತಮ್ಮಯ್ಯ, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್ ಮಾತನಾಡಿದರು. ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಹಾಪ್‌ಕಾಮ್ಸ್ ಅಧ್ಯಕ್ಷ ಕುಮಾರಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕಿ ಹೆಚ್.ಎಲ್.ಸುಜಾತ ಸ್ವಾಗತಿಸಿದರು.

    Target of 5000 small food processing units in the state

  • ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಿಂದ ಯಾವ ಕುಟುಂಬವು ಹೊರಗುಳಿಯಬಾರದು

    ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಿಂದ ಯಾವ ಕುಟುಂಬವು ಹೊರಗುಳಿಯಬಾರದು

    ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಯಾವ ಕುಟುಂಬವು ಹೊರಗುಳಿಯದಂತೆ ನಿಗಾವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಹೇಳಿದರು.

    ಇಂದು ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ೨೦೨೫-೨೬ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕುರಿತ ಜಿಲ್ಲಾ ಮಟ್ಟದ ಸಂಘ ಸಂಸ್ಥೆಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಮ್ಮ ಜಿಲ್ಲೆಯಲ್ಲಿ ವಲಸೆಗಾರರು, ಪಡಿತರ ಚೀಟಿ ಇಲ್ಲದವರು, ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಯಾವುದೇ ಕುಟುಂಬದವರಿದ್ದರೂ ಅಂತವರೂ ಕೂಡ ಸಮೀಕ್ಷೆಗೆ ಒಳಪಡಲಿದ್ದಾರೆ. ಆಧಾರ ಕಾರ್ಡ್ ಹೊಂದಿದ್ದ ಬೇರೆ ರಾಜ್ಯ ಬೇರೆ ಜಿಲ್ಲೆಯ ಕುಟುಂಬದವರು ನಮ್ಮ ಜಿಲ್ಲೆಯಲ್ಲಿ ವಾಸಿಸುತ್ತಿದ್ದರೆ ಅಂತವರನ್ನು ಸಮೀಕ್ಷೆಗೆ ಒಳಪಡಿಸಿ ಅವರು ಈ ಮನೆಯಲ್ಲಿ ವಾಸವಿರುವ ಬಗ್ಗೆ ಗುರುತಿಸಲಾಗುತ್ತದೆ ಎಂದ ಅವರು ಮನೆ-ಮನೆ ಸಮೀಕ್ಷೆಯನ್ನು ಸೆಪ್ಟೆಂಬರ್ ೨೨ ರಿಂದ ಪ್ರಾರಂಭವಾಗಿ ಆಕ್ಟೋಬರ್ ೭ ರವೆರೆಗ ನಡೆಯುತ್ತದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಸಮೀಕ್ಷೆಗೆ ಒಳಪಡುವ ವಿದ್ಯುತ್ ಮೀಟರ್‌ನ ಆರ್.ಆರ್ ಸಂಖ್ಯೆ ಇರುವ ೩,೩೧,೭೪೦ ಕುಟುಂಬಗಳಿದ್ದು, ೨,೬೬೮ಸಮೀಕ್ಷೆದಾರರು ಸಮೀಕ್ಷ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಮೊಬೈಲ್ ಆಪ್ ಮುಖಾಂತರ ಸಮೀಕ್ಷೆಯ ದತ್ತಾಂಶಗಳನ್ನು ಸಂಗ್ರಹಿಸಲಾಗುವುದು ಹಾಗೂ ಪ್ರಾಶ್ನವಳಿ ಸುಮಾರು ೬೦ ಪ್ರಶ್ನೆಗಳಿರುತ್ತದೆ ಎಂದು ಹೇಳಿದರು.

    ಈಗಾಗಲೇ ಮೆಸ್ಕಾಂ ವತಿಯಿಂದ ಪ್ರತಿ ಕುಟುಂಬಕ್ಕೆ UಊIಆ (Uಟಿique ಊousehoಟಜ Iಆ) ನಂಬರನ್ನು ಸೃಜಿಸಿ ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸಲಾಗಿದೆ ಮತ್ತು ಇದನ್ನು ಉeo ಣಚಿg ಮಾಡಲಾಗುತ್ತಿದೆ. ಒಂದು ವೇಳೆ UಊIಆ ಸ್ಪೀಕರ್ ನ್ನು ಯಾವುದೇ ಮನೆಗೆ ಅಂಟಿಸಿಲ್ಲವಾದಲ್ಲಿ ಕೂಡ UಊIಆ ಯನ್ನು ಸೃಜಿಸಿಕೊಂಡು ಗಣತಿದಾರರು ಸಮೀಕ್ಷೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕವಿಲ್ಲದೆ ಇರುವ ಮನೆಗಳ ವಿವರವನ್ನು ನೀಡಲು ತಿಳಿಸಲಾಗಿದೆ. ಈ ಮನೆಗಳನ್ನು ಸಹ ಗಿಂ / Pಆಔ ಗಳ ಮೂಲಕ ಉeo ಣಚಿg ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.

    ಇಂಟರ್ ನೆಟ್ ಸೌಲಭ್ಯ ಇಲ್ಲದೇ ಇರುವ ಪ್ರದೇಶಗಳಲ್ಲಿ ಸರ್ಕಾರ ಗುರುತಿಸುವ ಸರ್ಕಾರಿ ಕಟ್ಟಡಗಳಲ್ಲಿ ಸಮೀಕ್ಷೆ ಕಾರ್ಯವನ್ನು ನಡೆಸಲಾಗುವುದು. ಅಂತಹ ಸ್ಥಳಗಳಿಗೆ ಕುಟುಂಬದ ಮಾಹಿತಿದಾರರೊಬ್ಬರನ್ನು ಮಾಹಿತಿಯೊಂದಿಗೆ ಕರೆ ತರಲಾಗುವುದು ಎಂದ ಅವರು ಸಮೀಕ್ಷೆಗೆ ದಸರಾ ರಜೆ ಇರುವುದರಿಂದ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದ ಅವರು ಶಿಕ್ಷಕರು ಕೆಲಸ ಮಾಡುವ ಗ್ರಾಮ / ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳು ಕ್ರಮ ವಹಿಸಲಾಗುವುದು ಎಂದರು.

    ಸಮೀಕ್ಷೆದರಾದ ಶಿಕ್ಷಕರಿಗೆ ೧೫೦ ಮನೆಗಳನ್ನು ನಿಗಧಿ ಪಡಿಸಲಾಗುತ್ತದೆ. ಮಲ್ನಾಡು ಭಾಗದಲ್ಲಿ ಮನೆಗಳೂ ದೂರ-ದೂರ ವಿರುವುದರಿಂದ ಒಬ್ಬರಿಗೆ ೧೦೦ ಮನೆಗಳನ್ನು ನಿಗಧಿಪಡಿಸಿ ಸಮೀಕ್ಷೆ ಮಾಡಲಾಗುತ್ತದೆ. ಪ್ರತಿ ೫೦ ಶಿಕ್ಷಕರಿಗೆ ಒಬ್ಬರು ತರಬೇತಿದಾರರಿರುತ್ತಾರೆ ಪ್ರತಿ ೨೦ ಶಿಕ್ಷಕರಿಗೆ ಒಬ್ಬರು ಮೇಲ್ವಿಚಾರಕರಿರುತ್ತಾರೆ ೫೦ ಮೇಲ್ವಿಚಾರಕರಿಗೆ ಒಬ್ಬ ಮಾಸ್ಟರ್ ತರಬೇತಿದಾರರಿರುತ್ತಾರೆ ಎಂದು ಹೇಳಿದರು.

    ಮನೆ-ಮನೆಗೆ ಹೋಗಿ ಈ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸುವಂತೆ ಮತ್ತು ಅವರಿಗೆ ಯಾವ ರೀತಿ ಪ್ರಶ್ನೆಗಳಿರುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿ ಸಮೀಕ್ಷಗೆ ಬಂದವರಿಗೆ ಸುಲಭವಾಗುವಂತೆ ಮಾಡಲು ಈ ಸಮೀಕ್ಷೆಗೆ ಎನ್ ಎಸ್ ಎಸ್ ವಿದ್ಯಾರ್ಥಿಗಳು ಪಾಲ್ಗೋಳ್ಳುತ್ತಾರೆ ಎಂದು ತಿಳಿಸಿದರು. ಗ್ರಾಮ ಆಡಳಿತಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಆರ್ ಆರ್ ನಂಬರ್ ಹೊಂದಿಲ್ಲದೇ ಇರುವ (ವಿದ್ಯುತ್‌ಚ್ಛಕ್ತಿ ಸಂಪರ್ಕವಿಲ್ಲದಿರುವ ಮನೆಗಳನ್ನು ಪಟ್ಟಿ ಮಾಡಿ, ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಜೊತೆಗೆ ಜಿಯೋ-ಟ್ಯಾಗಿಂಗ್ ಮಾಡುವ ಕಾರ್ಯವು ಈಗಾಗಲೇ ಪ್ರಾರಂಭವಾಗಿರುತ್ತದೆ.

    ಮನೆಯ ಮುಖ್ಯ ದ್ವಾರದಲ್ಲಿ ಅಂಟಿಸಿರುವ ಸ್ಪೀಕರ್‌ಗಳನ್ನು ಸಾರ್ವಜನಿಕರು ಗಣತಿ ಕಾರ್ಯ ಮುಗಿಯುವವರೆಗೂ ಗೀಚುವುದಾಗಲಿ, ಕಿತ್ತುಹಾಕುವುದಾಗಲಿ ಮಾಡಬಾರದು ಜೊತಗೆ ಇದು ನಮ್ಮದೆ ಸಮೀಕ್ಷೆ ನಾವೆಲ್ಲರೂ ಜವಾಬ್ದಾರಿಯೊಂದಿಗೆ ಪಾಲ್ಗೊಂಡು ಸಮೀಕ್ಷೆಗೆ ಬರುವ ಶಿಕ್ಷಕರಿಗೆ ತಮ್ಮ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಕೋರಿದರು.

    ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್ ಕೀರ್ತನಾ ಮಾತನಾಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಗುಣಮಟ್ಟದ ಡೇಟಾ ತುಂಬಾ ಮುಖ್ಯವಾಗಿದೆ. ಮುಂದಿನ ದಿನದಲ್ಲಿ ಈ ಡೇಟಾಗಳು ಬೇರೆ-ಬೇರೆ ವಿಷಯಗಳಿಗೆ ಬುನಾದಿಯಾಗುವುದರಿಂದ ಮುಂಖಡರು ತಮ್ಮ ವ್ಯಾಪ್ತಿಯ ಜನರಿಗೆ ಈ ಸಮೀಕ್ಷೆ ಬಗ್ಗೆ ಅರಿವು ಮೂಡಿಸಬೇಕು ೬೦ ಪ್ರಶ್ನೆಗಳಿರುತ್ತದೆ ಅದರ ಬಗ್ಗೆ ಮೊದಲೇ ಉತ್ತರಗಳನ್ನು ಸಿದ್ದಪಡಿಸಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.

    ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ೬೩೬೧೭-೮೯೫೭೯ ಈ ನಂಬರ್ ವಾಟ್ಸಪ್ ಮುಖಾಂತರ ಊi ಎಂದು ಸಂದೇಶವನ್ನು ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು. ಈಗಾಗಲೇ ಗ್ರಾಮ ಪಂಚಾಯಿತಿ ಹಾಗು ನಗರಗಳಲ್ಲಿ ಸ್ವಚ್ಚವಾಹಿನಿ ಆಟೋಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.
    ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಯ ಕಾಂತರಾಜ್ ಸಮೀಕ್ಷೆ ಕುರಿತು ಮಾತನಾಡಿದರು.

    ಸಭೆಯಲ್ಲಿ ಸಮಾಜ ಕಲ್ಯಾ ಇಲಾಖೆ ಉಪನಿರ್ದೆಶಕಿ ಮಾಲತಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು.

    Which family should not be left out of the socio-educational survey?

  • ಜನರ ಬದುಕು-ಜನಪರ ಕಾರ್ಯಕ್ರಮಗಳ ಆಧಾರದಲ್ಲಿ ಮತ ಕೇಳುತ್ತೇವೆ

    ಜನರ ಬದುಕು-ಜನಪರ ಕಾರ್ಯಕ್ರಮಗಳ ಆಧಾರದಲ್ಲಿ ಮತ ಕೇಳುತ್ತೇವೆ

    ಚಿಕ್ಕಮಗಳೂರು: ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಮತ ಕೇಳುವವರು ನಾವಲ್ಲ, ಜನರ ಬದುಕು, ಜನಪರ ಕಾರ್ಯಕ್ರಮಗಳ ಆಧಾರದಲ್ಲಿ ಮತ ಕೇಳುತ್ತೇವೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ಮೇದರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಕ್ಷೇತ್ರದ ಈಶ್ವರಹಳ್ಳಿ ಗ್ರಾಮದಿಂದ ನೂತನವಾಗಿ ಕಂದಾಯ ಗ್ರಾಮವನ್ನಾಗಿ ರಚಿಸಿರುವ ಮೇದರಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಇ-ಸ್ವತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಒಳ್ಳೆಯ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಬದುಕು ನೀಡುವುದನ್ನು ಗುರಿಯಾಗಿಸಿಕೊಂಡ ರಾಜ್ಯಸರ್ಕಾರ, ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಜನಪರ ಆಡಳಿತ ನಡೆಸುವ ಮೂಲಕ ಜನಪ್ರತಿನಿಧಿಗಳ ಕರ್ತವ್ಯವನ್ನು ನೆನಪಿಸಿದೆ ಎಂದರು.

    ತಮ್ಮ ಅಧಿಕಾರವಧಿಯಲ್ಲಿ ಕಾನೂನು ಬಾಹಿರ ಕೆಲಸವನ್ನು ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಬಡಜನರ ಪರವಾದ ಕೆಲಸ ಮಾಡುವುದಾಗಿ ಭರವಸೆ ನೀಡಿದರಲ್ಲದೆ, ಎತ್ತಿನ ಹೊಳೆ ಯೋಜನೆಯಿಂದಾಗಿ ಕ್ಷೇತ್ರದ ಬೆಳವಾಡಿ, ದೇವನೂರು ಕೆರೆಗಳು ಭರ್ತಿಯಾಗಿವೆ ಎಂದು ತಿಳಿಸಿದರು.

    ಜನಪರವಾದ ಕೆಲಸಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಸಹಿಸದ ಕೆಲವರು ಹೊಟ್ಟೆಕಿಚ್ಚುಪಟ್ಟುಕೊಳ್ಳುತ್ತಿದ್ದಾರೆ. ಇದಕ್ಕೆ ಔಷಧಿ ಇಲ್ಲ ಎಂದು ಮಾರ್ಮಿಕವಾಗಿ ನುಡಿದು ಅಂತಹವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

    ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕುಪತ್ರ ಕೊಡುವಾಗ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಮ್ಮುಖದಲ್ಲಿ ನೀಡಿ ಜನಪರವಾದ ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಪಕ್ಷದಿಂದ ಚುನಾಯಿತರಾಗಿದ್ದರೂ ಅಂತಹವರನ್ನು ಆಹ್ವಾನಿಸಿ ಎಂದು ಸಲಹೆ ನೀಡಿದರು.

    ಇನ್ನೂ ೩ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ ಅವರು, ಹಿರೇಮಗಳೂರಿನಲ್ಲಿ ನಾನು ವ್ಯಾಸಂಗ ಮಾಡಿದ ಶಾಲೆಗೆ ೧.೫೦ ಕೋಟಿ ರೂ. ವೆಚ್ಚದಲ್ಲಿ ಉತ್ತಮವಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

    ಜಿಲ್ಲೆಯ ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಬೇರೆ ಬೇರೆ ಜಿಲ್ಲೆಗಳ ಆಸ್ಪತ್ರೆಗಳಿಗೆ ಹೋಗುತ್ತಿರುವುದನ್ನು ತಪ್ಪಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಈಗಾಗಲೇ ೧೦೦ ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ ೮೦ ಕೋಟಿ ರೂಗಳನ್ನು ಮಂಜೂರು ಮಾಡಿಸಿ ಮುಂದಿನ ಒಂದೂವರೆ ವರ್ಷದಲ್ಲಿ ಸಾರ್ವಜನಿಕರಿಗೆ ಸಮರ್ಪಿಸುವುದಾಗಿ ತಿಳಿಸಿದರು.

    ವಾಸಿಸುವವನೇ ಮನೆಯ ಒಡೆಯ ಯೋಜನೆಯಡಿ ಬಡವರ ನೇತಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಕ್ಕುಪತ್ರಗಳನ್ನು ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದು, ಮೇದರಹಳ್ಳಿಯಲ್ಲಿ ಸುಮಾರು ೧೫೦ ಕುಟುಂಬಗಳು ಈ ಯೋಜನೆಯಡಿ ನೊಂದಾಯಿಸಿಕೊಂಡಿದ್ದು, ಬಾಕಿ ಇರುವ ೪೦ ಜನರು ನೊಂದಾಯಿಸಿಕೊಂಡರೆ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಷ್ಮ, ಇಓ ವಿಜಯ್‌ಕುಮಾರ್ , ಗ್ರಾ.ಪಂ ಅಧ್ಯಕ್ಷರುಗಳಾದ ಸೈಯದ್ ಜಮೀರ್ ಜಮ್ಮು, ಅಮೀರ್ ಜಾನ್, ಶಂಕರ್ ನಾಯ್ಕು, ಮಧು, ಯೋಗೀಶ್, ಕೆಂಗೇಗೌಡ, ಶಂಖರ್ ನಾಯಕ್, ಗ್ರಾಪಂ ಸದಸ್ಯರಾದ ನಾಗರಾಜ್, ಶೋಭ ಯೋಗೀಶ್, ಮಧು, ಹರ್ಷದ್, ಮುಖಂಡರುಗಳಾದ ಅಮೀರ್, ಯೋಗೀಶ್, ಚೌಡ ಬೋವಿ, ಚಿನ್ನ ಬೋವಿ, ಅಚ್ಚುತ್ ರಾವ್, ಶಿವಕುಮಾರ್, ರತ್ನಕುಮಾರ್, ಇರ್ಷಾದ್ ಮತ್ತಿತರರಿದ್ದರು.

    We will seek votes based on people’s livelihood and pro-people programs.

  • ಚಾಮುಂಡಿ ಬೆಟ್ಟ ಚಲೊ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಲಿಲ್ಲ

    ಚಾಮುಂಡಿ ಬೆಟ್ಟ ಚಲೊ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಲಿಲ್ಲ

    ಬೆಂಗಳೂರು: ‘ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರದ ಆರ್‌ಎಸ್‌ಎಸ್ ಸಂಘಟನೆಯವರು ಪಾಲ್ಗೊಂಡು, ಶಾಂತಿ ಕದಡುವ ಕೆಲಸ ಮಾಡುತ್ತಾರೆಂಬ ಕಾರಣಕ್ಕೆ ಚಾಮುಂಡಿ ಬೆಟ್ಟ ಚಲೊ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿಯ ಉದ್ದೇಶವಾಗಿದೆ. ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ, 21 ಜನರನ್ನು ಈಗಾಗಲೇ ಬಂಧಿಸಿದ್ದು, ಯಾವುದೇ ಜಾತಿ ಧರ್ಮಗಳನ್ನು ಸರ್ಕಾರ ಪರಿಗಣಿಸದೇ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

    ‘ಬಿಜೆಪಿಯವರು ಮದ್ದೂರಿನಲ್ಲಿ ಬಂದ್ ಮಾಡಲು ಕರೆ ನೀಡಿದ್ದರು. ಗಲಭೆಯಲ್ಲಿ ನಿರತರಾಗಿದ್ದ ಯಾವುದೇ ಪಕ್ಷ, ಸಮುದಾಯವರೇ ಆಗಿದ್ದರೂ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

    ಸಚಿವರಿಗೆ ದೂರು ನೀಡಿದ್ದಾರೆ’ ಎಂಬುದಕ್ಕೆ ಪ್ರತಿಕ್ರಿಯಿಸಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಕೇಂದ್ರದಲ್ಲಿ ರೈತ ಚಳವಳಿಯಲ್ಲಿ ಅನೇಕ ರೈತರು ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಬಿಜೆಪಿಯವರು ಎಲ್ಲಿದ್ದರು? ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಯಾವುದೇ ಬಿಜೆಪಿಯವರು ಧ್ವನಿ ಎತ್ತಲಿಲ್ಲ ಏಕೆ? ಮಣಿಪುರದಲ್ಲಿ ಹಿಂಸಾಚಾರ ನಡೆದರೂ, ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಲೇ ಇಲ್ಲ’ ಎಂದರು.

    Police did not give permission for Chamundi Betta Chalo program

  • ಕ್ಷೇತ್ರದ ಅಭಿವೃದ್ಧಿಗೆ ಹಣ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ

    ಕ್ಷೇತ್ರದ ಅಭಿವೃದ್ಧಿಗೆ ಹಣ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ

    ಚಿಕ್ಕಮಗಳೂರು: ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಜನ ನೆನಪಿನಲ್ಲಿಟ್ಟುಕೊಳ್ಳುವಂತಹ ಶಾಶ್ವತ ಯೋಜನೆಗಳಾದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಉಪಕಣಿವೆ ಯೋಜನೆ, ನಗರದ ನೂತನ ಬಸ್ ನಿಲ್ದಾಣ, ಶತಮಾನೋತ್ಸವ ಕ್ರೀಡಾಂಗಣ ಅಭಿವೃದ್ಧಿ ಸದ್ಯದ ನನ್ನ ಕನಸಿನ ಯೋಜನೆಗಳು ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರಕಾರ ಬಂದಾಗಿನಿಂದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಡವರು, ಶೋಷಿತರ ಪರವಾದ ಕೆಲಸ ಮಾಡಲಾಗುತ್ತಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳು ಸಮಾಧಾನ ತಂದಿವೆ. ಆದರೆ, ಪ್ರತಿಪಕ್ಷದವರು ಅಭಿವೃದ್ಧಿ ಶೂನ್ಯ ಎಂದು ಟೀಕಿಸಿದ್ದಾರೆ ಎಂದು ಆರೋಪಿಸಿದರು.

    ಕಳೆದ ೨೦ ವರ್ಷ ಕ್ಷೇತ್ರದಲ್ಲಿ ಆಡಳಿತ ನಡೆಸಿದವರು ಕೊನೆಯ ೫ ವರ್ಷದ ಅವಧಿ ಬಿಟ್ಟರೆ ಹಿಂದಿನ ೩ ಅವಧಿಯಲ್ಲಿ ಯಾವ ಶಾಶ್ವತ ಕೆಲಸ ಮಾಡಿದ್ದಾರೆ ತೋರಿಸಲಿ ಎಂದ ಅವರು, ಕಾಮಗಾರಿಗಳಿಗೆ ಬರಿ ಮಂಜೂರಾತಿ ಕೊಡಿಸಿದ್ದರು, ಹಣ ಬಿಡುಗಡೆಯಾಗಿರಲಿಲ್ಲ. ನಾನು ಹಣ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಉದಾಹರಣೆ ಸಹಿತಿ ವಿವರಿಸಿದರು.

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿತ್ತೇ ವಿನಾಃ ಅದಕ್ಕೆ ಹಣ ಬಿಡುಗಡೆ ಆಗಿರಲಿಲ್ಲ. ಅದಕ್ಕೆ ೩೯.೬ ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ. ಮಲ್ಲೇನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ೨೨ ಕೋಟಿ ರೂ ಬಿಡುಗಡೆ ಮಾಡಿಸಿದ್ದು ಕಟ್ಟಡ ನಿರ್ಮಾಣಕ್ಕೆ ನಿವೇಶನವೂ ದೊರೆತಿದೆ ಎಂದು ಹೇಳಿದರು.

    ೨೦೨೩-೨೪ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ೧೫ ಕೋಟಿ ರೂ., ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಗೆ ೨೨ ಕೋಟಿ ರೂ., ವೈದ್ಯಕೀಯ ಕಾಲೇಜು ೩೩೯ ಕೋಟಿ ರೂ.ನಿಂದ ೪೫೫ ಕೋಟಿ ರೂ.ಗೆ ಹೆಚ್ಚಿಸಿ ಅನುಮೋದನೆ, ಅಲ್ಲದೆ ಹೆಚ್ಚುವರಿಯಾಗಿ ೮೦ ಕೋಟಿ ರೂ. ಹಣ ಒದಗಿಸಲಾಗಿದೆ. ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ೧೦ ಕೋಟಿ ರೂ., ಹಿಂದುಳಿದ ವರ್ಗಗಳ ಸಮುದಾಯಭವನ ೩ ಕೋಟಿ ರೂ., ನಗರದ ಒಳಚರಂಡಿ ಉನ್ನತೀಕರಣಕ್ಕೆ ೨೦ ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ ಎಂದು ಮಾಹಿತಿ ನೀಡಿದರು.

    ೨೦೨೪-೨೫ ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿಗೆ ೫೧ ಕೋಟಿ ರೂ., ಜಿಲ್ಲಾಡಳಿತ ಭವನಕ್ಕೆ ೨೬.೪೮ ಕೋಟಿ ರೂ., ಸಾರಿಗೆ ಗ್ರಾಮೀಣ ಬಸ್ ನಿಲ್ದಾಣ ೧೯.೮೭ ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ರಸ್ತೆಗಳ ಅಭಿವೃದ್ಧಿಗೆ ೧೦ ಕೋಟಿ ರೂ. ಮಂಜೂರಾಗಿದೆ ಎಂದು ಹೇಳಿದರು.

    ಕಳೆದ ಮೇ ತಿಂಗಳಿಂದಲೇ ಮಳೆ ಆರಂಭವಾದ ಕಾರಣ ರಸ್ತೆಗಳಿಗೆ ಡಾಂಬರ್ ಹಾಕಲು ಸಾಧ್ಯವಾಗಿಲ್ಲ. ಮುಂದಿನ ಡಿಸೆಂಬರ್‌ನಿಂದ ಮೇ ವರೆಗೆ ಗ್ರಾಮಾಂತರ ಮತ್ತು ನಗರ ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ಎಲ್ಲ ರಸ್ತೆಗಳ ಅಭಿವೃದ್ಧಿಯನ್ನು ಸಮರೋಪಾದಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

    ಇದಲ್ಲದೆ ಕೆರೆಗಳ ಅಭಿವೃದ್ಧಿ ಚೆಕ್ ಡ್ಯಾಂ ನಿರ್ಮಾಣಕ್ಕೆ ೧೩.೨೫ ಕೋಟಿ ಅನುದಾನ ಬಿಡುಗಡೆ ಮಾಡಿಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಶಿವಾನಂದಸ್ವಾಮಿ, ಮಲ್ಲೇಶಸ್ವಾಮಿ, ತನೋಜ್ ನಾಯ್ಡು ಇದ್ದರು.

    I have made an honest effort to raise money for the development of the sector.

     

  • ಶಿಕ್ಷಕ ವೃತ್ತಿಗೆ ಸಿಗುವ ಗೌರವ ಬೇರೆ ಯಾವುದೇ ಹುದ್ದೆಗೆ ಸಿಗುವುದಿಲ್ಲ

    ಶಿಕ್ಷಕ ವೃತ್ತಿಗೆ ಸಿಗುವ ಗೌರವ ಬೇರೆ ಯಾವುದೇ ಹುದ್ದೆಗೆ ಸಿಗುವುದಿಲ್ಲ

    ಚಿಕ್ಕಮಗಳೂರು: ಸರ್ಕಾರಿ ಉದ್ಯೋಗದಲ್ಲಿ ಶಿಕ್ಷಕ ವೃತ್ತಿಗೆ ಸಿಗುವ ಗೌರವ ಬೇರೆ ಯಾವುದೇ ಹುದ್ದೆಗೆ ಸಿಗುವುದಿಲ್ಲ. ಇದೊಂದು ಸಮಾಜವನ್ನು ತಿದ್ದುವ ಪರಿಣಾಮಕಾರಿ ಸೇವೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಕುವೆಂಪು ಕಲಾಮಂದಿರದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿ.ಪಂ, ತಾ.ಪಂ, ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ೧೩೮ನೇ ಜನ್ಮದಿನೋತ್ಸವ ಮತ್ತು ೬೪ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಶಿಕ್ಷಣ ತಜ್ಞ, ಶಿಕ್ಷಣ ಪ್ರೇಮಿ, ಹೆಚ್ಚು ಶಿಕ್ಷಣದ ಜ್ಞಾನವನ್ನು ಹೊಂದಿದ್ದ ಅವರನ್ನು ನೆನಪಿಸಿಕೊಳ್ಳಲು ಸೆ.೫ ರಂದೇ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಟಿಬದ್ಧರಾದಾಗ ಶಿಕ್ಷಕರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.

    ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದನ್ನು ಅರಿತು ಶಿಕ್ಷಣ ನೀಡುವ ಅಗತ್ಯ ಇದೆ ಎಂದು ಹೇಳಿದರು.

    ರಾಜಕಾರಣಿಗಳಿಗೆ ಅಧಿಕಾರದಲ್ಲಿರುವವರೆಗೆ ಮಾತ್ರ ಗೌರವ ಸಿಗುತ್ತದೆ. ಆದರೆ, ಶಿಕ್ಷಕರು ನಿವೃತ್ತಿ ಹೊಂದಿದರೂ ಗೌರವಕ್ಕೆ ಪಾತ್ರರಾಗುತ್ತಾರೆ. ಇದೊಂದು ಸಮಾಜವನ್ನು ಜಾಗೃತಗೊಳಿಸುವ ಹುದ್ದೆ ಎಂದು ಬಣ್ಣಿಸಿದರು.

    ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತಂದು ಸಮಾಜದ ಆಸ್ತಿಯನ್ನಾಗಿಸುವ ಹೊಣೆ ಶಿಕ್ಷಕರ ಮೇಲಿದೆ. ಅದಕ್ಕಾಗಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸಬಯಸುತ್ತೇನೆ ಎಂದರು.

    ವಿದ್ಯಾರ್ಥಿಗಳು ಗುರಿ ತಲುಪಬೇಕಾದರೆ ಗುರುವಿನ ಆಶೀರ್ವಾದ ಮತ್ತು ಅವರ ಜ್ಞಾನ ಕಂಡಿತವಾಗಿಯೂ ಬೇಕು. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯಂತೆ ಎಲ್ಲರೂ ನಡೆಯಬೇಕಾಗಿದೆ. ಇಂದು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಂವಿಧಾನ ಬದ್ಧ ಹಕ್ಕುಗಳಾಗಿದ್ದು, ಇವುಗಳನ್ನು ತಲುಪಿಸುವಲ್ಲಿ ಸರ್ಕಾರಗಳು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕೆಂದು ಹೇಳಿದರು.

    ಸಮಾಜವನ್ನು ತಿದ್ದಿ ತೀಡಿ ಉತ್ತಮ ಪ್ರಜೆಗಳನ್ನಾಗಿಸಿ ಶಕ್ತಿ ತುಂಬುವ ಕೆಲಸ ಶಿಕ್ಷಕರ ಮೇಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶಿಕ್ಷಕರು ಹಿಂದೆ ಬಿದ್ದಿಲ್ಲ ಎಂದು ಶ್ಲಾಘಿಸಿದರು.

    ಈ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳು ಮತ್ತು ಸರ್ಕಾರದ ಕರ್ತವ್ಯವಾಗಿದ್ದು, ಸರ್ಕಾರಿ ನೌಕರನಾಗಿ ಆಯ್ಕೆಯಾದ ಬಳಿಕ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಶಿಕ್ಷಕರಿಗೆ ಅವಕಾಶವಿದ್ದು, ಅದರಂತೆ ೫ ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ, ಕಾಲಕಾಲಕ್ಕೆ ಬಡ್ತಿ ಅಗತ್ಯವಾಗಿದ್ದು, ಇವುಗಳನ್ನು ಪಡೆಯಲು ಇಂದು ಹೋರಾಟ ಮಾಡುತ್ತಿರುವುದು ವಿಷಾಧನೀಯ ಎಂದರು.

    ಸಮಾಜದ ಸ್ವಾಸ್ಥ್ಯ ಕಾಪಾಡುವುದೇ ಶಿಕ್ಷಣ ಮತ್ತು ಆರೋಗ್ಯ. ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಶಿಸ್ತುಬದ್ಧ ಶಿಕ್ಷಣ ಅಗತ್ಯ. ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು ಕಾಪಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

    ಸರ್ಕಾರದ ಬಿಸಿಯೂಟ ವ್ಯವಸ್ಥೆ ಶಿಕ್ಷಕರ ನಿದ್ದೆಗೆಡಿಸಿದೆ. ನಿವೃತ್ತಿಯಾದಾಗ ಪಿಂಚಣಿ ಪಡೆಯುವುದು ನಾಡಿನ ಸರ್ವರ ಹಕ್ಕಾಗಿದ್ದು, ಎನ್‌ಪಿಎಸ್, ಓಪಿಎಸ್ ಬಗ್ಗೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಗ್ಗೆ ಎಚ್ಚರಿಸಿದರು.

    ಎಂಎಲ್‌ಸಿ ಸಿ.ಟಿ ರವಿ ಮಾತನಾಡಿ, ವರ್ತನೆಯಲ್ಲಿ ಪರಿವರ್ತಿಸುವುದೇ ಶಿಕ್ಷಣ, ಮಾಹಿತಿ ಜೊತೆಗೆ ಶಿಕ್ಷಣ ನೀಡುವವನೇ ಉಪಾಧ್ಯಾಯ. ಜ್ಞಾನದ ಒಳನೋಟ ನೀಡುವವರು ಪಂಡಿತ, ಸುತ್ತ ಜ್ಞಾನವನ್ನು ಜಾಗೃತಿಗೊಳಿಸಿ ಬೆಳಕಿನೆಡೆಗೆ ತಂದು ಆತ್ಮವಿಶ್ವಾಸ ತುಂಬುವವನೇ ಗುರು ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಮೊದಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಸ್ವಾಗತಿಸಿದರು. ಪ್ರಶಾಂತ್, ನೀಲಕಂಠಪ್ಪ ಸೇರಿದಂತೆ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

    The respect that teaching brings is unmatched by any other profession.

  • ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನದ ಹಣತೆ ಹಚ್ಚಿದವರು

    ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನದ ಹಣತೆ ಹಚ್ಚಿದವರು

    ಚಿಕ್ಕಮಗಳೂರು:  ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತೀಯತೆಯ ವಿರುದ್ಧ ಖಡ್ಗವನ್ನು ಹಿಡಿಯಲಿಲ್ಲ. ಬದಲಾಗಿ ಜನರ ಹೃದಯದಲ್ಲಿ ಜ್ಞಾನದ ಹಣತೆಯನ್ನು ಹಚ್ಚಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ ಪ್ರತಿಯೊಂದು ವಸ್ತುಗಳು ಪಂಚಭೂತಗಳಿಂದಾಗಿವೆ. ಮನುಷ್ಯ ದೇವರ ಸೃಷ್ಟಿಯಾಗಿದ್ದು, ದೇವರು ಜಾತಿಯನ್ನು ಸೃಷ್ಟಿಸಲಿಲ್ಲ. ಜನ್ಮದಿಂದ ಬ್ರಾಹ್ಮಣನಾಗಿದ್ದರೂ ಗುಣಗ್ರಾಹಿಯಾಗಿರದಿದ್ದರೆ ಆತ ಶೂದ್ರನೇ ಆಗುತ್ತಾನೆ. ಶೂದ್ರನಾಗಿದ್ದು, ವಿದ್ವತ್ತನ್ನು ಗಳಿಸಿದ್ದರೆ ಆತ ಶ್ರೇಷ್ಠ ವಿದ್ವಾಂಸನಾಗುತ್ತಾನೆ ಎಂದು ಹೇಳಿದರು.

    ನಾರಾಯಣ ಗುರುಗಳು ಕೆಳಜಾತಿಯಲ್ಲಿ ಹುಟ್ಟಿದ್ದರೂ ಸಂಸ್ಕೃತ, ಮಲಯಾಳಂ, ತಮಿಳು ಮೂಲಕ ಅಪಾರ ಜ್ಞಾನವನ್ನು ಸಂಪಾದಿಸಿ ಬ್ರಹ್ಮಶ್ರೀಗಳಾದರು. ಯಾವುದೇ ಮಹಾನುಭಾವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಹಾಗೆ ಸೀಮಿತಗೊಳಿಸಿದರೆ ಆ ಜಾತಿಗೆ ಅಪಚಾರ ಮಾಡಿದಂತಾಗುತ್ತದೆ. ದೇವರನಾಡು ಎಂದೇ ಹೆಸರಾದ ಕೇರಳದಲ್ಲಿ ಮತಾಂತರ ಮಾಯಾಜಾಲವಾಗಿ ಹಬ್ಬಿಕೊಂಡಿದ್ದ ಸಂದರ್ಭದಲ್ಲಿ ಕೆಳ ವರ್ಗದವರು ಮತಾಂತರಗೊಳ್ಳದಂತೆ ಪಾರು ಮಾಡಿದವರೇ ನಾರಾಯಣ ಗುರುಗಳು ಎಂದು ತಿಳಿಸಿದರು.

    ಶಾಸಕ ಹೆಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ಸಂಸ್ಕಾರವಂತ ದೇಶ ನಮ್ಮದು. ಶೋಷಿತ ಸಮಾಜದ ಗುರುಗಳು ಬುದ್ಧ, ಬಸವ, ಅಂಬೇಡ್ಕರರಂತೆ ವಿಶ್ವ ಕ್ರಾಂತಿ ಮಾಡಿದರು. ವಿವಿಧತೆಯಲ್ಲಿ ಏಕತೆ ಇರುವ, ಸಂಸ್ಕಾರವಿರುವ ದೇಶವೆಂದರೆ ಅದು ಭಾರತ. ಒಟ್ಟು ಕುಟುಂಬದಲ್ಲಿ ಒಗ್ಗಟ್ಟು, ಸಾಮರಸ್ಯವಿರುತ್ತದೆ ಎಂದು ಕೂಡು ಕುಟುಂಬದ ಬಗ್ಗೆ ತಿಳಿಸಿದರು.

    ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಸಾಹಿತಿ ಬಿ.ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಮಹನೀಯರ ಜೀವನ, ಸಾಧನೆ ಮೆಲುಕು ಹಾಕುವುದರ ಮೂಲಕ ನಮ್ಮ ಬದುಕನ್ನು ಉನ್ನತೀಕರಿಸಿಕೊಳ್ಳುವುದೇ ಆಗಿದೆ. ಭರತ ಭೂಮಿಯಲ್ಲಿ ಸಮಾಜದ ಅನಿಷ್ಠ, ಅಂಟು ಜಾಢ್ಯಗಳಾದ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ, ಸಾಮಾಜಿಕ ಅನ್ಯಾಯ ತುರಿಯಾವಸ್ಥೆಯಲ್ಲಿದ್ದಾಗ ಬಸವ, ಬುದ್ಧ, ಅಂಬೇಡ್ಕರ್ ಅವುಗಳನ್ನು ನಿವಾರಿಸಲು ಶ್ರಮಿಸಿದರು. ಅದೇ ಸಾಲಿನಲ್ಲಿ ನಿಲ್ಲುವವರು ನಾರಾಯಣ ಗುರುಗಳು ಎಂದು ಹೇಳಿದರು.

    ಬ್ರಹ್ಮಶ್ರೀ ಎಂದರೆ ಬ್ರಹ್ಮಜ್ಞಾನವನ್ನು ಪಡೆದವರು ಎಂದು ಅರ್ಥ. ಯಾವಾಗ ಜಗತ್ತಿನಲ್ಲಿ ಅಧರ್ಮ, ಅಶಾಂತಿ ತಾಂಡವವಾಡುತ್ತೊ ಆಗ ಜಗತ್ತನ್ನು ಉದ್ಧರಿಸಲು ಮಹಾತ್ಮರು ಜನಿಸುತ್ತಾರೆ. ನಾರಾಯಣ ಗುರುಗಳು ಜನರ ಮನಸ್ಸಿನಲ್ಲಿ ಉತ್ಪತ್ತಿಯಾದ ಜಾತೀಯತೆಯ ಕಸವನ್ನು ಗುಡಿಸುವ ಕೆಲಸ ಮಾಡಿದರು. ವಿಧವೆಯ ಕಣ್ಣೀರನ್ನು ಒರೆಸದ, ಹಸಿದವರಿಗೆ ಅನ್ನವನ್ನು ನೀಡದ ಧರ್ಮ ಧರ್ಮವಲ್ಲ, ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಪ್ರತಿಪಾದಿಸಿ ಶೋಷಿತ ವರ್ಗದವರಿಗೂ ದೇವರಿದ್ದಾನೆ ಎಂದು ತೋರಿಸಿಕೊಡುವ ಮೂಲಕ ಅನೇಕ ದೇವಾಲಯಗಳನ್ನು ನಿರ್ಮಿಸಿದರು.

    ಶಂಕರಾಚಾರ್ಯರ ಅದ್ವೈತ ಸಿದ್ಧಾಂತವನ್ನು ಅನುಸರಿಸಿ ಅದ್ವೈತ ಗುರು ಎಂದೆನಿಸಿದ್ದಾರೆ. ಯೋಗದಲ್ಲಿ ಪತಂಜಲಿ, ಜ್ಞಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲೂ ಏಸುವಿನಂತಿದ್ದವರು ನಾರಾಯಣ ಗುರುಗಳು ಎಂದು ಹೇಳಿದರು.

    ಶ್ರೀ ನಾರಾಯಣ ಗುರು ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಗುಣಶೇಖರ್, ಜಿಲ್ಲಾ ಬಿಲ್ಲವ ಸಂಘದ ಮಹಿಳಾ ಅಧ್ಯಕ್ಷರಾದ ಪ್ರಮಿಳಾ ವಿಜಯ, ಜಿಲ್ಲಾ ನಾರಾಯಣ ಗುರು ಸಮಿತಿ ಮಹಿಳಾ ಅಧ್ಯಕ್ಷೆ ಶಶಿಕಲಾ ಅಶೋಕ್, ಕೆ.ಸಿ.ಶಾಂತಕುಮಾರ್, ವಾಸು ಪೂಜಾರಿ, ರಾಜಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Brahmashri Narayana Guru spread the knowledge of knowledge

  • ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 24 ಶಿಕ್ಷಕರ ಆಯ್ಕೆ

    ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 24 ಶಿಕ್ಷಕರ ಆಯ್ಕೆ

    ಚಿಕ್ಕಮಗಳೂರು: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 24 ಶಿಕ್ಷಕರನ್ನು ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ.

    ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿಭಾಗದಿಂದ ತಲಾ 8 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಎಂಟು ಶೈಕ್ಷಣಿಕ ವಲಯಗಳಿದ್ದು, ವಲಯಕ್ಕೆ ಪ್ರತಿ ವಿಭಾಗದಲ್ಲೂ ತಲಾ ಒಂದು ಅವಕಾಶ ನೀಡಲಾಗಿದೆ.

    ಪ್ರಶಸ್ತಿಯು ತಲಾ ₹5 ಸಾವಿರ, ಪ್ರಶಸ್ತಿ ಪತ್ರ ಒಳಗೊಂಡಿದೆ. ಮೂಡಿಗೆರೆಯಲ್ಲಿ ಸೆ. 9ರಂದು ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

    ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಬೀರೂರು ವಲಯದ ನಿಡಘಟ್ಟ ಶಾಲೆಯ ಕೃಷ್ಣಶೆಟ್ಟಿ ಬಿ.ಟಿ., ಚಿಕ್ಕಮಗಳೂರು ವಲಯದ ನರಗನಹಳ್ಳಿ ಶಾಲೆಯ ವಿಜಯಲಕ್ಷ್ಮಿ ಸಿ.ಕೆ., ಕಡೂರು ವಲಯದ ತಂಗಲಿ ಶಾಲೆಯ ನುಸ್ರತ್ ಬಾನು, ಕೊಪ್ಪ ವಲಯದ ತನೂಡಿ ಶಾಲೆಯ ಜ್ಯೋತಿ ಡಿಸೋಜ, ಮೂಡಿಗೆರೆ ವಲಯದ ಹೇರಡಿಕೆ ಶಾಲೆಯ ಶ್ರೀನಿವಾಸ ಮೂರ್ತಿ ಜಿ.ಕೆ., ನರಸಿಂಹರಾಜಪುರ ವಲಯದ ಭದ್ರಾ ಕಾಲೊನಿ ಶಾಲೆಯ ಚಂದ್ರಕಲಾ, ಶೃಂಗೇರಿಯ ವಲಯದ ಸಿಂಧುವಳ್ಳಿ ಶಾಲೆಯ ಪ್ರಮೀಳಾ ಎಂ.ಎಂ., ತರೀಕೆರೆ ವಲಯದ ಕೆಂಚಿಕೊಪ್ಪ ಶಾಲೆಯ ಬಸವರಾಜಯ್ಯ ಎ.ಒ. ಅವರನ್ನು ಆಯ್ಕೆ ಮಾಡಲಾಗಿದೆ.

    ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಬೀರೂರು ಶೈಕ್ಷಣಿಕ ವಲಯದ ಬಿ.ಕೋಡಿಹಳ್ಳಿ ಶಾಲೆಯ ಎಚ್.ಒ.ಬಲರಾಮ, ಚಿಕ್ಕಮಗಳೂರು ವಲಯದ ಬಿಟಿಎಚ್‌ಪಿಎಸ್ ನಗರ–2 ಕ್ಲಸ್ಟರ್ ಸರ್ಕಾರಿ ಶಾಲೆಯ ಕೆ.ಎ.ಹರೀಶಕುಮಾರ್, ಕಡೂರು ವಲಯದ ಮರವಂಜಿ ಶಾಲೆಯ ಕೆ.ಜೆ. ವಿಜಯಕುಮಾರ್, ಕೊಪ್ಪ ವಲಯದ ಅತ್ತಿಕುಳಿ ಶಾಲೆಯ ಓ.ಗುರುಸ್ವಾಮಿ, ಮೂಡಿಗೆರೆ ವಲಯದ ಮುತ್ತಿಗೆಪುರ ಶಾಲೆಯ ಎಸ್.ಭಾರತಿ, ನರಸಿಂಹರಾಜಪುರ ವಲಯದ ಕಾನೂರು ಶಾಲೆಯ ಕೆ.ಮಂಜುಳಾ, ಶೃಂಗೇರಿ ವಲಯದ ಧರೆಕೊಪ್ಪ ಶಾಲೆಯ ಎಚ್.ಎಚ್.ದಿನೇಶ್, ತರೀಕೆರೆ ವಲಯದ ಕುಡ್ಲೂರು ಶಾಲೆಯ ಎಚ್.ಲೋಹಿತ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

    ಪ್ರೌಢಶಾಲೆ ವಿಭಾಗ: ಬೀರೂರು ವಲಯ ಬಳ್ಳಿಗನೂರು ಶಾಲೆಯ ಸುವರ್ಣ ಎಸ್.ವಡೆಯರ್, ಚಿಕ್ಕಮಗಳೂರು ವಲಯದ ಮೈಲಿಮನೆ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲೆ ವಿಭಾಗ) ಎಂ.ಬಿ.ಚಂದ್ರೇಗೌಡ, ಕಡೂರು ವಲಯದ ಮತ್ತಿಘಟ್ಟ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯ ವಿ.ಎನ್.ಪ್ರಕಾಶ್, ಕೊಪ್ಪ ವಲಯದ ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಎನ್.ಎನ್.ಸುರೇಂದ್ರ, ಮೂಡಿಗೆರೆ ವಲಯದ ಅಂಗಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಂಜಪ್ಪ ದೊಡ್ಡಮನಿ, ನರಸಿಂಹರಾಜಪುರ ವಲಯದ ಮಾಗುಂಡಿ ಸರ್ಕಾರಿ ಪ್ರೌಢಶಾಲೆಯ ರಮೇಶ್ ನಾಯಕ್, ಶೃಂಗೇರಿ ವಲಯದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕೆ.ಶಶಿಧರ್, ತರೀಕೆರೆ ವಲಯದ ಹಳಿಯೂರು ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ಎಚ್.ಕೆ. ಶೇಖರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

    24 teachers selected for district-level best teacher award