Category: ಚಿಕ್ಕಮಗಳೂರು

  • ನಿಗದಿತ ಸ್ಥಳದಲ್ಲಿಯೇ ಗಣಪತಿ ಮೂರ್ತಿ ವಿಸರ್ಜಿಸಬೇಕು

    ನಿಗದಿತ ಸ್ಥಳದಲ್ಲಿಯೇ ಗಣಪತಿ ಮೂರ್ತಿ ವಿಸರ್ಜಿಸಬೇಕು

    ಚಿಕ್ಕಮಗಳೂರು: ಜಿಲ್ಲಾಡಳಿತದ ಆದೇಶದಂತೆ ಪರಿಸರಕ್ಕೆ ಪೂರಕವಾಗಿ ತಯಾರಾಗಿರುವ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ವಿಸರ್ಜಿಸಬೇಕೆಂದು ಸಾರ್ವಜನಿಕರಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಮನವಿ ಮಾಡಿದರು.

    ಅವರು ನಗರಸಭೆ ವತಿಯಿಂದ ಕೋಟೆಕೆರೆ ಸೇರಿದಂತೆ ನಗರದ ಮತ್ತಿತರೆಡೆ ಗಣಪತಿ ವಿಸರ್ಜಿಸಲು ಸಿದ್ಧತೆ ನಡೆಸಿರುವ ಬಗ್ಗೆ ಪರಿಶೀಲಿಸಿ ಮಾತನಾಡಿ
    ನಗರದ ಜನತೆ ಗೌರಿ ಗಣೇಶ ಹಬ್ಬಗಳ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಜೊತೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೆರವಣಿಗೆ ನಡೆಸಬೇಕೆಂದು ವಿನಂತಿಸಿದರು.

    ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸರ್ವರಲ್ಲಿ ಭಕ್ತಿಭಾವ ತುಂಬಿ ಬರಲಿ, ಇದಕ್ಕೆ ಜಿಲ್ಲಾಡಳಿತ ಮತ್ತು ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕೆರೆಗಳು ದೂರ ಇರುವುದರಿಂದ ನಗರಸಭೆಯಿಂದ ಆಜಾದ್ ವೃತ್ತ, ಹನುಮಂತಪ್ಪ ವೃತ್ತ, ದಂಟರಮಕ್ಕಿ ಕೆರೆ ಬದಿ, ಟೌನ್ ಕ್ಯಾಂಟಿನ್ ವೃತ್ತ, ಎಐಟಿ ವೃತ್ತ ಸೇರಿದಂತೆ ೫ ಭಾಗಗಳಲ್ಲಿ ಟ್ರಾಕ್ಟರ್‌ನಲ್ಲಿಯೆ ಗಣಪತಿಯನ್ನು ವಿಸರ್ಜಿಸಲು ಅನುಕೂಲ ಕಲ್ಪಿಸಲಾಗಿದೆ ಎಂದರು.

    ಸ್ವತಂತ್ರ ಪೂರ್ವದಲ್ಲಿ ಬಾಲಗಂಗಾಧರ ತಿಲಕರು ಗಣಪತಿ ಪ್ರತಿಷ್ಠಾಪಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋರಾಟ ನಡೆಸಿದ ಪರಿಣಾಮ ಸ್ವತಂತ್ರ ಸಂಗ್ರಾಮದಲ್ಲಿ ಯಶಸ್ವಿಯಾಗಿದ್ದರು ಎಂದ ಅವರು, ಹಬ್ಬದ ಅಂಗವಾಗಿ ಬೀದಿಬದಿ ಲೈಟ್ ಅಳವಡಿಸಿ ಕಲ್ಯಾಣಿ ಸುತ್ತ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಏರ್ಪಡಿಸುವಂತೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳನ್ನು ಆಹ್ವಾನಿಸಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಕೋಟೆಕೆರೆ ವೀಕ್ಷಣೆ ಮಾಡಿ ಗೌರಿ ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿಗಳನ್ನು ಪೂಜಿಸಿ ೧-೫ ದಿನಗಳವರೆಗೆ ಸಾರ್ವಜನಿಕರು, ಭಕ್ತಾಧಿಗಳು ವಿಸರ್ಜಿಸುವ ಸಂಪ್ರದಾಯ ಇದ್ದು, ಈ ಹಿಂದೆ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು ಎಂದರು. ಈ ಕೆರೆ ಅಭಿವೃದ್ಧಿಪಡಿಸಲು ೨೦೨೨ ರ ನಂತರ ನಗರಸಭೆ ವತಿಯಿಂದ ಕೋಟೆಕೆರೆಯಲ್ಲಿ ಕಲ್ಯಾಣಿ ನಿರ್ಮಿಸಿ, ನಗರ ಸೇರಿದಂತೆ ಸುತ್ತಮುತ್ತಲ ನಾಗರಿಕರು ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ವಿಸರ್ಜಿಸಲು ಅನುಕೂಲವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

    ಕೋಟೆಕೆರೆಯನ್ನು ಡಿಪಿಆರ್ ಮುಗಿಸಿ ಬೇಸಿಗೆಯಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ ಅವರು, ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ಕೆಲವು ತಾಂತ್ರಿಕ ತೊಂದರೆಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ ಎಂದರು. ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಗಣೇಶ ವಿಸರ್ಜನೆ ಸಂಬಂಧ ಕೋಟೆಕೆರೆಯನ್ನು ಕಳೆದ ಒಂದು ವಾರದಿಂದ ನಗರಸಭೆ ಸಿಬ್ಬಂದಿ ಸ್ವಚ್ಚತೆ ಕಾರ್ಯ ನಡೆಸಿ ಕ್ರಮ ವಹಿಸುತ್ತಿದ್ದಾರೆಂದು ಹೇಳಿದರು.

    ಗಣಪತಿ ವಿಸರ್ಜಿಸಲು ನಗರದ ನಾಗರಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ನಗರದ ವಿವಿಧೆಡೆ ಆರು ಸ್ಥಳಗಳಲ್ಲಿ ಗಣಪತಿ ವಿಸರ್ಜಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ಅವರು, ಇದರ ಸದುಪಯೋಗವನ್ನು ನಾಗರಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಶೀಲಾದಿನೇಶ್, ಇಂಜಿನಿಯರ್ ಲೋಕೇಶ್, ಆರೋಗ್ಯ ನಿರೀಕ್ಷಕರಾದ ಈಶ್ವರ, ರಂಗಪ್ಪ, ವಿವೇಕ್, ಶ್ರೀನಿವಾಸ್, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ವಿಕಾಸ್ ಹಾಗೂ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

    The Ganpati idol should be immersed at the designated place.

  • ಹುಕ್ಕುಂದ ಗ್ರಾಮದಲ್ಲಿ 17 ಲಕ್ಷ ರೂ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

    ಹುಕ್ಕುಂದ ಗ್ರಾಮದಲ್ಲಿ 17 ಲಕ್ಷ ರೂ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

    ಚಿಕ್ಕಮಗಳೂರು:  ಸಂಬಂಧಗಳು ಉಳಿದು ಬೆಳೆಯಬೇಕೆಂಬ ದೃಷ್ಟಿಯಿಂದ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯವನ್ನು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಿಂದ ಕುಟುಂಬದಲ್ಲಿ ಸಾಮರಸ್ಯ, ಪ್ರೀತಿ, ವಿಶ್ವಾಸ ಉಳಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅಭಿಪ್ರಾಯಿಸಿದರು.

    ಅವರು ಇಂದು ಇಂದಾವರ ಗ್ರಾ.ಪಂ ವ್ಯಾಪ್ತಿಯ ಹುಕ್ಕುಂದ ಗ್ರಾಮದಲ್ಲಿ ಎನ್‌ಆರ್‌ಇಜಿಎ ಯೋಜನೆಯಡಿಯಲ್ಲಿ ೧೭ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕುಟುಂಬದಲ್ಲಿ ಹೆಣ್ಣು ಆರ್ಥಿಕ ಸದೃಢರಾದರೆ ಆ ಮನೆ ಉತ್ತಮವಾಗಿ ನಡೆಯುತ್ತದೆ. ಜೊತೆಗೆ ಲೋಕ ಕಲ್ಯಾಣ ಕಾರ್ಯಗಳು ಹೆಣ್ಣುಮಕ್ಕಳಿಂದ ಸಾಧ್ಯ ಎಂದ ಅವರು, ಹೊರಗೆ ದುಡಿಯಲು ಹೋದ ಪುರುಷ ಮನೆಗೆ ಊಟ ತಿಂಡಿಗೆ ಮರಳುವಂತೆ ನಡೆಯನ್ನು ಹೆಣ್ಣುಮಕ್ಕಳು ರೂಢಿಸಿಕೊಳ್ಳುವ ಅಗತ್ಯ ಇದೆ ಎಂದು ಕಿವಿಮಾತು ಹೇಳಿದರು.

    ಇಂದು ಹಣ, ಆಸ್ತಿ, ಅಂತಸ್ತಿನಿಂದಾಗಿ ಸಂಬಂಧಗಳು ಉಳಿಯುತ್ತಿಲ್ಲ. ದಾಯಾದಿ ಕಲಹಗಳಾಗಿ ಮಾರ್ಪಟ್ಟು ನೆಮ್ಮದಿ ಇಲ್ಲದಂತಾಗಿದೆ. ಈ ಮಧ್ಯೆ ಹಿರಿಯರು ಆರೋಗ್ಯಕರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಹೇಳಿದರು.

    ಆರೋಗ್ಯಕರವಾದ ಸಮಾಜ ಇದ್ದಾಗ ಮಾತ್ರ ನೆಮ್ಮದಿಯ ಬದುಕು ಕಾಣಲು ಸಾಧ್ಯ. ಕೃಷಿ ಚಟುವಟಿಕೆ ಲಾಭದಾಯಕ ಎಂಬುದನ್ನು ಯುವ ಪೀಳಿಗೆಗೆ ಪರಿಚಯಿಸದಿದ್ದರೆ ಮುಂದೆ ಆಹಾರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಸಂಸ್ಕಾರದ ಜೀವನ ಕಲಿಸದಿದ್ದರೆ ಎಷ್ಟು ದುಡಿಮೆ ಮಾಡಿದರೂ ಸಾಕಾಗುವುದಿಲ್ಲ. ಆಸೆ ಎಂಬ ಹುಚ್ಚು ಕುದುರೆಗೆ ದಾಸರಾದರೆ ಕುಟುಂಬದಲ್ಲಿ ಅಶಾಂತಿ ಮೂಡುತ್ತದೆ ಎಂದು ಹೇಳಿದರು.

    ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ, ಸಂಸ್ಕಾರದಲ್ಲಿ ಸಂಸ್ಕೃತಿ, ಧಾರ್ಮಿಕತೆಯ ನಂಬಿಕೆಯಲ್ಲಿ ಪ್ರಪಂಚದಲ್ಲೇ ಭಾರತ ಮುಂಚೂಣಿಯಲ್ಲಿದೆ. ವಿವಿಧತೆಯಲ್ಲಿ ಏಕತೆ-ಐಕ್ಯತೆ ಬಹಳ ಮುಖ್ಯವಾಗಿದ್ದು, ನಾಗರಿಕರು ಸಹೋದರತೆಯಿಂದ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದೆ ಬದುಕಬೇಕೆಂದು ಕರೆನೀಡಿದರು.

    ಇದೇ ಸಂದರ್ಭದಲ್ಲಿ ಹುಕ್ಕುಂದ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ೧೦ ಲಕ್ಷ ರೂ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
    ಕಾರ್ಯಕ್ರಮದಲ್ಲಿ ಇಂದಾವರ ಗ್ರಾ.ಪಂ ಅಧ್ಯಕ್ಷ ಸುಭಾಷ್, ಇಓ ವಿಜಯ್‌ಕುಮಾರ್, ಮಂಜೇಗೌಡ, ಜಯರಾಂ, ಜ್ಯೋತಿ, ಕೆಂಚಯ್ಯ, ಐ.ಡಿ. ಚಂದ್ರಶೇಖರ್, ದ್ರಾಕ್ಷಾಯಣಿ, ನೇತ್ರಾವತಿ, ಆಶಾ, ಸುರೇಶ್, ಸಂಪತ್ ರಾಜ್, ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಸುರಯ್ಯಬಾನು ಸ್ವಾಗತಿಸಿದರು.

    New building costing Rs 17 lakh inaugurated in Hukkunda village

  • ಸರ್ಕಾರದ ಜನಪರ ಯೋಜನೆ ಜನರ ಮನೆ ಬಾಗಿಲಿಗೆ

    ಸರ್ಕಾರದ ಜನಪರ ಯೋಜನೆ ಜನರ ಮನೆ ಬಾಗಿಲಿಗೆ

    ಚಿಕ್ಕಮಗಳೂರು: ಜನಪರವಾದ ಆಡಳಿತದ ಮೂಲಕ ಜನರ ಮನೆಬಾಗಿಲಿಗೆ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಹಿರೇಕೊಳಲೆ ಗ್ರಾ.ಪಂ ವ್ಯಾಪ್ತಿಯ ಹೊಸಪುರ ಹಾಗೂ ಅಕ್ಕಪಕ್ಕದ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ‘ವಾಸಿಸುವವನೇ ಮನೆ ಒಡೆಯ’ ಯೋಜನೆಯಡಿ ಹಕ್ಕುಪತ್ರ, ಇ-ಸ್ವತು ವಿತರಿಸಿ ಮಾತನಾಡಿದರು.

    ರಾಜ್ಯದಲ್ಲಿ ಈಗಾಗಲೇ ಈ ಯೋಜನೆಯಡಿ ೪ ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಈ ಯೋಜನೆಗೆ ಚಾಲನೆ ನೀಡಿದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೩೫೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಒಟ್ಟು ೨೮೦೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಗುರಿಹೊಂದಲಾಗಿದೆ ಎಂದರು.

    ೧೯೭೭-೭೮ ರಲ್ಲಿ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ್ ಅರಸ್ ಅವರ ಅವಧಿಯಲ್ಲಿ ‘ಉಳುವವನೇ ಭೂ ಒಡೆಯ’ ಎಂಬ ಕಾನೂನು ಜಾರಿಗೆ ತರಲಾಗಿತ್ತು. ಈ ಮೂಲಕ ಹಲವರಿಗೆ ಭೂಮಿ ಲಭಿಸಿತು ಎಂದು ಹೇಳಿದರು.

    ಜಾತಿ, ಪಕ್ಷ, ಧರ್ಮ ನೋಡದೆ ಈ ಯೋಜನೆಯನ್ನು ಜಾರಿಮಾಡಿ, ಶ್ರೀಮತಿ ಇಂದಿರಾ ಗಾಂಧಿಯವರು ೨೦ ಅಂಶಗಳ ಕಾರ್ಯಕ್ರಮಗಳ ಮೂಲಕ ದೇಶದ ದೀನದಲಿತರ, ಬಡವರ ಏಳಿಗೆಗಾಗಿ ಇಂತಹ ಜನಪರವಾದ ಯೋಜನೆಗಳನ್ನು ರೂಪಿಸಿದ್ದರು ಎಂದು ಸ್ಮರಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃಷಿ ಕುಟುಂಬ, ರೈತ ಕಾರ್ಮಿಕ, ಮಧ್ಯಮ ವರ್ಗದವರ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಅದಕ್ಕೆ ಪೂರಕವಾಗಿ ನಿಮ್ಮ ಪ್ರತಿನಿಧಿಯಾಗಿದ್ದೇನೆ, ಬಡಜನರ ಕಷ್ಟ ಅರಿತು ಮುಖ್ಯಮಂತ್ರಿಗಳು ೫ ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಸದೃಢರನ್ನಾಗಿಸಿಲು ಶ್ರಮಿಸುತ್ತಿದ್ದಾರೆಂದು ಶ್ಲಾಘಿಸಿದರು.

    ನಾಡು-ನುಡಿ, ನೆಲ-ಜಲ ಮುಂತಾದವುಗಳಿಗೆ ಮೊದಲ ಆದ್ಯತೆ ನೀಡುವುದರ ಮೂಲಕ ದೇಶಪ್ರೇಮಿಗಳಾಗಿ ಹಂತ ಹಂತವಾಗಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ಷೇತ್ರದ ೩೪ ಗ್ರಾಮ ಪಂಚಾಯಿತಿಗಳಲ್ಲಿ ತಲಾ ೬೦ ಲಕ್ಷ ರೂ ನೀಡುವ ಮೂಲಕ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ನಾರುಕಂತೆ ಮಠದ ರಸ್ತೆಗೆ ೫೦ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಹಿರೇಕೊಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾಸುನಿಲ್, ತಾಲ್ಲೂಕು ಪಂಚಾಯಿತಿ ಇಓ ವಿಜಯ್‌ಕುಮಾರ್, ತಹಸೀಲ್ದಾರ್ ಕಚೇರಿಯ ಪ್ರಸನ್ನ, ಸಂತೋಷ್, ಹೆಚ್.ಪಿ ಮಂಜೇಗೌಡ, ಜಯರಾಜ್ ಅರಸ್, ಪ್ರವೀಣ್‌ಬೆಟ್ಟಗೆರೆ ಯಶ್ವಂತ್, ಶಿವಕುಮಾರ, ರವಿ,. ಸುರೇಶ, ಪ್ರಸನ್ನ, ಕೇಶವ, ಚಂದ್ರಮೌಳಿ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಪಿಡಿಓ ವಿಜಯ ಸ್ವಾಗತಿಸಿದರು.

    Government’s pro-people scheme at people’s doorsteps

  • ಕೌಶಲ್ಯಭರಿತ ವೃತ್ತಿ ಪರ ವಿಷಯ ಅಧ್ಯಯನ ನಿರುದ್ಯೋಗಕ್ಕೆ ಪರಿಹಾರ

    ಕೌಶಲ್ಯಭರಿತ ವೃತ್ತಿ ಪರ ವಿಷಯ ಅಧ್ಯಯನ ನಿರುದ್ಯೋಗಕ್ಕೆ ಪರಿಹಾರ

    ಚಿಕ್ಕಮಗಳೂರು: ಕೌಶಲ್ಯಭರಿತ ವೃತ್ತಿ ಪರ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೀಘ್ರ ಪರಿಹಾರವಾಗುತ್ತದೆ. ಆರ್ಥಿಕ ಸ್ವಾವಲಂಬನೆಗೆ ಇಂತಹ ಕೋರ್ಸ್‌ಗಳು ಮಾರ್ಗದರ್ಶನ ನೀಡುತ್ತವೆ ಎಂದು ಸಮಗ್ರ ಶಿಕ್ಷಣದ ಉಪ ಯೋಜನಾ ಸಮನ್ವಯಾಧಿಕಾರಿ ಪಿ.ಲೋಕೇಶ್ ತಿಳಿಸಿದರು.

    ಕಳಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಶಿಕ್ಷಣ ಚೌಕಟ್ಟು ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಈಗಂತೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ, ಮಕ್ಕಳ ಉತ್ತೇಜನಕ್ಕಾಗಿ ಯಥೇಚ್ಛವಾಗಿ ಅನುದಾನವನ್ನು ನೀಡುತ್ತಿದೆ. ಇದು ಶೇ.೧೦೦ರಷ್ಟು ಮಕ್ಕಳಿಗಾಗಿಯೇ ವಿನಿಯೋಗವಾಗಬೇಕು ಎಂದರು.

    ಡಯೆಟ್ ಉಪನ್ಯಾಸಕಿ ಸಲೇಹ ಅಂಜುಂ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂತಹ ವಿಷಯಗಳ ಅಧ್ಯಯನದಿಂದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗರಾಜರಾವ್ ಎಚ್.ಎಂ. ಮಾತನಾಡಿ, ನಿಮ್ಮ ಪ್ರತಿ ಹೆಜ್ಜೆಯಲ್ಲೂ ತಂದೆ ತಾಯಿಯರ ಕನಸಿರಬೇಕು. ಅವರ ಬೆವರಿನ ಫಲವೇ ನಮ್ಮ ಜೀವನ. ಓದುತ್ತಿರುವಾಗಲೇ ದುಡಿಮೆ ಮಾಡುತ್ತಾ, ನಿಮ್ಮ ಶಿಕ್ಷಣದ ವೆಚ್ಚವನ್ನು ನೀವೇ ಭರಿಸಲು ಅನುಕೂಲವಾಗುವಂತಹ ಎನ್.ಎಸ್.ಕ್ಯು.ಎಫ್ (ರಾಷ್ಟ್ರೀಯ ಕೌಶಲ್ಯ ಶಿಕ್ಷಣ ಚೌಕಟ್ಟು) ನಂತಹ ಕೋರ್ಸ್‌ಗಳು ಹೊಸ ಭರವಸೆಯಾಗಿವೆ ಎಂದರು.

    ಡಯಟ್‌ನ ನೋಡಲ್ ಅಧಿಕಾರಿ ಸಂಧ್ಯಾ ಮಾತನಾಡಿ, ಮಕ್ಕಳು ತಮ್ಮ ಕೌಶಲ್ಯವನ್ನು ತಾವು ಅರಿತುಕೊಂಡು ಅದಕ್ಕೆ ಪೂರಕ ಶಿಕ್ಷಣ ಪಡೆಯಬೇಕು ಎಂದರು. ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾದ ಸುಬ್ರಹ್ಮಣ್ಯ ಹಾಗೂ ಮೂರ್ತಿ, ಎಸ್.ಡಿ.ಎಂ.ಸಿ.ಯ ಅಧ್ಯಕ್ಷ ಚೇತನ್, ಸದಸ್ಯರು, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ತಿಮ್ಮಪ್ಪ, ಪ್ರೌಢಶಾಲಾ ವಿಭಾಗದ ಎಫ್.ಡಿ.ಎ.ಪ್ರವೀಣ್ ಹಾಗೂ ಪ್ರಾಥಮಿಕ ವಿಭಾಗದ ಸಹಶಿಕ್ಷಕರು ಉಪಸ್ಥಿತರಿದ್ದರು.

    ಇದೇ ವೇಳೆ ವಿಜ್ಞಾನ, ಸಮಾಜ, ಎನ್‌ಎಸ್‌ಕ್ಯೂಎಫ್ ಪ್ರಯೋಗಾಲಯ ಹಾಗೂ ನೂತನ ಗ್ರಂಥಾಲಯವನ್ನು ಗಣ್ಯರು ಉದ್ಘಾಟಿಸಿದರು. ಅನಘ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಮಾ ಸ್ವಾಗತಿಸಿದರು. ಶಿಕ್ಷಕ ತೇಜೋಮೂರ್ತಿ ನಿರೂಪಿಸಿದರು. ಶಿಕ್ಷಕ ಚಂದ್ರಶೇಖರ್ ವಂದಿಸಿದರು.

    Skilled vocational studies are a solution to unemployment

  • ರಕ್ತದಾನವು ಮಾನವೀಯತೆಯ – ಸತ್ಕಾರ್ಯದ ಕೆಲಸ

    ರಕ್ತದಾನವು ಮಾನವೀಯತೆಯ – ಸತ್ಕಾರ್ಯದ ಕೆಲಸ

    ಚಿಕ್ಕಮಗಳೂರು:  ರಕ್ತದಾನವು ಮಾನವೀಯತೆ ಹಾಗೂ ಸತ್ಕಾರ್ಯದ ಕೆಲಸ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶರೀರವನ್ನು ಹಲವಾರು ಕಾಯಿಲೆಗಳಿಂದ ದೂರಿಡುವಲ್ಲಿ ಸಹಕಾರಿಯಾಗ ಲಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ವಿಶ್ವ ಬಂಧುತ್ವ ದಿನದ ಪ್ರಯುಕ್ತ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಏರ್ಪ ಡಿಸಿದ್ಧ ರಾಜಯೋಗಿನಿ ಬ್ರಹ್ಮಾಕು ಮಾರಿ ದಾದಿ ಡಾ|| ಪ್ರಕಾಶ್‌ಮಣಿಜೀಯವರ ೧೮ನೇ ಪುಣ್ಯ ಸ್ಮೃತಿದಿನದ ಪ್ರಯುಕ್ತ ಬೃಹತ್ ರಕ್ತದಾನ ಅಭಿ ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಮಾಜದಲ್ಲಿ ವಿದ್ಯಾದಾನ, ಅಂಗಾಂಗದಾನ, ಅನ್ನದಾನದ ನಡುವೆ ರಕ್ತದಾನವು ಬಹುಪುಣ್ಯದ ಕೆಲ ಸವಾಗಿದೆ. ರಕ್ತದ ಅವಶ್ಯಕತೆಯಿರುವ ತುರ್ತು ಸ್ಥಿತಿಯ ರೋಗಿಗಳನ್ನು ಉಳಿಸಲು ರಕ್ತದಾನ ಬಹುಮುಖ್ಯ ವಾಗಿದೆ. ಹೀಗಾಗಿ ಯುವಸಮೂಹ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಮತ್ತೊಂದು ಜೀವ ಉಳಿಸಲು ಮು ಂದಾಗಬೇಕಿದೆ ಎಂದರು.

    ರಕ್ತಕಣದಲ್ಲಿ ಋಣಾತ್ಮಕ ಮತ್ತು ಧನಾತ್ಮಕಗಳೆಂಬ ಅಂಶಗಳಿವೆ. ವಿಶೇಷವಾಗಿ ‘ಓ’ ರಕ್ತಕಣವು ತುಂಬಾ ವಿರಳವಾಗಿದೆ. ಅಪಘಾತವಾದಲ್ಲಿ ಸಿಗುವುದು ಬಹಳಷ್ಟು ಕಷ್ಟಸಾಧ್ಯ. ಬಿಳಿರಕ್ತಣವು ದೇಹದಲ್ಲಿ ಕ್ಷೀಣಿಸಿದರೆ ಜೀವಕ್ಕೆ ಕುತ್ತು ಬಂದಂತೆ. ಹೀಗಾಗಿ ಪ್ರತಿಯೊಬ್ಬರು ಕನಿಷ್ಟ ವರ್ಷಕ್ಕೆ ಎರಡ್ಮೂರು ಭಾರೀ ರಕ್ತದಾನ ಮಾಡಿ ದರೆ ದೇಹವು ಆರೋಗ್ಯದಿಂದ ಕೂಡಿರಲಿದೆ ಎಂದು ಹೇಳಿದರು.

    ದಾದಿಯರ ಪುಣ್ಯಸ್ಮೃತಿದಿನದ ಪ್ರಯುಕ್ತ ರಕ್ತದಾನ ಸೇರಿದಂತೆ ಉಚಿತ ಕಣ್ಣಿನ ತಪಾಸಣೆಗೆ ಬ್ರಹ್ಮಕು ಮಾರೀಸ್ ಸಂಸ್ಥೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ-ಸಂ ಸ್ಥೆಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ಶ್ರಮಿಸಬೇಕು ಎಂದು ಸಲಹೆ ಮಾಡಿದರು.

    ಪ್ರಜಾಪಿತ ಬ್ರಹ್ಮಕುಮಾರಿ ಜಿಲ್ಲಾ ಸಂಚಾಲಕಿ ಭಾಗ್ಯಕ್ಯ ಪ್ರಾಸ್ತಾವಿಕವಾಗಿ ಮಾತನಾಡಿ ೧೯೩೬ರಲ್ಲಿ ದಾದಿ ಯವರು ಸಂಸ್ಥೆಗೆ ಪಾದಾರ್ಪಣೆ ಮಾಡಿ ಸಾಮಾಜಿಕ ಚಟುವಟಿಕೆ ಮುಖೇನಾ ದೇಶ-ವಿದೇಶಗಳಲ್ಲಿ ಹೆಸರು ಸಂಪಾದಿಸಿದ್ದಾರೆ. ಉಳ್ಳವರ ಕುಟುಂಬಕ್ಕೆ ಸೇರಿದ ದಾದಿಯವರು ಜನಸ್ನೇಹಿ ಕಾರ್ಯ ಆಯ್ಕೆಮಾಡಿಕೊಂ ಡು ಮುನ್ನೆಡೆದವರು ಎಂದರು.

    ಪ್ರಾರಂಭದಲ್ಲಿ ಬ್ರಹ್ಮಕುಮಾರೀಸ್ ಸಂಸ್ಥೆಗೆ ಓಂ ಮಂಡಳಿ ಎಂಬ ಹೆಸರಿತ್ತು. ತದನಂತರ ಬ್ರಹ್ಮಕುಮಾ ರೀಸ್ ಸಂಸ್ಥೆಯಾಗಿ ನಾಮಕರಣಗೊಂಡಿತು. ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿದ ದಾದಿಯವರು ವಿಶ್ವಸೇ ವಾ ಕಾರ್ಯ ವಿಚಾರವಾಗಿ ಸಂಸ್ಥೆಯು ದಾದಿಯವರಲ್ಲಿ ಸಲಹೆ, ಸೂಚನೆಗಳನ್ನು ಪಡೆಯುವಷ್ಟು ಮನ್ನಣೆ ಪಡೆದುಕೊಂಡಿದ್ದರು ಎಂದು ಹೇಳಿದರು.

    ಭಾರತ ಮತ್ತು ನೇಪಾಳ ರಾಷ್ಟ್ರಗಳಲ್ಲಿ ಕಳೆದ ಎರಡು ದಿನಗಳಿಂದ ಬ್ರಹ್ಮಕುಮಾರೀಸ್ ಸಂಸ್ಥೆ ಬೃಹತ್ ರಕ್ತದಾನ ಶಿಬಿರವನ್ನು ಎಲ್ಲೆಡೆ ಆಯೋಜಿಸಿದೆ. ಒಟ್ಟಾರೆ ಒಂದು ಲಕ್ಷ ರಕ್ತ ಸಂಗ್ರಹಿಸುವ ಗುರಿಯಿದ್ದು ಇದೀಗ ೫೦ ಸಾವಿರಕ್ಕೆ ತಲುಪಿದ್ದೇವೆ. ಇದಕ್ಕೆ ಮೂಲ ಪ್ರೇರಣೆ ಡಾ|| ಪ್ರಕಾಶ್‌ಮಣಿಜೀಯವರ ಅಮೂಲ್ಯ ಸೇವೆ. ಹೀಗಾಗಿ ಅವರ ಆದರ್ಶ ಅಳವಡಿಸಿಕೊಳ್ಳಬೇಕಿದೆ ಎಂದರು.

    ಜಿಲ್ಲಾ ಸರ್ಜನ್ ಡಾ|| ಚಂದ್ರಶೇಖರ್ ಮಾತನಾಡಿ ಅಪಘಾತ ಅಥವಾ ಡೆಂಗ್ಯೂ ಪ್ರಕರಣಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದೆ. ಆ ನಿಟ್ಟಿನಲ್ಲಿ ಬ್ರಹ್ಮಕುಮಾರೀಸ್‌ಸಂಸ್ಥೆ ರಕ್ತದಾನ ಶಿಬಿರದ ಮೂಲಕ ಸಾಮಾಜಿಕ ಚ ಟುವಟಿಕೆ ಮುಂದಾಗಿ ಜೀವ ಉಳಿಸುವಂಥ ಸತ್ಕಾರ್ಯ ಮಾಡಿರುವುದು ಉತ್ತಮ ಕೆಲಸವಾಗಿದೆ ಎಂದರು.

    ೧೮ ವರ್ಷ ಮೇಲ್ಪಟ್ಟ ಆರೋಗ್ಯವಂತರು ರಕ್ತದಾನದಲ್ಲಿ ಪಾಲ್ಗೊಳ್ಳಬಹುದು. ಕನಿಷ್ಟ ಮೂರು ತಿಂಗಳಿ ಗೊಮ್ಮೆ ರಕ್ತದಾನ ಮಾಡಿದ್ದಲ್ಲಿ ಶರೀರದಲ್ಲಿ ಹೊಸ ರಕ್ತ ಉತ್ಪಾತ್ತಿಯಾಗಿ ಮಾರಕ ಕಾಯಿಲೆಗಳಿಂದ ತಡೆಗಟ್ಟ ಬಹುದು. ಯಾವುದೇ ವ್ಯಕ್ತಿಯ ರಕ್ತವು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಬೇರೆ ವ್ಯಕ್ತಿಗೆ ನೀಡಲಾ ಗಲಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರ ಮ್ ಅಮಟೆ, ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಪಿ.ಲಿಖಿತ್, ಹೋಲಿಕ್ರಾಸ್ ಆಸ್ಪತ್ರೆ ಆಡಳಿತಾಧಿಕಾರಿ ಲೂಸೀ ಜಾನ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಪ್ರದೀಪ್‌ಗೌಡ, ಜೇಸಿಐ ಅಧ್ಯಕ್ಷ ಪ್ರದೀಪ್‌ಕೋಟೆ, ಎನ್‌ಐಎಂಎ ರಾಜ್ಯ ಉಪಾಧ್ಯಕ್ಷ ಡಾ|| ಕೆ.ಎ.ಅನೀತ್‌ಕುಮಾರ್, ಟೌನ್ ಮಹಿಳಾ ಸಮಾಜ ಅಧ್ಯಕ್ಷೆ ನೇತ್ರ ವೆಂಕಟೇಶ್, ಅಣುವೃತ್ ಸಮಿತಿ ಅಧ್ಯಕ್ಷೆ ಮಂಜು ಬನ್ಸಾಲಿ, ಲಯನ್ಸ್ ಕಾರ್ಯದರ್ಶಿ ಗೋಪಿಕೃಷ್ಣ, ಕನ್ನಡಸೇನೆ ಮಹಿಳಾ ಅಧ್ಯಕ್ಷೆ ಚೈತ್ರಗೌಡ ಮತ್ತಿತರರಿದ್ದರು.

    Blood donation is a humanitarian act – a good deed.

  • ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ವರ್ತಕರಿಂದ 15 ಸಾವಿರ ರೂ ದಂಡ ವಸೂಲಿ

    ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ವರ್ತಕರಿಂದ 15 ಸಾವಿರ ರೂ ದಂಡ ವಸೂಲಿ

    ಚಿಕ್ಕಮಗಳೂರು:  ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಗರಸಭೆ ಗುರಿ ಹೊಂದಿದ್ದು, ಅದರಂತೆ ಅಧಿಕಾರಿ ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದು, ನಗರದ ವಿವಿಧ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ವರ್ತಕರಿಂದ ಸುಮಾರು ೧೫ ಸಾವಿರ ರೂ ದಂಡ ವಸೂಲಿ ಮಾಡಲಾಗಿದೆ ಎಂದು ನಗರಸಭಾಧ್ಯಕ್ಷೆ ಶೀಲಾದಿನೇಶ್ ತಿಳಿಸಿದರು.

    ಅವರು ಇಂದು ನಗರದ ವಿವಿಧ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ವರ್ತಕರಿಗೆ ಎಚ್ಚರಿಕೆ ನೀಡಿ ಮಾತನಾಡಿ ನಗರದ ವರ್ತಕರಿಗೆ ಇದು ಸರಿಯಾದ ಪಾಠವಾಗಿದ್ದು, ಮುಂದೆ ಯಾರೂ ಈ ತಪ್ಪು ಮಾಡಬಾರದು, ಪ್ಲಾಸ್ಟಿಕ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ವರ್ತಕರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದರು.

    ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ನಗರದ ದೇವಿಸ್ಟೋರ್ ಸೇರಿದಂತೆ ಇನ್ನಿತರೆ ಅಂಗಡಿಗಳಲ್ಲಿ ನಗರಸಭೆ ನೀಡಿರುವ ಸೂಚನೆಗಳನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ೩೦೦ ಕೆ.ಜಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು ೧೫ ಸಾವಿರ ರೂ ದಂಡ ವಿಧಿಸಲಾಗಿದೆ ಎಂದರು.

    ನಗರದ ವರ್ತಕರು ಮುಂದೆ ಇದೇ ರೀತಿಯ ತಪ್ಪು ಮಾಡಿದರೆ ನಗರಸಭೆಯಿಂದ ನೀಡಿರುವ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಿ, ಶಾಶ್ವತವಾಗಿ ಅಂಗಡಿಯನ್ನು ಮುಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಕಲ್ಯಾಣ ಮಂಟಪ, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಸಭೆ ನಡೆಸಿ ಸೂಕ್ತ ಎಚ್ಚರಿಕೆ ನೀಡಿದ್ದರೂ ಸೂಚನೆಗಳನ್ನು ಪಾಲನೆ ಮಾಡದೆ ಪ್ಲಾಸ್ಟಿಕ್ ಮಾರಾಟಕ್ಕೆ ಮುಂದಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಹೇಳಿದರು.

    ಹೊರ ಜಿಲ್ಲೆಗಳಿಂದ ಲಾರಿಗಳಲ್ಲಿ ಪ್ಲಾಸ್ಟಿಕ್ ನಗರಕ್ಕೆ ಬರುತ್ತಿದ್ದು, ತಪಾಸಣೆ ನಡೆಸಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಳ್ಳಲು ಈಗಾಗಲೇ ಪೊಲೀಸ್ ಮತ್ತು ನಗರಸಭೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.

    ನಗರಸಭೆ ಸದಸ್ಯ ಎ.ಸಿ. ಕುಮಾರಗೌಡ ಮಾತನಾಡಿ, ನಗರವನ್ನು ಕಸಮುಕ್ತ, ಪ್ಲಾಸ್ಟಿಕ್ ಮುಕ್ತವಾಗಿಸಬೇಕೆಂದು ನಗರಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ನಗರಸಭಾಧ್ಯಕ್ಷರು, ಪೌರಾಯುಕ್ತರು ಸಿಬ್ಬಂದಿ ಜೊತೆಗೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗುತ್ತಿದೆ ಎಂದರು.

    ಮಹಾವೀರ್ ಟ್ರೇಡಿಂಗ್ ಕಂಪನಿಗೆ ೫ ಸಾವಿರ ರೂ, ವರ್ಧಮಾನ್ ದಿನಸಿ ಅಂಗಡಿಗೆ ೨ ಸಾವಿರ ರೂ, ದೇವಿ ಪ್ಲಾಸ್ಟಿಕ್ ಅಂಗಡಿಗೆ ೩ ಸಾವಿರ ರೂ, ಪುಷ್ಪ ಪೇಪರ್ ಮಾರ್ಟ್‌ಗೆ ೫ ಸಾವಿರ ರೂ ದಂಡ ವಿಧಿಸಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದೇವೆ ಎಂದರು.

    ಈ ಸಂದರ್ಭದಲ್ಲಿ ಪರಿಸರ ಅಭಿಯಂತರರಾದ ತೇಜಸ್ವಿನಿ, ನಗರಸಭೆ ಸದಸ್ಯರುಗಳಾದ ಸೈಯದ್ ಜಾವಿದ್, ಅಮೃತೇಶ್ ಚನ್ನಕೇಶವ, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಉಪಸ್ಥಿತರಿದ್ದರು.

    Rs 15000 fine collected from traders selling plastic

  • ಮಹಿಳಾ ಸಹಕಾರ ಬ್ಯಾಂಕ್ ಗ್ರಾಹಕರಿಗೆ ಶೇ.12 ರಷ್ಟು ಡಿವಿಡೆಂಟ್ ಘೋಷಣೆ

    ಮಹಿಳಾ ಸಹಕಾರ ಬ್ಯಾಂಕ್ ಗ್ರಾಹಕರಿಗೆ ಶೇ.12 ರಷ್ಟು ಡಿವಿಡೆಂಟ್ ಘೋಷಣೆ

    ಚಿಕ್ಕಮಗಳೂರು:  ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಗ್ರಾಹಕರಿಗೆ ನಿರಾಶೆಯಾಗದಂತೆ ಬ್ಯಾಂಕಿನ ಲಾಭಾಂಶದಲ್ಲಿ ಶೆ.೧೨ ರಷ್ಟು ಡಿವಿಡೆಂಟ್ ನೀಡುವುದಾಗಿ ಬ್ಯಾಂಕಿನ ಅಧ್ಯಕ್ಷೆ ಕುಮಾರಿ ಬಿ.ಸಿ. ಗೀತಾ ಘೋಷಣೆ ಮಾಡಿದರು.

    ಅವರು ಇಂದು ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ೨೬ ನೇ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಬ್ಯಾಂಕಿನ ಕ್ಯೂಆರ್ ಕೋಡನ್ನು ಬಿಡುಗಡೆಗೊಳಿಸಿ ಮಾತನಾಡಿ ಯಾವುದೇ ವಂಚನೆ ಇಲ್ಲದೆ ಬ್ಯಾಂಕಿನ ಪ್ರಗತಿ ಸಾಗಬೇಕಾದರೆ ಆಡಳಿತ ಮಂಡಳಿಯ ಎಲ್ಲ ಸದಸ್ಯರ ಸಹಕಾರ ಅಗತ್ಯ ಎಂದ ಅವರು, ಕನ್ನಡದಲ್ಲಿ ವ್ಯವಹಾರ ಮಾಡುವುದರ ಜೊತೆಗೆ ತ್ವರಿತ ಸೇವೆ ಮಾಡುವಲ್ಲಿ ಬ್ಯಾಂಕಿನ ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

    ಬ್ಯಾಂಕಿನ ವಹಿವಾಟು ಅತ್ಯಂತ ತೃಪ್ತಿಕರವಾಗಿದೆ. ವಿಶೇಷವಾಗಿ ಇಂದು ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದು, ಇದರಿಂದ ಪ್ರತಿಯೊಬ್ಬ ಗ್ರಾಹಕರಿಗೂ ವ್ಯವಹಾರ ತಲುಪಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

    ಬ್ಯಾಂಕಿನ ವರದಿ ಸಾಲಿನಲ್ಲಿ ರೂ ೧೭೭೩ ಕೋಟಿಗಳ ವ್ಯವಹಾರ ಮಾಡಿದ್ದು ೩೧೩ ಕೋಟಿಗಳ ಠೇವಣಿ ಹೊಂದಲಾಗಿದೆ, ರೂ ೨೦೮ ಕೋಟಿ ಹೊರಬಾಕಿ ಸಾಲ ಇರುತ್ತದೆ, ಬ್ಯಾಂಕಿನಲ್ಲಿ ೭೧೫೭ ಸದಸ್ಯರಿದ್ದು ೨೨೯೧೪ ಗ್ರಾಹಕರನ್ನು ಹೊಂದಿದ್ದು ಒಟ್ಟು ರೂ ೫.೫೭ ಕೋಟಿ ಲಾಭ ಗಳಿಸಿದೆ, ತೆರಿಗೆ ಪಾವತಿ ನಂತರ ರೂ ೩.೩೭ ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ, ಈ ಸಾಲಿನಲ್ಲಿ ಶೇ ೧೨% ಡಿವಿಡೆಂಟನ್ನು ನೀಡಲಾಗುವುದು ಎಂದರು.

    ನಗರದ ಎಲ್ಲಾ ಸಹಕಾರಿ ಬ್ಯಾಂಕ್‌ಗಳಿಗಿಂತ ವಿಭಿನ್ನವಾಗಿ ಸೇವೆ ಸಲ್ಲಿಸುತ್ತಿದ್ದು, ಎಲ್ಲಾ ರೀತಿಯ ಡಿಜಿಟಲ್ ಬ್ಯಾಂಕಿಂಗ್, ಎಟಿಎಂ, ಪಿಓಎಸ್, ಮೊಬೈಲ್ ಬ್ಯಾಂಕಿಂಗ್ ನೀಡಲಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಸಾಧನೆಗೆ ಕಾರಣವಾಗಿದ್ದು, ಶಿವಮೊಗ್ಗದಲ್ಲಿ ನಿವೇಶನ ಖರೀದಿಸಲಾಗಿದೆ. ಹಾಸನದಲ್ಲಿ ನೂತನ ಶಾಖೆ ಆರಂಭವಾಗಿದೆ. ವ್ಯವಹಾರಗಳು ಉತ್ತಮವಾಗಿ ನಡೆಯುತ್ತಿದ್ದು, ಈ ಮೂಲಕ ಬ್ಯಾಂಕಿನ ಗ್ರಾಹಕರಲ್ಲಿ ಹಂತ ಹಂತವಾಗಿ ನಂಬಿಕೆ ಮೂಡಿಸುತ್ತಿದ್ದೇವೆಂದು ತಿಳಿಸಿದರು.

    ಮಹಿಳಾ ಬ್ಯಾಂಕಿನ ೪ ಶಾಖೆಗಳಲ್ಲಿಯೂ ಗ್ರಾಹಕರನ್ನು ನಗುತ ಸ್ವಾಗತಿಸಿ ಸಂಯಮದಿಂದ ಅವರ ಕೆಲಸ ಕಾರ್ಯಗಳನ್ನು ಸಿಬ್ಬಂದಿ ಮಾಡುತ್ತಿದ್ದಾರೆಂದು ಶ್ಲಾಘಿಸಿದರು. ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಣೆ ಜೊತೆಗೆ ಬ್ಯಾಂಕಿನ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಧಾ ಹೆಚ್.ಆರ್‌ರಾಜು, ಸೌಭಾಗ್ಯಗೋಪಾಲನ್, ನಿರ್ದೇಶಕರುಗಳಾದ ಕಮಲಾಬಸವರಾಜ್, ಸೌಭಾಗ್ಯಗೋಪಾಲನ್, ಜಯಶ್ರೀನಂಜರಾಜ್, ಟಿ.ಪಿ ಜಯಲಕ್ಷ್ಮೀರಾಮೇಗೌಡ, ಬನಶಂಕರಿಜೋಷಿ, ತಾರಾಮೋಹನ್, ಕವಿತಾ.ಎಂ.ರಾಹುಲ್ ನಾಯಕ್, ಮೀನಾ.ಪಿ, ಆಶಾಹೇಮಂತ್‌ಕುಮಾರ್, ಸ್ಮಿತಾ ಬಿ.ಎಂ, ಸೌಜನ್ಯ ಕೆ.ಆರ್, ಅರುಂಧತಿ ಹೆಚ್.ಎಸ್, ಸುಮ.ಎಂ.ಸಿ, ಜನರಲ್ ಮ್ಯಾನೇಜರ್ ಸತೀಶ್, ವ್ಯವಸ್ಥಾಪಕರುಗಳಾದ ಕವಿತಾ, ಅಜಿತ್‌ಕುಮಾರ್, ಶ್ರೀರಾಮ್, ಅಭಿಜಿತ್, ಬ್ಯಾಂಕ್ ಸಿಬ್ಬಂದಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

    Women’s Cooperative Bank announces 12% dividend for customers

  • ಸೆ.14ಕ್ಕೆ ನಗರದಲ್ಲಿ ಗಾಯನ ಸ್ಪರ್ಧೆ ಕಾರ್ಯಕ್ರಮ

    ಸೆ.14ಕ್ಕೆ ನಗರದಲ್ಲಿ ಗಾಯನ ಸ್ಪರ್ಧೆ ಕಾರ್ಯಕ್ರಮ

    ಚಿಕ್ಕಮಗಳೂರು: ನಗರದ ವಕೀಲರು, ಕಲಾವಿದರು, ಹಾಡುಗಾರರಾದ ಸಂಘಟಕ ವಿ.ಕೆ. ರಘು ಅವರ ಗಾಯನ ಕಾರ್ಯಕ್ರಮ ಮತ್ತು ಸ್ಪರ್ಧೆ ಸೆ.14 ರಂದು ನಗರದ ಐಜಿ ರಸ್ತೆಯಲ್ಲಿರುವ ವಿಷ್ಣು ಆರ್ಕೇಡ್ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದೆ.

    ಜಿಲ್ಲೆ ಮತ್ತು ರಾಜ್ಯಮಟ್ಟದ ಗಾಯಕರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಆಸಕ್ತ ಗಾಯಕರು ನೊಂದಾಯಿಸಲು 9448004762 ಹಾಗೂ 9986177832 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಜಕರಾದ ವಿ.ಕೆ. ರಘು ತಿಳಿಸಿದ್ದಾರೆ.

    ಮೇಘಮಾಲೆ ಖ್ಯಾತಿಯ ನಾಯಕನಟ ಸುನಾದ್ ರಾಜ್, ನಿರ್ದೇಶಕ ಕೆ.ಎಸ್. ಸುಧಾಕರ್ ಹಾಗೂ ಅಖಿಲ ಭಾರತ ಮಟ್ಟದ ಮಿಸೆಸ್ ಇಂಡಿಯಾ ಫಿನಾಲೆ ಕಿರೀಟ (ಕ್ರೌನ್ ವಿನ್ನರ್) ಖ್ಯಾತಿಯ ಪ್ರತಿಭಾ ಸಾಲಿಯಾನ್ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮ ನಗರದ ಭೂಮಿಕ ಟಿವಿಯಲ್ಲಿ ಅಂದು ನೇರಪ್ರಸಾರವಾಗಲಿದ್ದು, ಜಿಲ್ಲೆಯ 6 ಜನ ಉತ್ತಮ ಗಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಅವರು ತಿಳಿಸಿದ್ದಾರೆ.

    Singing competition program in the city on September 14th

  • ವರಮಹಾಲಕ್ಷ್ಮಿ ಪೂಜೆ ಸಂಕಷ್ಟಗಳ ನಿವಾರಣೆಗೆ ಸಹಕಾರಿ

    ವರಮಹಾಲಕ್ಷ್ಮಿ ಪೂಜೆ ಸಂಕಷ್ಟಗಳ ನಿವಾರಣೆಗೆ ಸಹಕಾರಿ

    ಚಿಕ್ಕಮಗಳೂರು: ಸಕಲ ಸಂಪತ್ತು ನೀಡುವ ವರಮಹಾಲಕ್ಷ್ಮಿಯನ್ನು ಶ್ರಾವಣ ಮಾಸದಲ್ಲಿ ಶುಕ್ರವಾರ ಪೂಜೆ ನೆರವೇರಿಸಿದರೆ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್ ತಿಳಿಸಿದರು.

    ಅವರು ಇಂದು ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಏರ್ಪಡಿಸಲಾಗಿದ್ದ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಕಳೆದ ೨೫ ವರ್ಷಗಳಿಂದ ಬಿಜೆಪಿ ಕಚೇರಿಯಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುತ್ತಾ ಬರುತ್ತಿದ್ದು, ಸುಮಾರು ೨೦೦ ಮಹಿಳೆಯರು ಈ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ತಾಯಿ ವರಮಹಾಲಕ್ಷ್ಮಿ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು.

    ಬಿಜೆಪಿಯಲ್ಲಿ ಧಾರ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಪೂಜೆಗೆ ವಿಶೇಷ ಪ್ರಾಧ್ಯಾನತೆ ನೀಡಿದ್ದಾರೆ ಎಂದು ಶ್ಲಾಘಿಸಿ ಪೂಜೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಹರಿಶಿನ-ಕುಂಕುಮ, ಹೂವು-ಬಳೆ ಫಲತಾಂಬಲವನ್ನು ನೀಡಿ ಗೌರವಿಸುತ್ತೇವೆ. ಜಿಲ್ಲೆಯ ೯ ತಾಲ್ಲೂಕುಗಳ ಮಂಡಲ ಅಧ್ಯಕ್ಷರುಗಳಿಗೆ ಆಹ್ವಾನ ನೀಡಲಾಗಿದ್ದು, ಅದರಂತೆ ಎಲ್ಲಾ ಮಂಡಲ ಸಮಿತಿಯವರನ್ನು ಕರೆತಂದಿದ್ದಾರೆ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರ ಮಂಡಲ ಅಧ್ಯಕ್ಷರಾದ ಪವಿತ್ರ, ಗ್ರಾಮಾಂತರ ಲೀಲಾಪರಮೇಶ್, ಕಡೂರು ಲತಾ, ತರೀಕೆರೆ ಶೃತಿ, ಶೃಂಗೇರಿ ಭಾಗ್ಯ, ಕೊಪ್ಪ ಅನುಸೂಯ, ಮೂಡಿಗೆರೆ ಕಾಮಾಕ್ಷಿ ಹಾಗೂ ಎನ್.ಆರ್ ಪುರ ಮಂಡಲದ ಅಧ್ಯಕ್ಷರು ಭಾಗವಹಿಸಿದ್ದಾರೆ ಎಂದರು.

    ಪಲ್ಲವಿ ಸಿ.ಟಿ. ರವಿ ಮಾತನಾಡಿ, ಮಹಿಳಾ ಮೋರ್ಚಾದಿಂದ ಆಚರಿಸಿಕೊಂಡು ಬರುತ್ತಿರುವ ವರಮಹಾಲಕ್ಷ್ಮಿ ಪೂಜೆ ಯಶಸ್ವಿಯಾಗಿದ್ದು, ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಹಾರೈಸಿದರು.

    ಉಪಾಧ್ಯಕ್ಷೆ ವೀಣಾಶೆಟ್ಟಿ ಮಾತನಾಡಿ, ತಮ್ಮ ತಮ್ಮ ಮನೆಯಲ್ಲಿ ಚಿಕ್ಕದಾಗಿ ಆರಂಭಿಸಿದ ವರಮಹಾಲಕ್ಷ್ಮಿ ಪೂಜೆ ಇಂದು ದೊಡ್ಡಮಟ್ಟದಲ್ಲಿ ಆಚರಣೆಯಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯರನ್ನು ಆಹ್ವಾನಿಸಿ ಬಾಗಿನ ಅರ್ಪಿಸಿರುವುದು ಧಾರ್ಮಿಕ ಭಾವನೆ ಬೆಳೆಯಲು ಪೂರಕವಾಗಿದೆ ಎಂದರು.
    ಚಿಕ್ಕಮಗಳೂರಿನಲ್ಲಿ ಆರಂಭವಾದ ವರಮಹಾಲಕ್ಷ್ಮಿ ಪೂಜೆ ಬಿಜೆಪಿ ವತಿಯಿಂದ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಖಜಾಂಚಿ ನಾರಾಯಣಗೌಡ, ಮುಖಂಡರಾದ ಸಿ.ಹೆಚ್. ಲೋಕೇಶ್, ಕೋಟೆ ರಂಗನಾಥ್, ಶೃತಿ, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

    Varamahalakshmi Puja helps in alleviating difficulties.

  • ಮಳಲೂರು ದಲಿತ ಕುಟುಂಬಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

    ಮಳಲೂರು ದಲಿತ ಕುಟುಂಬಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

    ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಂಬಳೆ ಹೋಬಳಿ ಮಳಲೂರು ಗ್ರಾಮದಲ್ಲಿರುವ ೧೮ ಎಕರೆ ಗೋಮಾಳ ಜಮೀನಿನಲ್ಲಿ ನಿವೇಶನ ರಹಿತ ಪರಿಶಿಷ್ಟ ಕುಟುಂಬದವರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಇಂದು ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

    ಭೀಮ್ ಆರ್ಮಿ, ಯುವ ಬ್ರಿಗೇಡ್, ಅಂಬೇಡ್ಕರ್ ಯುವಕ ಸಂಘ ಮಳಲೂರು ಗ್ರಾಮಸ್ಥರೊಂದಿಗೆ ನಗರಕ್ಕಾಗಮಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

    ಮಳಲೂರು ಗ್ರಾಮದ ಸರ್ವೆ ನಂ.೭೮, ೭೯ ರಲ್ಲಿ ೯.೨೪ ಹಾಗೂ ೮.೩೫ ಎಕರೆ ಗೋಮಾಳ ಜಮೀನು ಇದ್ದು, ಇದನ್ನು ನಿವೇಶನ ರಹಿತರಿಗೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿರುವ ಪರಿಶಿಷ್ಟ ಜನಾಂಗದ ೧೫೦ ಕುಟುಂಬದವರು ನೂರಾರು ವರ್ಷಗಳಿಂದ ವಾಸಿಸುತ್ತಿದ್ದು, ಒಂದು ಕುಟುಂಬದಲ್ಲಿ ೮-೧೦ ಜನರಿದ್ದು, ಮನೆಗಳಿಲ್ಲದೆ ತುಂಬ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಭೀಮ್ ಆರ್ಮಿ ಮುಖಂಡ ಹೊನ್ನೇಶ್ ಮಾತನಾಡಿ, ನಿವೇಶನ ನೀಡುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ ಜನಾಂಗದವರು ೨೦೧೮ ರಲ್ಲೇ ಗ್ರಾಮ ಪಂಚಾಯಿತಿಗೆ ಮಳಲೂರು ಗ್ರಾಮಸ್ಥರು ಮನವಿ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು.

    ದೌರ್ಜನ್ಯ ತಡೆ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ ಮಾತನಾಡಿ, ಸಂವಿಧಾನದ ಆಶಯದಂತೆ ಪ್ರಾಥಮಿಕ ಸೌಲಭ್ಯಗಳಾದ ನಿವೇಶನ, ಮನೆ, ಶಿಕ್ಷಣ, ಆರೋಗ್ಯ ನೀಡಬೇಕೆಂದು ಡಾ. ಬಿ.ಆರ್ ಅಂಬೇಡ್ಕರ್ ಹೇಳಿದ್ದರೂ ಕಾರ್ಯರೂಪಕ್ಕೆ ತರುವಲ್ಲಿ ವಿಳಂಭವಾಗುತ್ತಿದೆ ಎಂದು ದೂರಿದರು.

    ಸ್ವತಂತ್ರ ಬಂದು ೭೯ ವರ್ಷಗಳಾದರೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಡವರಿಗೆ ಮೂಲಭೂತ ಹಕ್ಕುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದು, ಮಳಲೂರು ಗ್ರಾಮದಲ್ಲಿ ೧೫೦ ಪರಿಶಿಷ್ಟ ಜನಾಂಗದ ಕುಟುಂಬಗಳು ವಾಸಿಸುತ್ತಿದ್ದು, ಬಲಾಢ್ಯರು ಒತ್ತುವರಿ ಮಾಡಿರುವ ಭೂಮಿಯನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ತೆರವು ಮಾಡಿ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

    ಗ್ರಾಮಸ್ಥರಾದ ಪವಿತ್ರ ಮಾತನಾಡಿ, ದಲಿತ ಕುಟುಂಬದ ಬಡವರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ಮಲ್ಲಯ್ಯ, ನಳಿನ, ಸುಶೀಲ, ಗಂಗಮ್ಮ, ಪಾರ್ವತಮ್ಮ, ಗಂಗಮ್ಮ, ಪುಟ್ಟಮ್ಮ, ಮಂಜುಳ, ಲಕ್ಷ್ಮಮ್ಮ, ಚಂದ್ರಮ್ಮ, ಸುಶೀಲ, ಸಾವಿತ್ರಿ, ಭಾಗ್ಯ, ಹೂವಮ್ಮ, ಇಂದ್ರಾಣಿ ಮತ್ತಿತರರು ಉಪಸ್ಥಿತರಿದ್ದರು.

    Appeal to the district administration demanding that Malalur Dalit families be given plots