Category: ಚಿಕ್ಕಮಗಳೂರು

  • ಕ್ರಷರ್ ಮಾಲೀಕನೊಂದಿಗೆ ಶಾಮೀಲಾದರೆ ರೈತ ಸಂಘದ ಮುಖಂಡರು

    ಕ್ರಷರ್ ಮಾಲೀಕನೊಂದಿಗೆ ಶಾಮೀಲಾದರೆ ರೈತ ಸಂಘದ ಮುಖಂಡರು

    ಚಿಕ್ಕಮಗಳೂರು: ಮರ್ಲೆ ಹೊಸಳ್ಳಿಯಲ್ಲಿ ಕಾನೂನುಬಾಹಿರವಾಗಿ ನಡೆಸುತ್ತಿರುವ ಖಾಸಗಿ ಸ್ಟೋನ್ ಕ್ರಷರ್ ರದ್ದುಪಡಿಸಲು ೧೫ ದಿನ ಗಡುವು ನೀಡಿ ನಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಈಗ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮರ್ಲೆ ಹೊಸಳ್ಳಿ ಗ್ರಾಮದ ರೈತ ಮಹಿಳೆ ಕಲ್ಪನಾ ದೂರಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಣಿಗಾರಿಕೆ ನಿಯಮಗಳಿಗೆ ವಿರುದ್ಧವಾಗಿ ಮರ್ಲೆ ಹೊಸಳ್ಳಿ ಸಮೀಪ ಕಲ್ಲುಗಣಿಗಾರಿಕೆ ನಡಸಲಾಗುತ್ತಿದೆ. ಗ್ರಾಮಸ್ಥರ ಜಮೀನುಗಳು ೫೦ ಮೀಟರ್ ಅಂತರದಲ್ಲಿದ್ದು, ಧೂಳು, ಕಲ್ಲಿನ ಚೂರುಗಳು, ಕಲುಷಿತ ನೀರು ಜಮೀನಿಗೆ ಆವರಿಸುತ್ತಿದೆ ಎಂದು ಆರೋಪಿಸಿದರು.

    ಜಮೀನಲ್ಲಿ ಕೆಲಸಮಾಡಲು ಭಯವಾಗುತ್ತಿದೆ. ಕಲ್ಲು ಸ್ಪೋಟಿಸುವ ಶಬ್ದದಿಂದ ಕುರಿ, ಹಸುಗಳು ಗರ್ಭಪಾತವಾಗಿ ಸಾವನ್ನಪ್ಪಿವೆ. ಕೃಷಿ, ಹೈನುಗಾರಿಕೆಯನ್ನೇ ಪ್ರಧಾನವಾಗಿ ಮಾಡಿಕೊಂಡು ಬದುಕುತ್ತಿರುವ ನಮಗೆ ಗಣಿಗಾರಿಕೆಯಿಂದ ಬದುಕೇ ದುಸ್ತರವಾಗಿದೆ. ಸಾಲಬಾಧೆಯಿಂದ ಕಾಲ ತಳ್ಳುತ್ತಿದ್ದೇವೆ ಎಂದು ನೊಂದು ನುಡಿದರು.

    ಈ ಬಗ್ಗೆ ತಾವು ಮತ್ತು ಗ್ರಾಮಸ್ಥರು ಸ್ಟೋನ್ ಕ್ರಷರ್ ಮಾಲೀಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು ವಿಚಾರಣೆಯಲ್ಲಿದೆ ಎಂದು ಹೇಳಿದರು.

    ಈ ನಡುವೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನ್ಯಾಯಕೊಡಿಸುವುದಾಗಿ ಹೇಳಿ ನಮ್ಮನ್ನು ನಂಬಿಸಿದರು. ನಮ್ಮಿಂದ ಎಲ್ಲ ದಾಖಲೆಗಳನ್ನು ಪಡೆದು ಸ್ಥಳಪರಿಶೀಲನೆ ಮಾಡಿ, ಸ್ಟೋನ್ ಕ್ರಷರ್ ಮಾಲೀಕರ ವಿರುದ್ಧ ಘೋಷಣೆ ಕೂಗಿದರು. ಕಲ್ಲುಗಣಿಗಾರಿಕೆ ಅಕ್ರಮ, ಕಾನೂನುಬಾಹಿರ ಎಂದು ತಿಳಿಸಿ ಸ್ಥಳದಿಂದ ತೆರಳಿದ್ದರು ಎಂದು ತಿಳಿಸಿದರು.

    ಜು.೨೯ ಕ್ಕೆ ಜಿಲ್ಲಾ ಕೇಂದ್ರಕ್ಕೆ ಬಂದು ಸುದ್ದಿಗೋಷ್ಠಿ ನಡೆಸಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಕಲ್ಲುಗಣಿಗಾರಿಕೆಯನ್ನು ಮುಂದಿನ ೧೫ ದಿನದೊಳಗೆ ಸ್ಥಗಿತಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.

    ಆದರೆ, ಗಣಿಗಾರಿಕೆ ನಿಲ್ಲಲಿಲ್ಲ. ಅವರ ಗಡವೂ ಮುಗಿಯಿತು. ಅವರು ಹೇಳಿದಂತೆ ಆ.೧೨ ರಂದು ಗಣಿಗಾರಿಕೆ ಪ್ರದೇಶಕ್ಕೆ ಬಂದು ಪ್ರತಿಭಟನೆ ನಡೆಸಬೇಕಿತ್ತು. ತಮಗೆ ಬರುವುದಾಗಿ ಹೇಳಿ ೧೦೦ ಮಂದಿಗೆ ಊಟ ಮಾಡಿಸಿ ಎಂದು ಹೇಳಿದ್ದರು. ಆದರೆ ಯಾರೂ ಬರಲಿಲ್ಲ. ಫೋನಾಯಿಸಿದರೆ ಉಡಾಫೆ ಉತ್ತರ ನೀಡಿದ್ದಾರೆ. ರೈತ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಈ ನಡೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ ಎಂದರು.

    ಜತೆಗೆ ಸ್ಟೋನ್ ಕ್ರಷರ್ ಮಾಲೀಕರು ಮತ್ತು ವಿಧಾನ ಪರಿಷತ್ ಸದಸ್ಯರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ. ಈ ರೀತಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ರೈತ ಸಂಘದವರು ಮೌನವಾಗಿರುವುದರ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿ, ಗಣಿಗಾರಿಕೆ ಮಾಲೀಕರೊಂದಿಗೆ ಇವರೇನಾದರು ಶಾಮೀಲಾದರೇ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

    ಮರ್ಲೆ ಹೊಸಳ್ಳಿ ಗ್ರಾಮಸ್ಥರಿಗೆ ನ್ಯಾಯ ಕೊಡಿಸುವ ಇಚ್ಛಾಶಕ್ತಿ ರೈತ ಸಂಘದ ಮುಖಂಡರಿಗೆ ಇದ್ದಲ್ಲಿ ಕೂಡಲೇ ಅವರು ಆಡಿದಂತೆ ಹೋರಾಟ ಮಾಡಿ ತೋರಿಸಬೇಕು. ಇಲ್ಲದಿದ್ದರೆ ಹಸಿರು ಶಾಲು ತೆಗೆದಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    Farmers’ union leaders join hands with crusher owner

  • ಕಸ್ತೂರಿಬಾ ಸದನದಲ್ಲಿ ಸಾಂತ್ವನ ಕೇಂದ್ರ ಮುಂದುವರೆಸಲು ಮನವಿ

    ಕಸ್ತೂರಿಬಾ ಸದನದಲ್ಲಿ ಸಾಂತ್ವನ ಕೇಂದ್ರ ಮುಂದುವರೆಸಲು ಮನವಿ

    ಚಿಕ್ಕಮಗಳೂರು: ನಗರದಲ್ಲಿ ಕಳೆದ ೧೯೬೨ರಲ್ಲಿ ಆರಂಭಗೊಂಡ ತಮ್ಮ ಸಂಸ್ಥೆ ಸಾವಿ ರಾರು ಮಹಿಳೆಯರು, ಮಕ್ಕಳಿಗೆ ಆಶ್ರಯ ನೀಡಿ ತಾತ್ಕಾಲಿಕ ವಸತಿ ಕಲ್ಪಿಸುತ್ತಿದ್ದು, ಆದರೆ ಈಗ ಜಿಲ್ಲಾಧಿ ಕಾರಿಗಳು `ಒನ್ ಸ್ಟಾಪ್ ಸೆಂಟರ್’ ಪ್ರಾರಂಭವಾಗಿರುವುದರಿಂದ ತಮ್ಮ ಸಂಸ್ಥೆಯನ್ನು ಮುಚ್ಚಲು ತಿಳಿಸಿದ್ದಾರೆ. ಆದರೆ ಅದರಿಂದ ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸಿಬ್ಬಂದಿಗಳು ಸೇರಿ ದಂತೆ ನೊಂದ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ನಗರದ ಕಸ್ತೂರಿಬಾ ಸದನದ ಕಾರ್‍ಯದರ್ಶಿ ಮೋಹಿನಿ ಸಿದ್ದೇಗೌಡ ತಿಳಿಸಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರುವ ಅವರು ನೊಂದು ಬರುವ ಮಹಿಳೆಯರು ಹಾಗು ಹೆಣ್ಣು ಮಕ್ಕಳಿಗೆ ಆಶ್ರಯ ಹಾಗು ರಕ್ಷಣೆ ನೀಡುತ್ತಿದ್ದ ತಮ್ಮ ಸಂಸ್ಥೆಗೆ ಕಳೆದ ೨೦೦೧ರಲ್ಲಿ ಸಾಂತ್ವನ ಕೇಂದ್ರ ಆರಂಭಿ ಸಲು ಸರ್ಕಾರ ಮಂಜೂರಾತಿ ನೀಡಿದ್ದು, ಅಂದಿನಿಂದ ನೊಂದ ಮಹಿಳೆಯರ ಕೌಟುಂಬಿಕ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿ ತಮ್ಮ ಸಂಸ್ಥೆ ಕಾರ್‍ಯನಿರ್ವಹಿಸುತ್ತಿದೆ ಎಂದಿದ್ದಾರೆ.

    ನಮ್ಮಲ್ಲಿ ಆಶ್ರಯ ಮತ್ತು ರಕ್ಷಣೆ ದೊರೆಯುತ್ತಿರುವುದರಿಂದ ಬೇರೆ ತಾಲೂಕುಗಳಿಂದ ದೂರುಗಳು ದಾಖಲಾಗಿದ್ದು, ಅದನ್ನು ಸಮರ್ಥ ವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಹೀಗಾಗಿ ಪ್ರತಿ ತಿಂಗಳು ಹತ್ತರಿಂದ ಹದಿನೈದು ಕೌಟುಂಬಿಕ ಸಮಸ್ಯೆಯ ದೂರುಗಳು ದಾಖಲಾಗುತ್ತಿದೆ ಎಂದ ಅವರು, ಆದರೆ ಇತ್ತೀಚೆಗೆ ತಮ್ಮ ಸಂಸ್ಥೆಯುನಿರ್ವಹಿಸುತ್ತಿರುವ ಹೊಣೆ ಗಾರಿಕೆಯ ಮಾಹಿತಿ ತಿಳಿಯದೆ ಸಂಬಂಧಿಸಿದ ಇಲಾಖೆ ಉಪನಿರ್ದೇ ಶಕರೋರ್ವರುನೀಡಿದ ತಪ್ಪು ಮಾಹಿ ತಿಯಿಂದ ತಮ್ಮ ಸಂಸ್ಥೆ ಮುಚ್ಚುವಂತೆ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ

    ಆದರೆ ಆನಂತರ ಖುದ್ದು ಪರಿಶೀ ಲನೆ ಮಾಡಿದ ಅಧಿಕಾರಿ ನಗರದಲ್ಲಿ ಸಾಂತ್ವನ ಕೇಂದ್ರದ ಅಗತ್ಯವಿದೆ ಎಂದು ಸರ್ಕಾರಕ್ಕೆ ಮರು ಪರಿಶೀ ಲನಾ ವರದಿ ನೀಡಿದ್ದಾರೆ. ಈ ಹಿನ್ನೆ ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ನೊಂದ ಮಹಿಳೆಯರಿಗೆ ನೆರವಾಗಲು ಸರ್ಕಾ ರದ ಯೋಜನೆ ಮುಂದುವರೆಸಲು ಆದೇಶ ನೀಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ

    Appeal to continue the comfort center

  • ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸಬಾರದು

    ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸಬಾರದು

    ಚಿಕ್ಕಮಗಳೂರು:  ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸಬಾರದು, ಮಣ್ಣಿನ ಮೂರ್ತಿಗಳನ್ನೇ ಪೂಜಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಆಯುಕ್ತರು ಮತ್ತು ಸಿಬ್ಬಂದಿಗಳೊಂದಿಗೆ ಗುರುವಾರ ನಗರದ ಬಸವನ ಹಳ್ಳಿ ಕುಂಬಾರ ಬೀದಿ ಬಡಾವಣೆಯ ಗಣೇಶನ ಮೂರ್ತಿಗಳನ್ನು ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.

    ನಗರದ ಕೋಟೆ ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ವ್ಯವಸ್ಥೆಗಳನ್ನು ನಗರಸಭೆ ವತಿಯಿಂದ ಮಾಡಲಾಗಿದೆ. ಹೂವು ಮತ್ತು ಪೂಜಾ ಸಾಮಾಗ್ರಿಗಳನ್ನು ನೀರಿಗೆ ಬಿಡಬಾರದು ಅದನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

    ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಪರಿಶೀಲನೆ ವೇಳೆ ಯಾರೂ ಸಹ ಪಿಓಪಿ ಮೂರ್ತಿಗಳನ್ನು ತಯಾರಿಸುವುದಾಗಲಿ, ಬಳಸುವುದಾಗಲಿ ಕಂಡುಬಂದಿಲ್ಲ. ಈ ಹಿಂದೆಯೂ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಮಣ್ಣಿನಿಂದಲೇ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದು ಖುಷಿಯ ವಿಚಾರ ಎಂದರು.

    ನಗರದ ಕೊಟೆ ಕೆರೆಯಲ್ಲಿ ಗಣಪತಿಗಳನ್ನು ವಿಸರ್ಜಿಸಲು ಕಲ್ಯಾಣಿಯೊಂದನ್ನು ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಅಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು. ಬೇರೆ, ಕರೆ ಕಟ್ಟೆಗಳಲ್ಲಿ ವಿಸರ್ಜಿಸಬಾರದು ಎಂದು ತಿಳಿಸಿದರು.

    ಇದಲ್ಲದೆ ನಗರದ ಹನುಮಂತಪ್ಪ ಸರ್ಕಲ್, ಆಜಾದ್ ಪಾರ್ಕ್ ಸರ್ಕಲ್, ದಂಡರ ಮಕ್ಕಿ ಕೆರೆ ಬಳಿ, ಟೌನ್ ಕ್ಯಾಂಟೀನ್ ಸರ್ಕಲ್ ಮತ್ತು ಮಲ್ಲಂದುರು ರಸ್ತೆ ಗಳಲ್ಲಿ ಗಣೇಶ ವಿಸರ್ಜನೆಗೆ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗುವುದು. ಜನತೆ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಅಲ್ಲಿಯೇ ವಿಸರ್ಜಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಕೋಟೆ ಕೆರೆಯಲ್ಲಿ ವಿಸರ್ಜನೆ ಮಾಡುವುದು ಸೂಕ್ತ ಎಂದರು.

    ಗಣೇಶೋತ್ಸವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ೨ ಸಭೆಗಳನ್ನು ನಡೆಸಲಾಗಿದೆ. ಹೊರ ಜಿಲ್ಲೆಗಳಿಂದ ಪಿಓಪಿ ಗಣೇಶ ಮೂರ್ತಿಗಳನ್ನು ತರಿಸಬಾರದು ಎನ್ನುವ ಉದ್ದೇಶದಿಂದ ಜಿಲ್ಲೆ ಮತ್ತು ತಾಲ್ಲೂಕಿನ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಿ ಪೊಲೀಸರನ್ನು ನೇಮಿಸಿ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

    ಇದನ್ನು ಮೀರಿ ಪಿಓಪಿ ಮೂರ್ತಿಗಳನ್ನು ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿರುತ್ತದೆ. ಇದಕ್ಕಾಗಿ ನಗರಸಭೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಎಲ್ಲಾ ಇಲಾಖೆಗೆ ಸಂಬಂಧಿಸಿದ ಪರವಾನಗಿಯನ್ನು ಪಡೆಯಬಹುದು ಎಂದು ತಿಳಿಸಿದರು.

    ನಗರಸಭಾ ಸದಸ್ಯ ಎ.ಸಿ.ಕುಮಾರ್ ಮಾತನಾಡಿ, ನಗರಸಭೆ ಪ್ಲಾಸ್ಟಿಕ್ ಮುಕ್ತ ಮತ್ತು ಕಸ ಮುಕ್ತ ನಗರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶನನ್ನು ಪೂಜಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ನಗರಸಭೆ ಪರಿಸರ ಅಭಿಯಂತರರಾದ ತೇಜಸ್ವಿನಿ, ಆರೋಗ್ಯ ನಿರೀಕ್ಷರಾದ ನಾಗಪ್ಪ, ರಂಗಪ್ಪ, ಈಶ್ವರ್, ವೆಂಕಟೇಶ್, ಅಣ್ಣಯ್ಯ ಮತ್ತು ಸಿಬ್ಬಂದಿ ಇದ್ದರು.

    POP Ganesh idols can be made

  • ಜಿಲ್ಲೆಯ 9 ಲಕ್ಷ ಮಂದಿಗೆ 2 ಸಾವಿರ ಕೋಟಿ ರೂ. ಸಂದಾಯ

    ಜಿಲ್ಲೆಯ 9 ಲಕ್ಷ ಮಂದಿಗೆ 2 ಸಾವಿರ ಕೋಟಿ ರೂ. ಸಂದಾಯ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇದುವರೆವಿಗೆ ಐದು ಗ್ಯಾರಂಟಿ ಯೋಜನೆಗಳಿಂದ ೯ ಲಕ್ಷ ಫಲಾನುಭವಿಗಳಿಗೆ ೨ ಸಾವಿರ ಕೋಟಿ ರೂ. ಸಂದಾಯವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.

    ಇಂದು ನಗರದ ಜಿ.ಪಂ. ಮಿನಿ ಸಭಾಂಗಣದಲ್ಲಿ ಇಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಐದು ಇಲಾಖೆಗಳಿಗೆ ಸಂಬಂಧಪಟ್ಟಂತೆ ಯೋಜನೆಗಳು ಕಾರ್ಯಗತವಾಗಿರುವ ಬಗ್ಗೆ ಯಾವುದಾದರೂ ಕುಂಠಿತ ವಿಚಾರಗಳನ್ನು ಸುದೀರ್ಘವಾಗಿ ಚರ್ಚೆ ಮಾಡುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಶೇ.೯೭ರಷ್ಟು ಯಶಸ್ವಿಯಾಗಿವೆ ಎಂದು ಹೇಳಿದರು.

    ಇದುವರೆಗೆ ಜಿಲ್ಲೆಯಲ್ಲಿ ೨ ಲಕ್ಷದ ೬೨ ಸಾವಿರದ ೯೪೪ ಯಜಮಾನಿಯರಿಗೆ ಗೃಹಲಕ್ಷ್ಮೀ ಮೂಲಕ ಮಾಸಿಕ ಸುಮಾರು ೫೩ ಕೋಟಿ ರೂ.ಗಳನ್ನು ೨೧ ಕಂತುಗಳ ಮೂಲಕ ನೀಡಲಾಗಿದೆ. ಮಾಸಿಕವಾಗಿ ಇದುವರೆಗೂ ೧ ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ತಲಾ ೨೦೦೦ ರೂ. ಜಮಾ ಮಾಡಿದೆ ಎಂದು ಹೇಳಿದರು.

    ಶಕ್ತಿ ಯೋಜನೆಯಡಿ ೬೦ ಸಾವಿರ ಜನ ಪ್ರತಿದಿನ ಮಹಿಳಾ ಫಲಾನುಭವಿಗಳು ಪ್ರಯಾಣ ಮಾಡುತ್ತಿದ್ದಾರೆ, ೨೪ ತಿಂಗಳಲ್ಲಿ ೪ ಕೋಟಿ ೬೭ ಟ್ರಿಪ್ ಬಸ್‌ಗಳು ಓಡಾಡಿವೆ. ಅದಕ್ಕೆ ಸಂಬಂಧಪಟ್ಟಂತೆ ೧೮೮ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಹಿಳೆಯರ ಪ್ರಯಾಣಕ್ಕೆ ಒದಗಿಸಿದೆ ಎಂದ ಅವರು, ಮಲೆನಾಡು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ನರಸಿಂಹರಾಜಪುರ, ಬಾಳೆಹೊನ್ನೂರಿಗೆ ಸದಾ ಓಡಾಡಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಯುವನಿಧಿ ಯೋಜನೆಯಡಿ ಒಟ್ಟು ಜಿಲ್ಲೆಯಲ್ಲಿ ೩೫೦೬ ಜನ ಪದವೀಧರರಿಗೆ ೧ ಕೋಟಿ ೫ ಲಕ್ಷ ೧೨ ಸಾವಿರ ರೂ. ನೀಡಲಾಗಿದೆ. ೩೬ ಜನ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ೫೪ ಸಾವಿರ ರೂ. ನೀಡಲಾಗಿದೆ. ಇದೂವರೆಗೂ ೯ ಕೋಟಿ ೪೮ ಲಕ್ಷ ೨೯ ಸಾವಿರ ರೂ.ಗಳ ಸಂದಾಯವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಸಭೆಗೆ ಮಾಹಿತಿ ನೀಡಿದರು.

    ೪೪೮೮ ವಿದ್ಯಾರ್ಥಿಗಳು ಹೊಸದಾಗಿ ನೋಂದಣಿಯಾಗಿದ್ದು, ಅದರಲ್ಲಿ ೪೪೩೧ ವಿದ್ಯಾರ್ಥಿಗಳು ಪದವೀಧರರಾಗಿದ್ದು, ಡಿಪ್ಲೊಮಾ ಆಗಿರುವ ೫೭ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ ಎಂದ ಅವರು, ಈಗಾಗಲೇ ಎಲ್ಲಾ ತಾಲ್ಲೂಕಿನ ಕಾಲೇಜಿನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಜೊತೆಗೆ ಎಲ್ಲಾ ಕಡೆ ತರಬೇತಿ ಶಿಬಿರಗಳು ಪ್ರಾರಂಭವಾಗಿದ್ದು, ಅದನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ೨ ಲಕ್ಷದ ೪೯ ಸಾವಿರದ ೧೨೮ ಬಿಪಿಎಲ್ ಕಾರ್ಡ್‌ಗಳ ೮ ಲಕ್ಷದ ಒಂದು ಸಾವಿರದ ಐನೂರ ಮೂವತ್ತಾರು ಫಲಾನುಭವಿಗಳಿಗೆ ೫ ಕೆ.ಜಿ. ಅಕ್ಕಿಯ ಹಣದ ಬದಲು ೫ ಕೆ.ಜಿ ಅಕ್ಕಿಯನ್ನು ನೀಡಲಾಗಿದ್ದು, ಆಗಸ್ಟ್ ಮಾಹೆಗೆ ೪೩೪೨೦ ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗಿದ್ದು, ಇದಕ್ಕೆ ಅಂದಾಜು ೯ ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಿದರು. ಯೋಜನೆ ಆರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ೨೯೪ ಕೋಟಿ ರೂಪಾಯಿ ಹಣ ಸಲ್ಲಿಕೆಯಾಗಿದೆ ಎಂದು ಅಧಿಕಾರಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ್ ಹೇಳಿದರು.

    ಇದೇ ವೇಳೆ ಮಾತನಾಡಿದ ಅಧ್ಯಕ್ಷರು, ಅನ್ನಭಾಗ್ಯ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಐರೀಷ್ ತಂತ್ರಜ್ಞಾನದ ಮೂಲಕ ಫಲಾನುಭವಿಗಳನ್ನು ಗುರುತಿಸಿ ಪಡಿತರ ಅಕ್ಕಿ ವಿತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನಮ್ಮ ಜಿಲ್ಲೆಯಲ್ಲೂ ಕೂಡ ಈ ತಂತ್ರಜ್ಞಾನದ ಮೂಲಕ ಫಲಾನುಭವಿಗಳನ್ನು ಗುರುತಿಸಿ ವಿತರಿಸಬೇಕೆಂದರು.

    ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ೩ ಲಕ್ಷದ ೧೨ ಸಾವಿರ ಮೀಟರ್‌ಗಳಿಗೆ ಸಂಬಂಧಿಸಿದಂತೆ ಸುಮಾರು ೯ ಲಕ್ಷ ಜನರಿಗೆ ಪ್ರತಿ ತಿಂಗಳಿಗೆ ಉಚಿತ ವಿದ್ಯುತ್ ಒದಗಿಸುವ ಸಲುವಾಗಿ ೧೨ ಕೋಟಿ ರೂ.ಗಳನ್ನು ಸರ್ಕಾರ ಮೆಸ್ಕಾಂಗೆ ಸಂದಾಯ ಮಾಡುತ್ತಿದ್ದು, ಇದುವರೆಗೆ ೩೦೦ ಕೋಟಿ ರೂ. ವಿನಿಯೋಗವಾಗಿದೆ ಎಂದು ಅಧೀಕ್ಷಕ ಅಭಿಯಂತರ ಪ್ರದೀಪ್ ತಿಳಿಸಿದರು.

    ಸಭೆಯಲ್ಲಿ ಗ್ಯಾರಂಟಿ ಯೋಜನೆ ಉಪಾಧ್ಯಕ್ಷರುಗಳಾದ ಎಸ್.ಎನ್. ಮಂಜುನಾಥ್, ಹೆಚ್.ಎಸ್.ಕೃಷ್ಣೇಗೌಡ, ಹೇಮಾವತಿ ಹಾಗೂ ಚಂದ್ರಮೌಳಿ, ಪ್ರಾಧಿಕಾರದ ಸದಸ್ಯರು, ಹಾಗೂ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರುಗಳು, ಜಿ.ಪಂ. ಮುಖ್ಯ ಯೋಜನಾಧಿಕಾರಿಗಳಾದ ರಾಜ್‌ಗೋಪಾಲ್ ಐದೂ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

    2 thousand crores paid to 9 lakh people in the district

  • ರಾಜ್ಯಕ್ಕೆ ಅಪ್ರತಿಮ ಕೊಡುಗೆ ನೀಡಿದವರು ಡಿ.ದೇವರಾಜ ಅರಸು

    ರಾಜ್ಯಕ್ಕೆ ಅಪ್ರತಿಮ ಕೊಡುಗೆ ನೀಡಿದವರು ಡಿ.ದೇವರಾಜ ಅರಸು

    ಚಿಕ್ಕಮಗಳೂರು:  ಸುದೀರ್ಘ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ತಮ್ಮ ಕ್ರಾಂತಿಕಾರಿ ನಿಲುವುಗಳಿಂದ ರಾಜ್ಯಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿದವರು ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರು ಎಂದು ಕರ್ನಾಟಕ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಜಿಲ್ಲಾ ಪೊಲೀಸ್ ಸಮುದಾಯ ಭವನದಲ್ಲಿ ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸುರವರ ೧೧೦ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ದೇವರಾಜ ಅರಸುರವರು ಸುದೀರ್ಘಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗವನ್ನು ರಚಿಸಿ, ನಂತರದ ದಿನಗಳಲ್ಲಿ ಅಲ್ಪಸಂಖ್ಯಾತರ ಇಲಾಖೆ ಹಾಗೂ ಹಿಂದುಳಿದ ವರ್ಗದ ನಿಗಮ, ಮಂಡಳಿಯನ್ನು ಪ್ರಾರಂಭಿಸಿದರು. ಜೀತ ಪದ್ಧತಿಯನ್ನು ರದ್ದುಗೊಳಿಸಿ, ಬಡವರು ಹಾಗೂ ಶ್ರೀಮಂತರ ನಡುವೆ ಇರುವ ಅಂತರ ಹಾಗೂ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ್ದ ಅವರು, ೧೯೭೩ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು ಕಾರಣೀಭೂತರಾದವರು ಎಂದರು.

    ನಂತರ ರೈತರಿಗೆ ಅನುಕೂಲವಾಗುವಂತೆ ಕಾಳಿ ಯೋಜನೆಯನ್ನು ಜಾರಿಗೆ ತಂದರು. ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಹಿಂದುಳಿದ ವರ್ಗದವರು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬ ಆಶಯ ಹೊಂದಿದ್ದರು. ಈ ಕಾರಣದಿಂದಲೇ ಹಿಂದುಳಿದ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಿ, ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ಟೈಫಂಡರಿ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಿದ್ದರು. ಬಡವರ ಧ್ವನಿಯಾಗಿ ಭೂಸುಧಾರಣೆಯನ್ನು ಜಾರಿಗೆ ತಂದು ಉಳುವವನೇ ಭೂಮಿಯ ಹೊಲದೊಡೆಯ ಎನ್ನುವ ಕಾನೂನನ್ನು ಜಾರಿಗೆ ತಂದರು ಎಂದು ತಿಳಿಸಿದರು.

    ಅಂದು ಶೃಂಗೇರಿ ಕ್ಷೇತ್ರದ ಶಾಸಕರಾಗಿದ್ದ ತಮ್ಮ ತಂದೆ ಬೇಗಾನೆ ರಾಮಯ್ಯನವರು ಅರಸು ಅವರ ನಿಕಟವರ್ತಿಯಾಗಿ ಭೂಸುಧಾರಣಾ ಸಮಿತಿಯ ಸದಸ್ಯರೂ ಆಗಿದ್ದರು. ನಂತರ ಅವರು ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಮಲೆನಾಡು ಭಾಗಕ್ಕೆ ಬೋರ್‌ವೆಲ್ ಅನ್ನು ಒದಗಿಸುವ ಮೂಲಕ ಬೋರ್‌ವೆಲ್ ರಾಮಯ್ಯ ಎಂದೇ ಖ್ಯಾತಿ ಪಡೆದಿದ್ದರು ಎಂದು ಹೇಳಿದರು.

    ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಇಂದು ದೇಶ ಕಂಡ ಅಪ್ರತಿಮ ನಾಯಕ ದೇವರಾಜ ಅರಸು ಅವರ ಹಾಗೂ ಆಧುನಿಕ ತಂತ್ರಜ್ಞಾನದ ಹರಿಕಾರರಾಗಿದ್ದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರ ಹುಟ್ಟುಹಬ್ಬವೂ ಆಗಿದೆ. ತಮ್ಮ ದಕ್ಷ ಆಡಳಿತದ ಮೂಲಕ ಹಲವಾರು ದೂರದೃಷ್ಟಿಯ ಕಾರ್ಯಕ್ರಮಗಳನ್ನು ನೀಡಿದ ದೇವರಾಜ ಅರಸು, ಭೂ ಒಡೆತನದ ಹಕ್ಕು ನೀಡಿರುವುದು ಮಾತ್ರವಲ್ಲ, ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ೨೦ ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದವರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಾಸ್ಟೆಲ್ ಸೌಲಭ್ಯವಲ್ಲದೆ, ವಿದ್ಯಾರ್ಥಿ ವೇತನವನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದು ಬಡವರಿಗೆ ಬದುಕು ಕಟ್ಟಿಕೊಟ್ಟವರು ಎಂದು ತಿಳಿಸಿದರು.

    ದಿ.ಡಿ.ದೇವರಾಜ ಅರಸು ಅವರ ತತ್ವ ಮತ್ತು ಸಾಧನೆಗಳ ಬಗ್ಗೆ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಅರ್ಥಶಾಸ್ತ್ರ-ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮೀಕಾಂತ್ ಉಪನ್ಯಾಸ ನೀಡಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಒಬ್ಬ ಶ್ರೇಷ್ಠ ಮತ್ತು ಧೀಮಂತ ನಾಯಕ, ದಾರ್ಶನಿಕ. ೧೯೬೯ ರಿಂದ ೧೯೭೯ರವರೆಗಿನ ಕಾಲಘಟ್ಟವನ್ನು ಅರಸು ಯುಗವೆಂದು ಕರೆಯಲಾಗುತ್ತದೆ. ೧೯೬೯-೭೦ರ ಅವಧಿಯಲ್ಲಿ ರಾಜ್ಯದ ಅವಿಸ್ಮರಣೀಯ ಬೆಳವಣಿಗೆಗೆ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟವರು. ಅವರು ವಿಶೇಷವಾಗಿ ದೀನ ದಲಿತರು, ಬಡವರು, ಹಿಂದುಳಿದವರ ಬಗ್ಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದವರು. ಶೋಷಿತ ಜನರ ಕಷ್ಟ ಕಾರ್ಪಣ್ಯವನ್ನು ಅರಿತುಕೊಂಡಿದ್ದರು. ಬಡತನ ನಿರ್ಮೂಲನೆಗೆ ಶ್ರಮಿಸಿದ ಮಹಾನ್ ನಾಯಕ ಎಂದು ಹೇಳಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪೌತಿ ಖಾತೆಯ ವಾರಸುದಾರರಿಗೆ ಪಹಣಿಗಳನ್ನು ವಿತರಿಸಲಾಯಿತು. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಜಿಲ್ಲಾ ಅರಸು ಸಂಘದ ಅಧ್ಯಕ್ಷ ಕೆ.ಜೆ.ಮಂಜುನಾಥ ರಾಜ್ ಅರಸ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ನಾಗರಾಜ ಅರಸ್, ನಗರಸಭೆ ಸದಸ್ಯರುಗಳಾದ ಮಧುಕುಮಾರ್ ರಾಜೇ ಅರಸ್, ಪರಮೇಶ್ ಅರಸ್, ಅಲೆಮಾರಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪವಿಭಾಗಾಧಿಕಾರಿ ಸುದರ್ಶನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀನಿವಾಸ ಆಲದರ್ತಿ, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಹೆಚ್.ಪಿ.ಮಂಜೇಗೌಡ, ಜಯರಾಜ ಅರಸ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎನ್.ಮಂಜುನಾಥ್ ಸ್ವಾಗತಿಸಿದರು. ಮಲ್ಲಿಗೆ ಸುಧೀರ್ ಮತ್ತು ತಂಡದವರು ನಾಡಗೀತೆ ಹಾಗೂ ಗೀತ ಗಾಯನ ನಡೆಸಿಕೊಟ್ಟರು.

    ಇದಕ್ಕೂ ತಾಲ್ಲೂಕು ಕಚೇರಿ ಆವರಣದಿಂದ ಆರಂಭಗೊಂಡ ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಚಾಲನೆ ನೀಡಿದರು.

    D. Devaraj Arasu made an unparalleled contribution to the state.

  • ಆ.22ಕ್ಕೆ ಮಂತ್ರಾಲಯದಲ್ಲಿ ಅಂತರಾಜ್ಯ ಸಾಹಿತ್ಯ ಸಮ್ಮೇಳನ

    ಆ.22ಕ್ಕೆ ಮಂತ್ರಾಲಯದಲ್ಲಿ ಅಂತರಾಜ್ಯ ಸಾಹಿತ್ಯ ಸಮ್ಮೇಳನ

    ಚಿಕ್ಕಮಗಳೂರು:  ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಅಂತರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆ.೨೨ ರಂದು ಮಂತ್ರಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಗಡಿನಾಡ ಜಿಲ್ಲೆಗಳು ಹಾಗೂ ಚಿಕ್ಕಮಗಳೂರು ಕಸಾಪ ಜಿಲ್ಲಾ ಘಟಕಗಳು ಒಳಗೊಂಡಂತೆ ನಾಡೋಜ ಡಾ.ಮಹೇಶ್ ಜೋಷಿ ಅವರ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯುತ್ತಿದೆ ಎಂದು ತಿಳಿಸಿದರು.

    ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ. ಪ್ರದೀಪ್‌ಕುಮಾರ್ ಹೆಬ್ರಿ ಅವರನ್ನು ಆಯ್ಕೆಮಾಡಲಾಗಿದೆ. ಮಂತ್ರಾಲಯ ಪೀಠದ ಶ್ರೀ ಸುಭುದೇಂದ್ರ ತೀರ್ಥರು ಸಾನಿಧ್ಯ ವಹಿಸಲಿದ್ದು, ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ನಾಡೋಜ ಡಾ.ಮಹೇಶ್‌ಜೋಷಿ ಅವರು ನೆರವೇರಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷರ ಭಾಷಣದ ಪ್ರತಿಯನ್ನು ಡಾ. ಬಿ.ಎಂ. ಪಟೇಲ್ ಪಾಂಡು ಮತ್ತು ಮದನ್‌ಗೌಡ ಇವರು ನೆರವೇರಿಸಲಿದ್ದು, ತೆಲಂಗಾಣ ಗಡಿನಾಡು ಜಿಲ್ಲೆಯ ಘಟಕದ ಅಧ್ಯಕ್ಷ ಡಾ. ಗುಡಗುಂಟಿ ವಿಠಲ ಅವರು ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಆದ ನಾನು ಆಶಯ ನುಡಿಗಳನ್ನಾಡಲಿದ್ದೇನೆ ಎಂದು ಹೇಳಿದರು.

    ಕಸಾಪ ಕೋಶಾಧ್ಯಕ್ಷ ಡಿ.ಆರ್.ವಿಜಯ್‌ಕುಮಾರ್, ಅಂಜನ್‌ಕುಮಾರ್, ಸೋಮಶೇಖರ್ ಜಮಕಟ್ಟಿ, ಡಾ. ಸಿದ್ದಣ್ಣ ಸಂಗಪ್ಪ ಮೇಟಿ ಭಾಗವಹಿಸಲಿದ್ದಾರೆ ಎಂದರು.

    ಗಡಿನಾಡು ಕನ್ನಡಿಗರ ಕೊಡುಗೆ ಎಂಬ ಗೋಷ್ಠಿ ಅಂದು ಬೆಳಗ್ಗೆ ಆರಂಭವಾಗಲಿದ್ದು, ತೆಲಂಗಾಣ ಹಿರಿಯ ಸಾಹಿತಿ ಅಮರ ದೀಕ್ಷಿತ್ ಪ್ರವೇಶ ನುಡಿಯನ್ನಾಡಲಿದ್ದಾರೆ. ಸಾಹಿತಿ ಕಿಶನ್ ರಾವ್ ಅಧ್ಯಕತೆ ವಹಿಸಲಿದ್ದಾರೆ. ಸಾಹಿತಿ ಧರ್ಮೇಂದ್ರ ಪೂಜಾರಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

    ಕುಮಾರವ್ಯಾಸ ಕಥಾ ಪ್ರಸಂಗದ ಗಮಕ ಗೋಷ್ಟಿ ಎರಡನೆ ಅವಯಲ್ಲಿ ಆರಂಭವಾಗಲಿದ್ದು ಚಂದ್ರಕಲಾ ಕೊಪ್ಪ ಗೋಷ್ಠಿ ಉದ್ಘಾಟಿಸಲಿದ್ದಾರೆ. ತರೀಕೆರೆಯ ಸುನಿತಕಿರಣ್ ಗಮಕ ವಾಚಿಸಲಿದ್ದಾರೆ. ರಾಮಸುಬ್ರಾಯಶೇಟ್ ವ್ಯಾಖ್ಯಾನ ಮಾಡಲಿದ್ದಾರೆ ಎಂದರು.

    ಮೂರನೇ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ತೆಲಂಗಾಣದ ಸಾಹಿತಿ ಚಂದಕ ಚರ್ಲಾ ರಮೇಶ್ ಬಾಬು ವಹಿಸಲಿದ್ದು , ಡಾ.ಮುನಿಸ್ವಾಮಿ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಡಾ. ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಾಗುವುದು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ೫ ರಾಜ್ಯಗಳ ಸಾಧಕರನ್ನು ಗುರುತಿಸಿ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಮೇಶ್‌ಬೇಗಾರ್, ಗಿರಿಯಾಚಾರ್ಯ, ತಾರಾಮತಿ ಕುಲಕರ್ಣಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ, ಮಹುಳಾ ಘಟಕದ ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ, ಹೋಬಳಿ ಅಧ್ಯಕ್ಷೆ ವೀಣಾ, ಸಚಿನ್‌ಸಿಂಗ್ ಸಂದೀಪ್. ಟಿ ಇದ್ದರು.

    Inter-state literary conference to be held at Mantralaya on August 22

  • ಜೀವನದ ನೆನಪು ಮೂಡಿಸಲು ಫೋಟೋಗಳು ಸಹಕಾರಿ

    ಜೀವನದ ನೆನಪು ಮೂಡಿಸಲು ಫೋಟೋಗಳು ಸಹಕಾರಿ

    ಚಿಕ್ಕಮಗಳೂರು: ಉತ್ತಮವಾದ ಫೋಟೋಗಳು ಜೀವನದ ನೆನಪು ಮೂಡಿಸಲು ಸಹಕಾರಿಯಾಗಲಿದ್ದು, ಛಾಯಾಗ್ರಾಹಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಹತ್ವ ಬರುತ್ತದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಮ ಅಮಟೆ ತಿಳಿಸಿದರು.

    ಅವರು ಇಂದು ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಛಾಯಾಗ್ರಾಹಕರ ಸಂಘ ಏರ್ಪಡಿಸಿದ್ದ ವಿಶ್ವ ಫೋಟೋಗ್ರಫಿ ದಿನಾಚರಣೆಯನ್ನು ಫೋಟೋ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಉತ್ತಮವಾದ ಪ್ರವಾಸಿ ತಾಣಗಳಿದ್ದು, ಇದಕ್ಕೆ ಪೂರಕವಾಗಿ ಅಷ್ಟೇ ಪ್ರತಿಭಾನ್ವಿತರಾದ ಛಾಯಾಗ್ರಾಹಕರು ಇದ್ದಾರೆ. ಜಗತ್ತಿನಲ್ಲಿ ನಡೆಯುವ ವಾಸ್ತವಿಕತೆಯನ್ನು ಫೋಟೋ ಮೂಲಕ ತೋರಿಸುವುದರಿಂದ ಪತ್ರಿಕೆಗಳಲ್ಲಿ ಮುದ್ರಣಗೊಂಡು ಆಕರ್ಷಕವಾಗಿರುತ್ತದೆ ಎಂದು ಅಭಿಪ್ರಾಯಿಸಿದರು.

    ಫೋಟೋಗ್ರಫಿ ಇದ್ದಾಗ ಛಾಯಾಗ್ರಾಹಕರು ಇರಬೇಕು, ಈ ನಿಟ್ಟಿನಲ್ಲಿ ಛಾಯಾಗ್ರಾಹಣ ಉಳಿದಿದೆ. ಇದನ್ನು ಎಕ್ಸ್‌ಪೋ ಮಾಡದಿದ್ದರೆ ಏನೋ ಕಳೆದುಕೊಂಡಂತೆ ಎಂಬ ಭಾವನೆ ಮೂಡುತ್ತದೆ. ಎಲ್ಲರೂ ಫೋಟೋ ಗ್ಯಾಲರಿ ಮಾಡಲು ಬೇಕಾದ ಸಲಹೆ ಸಹಕಾರವನ್ನು ಇಲಾಖೆಯಿಂದ ನೀಡುವುದಾಗಿ ಭರವಸೆ ನೀಡಿದರು.

    ಮುಂದಿನ ದಿನಗಳಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಹಾಗೂ ಉತ್ತಮ ಫೋಟೋ ಗ್ಯಾಲರಿಗೆ ಪೊಲೀಸ್ ಭವನದಲ್ಲಿ ಅವಕಾಶ ಮಾಡಿಕೊಡುವುದಾಗಿ ವಿಶ್ವಾಸ ವ್ಯಕ್ತಿಪಡಿಸಿದ ಅವರು, ಇದರಿಂದ ಸಾರ್ವಜನಿಕರಲ್ಲಿ ಫೋಟೋಗ್ರಫಿ ಬಗ್ಗೆ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದರು. ಉತ್ತಮ ಫೋಟೋಗಳ ಪ್ರದರ್ಶನದಿಂದ ಛಾಯಾಗ್ರಾಹಕರ ಪ್ರತಿಭೆ ಬೆಳೆಯುವುದರ ಜೊತೆಗೆ ಸಾರ್ವಜನಿಕರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಸಂಘವು ಬೆಳೆಯಲು ಪೂರಕವಾಗುತ್ತದೆ ಎಂದು ಹೇಳಿದರು.

    ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸಾರ್ವಜನಿಕರಲ್ಲಿ ಫೋಟೋ ಮೂಲಕ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ, ಇನ್ನಷ್ಟು ಛಾಯಾಗ್ರಾಹಕ ಪ್ರತಿಭೆಗಳು ಬೆಳೆಯಲಿ ಎಂದು ಶುಭ ಹಾರೈಸಿದರು.

    ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಛಾಯಾಗ್ರಾಹಕರು ಒಗ್ಗಟ್ಟಿನಿಂದ ಸೇವೆ ಸಲ್ಲಿಸಿದಾಗ ಸಾರ್ವಜನಿಕರಿಗೆ ಬಹಳ ಉಪಯೋಗವಾಗುತ್ತದೆ. ಜೊತೆಗೆ ಫೋಟೋಗಳಿಂದ ಮನಃಪರಿವರ್ತನೆ ಮಾಡಲು ಸಾಧ್ಯ ಎಂದು ತಿಳಿಸಿದರು.

    ನಗರಸಭೆ ಮೂಲಕ ರಾಜೀವ್‌ಗಾಂಧಿ ವಸತಿ ನಿಗಮದಿಂದ ಖಾಲಿ ನಿವೇಶನ ಮತ್ತು ಕಟ್ಟಡಗಳನ್ನು ನಿರ್ಮಾಣ ಮಾಡಲು ಅವಕಾಶವಿದ್ದು, ನುರಿತ ಬಡ ಛಾಯಾಗ್ರಾಹಕರಿದ್ದರೆ ಅಂತಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

    ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಬಗ್ಗೆ ಛಾಯಾಗ್ರಾಹಕರು ತಮ್ಮ ಫೋಟೋಗಳ ಮೂಲಕ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.
    ಜಿಲ್ಲಾಧ್ಯಕ್ಷ ಜಯಚಂದ್ರ ಮಾತನಾಡಿ, ವಿಶೇಷತೆಯೊಂದಿಗೆ ಅತ್ಯಾಧುನಿಕ ಛಾಯಾಗ್ರಾಹಣ ಇಂದು ಎಲ್ಲರಲ್ಲಿ ವಿಶ್ವಾಸ ಮೂಡಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಕಾರ್ಯಕ್ರಮ ನಡೆಯಬೇಕಾದರೆ ಅದರ ಕೇಂದ್ರಬಿಂದು ಛಾಯಾಗ್ರಾಹಕನಾಗಿರುತ್ತಾನೆ ಎಂದರು.

    ಛಾಯಾಗ್ರಾಹಕ ವೃತ್ತಿ ನೂರಾರು ವರ್ಷಗಳ ಇತಿಹಾಸವಿದ್ದು, ಆದರೆ, ಇಂದು ಸಾಮಾಜಿಕ ಭದ್ರತೆ ಛಾಯಾಗ್ರಾಹಕರಿಗೆ ಸಿಗುತ್ತಿಲ್ಲ ಎಂದು ವಿಷಾಧ ವ್ಯಕ್ತಿಪಡಿಸಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಂಘಟಿತರಾಗಿ ಹೋರಾಡಬೇಕಾದ ಅಗತ್ಯ ಇದೆ ಎಂದು ಹೇಳಿದರು.

    ಸಂಘದ ಎಲ್ಲಾ ಸದಸ್ಯರುಗಳಿಗೆ ಗುರುತಿನ ಚೀಟಿಯನ್ನು ನೀಡಲಾಯಿತು ಕಾರ್ಯಕ್ರಮದಲ್ಲಿ ಛಾಯೆಶ್ರೀ ಪ್ರಶಸ್ತಿಗೆ ಭಾಜನರಾದ ಸತೀಶ್ ಗವನಹಳ್ಳಿ ಮತ್ತು ಯತೀಶ್ ಕೇತುಮಾರನಹಳ್ಳಿ ಇವರನ್ನು ಗೌರವಿಸಿ ಸನ್ಮಾನಿಸಿಲಾಯಿತು. ವೇದಿಕೆಯಲ್ಲಿ ಕಾರ್ಮಿಕ ಅಧಿಕಾರಿ ಬಿ.ಸಿ. ಸುರೇಶ್, ತಾಲ್ಲೂಕು ಅಧ್ಯಕ್ಷ ಸುನಿಲ್ ಕುಮಾರ್, ಛಾಯಾಗ್ರಾಹಕರಾದ ಎ.ಎನ್. ಮೂರ್ತಿ, ರಮೇಶ್, ಜಗದೀಶ್, ವಿನಯ್, ರಘು, ಶಿವು, ಖಜಾಂಚಿ ರುದ್ರೇಶ್, ಉಪಾಧ್ಯಕ್ಷ ಚೇತನ್ ಉಪಸ್ಥಿತರಿದ್ದರು.

    ಛಾಯಾಗ್ರಾಹಕ ಹಾಗೂ ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಸಂಪಾದಕ ಕೆ.ಎಸ್. ಕಿಶೋರ್ ಕುಮಾರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

    Photos that remind us of life are helpful.

  • ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆರೋಗ್ಯ ಸಚಿವರಿಗೆ ಮನವಿ

    ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆರೋಗ್ಯ ಸಚಿವರಿಗೆ ಮನವಿ

    ಚಿಕ್ಕಮಗಳೂರು:  ರಾಜ್ಯದ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ ಇಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು.

    ಚಿಕ್ಕಮಗಳೂರು ಬಿ.ಎಂ.ಎಸ್ ಸಂಘದ ಜಿಲ್ಲಾಧ್ಯಕ್ಷೆ ಕ್ಯಾತನಬೀಡು ಗಾಯಿತ್ರಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ ಸಂಘವು ಕಳೆದ ೧೫ ವರ್ಷಗಳಿಂದ ಆಶಾ ಕಾರ್ಯಕರ್ತೆಯರ ಅಭಿವೃದ್ಧಿಗೆ ಮತ್ತು ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿದ್ದು, ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜನೆಗೊಂಡಿದೆ. ಸಂಘಟನೆಯು ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಅವರಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ, ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಿದೆ.

    ನಮ್ಮ ಬೇಡಿಕೆಗಳಾದ ಪ್ರತಿ ತಿಂಗಳು ಗೌರವಧನವನ್ನು ನಿಗಧಿತ ದಿನಾಂಕದಂದು ನೀಡಬೇಕು, ತಿಂಗಳಿಗೆ ೨೦ ಸಾವಿರ ರೂಗಳಿಗೆ ಗೌರವಧನವನ್ನು ಹೆಚ್ಚಿಸಬೇಕು. ಇಎಸ್‌ಐ, ಪಿಎಫ್, ಪಿಕ್ಸೆಡ್ ಇನ್ಸೆಂಟಿವ್ ಸೇರಿಸಿ ಕೊಡಬೇಕು, ನಿವೃತ್ತಿ ವೇಳೆಯಲ್ಲಿ ಸಿಗುವ ಭತ್ಯೆಯನ್ನು ತಕ್ಷಣ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ಜೀವವಿಮಾ ಸೌಲಭ್ಯವನ್ನು ನೀಡುವ ಜೊತೆಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
    ಆಶಾ ಕಾರ್ಯಕರ್ತೆಯರ ಕುಟುಂಬದವರಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಕೂಡಲೇ ಈ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ರಾಜ್ಯಸರ್ಕಾರ ಸ್ಪಂದಿಸದೆ ಮುಂದೂಡುತ್ತಿರುವುದು ವಿಷಾಧನೀಯ ಎಂದು ಬೇಡಿಕೆಗಳನ್ನು ಬಗೆಹರಿಸಿ ಪರಿಹರಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಿಕ್ಟೋರಿ ರಾಣಿ, ಮಂಗಳೂರು ಜಿಲ್ಲಾ ಸಂಘದ ಅಧ್ಯಕ್ಷೆ ರೇವತಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

    Appeal to the Health Minister to fulfill the various demands of ASHA workers

  • ಮಕ್ಕಳ ಹಕ್ಕು ಕಾವಲು ಸಮಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಲಿ

    ಮಕ್ಕಳ ಹಕ್ಕು ಕಾವಲು ಸಮಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಲಿ

    ಚಿಕ್ಕಮಗಳೂರು: `ಭದ್ರ ಬಾಲ್ಯ’ ಯೋಜನೆಯಡಿ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಹಕ್ಕು ಕಾವಲು ಸಮಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬೆಂಗಳೂರಿನ ಕೆ.ಹೆಚ್.ಪಿ.ಟಿ. ಸಂಯುಕ್ತಾಶ್ರಯದಲ್ಲಿ ಇಂದು ನಗರದ ಜಿ.ಪಂ. ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಭದ್ರ ಬಾಲ್ಯದ ಪ್ರಧಾನ ಆಶಯಗಳಲ್ಲಿ ಒಂದಾದ ಗ್ರಾಮ ಪಂಚಾಯಿತಿ ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ೧೫ ಮಂದಿಯ ಮಹಿಳಾ ಮತ್ತು ಮಕ್ಕಳ ಹಕ್ಕು ಕಾವಲು ಸಮಿತಿಗೆ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಮತ್ತು ಅಧಿಕಾರ ಇದೆ. ಈ ಸಮಿತಿಗೆ ಮಗುವಿನ ಅಪೌಷ್ಟಿಕತೆ, ಹಸಿವಿನ ಸಮಸ್ಯೆ, ಲೈಂಗಿಕ ಶೋಷಣೆ, ಕೌಟುಂಬಿಕ ಹಿಂಸೆ, ಶಾಲೆಗೆ ಹೋಗದೆ ಇರುವುದು ಇತ್ಯಾದಿ ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯದ ಜೊತೆಗೆ ಅಧಿಕಾರವೂ ಇದೆ. ಈ ಸಮಿತಿಯಲ್ಲಿ ಪೊಲೀಸ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಮುಖ್ಯಶಿಕ್ಷಕರು, ಸ್ವಸಹಾಯ ಸಂಘದ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಒಂದು ವೇಳೆ ಆ ಗ್ರಾ.ಪಂ. ಅಧ್ಯಕ್ಷರು ಮಹಿಳೆಯಾಗಿದ್ದರೆ ಅವರೇ ಈ ಸಮಿತಿಯ ಅಧ್ಯಕ್ಷರೂ ಆಗಿರುತ್ತಾರೆ ಎಂದು ತಿಳಿಸಿದರು.

    ಬಾಲ್ಯವಿವಾಹದಂತಹ ಸಂದರ್ಭದಲ್ಲಿ ಈ ಸಮಿತಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದ ಅವರು, ಇಂತಹ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕತೆಯರು ಅಥವಾ ಮೇಲ್ವಿಚಾರಕರನ್ನು ಹೊಣೆ ಮಾಡಲಾಗುತ್ತಿದೆ. ಬಾಲ್ಯವಿವಾಹ ನಡೆಯುತ್ತಿರುವ ವೇಳೆ ಈ ಬಗ್ಗೆ ದೂರು ನೀಡಬೇಕಾಗುತ್ತದೆ. ಒಂದು ವೇಳೆ ಬಾಲ್ಯ ವಿವಾಹ ನಡೆಸಿದ ಕುಟುಂಬದವರು ಪ್ರಭಾವಿಗಳಾಗಿದ್ದರೆ, ದೂರು ನೀಡಿದ ಕಾರಣಕ್ಕೆ ಊರಿನಿಂದ ಹೊರ ಹಾಕುವುದು, ಬೆದರಿಕೆ ಹಾಕುವಂತಹ ಸಂದರ್ಭಗಳು ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಸಮಿತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

    ಬೆಳೆಯುವ ಮಗುವಿಗೆ ಸುರಕ್ಷಿತ ವಾತಾವರಣ ಕಲ್ಪಿಸಿ ಕೊಡಬೇಕು ಎನ್ನುವುದು `ಭದ್ರ ಬಾಲ್ಯ’ ಯೋಜನೆಯ ಮುಖ್ಯ ಉದ್ದೇಶ. ನಮ್ಮ ಜಿಲ್ಲೆಯಲ್ಲಿ ಪೋಕ್ಸೋ, ಬಾಲ ಗರ್ಭಿಣಿ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಇದು ಇಡೀ ಕುಟುಂಬದ ಪ್ರಶ್ನೆಯಾಗಿದೆ. ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಗರ್ಭಿಣಿಯಾದಲ್ಲಿ, ಮಾನಸಿಕವಾಗಿ, ದೈಹಿಕವಾಗಿ ಸಾಮರ್ಥ್ಯವಿಲ್ಲದಿರುವ ಸಂದರ್ಭದಲ್ಲಿ ಗರ್ಭಿಣಿಯಾಗಿ ತಾಯ್ತನಕ್ಕೆ ಒಳಗಾಗುವುದರಿಂದ ಆ ರೀತಿ ಹುಟ್ಟಿದ ಮಗುವೂ ಸಮರ್ಥವಾಗಿರುವುದಿಲ್ಲ. ಬಾಲ್ಯ ವಿವಾಹವಾದ ಬಗ್ಗೆ ಪ್ರಕರಣ ದಾಖಲಿಸುವುದರಿಂದ ಹುಡುಗನ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿ ನಿನ್ನನ್ನು ಮದುವೆಯಾದ ಕಾರಣದಿಂದಾಗಿ ಮನೆ ಮಗ ಜೈಲು ಸೇರಬೇಕಾಯಿತು ಎನ್ನುವ ನಿಂದನೆಗೂ ಒಳಗಾಗಬೇಕಾಗುತ್ತದೆ. ಹೀಗಾದಾಗ ಆಗತಾನೇ ಹುಟ್ಟಿದ ಮಗುವಿನ ಗತಿಯೇನು? ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಅಕಾಲಿಕ ಗರ್ಭಧಾರಣೆಗೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗದಂತೆ, ಶೋಷಣೆಗೆ ಒಳಗಾಗದಂತೆ ಮುಂಜಾಗ್ರತೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

    ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಪ್ರಧಾನವಾದ ಈ ಜಿಲ್ಲೆಯಲ್ಲಿ ೧೦೦೦ ದಷ್ಟಿದ್ದ ಹೆಣ್ಣಿನ ಜನನ ಪ್ರಮಾಣ ಈಗ ೯೦೦ಕ್ಕೆ ಕುಸಿದಿz. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಣ್ಣು ಮಕ್ಕಳ ಜೀವನವನ್ನು ಉಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.
    ಅಧಿಕಾರಿಗಳು ಹೆಣ್ಣು ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಪೋಕ್ಸೋ, ಬಾಲ್ಯವಿವಾಹ, ಬಾಲ ಗರ್ಭಿಣಿಯಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪಂಚಾಯಿತಿ ಮಟ್ಟದ ಕಾವಲು ಸಮಿತಿ ಮೂಲಕ ಕ್ರಮ ವಹಿಸಲಾಗಿದೆ. ಈ ಜಿಲ್ಲೆಯಲ್ಲಿ ಏಳೆಂಟು ಬಾಲ್ಯ ವಿವಾಹಗಳನ್ನು ತಡೆದಿರುವ ಹೆಮ್ಮೆ ನಮ್ಮದಾಗಿದ್ದು, ಇದು ಪ್ರಥಮ ಹೆಜ್ಜೆ. ಗ್ರಾಮ ಮಟ್ಟದಲ್ಲಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾವಲು ಸಮಿತಿಯನ್ನು ಉತ್ತೇಜಿಸಿದರೆ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಒಂದು ಹೆಣ್ಣಿಗೆ ಮದುವೆ ೧೮ ವರ್ಷದ ಬಳಿಕ ಎಂದು ಕಾನೂನಿದೆ. ಕೆಲವೊಂದು ಕಾರಣಗಳಿಂದ ಬಾಲ್ಯ ವಿವಾಹವಾಗಿ ಮುಂದೆ ಕಷ್ಟಪಡುತ್ತಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ. ಇಂತಹ ಸಮಸ್ಯೆಗಳಿಗೆ ಹೆಣ್ಣು ಮಕ್ಕಳು ಒಳಗಾಗದಂತೆ ನಾವು ನೋಡಿಕೊಳ್ಳಬೇಕು ಎಂದರು.

    ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾರ್ಮಿಕ ವರ್ಗದಲ್ಲಿ, ಕೆಲವೊಂದು ಸಮುದಾಯಗಳಲ್ಲಿ ವಲಸಿಗರಲ್ಲಿ ಹಾಗೂ ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳು ಇಂತಹ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಕಾವಲು ಸಮಿತಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸಮಾಜಕ್ಕೆ ಹಾಗೂ ಹೆಣ್ಣು ಮಕ್ಕಳ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ನಮ್ಮದು ಎಂದು ಎಂದು ಹೇಳಿದರು.

    ಕೆ.ಹೆಚ್.ಪಿ.ಟಿ.ಯ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹೆಚ್.ಎಲ್.ಮೋಹನ್ ಮಾತನಾಡಿದರು. ಕೆಹೆಚ್‌ಪಿಟಿ ಸಕ್ರಿಯ ಕಾವಲು ಸಮಿತಿ ತರಬೇತಿ ಕೈಪಿಡಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಮಂಜುನಾಥ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ವೈ.ಆಲದಾರ್ತಿ ಮುಂತಾದವರು ಭಾಗವಹಿಸಿದ್ದರು.

    Let the Child Rights Protection Committee function effectively.

  • ಕೃಷ್ಣಾರಾಧಾ ವೇಷ ಸಂಸ್ಕೃತಿಯ ಪ್ರತೀಕ

    ಕೃಷ್ಣಾರಾಧಾ ವೇಷ ಸಂಸ್ಕೃತಿಯ ಪ್ರತೀಕ

    ಚಿಕ್ಕಮಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಆಲೋಚನೆ, ನೂತನ ಆವಿಷ್ಕಾರದೊಂದಿಗೆ ಜೆವಿಎಸ್ ಕಿಡ್ಸ್ ಎಲ್.ಕೆ.ಜಿ, ಯು.ಕೆ.ಜಿ ಮತ್ತು ನರ್ಸರಿ ಮಕ್ಕಳಿಗೆ ಹೊಸ ವಿಭಾಗ ತೆರೆಯಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು.

    ಅವರು ಇಂದು ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆಯ ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಐ.ಎಂ.ಜಿ.ಎಂ.ಎಂ ನರ್ಸರಿ, ಪೈಮರಿ ಮತ್ತು ಜೆವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೇಷಭೂಷಣ ರಾಧಾಕೃಷ್ಣ ಸ್ಪರ್ಧೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಜೆವಿಎಸ್ ಶಾಲಾ ಸಿಬ್ಬಂದಿ ಶಿಕ್ಷಣದ ಜೊತೆಗೆ ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕೃಷ್ಣ ಜನ್ಮಾಷ್ಠಮಿ ಪವಿತ್ರವಾದ ಹಬ್ಬದ ದಿನದಂದು ನಮ್ಮ ಎಲ್ಲಾ ಪುಟಾಣಿ ಮಕ್ಕಳು ಕೃಷ್ಣ, ರಾಧೆಯರಾಗಿ ವೇಷ ಧರಿಸಿ ಬಂದಿರುವುದು ಅವರ ಜೀವನದಲ್ಲಿ ಕೃಷ್ಣನ ರೀತಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

    ಕೃಷ್ಣನ ಚಾಣುಕ್ಯತನ, ವೀರ ಬುದ್ಧಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಅಳವಡಿಸಿಕೊಳ್ಳಲಿ ಎಂದು ಹೇಳಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ನ್ಯಾಯ ನಿರ್ಣಾಯಕರು ಪಾರದರ್ಶಕ ನಿರ್ಧಾರ ನೀಡಲಿ ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ರಾಧೆ ವೇಷ ಹಾಕಿ ಬಂದಿರುವುದು ಸಂಸ್ಕೃತಿಯ ಪ್ರತೀಕ ಒಂದು ವಾರದಿದಲೇ ತಯಾರಿ ನಡೆಸಿರುವ ಪೋಷಕರು ಸಹಕರಿಸಿದ್ದಾರೆ ಎಂದು ಧನ್ಯವಾದಗಳನ್ನು ಅರ್ಪಿಸಿದರು.

    ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ವೇಷಭೂಷಣ ಸ್ಪರ್ಧೆ ಏರ್ಪಡಿಸಿದ್ದು, ಕೃಷ್ಣನ ಇರುವಿಕೆಯನ್ನು ಮಹಾ ಭಾರತದ ಪುಸ್ತಕದಲ್ಲಿ ನೋಡುತ್ತೇವೆ, ವೇಷಭೂಷಣ ಸ್ಪರ್ಧೆಯ ಮೂಲಕ ಮಕ್ಕಳಲ್ಲಿ ಸಂಸ್ಕೃತಿ ಬಿಂಬಿಸಲು ಪೂರಕವಾಗಿದೆ ಎಂದರು.

    ಪಾಂಡವರು ಯುದ್ಧವನ್ನು ಗೆಲ್ಲುವುದಕ್ಕೆ ಶ್ರೀಕೃಷ್ಣನ ಪಾತ್ರ ಮುಖ್ಯಾವಾಗಿದ್ದು, ಕೃಷ್ಣನ ಜೀವನ ಚರಿತ್ರೆ ಚಿಕ್ಕವರಿಂದ ದೊಡ್ಡವರ ವರೆಗೆ ಪಾಠವಾಗಬೇಕು, ಯಶಸ್ಸಿನ ಗುಟ್ಟು, ಕೃಷ್ಣ ವಹಿಸಿದ ಪಾತ್ರ, ಮಹಾ ಭಾರತ ಯುದ್ಧದಲ್ಲಿ ಉಪಯೋಗಿಸಿದ ಬುದ್ಧಿವಂತಿಕೆಯಿಂದ ಪಾಂಡವರು ಗೆಲ್ಲಲು ಕಾರಣವಾಯಿತು ಎಂದು ವಿವರಿಸಿದರು.

    ಕೃಷ್ಣ ಗೋವುಗಳನ್ನು ಮೇಯಿಸುವ ಜೊತೆಗೆ ತರಲೆ ಬುದ್ಧಿ, ಅಮ್ಮನೊಂದಿಗೆ ತುಂಟಾಟದ ಬಗ್ಗೆ ಪುಸ್ತಕದಲ್ಲಿ ಅಧ್ಯಾಯನ ಮಾಡಿದ್ದು, ಕೃಷ್ಣ, ರಾಧೆ ಜೋಡಿ ಇಂದು ಎಲ್ಲರ ಮನಸ್ಸಿನಲ್ಲಿ ಉಳಿದಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಸಹ ಕಾರ್ಯದರ್ಶಿ ರತೀಶ್ ಕುಮಾರ್, ಪಿ. ರಾಜು, ಅಶೋಕ್, ಮುಖ್ಯ ಶಿಕ್ಷಕ ವಿಜಿತ್ ವ್ಯವಸ್ಥಾಪಕರಾದ ತೇಜಸ್ ಮೂರ್ತಿ, ಅಭಿಷೇಕ್, ತೀರ್ಪುಗಾರರಾದ ಗೀತಾ ಪ್ರಕಾಶ್, ರೂಪ ರವಿ, ವೀಣಾ ವಿಕ್ರಮ್, ಶಿಕ್ಷಕರಾದ ಪ್ರಮೀಳಾ, ಲೀಲಾವತಿ, ಜ್ಯೋತಿ, ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Krishna Radha costume is a symbol of culture