Category: ಚಿಕ್ಕಮಗಳೂರು

  • ಅಜಾದ್ ಪಾರ್ಕ್ ಗಣಪತಿ ಪೆಂಡಾಲ್‌ಗೆ ಭೂಮಿಪೂಜೆ

    ಅಜಾದ್ ಪಾರ್ಕ್ ಗಣಪತಿ ಪೆಂಡಾಲ್‌ಗೆ ಭೂಮಿಪೂಜೆ

    ಚಿಕ್ಕಮಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಗಣೇಶೋತ್ಸವ ನಡೆಸಲು ಪೆಂಡಾಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಸರ್ವರಿಗೂ ವಿಘ್ನವಿನಾಯಕ ಒಳಿತನ್ನು ಮಾಡಲಿ ಎಂದು ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಶುಭ ಹಾರೈಸಿದರು.

    ಅವರು ಇಂದು ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಅಜಾದ್ ಪಾರ್ಕ್ ಗಣಪತಿ ಪೆಂಡಾಲ್‌ಗೆ ೮೯ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಿ ಈ ಸಂದರ್ಭದಲ್ಲಿ ಭಾಗವಹಿಸಿದ್ದ ಮಂಗಳ ತಮ್ಮಯ್ಯ ಮಾತನಾಡಿ, ಈ ವರ್ಷದ ಗಣೇಶ ಚತುರ್ಥಿ ನಗರದ ಎಲ್ಲಾ ನಾಗರೀಕರಿಗೆ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

    ಪಲ್ಲವಿ ಸಿ.ಟಿ. ರವಿ ಮಾತನಾಡಿ, ವಿಘ್ನವಿನಾಯಕ ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ ಎಂದು ಕೋರಿದರು. ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಕೇಶವಮೂರ್ತಿ ಮಾತನಾಡಿ, ಆ.೨೭ ರಿಂದ ೨೧ ದಿನಗಳ ಕಾಲ ಶ್ರೀಯವರನ್ನು ಪ್ರತಿಷ್ಠಾಪನೆ ಮಾಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹರಿಕಥೆ, ಭಜನೆ, ಆರ್ಕೆಸ್ಟ್ರಾ, ಸುಗಮ ಸಂಗೀತ, ಮ್ಯಾಜಿಕ್ ಶೋ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

    ಗಣೇಶೋತ್ಸವದ ಅಂಗವಾಗಿ ಗಣಹೋಮ, ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದು, ಈ ಕಾರ್ಯಕ್ಕೆ ಇಂದು ಭೂಮಿಪೂಜೆಯನ್ನು ಏರ್ಪಡಿಸಲಾಗಿದೆ. ಇಂದಿನಿಂದ ಪೆಂಡಾಲ್ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು. ಪ್ರತಿ ವರ್ಷದಂತೆ ನಗರದ ಬಸವನಹಳ್ಳಿ ರಂಗನಾಥಸ್ವಾಮಿ ದೇವಾಲಯದಿಂದ ಶ್ರೀಯವರನ್ನು ಎಂಜಿ ರಸ್ತೆಯಲ್ಲಿ ಮೆರವಣಿಗೆ ಮೂಲಕ ಪೆಂಡಾಲಿಗೆ ತಂದು ಪ್ರತಿಷ್ಠಾಪಿಸಲಾಗುವುದೆಂದು ತಿಳಿಸಿದರು.

    ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್. ಕುಬೇರ, ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಚಿ ಮಂಜುನಾಥ್ ಸೇರಿದಂತೆ ೨೧ ಜನ ನಿರ್ದೇಶಕರುಗಳನ್ನು ಆಯ್ಕೆಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ರೂಪ ಕುಮರ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್. ಕುಬೇರ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

    Bhumi Puja for Azad Park Ganapati Pendal

  • ಸವಿತಾ ಸಮಾಜದಿಂದ ಕಣ್ಣು-ದಂತ ತಪಾಸಣೆ ಶಿಬಿರ

    ಸವಿತಾ ಸಮಾಜದಿಂದ ಕಣ್ಣು-ದಂತ ತಪಾಸಣೆ ಶಿಬಿರ

    ಚಿಕ್ಕಮಗಳೂರು: ನಗರದ ಶ್ರೀರಾಮ ಮಂದಿರ ಸವಿತಾ ಸಮಾಜದಲ್ಲಿ ಆ. 12ರಂದು ಉಚಿತ ಕಣ್ಣಿನ ಮತ್ತು ದಂತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. 

    ನೇಚರ್ ಕನ್ಸರ್‌ವೇಷನ್, ಪ್ರಸಾದ್ ನೇತ್ರಾಲಯ ಉಡುಪಿ, ಆರ್ಯ ನಯನಜ ಸವಿತಾ ಸಮಾಜ, ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆ. 12ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಗರದ ನೆಹರೂ ರಸ್ತೆ 1ನೇ ಕ್ರಾಸ್‌ನಲ್ಲಿರುವ ಆರ್ಯ ನಯನಜ ಶ್ರೀರಾಮ ಮಂದಿರ ಸವಿತಾ ಸಮಾಜದಲ್ಲಿ ಉಚಿತ ಕಣ್ಣಿನ ಮತ್ತು ದಂತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. 

    ಮಾಹಿತಿಗೆ ಸುಂದರಗೌಡ  9448186237, ಯೋಗೇಶ್ 63619 81491, ಕುಮಾರ್  9448407828ಕ್ಕೆ ಸಂಪರ್ಕಿಸಬಹುದು.

    Eye and dental check-up camp by Savita Samaj

  • ಬಡವರಿಗೆ ನಿವೇಶನ ಮತ್ತು ಮನೆ ವಿತರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ

    ಬಡವರಿಗೆ ನಿವೇಶನ ಮತ್ತು ಮನೆ ವಿತರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ

    ಚಿಕ್ಕಮಗಳೂರು: ಜಿಲ್ಲೆಯ ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆಯನ್ನು ಸರಿಪಡಿಸಿ, ಬಡವರಿಗೆ ನಿವೇಶನ ಮತ್ತು ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.

    ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಸಮಾಲೋಚಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭೂಮಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿ ರಚಿಸಲಾಗಿದ್ದು, ಅದರ ನೇತೃತ್ವದಲ್ಲಿ ಮುಂದೆ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಸಹಸ್ರಾರು ಜನರು ನಿವೇಶನಕ್ಕೆ ಜಾಗವಿಲ್ಲದೆ ಕೂಲಿ ಲೈನ್‌ಗಳಲ್ಲಿ ವಾಸಿಸುತ್ತಿದ್ದಾರೆ. ಒಂದೇ ಮನೆಯಲ್ಲಿ ಮೂರ್‍ನಾಲ್ಕು ಕುಟುಂಬಗಳು ವಾಸ ಮಾಡುತ್ತಿವೆ. ಈ ವರೆಗೆ ಈ ಸಮಸ್ಯೆ ಬಗ್ಗೆ ಯಾವ ಸರ್ಕಾರವೂ ಗಮನ ಹರಿಸಿಲಿಲ್ಲ ಎಂದು ದೂರಿದರು.

    ಇರುವ ಕಂದಾಯ ಭೂಮಿಯನ್ನು ಅರಣ್ಯ ಮಾಡಲು ಸರ್ಕಾರ ಹೊರಟಿದೆ. ಹುಲ್ಲುಬಂದಿ, ಸಮುದಾಯ ಅರಣ್ಯ, ಸಾಮಾಜಿಕ ಅರಣ್ಯ, ೪(೧) ಮಾಡಲು ಹೊರಟಿದೆ. ಈಗಾಗಲೆ ಮೀಸಲು ಅರಣ್ಯವನ್ನು ರಚಿಸಲಾಗಿದೆ. ಇಷ್ಟೆಲ್ಲಾ ಆದರೂ ಸರ್ಕಾರಿ ಭೂಮಿಯನ್ನು ಬ್ಯಾಂಕ್‌ಗೆ ಅಡವಿಟ್ಟು ನಿವೇಶನ ರಹಿತರಿಗೆ ಭೂಮಿ ಇಲ್ಲದಂತೆ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

    ಹಾಲಿ ಇರುವ ೪(೧) ರದ್ದು ಪಡಿಸಿ ಅದನ್ನು ಕಂದಾಯ ಜಮೀನಾಗಿ ಪರಿವರ್ತನೆ ಮಾಡಬೇಕು. ಎಲ್ಲಾ ಬಡವರಿಗೆ ನಿವೇಶನವನ್ನು ಒದಗಿಸಬೇಕು ಎನ್ನುವುದು ನಮ್ಮ ಆಗ್ರಹವಿದೆ. ಸಣ್ಣ, ಸಣ್ಣ ರೈತರ ಬಗ್ಗೆ ನಮ್ಮ ತಕರಾರಿವುದಿಲ್ಲ ಎಂದರು.

    ಈ ಹೋರಾಟದಲ್ಲಿ ಯಾವುದೇ ರೀತಿ ಜಾತಿ ವರ್ಗ ಎನ್ನುವುದು ಇರುವುದಿಲ್ಲ. ಯಾರೇ ನಿವೇಶನ, ಮನೆ ರಹಿತರು ಇದ್ದಲ್ಲಿ ಅವರಿಗೆ ಅನುಕೂಲ ಆಗಬೇಕು ಎನ್ನುವುದು ಸಮಿತಿ ಉದ್ದೇಶವಾಗಿದೆ ಎಂದರು.

    ಈ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹಂತ ಹಂತವಾಗಿ ಕಾಲ್ನಡಿಗೆ ಜಾಥಾ, ಪಂಜಿನ ಮೆರವಣಿಗೆ, ಬಂದ್ ಇನ್ನಿತರೆ ಕಾರ್ಯಕ್ರಮಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಲಿಸಿದರು.

    ಈ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಾತನಾಡಿದ್ದರೂ ಅದು ನಿಧಾನ ಗತಿಯಲ್ಲಿದೆ. ಇದರ ನಡುವೆ ಎಸ್‌ಎಫ್‌ಓಗಳು ಹಳ್ಳಿಗಳಿಗೆ ಬಂದು ಸಮುದಾಯ ಅರಣ್ಯಗಳ ರಚನೆ ಉದ್ದೇಶದಿಂದ ದಾಖಲೆಗಳನ್ನು ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಎಸ್‌ಎಪ್‌ಓಗಳಿಗೆ ನ್ಯಾಯಾಂಗ ಸ್ಥಾನ ಮಾನ ನೀಡಲಾಗಿದೆ. ಅವರು ಸರ್ಕಾರದ ಮಾತನ್ನೇ ಕೇಳುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ಅರಣ್ಯ ಸಚಿವರ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.

    ಮುಖಂಡ ಹುಣಿಸೇಮಕ್ಕಿ ಲಕ್ಷ್ಮಣ್ ಮಾತನಾಡಿ ಜಿಲ್ಲಾ ಮಟ್ಟದ ಭೂಮಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿಯನ್ನು ಹುಟ್ಟುಹಾಕಲಾಗಿದೆ. ಹಲವಾರು ವರ್ಷಗಳಿಂದ ವಿವಿಧ ಸಂಘಟನೆಗಳು ಈ ವಿಚಾರದಲ್ಲಿ ಹೋರಾಟ ನಡೆಸಿಕೊಂಡು ಬಂದಿವೆ. ಇಂದು ಚಿಕ್ಕಮಗಳೂರು ತಾಲ್ಲೂಕು ಆವತಿ, ಆಲ್ದೂರು, ವಸ್ತಾರೆ, ಖಾಂಡ್ಯ ಹಾಗೂ ಅಂಬಳೆ ಹೋಬಳಿ ರೈತರು, ನಿವಾಸಿಗಳ ಸಭೆ ಕರೆದು ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು

    ಸಮಿತಿ ಉಪಾಧ್ಯಕ್ಷರಾಗಿ ನವರಾಜು ಸೇರಿ ನಾಲ್ಕು ಮಂದಿ ಇದ್ದಾರೆ. ಸಮಿತಿಯಲ್ಲಿ ಸುಮಾರು ೨೫ ಮಂದಿ ಪದಾಧಿಕಾರಿಗಳಿದ್ದಾರೆ. ನಿವೇಶನ ರಹಿತರಿಗೆ ಜಾತಿ, ಧರ್ಮ ಇರುವುದಿಲ್ಲ. ಅವರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಎಲ್ಲಾ ಪಕ್ಷ, ಸಂಘಟನೆಗಳ ಸಹಕಾರ ಪಡೆದು ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

    ಸಭೆಯಲ್ಲಿ ಕಟಾರದಹಳ್ಳಿ ನವರಾಜ್, ಮಾಜಿ ಜಿ.ಪಂ. ಸದಸ್ಯ ಸತೀಶ್, ಕೃಷ್ಣಪ್ಪ, ಕಂಚೇನಹಳ್ಳಿ ಮಹೇಶ್, ಗ್ರಾ.ಪಂ. ಅಧ್ಯಕ್ಷ ರಾಮಪ್ಪ, ಅಂಬೇಡ್ಕರ್ ಹೋರಾಟ ಸಮಿತಿ, ಆಲ್ದೂರು ಅಂಬೇಡ್ಕರ್ ಸಮಿತಿ ಸದಸ್ಯತು, ಬಸವಯ್ಯ, ಕೂದುವಲ್ಳಿ ಕೃಷ್ಣಪ್ರಸಾದ್, ಬೆರಣಗೋಡು ಮಂಜು, ದಿವಾಕರ್ ಇತರರು ಭಾಗವಹಿಸಿದ್ದರು.

    Violent struggle if action is not taken to distribute plots and houses to the poor

  • ಎಂ.ಕೆ.ವಾಸುದೇವ (ಮಾಸು ಮಾಸ್ಟರ್) ನುಡಿನಮನ ಕಾರ್ಯಕ್ರಮ

    ಎಂ.ಕೆ.ವಾಸುದೇವ (ಮಾಸು ಮಾಸ್ಟರ್) ನುಡಿನಮನ ಕಾರ್ಯಕ್ರಮ

    ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿದ್ದ ಎಂ.ಕೆ.ವಾಸುದೇವ ಅವರು ಸಾವಿರಾರು ಸ್ವಯಂ ಸೇವಕರ ಬದುಕಿನಲ್ಲಿ ವ್ಯಕ್ತಿತ್ವ ರೂಪಿಸುವ ಕೆಲಸವನ್ನು ಮಾಡಿದ್ದಾರೆ. ನಿಯತ್ತು, ನಿಷ್ಟೆ ಎನ್ನುವ ಪ್ರೇರಣೆಯನ್ನು ನಮ್ಮಲ್ಲರಿಗೂ ಬಿತ್ತಿದವರು ಅವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ಕಾರ್ಕಳದ ಶಾಸಕರಾದ ವಿ.ಸುನೀಲ್ ಕುಮಾರ್ ಅವರ ತಂದೆಯವರೂ ಆದ ನಿವೃತ್ತ ಶಿಕ್ಷಕರು, ಆರ್‌ಎಸ್‌ಎಸ್‌ನ ಚಿಕ್ಕಮಗಳೂರು ಜಿಲ್ಲಾ ಕಾರ್ಯವಾಹ ಹಾಗೂ ಜಿಲ್ಲಾ ಬೌದ್ಧಿಕ್ ಪ್ರಮುಖ್ ಆಗಿ ಜವಾಬ್ದಾರಿ ನಿರ್ವಹಿಸಿದ್ದ ಎಂ.ಕೆ.ವಾಸುದೇವ (ಮಾಸು ಮಾಸ್ಟರ್) ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ನಗರದ ಎಂಇಎಸ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವಾಸು ಮೇಷ್ಟ್ರು ಅವರು ಯಾವತ್ತೂ ಆಸ್ತಿ ಮಾಡಲಿಲ್ಲ. ಮಕ್ಕಳನ್ನೇ ಆಸ್ತಿ ಮಾಡಿದ್ದಾರೆ. ಅದರ ಪರಿಣಾಮ ಹಿಂದುತ್ವದ ವಿಚಾರ, ದೇಶದ ವಿಚಾರಗಳು ಬಂದರೆ ಗಟ್ಟಿಯಾಗಿ ರಾಜ್ಯದಲ್ಲಿ ಮಾತನಾಡುವ ಕೆಲವೇ ಜನರಲ್ಲಿ ಸುನೀಲ್ ಕುಮಾರ್ ಸಹ ಒಬ್ಬರು. ಅಷ್ಟೇ ಅಲ್ಲದೆ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ ವಿಚಾರದ ವ್ಯಕ್ತಿತ್ವಗಳನ್ನು ಬಿತ್ತಿದವರು ವಾಸು ಮಷ್ಟ್ರು ಎಂದರು.

    ೧೯೯೧-೯೨ ರಲ್ಲಿ ವಾಸು ಮೇಷ್ಟ್ರು ಆಲ್ದೂರಿಗೆ ಬಂದರು. ಸಂಘದ ಬೌದ್ಧಿಕ್‌ನಲ್ಲಿ ಅವರ ಮಾತುಗಳನ್ನು ಕೇಳಿ ಮೈ ರೋಂಮಾಂಚನವಾಗಿತ್ತು. ಅವರೊಂದು ರೀತಿ ಅಗೋಚರ ಪ್ರಭಾವ ಬೀರಿದ್ದರು. ಇದ್ದಿಲಿನಂತಿದ್ದ ನಮ್ಮಂತಹವರಿಗೆ ವೈಚಾರಿಕತೆ ಎನ್ನುವ ಕೆಂಡದ ಸ್ಪರ್ಷವನ್ನು ಅವರು ಮಾಡಿದರು. ವಾಸು ಮೇಷ್ಟ್ರು ಅವರ ಮನೆ ನಮ್ಮ ಇಡೀ ಸಂಘ ಪರಿವಾರದ ಶಕ್ತಿ ಕೇಂದ್ರವಾಗಿತ್ತು ಎಂದರು.

    ಹಾಸನ ವಿಭಾಗ ಆರ್‌ಎಸ್‌ಎಸ್‌ನ ಸಂಘಚಾಲಕರಾದ ಮಲ್ಲಿಕಾರ್ಜುನ ರಾವ್ ಮಾತನಾಡಿ, ನಿರಂತರವಾಗಿ ವಾಸು ಮೇಷ್ಟ್ರು ನಮ್ಮೊಂದಿಗಿರುತ್ತಾರೆ. ಅವರು ಎಲ್ಲರನ್ನೂ ಆತ್ಮೀಯತೆಯಿಂದ ಕಾಣುತ್ತಿದ್ದರು. ಎಲ್ಲ ಕಾರ್ಯಕರ್ತರಿಗೂ ಆದರ್ಶ ಹಾಗೂ ಪ್ರೇರಣಾದಾಯಕವಾಗಿದ್ದರು. ಅವರ ನಿತ್ಯ ಚಟುವಟಿಕೆಯಲ್ಲಿ ಪ್ರತಿ ವಿಷಯದಲ್ಲಿ ಮೇಲ್ಪಂಕ್ತಿಯಾಗಿ ನಮಗೆ ಕಾಣುತ್ತಿದ್ದರು ಎಂದು ತಿಳಿಸಿದರು.

    ಬಿಜೆಪಿ ಮುಖಂಡ ಸಿ.ಹೆಚ್.ಲೋಕೇಶ್ ಮಾತನಾಡಿ, ವಾಸುದೇವ ಅವರು ದೇಶ ಭಕ್ತರನ್ನು ಸರಳವಾಗಿ, ಸಜ್ಜನಿಕೆಯಿಂದ ಗುರುತಿಸುವ ಕೆಲಸ ಮಾಡಿದರು. ಇಡೀ ಸಂಘದ ಎಲ್ಲಾ ಪರಿವಾರಕ್ಕೂ ಅವರು ಮಾರ್ಗದರ್ಶಕರಾಗಿದ್ದರು ಎಂದರು.

    ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್  ನಮ್ಮ ತಂದೆ ವಾಸುದೇವ ಅವರು ನಮ್ಮ ಮನೆ ಸಂಘದ ಮನೆಯಾಗಬೇಕು ಎಂದುಕೊಂಡು ನಮ್ಮೆಲ್ಲರನ್ನೂ ಬೆಳೆಸಿದರು ಎಂದು ಗದ್ಗಧಿತರಾದರು.

    ೧೭ ನೇ ವಯಸ್ಸಿನಲ್ಲೇ ಸಿ.ಟಿ.ರವಿ ಅವರೊಂದಿಗೆ ಅಯೋಧ್ಯೆಗೆ ಹೋಗಿ ಬಂದ ನಂತರ ಚಿಕ್ಕಮಗಳೂರಿನಲ್ಲಿ ದೊಡ್ಡದಾದ ಎಬಿವಿಪಿ ಕಾರ್ಯಕ್ರಮವನ್ನು ಸಂಘಟಿಸಬೇಕೆಂದು ನಿರ್ಣಯಿಸಿದ್ದೆ. ಈ ವಿಚಾರವನ್ನು ತಂದೆಯವರ ಗಮನಕ್ಕೆ ತಂದು ಹಣಕಾಸಿನ ಅಗತ್ಯದ ಬಗ್ಗೆ ತಿಳಿಸಿದಾಗ ನಗರದ ಅರಳಿ ಮರದಿಂದ ಆಜಾದ್ ಪಾರ್ಕ್ ವರೆಗೆ ಜನರ ಬಳಿ ಹೋಗುವಂತೆ ಹೇಳಿದ್ದರು.

    ಅದರಂತೆ ತಂದೆಯವರ ಹೆಸರು ಹೇಳಿಕೊಂಡೇ ಜನರ ಬಳಿ ಹೋದಾಗ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಸಾಕಷ್ಟು ಹಣ ಸಂಗ್ರಹವಾಗಿತ್ತು. ಆದರೆ ನನ್ನ ಹೆಸರೇಳಿಕೊಂಡು ಇನ್ನು ಮುಂದೆ ಸಂಘಟನೆಯಲ್ಲಿ ಬೆಳೆಯುವಂತಿಲ್ಲ. ನಿನ್ನ ಸ್ವಂತಿಕೆಯಲ್ಲೇ ಬೆಳೆಯಬೇಕು ಎಂದು ಮರುದಿನವೇ ತಂದೆಯವರು ಮಾರ್ಗದರ್ಶನ ಮಾಡಿದ್ದರು ಎಂದು ನೆನಪಿಸಿಕೊಂಡರು.

    ಪ್ರತಿನಿತ್ಯ ಸಂಘಟನೆಯಲ್ಲಿ ಕೆಲಸ ಮಾಡುವಾಗ ಆ ಸ್ವಂತಿಕೆ ಎನ್ನುವ ಪದ ಪದೇ ಪದೇ ನೆನಪಾಗುತ್ತಿತ್ತು. ಅದರ ಪರಿಣಾಮ ಎಬಿವಿಪಿ, ಆರ್‌ಎಸ್‌ಎಸ್, ಬಜರಂಗದಳ, ಶಾಸಕ, ಸಚಿವನಾಗಿ ಎಲ್ಲ ಸಂದರ್ಭದಲ್ಲಿ ನನ್ನ ಸ್ವಂತಿಕೆ ಎನ್ನುವುದು ಗಾಢವಾಗಿ ಮೂಡಿದೆ ಎಂದರು.

    ನನ್ನ ಸ್ವಂತ ಕೆಲಸಕ್ಕೆ, ಪ್ರಭಾವಕ್ಕೆ ಸಂಘವನ್ನು ಬಳಸಿಕೊಳ್ಳುವುದಿಲ್ಲ ಎಂದು ನಿಶ್ಚಯ ಮಾಡಿದ್ದರು. ನನಗಾಗಿ ಒಂದು ಪೆಟ್ರೋಲ್ ಬಂಕ್‌ಗೆ ಕೇಂದ್ರದಿಂದ ಅನುಮತಿ ಕೊಡಿಸಲು ಪ್ರಾಂತ ಪ್ರಚಾರಕರಿಗೆ ಒಂದು ಪತ್ರ ಬರೆಯುಬೇಕೆಂಬ ನನ್ನ ಕೋರಿಕೆಯನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದರು ಎಂದರು

    ವಾಸುದೇವ ಅವರ ಪತ್ನಿ ಪ್ರಮೋದಾ ವಾಸುದೇವ್, ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಡಿ.ಎನ್.ಜೀವರಾಜ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬಿಜೆಪಿ ಹಿರಿಯ ಮುಖಂಡ ಗಣೇಶ್ ರಾವ್, ಎಐಟಿ ಕಾಲೇಜು ರಿಜಿಸ್ಟ್ರಾರ್ ಸಿ.ಕೆ.ಸುಬ್ಬರಾಯ, ಕಾಫಿ ಮಂಡಳಿ ಅಧ್ಯಕ್ಷ ದೇವರುಂದ ದಿನೇಶ್, ಶೃಂಗೇರಿಯ ಉಮೇಶ್, ಅತ್ತಿಕಟ್ಟೆ ಜಗನ್ನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮತ್ತು ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ಮುಖಂಡರುಗಳು ಕಾರ್ಯಕರ್ತರು, ವಾಸುದೇವ ಅವರ ಹಿತೈಷಿಗಳು, ಒಡನಾಡಿಗಳು ಉಪಸ್ಥಿತರಿದ್ದರು.

    M.K. Vasudeva (Mass Master) Nudi Namana Program

    .

  • ಸಂಸ್ಕಾರದ ಮೂಲಕ ಶಿಕ್ಷಣ ಕೊಟ್ಟರೆ ಪರಿಪೂರ್ಣ

    ಸಂಸ್ಕಾರದ ಮೂಲಕ ಶಿಕ್ಷಣ ಕೊಟ್ಟರೆ ಪರಿಪೂರ್ಣ

    ಚಿಕ್ಕಮಗಳೂರು:  ಸಂಸ್ಕಾರದ ಮೂಲಕ ಶಿಕ್ಷಣ ಕೊಟ್ಟಾಗ ಮಾತ್ರ ಪರಿಪೂರ್ಣ ಶಿಕ್ಷಣವಾಗುತ್ತದೆ. ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಯಲು ಸಹಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅಭಿಪ್ರಾಯಿಸಿದರು.

    ಅವರು ಇಂದು ಟಿ.ಎಂ.ಎಸ್ ಶಾಲೆಯಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಸೇವಾ ಬಳಗ ಇವರುಗಳ ಸಹಯೋಗದಲ್ಲಿ ಮಾರುತಿ ಮೆಡಿಕಲ್ಸ್ ಬೆಂಗಳೂರು ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.

    ಧರ್ಮ, ಸಂಸ್ಕೃತಿ, ಸಂರಕ್ಷಣೆಗೆ ಇನ್ನೊಬ್ಬರಿಗೆ ಹಾನಿ ಮಾಡದಂತೆ ಜಾಗೃತಿ ಮೂಡಿಸುವ ಸಮಾಜಮುಖಿ ಕೆಲಸವನ್ನು ತನ್ನದೇ ಆದ ರೀತಿಯಲ್ಲಿ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಅವರು ಮಾಡುತ್ತಿದ್ದಾರೆಂದು ಶ್ಲಾಘಿಸಿದರು.

    ಕತ್ತಲು ಕತ್ತಲು ಎಂದು ಕೂಗಾಡುವುದರಿಂದ ಬೆಳಕು ಬರುವುದಿಲ್ಲ. ಪುಟ್ಟ ಹಣತೆ ಹಚ್ಚಿದಾಗ ಬೆಳಕು ಕೊಡುತ್ತದೆ. ಹಣತೆಯಿಂದ ಹಣತೆಗಳನ್ನು ಹೆಚ್ಚಿದರೆ ಮತ್ತಷ್ಟು ಬೆಳಕಾಗುತ್ತದೆ ಎಂಬುದಕ್ಕೆ ಉಳ್ಳವರು ಬಡವರಿಗೆ ದಾನವನ್ನು ನೀಡುವ ಮೂಲಕ ನೆರವಾದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.

    ಮಾನವೀಯ ಮೌಲ್ಯಗಳ ಬಗ್ಗೆ ಕಾಲಜಿ ಇರುವ ಹಾಗೆ ಮತ್ತು ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಪರಿಸರದ ಬಗ್ಗೆ ಅರಿವು ಮೂಡಿಸುವ ಭೂರಕ್ಷಣೆ ಮಾಡುವ ಮೂಲಕ ಸಂದೇಶ ಕೊಡುವುದನ್ನು ಮಹೇಂದ್ರ ಅವರು ಸದ್ದಿಲ್ಲದೆ ಮಾಡುತ್ತಿದ್ದಾರೆಂದು ತಿಳಿಸಿದರು.

    ಜಯಕಾರ ಹಾಕಿಸಿಕೊಳ್ಳದೆ ಧಿಕ್ಕಾರ ಕೂಗದೆ ತನ್ನ ಪಾಡಿಗೆ ಈ ರೀತಿಯ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ೧ ರಿಂದ ೭ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ೧೦ ಸಾವಿರ ವಿದ್ಯಾರ್ಥಿಗಳಿಗೆ ೬.೫ ಲಕ್ಷ ರೂ ವೆಚ್ಚದಲ್ಲಿ ನೋಟ್ ಪುಸ್ತಕಗಳನ್ನು ಮಹೇಂದ್ರ ಮನ್ನೋತ್ ನೀಡುತ್ತಿದ್ದಾರೆ ಎಂದು ಹೇಳಿದರು.

    ಕೆಲಸ ಮಾಡಿ ಓಟ್ ಕೇಳುತ್ತೇವೆ. ಓಟ್‌ಗಾಗಿ ಇವರು ಕೆಲಸ ಮಾಡಿಲ್ಲ. ನೋಟ್ ಪುಸ್ತಕ ಕೊಟ್ಟು ಬಡ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಪ್ರಗತಿ ನಿರೀಕ್ಷಿಸಿದ್ದಾರೆ ಎಂದು ಅವರಿಗೆ ಅಭಿನಂದನೆ ಸಲ್ಲಿಸಿದರು. ನೋಟ್ ಪುಸ್ತಕಗಳ ಕೊಡುಗೆ ವಿದ್ಯಾರ್ಥಿಗಳ ಜೀವನಕ್ಕೆ ಮತ್ತು ಶಿಕ್ಷಣಕ್ಕೆ ಆಧಾರವಾಗುತ್ತದೆ ಎಂದು ಹೇಳಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕಿ ಗೀತಾ ಅವರು, ಬದಲಾದ ಶೈಕ್ಷಣಿಕ ಪದ್ಧತಿಯಲ್ಲಿ ಸರ್ಕಾರದ ಆದೇಶದಂತೆ ಎಲ್ಲಾ ಕೆಲಸಗಳನ್ನು ಶಿಕ್ಷಕರು ಮಾಡುತ್ತಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ನಮ್ಮ ಮಕ್ಕಳೆಂಬ ಭಾವನೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಬಿ.ಎನ್ ಸುಂದ್ರೇಶ್ ವಹಿಸಿದ್ದರು.ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರಾದ ಸುಮಿತ್ರ, ಚಂದ್ರೇಗೌಡ, ವಸಂತ ಕುಮಾರ್, ಪುಷ್ಪ, ಚಂದ್ರಯ್ಯ, ದಿನೇಶ್, ರಾಮದಾಸ್, ಅನ್ನಪೂರ್ಣ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಜೋಗಪ್ಪ ಸ್ವಾಗತಿಸಿದರು.

    Education is perfec if it is given through rituals.

  • ಕಾಂಗ್ರೆಸಿಗರಿಗೆ ಸುಳ್ಳು ಹೇಳುವ ಕಾಯಿಲೆ ಅಂಟಿಕೊಂಡಿದೆ

    ಕಾಂಗ್ರೆಸಿಗರಿಗೆ ಸುಳ್ಳು ಹೇಳುವ ಕಾಯಿಲೆ ಅಂಟಿಕೊಂಡಿದೆ

    ಚಿಕ್ಕಮಗಳೂರು: ಮತಗಳ್ಳತನ, ಚುನಾವಣಾ ಅಕ್ರಮ ಎಂದೆಲ್ಲಾ ಆರೋಪ ಮಾಡತ್ತಿರುವ ಕಾಂಗ್ರೆಸ್ ಪಕ್ಷ ಆ ಬಗ್ಗೆ ಅಧಿಕೃತ ದೂರು ನೀಡದೆ ಬೀದಿಯಲ್ಲಿ ಆರೋಪ ಮಾಡಿ ಅನುಮಾನ ಮತ್ತು ಅಪನಂಬಿಕೆ ಸೃಷ್ಠಿಸುವ ಷಡ್ಯಂತ್ರವನ್ನು ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ದೂರಿದರು.

    ಶುಕ್ರವಾರ ನಗರದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿಗರಿಗೆ ಸುಳ್ಳು ಹೇಳುವ ಕಾಯಿಲೆ ಅಂಟಿಕೊಂಡಿದೆ. ತಾವು ಗೆದ್ದರೆ ಪ್ರಜಾಪ್ರಭುತ್ವದ ಗೆಲುವು ಎನ್ನುತ್ತಾರೆ. ಸೋತರೆ ಇವಿಎಂ ಮೇಲೆ ದೂರುತ್ತಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣಾ ಆಯೋಗವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದಾರೆ. ಅವರು ಮಿಸ್‌ಗೈಡೆಡ್ ಲೀಡರ್. ಮೂರ್ಖ ನಾಯಕನಿಗೆ ಮೂಢರಂತೆ ಕಾಂಗ್ರೆಸ್ ಮುಖಂಡರು ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ಟೀಕಿಸಿದರು.

    ಚುನಾವಣಾ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಸಮಾನ್ಯ ಜ್ಞಾನವೂ ರಾಹುಲ್ ಅವರಿಗೆ ಇದ್ದಂತಿಲ್ಲ. ಕಾಗೆ ಬೆಳ್ಳಗಿದೆ ಎಂದು ರಾಹುಲ್ ಹೇಳಿದರೆ ಹೌದು ಎಂದು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಗೋಣು ಹಾಕುತ್ತಿದ್ದಾರೆ. ಅದು ಬುದ್ಧಿವಂತಿಕೆ ಲಕ್ಷಣವಲ್ಲ. ಬುದ್ಧಿಯನ್ನ ಒತ್ತೆ ಇಟ್ಟವರ ಲಕ್ಷಣ ಎಂದು ಟೀಕಿಸಿದರು.

    ಚುನಾವಣಾ ಆಯೋಗಕ್ಕೆ ಪ್ರಮುಖ ಕಚೇರಿ, ಸಿಬ್ಬಂದಿ ಇರುವುದು ಹೊರತುಪಡಿಸಿದರೆ ಮೂಲಭೂತ ಸಂರಚನೆ ಬೂತ್ ಮಟ್ಟದ ವರೆಗೆ ಇರುವುದಿಲ್ಲ. ಚುನಾವಣಾ ನೊಂದಣಿ ಕಾರ್ಯಕ್ಕೆ ಬೂತ್ ಮಟ್ಟದಲ್ಲಿ ಬಿಎಲ್‌ಓಗಳಿರುತ್ತಾರೆ. ಅವರೆಲ್ಲ ಬಹುತೇಕ ಶಿಕ್ಷಕರು ಮತ್ತು ರಾಜ್ಯ ಸರ್ಕಾರಿ ಇತರೆ ನೌಕರರು ಇರುತ್ತಾರೆ. ತಹಸೀಲ್ದಾರರು ಮತ್ತು ಉಪ ತಹಸೀಲ್ದಾರರು ಸೂಪರ್ ವೈಸರ್‌ಗಳು ಮತ್ತು ಇಓಳಾಗಿರುತ್ತಾರೆ. ಅವರ ಮೇಲೆ ಎಸಿ ಕೇಡರ್ ಹಂತದ ಎಇಓಗಳು ಇರುತ್ತಾರೆ. ಅವರ ಮೇಲೆ ಜಿಲ್ಲಾಧಿಕಾರಿಗಳು ಡಿಇಓ ಆಗಿರುತ್ತಾರೆ. ಮತಗಳ್ಳತನ ಮಾಡಲು ಚುನಾವಣಾ ಆಯೋಗಕ್ಕೆ ನೆಟ್‌ವರ್ಕ್ ಇರುವುದೇ ಇಲ್ಲ ಎಂದು ಹೇಳಿದರು.

    ಜಿಲ್ಲಾ ಚುನಾವಣಾಧಿಕಾರಿ ಮತದಾರರ ಕರಡು ಪಟ್ಟಿಯನ್ನು ಪ್ರಕಟ ಮಾಡಿದ ಸಂದರ್ಭದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಎಲ್ಲ ರಾಜಕೀಯ ಪಕ್ಷಕ್ಕೆ ಕರಡು ಮತದಾರರ ಪಟ್ಟಿಯನ್ನ ಚುನಾವಣೆ ಸಂದರ್ಭದಲ್ಲಿ ಆಯೋಗವು ಮುಫತ್ತಾಗಿ ಎಲ್ಲಾ ಅಂಗೀಕೃತ ರಾಜಕೀಯ ಪಕ್ಷಗಳಿಗೆ ಕಳಿಸಿಕೊಡುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ೨೦೧೪, ೨೦೧೯ ರಲ್ಲೂ ಇವರದ್ದೇ ಸರ್ಕಾರ ಇತ್ತು. ಇಷ್ಟಾದರೂ ಸಿದ್ದರಾಮಯ್ಯ ಆಗಲಿ, ಡಿ.ಕೆ.ಶಿವಕುಮಾರ್ ಆಗಲಿ ಯಾವುದೇ ದೂರು ನೀಡಲಿಲ್ಲ ಎಂದರು.

    ಮತಗಳ್ಳತನ ನಡೆದಿರುವುದು, ಚುನಾವಣೆ ಅಕ್ರಮ ನಡೆದಿರುವುದು ನಿಜವೇ ಆಗಿದ್ದರೆ ಬೀದಿಯಲ್ಲಿ ಪ್ರತಿಭಟನೆ ಮಾಡುವ ಮೊದಲೇ ಪ್ರಮಾಣ ಪತ್ರ ಸಲ್ಲಿಸಿ ಆಯೋಗಕ್ಕೆ ದೂರು ನೀಡಿಲ್ಲ, ನ್ಯಾಯಾಲಯಕ್ಕೆ ಹೋಗಲಿಲ್ಲ ಏಕೆ ಎಂದ ಅವರು, ಸುಳ್ಳು ಆರೋಪ ಮಾಡುತ್ತಾ ಪ್ರಜಾಪ್ರಭುತ್ವವನ್ನು ಅಪಮಾನ ಮಾಡಲಾಗುತ್ತಿದೆ ಎಂದು ದೂರಿದರು.

    ಯಾವ ಡಿಸಿ, ತಹಸೀಲ್ದಾರ್ ಮತಗಳ್ಳತನ ಮಾಡಲು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

    Congressmen are infected with the disease of lying.

  • ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಮಾದರಿ ಗ್ರಾಮ ಪಂಚಾಯಿತಿ

    ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಮಾದರಿ ಗ್ರಾಮ ಪಂಚಾಯಿತಿ

    ಚಿಕ್ಕಮಗಳೂರು: ಜಗತ್ತಿನಲ್ಲಿ ಅಸಾಧ್ಯ ಎಂಬುವುದಿಲ್ಲ. ಕಷ್ಟಸಾಧ್ಯ ಇದೆ. ನಾಗರಾಳು ಪಂಚಾಯಿತಿಯನ್ನು ಜನಪ್ರತಿನಿಧಿಗಳು ಸಂಕಲ್ಪ ಮಾಡಿದರೆ ಗ್ರಾಮಸ್ಥರ ಸಹಕಾರ, ಸಹಯೋಗದೊಂದಿಗೆ ಕಾರ್ಯೋನ್ಮುಖರಾದರೆ ಯಾವುದೂ ಅಸಾಧ್ಯವಿಲ್ಲ. ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸಲು ಶ್ರಮಿಸಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

    ಅವರು ಇಂದು ಕಡೂರು ತಾಲ್ಲೂಕು ನಾಗರಾಳು ಗ್ರಾ.ಪಂ ಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾ.ಪಂ ಕಡೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನೂತನ ಗ್ರಾ.ಪಂ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

    ಗ್ರಾಮ ಪಂಚಾಯಿತಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ನೂತನ ಕಟ್ಟಡಕ್ಕೆ ಜೀವಂತಿಕೆ ಬರುತ್ತದೆ, ಇದಕ್ಕೆ ಪೂರಕವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಒಗ್ಗಟ್ಟಿನಿಂದ ಜನಸ್ನೇಹಿಯಾಗಿ ಬಳಕೆ ಮಾಡಬೇಕು. ಜೊತೆಗೆ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬೇಕೆಂದು ಹೇಳಿದರು.

    ರಾಜ ಮಹಾರಾಜರ ಕಾಲದಿಂದಲೂ ಭಾರತ ವಿಕೇಂದ್ರೀಕರಣ ವ್ಯವಸ್ಥೆಗೆ ಹೆಸರುವಾಸಿಯಾಗಿದ್ದು, ಶಾಲೆಯ ನಿರ್ವಹಣೆಯನ್ನು ಸಮಾಜ ನಿರ್ವಹಣೆ ಮಾಡುತ್ತಿತ್ತು. ಗ್ರಾಮದ ಕೆರೆಕಟ್ಟೆಗಳ ನಿರ್ವಹಣೆ, ದೇವಾಲಯಗಳ ನಿರ್ವಹಣೆ, ನೆಡುತೋಪು ಮುಂತಾದವುಗಳನ್ನು ಗ್ರಾಮವೇ ನಡೆಸುತ್ತಿತ್ತು ಎಂದರು.

    ಕಂದಾಯ ಸಂಗ್ರಹ ಮತ್ತು ಹಂಚಿಕೆ ಇದನ್ನೂ ಕೂಡ ಗ್ರಾಮಗಳಲ್ಲಿ ಆಡಳಿತ ನಿರ್ವಹಿಸುತ್ತಿದ್ದವು. ಮುಂದುವರೆದು ಗ್ರಾಮ ಪಂಚಾಯಿತಿಗಳನ್ನು ಅಸ್ತಿತ್ವಕ್ಕೆ ತಂದು ಆಡಳಿತ ವಿಕೇಂದ್ರೀಕರಣ ವ್ಯವಸ್ಥೆ ಜಾರಿಯಲ್ಲಿದೆ ಎಂದರು. ಸುಮಾರು ೪೭.೫೦ ಲಕ್ಷ ರೂ ವೆಚ್ಚದಲ್ಲಿ ನಾಗರಾಳು ಪಂಚಾಯಿತಿ ನೂತನ ಕಟ್ಟಡ ಸುಂದರವಾಗಿ ನಿರ್ಮಾಣವಾಗಿದೆ. ಇದಕ್ಕೆ ಜಿವಂತಿಕೆ ಬರಬೇಕಾದರೆ ಜನೋಪಯೋಗಿಯಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು.

    ಶಾಸಕ ಹೆಚ್.ಡಿ. ತಮ್ಮಯ್ಯ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್‌ಆರ್‌ಇಜಿಎ ಮತ್ತು ೧೫ನೇ ಹಣಕಾಸು ಯೋಜನೆಯ ಹಣದ ಜೊತೆಗೆ ಗ್ರಾಮ ಪಂಚಾಯಿತಿಯ ಎಲ್ಲಾ ಅಧ್ಯಕ್ಷರು ಸದಸ್ಯರ ವಂತಿಕೆಯ ಮೂಲಕ ೪೭.೫೦ ಲಕ್ಷ ರೂ ವೆಚ್ಚದಲ್ಲಿ ಸುಂದರ ಕಟ್ಟಡ ನಿರ್ಮಾಣ ಮಾಡಿರುವುದು ಲೋಕಾರ್ಪಣೆ ಮಾಡಿದ್ದೇವೆ ಎಂದರು.

    ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡಿದರೆ ಪ್ರತಿನಿತ್ಯ ಪೂಜೆ ಸಲ್ಲಿಸುವಂತೆ, ನೂತನ ಗ್ರಾ.ಪಂ ಕಟ್ಟಡ ಕಟ್ಟಿದರೆ ಸ್ಥಳೀಯ ಸಂಸ್ಥೆಗೆ ಹೆಸರು ಬರುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು. ಶೋಷಿತ ವರ್ಗದ ಜನರ ಕಣ್ಣೀರು ಒರೆಸುವ ಅವಕಾಶ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಮೇಲೆ ಇದ್ದು, ಬೀದಿದೀಪ, ಕುಡಿಯುವ ನೀರು, ಚರಂಡಿ ಸ್ವಚ್ಚತೆ ಜೊತೆಗೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ಇ-ಖಾತೆ ಮುಂತಾದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ತಿಳಿಸಿದರು.

    ಪ್ರಾಸ್ತಾವಿಕವಾಗಿ ಶಶಿಧರ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಭಾರಿ ಅಧ್ಯಕ್ಷ ಪ್ರಸನ್ನ, ಎನ್.ಎಸ್ ಬಸವರಾಜ್, ಜಿಪಂ ಮಾಜಿ ಸದಸ್ಯ ವಿಜಯ್‌ಕುಮಾರ್, ಪ್ರವೀಣ್, ಕಲ್ಲಪ್ಪ, ಶಶಿಧರ್.ಜಿ.ಇ, ಚೇತನ್, ರವಿಕುಮಾರ್, ಹೇಮಾವತಿ ನಾಗಪ್ಪ, ಚಂದ್ರಪ್ಪ, ಹೇಮಾವತಿ ನಾಗರಾಜ್, ಚಂದ್ರಬಾಯಿ ರಾಜನಾಯ್ಕ್, ಬಾಬು, ಅಶೋಕ್, ಚಂದ್ರಕಲಾ, ಯಶೋಧಮ್ಮ, ವಿಶಾಲಾಕ್ಷಮ್ಮ, ಶೈಲಜಾ, ಮನೊರಂಜನಿ ರಮೇಶ್, ಆಶಾವಿಜಯ್ ಕುಮಾರ್, ದೇವಿರಮ್ಮ, ಎಂ, ರಂಗಶೆಟ್ಟಿ, ಕವಿತ, ವಿನೋದ ಬಾಯಿ, ಬಾಲಾಜಿ ನಾಯ್ಕ್, ನಳಿನಾ, ಶಂಕರಮೂರ್ತಿ, ಷನ್ಮುಕಣ್ಣ, ನಟರಾಜ್, ವಿಜಯ್ ಕುಮಾರ್.ಜಿ.ಎನ್, ಅಶೋಕ್.ಸಿ.ಎಸ್, ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಶಾರದ ಸ್ವಾಗತಿಸಿದರು.

    A model Gram Panchayat when it works in a people-friendly manner

  • ಹಿಂದೂ ಸಂಪ್ರದಾಯದಂತೆ ಕೆರೆ ಕೋಡಿಬಿದ್ದಾಗ ಗಂಗಾಪೂಜೆ

    ಹಿಂದೂ ಸಂಪ್ರದಾಯದಂತೆ ಕೆರೆ ಕೋಡಿಬಿದ್ದಾಗ ಗಂಗಾಪೂಜೆ

    ಚಿಕ್ಕಮಗಳೂರು:  ಹಿಂದೂ ಸಂಪ್ರದಾಯದಂತೆ ರೈತರ ಜೀವನಾಡಿಯಾಗಿರುವ ಕೆರೆ ಕೋಡಿಬಿದ್ದಾಗ ಗಂಗಾಪೂಜೆ ನೆರವೇರಿಸುವುದು ವಾಡಿಕೆಯಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಲಕ್ಯಾ ಗ್ರಾ.ಪಂ ವ್ಯಾಪ್ತಿಯ ಮಾದರಸನ ಕೆರೆಗೆ ಬಾಗಿನ ಸಮರ್ಪಣೆ ಮಾಡಿ ಮಾತನಾಡಿ ಕೆರೆಗಳು ಕೋಡಿ ಬೀಳುವುದರಿಂದ ರೈತರು ಉತ್ತಮ ಬೆಳೆ ಬೆಳೆಯುವ ಮೂಲಕ ಅವರ ಬದುಕು ಹಸನಾಗಿ ಆರ್ಥಿಕ ಸದೃಢರಾಗುತ್ತಾರೆಂದು ಹೇಳಿದರು. ಮಾದರಸನ ಕೆರೆ ತುಂಬಿದ್ದು, ಸಧ್ಯದಲ್ಲೇ ದಾಸರಹಳ್ಳಿ ಕೆರೆ ತುಂಬುವ ಹಂತಕ್ಕೆ ಬಂದಿದೆ. ಈ ಕೆರೆಗಳು ಮಳೆಯಿಂದ ತುಂಬಿರುವುದಲ್ಲ, ಹಿಂದಿನ ಶಾಸಕರಾಗಿದ್ದ ಸಿ.ಟಿ ರವಿಯವರ ಅಪಾರ ಸೇವೆ ನಮ್ಮ ಅಳಿಲು ಸೇವೆ ಕಾರಣ ಎಂದರು.

    ಹಿರೇಮಗಳೂರು ಕೆರೆ ಮತ್ತು ಬೈರಾಪುರ ಪಿಕಪ್‌ನಿಂದ ನೀರಾವರಿ ಯೋಜನೆಗಳನ್ನು ಕೈಗೊಂಡರೆ ಈ ಭಾಗದ ಕೆರೆ ತುಂಬಿಸಲು ಯಶಸ್ವಿಯಾಗುವುದಾಗಿ ಮನಗಂಡಿದ್ದು, ಈ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸಲ್ಲದು ಎಂದು ಹೇಳಿದರು. ಜಾತಿ ಪಕ್ಷ ಇಲ್ಲದ ರೈತರಿಗೆ ಪಕ್ಷಾತೀತವಾಗಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಸಕಲೇಶಪುರ ಎತ್ತಿನಹೊಳೆ ನೀರಾವರಿ ಯೋಜನೆಯಿಂದ ಬೆಳವಾಡಿ, ದೇವನೂರು ಕೆರೆಗಳು ಭರ್ತಿಯಾಗಿದ್ದು, ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗಂಗಾಪೂಜೆ ನೆರೆವೇರಿಸುವುದಾಗಿ ಭರವಸೆ ನೀಡಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಧರ್ಮೋ ರಕ್ಷತಿ ರಕ್ಷತಃ ಎಂಬಂತೆ ಪ್ರಕೃತಿ ರಕ್ಷಣೆ ಮಾಡುವುದೇ ಧರ್ಮ. ಪ್ರಕೃತಿಯ ಒಂದು ಭಾಗವಾಗಿ ಕೆರೆ ಜಲರಕ್ಷಣೆ ಮಾಡಿದರೆ ಅದು ನಮ್ಮ ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು. ಪಂಚಭೂತಗಳಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧರ್ಮ. ಉಪಕಾರ ಮಾಡಿದವರನ್ನು ಸ್ಮರಿಸುವುದೇ ಧರ್ಮದ ಸಾರ. ಜೀವಜಲಕ್ಕೆ ಬಾಗಿನ ಅರ್ಪಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕಾಗಿರುವುದು ಅಗತ್ಯ ಎಂದರು.

    ಭೂಮಿ, ವಾಯು, ನೀರು, ಅಗ್ನಿ, ಆಕಾಶವನ್ನು ದೇವರೆಂದು ಪೂಜಿಸುವ ಸಂಸ್ಕೃತಿ ಭಾರತೀಯರ ಹಿರಿಮೆಯಾಗಿದ್ದು, ೨೦೨೦-೨೧ ನೇ ಸಾಲಿನಲ್ಲಿ ೨೮ ಕೋಟಿ ರೂಗಳನ್ನು ಮಂಜೂರು ಮಾಡಿಸಿ ದಾಸರಹಳ್ಳಿ ಕೆರೆ ಮತ್ತು ಮಾದರಸನ ಕೆರೆ ತುಂಬಿಸುವ ಯೋಜನೆಯನ್ನು ೧೦ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಬದ್ಧತೆಯಿಂದ ಕೆಲಸ ಮಾಡಿರುವುದಾಗಿ ತಿಳಿಸಿದರು.

    ೨೦೧೮-೨೩ ರ ಅವಧಿಯಲ್ಲಿ ಲಕ್ಯಾ ಪಂಚಾಯಿತಿ ಒಂದಕ್ಕೆ ೨೯ ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚೆಕ್‌ಡ್ಯಾಂ, ಶಾಲಾಭಿವೃದ್ಧಿ, ಅಂಬೇಡ್ಕರ್ ಭವನ ನಿರ್ಮಾಣ, ಹಾಸ್ಟೆಲ್ ಜೋರ್ಣೋದ್ದಾರ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಅಭಿವೃದ್ಧಿಯಲ್ಲಿ ರಾಜಕಾರಣ ಮಾಡದೆ ಎಲ್ಲಾ ಮುಖಗಳಲ್ಲೂ ಅಭಿವೃದ್ಧಿಯಾಗಬೇಕೆಂಬ ಉದ್ದೇಶದೊಂದಿಗೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ಕೊಡುವ ಜೊತೆಗೆ ಶಾಸಕ ಹೆಚ್.ಡಿ. ತಮ್ಮಯ್ಯ ಅವರೊಂದಿಗೆ ಸೇರಿ ರೈತರ, ಜನಹಿತ ಕೆಲಸ ಮಾಡುತ್ತೇವೆಂದು ಹೇಳಿದರು. ಈ ಸಂದರ್ಭದಲ್ಲಿ ಲಕ್ಯಾ ಗ್ರಾ.ಪಂ ಅಧ್ಯಕ್ಷ ಅನೀಫ್, ಶಶಿಧರ್, ನಾಗಣ್ಣ, ಜಗಧೀಶ್, ಸಂತೋಷ್, ಮಾಜಿ ಜಿ.ಪಂ ಸದಸ್ಯ ಬೆಳವಾಡಿ ರವೀಂದ್ರ, ಎಪಿಎಂಸಿ ಮಾಜಿ ಸದಸ್ಯ ಬಸವರಾಜ್, ಸದಾಶಿವ, ಈಶಣ್ಣ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

    Ganga Puja is performed when the lake is flooded according to Hindu tradition.

  • ವಿದ್ಯಾರ್ಥಿಗಳು ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು

    ವಿದ್ಯಾರ್ಥಿಗಳು ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು

    ಚಿಕ್ಕಮಗಳೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲಿ ಸ್ಪೂರ್ತಿಯಿಂದ ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆನೀಡಿದರು.

    ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ತಾ.ಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಪ್ರಕೃತಿ ಅಕಾಡೆಮಿ, ಹಿರಿಯ ಪ್ರಾಥಮಿಕ ಶಾಲೆ, ಗವನಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಸಬಾ-೨ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೫-೨೬ ನ್ನು ಉದ್ಘಾಟಿಸಿ ಮಾತನಾಡಿದರು.

    ಕ್ರೀಡೆ, ಸಾಂಸ್ಕೃತಿಕ, ಭಾವಗೀತೆ, ಭಕ್ತಿಗೀತೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ದೈಹಿಕ, ಮನಸ್ಸು, ಹೃದಯ, ಮೆದುಳು ಚುರುಕಾಗುತ್ತದೆ. ಈ ನಿಟ್ಟಿನಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಸ್ಕಾರ ಕಲಿಸುವಂತಾದಾಗ ಮಾತ್ರ ದೇಶ, ನಾಡು-ನುಡಿ, ನೆಲ-ಜಲ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವುದು ಅಗತ್ಯ ಎಂದರು.

    ಎಲ್ಲಾ ವರ್ಗದ ವಿದ್ಯಾರ್ಥಿಗಳಲ್ಲಿ ಮೊದಲು ದೇಶಪ್ರೇಮ ಬೆಳೆಸಬೇಕು. ದೇಶ ಮತ್ತು ಧರ್ಮ ಇದ್ದರೆ ನಾವು ಉಳಿಯುತ್ತೇವೆ. ಈ ಬಗ್ಗೆ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದು ಹೇಳಿದರು. ನ್ಯಾಯ ನಿರ್ಣಾಯಕರು ವಿಜೇತರಾದ ತಂಡಗಳಿಗೆ ಪ್ರಾಮಾಣಿಕವಾಗಿ ತೀರ್ಪು ನೀಡುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ನಗರಸಭೆ ಸದಸ್ಯ ಪರಮೇಶ್ ರಾಜ್ ಅರಸ್, ಪ್ರಕೃತಿ ಅಕಾಡೆಮಿಯ ಅಧ್ಯಕ್ಷರಾದ ಹೆಚ್.ಜಿ ನಾಗೇಶ್, ದಾನಿಗಳಾದ ನೀಲಕಂಠಾಚಾರಿ, ಜಿಲ್ಲಾದೈಹಿಕ ಪರಿವೀಕ್ಷಕರು ಪಾಲಾಕ್ಷಪ್ಪ, ಮಹೇಶ್ವರಪ್ಪ, ಕಿರಣ್ ಕುಮಾರ್, ಪರಮೇಶ್, ಚಂದ್ರಕಾಂತ್, ವಿಲ್ಮಾ, ದಿನೇಶ್, ಶಿವಪ್ಪ, ಮೋಹನಾಕ್ಷಿ, ಕೃಷ್ಣರಾಜ್ ಅರಸ್, ಜಾನಕಮ್ಮ, ಉಪಸ್ಥಿತರಿದ್ದರು. ಮೊದಲಿಗೆ ಶಿಕ್ಷಕಿ ರೇಣುಕ ಸ್ವಾಗತಿಸಿದರು.

    Students should participate with a sportsmanlike spirit.

  • ಸ್ವಚ್ಚತೆ ಕುರಿತು ಅರಿವು ಮೂಡಿಸುವುದು ಸ್ವಚ್ಚ ಭಾರತ್ ಮಿಷನ್ ಉದ್ದೇಶ

    ಸ್ವಚ್ಚತೆ ಕುರಿತು ಅರಿವು ಮೂಡಿಸುವುದು ಸ್ವಚ್ಚ ಭಾರತ್ ಮಿಷನ್ ಉದ್ದೇಶ

    ಚಿಕ್ಕಮಗಳೂರು: ನಗರದ ನಾಗರೀಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಸ್ವಚ್ಚ ಭಾರತ್ ಮಿಷನ್ ಉದ್ದೇಶವಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಆಜಾದ್ ಪಾರ್ಕಿನ ಬಳಿ ನಗರಸಭೆ, ಸ್ವಚ್ಚ ಭಾರತ್ ಮಿಷನ್‌ನ ೨.೦ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಗೋಡೆಬರಹ ಮತ್ತು ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಮತ್ತು ರಾಜ್ಯಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದೆ ಎಂದು ಶ್ಲಾಘಿಸಿದರು.

    ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆಯಿಂದ ಕೈಗೊಂಡ ಫುಟ್‌ಪಾತ್ ಮೇಲಿನ ವಸ್ತುಗಳ ತೆರವು ಮತ್ತು ಸಂತೆಯಲ್ಲಿ ಸ್ವಚ್ಚತೆಯನ್ನು ಮೂಡಿಸಿದ ಪರಿಣಾಮ ವರ್ತಕರು ಸಹಕರಿಸಿದ್ದಾರೆ. ನಗರದ ಹೊರವಲಯದ ವಾರ್ಡ್‌ಗಳಲ್ಲಿ ಸ್ವಚ್ಚತೆಯಲ್ಲಿ ಹಿಂದಿ ಬಿದ್ದಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಕಸ ಸಂಗ್ರಹಕ್ಕೆ ಗುರ್ತಿಸಲಾದ ಸ್ಥಳಗಳಲ್ಲಿ ಸಾರ್ವಜನಿಕರು ಕಸವನ್ನು ಹಾಕದೆ ಎಲ್ಲೆಂದರಲ್ಲಿ ಹಾಕಲಾಗುತ್ತಿದೆ. ಪ್ರತಿದಿನ ಗಂಟೆಗಾಡಿ ಕಸ ಸಂಗ್ರಹ ಮಾಡುತ್ತಿಲ್ಲ ಎಂಬ ದೂರು ನಾಗರೀಕರಿಂದ ಬರುತ್ತಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಹರಿಸಬೇಕೆಂದು ಹೇಳಿದರು.

    ಬೀದಿನಾಯಿಗಳ ಉಪಟಳ ಮತ್ತು ಬಿಡಾಡಿ ದನಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

    ಸಧ್ಯದಲ್ಲೇ ಪರಿಸರ ಉಳಿಸಲು ನಗರದ ಪ್ರತೀ ವಾರ್ಡ್‌ನಲ್ಲಿ ಜಾಥಾ ನಡೆಸುವ ಮೂಲಕ ಅರಿವು ಮೂಡಿಸಲು ದಿನಾಂಕ ನಿಗದಿಮಾಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

    ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಕಳೆದ ನಾಲ್ಕು ವಾರಗಳಿಂದ ಸ್ವಚ್ಚತೆಗೆ ಆದ್ಯತೆ ನೀಡುವಂತೆ ವರ್ತಕರು ಮತ್ತು ನಾಗರೀಕರಲ್ಲಿ ನಗರಸಭೆಯಿಂದ ಅರಿವು ಮೂಡಿಸಲಾಗಿದ್ದು, ಇದರಿಂದ ಸುಂದರ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

    ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಗೋಡೆ ಬರಹ ಮತ್ತು ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಲು ೨೦ ನಾಟಕ ತಂಡಗಳನ್ನು ಆಯ್ಕೆಮಾಡಲಾಗಿದೆ ಎಂದರು.

    ೨೬೦೦ ಅಡಿಗಳಷ್ಟು ಗೋಡೆಬರಹದ ಮೂಲಕ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನಗರಸಭೆ ಸದಸ್ಯರು ಸ್ವಚ್ಚತೆಗೆ ಆದ್ಯತೆ ನೀಡಿ ಜಾಗೃತಿ ಮೂಡಿಸಲು ತಿರುಪತಿಗೆ ತೆರಳಲು ಸಧ್ಯದಲ್ಲೇ ದಿನಾಂಕ ನಿಗದಿಮಾಡಲಾಗುವುದೆಂದರು.

    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರಾದ ಎ.ಸಿ. ಕುಮಾರ್‌ಗೌಡ, ಪರಮೇಶ್ ರಾಜ್ ಅರಸ್, ರೂಪಾ ಕುಮಾರ್, ಗೋಪಿ, ಗುರುಮಲ್ಲಪ್ಪ, ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.

    The objective of Swachh Bharat Mission is to create awareness about cleanliness.