Category: ಚಿಕ್ಕಮಗಳೂರು

  • ಅ.2 ರಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಪ್ರಾರಂಭ

    ಅ.2 ರಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಪ್ರಾರಂಭ

    ಚಿಕ್ಕಮಗಳೂರು: ಸಕ್ಷಮ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳನ್ನು ಸದೃಢಗೊಳಿಸುವ ಉದ್ದೇಶದೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮವಸ್ತ್ರ ವಿತರಿಸಿ ಮಾತನಾಡಿದರು.

    ಈ ಯೋಜನೆಯಡಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೪೦ ಅಂಗನವಾಡಿ ಕೇಂದ್ರಗಳನ್ನು ಗುರ್ತಿಸಿದ್ದು, ಈ ಅಂಗನವಾಡಿ ಕೇಂದ್ರಗಳಿಗೆ ಟಿವಿ, ಪೆನ್‌ಡ್ರೈವ್, ಸ್ಟೆಬಿಲೈಜರ್ ವಿತರಣೆ ಮಾಡಲಾಗುತ್ತಿದ್ದು, ಅಂಗನವಾಡಿ ಕೇಂದ್ರಕ್ಕೆ ಆಗಮಿಸುವ ೩-೬ ವರ್ಷದ ಮಕ್ಕಳಿಗೆ ಹಾಗೂ ಇತರೆ ಫಲಾನುಭವಿಗಳಿಗೆ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.

    ಪ್ರತಿ ವರ್ಷದಂತೆ ತಾಲ್ಲೂಕಿನ ೪೦೭ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮವಸ್ತ್ರ ವಿತರಣೆ ಮಾಡಿದ ಅವರು, ಜೊತೆಗೆ ಇತರ ಪರಿಕರಗಳನ್ನು ನೀಡಲಾಗುವುದು. ಇಲಾಖೆ ವತಿಯಿಂದ ಉತ್ತಮ ಗುಣಮಟ್ಟದ ಎರಡು ಸಮವಸ್ತ್ರದ ಸೀರೆಗಳನ್ನು ವಿತರಿಸಲಾಗುವುದೆಂದರು.

    ಅಕ್ಟೋಬರ್.೨ ಕ್ಕೆ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಿ ೫೦ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ತಾಲ್ಲೂಕಿನ ೪೭ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ ಎಂದರು.

    ಈ ಸಂಬಂಧ ಈಗಾಗಲೇ ಪಠ್ಯಪುಸ್ತಕಗಳು ಸರಬರಾಜಾಗುತ್ತಿದ್ದು, ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸಲಾಗುವುದು. ೪-೫ ವರ್ಷದ ಮಕ್ಕಳಿಗೆ ಎಲ್‌ಕೆಜಿ, ೫-೬ ವರ್ಷದ ಮಕ್ಕಳಿಗೆ ಯುಕೆಜಿ ತರಗತಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ನಡೆಸಲಾಗುವುದೆಂದು ಮಾಹಿತಿ ನೀಡಿದರು.

    ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಮಡಿಷನ್ ಕಿಟ್ ಸರಬರಾಜು ಮಾಡಲಾಗಿದ್ದು, ಅಂಗನವಾಡಿ ಫಲಾನುಭವಿಗಳಿಗೆ ಈ ಕಿಟ್ಟನ್ನು ಪ್ರಥಮ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂದರು.

    ಮೊದಲಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಸ್ವಾಗತಿಸಿ ಮಾತನಾಡಿ, ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹಂತ ಹಂತವಾಗಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ, ಯುಕೆಜಿ ವಿನೂತನ ತರಗತಿಗಳನ್ನು ೨೦೨೫ ರ ಅಕ್ಟೋಬರ್ ೨ ರಂದು ವಿದ್ಯುಕ್ತವಾಗಿ ಸರ್ಕಾರದ ಆದೇಶದಂತೆ ಆರಂಭಿಸಲಾಗುವುದು. ಖಾಸಗಿ ಶಾಲೆಗಳ ಶಿಕ್ಷಣಕ್ಕೆ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸಲು ಸಚಿವರು ಸೂಚನೆ ನೀಡಿದ್ದಾರೆ ಎಂದು ಹೇಳದರು.

    ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಿಜಯ್‌ಕುಮಾರ್, ಎಸಿಡಿಪಿಓ ರೂಪಾ ಕುಮಾರಿ, ವಸಂತ ಕುಮಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.

    LKG-UKG classes to start in Anganwadi centers from October 2

  • ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರಚಿಕಿತ್ಸೆ

    ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರಚಿಕಿತ್ಸೆ

    ಚಿಕ್ಕಮಗಳೂರು: ಅತಿ ಶೀಘ್ರದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ನಗರ ಮತ್ತು ತಾಲ್ಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಉಪಟಳ ಹಾಗೂ ಬಿಡಾಡಿ ದನಗಳ ತೊಂದರೆಗಳ ಬಗ್ಗೆ ಸಾರ್ವಜನಿಕರಿಂದ ನಗರಸಭೆ ಮತ್ತು ತಾಲ್ಲೂಕು ಪಂಚಾಯಿತಿಗೆ ಹಲವಾರು ದೂರು ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದರು.

    ಕಸಬಾ ಹೋಬಳಿ ಇಂದಾವರ ಗ್ರಾಮದ ಸರ್ವೆ ನಂ.೩೬ ರಲ್ಲಿ ೧೫ ಎಕರೆ ಜಾಗವನ್ನು ಪಶುಸಂಗೋಪನೆ ಇಲಾಖೆಗೆ ಮೀಸಲಿಟ್ಟಿದ್ದು, ಅದರಲ್ಲಿ ಎರಡು ಎಕರೆ ಜಾಗದಲ್ಲಿ ಬೀದಿನಾಯಿಗಳನ್ನು ಪಳಗಿಸಿ ಚಿಕಿತ್ಸೆ ನೀಡಲು ಸಂಬಂಧಿಸಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.

    ಈ ಸಂಬಂಧ ಇನ್ನೊಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀಡಿ ಪುನಹಾ ಸ್ವಸ್ಥಾನಕ್ಕೆ ಬೀದಿನಾಯಿಗಳನ್ನು ತಂದು ಬಿಡಲಾಗುವುದು ಎಂದು ತಿಳಿಸಿದರು. ವರ್ಷದಲ್ಲಿ ಎರಡು ಬಾರಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀಡಿದರೆ ಬೀದಿನಾಯಿಗಳ ಸಂತತಿ ಕಡಿಮೆಯಾಗುತ್ತದೆ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಹೇಳಿದರು.

    ಬಿಡಾಡಿ ದನಗಳನ್ನು ಸಾಕಿರುವವರಿಗೆ ನಗರಸಭೆಯಿಂದ ರಸ್ತೆಗೆ ಬಿಡದಂತೆ ಸೂಚನೆ ಪತ್ರ ನೀಡಿದ್ದು, ನಿರ್ಲಕ್ಷ್ಯ ವಹಿಸಿ ದನಗಳನ್ನು ಬೀದಿಗೆ ಬಿಟ್ಟರೆ ಬೇರೆಡೆಗೆ ಸಾಗಿಸಲು ಕ್ರಮವಹಿಸಲಾಗುವುದೆಂದು ಎಚ್ಚರಿಸಿದರು. ನಗರದ ಕಲ್ಯಾಣ ಮಂಟಪಗಳ ಮುಂಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರ ದೂರನ್ನು ಗಂಭೀರವಾಗಿ ಪರಿಗಣಿಸಿ ಕಲ್ಯಾಣ ಮಂಟಪದ ಮಾಲಿಕರು ಸೆಕ್ಯುರಿಟಿ ಗಾರ್ಡ್ ಒಬ್ಬರನ್ನು ನೇಮಕ ಮಾಡಿಕೊಂಡು ದೂರದಲ್ಲಿ ವಾಹನ ನಿಲುಗಡೆಗೆ ಮುಂದಾಗಬೇಕೆಂದು ಮನವಿ ಮಾಡಿದರು.

    ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಬೀದಿನಾಯಿಗಳ ಉಪಟಳದಿಂದ ನಾಗರೀಕರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಅವುಗಳ ನಿಯಂತ್ರಣಕ್ಕೆ ನಗರಸಭೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು.

    ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಕಳೆದೆರಡು ವರ್ಷಗಳಿಂದ ೩೫೦೦ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನೀಡಲಾಗಿದೆ. ಪ್ರಸಕ್ತ ವರ್ಷ ೨೦೦೦ ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನೀಡಲು ಗುರಿಹೊಂದಲಾಗಿದ್ದು, ಸಧ್ಯದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕನಿಷ್ಟ ೬ ತಿಂಗಳಿಗೊಮ್ಮೆ ಶಸ್ತ್ರಚಿಕಿತ್ಸೆ ನೀಡಲಾಗುವುದೆಂದರು.

    ಇದೂವರೆಗೆ ಬೀದಿನಾಯಿಗಳ ನಿಯಂತ್ರಣಕ್ಕೆ ಟೆಂಡರ್ ಕರೆದಿದ್ದು, ಟೆಂಡರ್‌ದಾರರು ಭಾಗವಹಿಸದ ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆ.೧೧ ಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕಾರ್ಯಾದೇಶ ನೀಡಿ ಶಸ್ತ್ರಚಿಕಿತ್ಸೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.

    ಬಿಡಾಡಿ ದನಗಳ ನಿಯಂತ್ರಣಕ್ಕೆ ನಗರಸಭೆಯಿಂದ ಅಗತ್ಯ ಕ್ರಮ ಕೈಗೊಂಡಿದ್ದು, ಕಾಮಧೇನು ಗೋಶಾಲೆಗೆ ಟೆಂಡರ್ ನೀಡಲಾಗಿದೆ. ಬಿಡಾಡಿ ದನಗಳ ಸಾಕಾಣೆದಾರರಿಗೆ ನಗರಸಭೆಯಿಂದ ನೋಟೀಸ್ ನೀಡಿದ್ದು, ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ, ಪರಿಸರ ಅಭಿಯಂತರರಾದ ತೇಜಸ್ವಿನಿ, ಆರೋಗ್ಯ ನಿರೀಕ್ಷಕರಾದ ನಾಗಪ್ಪ, ರಂಗಪ್ಪ, ಇಂಜಿನಿಯರ್ ಲೋಕೇಶ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಮೋಹನ್ ಕುಮಾರ್, ಪ್ರಾಣಿ ದಯಾ ಸಂಘದ ನಳಿನಾ ಡಿಸಾ ಮತ್ತಿತರರು ಭಾಗವಹಿಸಿದ್ದರು.

    Neutering surgery to control stray dogs

  • ಮಾದಕ ವಸ್ತು ಮಾರಾಟ ಕಂಡಲ್ಲಿ ಕಠಿಣ ಕ್ರಮಕ್ಕೆ ಸೂಚನೆ

    ಮಾದಕ ವಸ್ತು ಮಾರಾಟ ಕಂಡಲ್ಲಿ ಕಠಿಣ ಕ್ರಮಕ್ಕೆ ಸೂಚನೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ವ್ಯಾಪಾರ-ವ್ಯವಹಾರ ಕಂಡು ಬಂದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜ್ಞಾನ ಜ್ಯೋತಿ ಟಿ.ಎಂ.ಎಸ್. ವಿದ್ಯಾ ಸಂಸ್ಥೆ, ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಟಿ.ಎಂ.ಎಸ್. ರೋಟರಿ ಹಾಲ್‌ನಲ್ಲ್ಲಿ ಡಾ.ಶ್ರೀ ಮ.ನಿ.ಪ್ರ. ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವ್ಯಸನಮುಕ್ತ ದಿನಾಚರಣೆ ಹಾಗೂ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲಾ ಪಂಚಾಯಿತಿಯ ಕೆ.ಡಿ.ಪಿ. ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಮಾದಕ ವಸ್ತು ಮಾರಾಟ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾವು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ ಅವರು, ದೇಶದ ದಿಕ್ಕನ್ನೇ ಬದಲಿಸುವ ಶಕ್ತಿ ಇರುವ ಯುವಜನತೆ ವ್ಯಸನಗಳಿಗೆ ಬಲಿಯಾದರೆ, ಅವರ ಕುಟುಂಬ, ಸಮಾಜ ಅಷ್ಟೇ ಅಲ್ಲ, ಇಡೀ ದೇಶವೇ ದಿಕ್ಕು ತಪ್ಪುತ್ತದೆ ಎಂದು ಹೇಳಿದರು.

    ಮಾದಕ ವ್ಯಸನಿಗಳಾದಲ್ಲಿ ಅವರ ವ್ಯಕ್ತಿಗತ ಜೀವನ ಮಾತ್ರವಲ್ಲ ಸಾಮಾಜಿಕ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ಚಟಕ್ಕೆ ಬಿದ್ದವರು ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜಕ್ಕೆ ಮಾರಕವಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಕಾರವಂತ ದೇಶದಲ್ಲಿ ಜನಿಸಿರುವ ನಾವು ಕ್ಷಣಿಕ ಸಂತೋಷ ಕೊಡುವ ಈ ಚಟದಿಂದ ದೂರ ಉಳಿಯಬೇಕು ಎಂದು ತಿಳಿಸಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಎಲ್ಲರ ಬದುಕಿನಲ್ಲಿ ಯೋಗ್ಯತೆ ಇರುತ್ತದೆ. ಆದರೆ ಯೋಗ ಮಾತ್ರ ಕೂಡಿಬಂದಲ್ಲಿ ಮಾತ್ರ ಅವಕಾಶವನ್ನು ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಲು, ಉತ್ತಮ ಉದ್ಯೋಗ ಮಾಡಲು ಎಲ್ಲಾ ಯೋಗ್ಯತೆಗಳನ್ನು ಹೊಂದಿದ್ದರೂ ಪ್ರಯತ್ನ ಮಾಡುವುದು ಅಗತ್ಯ. ಈ ದಿಸೆಯಲ್ಲಿ ನಮ್ಮ ಬದುಕಿಗೆ ಕೆಟ್ಟದ್ದರತ್ತ ಕಣ್ಣು ಹಾಯಿಸಲೂ ಬಾರದು. ಅದರಲ್ಲೂ ಮಾದಕ ವಸ್ತುಗಳ ವ್ಯಾಮೋಹಕ್ಕೆ ಒಳಗಾಗಬಾರದು. ಅಂಥವುಗಳನ್ನು ಕೆಟ್ಟದ್ದು ಎಂದು ಹೇಳುವ ಧೈರ್ಯವೂ ನಮ್ಮಲ್ಲಿ ಇರಬೇಕು. ಆ ಮೂಲಕ ಈ ಪೀಳಿಗೆಯನ್ನು ಉತ್ತಮ ಹಾದಿಗೆ ಒಯ್ಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

    ಡಾ.ಮಹಾಂತ ಶಿವಯೋಗಿಗಳ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ತ್ರಿವಿಧ ದಾಸೋಹಗಳಾದ ಜ್ಞಾನಕ್ಕೆ ಅನ್ನಕ್ಕೆ, ಅರಿವೆಗೆ ಒತ್ತುಕೊಟ್ಟು ಅನಾದಿ ಕಾಲದಿಂದಲೂ ಶ್ರಮಿಸುತ್ತಿರುವ ಅನೇಕ ವಿರಕ್ತ ಮಠಗಳು ಕರ್ನಾಟಕದಾದ್ಯಂತ ಇವೆ. ಅದೇ ಸಾಲಿನಲ್ಲಿ ಚಿತ್ತರಗಿಯ ಮಹಾಂತ ಶಿವಯೋಗಿಗಳ ಮಠವೂ ಒಂದು. ಬಸವಾದಿ ಶರಣರ ಆಶಯಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಂಕಲ್ಪ ಮತ್ತು ದೀಕ್ಷೆಯನ್ನು ಹೊತ್ತುಕೊಂಡು ಕಾರ್ಯೋನ್ಮುಖರಾಗಿರುವ ನಿಟ್ಟಿನಲ್ಲಿ ನಾವು ಮಹಾಂತ ಶಿವಯೋಗಿಗಳ ಜನ್ಮದಿನವನ್ನು ಆಚರಿಸುತ್ತಿದ್ದೇವೆ ಎಂದರು.

    ಡಾ.ಮಹಾಂತ ಶಿವಯೋಗಿಗಳು ತಮ್ಮ ಸಮಾಜಮುಖಿ ಕಾರ್ಯಗಳಿಂದ ಮಹಾತ್ಮರಾದವರು. ವ್ಯಸನಮುಕ್ತ ವ್ಯಕ್ತಿ, ಸಮಾಜ, ಕುಟುಂಬ ಹಾಗೂ ವ್ಯಸನಮುಕ್ತ ದೇಶವನ್ನು ಕಟ್ಟುವ ಕಾಯಕದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅವರ ಜಯಂತಿಯನ್ನು ಆಚರಣೆ ಮಾಡಲು ಸರ್ಕಾರವೇ ಆದೇಶ ನೀಡಿರುವುದು ಇದೇ ಕಾರಣಕ್ಕೆ. ಅವರು ತಮ್ಮ ಕಿರಿಯ ವಯಸ್ಸಿನಲ್ಲೇ ಆ ಮಠಕ್ಕೆ ಕಿರಿಯ ಸ್ವಾಮೀಜಿಯಾಗಿ ಪಟ್ಟಾಭಿಷಿಕ್ತರಾಗುತ್ತಾರೆ. ಕಾಶಿಯಲ್ಲಿ ಸಕಲ ವಿದ್ಯಾ ಪಾರಂಗತರಾಗಿದ್ದರು. ಉತ್ತರ ಕರ್ನಾಟಕದಲ್ಲಿ ಬರಗಾಲ ಬಂದಾಗ ಗೋಶಾಲೆಗಳು, ಗಂಜಿ ಕೇಂದ್ರಗಳು, ಮೇವಿನ ಕೇಂದ್ರಗಳನ್ನು ತೆರೆಯುವ ಮೂಲಕ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಧರ್ಮ, ಜಾತಿ, ಭಾಷೆ, ಪಂಥ, ದೇಶ ಎಲ್ಲವನ್ನೂ ಮೀರಿದ ಶಿವಯೋಗಿಗಳು ಎಂದು ಬಣ್ಣಿಸಿದರು.

    ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ತಜ್ಞ ಡಾ.ವಿನಯ್, ಯುವಜನತೆ ಮೊದಲಿಗೆ ಆಸೆ, ಕುತೂಹಲ ಹಾಗೂ ಒತ್ತಡಗಳಿಗೆ ಬಿದ್ದು ಮಾದಕ ವಸ್ತುಗಳ ಮೋಹಕ್ಕೆ ಒಳಗಾಗಿ ಮುಂದೆ ಅದು ಖುಷಿಗೂ, ಬೇಸರಕ್ಕೂ ಬಳಸುವ ಮೂಲಕ ವ್ಯಸನಿಗಳಾಗುತ್ತಾರೆ. ಕ್ಷಣಿಕವಾಗಿ ಮಿದುಳನ್ನು ಉದ್ದೀಪನಗೊಳಿಸುವ ಈ ಚಟಗಳಿಗೆ ದಾಸರಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಇಡೀ ಜೀವನವನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮದ್ಯ, ತಂಬಾಕು ವಸ್ತುಗಳು, ಗಾಂಜಾ, ಕೊಕೇನ್, ಹೆರಾಯಿನ್ ಇವು ಮಾದಕ ವಸ್ತುಗಳಾಗಿದ್ದು, ಮಿದುಳು ಚುರುಕಾಗುತ್ತದೆ ಎನ್ನುವ ಕಾರಣಕ್ಕೆ ಯುವಜನರು ಬೇಗ ಅವುಗಳ ದಾಸರಾಗಿಬಿಡುತ್ತಾರೆ. ಉದ್ದೀಪನಗೊಳಿಸುವ ಈ ಚಟಗಳಿಗೆ ದಾಸರಾದರೆ ಮತ್ತೆ ಅವುಗಳಿಂದ ಹೊರ ಬರುವುದು ಕಷ್ಟ. ಚಟಕ್ಕೆ ಒಳಗಾದವರು ಆರೋಗ್ಯ ಇಲಾಖೆಯ ಸಹಾಯವಾಣಿ ಮೂಲಕ ನೆರವು ಪಡೆಯಬಹುದು. ಅಂಥವರು ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಈ ಸಂಬಂಧಿತ ರೋಗಿಗಳ ಸ್ಥಿತಿಯನ್ನು ಅವಲೋಕಿಸಬೇಕು ಎಂದು ತಿಳಿಸಿದರು.

    ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಮಾತ್ರವಲ್ಲ, ಸಂಸ್ಕಾರವನ್ನು ಬೆಳೆಸಿಕೊಳ್ಳುವುದು ಅಗತ್ಯ. ಅದರಿಂದ ಮಾತ್ರ ದೇಶಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡಲು ಸಾಧ್ಯ ಎಂದರು.

    ಟೌನ್ ಮಹಿಳಾ ಸಮಾಜದ ಕಾರ್ಯದರ್ಶಿ ಶುಭದಾ, ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ಉಮೇಶ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಉಪಸ್ಥಿತರಿದ್ದರು. ಜ್ಞಾನಜ್ಯೋತಿ ಟಿ.ಎಂ.ಎಸ್.ಪದವಿ ಕಾಲೇಜಿನ ಪ್ರಾಂಶುಪಾಲ ಇಂದ್ರೇಶ್ ಸ್ವಾಗತಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ಹೆಚ್.ಬಿ.ಮಹೇಶಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    ಇದೇ ಸಂದರ್ಭದಲ್ಲಿ ಅಂಬಳೆಯ ರೇಣುಕಾಮಾತೆ ತೊಗಲುಗೊಂಬೆ ಕಲಾ ಸಂಘದ ವತಿಯಿಂದ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ತೊಗಲು-ಗೊಂಬೆಯಾಟ ಪ್ರದರ್ಶಿಸಲಾಯಿತು.

    Strict action will be taken if drug sales are found

  • ಆ.3 ರಂದು ‘ಲಕ್ಷ್ಮಣ್ ತುಕಾರಾಂ ಗೋಲೆ’ ನಾಟಕ ಪ್ರದರ್ಶನ

    ಆ.3 ರಂದು ‘ಲಕ್ಷ್ಮಣ್ ತುಕಾರಾಂ ಗೋಲೆ’ ನಾಟಕ ಪ್ರದರ್ಶನ

    ಚಿಕ್ಕಮಗಳೂರು: ಶಿವಮೊಗ್ಗದ ಸಹ್ಯಾದ್ರಿ ರಂಗಭೂಮಿ ಅರ್ಪಿಸುವ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ‘ಲಕ್ಷ್ಮಣ್ ತುಕಾರಾಂ ಗೋಲೆ’ ಎಂಬ ವಿಶೇಷ ಸಾಮಾಜಿಕ ನಾಟಕ ಪ್ರದರ್ಶನ ಆ.೩ ರಂದು ಭಾನುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಏರ್ಪಡಿಸಲಾಗಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷರಾದ ಡಾ. ಜೆ.ಪಿ. ಕೃಷ್ಣೇಗೌಡ ಅವರು ಬಸವತತ್ವ ಪೀಠ, ಕಲಾ ಸೇವಾ ಸಂಘ, ಆಶಾಕಿರಣ ಚಾರಿಟಬಲ್ ಟ್ರಸ್ಟ್, ಆದಿಚುಂಚನಗಿರಿ ವಿಶ್ವ ವಿದ್ಯಾನಿಲಯ, ಆಶ್ರಯ ಫೌಂಡೇಶನ್, ಕಲ್ಕಟ್ಟೆ ಪುಸ್ತಕದ ಮನೆ, ಜಿ.ಸಿ ಅಂತರಾಷ್ಟ್ರೀಯ ಸಂಸ್ಥೆ, ಪೂರ್ವಿ ಸುಗಮ ಸಂಗೀತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.

    ಈ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಸವಮಂದಿರದ ಡಾ. ಬಸವ ಮರುಳುಸಿದ್ದ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಕಲಾ ಸೇವಾ ಸಂಘದ ಅಧ್ಯಕ್ಷ ಕೆ. ಮೋಹನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಡಾ. ಮಂಜುಳ ಉಲ್ಲಳ್ಳಿ, ಡಾ. ಸಿ.ಕೆ. ಸುಬ್ರಾಯ, ಡಾ. ರಮೇಶ್, ಕಾಂತೇಶ್ ಕದರ ಮಂಡಲಗಿ, ಲಯನ್ ಕುಮಾರ್, ಡಾ. ವರ್ಷ ಅಭಿಷೇಕ್, ನಾಗರಾಜ್‌ರಾವ್ ಕಲ್ಕಟ್ಟೆ, ಪ್ರದೀಪ್ ಸಿ.ಬಿ. ಎಂ.ಎಸ್ ಸುಧೀರ್ ಭಾಗವಹಿಸಲಿದ್ದಾರೆಂದು ಹೇಳಿದರು.

    ಈ ನಾಟಕವು ಗಾಂಧಿವಾದಿ ಲಕ್ಷ್ಮಣ್ ತುಕಾರಾಂ ಗೋಲೆ ಅವರ ಜೀವನಾಧಾರಿತ ಕಥೆಯನ್ನೊಳಗೊಂಡಿದ್ದು, ವಿಶೇಷವಾಗಿ ಸ್ವತಹಾ ಗೋಲೆಯವರೇ ಉಪಸ್ಥಿತರಿದ್ದು ನಾಟಕವನ್ನು ವೀಕ್ಷಿಸಲಿದ್ದಾರೆಂದರು. ಅದೇ ದಿನ ಮಧ್ಯಾಹ್ನ ೧೨ ಗಂಟೆಗೆ ಇಲ್ಲಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಇದೇ ನಾಟಕವನ್ನು ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಯುವತಿಯೋರ್ವಳನ್ನು ರೌಡಿಯಿಂದ ರಕ್ಷಿಸಲು ಹೋದ ಸಂದರ್ಭದಲ್ಲಿ ಆತನ ಕಿವಿಯನ್ನು ಕತ್ತರಿಸಿದ ಘಟನೆಯಿಂದ ಜೈಲು ಸೇರಿ ಮುಂದೆ ಪಾತಕ ಲೋಕದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಂಡು ರೇಜರ್ ಲಕನ್ ಎಂದೇ ಕುಖ್ಯಾತಿ ಪಡೆದು ೭ ವರ್ಷಗಳ ಜೈಲು ಶಿಕ್ಷೆಗೊಳಗಾಗಿದ್ದ ಇವರು ಅಲ್ಲಿ ಗಾಂಧೀಜಿಯವರ ಆತ್ಮಚರಿತ್ರೆಯನ್ನು ಓದಿ ಮನಃಪರಿವರ್ತನೆಗೊಂಡು ಸನ್ನಡತೆಯ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಗೆ ಬಿಡುಗಡೆಯಾದ ಲಕ್ಷ್ಮಣ್ ತುಕಾರಾಂ ಗೋಲೆ, ಸಮಾಜಸೇವೆ, ಯೋಗ, ಧ್ಯಾನ, ಕೈದಿಗಳ ಮನಃಪರಿವರ್ತನೆಯಲ್ಲಿ ತೊಡಗಿದ್ದಾರೆಂದು ತಿಳಿಸಿದರು.

    ೨೦೧೫ ರ ಜಿಂದಗಿ ಲೈಫ್ ರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾದ ಇವರು, ನಾಟಕ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಕಲಾ ಸೇವಾ ಸಂಘದ ಅಧ್ಯಕ್ಷ ಕೆ. ಮೋಹನ್, ಲಯನ್ಸ್ ಅಧ್ಯಕ್ಷ ಕುಮಾರ್ ಸಿ.ಎನ್, ಪ್ರಧಾನ ಕಾರ್ಯದರ್ಶಿ ಗೋಪಿಕೃಷ್ಣ, ಲಯನ್ ಜಿ.ರಮೇಶ್, ಎಂ.ಎಸ್. ಸುಧೀರ್ ಉಪಸ್ಥಿತರಿದ್ದರು.

    Lakshman Tukaram Gole play performance on August 3rd

  • ಹಕ್ಕಿಮಕ್ಕಿ ಗ್ರಾಮದಲ್ಲಿ ಮಗನಿಂದ ತಾಯಿಯ ಹತ್ಯೆ

    ಹಕ್ಕಿಮಕ್ಕಿ ಗ್ರಾಮದಲ್ಲಿ ಮಗನಿಂದ ತಾಯಿಯ ಹತ್ಯೆ

    ಆಲ್ದೂರು: ತಾಯಿಯನ್ನು ಮಗನೇ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಪವನ್ (28) ತಾಯಿಯನ್ನ ಕೊಂದ ಪಾಪಿ ಮಗ. ತಾಯಿ ಭವಾನಿ (52) ಅವರನ್ನು ಬೆಂಕಿ ಹಾಕಿ ಅರೆಬರೆ ಸುಟ್ಟು ಮನೆಯಲ್ಲೇ ಮಲಗಿದ್ದಾನೆ ಎಂದು ತಿಳಿದುಬಂದಿದೆ.

    ಇವರದು ಒಂಟಿ ಮನೆಯಾಗಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಟ್ಟದ ಮೇಲೆ ಇದ್ದು, ಜನವಸತಿ ಪ್ರದೇಶದಿಂದ ಹೊರಗೆ ವಾಸವಾಗಿದ್ದರು ಎನ್ನಲಾಗಿದೆ. ಮನೆಯಲ್ಲಿ ತಂದೆ ತಾಯಿ ಮಗ ಮೂವರು ವಾಸವಾಗಿದ್ದರು ಎನ್ನಲಾಗಿದೆ.

    ತಂದೆ ಮಗ ಇಬ್ಬರು ಮದ್ಯವ್ಯಸನಿಗಳಾಗಿದ್ದರು ಎನ್ನಲಾಗಿದೆ. ಪ್ರಕರಣದ ಬಗ್ಗೆ ತಂದೆಯೇ ಆಲ್ಲೂರು ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

    ಬುಧವಾರ ತಡರಾತ್ರಿಯಲ್ಲಿ ಪೊಲೀಸರು ಮತ್ತು ಸ್ಥಳೀಯರು ಮೃತದೇಹವನ್ನು ಕಿಲೋಮೀಟರ್ ಗಟ್ಟಲೇ ಹೊತ್ತು ತಂದಿದ್ದು ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಆಲ್ಲೂರು ಪಿಎಸ್‌ಐ ಹಾಗೂ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪವನ್‌ನನ್ನು ಬಂಧಿಸಿದ್ದಾರೆ.

    Mother murdered by son in Hakkimaki village

  • ಫುಟ್‌ಪಾತ್ ಮೇಲಿನ ವಸ್ತು ತೆರವಿಗೆ ನಿರ್ಧಾಕ್ಷಿಣ್ಯ ಕ್ರಮ ವಹಿಸಿ

    ಫುಟ್‌ಪಾತ್ ಮೇಲಿನ ವಸ್ತು ತೆರವಿಗೆ ನಿರ್ಧಾಕ್ಷಿಣ್ಯ ಕ್ರಮ ವಹಿಸಿ

    ಚಿಕ್ಕಮಗಳೂರು: ನಗರಸಭೆಯಿಂದ ೧೫ ದಿನಗಳ ಮುನ್ನವೇ ಫುಟ್‌ಪಾತ್ ಮೇಲಿನ ವಸ್ತುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಉಲ್ಲಂಘಿಸಿರುವ ವರ್ತಕರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಸೂಚನೆ ನೀಡಿದರು.

    ಅವರು ಇಂದು ನಗರಸಭೆಯಿಂದ ಏರ್ಪಡಿಸಲಾಗಿದ್ದ ನಗರದ ಮಲ್ಲಂದೂರು ರಸ್ತೆಯಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ನಗರಸಭೆಯಿಂದ ಪರವಾನಗಿ ಪಡೆಯದೆ ಅನಧಿಕೃತವಾಗಿ ತರಕಾರಿ ಸೇರಿದಂತೆ ಹೂವು, ಹಣ್ಣು ಇನ್ನಿತರೆ ಅಂಗಡಿಗಳನ್ನು ನಡೆಸುತ್ತಿರುವ ವರ್ತಕರು ಫುಟ್‌ಪಾತ್ ಮೇಲೆ ವಸ್ತುಗಳನ್ನು ಇಡಬಾರದು ಎಂದು ಹೇಳಿದರು.

    ಪರವಾನಗಿ ಪಡೆಯದೆ ಎಷ್ಟು ವರ್ಷಗಳಾಗಿವೆ ಅಲ್ಲಿಂದ ಇಲ್ಲಿಯವರೆಗೆ ವರ್ತಕರಿಗೆ ದಂಡ ಸಹಿತ ಶುಲ್ಕ ವಿಧಿಸಿ ಪರವಾನಗಿ ನೀಡಬೇಕು ಹಾಗೂ ಖಾಲಿ ನಿವೇಶನಗಳಲ್ಲಿ ಗಿಡಘಂಟಿಗಳು ಬೆಳೆದಿದ್ದರೆ ಸಂಬಂಧಪಟ್ಟ ಮಾಲಿಕರಿಗೆ ಸೂಚನೆ ನೀಡಿ ಸ್ವಚ್ಚತೆ ಮಾಡಿಕೊಳ್ಳಬೇಕೆಂದು ತಾಕೀತು ಮಾಡಿ ಎಂದು ಸಲಹೆ ನೀಡಿದರು.

    ಕಸವನ್ನು ನಿಗದಿತ ಸ್ಥಳದಲ್ಲಿ ಹಾಕದೆ ಎಲ್ಲೆಂದರಲ್ಲಿ ಹಾಕಿ ನಗರದ ಸೌಂದಂiiಕ್ಕೆ ಧಕ್ಕೆ ತರಲಾಗುತ್ತಿದೆ. ಈ ಬಗ್ಗೆ ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ, ಅಧಿಕಾರಿಗಳು ಕ್ರಮವಹಿಸಬೇಕೆಂದು ಸೂಚಿಸಿದರು.

    ಲಾಡ್ಜ್‌ಗಳ ನಿರ್ಮಾಣಕ್ಕೆ ನಗರಸಭೆಯಿಂದ ಪರವಾನಗಿ ನೀಡುವಾಗ ನಿಬಂಧನೆಗಳನ್ನು ವಿಧಿಸಿದ್ದು, ಕಟ್ಟಡ ಪೂರ್ಣಗೊಂಡ ಬಳಿಕ ಪಾರ್ಕಿಂಗ್‌ಗೆ ಮೀಸಲಿಟ್ಟಿದ್ದ ಜಾಗದಲ್ಲಿ ಪೆಟ್ಟಿಗೆ ಅಂಗಡಿಗೆ ಅನುಮತಿ ನೀಡಿ ವ್ಯಾಪಾರ ಮಾಡುತ್ತಿದ್ದಾರೆಂದು ದೂರಿದರು.

    ಸಧ್ಯದಲ್ಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆರ್‌ಟಿಓ ಪೊಲೀಸರು ಮತ್ತು ಪರಿಸರ ಇಲಾಖೆಯ ಮುಖ್ಯಸ್ಥರನ್ನೊಳಗೊಂಡ ಸಭೆ ನಡೆಸಿ ಸೂಕ್ತ ಕ್ರಮ ವಹಿಸುತ್ತೇವೆ ಎಂದ ಅವರು, ಹಾಲಿ ಇರುವ ರಸ್ತೆಯನ್ನು ಸ್ವಚ್ಚವಾಗಿಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

    ಪೌರಕಾರ್ಮಿಕರ ಹುದ್ದೆ ಭರ್ತಿಯಾಗದ ಹೊರತು ಸಮಸ್ಯೆ ಇತ್ಯರ್ಥವಾಗುವುದಿಲ್ಲ, ನಗರದಲ್ಲಿ ಅಂಗಡಿಗಳು ಹೆಚ್ಚಾದಂತೆ ಕಸ ವಿಲೇವಾರಿ ಕಷ್ಟವಾಗುತ್ತಿದೆ. ಹಾಲಿ ೨೦೩ ಪೌರ ಕಾರ್ಮಿಕರ ಹುದ್ದೆಗೆ ಕೇವಲ ೧೭೫ ಜನ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದರು.

    ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ವೈದ್ಯರು, ದಾದಿಯರು, ಪೌರ ಕಾರ್ಮಿಕರು, ಶಿಕ್ಷಕರನ್ನು ಭರ್ತಿಮಾಡುವಂತೆ ಆದ್ಯತೆ ನೀಡಬೇಕೆಂದು ಆಗ್ರಹಿಸುವುದಾಗಿ ಭರವಸೆ ನೀಡಿದರು.

    ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಸಾರ್ವಜನಿಕರ ಸಂಚಾರಕ್ಕೆ ರಸ್ತೆಬದಿ ಫುಟ್‌ಪಾತ್ ಮೇಲೆ ವಸ್ತುಗಳನ್ನಿಟ್ಟು ವ್ಯಾಪಾರ ಮಾಡುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಬಂದ ದೂರಿನ ಹಿನ್ನೆಲೆಯಲ್ಲಿ ಇಂದು ಫಟ್‌ಪಾತ್ ಮೇಲಿನ ವಸ್ತುಗಳನ್ನು ತೆರವುಗೊಳಿಸುವ ಮೂಲಕ ವರ್ತಕರಿಗೆ ಕಡಕ್ ಸೂಚನೆ ನೀಡಲಾಗಿದೆ ಎಂದರು.

    ಸದಸ್ಯ ಎ.ಸಿ. ಕುಮಾರ್‌ಗೌಡ ಮಾತನಾಡಿ, ನಗರವನ್ನು ಸುಂದರ ಮತ್ತು ಸ್ವಚ್ಚ ನಗರವನ್ನಾಗಿ ಮಾಡಬೇಕೆಂಬ ಉದ್ದೇಶದೊಂದಿಗೆ ನಗರಸಭೆಯಿಂದ ಕಳೆದ ಒಂದು ತಿಂಗಳಿನಿಂದ ಸಂತೆ ಮಾರ್ಕೆಟ್ ಸ್ವಚ್ಚತೆ ಹಾಗೂ ಎಂಜಿ ರಸ್ತೆ, ಮಲ್ಲಂದೂರು ರಸ್ತೆಯ ಫುಟ್‌ಪಾತ್ ಮೇಲೆ ವಸ್ತುಗಳನ್ನಿಡುತ್ತಿರುವುದರಿಂದ ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಲಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಗೋಪಿ, ಲಕ್ಷ್ಮಣ್, ಪೌರಾಯುಕ್ತ ಬಿ.ಸಿ ಬಸವರಾಜು, ಆರೋಗ್ಯ ನಿರೀಕ್ಷಕರಾದ ನಾಗಪ್ಪ, ಅಣ್ನಯ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

    Take decisive action to clear the debris from the footpath.

  • ಮಾನವ ಕಳ್ಳಸಾಗಣೆ ತಡೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ

    ಮಾನವ ಕಳ್ಳಸಾಗಣೆ ತಡೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ

    ಚಿಕ್ಕಮಗಳೂರು: ಮಾನವ ಕಳ್ಳಸಾಗಣೆಯಂತಹ ಹೀನಕೃತ್ಯದ ಅಪರಾಧ ಕೃತ್ಯದಿಂದ ಈ ಜಿಲ್ಲೆಯನ್ನು ಮುಕ್ತಗೊಳಿಸಲು ಪ್ರಾಮಾಣಿಕವಾದ ಪ್ರಯತ್ನದ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ವಿ.ಹನುಮಂತಪ್ಪ ಹೇಳಿದರು.

    ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಇಂದು ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಮಹಿಳೆಯರು, ಮಕ್ಕಳು ಅಬಲರಾಗಿದ್ದು, ಪ್ರತಿರೋಧವೊಡ್ಡಲು ಅಸಾಧ್ಯವಾಗಿರುವ ಪರಿಸ್ಥಿತಿಯಲ್ಲಿ ಆಮಿಷವೊಡ್ಡುವ ಮುಖಾಂತರ ಅವರನ್ನು ಕರೆದೊಯ್ದು ಜೀತ ಪದ್ಧತಿ ಇಲ್ಲವೆ ಲೈಂಗಿಕ ಶೋಷಣೆಗೆ ಒಳಪಡಿಸುವ ಹೀನ ಕೃತ್ಯ ನಿರಂತರವಾಗಿ ನಡೆಯುತ್ತಿದೆ. ಮಕ್ಕಳನ್ನು ಸಹ ಕಳ್ಳಸಾಗಣೆ ಮಾಡಿ ಬಾಲಕಾರ್ಮಿಕ ಪದ್ಧತಿಗೆ ದೂಡುವಂತಹ ಪದ್ಧತಿ ನಡೆಯುತ್ತಿದೆ. ಇದರ ವಿರುದ್ಧ ವಿಶ್ವಾದ್ಯಂತ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಈ ಜಾಥಾದ ಪ್ರಮುಖ ಉದ್ದೇಶ ಎಂದರು.

    ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ ಮಾನವ ಕಳ್ಳಸಾಗಣೆ ಹೆಚ್ಚುತ್ತಲೇ ಇದೆ. ಲೈಂಗಿಕ ದೌರ್ಜನ್ಯ ಎಸಗುವುದಕ್ಕಾಗಿ, ಅಂಗಾಂಗಗಳನ್ನು ಪಡೆಯುವುದಕ್ಕಾಗಿ ಹಾಗೂ ಗುಲಾಮಗಿರಿಗಾಗಿ ಮತ್ತು ಹತ್ತು ಹಲವು ಕಾರಣಗಳಿಗಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಜೊತೆಗೆ ಮಹಿಳೆಯರನ್ನು ಮತ್ತು ಮಕ್ಕಳನ್ನು ವಸ್ತುಗಳು ಅಥವಾ ಪ್ರಾಣಿಗಳ ರೀತಿಯಲ್ಲಿ ವಿದೇಶಗಳಿಗೆ ಮಾರಾಟ ಮಾಡುವ ದಂಧೆಯೂ ಅವರ ಶೋಷಣೆಗೆ ಕಾರಣವಾಗಿದೆ.

    ಈ ಪರಿಸ್ಥಿತಿ ಇರಬಾರದು. ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಒಂದು ದಿನಕ್ಕೆ ಸೀಮಿತವಾಗಬಾರದು. ಜನರು ನಿರಂತರವಾಗಿ ಜಾಗೃತರಾಗಿರಬೇಕು. ಹಾಗೆಯೇ ಈ ಶೋಷಣೆ ನಿಲ್ಲಬೇಕು. ಈ ನಿಟ್ಟಿನಲ್ಲಿ ಎಲ್ಲರ ಕಣ್ಣು ಮತ್ತು ಹೃದಯಗಳು ತೆರೆಯಲಿ ಎಂದು ಅವರು ಆಶಿಸಿದರು.

    ಸ್ವಾಗತಿಸಿದ ಶಿಶು ಅಭಿವೃದ್ಧಿ ಅಧಿಕಾರಿ ರಂಗನಾಥ್ ಮಾತನಾಡಿದರು. ಉಪವಿಭಾಗಾಧಿಕಾರಿಗಳಾದ ಸುಂದರೇಶ್, ಆರಕ್ಷಕ ಹೆಚ್ಚುವರಿ ಅಧೀಕ್ಷಕ ಸಿ.ಟಿ.ಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ವೈ.ಆಲವತ್ತಿ, ಜಿಲ್ಲಾ ನಿರೂಪಣಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಂತೋಷ್, ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.

    ಇದೇ ಸಂದರ್ಭದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಜಾಥಾ ನಡೆಯಿತು.

    Sincere efforts needed to prevent human trafficking

  • ಅಯ್ಯನಕೆರೆ ಅಭಿವೃದ್ಧಿಗೆ ಐದು ಕೋಟಿ ಮಂಜೂರು

    ಅಯ್ಯನಕೆರೆ ಅಭಿವೃದ್ಧಿಗೆ ಐದು ಕೋಟಿ ಮಂಜೂರು

    ಚಿಕ್ಕಮಗಳೂರು: ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಅಯ್ಯನಕೆರೆಯಲ್ಲಿ ತೂಬು ಮತ್ತು ಕೆರೆ ದುರಸ್ತಿಗೆ ಐದು ಕೋಟಿ ಹಣವನ್ನು ಒದಗಿಸಲಾಗಿದ್ದು, ಮಳೆಗಾಲ ಮುಗಿದ ಕೂಡಲೇ ಏರಿಯನ್ನು ಸೌಂದರ್ಯ ವರ್ಧಿಸಿ ಪ್ರವಾಸಿಗರನ್ನು ಹೆಚ್ಚು ಆಕರ್ಷಣೀಯಗೊಳಿಸಲಾಗುವುದು ಎಂದು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

    ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪವಿರುವ ಅಯ್ಯನಕೆರೆಗೆ ಇಂದು ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯಿಂದ ಇಂದು ನಗರದ ಅಯ್ಯನಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಈ ಕೆರೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಹೆಕ್ಷ್ಟೇರ್‌ಗಳಷ್ಟು ಅಚ್ಚುಕಟ್ಟುದಾರರಿದ್ದಾರೆ, ಅದರ ಜೊತೆ ಅಧಿಕೃತವಾಗಿ ಇನ್ನೂ ಐದು ಸಾವಿರ ಅಚ್ಚುಕಟ್ಟುದಾರರಿದ್ದಾರೆ. ಈ ಕೆರೆಯನ್ನು ಇಲಾಖೆ ವತಿಯಿಂದ ಸ್ವಚ್ಚಗೊಳಿಸಿ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಇಲ್ಲಿ ಬಲ್ಲಾಳೇಶ್ವರ ದೇವಸ್ಥಾನವಿದ್ದು ದೇವರ ಅನುಗ್ರಹ ಹಾಗೂ ಎಲ್ಲ ಯತಿವರ್ಯರ ಆಶೀರ್ವಾದಿಂದ ಇಲ್ಲಿನ ಎಲ್ಲಾ ಅಚ್ಚುಕಟ್ಟುದಾರರ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.

    ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೆಗೌಡ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಗುರುಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಸರ್ವರ ಸಮ್ಮುಖದಲ್ಲಿ ಇಂದು ಬಾಗಿನ ಅರ್ಪಣೆಯಾಗಿದೆ. ನಮ್ಮ ಹಿರಿಯರು ಅಂದು ಸ್ಥಾಪನೆ ಮಾಡಿರುವ ಕೆರೆಯಿದು. ಈ ಕೆರೆಗೆ ಪ್ರಕೃತಿಯೇ ಹೆಚ್ಚು ಸಹಾಯ ಮಾಡಿದೆ. ಇಂತಹ ನೈಸರ್ಗಿಕ ಮೂಲ ಹೊಂದಿದ ಕೆರೆ ಇದಾಗಿದೆ. ರೈತರು ಈ ಕೆರೆಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಈ ನೀರನ್ನು ಸರಿಯಾಗಿ ಬಳಕೆ ಮಾಡಿದರೆ ಐದು ಹದ ಮಾಡಬಹುದು.

    ಆದರೆ ಇದು ಎರಡೇ ಹದವಾಗಿದೆ. ಆದ್ದರಿಂದ ಇದು ನಮ್ಮ ಜೀವಾಳ ಮುಂದಿನ ದಿನಗಳಲ್ಲಿ ಅಚ್ಚುಕಟ್ಟುದಾರರು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ನೀರಾವರಿ ಇಲಾಖೆಯವರು ಚಾನಲ್ ಹಾಗೂ ಕೆರೆಯನ್ನು ಪ್ರತಿ ತಿಂಗಳಿಗೊಮ್ಮೆ ಸ್ವಚ್ಚತೆ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ ಸುತ್ತಮುತ್ತಲ ಜನರಿಗೆ ಈ ಕೆರೆಯಿಂದ ಒದಗಿಸಲಾಗಿದ್ದು, ನೀರಾವರಿಗೆ ಇದನ್ನು ಬಳಸಿಕೊಳ್ಳುವುದರಿಂದ ಈ ಕೆರೆಯನ್ನು ಅಭಿವೃದ್ದಿಪಡಿಸುವಂತೆ ಶಾಸಕರನ್ನು ಕೋರಿದರು.

    ಬಸವ ತತ್ವ ಪೀಠದ ಪೀಠಾಧ್ಯಕ್ಷರಾದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ನಿರ್ವಾಣ ಸ್ವಾಮಿಗಳ ಆಶೀರ್ವಾದದಿಂದ ನಿರ್ಮಾಣವಾಗಿರುವ ಅಯ್ಯನಕೆರೆ ಈ ಕೆರೆಕಟ್ಟೆ ಒಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕಿಟ್ಟು ಪವಾಡ ಸದೃಶರಾಗಿ ಬದುಕಿ ಈ ಕೆರೆಯನ್ನು ಉಳಿಸಿರುವುದರಿಂದ ಈ ಭಾಗದ ಸುತ್ತಮುತ್ತಲಿನ ಎಲ್ಲಾ ಜನರ ಜೀವನಾಡಿಯಾಗಿದೆ. ಕೆರೆಯನ್ನು ಆಶೀರ್ವದಿಸಿದ ಕಾರಣಕ್ಕೆ ಇದಕ್ಕೆ ಅಯ್ಯನಕೆರೆ ಎಂಬ ಹೆಸರು ಬಂದಿದೆ ಎಂದರು.

    ಎಲ್ಲಿ ನೀರಿನ ಸೌಕರ್ಯ ಇದೆಯೋ ಅಲ್ಲಿ ವಿಶೇಷವಾಗಿ ನಾಗರಿಕತೆಗಳು ಬೆಳೆದಿವೆ. ಆ ಹಿನ್ನೆಲೆಯಲ್ಲಿ ಸಖರಾಯಪಟ್ಟಣ ಸುತ್ತಮುತ್ತ ಒಂದಿಷ್ಟು ಸಮೃದ್ಧಿಯಾಗಿರುವ ಜನರು ಇದ್ದಾರೆ ಎಂಬುದಕ್ಕೆ ಇಂತಹ ಅಯ್ಯನಕೆರೆಯೇ ಕಾರಣ. ಕೆರೆಯನ್ನು ಅವಲಂಬಿಸಿ ಸಾವಿರಾರು ಜೀವರಾಶಿಗಳು ವಾಸವಾಗಿರುವುದು ನಾವು ಗಮನಿಸಬಹುದು ಇದರಿಂದ ಜೀವ ವೈವಿಧ್ಯತೆ, ಪ್ರಾಕೃತಿಕ ಸಂಪನ್ಮೂಲ ಹೆಚ್ಚಳವಾಗಿರುವುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೆರೆ ತುಂಬಿದ್ದು ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಹದಿನೈದು ದಿನ ಮುಂಚಿತವಾಗಿಯೇ ಕೆರೆ ತುಂಬಿದೆ. ಈ ಭಾಗದ ಜನರಿಗೆ ಭವಿಷ್ಯದ ಭರವಸೆ ನೀಡಿರುವ ಇಂತಹ ಕೆರೆಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದರು.

    ಮುಖಂಡ ಮಹಡಿಮನೆಸತೀಶ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಹುಲಿಕೆರೆ ಶ್ರೀ ವೀರಪ್ಪ ಲಿಂಗ ಸ್ವಾಮೀಜಿ, ಶ್ರೀ ಕಡೂರಿನ ಜ್ಞಾನಪ್ರಭ ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಶಿವಯೋಗಿ ಶಂಕರ ಸ್ವಾಮೀಜಿ, ಗ್ರಾ.ಪಂ. ಅಧ್ಯಕ್ಷರಾದ ರಾಜಮ್ಮ, ಮಂಗಳ ಹೆಚ್.ಡಿ.ತಮ್ಮಯ್ಯ, ಮುಖಂಡರುಗಳಾದ ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್, ಹೆಚ್.ಪಿ.ಮಂಜೇಗೌಡ, ಪ್ರವೀಣ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

    Five crores sanctioned for the development of Ayyanakere

  • ಪರಿಶಿಷ್ಟರ ಕಲ್ಯಾಣ ಅನುದಾನ ವರ್ಗಾವಣೆ ಮಾಡುವ ನಿರ್ಧಾರ ಕೈ ಬಿಡುವಂತೆ ಜಿಲ್ಲಾ ಬಿಜೆಪಿ ಆಗ್ರಹ

    ಪರಿಶಿಷ್ಟರ ಕಲ್ಯಾಣ ಅನುದಾನ ವರ್ಗಾವಣೆ ಮಾಡುವ ನಿರ್ಧಾರ ಕೈ ಬಿಡುವಂತೆ ಜಿಲ್ಲಾ ಬಿಜೆಪಿ ಆಗ್ರಹ

    ಚಿಕ್ಕಮಗಳೂರು: ಪರಿಶಿಷ್ಟರ ಕಲ್ಯಾಣಕ್ಕಾಗಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿ ಮೀಸಲಿಟ್ಟಿದ್ದ ಅನುದಾನದಲ್ಲಿ ೧೧,೮೯೬.೮೪ ಕೋಟಿ ರೂ.ಗಳನ್ನು ಪಂಚ ಗ್ಯಾರಂಟಿಗೆ ವರ್ಗಾವಣೆ ಮಾಡಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಕೈಬಿಡಬೇಕು ಎಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದ್ದಾರೆ.

    ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿಯ ಕಲ್ಯಾಣಕ್ಕಾಗಿ ಈ ಸಾಲಿನಲ್ಲಿ ತೆಗೆದಿರಿಸಿದ್ದ ೪೨,೦೧೭.೫೧ ಕೋಟಿ ರೂ.ಗಳ ಅನುದಾನದಲ್ಲಿ ೧೧,೮೯೬.೮೪ ಕೋಟಿ ರೂ.ಗಳನ್ನು ಪಂಚ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡಲು ಸರ್ಕಾರ ತೆಗೆದುಕೊಂಡಿರುವ ಕ್ರಮ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರಿಗೆ ಮಾಡುವ ಅನ್ಯಾಯವಾಗಿದೆ. ಸರ್ಕಾರದ ಈ ಕ್ರಮವನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಅವರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ೨೦೨೩ ನೆಯ ಸಾಲಿನಲ್ಲಿ ೧೧,೧೧೪ ಕೋಟಿ ರೂ.ಗಳನ್ನು ಮತ್ತು ೨೦೨೪ ನೆಯ ಸಾಲಿನಲ್ಲಿ ೧೪,೨೮೨ ಕೋಟಿ ರೂ.ಗಳನ್ನು ಪಂಚ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ಮೂಲಕ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಅದೇ ಚಾಳಿಯನ್ನು ಈ ಬಾರಿಯೂ ಸರ್ಕಾರ ೧೧,೮೯೬ ಕೋಟಿ ರೂ.ಗಳನ್ನು ಪಂಚ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ಅಂತಿಮ ಆದೇಶ ಹೊರಡಿಸಲು ಸಿದ್ಧತೆ ನಡೆಸಿರುವುದು ಅವೈಜ್ಞಾನಿಕವಾಗಿದೆ ಎಂದು ಅವರು ಹೇಳಿದ್ದಾರೆ.

    ಪರಿಶಿಷ್ಟರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸರ್ವತೋಮುಖ ವಿಕಾಸಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ಪಂಚ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವುದರೊಂದಿಗೆ ಗ್ಯಾರಂಟಿ ಅನುಷ್ಠಾನದಲ್ಲೂ ಸರ್ಕಾರ ಜಾತಿಯತೆ ಮಾಡುತ್ತಿದೆ ಎಂದು ಟೀಕಿಸಿರುವ ಅವರು, ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳಿಗೆ ಪರಿಶಿಷ್ಟರಿಗೆ ಪ್ರತ್ಯೇಕ ಅನುದಾನ ಮೀಸಲಿಡುತ್ತೇವೆ ಎಂದು ಹೇಳಿರಲಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿಗಳ ಅನುಷ್ಠಾನದಲ್ಲೂ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ವಾಲ್ಮಿಕಿ ಸೇರಿದಂತೆ ವಿವಿಧ ಜನಾಂಗಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಪಂಚ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡದೆ ಕೇವಲ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಮಾತ್ರ ವರ್ಗಾವಣೆ ಮಾಡುತ್ತಿರುವುದನ್ನು ಗಮನಿಸಿದಾಗ ತಾರತಮ್ಯದ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದ ನಾಯಕರು ಅಸಹಾಯಕರಾಗಿದ್ದಾರೆ ಎಂಬುದರ ಸಂಕೇತವಾಗಿದೆ ಎಂದು ಹೇಳಿದ್ದಾರೆ.

    ಪರಿಶಿಷ್ಟರ ಮೂಗಿಗೆ ತುಪ್ಪ ಸವರಿ ವೋಟಿನ ರಾಜಕಾರಣ ಮಾಡುತ್ತಿರುವುದರ ಹಿಂದಿನ ರಾಜಕಾರಣವನ್ನು ಪರಿಶಿಷ್ಟರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿರುವ ಅವರು, ಪರಿಶಿಷ್ಟರ ಪರ ಕಾಳಜಿ ಇದ್ದರೆ ಆ ಪಕ್ಷದಲ್ಲಿರುವ ಪರಿಶಿಷ್ಟ ಜಾತಿಯ ಮುಖಂಡರು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ವಾಪಸ್ ಪಡೆಯಲು ಒತ್ತಡ ಹಾಕಬೇಕು. ಇಲ್ಲವೇ ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ತೊರೆಯಬೇಕು ಎಂದು ಹೇಳಿದ್ದಾರೆ.

    ಪರಿಶಿಷ್ಟರ ಕಲ್ಯಾಣ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ಪಂಚ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಡಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಜಿಲ್ಲಾ ಬಿಜೆಪಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

    District BJP demands to drop decision to transfer welfare grants to Scheduled Castes

  • `ಮಹಿಳೆಯರು-ಮಕ್ಕಳ ಶೋಷಣೆ ಕಂಡಲ್ಲಿ ಸಹಾಯವಾಣಿಗೆ ಕರೆ ಮಾಡಿ’

    `ಮಹಿಳೆಯರು-ಮಕ್ಕಳ ಶೋಷಣೆ ಕಂಡಲ್ಲಿ ಸಹಾಯವಾಣಿಗೆ ಕರೆ ಮಾಡಿ’

    ಚಿಕ್ಕಮಗಳೂರು:  ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಹಾಗೂ ಮಕ್ಕಳನ್ನು ದುಡಿಮೆಗೆ ಹಚ್ಚುವ ಕಾನೂನು ಬಾಹಿರ ಕೃತ್ಯಗಳು ಕಂಡು ಬಂದ ಸಂದರ್ಭದಲ್ಲಿ ಕಾನೂನು ನೆರವಿಗಾಗಿ ಕಾನೂನು ಸೇವೆಗಳ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ತಿಳಿಸಿದರು.

    ಮಾನವ ಕಳ್ಳ ಸಾಗಣೆ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಾರ್ಯಾಗಾರ ಹಾಗೂ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಮಾನವ ಕಳ್ಳ ಸಾಗಣೆ, ಮಕ್ಕಳ ಹಕ್ಕುಗಳು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಬಗ್ಗೆ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

    ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಮಾತನಾಡಿ ಮಾಹಿತಿ ನೀಡಿದರಲ್ಲದೆ, ಅಗತ್ಯ ಸಂದರ್ಭಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.

    ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮಾಧಿಕಾರಿ ಸಂತೋಷ್ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸಖಿ ಒನ್ ಸ್ಟಾಪ್ ಸೆಂಟರ್, ಬಾಲಕರ ಹಾಗೂ ಬಾಲಕಿಯರ ಪ್ರತ್ಯೇಕ ಬಾಲ ಮಂದಿರಗಳು, ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ರಕ್ಷಣೆ ಕಲ್ಪಿಸಲಾಗುವುದು. ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಜುಲೈ ೩೦ ರಂದು ನಗರದಲ್ಲಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ವಿರೂಪಾಕ್ಷ ಮಾತನಾಡಿ, ಮಕ್ಕಳು ಉತ್ತಮವಾಗಿ ವ್ಯಾಸಂಗವನ್ನು ಮಾಡುವ ಮೂಲಕ ವಿದ್ಯಾವಂತರಾಗಬೇಕೆಂದು ತಿಳಿಹೇಳಿದರು.

    “If you see exploitation of women and children call the helpline”