Category: ಚಿಕ್ಕಮಗಳೂರು

  • ಯಾವ ಸಮುದಾಯದ ಜಾತಿಗಳಿಗೆ ಅಪಮಾನ ಮಾಡುವ ಉದ್ದೇಶವಿಲ್ಲ

    ಯಾವ ಸಮುದಾಯದ ಜಾತಿಗಳಿಗೆ ಅಪಮಾನ ಮಾಡುವ ಉದ್ದೇಶವಿಲ್ಲ

    ಚಿಕ್ಕಮಗಳೂರು: ದಲಿತ ಮತ್ತು ಹಿಂದುಳಿದ ಮಠಾಧೀಶರು ನನ್ನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಯಾವ ಸಮುದಾಯ, ಜಾತಿಗಳಿಗೆ ಅಪಮಾನ ಮಾಡುವ ಉದ್ದೇಶವಾಗಲೀ, ನಿಂದಿಸುವ ರೀತಿಯಲ್ಲಾಗಲೀ ಮಾತನಾಡಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಬೇಕು ಎಂಬ ನಿಟ್ಟಿನಲ್ಲಿ ಮಾತನಾಡಿದ್ದೇವೆ. ಆಯಾ ಧರ್ಮ, ಜಾತಿಗಳಿಗೆ ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಇರುತ್ತದೆ. ಇದಕ್ಕೆ ಅಪವಾದದಂತೆ ಮಾತನಾಡಿಲ್ಲ ಎಂದು ಹೇಳಿದರು.

    ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳು ಒಟ್ಟಾಗಬೇಕು ಎಂಬುದು ನಮ್ಮ ಆಶಯ. ದಾವಣಗೆರೆಯಲ್ಲಿ ನಡೆದ ಶೃಂಗಸಭೆಯಲ್ಲಿಯೂ ಇದನ್ನೇ ಪ್ರತಿಪಾದಿಸಿದ್ದೇವೆ. ಹಿಂದುಳಿದ, ದಲಿತ ಮಠಾಧೀಶರು

    ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿರುದ್ಧ ಆರೋಪ ಮಾಡಿರುವುದು ಗಮನಕ್ಕೆ ಬಂದಿದೆ. ತಾವು ಈ ರೀತಿಯಲ್ಲಿ ನಡೆದುಕೊಂಡಿಲ್ಲ. ಯಾವ ಜಾತಿ, ಧರ್ಮ, ಮಠಗಳಿಗೆ ಚ್ಯುತಿ ಬರುವಂತೆ ಮಾತನಾಡಿಲ್ಲ, ದಯವಿಟ್ಟು ಅಪಾರ್ಥ ಕಲ್ಪಿಸಬೇಡಿ ಎಂದು ಶ್ರೀಗಳು ಹೇಳಿದ್ದಾರೆ.

    ಅವರವರ ಜಾತಿಯ ಬಗ್ಗೆ ಮಾತನಾಡುವುದು ಸರಿಯಲ್ಲ. ನಮ್ಮ, ಸಮಾಜ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಬಗ್ಗೆ ಮಾತನಾಡಿದ್ದೇವೆ. ಕೆಲವು ಶ್ರೀಗಳು ತಪ್ಪಾಗಿ ತಿಳಿದುಕೊಂಡಿದ್ದಾರೆ. ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ನಮೂದು ಮಾಡುವಂತೆ ಹೇಳಿದ್ದೇನೆ. ಮಾಧ್ಯಮದ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ. ಯಾವ ಸಮುದಾಯ, ಜಾತಿಗೆ ನೋವು ಮಾಡುವ ಉದ್ದೇಶ ಇಲ್ಲ ಎಂದು ಶ್ರೀಗಳು ಸ್ಪಷ್ಟನೆ ನೀಡಿದರು.

    ಜಾತಿ ಮಠಗಳಿಂದ ಸಮಾಜ ಕಲುಷಿತಗೊಂಡಿದೆ ಎಂದು ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಂಭಾಪುರಿ ಶ್ರೀಗಳು ಹೇಳಿದ್ದರು. ಇದಕ್ಕೆ ಹಿಂದುಳಿದ ಮತ್ತು ದಲಿತ ಮಠಾಧೀಶರು ಒಟ್ಟಾಗಿ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

    There is no intention to insult any caste of any community.

  • ಮಾಜಿ ಸೈನಿಕ ಮಲ್ಲಿಕಾರ್ಜುನ್ ಸ್ವಾಮಿಗೆ ‘ಭಾರತ ಸೇವಾರತ್ನ’ ಪ್ರಶಸ್ತಿ

    ಮಾಜಿ ಸೈನಿಕ ಮಲ್ಲಿಕಾರ್ಜುನ್ ಸ್ವಾಮಿಗೆ ‘ಭಾರತ ಸೇವಾರತ್ನ’ ಪ್ರಶಸ್ತಿ

    ಚಿಕ್ಕಮಗಳೂರು: ಮಾಜಿ ಸೈನಿಕ ಅಧಿಕಾರಿ ಗೌರವಾನ್ವಿತ ಸುಬೇದಾರ್ ಮೇಜರ್ ಹಾಗೂ ಬೆಂಗಳೂರಿನ ವಸತಿ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ್ ಸ್ವಾಮಿ ಅವರಿಗೆ ಕರ್ನಾಟಕ ಕಲಾ ವೇದಿಕೆ ‘ಭಾರತ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

    ಜು.೨೬ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಕಲಾವೇದಿಕೆಯ ೫೦ನೇ ಸುವರ್ಣ ಮಹೋತ್ಸವ ಮತ್ತು ೧೭ ಸಾಂಸ್ಕೃತಿಕ ಸಿಂಚನ ವೇದಿಕೆ ಏರ್ಪಡಿಸಿದ್ದ ಡಾ. ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಉದ್ಘಾಟಿಸಿದ ನಿವೃತ್ತ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಮಾತನಾಡಿ ಸನ್ಮಾನಿಸಿ ಗೌರವಿಸಿದರು.

    ಕಲಾ ವೇದಿಕೆ ಅಧ್ಯಕ್ಷ ಕಿಶೋರ್ ಕುಮಾರ್ ಅವರು ಪ್ರಶಸ್ತಿಯನ್ನು ನೀಡಿದ್ದು, ಭಾರತ ದೇಶಾದ್ಯಂತ ಮಲ್ಲಿಕಾರ್ಜುನ್ ಸ್ವಾಮಿಯವರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರನ್ನು ಭಾರತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.

    ಮಲ್ಲಿಕಾರ್ಜುನ್ ಸ್ವಾಮಿಯವರು ಜಿಲ್ಲೆಯ ಅಂಬಳೆ ರಸ್ತೆಯಲ್ಲಿರುವ ಲಕ್ಷ್ಮೀಪುರ ಗ್ರಾಮದವರಾಗಿದ್ದು, ವೇದಮೂರ್ತಿ ಬಸವಣ್ಣಯ್ಯ ಕುಟುಂಬಸ್ಥರಾದ ವೇದಮೂರ್ತಿ ಶಿವಕುಮಾರ್‌ಸ್ವಾಮಿ ಹಾಗೂ ಭಾಗೀರಥಮ್ಮ ಇವರ ಜೇಷ್ಠ ಪುತ್ರರಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಪತ್ರಕರ್ತ ಗಂಡಸಿ ಸದಾನಂದಸ್ವಾಮಿ, ಡಾ. ಟಿ. ಶಿವಕುಮಾರ್, ಶುಭಾಧನಂಜಯ್, ನೃತ್ಯ ನಿರ್ದೇಶಕ ಮುರುಳಿ ಮಾಸ್ಟರ್, ಲಿಖಿತ್ ಮತ್ತಿತರರು ಭಾಗವಹಿಸಿದ್ದರು.

    Former soldier Mallikarjuna Swamy awarded ‘Bharat Sevaratna’

  • ಶ್ರಾವಣಮಾಸದ ಪ್ರವಚನ ಮಾಲಿಕೆಗೆ ಚಾಲನೆ

    ಶ್ರಾವಣಮಾಸದ ಪ್ರವಚನ ಮಾಲಿಕೆಗೆ ಚಾಲನೆ

    ಚಿಕ್ಕಮಗಳೂರು:  ಸಾಂಸ್ಕೃತಿ, ಸಾಮಾಜಿಕ, ಧಾರ್ಮಿಕ ಬದಲಾವಣೆಗೆ ಶ್ರಾವಣ ಪ್ರೇರಕ-ಸಹಕಾರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

    ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗದೊಂದಿಗೆ ಜುಲೈ೨೬ ರಿಂದ ಆಗಸ್ಟ್೨೪ರ ವರೆಗೆ ಆಯೋಜಿಸಿರುವ ‘ಅಂಗಳದೆಡೆಗೆ ಮಂಗಳ ನುಡಿ-ನಡಿಗೆ’ ‘ಶ್ರಾವಣಮಾಸದ ಪ್ರವಚನ ಮಾಲಿಕೆ’ಯನ್ನು ಕಲ್ಯಾಣನಗರದ ಶಾಸಕರ ಮನೆಯಂಗಳದಲ್ಲಿ ನಿನ್ನೆಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

    ಯುವಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆಯ ಬಗ್ಗೆ ಅರಿವು ಮೂಡಿಸಲು ಶ್ರಾವಣಮಾಸ ಅತ್ಯಂತ ಸೂಕ್ತ. ಶ್ರಾವಣವೇ ಅಪ್ಯಾಯಮಾನ. ನಿಸರ್ಗ ಸಂಭ್ರಮಿಸುವ ಶ್ರಾವಣದಲ್ಲಿ ಘಂಟಾನಾದ, ಪುರಾಣ ಪ್ರವಚನ, ಶುಭ ನುಡಿಗಳ ಸಿಂಚನ ಪ್ರಮುಖವಾಗಿರುತ್ತದೆ. ಶ್ರಾವಣ ಶುಭ ಕಾರ್‍ಯಗಳಿಗೆ ಪ್ರಶಸ್ತವಂಬ ಮಾತಿದೆ. ಹಬ್ಬಗಳ ಮೆರವಣಿಗೆ ಶ್ರಾವಣ ಎಂದರು.

    ನಾವೆಲ್ಲರೂ ನೆಮ್ಮದಿಯ ಶಾಂತಿಯ ವಾತಾವರಣದಲ್ಲಿರಲು ದೇಶದ ಸುಭೀಕ್ಷೆ ಪ್ರಮುಖ. ನಂತರ ಧಾರ್ಮಿಕ ಆಚರಣೆಗಳು ನಮ್ಮೊಂದಿಗೆ ಬೆಸೆದುಕೊಂಡಿದೆ. ಭಾರತ ಹಲವು ಧರ್ಮ, ಸಂಸ್ಕೃತಿ, ಸಂಸ್ಕಾರ ವಿಚಾರಗಳನ್ನೊಳಗೊಂಡ ಬಹುತ್ವದ ವಿಶೇಷತೆ ಹೊಂದಿದೆ. ಸಾಂಸ್ಕೃತಿಕ ಚಿಂತಕ ಚಟ್ನಳ್ಳಿಮಹೇಶಣ್ಣ ತಂಡ ಶ್ರಾವಣಮಾಸದಲ್ಲಿ ಒಳ್ಳೆಯ ಮಾತುಗಳನ್ನು ಮನೆ-ಮನಕ್ಕೆ ಮುಟ್ಟಿಸುವ ಕೆಲಸ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಜಾತಿ, ಮತ, ಪಕ್ಷ ಯಾವುದೇ ಬೇಧವಿಲ್ಲದೆ ಸಹೃದಯರ ಮನೆಯಂಗಳದಲ್ಲಿ ಚಿಕ್ಕ-ಚೊಕ್ಕ ಕಾರ್‍ಯಕ್ರಮವನ್ನು ಶ್ರಾವಣಮಾಸ ಪರ್ಯಂತ ಹಮ್ಮಿಕೊಂಡಿರುವುದು ಮಾದರಿಯ ಸಂಗತಿ ಎಂದರು.

    ‘ಶ್ರಾವಣ ಶ್ರವಣ’ ಕುರಿತಂತೆ ಪ್ರವಚನ ನೀಡಿದ ಸಾಹಿತಿ-ವಾಗ್ಮಿ ಚಟ್ನಳ್ಳಿಮಹೇಶ್ ಮಾತಿಗೆ ಸಮಾಜ ಪರಿವರ್ತಿಸುವ ಅಪಾರ ಶಕ್ತಿ ಇದೆ. ನಮ್ಮ ಹಿರಿಯರ ಅನುಭವಗಳನ್ನು ಮೆಲುಕು ಹಾಕಿದರೆ ಅದೊಂದು ದೊಡ್ಡ ಶಬ್ದಕೋಶವಾಗುತ್ತದೆ. ಇಂದು ಆಧುಕತೆಯ ಭರಾಟೆಯಲ್ಲಿ ಮನಸ್ಸುಗಳು ದೂರವಾಗುತ್ತಿವೆ. ಮನಸ್ಸುಗಳನ್ನು ಹತ್ತಿರಕ್ಕೆ ತರುವ, ಮನಸ್ಸನ್ನು ಕಟ್ಟುವ ಕಾರ್‍ಯ ಇಂದಿನ ತುರ್ತು ಅಗತ್ಯ. ನಿಸರ್ಗದಲ್ಲೆ ಸಾಮರಸ್ಯದ ಸಂದೇಶವಿದೆ. ಅದನ್ನು ಮೆಲುಕುಹಾಕುವ ಪುಟ್ಟಪ್ರಯತ್ನ ಈ ಅಭಿಯಾನ ಎಂದರು.

    ಆತ್ಮವಿಶ್ವಾಸ ಸಾಧನೆಗೆ ಪೂರಕ. ಯುವಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸುಂದರ ಸಮಾಜ ನಮ್ಮದಾಗುತ್ತದೆ. ಕಾಲ ಕೆಟ್ಟಿದೆ ಎಂಬ ಸಾಮಾನ್ಯ ಮಾತು ಸರಿಯಲ್ಲ. ಡಿವಿಜಿ ಹೇಳಿರುವಂತೆ ‘ಅದೇ ಸೂರ್‍ಯ, ಅದೇ ಚಂದ್ರ, ಅದೇ ಭೂಮಿ…’ ಕೆಟ್ಟಿರುವುದು ನಾವು. ಯುವಶಕ್ತಿಗೆ ಒಳ್ಳೆಯ ದಿಕ್ಕು-ಆಲೋಚನೆ ನೀಡುವ, ಒಳಿತನ್ನು ಬೆಂಬಲಿಸುವ ಸ್ಫೂರ್ತಿಯ ಸೆಲೆಯಾಗಿ ಶ್ರಾವಣದ ಕಾರ್‍ಯಕ್ರಮ ನಡೆಯುತ್ತಿದೆ. ಮಹಾತ್ಮಾಗಾಂಧಿ ಅವರು ಯುವಜನರು ದೇಶದ ಸಾರಸತ್ವ ಎಂದಿದ್ದಾರೆ. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಸದ್ಭಳಕೆ ಮಾತುಗಳನ್ನು ಆಡಿದ್ದಾರೆಂದ ಚಟ್ನಳ್ಳಿಮಹೇಶ್, ನರ ಹರನಾಗಲು, ಮಾನವ ಮಹಾದೇವನಾಗಲು, ಮನೆಗಳು ಮಹಾಮನೆಗಳಾಗಲು ಸತ್ಸಂಗ ಸಹಕಾರಿ ಎಂದರು.

    ಬಸವತತ್ತ್ವ ಪೀಠದ ಅಧ್ಯಕ್ಷ ಡಾ.ಶ್ರೀಬಸವ ಮರುಳಸಿದ್ಧಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಹಜವಾದ ವಾತಾವರಣದಲ್ಲಿ ಮಕ್ಕಳು ನೋಡಿ, ಆಡಿ, ತುಂಬು ಕುಟುಂಬದಲ್ಲಿ ಬೆಳೆಯಬೇಕು. ಸಹಜವಾಗಿರುವುದನ್ನು ಬಿಟ್ಟು ಕೃತಕತೆಯತ್ತ ಮುಖ ಮಾಡಿರುವುದು ದುರ್ದೈವದ ಸಂಗತಿ. ಜನರ ಒಡನಾಟ ಕಡಿಮೆ ಮಾಡಿ ಆಹಾರ, ಮಾತು, ಬಟ್ಟೆ ಬದುಕಿನಲ್ಲಿ ಬೇರೆಯದನ್ನೆ ಅನುಕರಿಸುವುದರಿಂದ ಮೌಲ್ಯಗಳು ಮರೆಯಾಗುತ್ತಿದೆ ಎಂದರು.

    ನಮ್ಮ ಪರಂಪರೆಯಲ್ಲಿ ಬಂದಿರುವ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಶ್ರಾವಣಮಾಸದಲ್ಲಿ ಶ್ರವಣ ಮುಖ್ಯ. ರೈತಾಪಿ ವರ್ಗ ದೇಶದಲ್ಲಿ ಬಹುಸಂಖ್ಯಾತರಾಗಿದ್ದು ಅವರು ಆಷಾಢಮಾಸದಲ್ಲಿ ಬಿಡುವಿಲ್ಲದ ಭೂಮಿಯ ಕೆಲಸದಲ್ಲಿ ತೊಡಗಿಸಿಕೊಂಡ ಕಾಯಕ ಜೀವಿಗಳು. ಶ್ರಾವಣದಲ್ಲಿ ರೈತರಿಗೆ ಸ್ವಲ್ಪ ಬಿಡುವಿದ್ದು ಗುರು, ಲಿಂಗ, ಜಂಗಮ ಸೇವೆಯ ಜೊತೆಗೆ ಸಾಹಿತ್ಯದ ಅಭಿರುಚಿ-ಅಭಿವ್ಯಕ್ತಿಗೆ ಸೂಕ್ತ ಸಂದರ್ಭ. ಬದುಕಿನ ಏರಿಳಿತಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಶ್ರಾವಣ ಕಾರ್‍ಯಕ್ರಮ ತಂದುಕೊಡಲಿ ಎಂದ ಸ್ವಾಮೀಜಿ, ಆಯೋಜಕ ತಂಡವನ್ನು ಅಭಿನಂದಿಸಿದರು.
    ಬೇಲೂರಿನ ಚಂದನ್ ಶ್ರಾವಣಗೀತೆಗಳನ್ನು ಪ್ರಸ್ತುತ ಪಡಿಸಿದರು. ಪದೋನ್ನತಿ ಪಡೆದ ಪೌರಾಯುಕ್ತ ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಎ.ಎಸ್.ಎಸ್.ಆರಾಧ್ಯ ಮತ್ತು ಸುಮಿತ್ರಾಶಾಸ್ತ್ರಿ ಅಭಿಪ್ರಾಯ ಹಂಚಿಕೊಂಡರು.

    ಮಾಧ್ಯಮಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನಭಾರ್ಗವಪುರಿ ಪ್ರಾಸ್ತಾವಿಸಿ, ಶಿಕ್ಷಕರಮೇಶ್ವರಪ್ಪ ನಿರೂಪಿಸಿದರು. ಪ್ರಾಯೋಜಕ ದೇವಿರಪ್ಪ ಅವರನ್ನು ಗೌರವಿಸಲಾಯಿತು.

    Shravan month discourse series launched

  • ಯುವಕ ಶಮಂತ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ

    ಯುವಕ ಶಮಂತ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ

    ಕಳಸ: ಕೊಳಮಗೆಯಲ್ಲಿ ಭದ್ರಾ ನದಿಗೆ ಪಿಕ್‌ಅಪ್ ವಾಹನ ಬಿದ್ದ ನಂತರ ಕಣ್ಮರೆ ಆಗಿರುವ ಯುವಕ ಶಮಂತ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭಾನುವಾರ ಭೇಟಿ ನೀಡಿದರು. ಶಮಂತ್ ಮೃತಪಟ್ಟಿರಬಹುದು ಎಂಬ ದುಃಖದಿಂದ ಅವರ ತಾಯಿ ರವಿಕಲಾ ಅವರೂ ಅದೇ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

    ಗಣಪತಿಕಟ್ಟೆ ಪ್ರದೇಶದ ಅವರ ಮನೆಗೆ ಭೇಟಿ ನೀಡಿದ್ದ ನಯನಾ ಮೋಟಮ್ಮ ಶಮಂತ ಅವರ ತಂದೆ ರಮೇಶ್, ಅಣ್ಣ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಮಂತ ಅವರ ಪತ್ತೆಗೆ ಮೂರು ದಿನಗಳಿಂದ ಸತತ ಪ್ರಯತ್ನ ನಡೆದಿದೆ ಎಂದು ಅವರು ಕುಟುಂಬಸ್ಥರಿಗೆ ತಿಳಿಸಿದರು.

    ಶಮಂತನ ತಂದೆ ರಮೇಶ್, ನಮ್ಮ ಜಮೀನಿಗೆ ಹಕ್ಕುಪತ್ರ ಕೊಡಬೇಕು. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಅನೇಕ ವರ್ಷಗಳಿಂದ ಪ್ರಯತ್ನ ನಡೆದಿದೆ ಎಂದು ಶಾಸಕಿಯ ಬಳಿ ದೂರಿದರು. ಶಮಂತ ವಾಸವಿದ್ದ ಭೂಮಿ ಯಾವ ಬಗೆಯದು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ತಹಶೀಲ್ದಾರ್ ಕಾವ್ಯಾ ಅವರಿಗೆ ನಯನಾ ಸೂಚಿಸಿದರು. ಶಮಂತ ಅವರ ಪತ್ತೆ ಬಳಿಕ ಮನೆಯ ಇತರ ಸಮಸ್ಯೆಗೆ ಬಗ್ಗೆ ಗಮನಹರಿಸೋಣ ಎಂದು ಅವರು ಸಮಾಧಾನಪಡಿಸಿದರು.

    ಹಳುವಳ್ಳಿ ಮತ್ತು ಬಾಳೆಹೊಳೆ ಬಳಿ ಎನ್‌ಡಿಆರ್‌ಎಫ್ ವತಿಯಿಂದ ಶಮಂತನಿಗೆ ನಡೆಯುತ್ತಿರುವ ಹುಡುಕಾಟವನ್ನು ಅವರು ಪರಿಶೀಲಿಸಿದರು. ಕಾಂಗ್ರೆಸ್ ಮುಖಂಡರಾದ ಕೆ.ಆರ್.ಪ್ರಭಾಕರ್, ರಾಜೇಂದ್ರ ಹೆಬ್ಬಾರ್, ವಿಶ್ವನಾಥ್, ಶ್ರೇಣಿಕ, ರಫೀಕ್, ವೀರೇಂದ್ರ, ಮಹೇಶ್ ಭಾಗವಹಿಸಿದ್ದರು.

    ಕಳಸ ಆಸುಪಾಸಿನ ಭದ್ರಾ ನದಿಯಲ್ಲಿ ಅಗ್ನಿಶಾಮಕ ದಳ, ಬಾಳೆಹೊಳೆ ಮತ್ತು ಹಳುವಳ್ಳಿ ಆಸುಪಾಸಿನಲ್ಲಿ ಎನ್‌ಡಿಆರ್‌ಎಫ್ ತಂಡ ದಿನಿವಿಡೀ ಹುಡುಕಾಟ ನಡೆಸಿತು.

    MLA Nayana Motamma visits young man Shamanth’s house

  • ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಚಿಕ್ಕಮಗಳೂರು: ಸ್ವಚ್ಛತೆ ಮೂಲಕ ಬಹುದೊಡ್ಡ ಕಾಯಕ ಮಾಡುತ್ತಿರುವ ಪೌರ ಕಾರ್ಮಿಕರು ನಗರದ ನಾಗರೀಕರ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಜೊತೆಗೆ ತಮ್ಮ ಆರೋಗ್ಯಕ್ಕೆ ಆದ್ಯ ಗಮನ ಕೊಡಬೇಕು ಎಂದು ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಹೇಳಿದರು.

    ಅವರು ಇಂದು ನಗರಸಭೆ ಆವರಣದಲ್ಲಿ ಸಹ್ಯಾದ್ರಿ ನಾರಾಯಣ ಹೃದಯಾಲಯ ಶಿವಮೊಗ್ಗ, ನಗರಸಭೆ, ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರ, ಎಸ್‌ಪಿಐಡಿ ಸಂಸ್ಥೆ, ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಜೀವಿತಾ ಫೌಂಡೇಶನ್ ಏರ್ಪಡಿಸಿದ್ದ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ಇಂದು ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪರೀಕ್ಷೆ ಮಾಡಿಸಿಕೊಂಡ ಪೌರ ಕಾರ್ಮಿಕರು ತಮ್ಮ ಆರೋಗ್ಯಕ್ಕೆ ಹೆಚ್ಚು ಒತ್ತುನೀಡಿದಾಗ ಮಾತ್ರ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ, ಪೌರ ಕಾರ್ಮಿಕರಿಗೆ ಗ್ಲೌಸ್, ಶೂ ಮತ್ತಿತರ ಮೂಲ ಸೌಕರ್ಯಗಳನ್ನು ನಗರಸಭೆ ಒದಗಿಸಿದ್ದರೂ ಧರಿಸದೇ ಬಂದು ಸ್ವಚ್ಛತೆ ಕಾರ್ಯ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್‌ಗೆ ಸೂಚನೆ ನೀಡಿದರು.

    ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಪೌರ ಕಾರ್ಮಿಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿದ್ದು, ಇದಕ್ಕೆ ಪೂರಕವಾಗಿ ಜೀವಿತಾ ಫೌಂಡೇಶನ್ ಅವರು ಮುಂದೆ ಬಂದಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

    ಪೌರ ಕಾರ್ಮಿಕರು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸದೇ ಇರುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಂಡು ನಿಗದಿತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ಕಿವಿಮಾತು ಹೇಳಿದರು.

    ನಾರಾಯಣ ಹೃದಯಾಲಯ ಆಸ್ಪತ್ರೆ ವೈದ್ಯ ಡಾ. ನಿತಿನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳು ಹೆಚ್ಚುತ್ತಿದ್ದು, ಬಹಳ ಮುಖ್ಯವಾಗಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪೌರ ಕಾರ್ಮಿಕರು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಮದ್ಯಪಾನ, ಧೂಮಪಾನದಂತಹ ಕೆಲವು ಹವ್ಯಾಸಗಳನ್ನು ಪೌರ ಕಾರ್ಮಿಕರು ತ್ಯಜಿಸುವ ಮೂಲಕ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂಬ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು. ಪೌಷ್ಟಿಕ ಆಹಾರ ಸೇವಿಸಬೇಕು, ಜೊತೆಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕಡಿಮೆ ಮಾಡಬೇಕು. ಇದು ಆದಾಗ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯಾಘಾತ ತಡೆಯಲು ಸಾಧ್ಯ ಎಂದು ಹೇಳಿದರು.

    ಉಪಾಧ್ಯಕ್ಷೆ ಅನುಮಧುಕರ್ ಮಾತನಾಡಿ, ಜನಹಿತಕ್ಕಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ನಿಗದಿತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಮೊದಲಿಗೆ ಜೀವಿತ ಫೌಂಡೇಶನ್ ಅಧ್ಯಕ್ಷ ಪ್ರಕಾಶ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ ಮಾತನಾಡಿ, ಕಳೆದ ೧೩ ವರ್ಷಗಳಿಂದ ಫೌಂಡೇಶನ್ ೮ ಸಾವಿರ ವಿಕಲ ಚೇತನರಿಗೆ ಚಿಕಿತ್ಸೆ ಜೊತೆಗೆ ಸಾಧನ ಸಲಕರಣೆಗಳನ್ನು ನೀಡುತ್ತಿದ್ದೇವೆ ಎಂದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗೋಪಿ, ಪರಿಸರ ಅಭಿಯಂತರರಾದ ತೇಜಸ್ವಿನಿ, ಆರೋಗ್ಯ ನಿರೀಕ್ಷಕ ನಾಗಪ್ಪ ಹಾಗೂ ನಾಗರಾಜು, ಶ್ರೀನಿವಾಸ, ವಿವೇಕ್, ಅಣ್ಣಯ್ಯ, ಸತೀಶ್ ಉಪಸ್ಥಿತರಿದ್ದರು.

    Free health check-up camp for civic workers

  • ಪೊಲೀಸ್‌ ಇಲಾಖೆಯಿಂದ “ಮನೆಮನೆಗೆ ಪೊಲೀಸ್” ನೂತನ ಕಾರ್ಯಕ್ರಮ

    ಪೊಲೀಸ್‌ ಇಲಾಖೆಯಿಂದ “ಮನೆಮನೆಗೆ ಪೊಲೀಸ್” ನೂತನ ಕಾರ್ಯಕ್ರಮ

    ಚಿಕ್ಕಮಗಳೂರು: “ಮನೆಮನೆಗೆ ಪೊಲೀಸ್” ಉಪಕ್ರಮವು ಸಮಾಜದಲ್ಲಿ ಅಪರಾಧ ತಡೆಗೆ ಸಹಕಾರಿ ಆಗುವುದಲ್ಲದೆ, ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.

    ಸರ್ವರನ್ನೂ ಸಮಾನವಾಗಿ ಒಳಗೊಂಡು ಸಾರ್ವಜನಿಕರು ಈ ಕಾರ್ಯದಲ್ಲಿ ನೇರವಾಗಿ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿ, ಸಾಮಾಜಿಕ ಪಿಡುಗುಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ವ್ಯವಸ್ಥೆಯು ಒಂದು ಆಶಾಕಿರಣ ಎಂದಿದ್ದಾರೆ.

    ಈ ಮೂಲಕ ಪೊಲೀಸರ ಬಗ್ಗೆ ಇರುವ ಭಯದ ಭಾವದ ಬದಲು ವಿಶ್ವಾಸದ ಚಿಹ್ನೆಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ನಂಬಿಕೆ ಮತ್ತು ಸಹಕಾರವನ್ನು ಹೆಚ್ಚಿಸಲು ಪೊಲೀಸ್ ಇಲಾಖೆಯು ಈ ನೂತನ ಉಪಕ್ರಮವನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ.
    ಸ್ಥಳೀಯ, ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರ ನಡುವೆ ನೇರ ಸಂವಹನವನ್ನು ಸ್ಥಾಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರತಿದಿನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಕೇಳಿ ತ್ವರಿತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.

    ಮಾದಕ ವಸ್ತುಗಳ ದುರ್ಬಳಕೆ ಇತ್ತೀಚಿನ ದಿನಗಳಲ್ಲಿ ಒಂದು ಜಾಗತಿಕ ಸಮಸ್ಯೆಯಾಗಿದ್ದು ಸಂಕೀರ್ಣ ಸವಾಲಾಗಿದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿದಾಗ ಇವುಗಳ ಬಗ್ಗೆ ಅರಿವು ಮೂಡಿಸುತ್ತಾರೆ ಎಂದು ಹೇಳಿದ್ದಾರೆ.

    “ಮನೆಮನೆಗೆ ಪೊಲೀಸ್” ಉಪಕ್ರಮದ ಭಾಗವಾಗಿ ಶಾಲಾ-ಕಾಲೇಜುಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ, ಮಹಿಳಾ ಭದ್ರತೆ ಕುರಿತ ಕಾರ್ಯಾಗಾರ ಮತ್ತು ಯುವಜನರಿಗೆ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸುವ ಸಭೆಗಳನ್ನು ಏರ್ಪಡಿಸಲಾಗುತ್ತದೆ ಎಂದಿದ್ದಾರೆ

    ಈ ಉಪಕ್ರಮದ ಪ್ರಮುಖ ಪ್ರಯೋಜನಗಳು

    1. ಅಪರಾಧ ತಡೆಗೆ ಸಹಕಾರಿ ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟುವುದು.

    2. ಜನರಲ್ಲಿ ನಂಬಿಕೆ ಬೆಳೆಸುವುದು ಸಮುದಾಯ ಪೊಲೀಸ್ ವ್ಯವಸ್ಥೆಯು ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧ ನಿರ್ಮಾಣ

    3. ಶಾಂತಿ ಮತ್ತು ಭದ್ರತೆ ಕಾಪಾಡುವುದು ಸ್ಥಳೀಯರ ಸಹಕಾರದಿಂದ ಸಮುದಾಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪನೆ.

    4. ಸ್ಥಳೀಯ ಸಮಸ್ಯೆಗಳ ಪರಿಹಾರ ಸಮುದಾಯ ಪೊಲೀಸ್ ವ್ಯವಸ್ಥೆಯ ಮೂಲಕ ಸ್ಥಳೀಯ ಮಟ್ಟದ ವಿಶೇಷ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದು.

    5. ಪೋಲೀಸರು ಜನರ ಹತ್ತಿರ ಬರುತ್ತಾರೆ ಪೊಲೀಸರು ‘ಭಯದ ಪಾತ್ರ” ದಿಂದ “ಮಿತ್ರನ ಪಾತ್ರ” ದತ್ತ ಸಾಗುತ್ತಾರೆ.

    6. ಅಪರಾಧದ ಕುರಿತು ಜಾಗೃತಿ – ಸಾರ್ವಜನಿಕರಲ್ಲಿ ಕಾನೂನು ಹಾಗೂ ಅಪರಾಧ ತಡೆ ಬಗ್ಗೆ ಅರಿವು

    7. ಯುವಜನತೆಗೆ ಮಾರ್ಗದರ್ಶನ ಸಹಾಯ ಮಾಡುತ್ತದೆ. ಯುವಜನರನ್ನು ಸಕಾರಾತ್ಮಕ ಚಟುವಟಿಕೆಗಳತ್ತ ತೊಡಗಿಸಲು ಸಹಕಾರಿ.

    8. ಸಮಾಜದಲ್ಲಿ ಸಹಭಾಗಿತ್ವ ನಾಗರಿಕರು ಮತ್ತು ಪೊಲೀಸರು ಜವಾಬ್ದಾರಿ ಹಂಚಿಕೊಳ್ಳುವ ಮೂಲಕ ಉತ್ತಮ ವ್ಯವಸ್ಥೆ ನಿರ್ಮಾಣ

    9. ಸೈಬರ್ ಅಪರಾಧ, ನಕಲಿ ಮಾಹಿತಿ ತಡೆಯಲು ನೆರವು ಜನರಿಗೆ ಈ ವಿಷಯಗಳಲ್ಲಿ ಶಿಕ್ಷಣ

    10. ಆಪತ್ತಿನ ಸಂದರ್ಭಗಳಲ್ಲಿ ತ್ವರಿತ ಪ್ರತಿಕ್ರಿಯೆ ವಿಪತ್ತುಗಳು ಅಥವಾ ತುರ್ತು ಸಂದರ್ಭದಲ್ಲಿ ಜನಸಹಕಾರದ ಮೂಲಕ ಪೊಲೀಸರು ಶೀಘ್ರದಲ್ಲಿ ಸಹಾಯ

    ಪ್ರಸ್ತುತ ಪೊಲೀಸ್ ಸೇವೆಯು ಬಹುತೇಕವಾಗಿ “ಪ್ರತಿಕ್ರಿಯೆ ಸೇವೆ” ಯನ್ನು ಮಾತ್ರವೇ ಒದಗಿಸುತ್ತಾ ಬಂದಿದೆ. ಅಂದರೆ, ಸಾರ್ವಜನಿಕರು ನೀಡುವ ದೂರುಗಳ / ಅಹವಾಲುಗಳ ಅಧಾರದ ಮೇಲೆ ಮಾತ್ರವೇ ಪ್ರತಿಕ್ರಿಯಿಸಲಾಗುತ್ತಿದೆ.

    ಆದರೆ ಈ ವ್ಯವಸ್ಥೆಯನ್ನು “ಸಕ್ರಿಯ ಸೇವೆ” (Pro-active Policing) ಒದಗಿಸುವ ವ್ಯವಸ್ಥೆಯನ್ನಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಅವಶ್ಯಕತೆ ಇದೆ. ಇಂತಹ ನಡೆಯಿಂದ ಪೊಲೀಸ್ ಸೇವೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯು ಹೆಚ್ಚುವುದರೊಂದಿಗೆ, ಜನರು ಮತ್ತು ಪೋಲಿಸರು ನಿಕಟ ಸಂಬಂಧದ ಪರಿಣಾಮವಾಗಿ, ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿರುವಂತಹ ವಾತಾವರಣ ರೂಪುಗೊಂಡಿರುತ್ತದೆ.

    New program from the Police Department: “Police from Door to Door”

  • ಚಿಂತೆ ಚಿಂತನಗೊಂಡಾಗ ಬದುಕು ಸಾರ್ಥಕ

    ಚಿಂತೆ ಚಿಂತನಗೊಂಡಾಗ ಬದುಕು ಸಾರ್ಥಕ

    ಬಾಳೆಹೊನ್ನೂರು: ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗುರಿಗಳಿಲ್ಲದ ಜೀವನ ಮತ್ತು ಹಣ ಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಚಿಂತೆ ಚಿಂತನಗೊಂಡಾಗ ಮಾನವನ ಬದುಕು ಸಾರ್ಥಕಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಕೈಗೊಂಡ ೩೪ನೇ ವರ್ಷದ ಶ್ರಾವಣ ತಪೋನುಷ್ಠಾನದ ಅಂಗವಾಗಿ ಜರುಗಿದ ಪುರಾಣ ಪ್ರವಚನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

    ಭಾರತೀಯ ಪುಣ್ಯ ಭೂಮಿಯಲ್ಲಿ ಬಹಳಷ್ಟು ಆಚರಣೆಗಳು ಬೆಳೆದು ಬಂದಿವೆ. ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ಮಠ ಮಂದಿರಗಳಲ್ಲಿ ಶಿವನಾಮ ಸ್ಮರಣೆ ಸತ್ಕಥಾ ಶ್ರವಣಗಳು ನಡೆಯುತ್ತಾ ಬಂದಿವೆ. ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಬುದ್ಧಿ ವಿಕಾಸಗೊಂಡಂತೆ ಭಾವನೆಗಳು ಬೆಳೆದು ಬರುವ ಅವಶ್ಯಕತೆಯಿದೆ. ಸಹನೆಯ ಗುಣ ತಾಳ್ಮೆ ಇದ್ದು ಮನಸ್ಸು ವಿಕಾಸಗೊಳ್ಳಬೇಕು. ಈ ನಾಡಿನ ಸಂಸ್ಕೃತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುವುದು ಎಲ್ಲರ ಧ್ಯೇಯವಾಗಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ಧಾರ್ಮಿಕ ಮತ್ತು ಸಾಮಾಜಿಕ ವಿಚಾರ ಧಾರೆಗಳು ಬಾಳಿ ಬದುಕುವ ಮನುಷ್ಯನಿಗೆ ದಾರಿ ದೀಪವೆಂದರು.

    ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಮಾತನಾಡಿ ಮನುಷ್ಯನಿಗೆ ಮನುಷ್ಯತ್ವ ಮುಮುಕ್ಷತ್ವ ಮತ್ತು ದೊಡ್ಡವರ ಸಹವಾಸ ದೊರಕಲು ಭಗವಂತನ ಕೃಪೆಯಿದ್ದಾಗ ಮಾತ್ರ ದೊರಕಲು ಸಾಧ್ಯ. ಅರಿವು ಆದರ್ಶಗಳನ್ನು ಬೋಧಿಸಿ ಸನ್ಮಾರ್ಗಕ್ಕೆ ಜನ ಸಮುದಾಯ ಬರುವಂತೆ ಪ್ರೇರಣೆ ನೀಡಿದ ಮಹಾನ್ ಶಕ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂದ ಅವರು ಶ್ರಾವಣ ಒಂದು ತಿಂಗಳ ಕಾಲ ಅವರ ಆದರ್ಶ ಚಿಂತನಗಳನ್ನು ಅರಿಯಲು ಎಲ್ಲರಿಗೂ ಸುವರ್ಣಾವಕಾಶ ದೊರೆತಿರಲು ಗುರುವೇ ಕಾರಣಿಭೂತನಾಗಿರುವುನೆಂಬುದನ್ನು ಮರೆಯಬಾರದೆಂದರು.

    ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿವಮೊಗ್ಗದ ಎಸ್.ಹೆಚ್.ಸಿದ್ಧಣ್ಣ, ನಾಗರನವಿಲೆಯ ಪವನಕುಮಾರ್, ಸಿದ್ದೇಶ್ವರ ಶಾಸ್ತ್ರಿಗಳು, ಶಂಕರನಹಳ್ಳಿ ಸದ್ಭಕ್ತರು ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕುಲಪತಿ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗಯ್ಯ ಶಾಸ್ತ್ರಿಗಳು ಸ್ವಾಗತಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.

    ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಬೆಳಿಗ್ಗೆ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವದಿಸಿದರು. ಶ್ರಾವಣ ನಿಮಿತ್ಯ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು.

    Life is meaningful when you are free from worry and contemplation.

  • ಬೀಡಾಡಿ ನಾಯಿಗಳಿಗೆ ಆಹಾರ ಹಾಕಿದಲ್ಲಿ ಕಾನೂನು ಕ್ರಮ

    ಬೀಡಾಡಿ ನಾಯಿಗಳಿಗೆ ಆಹಾರ ಹಾಕಿದಲ್ಲಿ ಕಾನೂನು ಕ್ರಮ

    ಚಿಕ್ಕಮಗಳೂರು: ಮನೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ನಾಯಿಗಳಿಗೆ ಹಾಕುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಂಬಂಧಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಬಿ.ಸಿ.ಬಸವರಾಜು ಅವರು ಎಚ್ಚರಿಸಿದ್ದಾರೆ.

    ಈ ಬಗ್ಗೆ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ನಗರ ವ್ಯಾಪ್ತಿಯಲ್ಲಿ ಬೀಡಾಡಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಯಿ ಸಾಕಾಣಿಕೆದಾರರು ತಮ್ಮ ನಾಯಿಗಳನ್ನು ರಸ್ತೆಗೆ ಬಿಡದೆ ತಮ್ಮ ಮನೆ ಆವರಣದಲ್ಲೇ ಬೆಲ್ಟ್ ಅಥವಾ ಹಗ್ಗದಿಂದ ಕಟ್ಟಿಹಾಕಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ತಮ್ಮ ಮನೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ನಾಯಿಗಳಿಗೆ ಆಹಾರವನ್ನು ಹಾಕುತ್ತಿರುವುದು ಕಂಡುಬಂದಿದ್ದು, ಇದು ನಗರ ವ್ಯಾಪ್ತಿಯಲ್ಲಿ ಬೀಡಾಡಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ.

    ಇದರಿಂದ ಸಾರ್ವಜನಿಕರಿಗೆ ಉಪದ್ರವದೊಂದಿಗೆ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಸಹ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಈ ಕಚೇರಿಗೆ ಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ.

    Legal action against feeding stray dogs

  • ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಶಿಕ್ಷಣ ಅಗತ್ಯ

    ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಶಿಕ್ಷಣ ಅಗತ್ಯ

    ಚಿಕ್ಕಮಗಳೂರು:  ಕಾಯ, ವಾಚ, ಮನಸಾ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಸೇವೆ ಸಲ್ಲಿಸಿ ವೃತ್ತಿ ಇರುವುದೇ ಮಕ್ಕಳ ಅಭಿವೃದ್ಧಿಗಾಗಿ-ಶ್ರೇಯಸ್ಸಿಗಾಗಿ ಅನ್ನುವುದನ್ನು ಅರ್ಥಮಾಡಿಕೊಂಡು ಶ್ರಮವಹಿಸಿದರೆ ಮಕ್ಕಳಲ್ಲಿರುವ ಪ್ರತಿಭೆ ಸಹಕಾರಿ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಮಂಜುಳ.ಕೆ ಅಭಿಪ್ರಾಯಿಸಿದರು.

    ಅವರು ಇಂದು ಜೆವಿಎಸ್ ಕಾಲೇಜು ಕುವೆಂಪು ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ನಿವೃತ್ತ ಪ್ರಾಚಾರ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನದ ಶಿಕ್ಷಣ ಕೊಡುವ ಜವಾಬ್ದಾರಿ ಕಾಲೇಜುಗಳಿಗಿದೆ. ವಿದ್ಯಾ ಪ್ರತಿಭೆ, ಕ್ರೀಡಾ, ಸಾಂಸ್ಕೃತಿಕ ಪ್ರತಿಭೆಗಳೂ ಸೇರಿದಂತೆ ಎಲ್ಲವೂ ಹೊರಬರಲು ಕಾರಣವಾಗಿ ಪ್ರತಿಭಾ ಶಕ್ತಿಯಾಗಿ ರೂಪುಗೊಳ್ಳುತ್ತದೆ, ಪ್ರೇರಣೆಯಾಗುತ್ತದೆ ಎಂದು ಹೇಳಿದರು.

    ಕಳೆದ ಎರಡು ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ, ಕಲಾ, ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆದು ಅತೀ ಹೆಚ್ಚು ಅಂಕ ಪಡೆದ ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಆಹ್ವಾನಿಸಿ ಪ್ರೋತ್ಸಾಹಧನದೊಂದಿಗೆ ಗೌರವಿಸುವ ಕೆಲಸವನ್ನು ಪ್ರಾಚಾರ್ಯರ ಸಂಘ ಮಾಡುತ್ತಿರುವುದು ಅಭಿನಂದನೀಯ ಎಂದರು.

    ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರಾಚಾರ್ಯರನ್ನು ಕರೆದು ಜಿಲ್ಲಾಮಟ್ಟದಲ್ಲಿ ಗೌರವಿಸುತ್ತಿರುವುದು ಅವರಿಗೆ ತೃಪ್ತಿ ನೀಡಿದೆ ಎಂದು ಭಾವಿಸುತ್ತೇನೆ, ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರವಾಗಿದ್ದು, ಸಮಾಜದ ಒಳಿತಿಗೆ ಈ ನಮ್ಮ ಕ್ಷೇತ್ರ ಪ್ರಮುಖ ಪಾತ್ರ ವಹಿಸಬೇಕು. ಶಿಕ್ಷಕರು, ಉಪನ್ಯಾಸಕರು, ಪ್ರಾಚಾರ್ಯರು ಸನ್ನಡತೆಯಿಂದ ಸದ್ಗುಣ, ಸಹನೆಯಿಂದ ವರ್ತಿಸಿದರೆ ಸಮಾಜವೂ ಕಲಿಯುತ್ತದೆ ಎಂಬುದನ್ನು ನಂಬಿದ್ದೇನೆ ಎಂದು ಹೇಳಿದರು.

    ಸಂಘದ ಅಧ್ಯಕ್ಷೆ ತಸ್ನೀಮಾ ಫಾತೀಮಾ ಮಾತನಾಡಿ, ಸಂಘದ ವತಿಯಿಂದ ಹಲವಾರು ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಕಾಲೇಜಿನಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಜವಾಬ್ದಾರಿ ಕರ್ತವ್ಯದ ಜೊತೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆಯೂ ಚಿಂತನೆ ಮಾಡುವುದು ಅಗತ್ಯ ಎಂದರು.

    ಸಂಘದ ಎಲ್ಲರ ಸಹಕಾರದೊಂದಿಗೆ ಬ್ಯಾಂಕಿನಲ್ಲಿ ಪ್ರತ್ಯೇಕ ಉಳಿತಾಯ ಖಾತೆ ತೆರೆದು ೧೨ ಲಕ್ಷ ರೂ ನಿಶ್ಚಿತ ಠೇವಣಿಯನ್ನು ಇಡಲಾಗಿದ್ದು, ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದೆ ಸಂಘದ ನಿವೇಶನ ಖರೀದಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಕಾರ್ಯದರ್ಶಿ ತೇಜಸ್ವಿನಿ.ಜಿ, ಖಜಾಂಚಿ ಎಚ್.ಎಂ.ನಾಗರಾಜರಾವ್, ರಾಜ್ಯ ಪ್ರಾಂಶುಪಾಲ ಸಂಘದ ಜಿಲ್ಲಾ ಪ್ರತಿನಿಧಿ ರವಿಕಾಂತ್, ಪ.ಪೂ.ಕಾ.ಪ್ರಾ.ಸಂ ಉಪಾಧ್ಯಕ್ಷರಾದ ವಿರೂಪಾಕ್ಷ.ಜಿ.ಬಿ, ಸೋಮಶೇಖರ್.ಎಂ.ಎಲ್, ಉಪಾಧ್ಯಕ್ಷ ಮಿನಿ ಥಾಮಸ್, ಸಹಕಾರ್ಯದರ್ಶಿ ನಾಗಮಣಿ, ಸ.ಪ.ಪೂ ಕಾಲೇಜು ಪ್ರಾಚಾರ್ಯರಾದ ಶಿವಕುಮಾರ್.ಕೆ.ಆರ್, ಜಯಪ್ಪ.ಸಿ.ಆರ್, ಪುಟ್ಟಸ್ವಾಮಿನಾಯ್ಕ್, ಭಾಗೀರಥಿ, ಭೂದೇಶ.ಕೆ.ಆರ್, ಅರುಣ್‌ಕುಮಾರ್.ಟಿ.ಆರ್, ಎಂ.ಆರ್.ಮುರಳೀಧರ, ಹೆಚ್.ಎಂ.ಸದಾಶಿವಯ್ಯ, ಅನಂತಪದ್ಮನಾಭ.ಎ.ಡಿ ಉಪಸ್ಥಿತರಿದ್ದರು.

    Adolescent children need proper guidance and education.

  • ಮುಂಬರುವ ತಾಪಂ-ಜಿಪಂ ಚುನಾವಣೆ ಎದುರಿಸಲು ಸದಸ್ಯತ್ವ ಅಭಿಯಾನ

    ಮುಂಬರುವ ತಾಪಂ-ಜಿಪಂ ಚುನಾವಣೆ ಎದುರಿಸಲು ಸದಸ್ಯತ್ವ ಅಭಿಯಾನ

    ಚಿಕ್ಕಮಗಳೂರು:  ಜೆಡಿಎಸ್ ಪಕ್ಷವನ್ನು ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳನ್ನು ಸದಸ್ಯತ್ವ ಅಭಿಯಾನದ ಮೂಲಕ ಜೆಡಿಎಸ್ ಪಕ್ಷ ಸಂಘಟನೆಗೆ ಗುರಿ ಹೊಂದಲಾಗಿದೆ ಎಂದು ಪಕ್ಷದ ರಾಜ್ಯ ಮುಖಂಡ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.

    ಅವರು ಇಂದು ಜಿಲ್ಲೆಯ ಶೃಂಗೇರಿ ವಿಧಾನ ಸಭಾ ಕ್ಷೇತ್ರ ಕೊಪ್ಪದ ಒಕ್ಕಲಿಗರ ಸಂಘದ ಭವನದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಪಕ್ಷದ ಮೇಲೆ ಅಭಿಮಾನವಿಟ್ಟು ಆಗಮಿಸಿರುವ ಕಾರ್ಯಕರ್ತರು, ಹಿತೈಷಿಗಳ ನಿರೀಕ್ಷೆಗೆ ಚ್ಯುತಿ ಬಾರದಂತೆ ನೆಡೆಯುತ್ತೇವೆ, ಪಕ್ಷ ಸಂಘಟನೆ ಬಲವಾದಷ್ಟು ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ರವರಿಗೆ ಧ್ವನಿಯಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

    ರಾಜ್ಯ ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ ರವರು ಪಕ್ಷ ಸಂಘಟನೆಗೆ ಗಟ್ಟಿಯಾಗಿ ಶ್ರಮವಹಿಸುತ್ತಿರುವುದು ಶ್ಲಾಘನೀಯ ಎಂದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ತಮಗೆ ಮತ ನೀಡಿದವರನ್ನು ಮರೆಯಬಾರದೆಂದು, ಈ ದೃಢ ನಿರ್ಧಾರ ಕೈಗೊಂಡಿದ್ದೀರಿ ಎಂದರು.

    ಪಕ್ಷದ ಕಾರ್ಯಕರ್ತರು ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲವಾಗಿ ಕಟ್ಟುವ ಸಂಕಲ್ಪ ಮಾಡಬೇಕಾಗಿದೆ, ಸುಧಾಕರ ಶೆಟ್ಟರವರು ಯಾವುದೇ ಅಪೇಕ್ಷೆ ಇಟ್ಟುಕೊಳ್ಳದೆ ಅಮ್ಮ ಫೌಂಡೇಷನ್ ಮೂಲಕ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ, ಮಾಜಿ ಶಿಕ್ಷಣ ಸಚಿವ ಗಾಂಧಿವಾದಿ ಹೆಚ್.ಜಿ ಗೋವಿಂದೇ ಗೌಡರ ಕರ್ತವ್ಯ ನಿಷ್ಠೆಯ ಬಗ್ಗೆ ಸ್ಮರಿಸಿದರು.

    ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮಾರ್ಗದರ್ಶನ, ನಾಯಕರಾದ ಹೆಚ್.ಡಿ ಕುಮಾರಸ್ವಾಮಿ ರವರ ಆದೇಶದ ಮೇರೆಗೆ ಈ ಸದಸ್ಯತ್ವ ಅಭಿಯಾನವನ್ನು ನಡೆಸುತ್ತಿದ್ದು, ಆ. ೨೦ ರೋಳಗೆ ಇದನ್ನು ಮುಕ್ತಾಯಗೊಳಿಸಬೇಕೆಂಬ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕ್ಯಗೊಳ್ಳುವುದಾಗಿ ತಿಳಿಸಿದರು.

    ಜೆಡಿಎಸ್ ಪಕ್ಷದ ಮೇಲೆ ಇಟ್ಟಿರುವ ಅಭಿಮಾನಕ್ಕೆ ಬೆಲೆ ಕಟ್ಟಲಾಗದು, ಪಕ್ಷದ ಕಾರ್ಯಕರ್ತರು ಮಳೆ, ಗಾಳಿ, ಚಳಿ, ಬಿಸಿಲಿಗೆ ಜಗ್ಗುವುದಿಲ್ಲ ಎಂಬುವುದಕ್ಕೆ ಇಲ್ಲಿ ಸೇರಿರುವ ಕಾರ್ಯಕರ್ತರ ಪಡೆ ನಿದರ್ಶನ ಎಂದ ಅವರು ಮೂರು ಬಾರಿ ಚುನಾವಣೆಯಲ್ಲಿ ಪರಾಭವಗೊಂಡಿದ್ದರು ನಗು ಮುಖವನ್ನು ಯಾರು ಕಿತ್ತುಕೊಳ್ಳಲು ಸಾದ್ಯವಿಲ್ಲ, ಪ್ರತಿ ಹಂತದಲ್ಲೂ ಪಕ್ಷ ಸಂಘಟನೆ ಮಾಡಿ ಬೆಂಬಲಿಸುತ್ತಿದ್ದೀರಿ ಎಂದರು.

    ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ ಜೆಡಿಎಸ್ ಪಕ್ಷ ಸಂಘಟನೆಗೆ ಯುವ ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಬದಲಾವಣೆಯ ದಿಗ್ಸೂಚಿ ಎಂದು ಹೇಳಿದರು. ಸಕಲೇಶಪುರ ಮಾಜಿ ಶಾಸಕ ಹೆಚ್.ಕೆ ಕುಮಾರಸ್ವಾಮಿ ಮಾತನಾಡಿ ಒಂದು ಪಕ್ಷ ರಾಜಕೀಯವಾಗಿ ಸದೃಢವಾಗಬೇಕಾದರೆ ಪ್ರಾಥಮಿಕ ಸದಸ್ಯತ್ವ ನೋಂದಣಿ ಅಗತ್ಯವಾಗಿದ್ದು, ಈ ಮೂಲಕ ಪಕ್ಷ ಸಂಘಟನೆ ಮಾಡಬೇಕು ಎಂದು ಅಭಿಪ್ರಾಯಿಸಿದರು.

    ಯಾವುದೇ ಅಭಿವೃದ್ಧಿ ಕೈಗೊಳ್ಳದ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಲು ಕಾರ್ಯಕರ್ತರು ಮನಸ್ಸು ಮಾಡಿ ಪಕ್ಷಕ್ಕೆ ಶಕ್ತಿ ತುಂಬಬೇಕೆಂದು ಹೇಳಿದ ಅವರು ನೂತನ ಸದಸ್ಯತ್ವ ಪಡೆಯುವಾಗ ಎಲ್ಲಾ ವರ್ಗದ ಜನರಿಗೆ ಅವಕಾಶ ನೀಡಬೇಕು, ಈ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸಮಿತಿ ರಚಿಸುವ ಅಗತ್ಯ ಇದೆ ಎಂದು ಸಲಹೆ ನೀಡಿದರು,

    ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಕೋರ್ ಕಮಿಟಿ ಸದಸ್ಯ ಹೆಚ್.ಜಿ ವೆಂಕಟೇಶ್, ಕ್ಷೇತ್ರ ಸಮಿತಿ ಅಧ್ಯಕ್ಷ ದಿವಾಕರ ಭಟ್, ರಾಜ್ಯ ಮಹಿಳಾ ಘಟಕದ ರಶ್ಮೀ ರಾಮೇಗೌಡ, ಕುಸುಮ ವಾಸಪ್ಪ, ರಾಮಸ್ವಾಮಿ, ಗೋವಿಂದೇಗೌಡ, ಮಂಜುನಾಥ್, ಚಂದ್ರಶೇಖರ್, ಉದಯ ಸುವರ್ಣ, ಅನಿಲ್ ನಾರ್ವೇ, ಬದ್ರಿಯಾ ಮಹ್ಮದ್, ಸುರೇಶ್, ದೇವೇಂದ್ರ, ಶುಭಾಅರುಣ್, ಪುಷ್ವಲತ, ಶಿವದಾಸ್, ಕಳಸಪ್ಪ, ಸಂಜಯ್ ಮತ್ತಿತರರು ಉಪಸ್ಥಿತರಿದ್ದರು, ಮೊದಲಿಗೆ ಪಕ್ಷದ ಮುಖಂಡ ವಿನಯ್ ಕಣಿವೆ ಸ್ವಾಗತಿಸಿದರು.

    Membership campaign to face the upcoming TPA-ZIP elections