Category: ಚಿಕ್ಕಮಗಳೂರು

  • ಬಾಲ್ಯ ವಿವಾಹ ತಡೆಯಲು ಜನಜಾಗೃತಿ ಅಗತ್ಯ

    ಬಾಲ್ಯ ವಿವಾಹ ತಡೆಯಲು ಜನಜಾಗೃತಿ ಅಗತ್ಯ

    ಚಿಕ್ಕಮಗಳೂರು:  ಬಾಲ್ಯವಿವಾಹ ತಡೆಯಲು ಹಾಗೂ ಈ ಕುರಿತು ಜನಜಾಗೃತಿ ಮೂಡಿಸುವಲ್ಲಿ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಪಾತ್ರ ಹಿರಿದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಕರೆ ನೀಡಿದರು.

    ಅವರು ಇಂದು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ವಿವಾಹ ನೋಂದಣಿ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ೧೮ ವರ್ಷ ತುಂಬುವ ಮುನ್ನವೇ ಹೆಣ್ಣುಮಕ್ಕಳಿಗೆ ಹಾಗೂ ೨೧ ವರ್ಷ ತುಂಬುವ ಮೊದಲು ಪುರುಷರಿಗೆ ವಿವಾಹ ಮಾಡುತ್ತಿರುವ ಬಗ್ಗೆ ನಾಗರೀಕರಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರ ನಿಗದಿಪಡಿಸಿರುವ ವಯಸ್ಸಿನ ಮುನ್ನ ಮದುವೆ ಮಾಡಿದರೆ ಅಂಗವಿಕಲ ಮಕ್ಕಳು ಜನಿಸುತ್ತಾರೆ. ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂಬ ತಿಳಿವಳಿಕೆಯನ್ನು ನೀಡಬೇಕಾಗಿದೆ ಎಂದರು.

    ಈ ಸಂಬಂಧ ತಮ್ಮ ವಾರ್ಡಿನಲ್ಲಿ ಬಾಲ್ಯವಿವಾಹವಾಗಿದ್ದರೆ ಅಂತವರಿಗೆ ಜಾಗೃತಿ ಮೂಡಿಸಿ ಹಿರಿಯರು ಮಾಡಿದ ತಪ್ಪಿನಿಂದ ಜೀವನವಿಡೀ ನೋವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ಕ್ರಿಯಾಶೀಲವಾಗಿ ಚಟುವಟಿಕೆ ನಡೆಸುತ್ತಿವೆ. ಆದರೆ, ಜಿಲ್ಲಾ ಕೇಂದ್ರದಲ್ಲಿರುವ ಸಂಘಗಳು ನಿಷ್ಕ್ರಿಯವಾಗಿ ಆಸಕ್ತಿ ವಹಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿಗಳ ಕಛೇರಿಯಿಂದ ಪ್ರತೀ ಸ್ಥಳೀಯ ಸಂಸ್ಥೆಗಳಿಗೆ ಸ್ತ್ರೀಶಕ್ತಿ ಸಂಘಗಳಲ್ಲಿ ಉತ್ತಮವಾಗಿ ಕೆಲಸ ಮಾಡುವ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರನ್ನು ಕಮ್ಯುನಿಟಿ ಮೊಬೈಲೈಸರ್ ಎಂದು ಆಯ್ಕೆಮಾಡಲು ೨೩ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ ಕೇವಲ ೨೦ ಜನ ಅರ್ಜಿ ಹಾಕಿದ್ದೀರಿ ಎಂದರು.

    ಈಗಾಗಲೇ ೧೫೦ ಕ್ಕೂ ಹೆಚ್ಚು ಸಂಘಗಳಿದ್ದು, ಅದರಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವವರು ಇಲ್ಲವೇ ಎಂದು ಪ್ರಶ್ನಿಸಿದ ಅವರು, ತಿಂಗಳಿಗೆ ೨೦ ಸಾವಿರ ವೇತನ ಸಿಗುವ ಈ ಹುದ್ದೆ ಜೊತೆಗೆ ನಗರಸಭೆಯೊಂದಿಗೆ ಒಡನಾಟ ಇಟ್ಟುಕೊಳ್ಳಬಹುದು. ಆರ್ಥಿಕ ಅಭಿವೃದ್ಧಿಯಾಗಬೇಕೆಂಬ ಆಸಕ್ತಿ ಇಲ್ಲವೇ ಎಂದು ಹೇಳಿದರು.

    ಸಾಮಾಜಿಕವಾಗಿ ಸಾರ್ವಜನಿಕರೊಟ್ಟಿಗೆ ಬೆರೆಯುವ ಜೊತೆಗೆ ನಗರಸಭೆಯಿಂದ ಮನೆ ಕಸ ಬಿಲ್, ಮನೆ ಕಂದಾಯ, ನೀರಿನ ಕರ ವಸೂಲಿ ಸೇರಿದಂತೆ ಮತ್ತಿತರ ಕೆಲಸಗಳಿಗೆ ಸ್ತ್ರೀಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನಿಸಿದರೆ ಕೇವಲ ೮ ಅರ್ಜಿಗಳು ಬಂದಿವೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಿಂದ್ಯಾ, ನಗರಸಭೆ ಸಿಬ್ಬಂದಿಗಳಾದ ಕಲಾವತಿ ಚಂದ್ರಶೇಖರ್ ಉಪಸ್ಥಿತರಿದ್ದರು

    Public awareness is needed to prevent child marriage

  • ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ

    ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ

    ಚಿಕ್ಕಮಗಳೂರು:  ಕಳೆದ ಎರಡು ವಾರದಿಂದ ನಗರದ ಸಂತೆ ಮಾರುಕಟ್ಟೆ ಸ್ವಚ್ಚತೆ ಹಾಗೂ ವರ್ತಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಇಂದು ನಾಗರೀಕರು ಸಂತಸದಿಂದ ವ್ಯಾಪಾರ ಮಾಡಲು ಅನುಕೂಲವಾಗಿದೆ ಎಂದು ನಗರಸಭಾ ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.

    ಅವರು ಇಂದು ಸಂತೆ ಮಾರ್ಕೆಟ್‌ಗೆ ಭೇಟಿನೀಡಿ ಸಂತೆಯಲ್ಲಿ ಸ್ವಚ್ಚತೆ ಕಾಪಾಡುವಂತೆ ವರ್ತಕರಿಗೆ ಸೂಚನೆ ನೀಡಿ ಗ್ರಾಹಕರಿಗೆ ಅರಿವು ಮೂಡಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಎಲ್ಲಾ ವರ್ತಕರು ಪ್ರತೀ ವಾರ ಇದೇ ರೀತಿ ವ್ಯಾಪಾರ ವಹಿವಾಟು ನಡೆಸಬೇಕೆಂದು ಸೂಚನೆ ನೀಡಿದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತರಕಾರಿ ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸಬೇಕೆಂದು ಮನವಿ ಮಾಡಿದರು.

    ನಗರದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಿದ್ದು, ಸಂತೆ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್‌ನ್ನು ವರ್ತಕರು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಂಡುಬರುತ್ತಿದ್ದು, ಗ್ರಾಹಕರು ಬಟ್ಟೆ ಬ್ಯಾಗ್‌ಗಳನ್ನು ತರುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ವಿನಂತಿಸಿದರು.

    ಶುದ್ಧಗಂಗಾ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ನಿರ್ಮಿಸಬೇಕೆಂಬ ವರ್ತಕರು ಹಾಗೂ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಮಾರುಕಟ್ಟೆಯಲ್ಲಿ ಹಾಲಿ ಇರುವುದರ ಜೊತೆಗೆ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ನಗರಸಭೆಯಲ್ಲಿ ಅನುಮೋದನೆ ಪಡೆದು ಇನ್ನೊಂದು ತಿಂಗಳಲ್ಲಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

    ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ನಡೆಸುತ್ತಿರುವವರ ಅನುಕೂಲಕ್ಕಾಗಿ ಮಯೂರ ಹೋಟೆಲ್ ಹಿಂಭಾಗದ ಕಟ್ಟೆ ನಿರ್ಮಿಸಿದ್ದು, ತಾತ್ಕಾಲಿಕವಾಗಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ದಿನದ ೨೪ ಗಂಟೆ ಇಲ್ಲಿಯೇ ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಿದರು.

    ನಗರಸಭೆ ಸದಸ್ಯೆ ಸಿ.ಎನ್ ಸಲ್ಮಾ ಮಾತನಾಡಿ, ನಗರಸಭೆಯ ನಿರ್ಧಾರದಿಂದಾಗಿ ಸಂತೆ ಮಾರುಕಟ್ಟೆ ಸ್ವಚ್ಚತೆಯಿಂದ ಕೂಡಿದ್ದು, ವರ್ತಕರು ಮತ್ತು ನಾಗರೀಕರು ಇದೇ ರೀತಿ ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಈಶ್ವರ್, ಅಣ್ಣಯ್ಯ ಇತರರು ಉಪಸ್ಥಿತರಿದ್ದರು.

    Instructions to maintain cleanliness in the market

  • ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣ

    ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣ

    ಚಿಕ್ಕಮಗಳೂರು: ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳನ್ನು ಸುಮಾರು ೧೨.೫ ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲು ಕ್ರಮ ವಹಿಸುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.

    ಅವರು ೧೫ನೇ ಹಣಕಾಸು ಯೋಜನೆಯಡಿ ೯೫ ಲಕ್ಷ ರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ರಾಂಪುರದಿಂದ ಕತ್ರಿಮಾರಮ್ಮ ದೇವಸ್ಥಾನದವರೆಗೆ ಅಳವಡಿಸಲಾಗಿರುವ ವಿದ್ಯುತ್ ದೀಪಗಳಿಗೆ ಚಾಲನೆ ನೀಡಿ ಮಾತನಾಡಿದರು.

    ಅತೀ ಹೆಚ್ಚು ಮಳೆಯಿಂದ ನಗರದಲ್ಲಿ ರಸ್ತೆಗಳು ಹಾನಿಯಾಗಿದ್ದು, ನಗರಸಭೆ ಇಂಜಿನಿಯರ್‌ಗಳು ರಸ್ತೆ ದುರಸ್ಥಿಗೆ ಬೇಕಾದ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಕಾರ್ಯಾದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಮಳೆಗಾಲ ಮುಗಿದ ಬಳಿಕ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಅಭಿವೃದ್ಧಿಗೊಳಿಸಲಾಗುವುದೆಂದರು.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಅನುದಾನ ಘೋಷಣೆ ಮಾಡಿದ್ದು, ಜು.೩೦, ೩೧ ರಂದು ಭೇಟಿಮಾಡಿ ಬಹುಪಾಲು ಅನುದಾನವನ್ನು ಪಡೆದು ನಗರದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿರುವುದಾಗಿ ತಿಳಿಸಿದರು.

    ಬಹಳ ದಿನಗಳ ನಂತರ ನಗರದ ನಾಗರೀಕರಿಗೆ ಕತ್ತಲೆಯಿಂದ ತೊಂದರೆಯಾಗಿದ್ದು, ನಗರದ ಹೆದ್ದಾರಿಯಿಂದ ಸುತ್ತಮುತ್ತಲ ವಾರ್ಡ್‌ಗಳಿಗೆ ತೆರಳುವವರಿಗೆ ಇಂದು ವಿದ್ಯುತ್ ದೀಪಗಳಿಗೆ ಚಾಲನೆ ನೀಡಿರುವುದು ಬೆಳಕಿನೆಡೆಗೆ ತರುವ ಪ್ರಯತ್ನ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು, ಪುರಷರು ದೈರ್ಯವಾಗಿ ಸಂಚರಿಸಬಹುದಾಗಿದೆ ಎಂದು ಹೇಳಿದರು.

    ನಗರದ ಜನತೆಗೆ ಸ್ವಚ್ಚತೆ, ಕುಡಿಯುವ ನೀರು, ಬೀದಿದೀಪ ಮುಂತಾದವುಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡುತ್ತೇನೆ. ಪ್ರತಿದಿನ ಕಸ ಸಂಗ್ರಹಣೆಗೆ ಗಂಟೆಗಾಡಿ ಬರುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಕರೆದು ಪ್ರತೀ ದಿನ ಮನೆಯಲ್ಲಿಯೇ ಒಣ ಕಸ, ಹಸಿ ಕಸ ವಿಂಗಡಿಸಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದರು.

    ಈ ಕಾರ್ಯ ಯಶಸ್ವಿಯಾಗಬೇಕಾದರೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ. ಹೌಸಿಂಗ್‌ಬೋರ್ಡ್ ಮತ್ತು ಕಲ್ಯಾಣ ನಗರದಲ್ಲಿ ಸ್ಥಳೀಯರು ವೆಲ್ಫೇರ್ ಟ್ರಸ್ಟ್ ರಚಿಸಿ ಸಹಕಾರ ನೀಡಿದ್ದಾರೆ. ಇದೇ ಮಾದರಿಯಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲಿಯೂ ವೆಲ್ಫೇರ್ ಟ್ರಸ್ಟ್ ರಚಿಸುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

    ಕಸ ವಿಲೇವಾರಿ ಮಾಡುವುದು ದೇಶದಲ್ಲೇ ಒಂದು ಪಿಡುಗಾಗಿದ್ದು, ಜೊತೆಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಗರಸಭೆ ವಿಧಿಸಿರುವ ಸೂಚನೆಗಳನ್ನು ನಾಗರೀಕರು ಪಾಲಿಸುವ ಮೂಲಕ ಸಾರ್ವಜನಿಕ ಸಹಭಾಗಿತ್ವ ಅಗತ್ಯವಾಗಿದ್ದು, ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕ್ರಮವಹಿಸಬೇಕೆಂದು ಹೇಳಿದರು.

    ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಬೀದಿದೀಪ ಉದ್ಘಾಟಿಸಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ನಗರಸಭೆ ಮತ್ತು ೩೫ ವಾರ್ಡ್ ಸದಸ್ಯರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

    ಸದಸ್ಯ ಎ.ಸಿ. ಕುಮಾರಗೌಡ ಮಾತನಾಡಿ, ನಮ್ಮ ವಾರ್ಡಿನಲ್ಲಿ ಬೀದಿದೀಪ ಇಲ್ಲದೆ ನಾಗರೀಕರಿಗೆ ತೊಂದರೆಯಾಗುತ್ತಿತ್ತು. ಜೊತೆಗೆ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿತ್ತು. ಈ ಕತ್ತಲೆ ಕೂಪದಿಂದ ಹೊರತಂದ ಶಾಸಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

    ಮುಖ್ಯಮಂತ್ರಿಗಳ ವಿಶೇಷ ಅನುದಾನವನ್ನು ಶಾಸಕರು ತಂದು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಗುಣಮಟ್ಟದ ಚರಂಡಿ, ಪಾರ್ಕ್, ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರುಗಳಾದ ಪರಮೇಶ್ ರಾಜ್ ಅರಸ್, ರೂಪಾ ಕುಮಾರ್, ಲಕ್ಷ್ಮಣ್, ಅರುಣ್ ಕುಮಾರ್, ಗೋಪಿ, ಗುರುಮಲ್ಲಪ್ಪ, ಸಿ.ಪಿ ಲಕ್ಷ್ಮಣ, ಮಾಜಿ ಸದಸ್ಯರುಗಳಾದ ದಿನೇಶ್, ಶ್ರೀಧರ್ ಉರಾಳ್, ಜೇಮ್ಸ್, ಎಂ.ಸಿ. ಪ್ರಕಾಶ್, ಪೌರಾಯುಕ್ತ ಬಿ.ಸಿ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

    All city roads to be asphalted after the rainy season ends

  • ನಾಗರೀಕರ ಅರೋಗ್ಯ ಸಮಸ್ಯೆಗೆ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ಪೂರಕ

    ನಾಗರೀಕರ ಅರೋಗ್ಯ ಸಮಸ್ಯೆಗೆ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ಪೂರಕ

    ಚಿಕ್ಕಮಗಳೂರು:  ನಗರವೂ ಸೇರಿದಂತೆ ಚಿಕ್ಕಮಗಳೂರು ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳ ನಾಗರೀಕರ ಆರೋಗ್ಯ ಸಮಸ್ಯೆಗೆ ಪೂರಕವಾಗಿ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ರಕ್ತ ಪರೀಕ್ಷೆ ಮಾಡುವ ಮೂಲಕ ಜನರ ಆರೋಗ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ನಗರದ ಎಂಜಿ ರಸ್ತೆಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಕಟ್ಟಡದಲ್ಲಿ ಈ ನೂತನ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿಯನ್ನು ಉದ್ಘಾಟಿಸಿ ಮಾತನಾಡಿದರು.

    ಗುಣಮಟ್ಟದ ರಕ್ತಪರೀಕ್ಷೆಯ ವರದಿಯನ್ನು ನೀಡಿ ರೋಗಿಗಳು ಶೀಘ್ರ ಗುಣಮುಖರಾಗುವಂತೆ ಖಾಸಗಿಯಾಗಿದ್ದರೂ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.

    ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ನಗರದ ನಾಗರೀಕರು ಈ ಲ್ಯಾಬೋರೇಟರಿಯಲ್ಲಿ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿ ಎಂದರು.

    ಲ್ಯಾಬೋರೇಟರಿ ಮಾಲಿಕ ವಾಸುದೇವ ನಾಯ್ಡು ಮಾತನಾಡಿ, ಥೈರಾಯ್ಡ್ ಪರೀಕ್ಷೆಯ ವರದಿ ಸಿಗಬೇಕಾದರೆ ೨೪ ಗಂಟೆ ಕಾಯಬೇಕಾಗಿತ್ತು. ಆದರೇ, ಈ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಮಾಡಿದ ಕೆಲವೇ ಗಂಟೆಗಳಲ್ಲಿ ವರದಿಯನ್ನು ನೀಡುವುದು ವಿಶೇಷತೆಯಾಗಿದೆ ಎಂದು ಹೇಳಿದರು.
    ಥೈರಾಯ್ಡ್ ಮುಂತಾದ ಪರೀಕ್ಷೆಗಳನ್ನು ಮಾಡಿಸಿ ಅದನ್ನು ಬೆಂಗಳೂರು ಮುಂತಾದೆಡೆ ಕಳುಹಿಸಿ ವರದಿಗಾಗಿ ಕಾಯಬೇಕಿತ್ತು. ಜನರ ಅನುಕೂಲತೆಗೆ ತಕ್ಕಂತೆ ಈ ಲ್ಯಾಬೋರೇಟರಿಯನ್ನು ಪ್ರಾರಂಭಿಸಿದ್ದೇವೆ ಎಂದರು.

    ಪ್ರತೀ ಗಂಟೆಗೆ ವಿವಿಧ ರೀತಿಯ ೪೦ ಪರೀಕ್ಷೆಗಳನ್ನು ಮಾಡಲು ಅವಕಾಶವಿದ್ದು, ೮೦ ಪ್ಯಾರಾಮೀಟರ್‌ಗಳಲ್ಲಿ ಪರೀಕ್ಷೆ ಮಾಡುವ ಹಾರ್ಮೋನ್ ಮಷಿನ್, ಆಟೋಮೇಟೆಡ್ ಬಯೋ ಕೆಮಿಸ್ಟ್ರಿ ಮುಂತಾದ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

    ಈ ಲ್ಯಾಬೋರೇಟರಿಯಲ್ಲಿ ದಿನದ ೨೪ ಗಂಟೆಯೂ ಸೇವೆ ಲಭ್ಯವಿದ್ದು, ನಗರದ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ವರ್ತಕ ವಿಫುಲ್ ಕುಮಾರ್ ಜೈನ್, ಡಾ. ಜೆ.ಪಿ. ಕೃಷ್ಣೇಗೌಡ, ಡಾ. ಗೌರಿ, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜು ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

    Jyoti Diagnostic Laboratory complements citizens’ health problems

  • ಹಿಂದುತ್ವದ ಬದುಕು ಪ್ರಾಚೀನ ಸಂಸ್ಕೃತಿ-ನಾಗರೀಕತೆಯ ಭಾಗ

    ಹಿಂದುತ್ವದ ಬದುಕು ಪ್ರಾಚೀನ ಸಂಸ್ಕೃತಿ-ನಾಗರೀಕತೆಯ ಭಾಗ

    ಚಿಕ್ಕಮಗಳೂರು: ಪ್ರಪಂಚದಲ್ಲಿ ಹಿಂದುತ್ವವು ಬದುಕಿನ ಒಂದು ಪದ್ಧತಿಯ ರೂಪದಲ್ಲಿ ಪ್ರಾಚೀನ ಸಂಸ್ಕೃತಿ, ಧರ್ಮ ಮತ್ತು ನಾಗರೀಕತೆಯ ಭಾಗವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘ ದ ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.

    ನಗರದ ಮಧುವನ ಬಡಾವಣೆಯ ಆರ್‌ಎಸ್‌ಎಸ್ ಸಮರ್ಪಣಾ ಕಚೇರಿಯಲ್ಲಿ ಶನಿವಾರ ಸಂಜೆ ಹ ಮ್ಮಿಕೊಂಡಿದ್ಧ ‘ಹಿಂದುತ್ವ ಪುಸ್ತಕ ಬಿಡುಗಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಹಿಂದೂ ಸಂಸ್ಕೃತಿ ಧರ್ಮವನ್ನು ಆಚರಿಸುವ ಪರಂಪರೆ ನಮ್ಮಲ್ಲಿ ರೂಪುಗೊಂಡಿತು. ಸಣ್ಣ ಸಣ್ಣ ಆ ಚಾರ, ಸಂಸ್ಕಾರಗಳನ್ನು ನೀಡಿದೆ. ಹಿಂದುತನದಲ್ಲಿ ಪರಸ್ತ್ರೀಯರನ್ನು ತಾಯಿಯಂತೆ, ಇತರರ ವಸ್ತುವನ್ನು ಮಣ್ಣಿನಂತೆ, ಎಲ್ಲಾ ಜೀವಸಂಕುಲವನ್ನು ತನ್ನಂತೆಯೇ ನೋಡಬೇಕು. ಈ ಆಚರಣೆಗಳಿಂದ ಜೀವನವನ್ನು ವಿಕಾಸ ಮಾಡಿಕೊಳ್ಳಬೇಕು ಎಂದರು.

    ಹಿಂದುತ್ವದ ಪೂಜೆ, ಪುನಸ್ಕಾರಗಳು, ಪದ್ಧತಿಗಳು, ಆಹಾರ ಮತ್ತು ರೀವಾಜುಗಳನ್ನು ಬಂಧಿಸಿಡುವ ಕೆಲವು ಪ್ರಯತ್ನ ನಡೆದಿವೆ. ಹಿಂದುತ್ವವು ಇಷ್ಟೆಕ್ಕೆ ಸೀಮಿತವಾಗಿಲ್ಲ. ರಿಲೀಜನ್ ಎಂದರೆ ಧರ್ಮವಲ್ಲ. ಧರ್ಮ ಅತ್ಯಂತ ವಿಶಾಲ ಅರ್ಥವುಳ್ಳದ್ದು. ನಮ್ಮ ದೇಶದಲ್ಲಿ ಹಿಂದೂ ರಿಲೀಜನ್ ಎಂಬ ಸಂಗತಿಯಿಲ್ಲ, ಅನೇಕ ರಿಲೀ ಜನ್‌ಗಳಿವೆ, ಅವೆಲ್ಲವೂ ಹಿಂದು ಸ್ವಭಾದ ರೀಲೀಜನ್‌ಗಳೇ ಎಂದು ತಿಳಿಸಿದರು.

    ಹಿಂದುತ್ವ ಒಂದು ಇಸಂ ಅಲ್ಲ, ಹಿಂದುತ್ವ ಎಂಬ ಪದವನ್ನು ಇಂಗ್ಲೀಷ್‌ಗೆ ಭಾಷಾಂತರಿಸಿದರೆ ಅದು ಹಿಂದುತನ ಎಂದಾಗುತ್ತದೆ. ಇಸಂ ರೂಢಿಗತ ಅರ್ಥವು ಸೀಮಿತ ಪರಿಕಲ್ಪನೆಯನ್ನು ಹೊಂದಿದೆ. ಆ ಕಲ್ಪನೆ ಯೊಂದಿಗೆ ನೀವು ನಿಮ್ಮನ್ನು ಹೊಂದಿಸಿಕೊಳ್ಳಬೇಕು. ಹಿಂದುತ್ವದ ಜೊತೆ ಇರುವವರು, ತಮ್ಮ ಸಾಮರ್ಥ್ಯ ಕ್ಕೆ ಹಿಂದುತ್ವವನ್ನು ಒಪ್ಪುವವರು ವಿಕಾಸಗೊಳಿಸಲಿದೆ ಎಂದರು.

    ಹಿಂದುತ್ವ ಎನ್ನುವುದನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಬಹಳ ಉತ್ತಮ ಶಬ್ದಗಳಲ್ಲಿ ತಿಳಿಸಿ ದ್ದಾರೆ. ಏಕರೂಪದ ಸ್ಥಾಯಿಯಾದ ಬದಲಾಯಿಸಲಾಗದ ಹಿಂದು ಧರ್ಮ ಎಂಬುದು ಯಾವುದೂ ಇಲ್ಲ. ಅವರ ಕಾಲದಲ್ಲಿ ಹಿಂದೂಯಿಸಂ ಎಂಬ ಪದವನ್ನೇ ಬಳಸಲಾಗುತ್ತಿತ್ತು. ಆದರೆ ವಾಸ್ತವದಲ್ಲಿ ಅವರು ಹೇಳ ಲು ಪ್ರಯತ್ನಿಸಿರುವುದು ಹಿಂದುತನ ಎನ್ನುವುದು ಹೊರತು, ಇಸಂ ಅಲ್ಲ ಎಂದು ಹೇಳಿದರು.

    ಪ್ರಸ್ತುತ ವಿಶ್ವದಲ್ಲಿ ಸಾಮಾಜಿಕ, ಆರ್ಥಿಕ, ಮಾನಸಿಕ ಸಮಸ್ಯೆಗಳ ರೂಪದಲ್ಲಿ ಕಾಡುತ್ತಿರುವ ಅನೇಕ ಅಸ್ಥಿ ತ್ವದ ಬಿಕ್ಕಟ್ಟುಗಳಿವೆ ಪರಿಹಾರವನ್ನು ನೀಡಲು ಸಾಧ್ಯವಿರುವುದು ಹಿಂದುತ್ವಕ್ಕೆ ಮಾತ್ರ. ವರ್ತಮಾನ ಸಂದರ್ಭ ದಲ್ಲಿ ಹಿಂದುತ್ವದ ದರ್ಶನ, ಸಿದ್ದಾಂತ, ಪರಂಪರೆ, ಆಚಾರ-ವಿಚಾರಗಳನ್ನು ಅರ್ಥಮಾಡಿಕೊಂಡು ಪದ ಬಳಕೆಯೊಂದಿಗೆ ಪ್ರಸ್ತುತಪಡಿಸುವುದು ಎಲ್ಲರಿಗೂ ಸವಾಲಿನ ಕೆಲಸವಾಗಿದೆ ಎಂದರು.

    ಹಿಂದುತ್ವದ ಮೇಲೆ ಕಾಲ್ಪನಿಕ ಆರೋಪಗಳನ್ನು ಹೊರಿಸುವ ಬದಲು ನಿಜವಾದ ಹಿಂದುತ್ವವನ್ನು ಪಾಲಿ ಸಬೇಕು. ಹಿಂದುತ್ವದ ಹೆಸರು ತೆಗೆದುಕೊಳ್ಳದಿದ್ದರೂ ಪರವಾಗಿಲ್ಲ. ನಡವಳಿಕೆಯನ್ನು ಪುರಸ್ಕರಿಸಬೇಕು. ಜಗ ತ್ತಿಗೆ ಧರ್ಮ, ಸಮತೋಲನ ಮತ್ತು ಧೈರ್ಯವನ್ನು ನೀಡುವ, ಎಲ್ಲಾ ವಿರೋಧಗಳನ್ನು ಸರಿದೂಗಿಸಿಕೊಂ ಡು ಪ್ರಗತಿಗೆ ಸಹಾಯ ಮಾಡುವ ಹೊಸ ಜಗತ್ತನ್ನು ರಚಿಸಬೇಕಾದರೆ ಹಿಂದುತ್ವ ಧರ್ಮದಲ್ಲಿ ಸಾಗಬೇಕಿದೆ ಎಂದರು.

    ಹಿಂದುತ್ವ ಯಾವುದೇ ಒಂದು ಜಾತಿಯ ಪ್ರಾಬಲ್ಯದ ಬಗ್ಗೆ ಮಾತನಾಡುವುದಿಲ್ಲ. ನಿಜವಾದ ಹಿಂದು ತ್ವವವನ್ನು ಅನುಸರಿಸುವ ಮೂಲಕ ವಿಕೃತಿ ಭಾವನೆಗಳನ್ನು ಸಂಪೂರ್ಣ ತೊಲಗಿಸಬೇಕು. ನಮ್ಮ ಮುಂದೆ ಸಂತರ ನಡವಳಿಕೆ ಹಾಗೂ ಜೀವನದ ಉದಾಹರಣೆಗಳಿವೆ. ಸಮಾಜದಲ್ಲಿ ಈ ನಡವಳಿಕೆಯ ಪರಿವರ್ತನೆ ಬದಲಾವಣೆಯನ್ನು ತರುವುದು ಅವಶ್ಯಕವಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ವಿಭಾಗ ಸಂಘ ಚಾಲಕ ಮಲ್ಲಿಕಾರ್ಜುನ ಉಪ ಸ್ಥಿತರಿದ್ದರು. ನಗರ ಪ್ರಚಾರ ಪ್ರಮುಖ್ ವಿಕ್ರಮ್ ನಿರೂಪಿಸಿದರು. ಮಂಥನ ಸದಸ್ಯರಾದ ಪ್ರವೀಣ್ ಸ್ವಾಗತಿಸಿ ದರು. ಶೃತಿ ವಂದಿಸಿದರು.

    Hinduism is a part of ancient culture and civilization.

  • ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ನಗರ ಮಂಡಲ ಪ್ರತಿಭಟನೆ

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ನಗರ ಮಂಡಲ ಪ್ರತಿಭಟನೆ

    ಚಿಕ್ಕಮಗಳೂರು: ವಿವಿಧ ವಸತಿ ಯೋಜನೆಗಳಡಿ ನಿವೇಶನ, ಮನೆ ನೀಡುವಂತೆ ಒತ್ತಾಯಿಸಿ ಇಂದು ಬಿಜೆಪಿ ನಗರ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಬಿಜೆಪಿ ಜಿಲ್ಲಾ ಕಚೇರಿ ಪಾಂಚಜನ್ಯದಿಂದ ಹೊರಟ ನೂರಾರು ಕಾರ್ಯಕರ್ತರು ನಗರಸಭೆ ಕಚೇರಿವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೇ ಮನೆಗಳನ್ನು ವಿತರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

    ನಗರಸಭೆ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಆಶ್ರಯ, ಅಂಬೇಡ್ಕರ್ ಅವಾಜ್ ಯೋಜನೆ, ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿಯಲ್ಲಿ ಮನೆಗಳನ್ನು ಮಂಜೂರು ಮಾಡುವ ಜೊತೆಗೆ ಅದಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

    ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಗಳ ಹಣ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ೪೬ ಸಾವಿರಕ್ಕೂ ಅಧಿಕ ಅರ್ಹ ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಪಡಿಸಿರುವ ಕ್ರಮವನ್ನು ಖಂಡಿಸಿದ ಅವರು, ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

    ೯೪-ಸಿ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು. ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಬಾರದು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದ್ದಾರೆ.

    ೭೦ ವರ್ಷ ಮೇಲ್ಪಟ್ಟ ಎಲ್ಲಾ ವರ್ಗದವರಿಗೂ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆ ಜಾರಿಗೊಳಿಸಿದ್ದರೂ ಕರ್ನಾಟಕದಲ್ಲಿ ಅನುಷ್ಠಾನಗೊಳಿಸದಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ತಕ್ಷಣವೇ ಅನುಷ್ಠಾನಕ್ಕೆ ಕ್ರಮ ಜರುಗಿಸಬೇಕು. ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.

    ಪ್ರತಿಭಟನೆಯಲ್ಲಿ ಬಿಜೆಪಿ ನಗರಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿ ಕೌಶಿಕ್, ಮಾಜಿ ನಗರಸಭಾಧ್ಯಕ್ಷರಾದ ಸುಜಾತ ಶಿವಕುಮಾರ್, ಮುತ್ತಯ್ಯ, ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರಾದ ದೀಪಾ ರವಿಕುಮಾರ್, ಅಮೃತೇಶ್, ರೂಪಾ ಕುಮಾರ್, ಲಲಿತಾಬಾಯಿ, ರಾಜು, ಮಂಜುನಾಥ್ ಮತ್ತು ಬಿಜೆಪಿ ಮುಖಂಡರಾದ ಸಂತೋಷ್ ಕೋಟ್ಯಾನ್, ಕನಕರಾಜ್ ಅರಸ್, ಮಂಜುನಾಥ್, ಜೆಸೆಂತಾ ಅನಿಲ್‌ಕುಮಾರ್, ಕೆ.ಪಿ. ವೆಂಕಟೇಶ್, ವಕ್ತಾರ ಹೆಚ್.ಎಸ್. ಪುಟ್ಟಸ್ವಾಮಿ ಮತ್ತಿತರರು ಭಾಗವಹಿಸಿದ್ದರು

    BJP Nagar Mandal protests demanding fulfillment of various demands

  • ಸರ್ಕಾರ ಬದುಕಿಗೆ ಆದ್ಯತೆ ನೀಡಿ ಮೂಲ ಸೌಕರ್ಯ ಕಲ್ಪಿಸಿದೆ

    ಸರ್ಕಾರ ಬದುಕಿಗೆ ಆದ್ಯತೆ ನೀಡಿ ಮೂಲ ಸೌಕರ್ಯ ಕಲ್ಪಿಸಿದೆ

    ಚಿಕ್ಕಮಗಳೂರು: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಬಡವರ್ಗದ ಮಕ್ಕಳಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ತಾಲ್ಲೂಕಿನ ಅಲ್ಲಂಪುರ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಸೇವಾ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನಲಿಕಲಿ ಟೇಬಲ್ ಮತ್ತು ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಆರೋಗ್ಯ, ಶಿಕ್ಷಣ, ಬದುಕಿಗೆ ಆದ್ಯತೆ ನೀಡಿ ಅನುದಾನ ನೀಡುವುದು ಸರ್ಕಾರ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವ ಅಗತ್ಯ ಎಂದರು.

    ಹುಟ್ಟಿದ ಮೇಲೆ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡದಿದ್ದರೆ ಸಾರ್ಥಕತೆ ಆಗುವುದಿಲ್ಲ, ಇಲ್ಲಿ ಸೇರಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ವಿದ್ಯಾರ್ಥಿಗಳು ತಮ್ಮ ಬದುಕಿನುದ್ದಕ್ಕೂ ನೆನಪಿನಲ್ಲಿಟ್ಟುಕೊಂಡಿರುತ್ತಾರೆ ಎಂದು ಹೇಳಿದರು.

    ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ತಾಲ್ಲೂಕಿನ ೭೦ ಸರ್ಕಾರಿ ಪ್ರಾಥಮಿಕ ಹಿರಿಯ ಮತ್ತು ಕಿರಿಯ ಶಾಲೆಗಳಿಗೆ ೧೨ ಲಕ್ಷ ರೂ ವೆಚ್ಚದಲ್ಲಿ ಬೆಂಗಳೂರಿನ ಸಿನೊಪ್ಸಿಸ್ ಮತ್ತು ಇಂಡಿಯಾ ಸುಧಾರ್ ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇವರು ನಲಿಕಲಿ ಟೇಬಲ್ ಮತ್ತು ಚೇರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ಲಾಘಿಸಿದರು.

    ಎಲ್ಲವನ್ನೂ ಸರ್ಕಾರದಿಂದಲೇ ಮಾಡಲು ಅಸಾಧ್ಯ, ಆದ್ದರಿಂದ ಪ್ರತೀ ವರ್ಷ ನಗರದಲ್ಲೊಂದು, ಗ್ರಾಮೀಣ ಭಾಗದಲ್ಲೊಂದು ಸರ್ಕಾರಿ ಶಾಲೆಗಳನ್ನು ಆಯ್ಕೆಮಾಡಿಕೊಂಡು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಲು ಬೆಂಗಳೂರಿನಲ್ಲಿ ಉದ್ದಿಮೆದಾರರನ್ನು ಸಂಪರ್ಕಿಸುವುದಾಗಿ ಭರವಸೆ ನೀಡಿದರು.

    ಮಾತನಾಡಲು ಮಾತೃಭಾಷೆ ಕನ್ನಡ, ಬದುಕಲು ಆಂಗ್ಲಭಾಷೆ ಎಂಬ ಘೋಷವಾಕ್ಯದೊಂದಿಗೆ ರಾಜ್ಯಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾಲ್ಲೂಕಿನಲ್ಲಿ ೧೭ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭ ಮಾಡಲು ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.

    ಪ್ರತಿದಿನ ಶಾಲೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರು ನೀಡಿರುವ ಸಂವಿಧಾನದ ಪೀಠಿಕೆಯನ್ನು ಓದಿಸಬೇಕು, ವಿಶ್ವಗುರು ಬಸವಣ್ಣನವರ ಒಂದು ವಚನವನ್ನು ಹೇಳಿಕೊಡುವ ಮೂಲಕ ಅದರ ಅರ್ಥವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

    ಸಿವಿಲ್ ನ್ಯಾಯಾಧೀಶರಾದ ಹನುಮಂತಪ್ಪ ಮಾತನಾಡಿ, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಾದರೂ ಒಂದು ದಿನ ಫಲ ಕೊಡುತ್ತದೆ ಎಂಬುದನ್ನು ಅರ್ಥಪೂರ್ಣಗೊಳಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದ ಅವರು, ಅಂಬೇಡ್ಕರ್, ಬಸವ ಮಾರ್ಗದ ಕ್ರಾಂತಿಗೀತೆಯನ್ನು ಹಾಡಿ ರಂಜಿಸಿದರು.

    ಭ್ರಾತೃತ್ವ ಭಾವನೆ ಬೆಳೆಯದಿದ್ದರೆ ಸಮಾಜದಲ್ಲಿ ಸಮಾನತೆ ಬೆಳೆಯುವುದಿಲ್ಲ, ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಇದನ್ನು ಬಿತ್ತಬೇಕು. ಅಕ್ಷರದಿಂದ ವಂಚಿತರಾಗಿದ್ದ ಸಮುದಾಯದಲ್ಲಿ ಜನಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂದು ವಿಶ್ವದ ಅಗ್ರಗಣ್ಯ ನಾಯಕರಾಗಿದ್ದಾರೆಂದು ಶ್ಲಾಘಿಸಿದರು.

    ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಸರ್ಕಾರಿ ಶಾಲೆಯನ್ನು ಧಮನ ಮಾಡುವ ಮಟ್ಟಕ್ಕೆ ಬೆಳೆದುನಿಂತಿದೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಏಕಲವ್ಯನ ಹೆಬ್ಬೆರಳು ಕತ್ತರಿಸಿದಂತೆ ಆಗಬಾರದು. ಶಿಕ್ಷಣ ಎಲ್ಲರ ಸ್ವತ್ತಾಗಬೇಕೆಂದು ಹೇಳಿದರು.

    ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಇದನ್ನು ರೂಢಿಸಿಕೊಂಡಾಗ ಮಾತ್ರ ಶೇ.೧೦೦ ರಷ್ಟು ಸಾಧನೆ ಮಾಡಲು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

    ಶಿಕ್ಷಕಿ ಗೀತಾ ಕೆ.ಹೆಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಗ್ರಾಪಂ ಸದಸ್ಯ ರಮೇಶ್‌, ಜಯರಾಜ್‌ ಅರಸ್‌, ಶಂಕರ್‌, ಸುಂದರೇಶ್‌, ಉಪಸ್ಥಿತರಿದ್ದರು. ಮೊದಲಿಗೆ ಮುಖ್ಯ ಶಿಕ್ಷಕ ಜೋಗಪ್ಪ ಸ್ವಾಗತಿಸಿದರು.

    The government has prioritized life and provided infrastructure.

  • ಎನ್ ಆರ್ ಪುರ ಮುಖ್ಯ ರಸ್ತೆ ಅಭಿವೃದ್ದಿಗೆ 60 ಕೋಟಿ ಮಂಜೂರು ಸಚಿವ ಸಂಪುಟ ಅನುಮೋದನೆ

    ಎನ್ ಆರ್ ಪುರ ಮುಖ್ಯ ರಸ್ತೆ ಅಭಿವೃದ್ದಿಗೆ 60 ಕೋಟಿ ಮಂಜೂರು ಸಚಿವ ಸಂಪುಟ ಅನುಮೋದನೆ

    ಎನ್ ಆರ್ ಪುರ: ಎನ್ ಆರ್ ಪುರ ಮುಖ್ಯ ರಸ್ತೆ ಅಗಲೀಕರಣಕ್ಕೆ ಕಳೆದ 5-6 ತಿಂಗಳುಗಳಿಂದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಮನವಿ ಸಲ್ಲಿಸಲಾಗಿತ್ತು ಕೋರಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೀಗ 60 ಕೋಟಿ ಅಂದಾಜು ಮೊತ್ತದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ನಿಗಮ ಅಧ್ಯಕ್ಷರು ಮಾಜಿ ವಿಧಾನ ಪರಿಷತ್ ಸದಸ್ಯರದ ಎಂ,ಶ್ರೀನಿವಾಸ್ ತಿಳಿಸಿದರು.

    ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇದು ಈ ಭಾಗದ ಜನರ ದಶಕಗಳ ಬೇಡಿಕೆಯಾಗಿತ್ತು ನರಸಿಂಹರಾಜಪುರಕ್ಕೆ ಹಿಂದೆ ಯಡೆಹಳ್ಳಿ ಎಂಬ ಹೆಸರಿತ್ತು ಮೈಸೂರು ಮಹಾರಾಜರು ಬಂದ ಹಿನ್ನಲೆಯಲ್ಲಿ ನರಸಿಂಹರಾಜಪುರ ಎಂಬ ಹೆಸರು ಮರು ನಾಮಕರಣಕ್ಕೆ ಕಾರಣವಾಯಿತು.

    ನೂರು ವರ್ಷದ ನಂತರ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 2016ರಲ್ಲಿ 68 ಕೆರೆಗಳಗೆ ನೀರು ಒದಗಿಸುವ ಕಡೈನಬೈಲು ಏತ ನೀರಾವರಿ ಉದ್ಘಾಟನೆಗೆ ಬಂದ ಸಂಧರ್ಭದಲ್ಲಿ ಮುಖ್ಯಮಂತ್ರಿಗಳಿಗೆ ನರಸಿಂಹರಾಜಪುರಕ್ಕೆ ಶತಮನೋತ್ಸವ ತುಂಬಿದ ಸಂಧರ್ಭದಲ್ಲಿ ಭೇಟಿ ನೀಡಿರುವುದರಿಂದ ದೊಡ್ಡ ಕೋಡುಗೆ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ್ದರು

    ಅದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳು 35 ಕೋಟಿ ವೆಚ್ಚದಲ್ಲಿ ಹೊನ್ನೆಕುಡುಗೆ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದರು ನಂತರ ಪಟ್ಟಣದಿಂದ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 5 ಕೋಟಿ ಅನುದಾನ ಒದಗಿಸಿದರು. ಅಲ್ಲದೆ ನರಸಿಂಹರಾಜಪುರದ ರಸ್ತೆ ಸಮುದಾಯ ಭವನ ದೇವಾಲಯ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತರಲಾಗಿದೆ ಎಂದರು.

    ಇನ್ನೂ ಮುಂದುವರೆದಂತೆ ಇದೀಗ ಮುಖ್ಯ ರಸ್ತೆ ಅಗಲೀಕರಣಕ್ಕೆ 60 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಸಚಿವ ಸಂಪಟ ಅನುಮೋದನೆ ನೀಡಿದ್ದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಇದಕ್ಕೆ ಸಹಕರಿಸಿದ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಅಭಿನಂದನೆ ತಿಳಿಸಿದರು.

    ಎನ್ ಆರ್,ಪುರ7: ಎನ್ ಆರ್ ಪುರ ರಸ್ತೆ ಅಗಲೀಕರಣಕ್ಕೆ 60 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಸಚಿವ ಸಂಪಟ ಅನುಮೋದನೆ ನೀಡಿದ್ದು ಈ ಹಿನ್ನಲೆಯಲ್ಲಿ ಎಂ,ಶ್ರೀನಿವಾಸ್ ರವರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.

    Cabinet approves 60 crore sanction for development of NR Pura main road

  • ನಿವೃತ್ತ ಪಿಂಚಣಿದಾರರಿಗೆ ಯಥಾವತ್ ಸೌಲಭ್ಯ ಪರಿಷ್ಕರಿಸಲು ಮನವಿ

    ನಿವೃತ್ತ ಪಿಂಚಣಿದಾರರಿಗೆ ಯಥಾವತ್ ಸೌಲಭ್ಯ ಪರಿಷ್ಕರಿಸಲು ಮನವಿ

    ಚಿಕ್ಕಮಗಳೂರು:  ಕೇಂದ್ರಸರ್ಕಾರ ಸಂಸತ್‌ನಲ್ಲಿ ಆರ್ಥಿಕ ಬಿಲ್ ಸಲ್ಲಿಸುವಾಗ ೮ನೇ ವೇತನ ಆಯೋಗ ರಚನೆಯಾಗಿ ಕಾರ್ಯಾಚರಣೆಯಲ್ಲಿದ್ದು, ನಿವೃತ್ತ ಪಿಂಚಣಿದಾರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ತುಟ್ಟಿಭತ್ಯೆ ಪರಿಷ್ಕರಿಸಲು ಕಷ್ಟಸಾಧ್ಯವೆಂದು ಹೇಳಿರುವುದನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ೨೦೨೫ ರ ಮಾಚ್.೨೫ ರಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಬಿಲ್ ಸಲ್ಲಿಸುವಾಗ ನಿವೃತ್ತ ಸರ್ಕಾರಿ ನೌಕರರ ಪಿಂಚಣಿದಾರರಿಗೆ ೮ನೇ ವೇತನ ಆಯೋಗದಲ್ಲಿ ಹಾಲಿ ಇರುವ ಸೌಲಭ್ಯಗಳನ್ನು ಪರಿಷ್ಕರಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಎಲ್ಲಾ ನಿವೃತ್ತ ಪಿಂಚಣಿದಾರರ ಒಕ್ಕೂಟಗಳು ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ನಿರ್ದೇಶನದಂತೆ ಜಿಲ್ಲಾ ಮಟ್ಟದ ಸಭೆಯನ್ನು ಆಹ್ವಾನಿಸಿ ಚರ್ಚಿಸಲಾಗಿದ್ದು, ೦೧-೦೪-೨೦೨೫ಕ್ಕಿಂತ ಮುಂಚಿತವಾಗಿ ನಿವೃತ್ತರಾದ ನೌಕರರಾದ ಪಿಂಚಣಿದಾರರಿಗೆ, ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಕಾಲ ಕಾಲಕ್ಕೆ ನೀಡುವ ತುಟ್ಟಿ ಭತ್ಯೆಗಳನ್ನು ಪುನರ್ ಪರಿಶೀಲಿಸಿ ಯಥಾವತ್ತಾಗಿ ಜಾರಿಮಾಡುವಂತೆ ಮನವಿ ಮಾಡಿದ್ದಾರೆ.

    ಈಗ ನೀಡುತ್ತಿರುವ ಸೌಲಭ್ಯಗಳನ್ನು ೮ನೇ ವೇತನ ಆಯೋಗದಲ್ಲಿಯೂ ಸೇರಿಸಿ ಪಿಂಚಣಿದಾರರಿಗೆ ಅನುಕೂಲ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

    ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಎ. ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಕೃಷ್ಣಮೂರ್ತಿ, ರಾಜ್ಯ ಪರಿಷತ್ ಸದಸ್ಯ ಬಿ.ಶಿವಣ್ಣ, ಉಪಾಧ್ಯಕ್ಷರಾದ ಭೋಜೇಗೌಡ, ಹೆಚ್.ಆರ್ ವಿರೂಪಾಕ್ಷಪ್ಪ, ಬಿ.ಎನ್. ಉಮಾಪತಿ, ಖಜಾಂಚಿ ಕಾಳಯ್ಯ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರ

    Appeal to revise existing benefits for retired pensioners

  • ಅಂಬಳೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

    ಅಂಬಳೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

    ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗುತ್ತಿರುವುದಕ್ಕೆ ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಪ್ರಮುಖ ಕಾರಣವಾಗಿದೆ ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದರು.

    ಅವರು ಇಂದು ಮಳಲೂರು, ಅಂಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಳೆ ಗ್ರಾಮದಲ್ಲಿ ಸುಮಾರು ೨೨ ಕೋಟಿ ರೂ ವೆಚ್ಚದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಮೊರಾರ್ಜಿ, ಆಶ್ರಮ, ಡಾ. ಬಿ.ಆರ್. ಅಂಬೇಡ್ಕರ್ ಮುಂತಾದ ವಸತಿ ಶಾಲೆಗಳಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕೂಲಿ ಕಾರ್ಮಿಕರ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕೆಂದು ಬಯಸುತ್ತಿದ್ದಾರೆಂದು ವಿವರಿಸಿದರು.

    ಹಾಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ವತಿಯಿಂದ ನಡೆಯುತ್ತಿದ್ದ ವಸತಿ ಶಾಲೆಗೆ ಇಂದು ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಈ ನಿಟ್ಟಿನಲ್ಲಿ ವಸತಿ ಶಾಲೆಗಳ ಪ್ರಾರಂಭಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದರು.

    ಈ ಸುಸಜ್ಜಿತ ವಸತಿ ಶಾಲಾ ಕಟ್ಟಡ ನಿರ್ಮಾಣವಾದರೆ ಸುಮಾರು ೨೫೦ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅನುಕೂಲವಾಗಲಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರವಾದ್ದರಿಂದ ಅರಣ್ಯ ಇಲಾಖೆ ಅನುಮತಿ ಕೊಡುವುದು ವಿಳಂಭವಾಗಿದ್ದರಿಂದ ಆರು ತಿಂಗಳು ತಡವಾಗಿದೆ ಎಂದು ಹೇಳಿದರು.

    ಮುಂದಿನ ದಿನಗಳಲ್ಲಿ ವಸತಿ ಶಾಲೆಗಳಲ್ಲಿಯೇ ಪಿಯುಸಿ ತರಗತಿಗಳು ಪ್ರಾರಂಭವಾಗಬೇಕು ಆಗಮಾತ್ರ ಬಡ ಮಕ್ಕಳಿಗೆ ನೀಟ್ ಸಿಇಟಿ ಪರೀಕ್ಷೆಗಳಿಗೆ ತರಬೇತಿ ಹೊಂದಲು ಸಹಕಾರಿಯಾಗಲಿದೆ. ವಸತಿ ಶಾಲೆಗಳಲ್ಲಿ ಈಗಾಗಲೇ ಊಟ, ವಸತಿ, ಶಿಕ್ಷಣ ಉತ್ತಮವಾಗಿದೆ ಎಂದು ತಿಳಿಸಿದರು.

    ಇನ್ನೊಂದು ವರ್ಷದಲ್ಲಿ ಈ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಲೋಕಾರ್ಪಣೆಯಾಗಲಿದೆ ಎಂದು ಭರವಸೆ ನೀಡಿದ ಅವರು, ತಾವು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವುದರ ಜೊತೆಗೆ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಸಿ ಮಲೆನಾಡಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಗುರಿಹೊಂದಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾಲತಿ, ಕ್ರೈಸ್ ಸಂಸ್ಥೆಯ ಎಇಇ ರಾಮು ಗ್ಯಾರಂಟಿ ಯೋಜನೆಯ ಸದಸ್ಯ ಬಸವರಾಜ್‌, ಅಂಬಳೆ ಗ್ರಾಪಂ ಅಧ್ಯಕ್ಷ ದೊಡ್ಡೇಗೌಡ, ಮಳಲೂರು ಗ್ರಾಪಂ ಅಧ್ಯಕ್ಷೆ ಮೇದನಿ ದೇವಿಕ, ಉಪಾಧ್ಯಕ್ಷೆ ಶ್ವೇತಾ ಪದ್ಮೇಗೌಡ, ಪ್ರಾಂಶುಪಾಲ ನಾಗೇಶ್‌, ಎಂ.ಡಿ.ರವಿ, ಬೀಮಯ್ಯ, .ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಪ್ರಾಂಶುಪಾಲ ನಾಗೇಶ್ ಸ್ವಾಗತಿಸಿದರು.

    Foundation stone laid for new building of Ambedkar Residential School in Ambala