Category: ಚಿಕ್ಕಮಗಳೂರು

  • ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಲು ಸೂಚನೆ

    ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಲು ಸೂಚನೆ

    ಚಿಕ್ಕಮಗಳೂರು:  ತಾಲ್ಲೂಕಿನಲ್ಲಿ ಸೋರುತ್ತಿರುವ ಶಾಲಾ ಕೊಠಡಿಗಳ ದುರಸ್ಥಿ ಹಾಗೂ ಎಲ್ಲಾ ಶಾಲಾ ಕಟ್ಟಡಗಳು ಸುಭದ್ರವಾಗಿವೆ ಎಂಬ ಬಗ್ಗೆ ಪಟ್ಟಿಮಾಡಿ ಪರಿಶೀಲಿಸಿ ವರದಿ ಕೊಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಇಂಜಿನಿಯರ್‌ಗೆ ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಶಂಕರ್ ಕೊರವ ತಿಳಿಸಿದರು.

    ಅವರು ಇಂದು ತಾಲ್ಲೂಕು ಪಂಚಾಯಿತಿ ಅಂಬೇಡ್ಕರ್ ಸಭಾ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿ ಇಲಾಖೆಯಲ್ಲಿ ಕಾಲ ಕಾಲಕ್ಕೆ ರಸಗೊಬ್ಬರ, ಬಿತ್ತನೆ ಬೀಜ ಮುಂತಾದ ರೈತರಿಗೆ ಅಗತ್ಯವಾಗಿರುವ ವಸ್ತುಗಳನ್ನು ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

    ತಾಲ್ಲೂಕಿನ ಕುಡಿಯುವ ನೀರಿನ ಘಟಕಗಳಿಗೆ ಮೆಸ್ಕಾಂ ಇಲಾಖೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕೆಂದು ತಿಳಿಸಲಾಗಿದೆ ಎಂದು ಹೇಳಿ ಸರ್ಕಾರದ ಯೋಜನೆಗಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು ಹಾಗೂ ಗ್ರಾ.ಪಂ ವ್ಯಾಪ್ತಿಯ ಗ್ರಾಮಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವ ಮೂಲಕ ವರದಿ ನೀಡಬೇಕೆಂದು ಹೇಳಿದರು.

    ಮಳೆಗಾಲವಾಗಿರುವ ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆಗಳ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ತಿಳಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆಯ ಶಾಲಾ ಕೊಠಡಿಗಳನ್ನು ನವೀಕರಣಗೊಳಿಸುವ ಸಂಬಂಧ ಚರ್ಚಿಸಲಾಗಿದ್ದು, ಶಾಲಾ ಕಟ್ಟಡ ದುರಸ್ಥಿಗೆ ತಾ.ಪಂ ಅನುದಾನ ಕೊಡುವ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

    ಮಳೆಗಾಲ ಪ್ರಾರಂಭವಾಗಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಆದ್ಯತೆ ಮೇಲೆ ಏನು ಕ್ರಮವಹಿಸಬೇಕೆಂಬ ಕುರಿತು ಎನ್‌ಆರ್‌ಇಜಿಎ ಗೆ ಸಂಬಂಧಿಸಿದ ಇಲಾಖೆಗಳ ಸೆಲೆಕ್ಷನ್ ಸೇರಿದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಮೆಸ್ಕಾಂ ಇಲಾಖೆ ತಾಲ್ಲೂಕಿನ ಕುಡಿಯುವ ನೀರಿನ ಘಟಕಗಳಿಗೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸೂಚನೆ ನೀಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಸರಬರಾಜಾಗುತ್ತಿರುವ ಆಹಾರ ಪೊಟ್ಟಣಗಳ ಮೇಲೆ ನಮೂದಾಗಿರುವ ಅವಧಿಯನ್ನು ತಪಾಸಣೆ ಮಾಡಿ ಕ್ರಮವಹಿಸುವಂತೆ ತಿಳಿಸಲಾಯಿತು ಎಂದರು.

    ಹಿಂದಿನ ತಾ.ಪಂ ಸಭೆಗೆ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ಸೂಚನೆ ಪತ್ರ ನೀಡಲಾಗಿದ್ದು, ಇಂದು ನಡೆದ ಸಾಮಾನ್ಯ ಸಭೆಗೆ ಬಹುತೇಕ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿ ವರದಿ ನೀಡಿದ್ದಾರೆ ಎಂದರು.

    Instructions to take action for the repair of school buildings

  • ಸಚಿವ ಪ್ರಿಯಾಂಕ್ ಖರ್ಗೆಗೆ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಗೊತ್ತಿಲ್ಲವೇ ….?

    ಸಚಿವ ಪ್ರಿಯಾಂಕ್ ಖರ್ಗೆಗೆ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಗೊತ್ತಿಲ್ಲವೇ ….?

    ಚಿಕ್ಕಮಗಳೂರು: ಎಲ್ಲಾ ವಿಚಾರದ ಬಗ್ಗೆ ಜ್ಞಾನ ಇರುವ ಸರ್ವಜ್ಞನ ರೀತಿ ವರ್ತಿಸುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವರ ಪರಮಾಪ್ತ ಲಿಂಗರಾಜು ಕಣ್ಣಿ ಡ್ರಗ್ಸ್ ದಂಧೆ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗದಿರುವುದು ಆಶ್ಚರ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದರು.

    ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಆಪ್ತ, ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲರ ಪರಮಾಪ್ತ, ಕಲ್ಬುರ್ಗಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು ಕಣ್ಣಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಆರೋಪಕ್ಕೆ ಮಹರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಆದರೆ ಕರ್ನಾಟಕದ ಪೊಲೀಸರಿಗೆ ಜಾಲದ ಬಗ್ಗೆ ಯಾಕೆ ಗೊತ್ತಾಗಲಿಲ್ಲ ಎಂದು ಪ್ರಶ್ನಿಸಿದರು.

    ಪ್ರಿಯಾಂಕ್ ಖರ್ಗೆ ಜಾಗತಿಕವಾಗಿ ನಡೆಯುವ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ತಮ್ಮ ಮೂಗಿನಡಿ ತಮ್ಮ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿ, ಬೆಂಗಳೂರು ಸೇರಿದಂತೆ ಕೆಲವು ಮೆಟ್ರೋಪಾಲಿಟನ್ ಸಿಟಿಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ಜಾಲ ರಾಜ್ಯದ ಉದ್ದಗಲಕ್ಕೂ ವಿಸ್ತರಿಸುತ್ತಿರುವುದು ಕಳವಳಕಾರಿ. ಇದರಿಂದ ಸಂಗ್ರಹವಾಗು ಹಣದಿಂದ ಕೊಲೆ, ಸುಲಿಗೆ, ಭಯೋತ್ಪಾದನೆ, ಲವ್‌ಜಿಹಾದ್ ನಂತಹ ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ದೂರಿದರು.

    ಡ್ರಗ್ಸ್ ಸೇವಿಸುವವರು ತಾವು ಯಾವ ಸ್ಥಿತಿಯಲ್ಲಿದ್ದೇವೆ ಎನ್ನುವ ಅರಿವಿಲ್ಲದೆ ಕೈಂ ಮಾಡುತ್ತಿದ್ದಾರೆ. ಸರ್ಕಾರ ಡ್ರಗ್ಸ್ ದಂಧೆ ಬಗ್ಗೆ ಶೂನ್ಯ ಸಹಿಷ್ಣುತೆ ತೋರಬೇಕು. ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಅನೈತಿಕ ಆದಾಯದ ಮೂಲವೂ ಇದೇ ಡ್ರಗ್ಸ್ ದಂಧೆ ಎನ್ನುವುದು ಅಪಾಯಕಾರಿ. ಕಲ್ಬುರ್ಗಿಯಲ್ಲಿ ಕೆಲ ತಿಂಗಳ ಹಿಂದೆ ಡ್ರಗ್ಸ್ ಪೆಡ್ಲರ್‌ಗಳನ್ನು ವಶಕ್ಕೆ ಪಡೆದರೂ ಗಂಭೀರ ಕ್ರಮ ಆಗಿಲ್ಲ ಎನ್ನುವ ಆರೋಪ ಇದೆ. ಇದದರ ಹಿಂದೆ ಅಧಿಕಾರಸ್ಥರ ಕೃಪಾಕಟಾಕ್ಷ ಇದೆಯಾ ಎನ್ನುವ ಬಗ್ಗೆ ತನಿಖೆ ಆಗಬೇಕು ಎಂದರು.

    ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ಕೋಟ್ಯಾಂತರ ರೂ. ಹಣ ಹೊಡೆಯುವ ಹುನ್ನಾರ ನಡೆದಿದೆ. ಸರ್ಕಾರ ಯೋಜನೆಬಗ್ಗೆ ಮರುಪರಿಶೀಲಿಸದೇ ಇದ್ದಲ್ಲಿ ಹೋರಾಟ ಅನಿವಾರ್ಯ ಹೇಳಿದರು.

    ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಯೋಜನೆಗೆ ೧೭೬೬೦ ಕೋಟಿ ರೂ.ನ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಮುಂದೆ ಇದು ೨೦ ಸಾವಿರ ಕೋಟಿಗೆ ತಲುಪಲಿದೆ. ಆದರೆ ಮುಂಬೈನಲ್ಲಿ ಸಮುದ್ರದ ಮಧ್ಯೆ ನಿರ್ಮಿಸಿರುವ ರಸ್ತೆಗಿಂತಲೂ, ಜಮ್ಮು ಕಾಶ್ಮೀರದಲ್ಲಿ ಪರ್ವತವನ್ನು ಸೀಳಿ ಮಾಡಿರುವ ರಸ್ತೆಗಿಂತ ಹೆಚ್ಚು ಅನುದಾನವನ್ನು ಬೆಂಗಳೂರಿನ ಟನಲ್ ರಸ್ತೆಗೆ ಇಡಲಾಗುತ್ತಿದೆ. ಈಗಾಗಲೇ ಬೆಂಗಳೂರು ನಗರ ಯೋಜನೆಯನ್ನು ಹಳ್ಳ ಹಿಡಿಸಿ ಆಗಿದೆ. ಈಗ ಟನಲ್ ರಸ್ತೆ ಹೆಸರಲ್ಲಿ ಹಣ ನುಂಗುವ ಹುನ್ನಾರ ನಡೆದಿದೆ ಎಂದರು.

    ಸರ್ಕಾರ ನಡೆಸುವವರು ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಗಂಭೀರವಾಗಿ ಚರ್ಚಿಸುತ್ತ ರಾಜ್ಯದ ಹಿತವನ್ನು ಕಡೆಗಣಿಸಿದ ಪರಿಣಾಮ ದೊಡ್ಡ ದೊಡ್ಡ ಕಂಪನಿಗಳು ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ ಎಂದು  ಆರೋಪಿಸಿ ಜನರು ಆಯ್ಕೆ ಮಾಡಿರುವುದು ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು. ನಾನು ಹೆಚ್ಚು, ನೀನು ಹೆಚ್ಚು ಎಂದು ಜಗಳವಾಡಲು ಅಲ್ಲ. ಆದರೂ ಕಾಂಗ್ರೆಸ್‌ನ ಒಳ ರಾಜಕೀಯ ಆಟದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

    ಟಯೋಟಾ ಕಾರ್ ಕಂಪನಿ ಈಗಾಗಲೇ ಮಹರಾಷ್ಟ್ರಕ್ಕೆ ಹೋಗಿದೆ. ಇಲ್ಲಿ ಅವರಿಗೆ ಮೂಲ ಸೌಕರ್ಯ ಒದಗಿಸಿದ್ದರೆ ನಮ್ಮ ಜನರಿಗೆ ಹೆಚ್ಚು ಉದ್ಯೋಗ ಸಿಗುತ್ತಿತ್ತು. ತೆರಿಗೆ ಹಣದಿಂದ ರಾಜ್ಯದ ಆರ್ಥಿಕ ಸಂಪನ್ಮೂಲ ಹೆಚ್ಚಾಗುತ್ತಿತ್ತು. ಇನ್ಫೋಸಿಸ್ ಕಂಪನಿ ನಮ್ಮ ರಾಜ್ಯದ ಮೂಲದ್ದು ಆದರೂ ಅದರ ಶಾಖೆ ಮೂಲ ಸೌಲಭ್ಯ ವಿಸ್ತರಣೆ ಇಲ್ಲದ ಕಾರಣಕ್ಕೆ ಆಂಧ್ರಕ್ಕೆ ಹೋಯಿತು. ಆಪಲ್ ಕಂಪನಿಯ ಸ್ಮಾರ್ಟ್ ಫೋನ್ ಕಂಪನಿಯೂ ಬೇರೆರಾಜ್ಯಕ್ಕೆ ಹೋಗುವಂತಾಗಿದೆ. ಇದರ ನಡುವೆ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ಬೆಂಗಳೂರಿಗೆ ಹತ್ತಿರದಲ್ಲೇ ತಮ್ಮ ರಾಜ್ಯದಲ್ಲಿ ೮೦೦೦ ಚದರ ಅಡಿ ಜಾಗ ಹಾಗೂ ಮೂಲ ಸೌಕರ್ಯ ಮತ್ತು ತೆರಿಗೆ ವಿನಾಯಿತಿ ನೀಡುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಕಾರಣದಿಂದ ಬೃಹತ್ ಕಂಪನಿಗಳು ಸ್ಥಳಾಂತರಗೊಳ್ಳುತ್ತಿವೆ. ರಾಜ್ಯ ಸರ್ಕಾರ ಎಚ್ಚರ ವಹಿಸದೇ ಇದ್ದಲ್ಲಿ ಕರ್ನಾಟಕಕ್ಕೆ ನಷ್ಟವಾಗಲಿದೆ ಎಂದರು.

    ಬೆಲೆ ಏರಿಕೆ, ಬ್ರಷ್ಟಾಚಾರಗಳು ಸಾಧನೆ ಆಗುವುದಿಲ್ಲ ಎಂದು ಹೇಳಿದ ಸಿ.ಟಿ.ರವಿ, ಸಾಧನಾ ಸಮಾವೇಶಕ್ಕೆ ಮುಂದಾಗಿರುವ ಕಾಂಗ್ರೆಸ್‌ನ ಕಾಲೆಳೆದರು.
    ಮೈಸೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮೇವೇಶ ನಡೆಸಲು ಮುಂದಾಗಿದೆ. ಬೆಲೆ ಏರಿಕೆ, ಬ್ರಷ್ಟಾಚಾರ ಮಾಡದೆ ಪಂಚ ಗ್ಯಾರಂಟಿಗಳನ್ನು ಕೊಟ್ಟಿದ್ದರೆ ಸಾಧನೆ ಎಂದು ಒಪ್ಪಬಹುದಾಗಿತ್ತು. ಆದರೆ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ೧.೧೬ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಸರ್ಕಾರದ ಮೇಲೆ ಒಟ್ಟು ಸಾಲ ೭.೩೨ ಲಕ್ಷ ಕೋಟಿ ರೂ. ಇದೆ ಇದು ಸಾಧನೆಯಾ ಎಂದು ಪ್ರಶ್ನಿಸಿದರು.

    ಈ ನಡುವೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಸಚಿವರ ಜಮೀರ್ ಅಹಮದ್‌ಗೆ ಭೇಷ್ ಎಂದಿದ್ದಾರೆ. ಅಂದರೆ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ ಅವರ ಆರೋಪಕ್ಕೆ ಭೇಷ್ ಎಂದಂತಾಗಿದೆ ಎಂದು ರವಿ ಟೀಕಿಸಿದರು.

    ಧರ್ಮಸ್ಥಳ ಕ್ಷೇತ್ರದ ಮೇಲೆ ಜನತೆ ಶ್ರದ್ಧೆ, ಭಕ್ತಿ, ನಂಬಿಕೆ ಇಟ್ಟಿದ್ದಾರೆ. ಶ್ರೀಕ್ಷೇತ್ರವು ಗ್ರಾಮೀಣಾಭಿವೃದ್ಧಿ ಜೊತೆಗೆ ಭಕ್ತಿ ಮತ್ತು ಸಮಾನತೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ಅದನ್ನು ಸಹಿಸದ ಕೆಲವರು ವ್ಯಾಪಕವಾಗಿ ಅಪಪ್ರಚಾರ ಮಾಡುತ್ತಾ ನಿಗೂಢ ರೀತಿಯಲ್ಲಿ ಧರ್ಮಸ್ಥಳದಲ್ಲಿ ಏನೋ ನಡೆದಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಜನರ ಭಕ್ತಿ ಭಾವವನ್ನು ದುರ್ಬಲಗೊಳಿಸುವ ಸಂಚಿನ ಭಾಗ ಇದಾಗಿದೆ ಎಂದು ದೂರಿದರು.

    Doesn’t Minister Priyank Kharge know about the drug racket of his close aide…?

  • ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ

    ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ

    ಚಿಕ್ಕಮಗಳೂರು: : ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆಯ ಹಿತದೃಷ್ಟಿಯಿಂದ ಗಿರಿ ಪ್ರದೇಶದ ಕೆಲವು ಪ್ರವಾಸೋದ್ಯಮ ಸ್ಥಳಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರವಾಸೋದ್ಯಮ ನೀತಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಿರಿ ಪ್ರದೇಶದ ಕೆಲವು ಭಾಗಗಳಲ್ಲಿ ಗುಡ್ಡ ಕುಸಿತದಿಂದ ಅಲ್ಲಲ್ಲಿ ಮಣ್ಣು ಆವರಿಸಿದ್ದು, ರಸ್ತೆ ಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.

    ನಿಯಮಾನುಸಾರ ಪ್ರವಾಸಿಗರು ತಮ್ಮ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದ ಅವರು, ಪ್ರವಾಸಿಗರು ಬರುವ ವಾಹನಗಳಿಗೆ ಸ್ಥಳೀಯವಾಗಿ ಗುರುತಿಸಿರುವ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲುಗಡೆಗೊಳಿಸಿ ಸ್ಥಳೀಯ ಲಘು ವಾಹನಗಳಲ್ಲಿ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ತೆರಳಬಹುದು. ಪ್ರವಾಸಿಗರನ್ನು ಕರೆದೊಯ್ಯಲು ಬೆಳಿಗ್ಗೆ ೧೦೦ ಹಾಗೂ ಸಂಜೆ ೧೦೦ ವಾಹನಗಳನ್ನು ಮಾತ್ರ ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಪ್ರವಾಸಿಗರಿಗೆ ಅನುಕೂಲವಾಗಲೆಂದು ಆನ್‌ಲೈನ್‌ನಲ್ಲಿ ನೋಂದಣಿ ಉಚಿತವಾಗಿದ್ದು, ಸಂಪೂರ್ಣ ಮಾಹಿತಿ ಅಲ್ಲಿಯೇ ಸಿಗುವುದರಿಂದ ತಪ್ಪದೇ ನಿಯಮಗಳನ್ನು ಪಾಲಿಸಬೇಕು. ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಕೊಂಡೊಯ್ಯಬಾರದು. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಗೆ ಒತ್ತು ನೀಡುವಂತೆ ಹೇಳಿದರು.

    ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲತೆಗಳನ್ನು ಹೆಚ್ಚಿಸಲು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿ ಜಾಲವನ್ನು ಸೃಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ವಾಹನ ದಟ್ಟಣೆಯಿಂದ ಗಿರಿಪ್ರದೇಶದಲ್ಲಿ ರಸ್ತೆ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದರಿಂದ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದರು.

    ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಆತಿಥ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಅನುವಾಗುವಂತೆ ಆಹಾರ ಮತ್ತು ಪಾನೀಯ ವಿತರಣೆ, ಕೊಠಡಿ ನಿರ್ವಹಣೆ, ಸ್ವಾಗತಗಾರಿಕೆ ಹಾಗೂ ವಿವಿಧ ಆಹಾರ ತಯಾರಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಡಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಕನಿಷ್ಠ ೨೦ ರಿಂದ ೪೫ ವರ್ಷ ವಯೋಮಿತಿಯವರಿಗೆ ಈ ತರಬೇತಿ ನೀಡಲಾಗುತ್ತಿದ್ದು, ಉಚಿತ ಊಟ, ವಸತಿ ಹಾಗೂ ಪ್ರೋತ್ಸಾಹಧನವನ್ನು ನೀಡಲಾಗುವುದು. ಜಿಲ್ಲೆಯ ಅಭ್ಯರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

    ಡಿವೈಎಸ್‌ಪಿ ಶೈಲೇಂದ್ರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್ ಸೇರಿದಂತೆ ಅರಣ್ಯ, ಮೆಸ್ಕಾಂ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಲೋಹಿತ್ ಸ್ವಾಗತಿಸಿದರು.

    Temporary restrictions on tourism destinations in the Giri region

  • ಆಷಾಢಲಕ್ಷ್ಮಿ ಜಾತ್ರಾ ಮಹೋತ್ಸವ

    ಆಷಾಢಲಕ್ಷ್ಮಿ ಜಾತ್ರಾ ಮಹೋತ್ಸವ

    ಚಿಕ್ಕಮಗಳೂರು:  ನಗರದ ದರ್ಜಿ ಬೀದಿಯಲ್ಲಿರುವ ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ೨೦ನೇ ವರ್ಷದ ಜಾತ್ರಾ ಮಹೋತ್ಸವವನ್ನು ಇಂದು ವಿಜೃಂಭಣೆಯ ಜೊತೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

    ಈ ಸಂದರ್ಭದಲ್ಲಿ ಗೋಂದೊಳ್ಳಿ ಸಮಾಜದ ಅಧ್ಯಕ್ಷ ಲೋಕೇಶ್ ಮಾತನಾಡಿ, ಭಾವಸಾರ ಕ್ಷತ್ರೀಯ ಸಮಾಜ ಮತ್ತು ಜಿಲ್ಲಾ ಗೋಂದೋಳ್ಳಿ ಸಮಾಜದ ಸಂಯುಕ್ತಾಶ್ರಯದಲ್ಲಿ ಇತಿಹಾಸ ಪ್ರಸಿದ್ದ ಶ್ರೀ ಆಷಾಢಲಕ್ಷ್ಮಿ ಅಮ್ಮನವರ ಪೂಜಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

    ಸಮಾಜದ ಮುಖಂಡರು ಹಾಗೂ ದಾನಿಗಳ ಸಹಕಾರಿದಿಂದ ನಿವೇಶನವನ್ನು ಹೊಂದಿದ್ದು, ಮಾಜಿ ಶಾಸಕ ಸಿ.ಟಿ. ರವಿಯವರು ಕಳೆದ ವರ್ಷ ೨೫ ಲಕ್ಷ ರೂಗಳ ಅನುದಾನವನ್ನು ನೀಡಿದ್ದು, ಸಮಾಜದವರು, ಸಾರ್ವಜನಿಕರು ನೀಡಿರುವ ಧನಸಹಾಯದ ಜೊತೆಗೆ ಸರ್ಕಾರ ಅನುದಾನ ನೀಡಬೇಕೆಂದು ಮನವಿ ಮಾಡಿದರು.

    ಈ ಹಣದಲ್ಲಿ ದೇವಸ್ಥಾನ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಹಾಲಿ ಶಾಸಕ ಹೆಚ್.ಡಿ. ತಮ್ಮಯ್ಯನವರ ಬಳಿ ಸರ್ಕಾರದಿಂದ ಅನುದಾನ ನೀಡುವಂತೆ ಸಮಾಜದ ಪರವಾಗಿ ಮನವಿ ಮಾಡುತ್ತೇವೆಂದು ತಿಳಿಸಿದರು.

    Ashada Lakshmi Jatra Festival

  • ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ವಿಭುಬಖ್ರು ನೇಮಕ

    ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ವಿಭುಬಖ್ರು ನೇಮಕ

    ನವದೆಹಲಿ: ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಭಕ್ರು ಅವರನ್ನು ನೇಮಿಸಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.

    ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾ. ಬಖ್ರು ಅವರು 1966ರಲ್ಲಿ ನಾಗಪುರದಲ್ಲಿ ಜನಿಸಿದರು. ದೆಹಲಿಯ ಮಥುರಾ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್‌ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1989ರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿಯೂ ಅರ್ಹತೆ ಪಡೆದಿದ್ದರು. ಆನಂತರ 1990ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದು, ಅದೇ ವರ್ಷ ದೆಹಲಿ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದರು.

    ನ್ಯಾ. ಭಕ್ರು ಅವರು ವಕೀಲರಾಗಿದ್ದ ಅವಧಿಯಲ್ಲಿ ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌, ಕಂಪನಿ ಕಾನೂನು ಮಂಡಳಿ ಮತ್ತು ಇತರೆ ನ್ಯಾಯ ಮಂಡಳಿಗಳಲ್ಲಿ ವಕೀಲಿಕೆ ಮಾಡಿದ್ದಾರೆ. 2011ರಲ್ಲಿ ಹಿರಿಯ ವಕೀಲರಾಗಿ ಅವರು ಪದೋನ್ನತಿ ಪಡೆದಿದ್ದರು. 2013ರ ಏಪ್ರಿಲ್‌ 17ರಂದು ದೆಹಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2015ರ ಮಾರ್ಚ್‌ 18ರಂದು ಕಾಯಂಗೊಂಡಿದ್ದರು.

    Justice Vibhubakh appointed as new Chief Justice of Karnataka High Court

  • ಶಕ್ತಿ ಯೋಜನೆ ಯಶಸ್ಸಿನಿಂದ ಹೊಸ ಬಸ್‌ಗಳ ಖರೀದಿ

    ಶಕ್ತಿ ಯೋಜನೆ ಯಶಸ್ಸಿನಿಂದ ಹೊಸ ಬಸ್‌ಗಳ ಖರೀದಿ

    ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ ಹೊಸ ಬಸ್‌ಗಳನ್ನು ಖರೀದಿಸಲಾಗಿದೆ ಹಾಗೂ ಚಾಲಕರು, ನಿರ್ವಾಹಕರ ನೇಮಕಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.

    ನಗರದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ಇಂದು ಆಯೋಜಿಸಿದ್ದ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರು ೫೦೦ ಕೋಟಿ ಟ್ರಿಪ್‌ಗಳಲ್ಲಿ ಉಚಿತವಾಗಿ ಸಂಚರಿಸಿದ ಫಲವಾಗಿ ೧೨,೬೬೯ ಕೋಟಿ ರೂ.ಗಳ ಆದಾಯ ನಿಗಮಕ್ಕೆ ಬಂದಿದೆ ಎಂದು ಹೇಳಿದರು.

    ಈಗಾಗಲೇ ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಶಕ್ತಿ ಯೋಜನೆ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೇವಣ್ಣ ಅವರ ಕರೆಯ ಮೇರೆಗೆ ರಾಜ್ಯಾದ್ಯಂತ ನಿಗಮದ ಎಲ್ಲ ಬಸ್ ನಿಲ್ದಾಣಗಳಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ನಿಗಮದ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ಕಲ್ಪಿಸುವ ಮೂಲಕ ಮಹಿಳೆಯರಿಗೆ ಶಕ್ತಿ ತುಂಬಲಾಗಿದೆ. ಇದರಿಂದ ಉತ್ತಮ ಆದಾಯ ಬಂದಿದ್ದು ನಿಗಮಕ್ಕೂ ಶಕ್ತಿ ಬಂದಿದೆ ಎಂದರು.

    ಚಿಕ್ಕಮಗಳೂರು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್‌ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲು ಅವಕಾಶವಾಗಿದೆ ಎಂದು ತಿಳಿಸಿದರು.

    ಮುಖಂಡರಾದ ಹೆಚ್.ಪಿ.ಮಂಜೇಗೌಡ ಮಾತನಾಡಿ, ಪಂಚ ಗ್ಯಾರಂಟಿ ಶಕ್ತಿ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೂ ಆದಾಯ ಬರುತ್ತಿದ್ದು, ಮಹಿಳೆಯರಿಗೂ ಉತ್ತಮ ಅವಕಾಶ ಒದಗಿಸಿದಂತಾಗಿದೆ. ಮುಂದೆಯೂ ಮೂರು ವರ್ಷ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಮುಂದುವರಿಸಲಿದೆ ಎಂದು ಹೇಳಿದರು.

    ಸಾರಿಗೆ ನಿಗಮದ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಮಾತನಾಡಿ, ಜಿಲ್ಲೆಯ ಎಲ್ಲಾ ಆರು ಘಟಕಗಳ ವಾಹನಗಳಲ್ಲಿ ಇದುವರೆಗೆ ಮಹಿಳೆಯರು ಒಟ್ಟು ೮.೪೩ ಕೋಟಿ ಬಾರಿ ಉಚಿತವಾಗಿ ಸಂಚರಿಸಿದ್ದು, ೩೨೨.೩೮ ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಚಿಕ್ಕಮಗಳೂರು ಘಟಕವೊಂದರಲ್ಲೇ ಒಟ್ಟು ೨.೨೫ ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಂಚರಿಸಿದ್ದು, ೭೯.೪೫ ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.

    ಫಲಾನುಭವಿಗಳ ಪರವಾಗಿ ಶೋಭಾ ಮಾತನಾಡಿ, ಶಕ್ತಿ ಯೋಜನೆಯಿಂದ ಈಗಾಗಲೇ ಮಹಿಳೆಯರು ವಿವಿಧ ದೇವಾಲಯಗಳಿಗೂ ಭೇಟಿ ನೀಡಿದ್ದಾರೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದ್ದು, ಇದು ಹೀಗೇ ಮುಂದುವರಿಯಲಿ ಎಂದು ಆಶಿಸಿದರು.

    ಇದೇ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತಲ್ಲದೆ, ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

    Purchase of new buses due to the success of Shakti Yojana

  • ಇಂದಾವರ ಗ್ರಾ.ಪಂ. ಅಧ್ಯಕ್ಷರಾಗಿ ಸುಭಾಶ್ ಅವಿರೋಧ ಆಯ್ಕೆ

    ಇಂದಾವರ ಗ್ರಾ.ಪಂ. ಅಧ್ಯಕ್ಷರಾಗಿ ಸುಭಾಶ್ ಅವಿರೋಧ ಆಯ್ಕೆ

    ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು.

    ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಮಾಜಿ ಶಾಸಕ ಸಿ.ಟಿ. ರವಿ ಅವರು ಈ ಗ್ರಾಮ ಪಂಚಾಯಿತಿಗೆ ಅತಿ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಈ ನಿಟ್ಟಿನಲ್ಲಿ ಸಿ.ಟಿ. ರವಿ ಶಿಷ್ಯರಾದ ಸುಭಾಶ್ ರವರು ಆಯ್ಕೆಯಾಗಿರುವುದು ಅಭಿನಂದನೀಯ ಎಂದರು.

    ತಮ್ಮ ಅಧಿಕಾರವಧಿಯಲ್ಲಿ ಅಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾ.ಪಂ. ಆಡಳಿತದಲ್ಲಿ ಹೊಸ ಬದಲಾವಣೆ ತಂದು ಮಾದರಿ ಪಂಚಾಯಿತಿಯನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

    ಇಂದಾವರ ಗ್ರಾಮದ ಸೊಸೈಟಿ ಸೇರಿ ದಂತೆ ಗ್ರಾ.ಪಂ. ಆಡಳಿತಕ್ಕೆ ಉತ್ಸಾಹಿ ಯುವಕರು ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಆ ಹಿನ್ನೆಲೆಯಲ್ಲಿ ಕಸದ ಡಂಪಿಂಗ್ ಸಮಸ್ಯೆಯಿಂದಾಗಿ ತೊಂದರೆಯಿಂದ ಬಳಲುತ್ತಿರುವ ಗ್ರಾಮದ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರಸಭೆಯೊಂದಿಗೆ ಚರ್ಚಿಸಿ ಬಗೆಹರಿಸಬೇಕು ಕಿವಿಮಾತು ಹೇಳಿದರು.

    ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೋಮಶೇಖರ್ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರ ಮತ್ತು ವಿಶ್ವಾಸವನ್ನು ಪಡೆದು ಅವಿರೋಧ ಆಯ್ಕೆಯಾಗಿರುವ ಸುಭಾಶ್‌ರವರು ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಮೂಲಭೂತ ಸೌಲಭ್ಯಗಳಾದ ಕುಡಿಯವ ನೀರು, ಚರಂಡಿ, ರಸ್ತೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗುವ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಗ್ರಾಮಸ್ಥರ ವಿಶ್ವಾಸಾರ್ಹತೆಗೆ ಪಾತ್ರವಾಗಿ ಮುಂದಿನ ಚುನಾವಣೆಯನ್ನು ಆತ್ಮವಿಶ್ವಾಸದಿಂದ ಎದುರಿಸುವ ವಾತಾವರಣ ನಿರ್ಮಿಸಬೇಕು ಎಂದರು.

    ಇಂದಾವರ ನಗರಕ್ಕೆ ಸಮೀಪವಾಗಿರುವ ಗ್ರಾಮ ಪಂಚಾಯಿತಿ ಆಗಿದೆ. ಹಿಂದಿನ ಶಾಸಕರ ಅಭಿವೃದ್ಧಿ ಕಾರ್ಯಗಳಿಂದ ಗ್ರಾಮವು ಆರ್ಥಿಕವಾಗಿ ಬಲಿಷ್ಟವಾಗಿದೆ. ಹೀಗಾಗಿ ಮತಕೊಟ್ಟ ಮತದಾರರಿಗೆ ಯಾವುದೇ ತೊಂದರೆಗಳಾಗದಂತೆ ನಿಷ್ಟೆಯಿಂದ ಕಾರ್ಯನಿರ್ವಹಿಸುವ ಜವಾಬ್ದಾರಿ ನೂತನ ಅಧ್ಯಕ್ಷರದ್ದು ಎಂದು ಹೇಳಿದರು.

    ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಐ.ಬಿ. ಸುಭಾಶ್, ಗ್ರಾಮಸ್ಥರು, ಸದಸ್ಯರುಗಳ ಸಹಕಾರಿಂದ ಸಿಕ್ಕಿರುವ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ಅವರು, ಜನರ ಕುಂದುಕೊರತೆಗಳನ್ನು ಆಲಿಸಿ ಸರ್ಕಾರದ ಸವಲತ್ತುಗಳನ್ನು ತಾರತಮ್ಯವಿಲ್ಲದೆ ನಿಷ್ಟೆಯಿಂದ ತಲುಪಿಸುವ ಕಾರ್ಯಮಾಡಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ಗ್ರಾ.ಪಂ. ಉಪಾಧ್ಯಕ್ಷೆ ದ್ರಾಕ್ಷಯಣಿ, ಸದಸ್ಯರಾದ ಜ್ಯೋತಿ ಯೋಗಿಶ್, ನೇತ್ರಾವತಿ, ಕೆಂಚಯ್ಯ, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಕಲ್ಮರುಡಪ್ಪ, ಮುಖಂಡರುಗಳಾದ ಕೋಟೆ ರಂಗನಾಥ್, ನಿರಂಜನ್, ಕುರುವಂಗಿ ವೆಂಕಟೇಶ್, ರಾಜೀವ್, ಮಧುಕುಮಾರ್ ಅರಸ್, ಹಂಪಯ್ಯ, ಸಂತೋಷ್ ಕೋಟ್ಯಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    Subhash elected unopposed as Indavar Gram Panchayat President

  • ಭಾರತದ ಎರಡನೇ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆ ಉದ್ಘಾಟನೆ

    ಭಾರತದ ಎರಡನೇ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆ ಉದ್ಘಾಟನೆ

    ಶಿವಮೊಗ್ಗ: ಎಡಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಮಧ್ಯಾಹ್ನ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ಸಿಗಂದೂರು ಸೇತುವೆ ಭಾರತದ ಎರಡನೇ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆಯನ್ನು ಉದ್ಘಾಟಿಸಿದರು.

    ಬಿಜೆಪಿಯ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಅವರ ಯಾವುದೇ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್ಎನ್ ಚನ್ನಬಸಪ್ಪ, ಡಿಎಸ್ ಅರುಣ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಅಧಿಕಾರಿಗಳ ಪ್ರಕಾರ, ಸಾಗರ ತಾಲ್ಲೂಕಿನ ಅಂಬರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಈ ಸೇತುವೆಯನ್ನು 472 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸೇತುವೆಯು 2.44 ಕಿಮೀ ಉದ್ದವಿದ್ದು, 16 ಮೀಟರ್ ಅಗಲವಿದೆ. ಈ ಸೇತುವೆಯು ಸಾಗರದಿಂದ ಸಿಗಂದೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ ದೂರವನ್ನು ಕಡಿಮೆ ಮಾಡುತ್ತದೆ.

    ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿರುವ ಅವರು, ಸಾಗರ – ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ತಡವಾಗಿ ಆಮಂತ್ರಿಸಿದ್ದು, ಬೇರೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

    ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯು ಇಂತಹ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಗೆ ಮುನ್ನ ರಾಜ್ಯ ಸರ್ಕಾರವನ್ನು ಮುಂಚಿತವಾಗಿಯೇ ಸಂಪರ್ಕಿಸಿದ್ದರೆ ಮತ್ತಷ್ಟು ಸಮರ್ಪಕವಾಗಿರುತ್ತಿತ್ತು. ಮುಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಸಕಾಲದಲ್ಲಿ ಸಂಪರ್ಕಿಸುವಂತೆ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಗೆ ಸೂಚನೆ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

    India’s second longest cable-stayed bridge inaugurated

  • ಜಿಲ್ಲೆಯಲ್ಲಿ ನೂತನ ಜಿಲ್ಲಾ ಬೆಳೆಗಾರರ ಸಂಘ ಅಸ್ತಿತ್ವಕ್ಕೆ

    ಜಿಲ್ಲೆಯಲ್ಲಿ ನೂತನ ಜಿಲ್ಲಾ ಬೆಳೆಗಾರರ ಸಂಘ ಅಸ್ತಿತ್ವಕ್ಕೆ

    ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ ತಾಲ್ಲೂಕು ಬೆಳಗಾರರ ಸಂಘದ ಕಟ್ಟಡದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲೆಯ ೧೦ ಸಹಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ಕೆ.ರತೀಶ್ ಕುಮಾರ್‌ರನ್ನು ಆಯ್ಕೆ ಮಾಡಲಾಯಿತು.

    ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕಾಫಿ ಮಂಡಳಿ ಅಧ್ಯಕ್ಷ ಎಂಜೆ ದಿನೇಶ್ ಕಾಫಿ, ಕಾಳು ಮೆಣಸು, ಅಡಿಕೆ ಬೆಳೆಗಾರರ ಹಿತ ದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ ನೂತನ ಸಂಘಟನೆ ಅತ್ಯವಶ್ಯಕವಾಗಿದ್ದು, ಸಮಸ್ಯೆಗೆ ಸಂಘಟನೆಯೊಂದೆ ಪರಿಹಾರವಾಗಿದ್ದು,ಎಲ್ಲ ಬೆಳೆಗಾರರ ಹಿತ ಕಾಪಡಲು ಕಟಿಬದ್ಧರಾಗಿ ಕಾರ್ಯನಿರ್ವಹಿಸುವಂತೆ ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.

    ನೂತನ ಜಿಲ್ಲಾಧ್ಯಕ್ಷ ಕೆ.ಯು ರತೀಶ್ ಕುಮಾರ್ ಮಾತನಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧನಿದ್ದು, ಸಂಘಟನೆಯ ಹಿರಿಯರು ಇಟ್ಟಿರುವ ನಂಬಿಕೆಗೆ ದ್ರೋಹವಾಗದಂತೆ ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

    New District Growers Association to be formed in the district

  • ಕವಿತೆಗಳು ಅನುಭವ ಶೋಧಕ್ಕೆ ದಾರಿ ತೆರೆಯುತ್ತವೆ

    ಕವಿತೆಗಳು ಅನುಭವ ಶೋಧಕ್ಕೆ ದಾರಿ ತೆರೆಯುತ್ತವೆ

    ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ ಹೋಗುತ್ತವೆ ಎಂದು ಹಿರಿಯ ಪತ್ರಕರ್ತ, ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಸ.ಗಿರಿಜಾಶಂಕರ ವಿಶ್ಲೇಷಿಸಿದರು.

    ನಗರದ ಸುಭಾಶ್ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿರುವ ಸ್ಕೌಟ್ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಸಂಜೆ ವೈಲ್ಡ್‌ಕ್ಯಾಟ್-ಸಿ ಸಕ್ರಿಯ ಕಾರ್ಯಕರ್ತ, ಕವಿ ಝೈದ್‌ಖಾನ್ ವಿರಚಿತ `ಗ್ರಾಸ್‌ರೂಟ್ಸ್ ಟು ಗ್ಯಾಲಕ್ಸಿ’ ಆಂಗ್ಲ ಕವನ ಗುಚ್ಛ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿ ಎಂದೂ ತನಗೋಸ್ಕರ ಕವಿತೆ ಬರೆಯುವುದಿಲ್ಲ. ಅವನು ತನ್ನ ತಾಕಲಾಟಗಳನ್ನು, ಜೀವನದ ಗೊಂದಲಗಳನ್ನು, ಸಂತೋಷಗಳನ್ನು ಕವನದ ಮೂಲಕ ನಮ್ಮ ಮುಂದಿಡುತ್ತಾನೆ. ಅದಕ್ಕೆ ಬೇಂದ್ರೆ ಹೀಗೆ ಹೇಳುತ್ತಾರೆ… `ಎನಪಾಡು ಎನಗಿರಲಿ; ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ, ಕಲ್ಲು ಸಕ್ಕರೆಯಂಥ ನಿನ್ನ ಹೃದಯ ಕರಗಿದರೆ ಆ ಸವಿಯನಿಷ್ಟು ಹನಿಸು ನನಗೆ’. ಒಬ್ಬ ಸಹೃದಯಿಯಿಂದ ಕವಿ ಬಯಸುವುದು ಇಷ್ಟನ್ನು ಮಾತ್ರ ಎಂದರು.

    ಒಂದು ಪುಸ್ತಕ ನೈಜವಾಗಿ ಬಿಡುಗಡೆಯಾಗುವುದು ಅದನ್ನು ಅರ್ಥ ಮಾಡಿಕೊಳ್ಳುವ ಒಬ್ಬ ಸಹೃದಯಿ ಸಿಕ್ಕಾಗ. `ನನ್ನ ಮುಖೋದ್ಗತ ಹೃದ್ಗತವಾದ ದಿನ ಸುದಿನ. ಅಲ್ಲಿಯವರೆಗೂ ಅದು ತಕ್ಕಮಣ್ಣಿನ ತೇವಕ್ಕಾಗಿ ಕಾದೇ ಇರುವ ಬೀಜ’ ಎಂದು ಕವಿ ಗಂಗಾಧರ ಚಿತ್ತಾಲರು ಹೇಳಿದ್ದಾರೆ. ಕವಿಯ ಮನಸ್ಸಿನಲ್ಲಿ ಮೂಡಿದ್ದನ್ನು ಕೃತಿಗಿಳಿಸಿದಾಗ ಒಬ್ಬ ಸಹೃದಯಿ ಓದಿ ಸಂತಸಪಡುತ್ತಾನಲ್ಲ, ಅಂದು ಕವಿಗೆ ತನ್ನ ಕೃತಿ ಬಿಡುಗಡೆಯಾದ ಸುದಿನವೆನಿಸುತ್ತದೆ ಎಂಬುದು ಇದರರ್ಥ ಎಂದು ಹೇಳಿದರು.

    ಝೈದ್ ಅವರ ಎರಡನೇಯ ಕವನ ಸಂಕಲನ ಇದು. ತಾವು ಕಾನನದಲ್ಲಿ ಕಂಡ ದೃಶ್ಯಗಳನ್ನು ಗಮನಿಸಿ ಅವುಗಳಿಗೆ ಕವನದ ಸ್ಪರ್ಶವನ್ನು ನೀಡಿ ಅವುಗಳನ್ನು ಬದುಕಿಗೆ ಜೋಡಿಸುವ ಪ್ರಯತ್ನ ಮಾಡಿದ್ದಾರೆ. ಅಂಥ ದೃಶ್ಯಗಳನ್ನು ಗಮನಿಸಿದಾಗ ಝೈದ್ ಅವರಲ್ಲಿರುವ ಕವಿ ಎಚ್ಚೆತ್ತುಕೊಳ್ಳುತ್ತಾನೆ. ಇದೀಗ ಬಿಡುಗಡೆಯಾಗಿರುವ ಕವನ ಸಂಕಲನದಲ್ಲಿ ಪ್ರಾಣಿ. ಪಕ್ಷಿಗಳ ಚಹರೆ, ಚಲನವಲನವನ್ನು, ಪ್ರಕೃತಿಯ ರಮಣೀಯ ಪರಿಸರವನ್ನು ಝೈದ್ ಬಿಂಬಿಸಿದ್ದಾರೆ. ಅದನ್ನು ಅಷ್ಟಕ್ಕೆ ಸೀಮಿತಗೊಳಿಸದೆ ಇನ್ನು ಮುಂದಕ್ಕೆ ಕ್ರಮಿಸಿ, ಬಾಹ್ಯಾಕಾಶ, ಬೇರೆ ಬೇರೆ ವಸ್ತುಗಳು, ಸ್ನೇಹಿತರ ಬಗ್ಗೆ ಸಹ ತಮ್ಮ ಕವಿತೆಗೆ ವಿಷಯಗಳನ್ನೆತ್ತಿಕೊಂಡಿದ್ದಾರೆ. ಅವರಿಂದ ರಚಿತವಾದ ೪೨ ಅತ್ಯುತ್ತಮ ಪದಪುಂಜಗಳಿರುವ ಕವನಗಳನ್ನು ಈ ಕೃತಿ ಒಳಗೊಂಡಿದೆ. ಕವನಗಳನ್ನು ಗಮನಿಸಿದಾಗ ಅವರಿಗೆ ಆಂಗ್ಲ ಭಾಷೆಯಲ್ಲಿರುವ ಪ್ರೌಢಿಮೆ ಅರ್ಥವಾಗುತ್ತದೆಯಲ್ಲದೆ, ಈ ಕವನ ಸಂಕಲನದಲ್ಲಿ ಅನಾವರಣಗೊಂಡಿದೆ ಎಂದರು.

    ಕೃತಿಕರ್ತೃ ಝೈದ್ ಖಾನ್ ಮಾತನಾಡಿ, ನನಗೆ ತಂದೆ, ತಾಯಿ, ಸ್ನೇಹಿತರು ನೀಡಿದ ಸ್ಫೂರ್ತಿಯಿಂದಾಗಿ ನಾನು ಇವತ್ತು ಪ್ರಕೃತಿ ಪ್ರೀತಿ, ವನ್ಯಜೀವಿ ಸಂರಕ್ಷಣೆ ಕುರಿತಾದ ಕವನಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ತಂದಿದ್ದು, ಈ ಹೆಮ್ಮೆಯ ಕ್ಷಣ ಅಪೂರ್ವ ಆನಂದ ಅನುಭೂತಿ ನೀಡಿದೆ. ಕುಟುಂಬದವರ ಪೆತ್ಸಾಹ, ಶಿಕ್ಷಕರು, ಸ್ನೇಹಿತರು, ಸಾಹಿತ್ಯ ಮತ್ತು ಪ್ರಕೃತಿ ಪ್ರಿಯರು ಇವರುಗಳ ಸಹಕಾರ ಇಲ್ಲದೆ ಹೋಗಿದ್ದರೆ ಇವತ್ತು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಮೈಸೂರಿನಿಂದ ಚಿಕ್ಕಮಗಳೂರಿಗೆ ಪ್ರತೀ ಸಲ ಬಂದಾಗ ಅರ್ಧ ದಿನ ಮಾತ್ರ ಮನೆಯಲ್ಲಿದ್ದು, ಇನ್ನರ್ಧ ದಿನ ಕಾಡಿನಲ್ಲೇ ಕಾಲ ಕಳೆಯುತ್ತಿದ್ದೆ. ಶಾಲಾ ದಿವಸಗಳಲ್ಲಿಯೇ ರಸಪ್ರಶ್ನೆ, ಲೇಖನಗಳನ್ನು ಸಿದ್ಧಪಡಿಸುವ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದೆ ಎಂದು ಹೇಳಿದರು.

    ಒಮ್ಮೆ ಅರಣ್ಯ ಪ್ರವಾಸ ಕೈಗೊಂಡಾಗ ಡಿ.ವಿ.ಗಿರೀಶ್ ಮತ್ತು ವೈಲ್ಡ್‌ಕ್ಯಾಟ್-ಸಿ ಸಂಪರ್ಕದಿಂದಾಗಿ ಹಳೆಯ ನೆನಪುಗಳು ಮರುಕಳಿಸಿ ಈಗ ಕೃತಿರೂಪಕ್ಕಿಳಿಸಿದ್ದೇನೆ. ಗಿರೀಶ್ ಪ್ರೇರಣೆಯಿಂದ ಈ ಪುಸ್ತಕ ರಚಿಸಲು ಸಾಧ್ಯವಾಗಿದ್ದು, ಇದನ್ನು ಅವರಿಗೇ ಅರ್ಪಿಸಿದ್ದೇನೆ. ಗಿರೀಶ್ ನನಗೆ ಪಿತೃಸಮಾನರಾಗಿ ಕಾಡಿನ ರಹಸ್ಯಗಳಲ್ಲದೆ, ಜೀವನ ಮೌಲ್ಯಗಳನ್ನೂ ಬೋಧಿಸಿದವರು. ಒಮ್ಮೆ ಗರುಡನಗಿರಿಗೆ ಚಾರಣಕ್ಕೆ ಹೋದ ಸಂದರ್ಭದಲ್ಲಿ ಹಿತೈಷಿಯೊಬ್ಬರು ನೀಡಿದ ಪ್ರೋತ್ಸಾಹದಿಂದ ಕವನ ಹುಟ್ಟಲು ಕಾರಣವಾಯಿತು ಎಂದು ನೆನಪಿಸಿಕೊಂಡರು.

    ಕಳೆದ ವರ್ಷ ವೈಲ್ಡ್‌ಕ್ಯಾಟ್-ಸಿ.ಯಿಂದ ಮುಂಗಾರು ಶಿಬಿರ ಏರ್ಪಡಿಸಲಾಗಿತ್ತು. ಅಲ್ಲಿ ಕವನವೊಂದು ನನ್ನಲ್ಲಿ ಹುಟ್ಟಲು ಕಾರಣವಾಯಿತು. ಅನಂತರದಲ್ಲಿ ರೂಪುಗೊಂಡ ಆ ಕವನ ಸಂಕಲನದ ಹೆಸರು `ಗ್ರೀನ್ ಥ್ರೆಡ್ಸ್’. ಆ ಪುಸ್ತಕದ ಮೊದಲ ಕವನದ ಸಾಲು ಜಗತ್ತು ವಾರಾಂತ್ಯದಲ್ಲಿ ಗಾಢ ನಿದ್ರೆಯಲ್ಲಿದ್ದಾಗ, ಏಕಾಂತದಲ್ಲಿ ಪ್ರಕೃತಿಯ ಸಹಚರ್ಯ ನನ್ನಲ್ಲಿ ಹೊಸ ಭರವಸೆ, ಪ್ರಕೃತಿಯ ಪ್ರೀತಿ ಹುಟ್ಟು ಹಾಕಿತು. ನಾಳೆಯ ಅಭ್ಯುದಯಕ್ಕೆ ಪ್ರಕೃತಿಯೇ ಸೆಲೆ. ವೈಲ್ಡ್‌ಕ್ಯಾಟ್-ಸಿ. ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ನಾವು ನೋಡುವ ಪ್ರಾಣಿ, ಪಕ್ಷಿ, ಕಾಡು, ಗುಡ್ಡ ಸಂತೋಷವುಂಟು ಮಾಡುವ ಮನಸ್ಥಿತಿ ಬೆಳೆಯಿತು. ಈ ಕಾರಣದಿಂದಲೇ ಈ ಪುಸ್ತಕ ಹೊರ ಬಂದಿದೆ. ವೈಲ್ಡ್ ಕ್ಯಾಟ್-ಸಿ ಗೆಳೆಯರ ನೆರವನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಂದರು.

    ಸ್ವಾಗತಿಸಿದ ವೈಲ್ಡ್‌ಕ್ಯಾಟ್-ಸಿ.ಯ ಮುಖ್ಯಸ್ಥ ಶ್ರೀದೇವ್ ಹುಲಿಕೆರೆ ಮಾತನಾಡಿ, ಧನಾತ್ಮಕ ಚಿಂತನೆ ಹೊಂದಿರುವ ಝೈದ್ ಉತ್ಸಾಹದ ಚಿಲುಮೆಯಂತಿರುವ ಯುವಕ. ರಸಪ್ರಶ್ನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ. ಹಾಗೆಯೇ ಪ್ರಾಣಿ, ಪಕ್ಷಿ ಕಾಡು, ಗುಡ್ಡ ಉಳಿಸುವ ಮನೋಭಾವ ಬೆಳೆಸಿತು. ಪ್ರಕೃತಿ, ಪರಿಸರ ಉಳಿಸಲು ತುಂಬಾ ಕೆಲಸ ಮಾಡಿರುವ ವೈಲ್ಡ್‌ಕ್ಯಾಟ್-ಸಿ. ಈ ಬಗೆಗಿನ ವಿಚಾರಗಳನ್ನು ಬರವಣಿಗೆಗಿಳಿಸದ ಕೊರತೆಯಿತ್ತು. ಅದನ್ನು ಝೈದ್ ಸಾಕಾರಗೊಳಿಸಿದ್ದಾರೆ ಎಂದರು.

    ಝೈದ್ ಖಾನ್ ಅವರ ಅಜ್ಜಿ ಫಾಹ್ಮಿದಾ ಖಾನ್ ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಮುಖ್ಯಸ್ಥ ಡಿ.ವಿ.ಗಿರೀಶ್ ವಂದಿಸಿದರು. ಪರಿಸರಾಸಕ್ತ ಮನೀಶ್‌ಕುಮಾರ್ ಕಾರ್ಯಕ್ರಮದಲ್ಲಿದ್ದರು.

    Poems open the way to the discovery of experience.