Category: ಕಡೂರು

  • ಧರ್ಮ-ಜಾತಿಯ ನಡುವೆ ಸಂಘರ್ಷ ಹುಟ್ಟಿಸುವ ರಾಜಕೀಯ ಹಸ್ತಕ್ಷೇಪ ಒಳಿತಲ್ಲ

    ಧರ್ಮ-ಜಾತಿಯ ನಡುವೆ ಸಂಘರ್ಷ ಹುಟ್ಟಿಸುವ ರಾಜಕೀಯ ಹಸ್ತಕ್ಷೇಪ ಒಳಿತಲ್ಲ

    ಬೀರೂರು: ಧರ್ಮ, ಪರಂಪರೆ ನಮ್ಮ ನಾಡನ್ನು ನಿರ್ಮಿಸಿವೆ. ಧರ್ಮ ಮತ್ತು ಜಾತಿಯ ನಡುವೆ ಸಂಘರ್ಷ ಹುಟ್ಟಿಸುವ ರಾಜಕೀಯ ಹಸ್ತಕ್ಷೇಪ ಒಳಿತಲ್ಲ ಎಂದು ರಂಭಾ ಪುರಿ ಪೀಠದ ವೀರಸೋಮೇಶ್ವರ ಶಿವಾ ಚಾರ್ಯ ಸ್ವಾಮೀಜಿ ನುಡಿದರು.

    ಬೀರೂರಿನ ಗಣಪತಿ ಪೆಂಡಾಲ್‌ ಮೈದಾನದಲ್ಲಿ ಸೋಮವಾರ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಪಂಚಪೀಠಗಳು ಸಕಲರಿಗೂ ಲೇಸನ್ನೇ ಬಯಸುವುದಾಗಿದ್ದು, ಗುರು ಗಳು ಜನರಲ್ಲಿ ಧರ್ಮಶ್ರದ್ಧೆ ಉಳಿಸುವಲ್ಲಿ ನಿರತರಾಗಿದ್ದಾರೆ. ಜಾತಿ, ಮತ, ಪಂಥಗಳ ಗಡಿ ಮೀರಿ ಸಮಾಜದಲ್ಲಿ ಭಾವೈಕ್ಯ ಮೂಡಿಸುವುದೇ ನಮ್ಮ ಧ್ಯೇಯವಾಗಿದೆ. ಧರ್ಮವನ್ನು ಪಾಲಿಸುವ, ಬೋಧಿಸುವ ಕೆಲಸವನ್ನು ಗುರು ಮಾಡಬೇಕು. ರಾಜಕಾರಣಿಗಳು ಧರ್ಮ-ಧರ್ಮಗಳ ನಡುವೆ ಸಂಘರ್ಷ ಮೂಡಿಸುವ ಕೆಲಸ ಮಾಡಬಾರದು ಎನ್ನುವುದು ನಮ್ಮ ಕಳಕಳಿಯ ಸಂದೇಶವಾ ಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಬೀರೂರು ಶ್ರೀಗಳ ನೇತೃತ್ವದಲ್ಲಿ ಎಲ್ಲರ ಶ್ರಮ ಸಾರ್ಥಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ‘ಪಂಚಪೀಠಗಳು ಜಾತಿಯ ಬದಲಾಗಿ ಜ್ಯೋತಿಯಂತೆ ಸರ್ವಧರ್ಮ ಸಮನ್ವಯದ ಪ್ರತೀಕವಾಗಿವೆ. ಇಂದಿನ ಕಾರ್ಯಕ್ರಮದಲ್ಲಿ ಈ ಊರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಾಬೀತಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಹೆಮ್ಮೆ, ಸರ್ವರಲ್ಲಿ ಸಮಭಾವ, ಸಮನ್ವಯ, ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಮೂಡಿಬರಲಿ. 2026ರ ಜನವರಿ 7ರಂದು ಸಮೀಪದ ಬುಕ್ಕಾಂಬುಧಿಯಲ್ಲಿ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಅದಕ್ಕೆ ಪಾದಯಾತ್ರೆಯ ಮೂಲಕ ಬುಕ್ಕಾಂಬುಧಿ ತಲುಪುವುದಾಗಿ ತಿಳಿಸಿದರು.

    ಕಾಶೀ ಪೀಠದ ಕಿರಿಯ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮಕ್ಕೆ ಅಂತ್ಯವಿಲ್ಲ, ಸೃಷ್ಟಿಯ ಆರಂಭದಿಂದಲೂ ಇರುವ ಧರ್ಮವನ್ನು ಅಂತ್ಯ ಮಾಡಲು ಹೊರಟವರೇ ಅಂತ್ಯವಾಗಿದ್ದಾರೆ. ಇದರಿಂದ ಧರ್ಮದ ನಾಶ ಯಾರಿಂದಲೂ ಸಾಧ್ಯವಿಲ್ಲ ಎಂದು ಅರ್ಥವಾಗುತ್ತದೆ ಎಂದು ತಿಳಿಸಿದರು.

    ಕಾಶೀ ಪೀಠದ ಹಿರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಪ್ರಕೃತಿಯೇ ಪಂಚಪೀಠಗಳ ತತ್ವವಾಗಿದ್ದು ಸಮೃದ್ಧಿ, ತ್ಯಾಗ, ವೈಶಾಲ್ಯ, ಸ್ವಚ್ಛತೆ, ಪರಿಪಕ್ವತೆ ಇದರ ಸಂಕೇತವಾಗಿದೆ. ಬೀರೂರು ಧರ್ಮದ ಬೇರನ್ನು ಗಟ್ಟಿಗೊ ಳಿಸಿದ ‘ಬೇರೂರು’ ಎಂದು ಬಣ್ಣಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್‌.ಆನಂದ್‌, ಶೈವ ಪರಂಪರೆ ಉಳಿಸುವಲ್ಲಿ ಪಂಚಪೀಠಗಳ ಪಾತ್ರ ಮಹತ್ವದ್ದಾಗಿದ್ದು, ಅವರ ತತ್ವಾದರ್ಶ ದೇಶಕ್ಕೆ ಅಗತ್ಯವಿದೆ. ಕಡೂರಿನಲ್ಲಿಯೂ ಮತ್ತೊಮ್ಮೆ ಶೀಘ್ರವಾಗಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಲು ಅನುಮತಿ ನೀಡಬೇಕು ಎಂದು ಕೋರಿದರು.

    ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ಧರ್ಮನಿಷ್ಠರಾಗಿ ದುಡಿಯೋಣ, ಕರ್ಮ ಹಿಂತಿರುಗುತ್ತದೆ, ಧರ್ಮ ಕಾಯುತ್ತದೆ ಎನ್ನುವ ಅರಿವು ಇರಲಿ. ಎಲ್ಲರಿಗೂ ಹೃದಯ ವೈಶಾಲ್ಯ ಇರಲಿ, ಶಾಸಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ. ಎದುರಾಳಿಗ ಳನ್ನೂ ಗೌರವಿಸುವ ಹೃದಯ ಶ್ರೀಮಂತಿಕೆ ಇರಲಿ ಎಂದು ಸಲಹೆ ನೀಡಿದರು.

    ಆಶಯ ನುಡಿ ಆಡಿದ ವೈ.ಎಸ್‌.ವಿ. ದತ್ತ, ಪಂಚಪೀಠಾಧೀಶರು ಇಲ್ಲಿ ಬಂದಿ ದ್ದು ಬಾಯಾರಿದವನ ಬಳಿಗೆ ಬಾವಿಯೇ ಬಂದಂತಾಯ್ತು. ನಿಮ್ಮ ಕಾರುಣ್ಯದಿಂದ ದ್ವೇಷ, ಸಿಟ್ಟು, ಅಸೂಯೆ ಅಳಿದು ಮನುಷ್ಯ ಸಂಬಂಧಗಳು ಗಟ್ಟಿಯಾಗಲಿ. ಕಡೂರು ಶಾಂತಿ, ನೆಮ್ಮದಿ, ಸೌಹಾರ್ದಕ್ಕೆ ನೆಲೆಯಾಗಲಿ ಎಂದರು.

    ಸಮಾರಂಭದ ನೇತೃತ್ವವನ್ನು ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಎಡೆಯೂರು, ಹುಲಿಕೆರೆ, ಹುಣಸಘಟ್ಟ, ಕೆ.ಬಿದರೆ, ಚಿಕ್ಕಮಗಳೂರು, ಬಿಳಕಿ, ಹೊನ್ನವಳ್ಳಿ ಸೇರಿದಂತೆ ವಿವಿಧ ಶಾಖಾಮಠಗಳ ಶಿವಾಚಾರ್ಯರು ಇದ್ದರು.

    Political interference that creates conflict between religion and caste is not good.

  • ವಿಜೃಂಭಣೆಯಿಂದ ನಡೆದ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ

    ವಿಜೃಂಭಣೆಯಿಂದ ನಡೆದ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ

    ಬೀರೂರು: ಪಂಚ ಪೀಠಾ ಧೀಶರ ಅಡ್ಡಪಲ್ಲಕ್ಕಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಬೀರೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು.

    ಮಹೋತ್ಸವದ ಅಂಗವಾಗಿ ಭಾನುವಾರವೇ ಕಡೂರಿಗೆ ಬಂದು ವಾಸ್ತವ್ಯ ಮಾಡಿದ್ದ ರಂಭಾಪುರಿ, ಶ್ರೀಶೈಲ, ಕಾಶಿಯ ಹಿರಿಯ ಮತ್ತು ಕಿರಿಯ ಗುರುಗಳು, ಉಜ್ಜಯಿನಿಯ ಗುರುಗಳನ್ನು ಭಕ್ತರು ಅಲಂಕೃತ ಪಲ್ಲಕ್ಕಿಯಲ್ಲಿ ಹೊತ್ತು ಕೆಎಲ್‌ಕೆ ಮೈದಾನದಿಂದ ರಂಭಾಪುರಿ ಖಾಸಾ ಶಾಖಾಮಠದ ಆವರಣದವರೆಗೆ ಮೆರವಣಿಗೆ ನಡೆಸಿದರು.

    ಗುರುಗಳು ಪ್ರತಿನಿಧಿಸುವ ಹಸಿರು, ಕೆಂಪು, ನೀಲಿ, ಬಿಳಿ ಮತ್ತು ಹಳದಿ ಹೂಗ ಳಿಂದ ಪಲ್ಲಕ್ಕಿಯನ್ನು ಅಲಂಕರಿಸಲಾಗಿತ್ತು.

    ಕಡೂರಿನಲ್ಲಿ ನಿತ್ಯಾನುಷ್ಠಾನ ಪೂರ್ಣಗೊಳಿಸಿದ ಎಲ್ಲ ಶ್ರೀಗಳು ಜೊತೆಯಾಗಿ ಮೈದಾನ ಪ್ರವೇಶಿಸಿ ಅಲ್ಲಿ ಸಿದ್ಧಪಡಿಸಿದ್ದ ಅಡ್ಡಪಲ್ಲಕ್ಕಿಯಲ್ಲಿ ಕುಳಿತು ಸಂಪ್ರದಾಯದಂತೆ ಸುವರ್ಣ ಕಿರೀಟ ಧಾರಣೆ ಮಾಡಿದರು.

    ಎಲ್ಲ ಶ್ರೀಗಳು ಪಲ್ಲಕ್ಕಿ ಯಲ್ಲಿ ಅಸೀನರಾದ ತಕ್ಷಣ ಭಕ್ತರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಘೋಷಣೆಗಳೊಡನೆ ಮೆರವಣಿಗೆಗೆ ಚಾಲನೆ ನೀಡಿದರು. ಪದ್ಧತಿಯಂತೆ ಮೊದಲು ಬಾಳೆಹೊನ್ನೂರು, ಬಳಿಕ ಉಜ್ಜಯಿನಿ, ಕಾಶಿಯ ಕಿರಿಯ ಶ್ರೀಗಳು, ಶ್ರೀಶೈಲ ಮತ್ತು ಕಾಶೀ ಶ್ರೀಗಳ ಪಲ್ಲಕ್ಕಿ ಮೆರವಣಿಗೆ ಹೊರಟಿತು.

    ಮೆರವಣಿಗೆಯ ಮುಂಭಾಗದಲ್ಲಿ ಪೂರ್ಣಕುಂಭ, ಧರ್ಮಧ್ವಜ ಹಿಡಿದ ಮಹಿಳೆಯರು ಸಾಗಿದರೆ, ಮಂಗಳವಾದ್ಯ, ವೀರಗಾಸೆ ತಂಡಗಳು, ಡೊಳ್ಳುಕುಣಿತ ಉತ್ಸವಕ್ಕೆ ಮೆರುಗು ನೀಡಿದವು. ಕುದುರೆಯ ಮೇಲೆ ಕುಳಿತು ಧರ್ಮಧ್ವಜ ಹಿಡಿದ ಮಹಿಳೆ ಗಮನ ಸೆಳೆದರೆ, ತಾವರೆಕೆರೆ ಮಠದಿಂದ ತರಿಸಲಾಗಿದ್ದ ಯಾಂತ್ರಿಕ ಆನೆ ಭಕ್ತರ ಗಮನ ಸೆಳೆಯಿತು.

    ವಿವಿಧ ಸಂಘ ಸಂಸ್ಥೆಗಳು, ಪುರಸಭೆ, ಹಲವು ಸಮುದಾಯಗಳ ಪರವಾಗಿ ಪಂಚಪೀಠಾಧೀಶರಿಗೆ ಫಲಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಲಾಯಿತು. ಭಕ್ತರು ಶ್ರೀಗಳ ದರ್ಶನ ಮತ್ತು ಮಂತ್ರಾಕ್ಷತೆ ಪಡೆದರು. ಮೆರವಣಿಗೆ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಯಂತ್ರಣ ಹಾಕಿ ಪರ್ಯಾಯ ರಸ್ತೆಯಲ್ಲಿ ವಾಹನ ಸಾಗುವಂತೆ ಸಿದ್ಧತೆ ನಡೆಸಲಾಗಿತ್ತು.

    ಮೆರವಣಿಗೆ ಸಾಗುತ್ತಿರುವ ವೇಳೆ ಶ್ರೀರಾಮಪುರಂ ಬಳಿ ಮುಸ್ಲಿಂ ಸಮುದಾಯದವರು ಭಕ್ತರಿಗೆ ಪಾನೀಯ ವಿತರಿಸಿದರು. ಬೆಳಿಗ್ಗೆಯಿಂದ ಪಿಎಂಶ್ರೀ ಶಾಲೆಯ ಆವರಣದಲ್ಲಿ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳ್ಳಿ ಬಳಗದ ಸ್ವಯಂ ಸೇವಕರು ಆಹಾರ ವಿತರಣೆ ವ್ಯವಸ್ಥೆ ಜತೆಗೆ ಕೌಂಟರ್‌ ಬಳಿ ಉದ್ಘೋಷಣೆ ಮೂಲಕ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

    ಶಾಸಕ ಕೆ.ಎಸ್‌. ಆನಂದ್‌, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ವೈ.ಎಸ್‌.ವಿ. ದತ್ತ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಂ. ಲೋಕೇಶ್‌, ಉತ್ಸವ ಸಮಿತಿ ಅಧ್ಯಕ್ಷ ದೇವರಾಜ್‌, ಉಪಾಧ್ಯಕ್ಷ ಬಿ. ಆನಂದ ಶೆಟ್ಟಿ, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ರೇಣುಕಾರಾಧ್ಯ, ಉತ್ಸವ ಸಮಿತಿಯ ಬಿ.ವಿ. ಶಿವಸ್ವಾಮಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.

    The grand procession of the five patriarchs was held with great pomp and show.

  • ವಿಮಾನ ನಿಲ್ದಾಣಗಳ ಮಾದರಿಯಲ್ಲಿ ರಾಜ್ಯದ ಎಲ್ಲ ರೈಲುನಿಲ್ದಾಣ ಅಭಿವೃದ್ಧಿ

    ವಿಮಾನ ನಿಲ್ದಾಣಗಳ ಮಾದರಿಯಲ್ಲಿ ರಾಜ್ಯದ ಎಲ್ಲ ರೈಲುನಿಲ್ದಾಣ ಅಭಿವೃದ್ಧಿ

    ಬೀರೂರು: ರಾಜ್ಯದ ಎಲ್ಲ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಅಂಗವಿಕಲರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಲಿಫ್ಟ್‌, ಎಸ್ಕಲೇಟರ್‌ ಅಳವಡಿಸುವ ಉದ್ದೇಶವಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

    ಬೀರೂರು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಿಲ್ದಾಣ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್‌ ವಿಲೀನವಾದ ಬಳಿಕ ರಾಜ್ಯದಲ್ಲಿ ಇಲಾಖೆಯ ಕಾರ್ಯಗಳು ವೇಗ ಪಡೆದಿವೆ. ₹3300 ಕೋಟಿ ವೆಚ್ಚದಲ್ಲಿ 1,216 ಎಕರೆ ಭೂಸ್ವಾಧೀನದ ಮೂಲಕ ವಿಸ್ತರಣೆಗೆ ಇದ್ದ ಅಡಚಣೆ ತೆರವುಗೊಳಿಸಿದ್ದು ಇದೊಂದು ದಾಖಲೆಯಾಗಿದೆ ಎಂದು ಮಾಹಿತಿ ನೀಡಿದರು.

    ಅಮೃತಭಾರತ್‌ ಯೋಜನೆಯಡಿ ಬೀರೂರು ಮತ್ತು ಕಡೂರು ನಿಲ್ದಾಣಗಳನ್ನು ತಲಾ ₹ 20 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಕೆಲಸ 2027-28ರ ವೇಳೆಗೆ ಮುಗಿಯಲಿದೆ. ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ವಿಷಯದಲ್ಲಿ ಆಂದೋಲನವೇ ನಡೆದಿದೆ. ಈಗಾಗಲೇ 644 ಮೇಲ್ಸೇತುವೆ ನಿರ್ಮಿಸಲಾಗಿದೆ.1,662 ಕಿ.ಮೀ ಹೊಸಲೈನ್‌ ಅಳವಡಿಕೆ ಪ್ರಗತಿಯಲ್ಲಿದೆ ಎಂದರು.

    ಶುದ್ಧ ಕುಡಿಯುವ ನೀರು ಪೂರೈಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಯದಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ರಾಜ್ಯ ದೇಶದಲ್ಲಿ 21ನೇ ಸ್ಥಾನದಲ್ಲಿದ್ದು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದರು.

    ಈ ವೇಳೆ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್‌ ಮಿತ್ತಲ್‌, ಕಡೂರು ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ಬೀರೂರು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಸವಿತಾ ರಮೇಶ್‌ ಹಾಜರಿದ್ದರು.

    Development of all railway stations in the state on the model of airports

  • ರಾಜ್ಯಾಧ್ಯಕ್ಷ ಜಿ.ಎಂ ರಾಜಶೇಖರ್ ಗೆ ಕಡೂರು ಪತ್ರಕರ್ತರ ಗೌರವ

    ರಾಜ್ಯಾಧ್ಯಕ್ಷ ಜಿ.ಎಂ ರಾಜಶೇಖರ್ ಗೆ ಕಡೂರು ಪತ್ರಕರ್ತರ ಗೌರವ

    ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಎಂ. ರಾಜಶೇಖರವರು ತುಮಕೂರು ಹಾಗೂ ಹಾಸನ ಜಿಲ್ಲೆಯ ಅರಸಿಕೆರೆ ಪ್ರವಾಸದ ಸಂದರ್ಭದಲ್ಲಿ ಕಡೂರು ತಾಲೂಕು ಪತ್ರಕರ್ತರ ಸಂಘದವರು ಸ್ವಾಗತಿಸಿ ಗೌರವಿಸಿದರು.

    ಹಾಸನ ಹಾಗೂ ತುಮಕೂರು ಜಿಲ್ಲೆಯ ಪತ್ರಕರ್ತರನ್ನು ಭೇಟಿ ನೀಡುವ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಿಂದ ಪ್ರವಾಸ ಕೈಗೊಳ್ಳಲಾಗಿತ್ತು. ಮಾರ್ಗದ ಮಧ್ಯದಲ್ಲಿ ಕಡೂರು ತಾಲೂಕಿನ ಪತ್ರಕರ್ತರು ಸ್ವಾಗತಿಸಿ ಗೌರವಿಸಲಾಯಿತು. ನಂತರ ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘದ ಸೌಲಭ್ಯ ಹಾಗೂ ಸಂಘದ ಕಾರ್ಯ ಚಟುವಟಿಕೆ ಕುರಿತಂತೆ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡರು, ಸಂಘದ ಸದಸ್ಯತ್ವ ಅಭಿಯಾನವನ್ನು ನಡೆಸಲಾಯಿತು.

    ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಗದೀಶ್, ವಿಜಯ ಕರ್ನಾಟಕ ವರದಿಗಾರರು. ಎ.ಜೆ. ಪ್ರಕಾಶಮೂರ್ತಿ, ಉದಯವಾಣಿ ವರದಿಗಾರರು, ಕೃಷ್ಣಮೂರ್ತಿ, ಕನ್ನಡಪ್ರಭ ವರದಿಗಾರರು. ಬಿ .ಆರ್. ಕುಮಾರ್ ಉದಯ ಕರ್ನಾಟಕ ವರದಿಗಾರರು. ಅನಿಲ್ ಆನಂದ್ ಭೂಮಿಕ ಟಿವಿ ಮಾಲೀಕರು ಹಾಗೂ ಚಿಕ್ಕಮಗಳೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು. ಪುರುಷೋತ್ತಮ್ ಹಲ್ಮಿಡಿ ಪತ್ರಿಕೆ ಸಂಪಾದಕರು. ಹಾಗೂ ಪತ್ರಕರ್ತರಾದ ಶಿವು. ರಘು. ದೇವು ಮತ್ತು ರೇಣುಕಾ ಸ್ವಾಮಿ ಉಪಸ್ಥಿತರಿದ್ದರು.

    Kadur journalists pay tribute to State President G.M. Rajashekar

  • ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲ

    ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲ

    ಕಡೂರು: ಮಾನವ ಜೀವನ ಅಮೂಲ್ಯ. ದೇವರು ಕೊಟ್ಟ ಕೊಡುಗೆ ಅಪಾರ. ಅರಿವು ಆದರ್ಶಗಳಿಂದ ಜೀವನ ಸಮೃದ್ಧಗೊಳ್ಳಬೇಕು. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಶನಿವಾರ ತಾಲೂಕಿನ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರ ೮೦ನೇ ವರ್ಷದ ಜನ್ಮ ದಿನೋತ್ಸವ ಹಾಗೂ ಲಿಂ. ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳ ಪುಣ್ಯ ಸ್ಮರಣೊತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

    ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು. ಸನ್ಮಾರ್ಗದಲ್ಲಿ ನಡೆಯುವ ಛಲ ಬೇಕು. ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲು ಇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಜಾಗೃತಗೊಂಡು ಆದರ್ಶ ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಸತ್ಯ ಶುದ್ಧ ಕಾಯಕದಿಂದ ಜೀವನ ಸಾರ್ಥಕಗೊಳ್ಳುತ್ತದೆ. ಜೀವ ಶಿವನಾಗಲು ಅಂಗ ಲಿಂಗವಾಗಲು ಮತ್ತು ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳನ್ನು ಯಾರೂ ಮರೆಯುವಂತಿಲ್ಲ. ಲಿಂ. ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳವರ ಸಂಸ್ಕಾರದ ಗರಡಿಯಲ್ಲಿ ಬೆಳೆದ ಸರಳತೆ ಮತ್ತು ಸಾತ್ವಿಕತೆಗೆ ಹೆಸರಾದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು ವೀರಶೈವ ಧರ್ಮ ಸಂಸ್ಕೃತಿ ಬಿತ್ತಿ ಬೆಳೆಯುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಅಮೂಲ್ಯ ಕೊಡುಗೆ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ೮೦ ರ ಜನ್ಮ ದಿನೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀಗಳು ಮುಂದೊಂದು ದಿನ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಲೆಂದು ಬಯಸಿ ಶ್ರೀಗಳಿಗೆ ರೇಶ್ಮೆ ಪೀತಾಂಬರ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.

    ಶ್ರೀ ರಂಭಾಪುರಿ ಜಗದ್ಗುರುಗಳಿಂದ ಮತ್ತು ಭಕ್ತರಿಂದ ಸನ್ಮಾನಿತರಾದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಮ್ಮ ಜನ್ಮ ಇಂದು ಸಾರ್ಥಕಗೊಂಡಿದೆ. ಭಕ್ತ ಸಮೂಹದ ಸಮ್ಮುಖದಲ್ಲಿ ಆಗಮಿಸಿದ ಶಿವಾಚಾರ್ಯರ ಸಮಕ್ಷಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ದಯಮಾಡಿಸಿ ಆಶೀರ್ವದಿಸಿದ್ದು ನಮಗೆ ಆನೆ ಬಲ ಬಂದಂತಾಗಿದೆ. ಉಸಿರು ಇರುವ ತನಕ ವೀರಶೈವ ಸಂಸ್ಕೃತಿ ಮತ್ತು ಗುರು ಪರಂಪರೆ ವೈಶಿಷ್ಠ್ಯಗಳನ್ನು ಬೆಳೆಸುವುದಾಗಿ ಪಣ ತೊಟ್ಟರು. ಉಪದೇಶಾಮೃತ ನೀಡಿದ ಹುಲಿಕೆರೆ ದೊಡ್ಡಮಠದ ನೂತನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಗುರು ಕಾರುಣ್ಯವಿಲ್ಲದೇ ಬಾಳು ಬೆಳೆಯದು ಬಲಿಯದು. ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ನಮ್ಮ ಪಾಲಿನ ದೇವರು. ಅವರ ಸೇವೆಯೇ ನಮ್ಮ ಜೀವನದ ಉಸಿರು. ಅವರ ಆಶೀರ್ವಾದ ನಮ್ಮ ಮತ್ತು ಭಕ್ತರ ಮೇಲೆ ಸದ ಇರಲೆಂದು ಬಯಸಿದರು. ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜಗ ಬೆಳಗಲು ಸೂರ್ಯ ಬೇಕು. ಬದುಕು ಬೆಳಗಲು ಗುರು ಬೇಕು. ಗುರುವಿಗೂ-ಶಿವನಿಗೂ ಭೇದವಿಲ್ಲ. ಶಿವನ ಸಾಕಾರ ರೂಪವೇ ಶ್ರೀ ಗುರು. ವಿರೂಪಾಕ್ಷಲಿಂಗ ಶಿವಾಚಾರ್ಯರು ನಮಗೆ ಅತ್ಯಂತ ಆತ್ಮೀಯರು. ಸದ್ದು ಗದ್ದಲವಿಲ್ಲದ ಸಾಧನೆ ಅವರದೆಂದರು.

    ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಧಾನ ಪರಿ?ತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಧರ್ಮದ ಅರ್ಥ ಬಹಳ? ವಿಶಾಲವಾದದ್ದು. ಧರ್ಮವೊಂದು ಅಶ್ವತ್ಥವೃಕ್ಷ. ಆ ವೃಕ್ಷದ ರೆಂಬೆ ಕೊಂಬೆಗಳಂತೆ ಧರ್ಮಕ್ಕೆ ಹಲವಾರು ಮತ ಪಂಥಗಳಿವೆ. ಆದರೆ ಅವುಗಳನ್ನೇ ಧರ್ಮವೆಂದು ತಿಳಿದಿರುವ ಕಾರಣ ಆತಂಕ ಸಂಘ?ಕ್ಕೆ ಕಾರಣವಾಗಿದೆ. ಸನಾತನ ಧರ್ಮದ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬಂದರೆ ಎಲ್ಲ ಮತ ಧರ್ಮಗಳು ಸಾಮರಸ್ಯದಿಂದ ಬದುಕಿ ಬಾಳಲು ಸಾಧ್ಯವಾಗುತ್ತದೆ. ಹುಲಿಕೆರೆ ದೊಡ್ಡ ಮಠದ ವಿರೂಪಾಕ್ಷಲಿಂಗ ಶ್ರೀಗಳು ಜೀವನದುದ್ದಕ್ಕೂ ಧರ್ಮವನ್ನು ಮತ್ತು ಸಮಾಜವನ್ನು ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.

    ಸಮಾರಂಭ ಉದ್ಘಾಟಿಸಿದ ಅ.ಭಾ.ವೀ.ಲಿಂ.ಮಹಾಸಭೆ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ಲೋಕೇಶ್ ಮಾತನಾಡಿ ಜೀವನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಮುಖ್ಯ. ವೀರೂಪಾಕ್ಷಲಿಂಗ ಶ್ರೀಗಳು ಧರ್ಮ ಮುಖಿಯಾಗಿ ಮತ್ತು ಸಮಾಜ ಮುಖಿಗಳಾಗಿ ಸಮಾಜಕ್ಕೆ ಮಾರ್ಗದರ್ಶನ ತೋರಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು. ವಿರೂಪಾಕ್ಷಲಿಂಗ ಶ್ರೀಗಳವರ ೮೦ನೇ ವರ್ಷದ ನಿಮಿತ್ಯವಾಗಿ ವರಯೋಗಿ ನಾಮಾಂಕಿತ ಅಭಿನಂದನಾ ಗ್ರಂಥವನ್ನು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯನವರು ಬಿಡುಗಡೆ ಮಾಡಿ ‘ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವಿಲ್ಲದ ಜೀವನ ವ್ಯರ್ಥವಾದುದು. ಶ್ರೀಗಳವರ ಜೀವನದ ಸಿದ್ಧಿ ಸಾಧನೆಗಳನ್ನು ಒಳಗೊಂಡ ಅನೇಕ ವಿಚಾರಗಳಿವೆ. ಸಾಧನೆ ಮಾತನಾಡಬೇಕೆ ಹೊರತು ಮಾತನಾಡುವುದೇ ಸಾಧನೆಯಲ್ಲ. ಶ್ರೀಗಳವರ ಜೀವನವೇ ಒಂದು ತಪಸ್ಸು’ ಎಂದು ತಮ್ಮ ಹರುಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬೆಳ್ಳಿಪ್ರಕಾಶ್, ದಿಣ್ಣೇಕೆರೆ ಡಿ.ಎಂ. ಮಂಜುನಾಥಸ್ವಾಮಿ, ಹೆಚ್.ಸಿ.ಕಲ್ಕರುಡಪ್ಪ, ಎ.ಎನ್.ಮಹೇಶ್, ಬಿ.ಎ.ಶಿವಶಂಕರ್, ಹೆಚ್.ಎನ್.ನಂಜೇಗೌಡ, ಎಂ.ಎಲ್.ಮೂರ್ತಿ, ಲೋಕೇಶ್ ಪಿಳ್ಳೇನಹಳ್ಳಿ, ಎಮ್.ಬಿ. ಮುಂಡ್ರೇಗಿರಿರಾಜ್, ಎಸ್.ಬಿ.ರೇಣುಕಾರಾಧ್ಯ ಭಾಗವಹಿಸಿದ್ದರು.

    ಈ ಪವಿತ್ರ ಸಮಾರಂಭದಲ್ಲಿ ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ತರೀಕೆರೆ ಜಗದೀಶ ಶಿವಾಚಾರ್ಯರು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಂತ ಶಿವಾಚಾರ್ಯರು, ನಂದೀಪುರದ ನಂದೀಶ್ವರ ಶಿವಾಚಾರ್ಯರು, ಮಾದಿಹಳ್ಳಿ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಫಲಾಹಾರಸ್ವಾಮಿ ಮಠದ ಮುರುಘೇಂದ್ರ ಶಿವಾಚಾರ್ಯರು, ಕರಡೀಗವಿಮಠದ ಶಿವಯೋಗಿ ಶಿವಶಂಕರ ಸ್ವಾಮಿಗಳು, ಕುಪ್ಪೂರು ತೇಜೇಶ್ವರ ಶಿವಾಚಾರ್ಯರು, ಕೊಡ್ಲಿಪೇಟೆ ಮಹಾಂತಸ್ವಾಮಿಗಳು, ಕಿರಿಕೊಡ್ಲಿಮಠದ ಸದಾಶಿವ ಸ್ವಾಮಿಗಳು ಪಾಲ್ಗೊಂಡಿದ್ದರು. ಈ ಪವಿತ್ರ ಸಮಾರಂಭಕ್ಕೆ ಸಾಕ್ಷಿಯಾಗಿ ಹಲವಾರು ಗಣ್ಯರು-ಭಕ್ತರು ಉಪಸ್ಥಿತರಿದ್ದು ಶ್ರೀಗಳವರಿಗೆ ಅಭಿನಂದನೆ ಸಲ್ಲಿಸಿದರು. ಮೈಸೂರಿನ ಸಂಶೋಧಕ ಗಿರಿಜಾಪತಿ ಉಪನ್ಯಾಸ ನೀಡಿದರು. ಸಖರಾಯಪಟ್ಟಣದ ಸತೀಶ್ ಮಹಡಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸಹಳ್ಳಿ ಜಿ.ಮಲ್ಲೇಗೌಡ ಸ್ವಾಗತಿಸಿದರು. ಸಖರಾಯಪಟ್ಟಣದ ಶಿಕ್ಷಕ ಜಗದೀಶ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

    Life is bright by upholding values.

  • ರೈತರಿಗೆ ಉತ್ತಮ ದರ ಒದಗಿಸಲು ರೈತ ಉತ್ಪಾದಕ ಕಂಪನಿಗಳಿಗೆ ಉತ್ತೇಜನ

    ರೈತರಿಗೆ ಉತ್ತಮ ದರ ಒದಗಿಸಲು ರೈತ ಉತ್ಪಾದಕ ಕಂಪನಿಗಳಿಗೆ ಉತ್ತೇಜನ

    ಚಿಕ್ಕಮಗಳೂರು: ರೈತರ ಕಷ್ಟದ ದುಡಿಮೆಯ ಬಹುಭಾಗ ಯಾವುದೇ ಬಂಡವಾಳ ಹೂಡದೆ, ಕಷ್ಟಪಡದೇ ಇರುವ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಿ ರೈತರ ಉತ್ಪನ್ನಗಳಿಗೆ ಉತ್ತಮ ದರ ಒದಗಿಸಬೇಕೆಂಬ ಉದ್ದೇಶದಿಂದ ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸಲು ಸರ್ಕಾರ ಉತ್ತೇಜನ ನೀಡಲಾಗುತ್ತಿದೆ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

    ಕಡೂರಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಮೃತ ಮಹೋತ್ಸವ ಹಾಗೂ ಕಡೂರು ಪ್ರಗತಿ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಆರಂಭಿಸಿರುವ ರೈತ ಬಜಾರ್ ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸುವಲ್ಲಿ ರೈತ ಬಜಾರ್ ಕಲ್ಪನೆ ವಿನೂತನವಾಗಿದೆ ಎಂದು ಹೇಳಿದರು.

    ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಸಾಕಷ್ಟು ವಿದ್ಯುತ್ ಶೇಖರಣೆ ಮಾಡಲಾಗಿದೆ. ಹೀಗಿದ್ದರೂ ಸಹ ತಮ್ಮ ಸರ್ಕಾರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಕ್ರಮ ಕೈಗೊಂಡಿದೆ. ಏಷ್ಯಾದಲ್ಲಿಯೇ ದೊಡ್ಡದಾದ ಸೋಲಾರ್ ಪಾರ್ಕ್ ಪಾವಗಡದಲ್ಲಿ ರೈತರ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದ್ದು, ೨ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ರೈತರ ಸಹಯೋಗದಲ್ಲಿ ಇಲ್ಲಿ ೧೦ ಸಾವಿರ ಎಕರೆ ಪ್ರದೇಶವನ್ನು ಈ ಯೋಜನೆಗೆ ಬಳಸಿಕೊಳ್ಳಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ೧೯೫೦೦ ಮೆಗಾವ್ಯಾಟ್ ಬೇಡಿಕೆ ಇದ್ದು, ಉದ್ದೇಶಿತ ಯೋಜನೆಗಳು ಕಾರ್ಯಗತವಾದರೆ ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

    ನೆನೆಗುದಿಗೆ ಬಿದ್ದಿದ್ದ ಕುಸುಮ್-ಸಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಿದ್ದು ಒಂದು ವರ್ಷದೊಳಗೆ ೩೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಕಾರ್ಯ ಆರಂಭವಾಗಲಿದೆ. ಕುಸುಮ್-ಬಿ ಯೋಜನೆಯಡಿ ಶೇ.೮೦ ಸಹಾಯಧನದೊಂದಿಗೆ ಕೊಳವೆ ಬಾವಿ ಹೊಂದಿರುವ ರೈತರಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಈ ವರ್ಷ ೪೦ ಸಾವಿರ ಪಂಪ್‌ಸೆಟ್‌ಗಳಿಗೆ ಈ ಅವಕಾಶ ಲಭ್ಯವಿದ್ದು, ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗಾವಕಾಶ ದೊರೆಯಬೇಕೆಂಬ ಉದ್ದೇಶದಿಂದ ಕಡೂರಿನಲ್ಲಿ ಬಹುದೊಡ್ಡ ಗಾರ್ಮೆಂಟ್ಸ್ ಫ್ಯಾಕ್ಟರಿ ಶೀಘ್ರದಲ್ಲೆ ಕಾರ್ಯಾರಂಭ ಮಾಡಲಿದೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಶಾಸಕರ ಎಲ್ಲ ಪ್ರಯತ್ನಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ರೈತರ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸಿ ಲಾಭವಾಗಿಸುವ ಉದ್ದೇಶದಿಂದ ರೈತ ಬಜಾರ್ ಕಾರ್ಯಾರಂಭsವಾಗಿದೆ. ಟಿಎಪಿಸಿಎಂಎಸ್‌ನ ಈ ಕಾರ್ಯ ಪ್ರಶಂಸನೀಯ ಎಂದರಲ್ಲದೆ, ರಚನಾತ್ಮಕ ಕಾರ್ಯಗಳಿಗೆ ತಮ್ಮ ಸರ್ಕಾರದ ಸಹಕಾರ ಇರುವುದಾಗಿ ತಿಳಿಸಿದರು. ನಮ್ಮ ಸರ್ಕಾರ ಆ ಕಾರ್ಯಕ್ಕೆ ಚಾಲನೆ ನೀಡಿದೆ. ಸರ್ಕಾರದ ರೈತಪರ ಕಾಳಜಿಗೆ ಸಾಕ್ಷಿಯಾಗಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಭsದ್ರಾ ಉಪಕಣಿವೆ ಯೋಜನೆಯ ೨ ನೇ ಹಂತದ ಕಾಮಗಾರಿಗೆ ಒಂದೇ ಹಂತದಲ್ಲಿ ೪೦೦ ಕೋಟಿ ರೂ.ಗಳನ್ನು ಸರ್ಕಾರ ಒದಗಿಸಿದೆ ಎಂದರು.

    ಟಿಎಪಿಸಿಎಂಎಸ್ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ ಟಿಎಪಿಸಿಎಂಎಸ್, ರೈತ ಉತ್ಪಾದಕ ಕಂಪನಿ ಮತ್ತು ಅನಿಕೇತನ ಸಂಸ್ಥೆಯ ಸಹಭಾಗಿತ್ವದಲ್ಲಿ ಇಡೀ ರಾಜ್ಯದಲ್ಲಿ ಪ್ರಪ್ರಥಮವಾಗಿ ರೈತ ಬಜಾರ್ ಕಾರ್ಯಾರಂಭಗೊಂಡಿದ್ದು, ಮತ್ತಷ್ಟು ರೈತಪರ ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ಕೈಗೊಳ್ಳಲಾಗಿದೆ ಎಂದರು.

    ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ರೈತ ಬಜಾರ್ ಸಾಮಾಜಿಕ ಜಾಲತಾಣವನ್ನು ಲೋಕಾರ್ಪಣೆ ಮಾಡಿದರು. ಕಂಸಾಗರ ಸೋಮಶೇಖರ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಲ್.ರುದ್ರೇಗೌಡ, ಪುರಸಭೆಯ ಸದಸ್ಯರು, ರೈತ ಉತ್ಪಾದಕ ಕಂಪನಿಯ ಪದಾಧಿಕಾರಿಗಳು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

    Farmer producer companies encouraged to provide better prices to farmers

  • ಕೆ.ಎಲ್.ಕೆ ಮೈದಾನದಲ್ಲಿ ವಾಕಿಂಗ್ ಟ್ರಾಕ್ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

    ಕೆ.ಎಲ್.ಕೆ ಮೈದಾನದಲ್ಲಿ ವಾಕಿಂಗ್ ಟ್ರಾಕ್ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

    ಬೀರೂರು.: ಸಾರ್ವಜನಿಕರು ಮತ್ತು ಶಿಕ್ಷಣಪ್ರೇಮಿಗಳಿಗೆ ಸಹಕಾರವೆಂದು ಖರೀದಿ ಕುಟುಂಬದವರು ನೀಡಿದ ಭೂಮಿಯನ್ನು ಕೆ.ಎಲ್.ಕೆ.ಕಾಲೇಜು ಮೈದಾನವೆಂದೆ ಇತಿಹಾವಿರುವ ಈ ಮೈದಾನಕ್ಕೆ ಬಹಳ ವರ್ಷಗಳಿಂದ ವಾಕಿಂಗ್ ಟ್ರಾಕ್ ಮಾಡಬೇಕೆಂದು ಒತ್ತಾಹಿಸಿದರ ಪರಿಣಾಮ ಇಂದು ೩೯ಲಕ್ಷರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

    ಅವರು ಶನಿವಾರ ಕೆ.ಎಲ್.ಕೆ ಮೈದಾನದಲ್ಲಿ ನಗರೊತ್ಥಾನ ೪ರ ಯೋಜನೆಯಡಿ ವಾಕಿಂಗ್ ಟ್ರಾಕ್ ಮಾಡಲು ಇಂಟರ್ ಲಾಕ್ ಪಾತ್ ವೇ ಮತ್ತು ಪುರಸಭೆ ಹಿಂಭಾಗದಲ್ಲಿ ಪೌರಕಾರ್ಮಿರಿಗೆ ವಿಶ್ರಾಂತ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ಈ ಮೈದಾನಕ್ಕೆ ತನ್ನದೇ ಆದ ಇತಿಹಾವಿದ್ದು, ಇಲ್ಲಿ ಅನೇಕ ರಾಜಕಾರಣ ದಿಗ್ಗಜರು ಭೇಟಿ ನೀಡಿ ಹೋಗಿದ್ದಾರೆ. ಜೊತೆಗೆ ಬೀರೂರು ಪಟ್ಟಣದ ಅನೇಕ ವೃದ್ದರು, ಶಾಲಾ ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ತೆಗೆದುಕೊಂಡು ನಡೆದಾಡುತ್ತಾರೆ. ವಿದ್ಯಾರ್ಥಿಗಳು ಯುವಕರು ಕ್ರೀಡೆಗಳನ್ನಾಡಲು ಈ ಮೈದಾನವನ್ನು ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಮೈದಾನ ಕಪ್ಪುಮಣ್ಣಿರುವ ಕಾರಣ ಕೆಸರಿನಿಂದ ಕಾಲಿಡಲು ಸಹ ಆಗುವುದಿಲ್ಲ. ಇದಕ್ಕೆ ವಾಕಿಂಗ್ ಟ್ರಾಕ್ ಮಾಡಿದರೆ ಈ ಸಮಸ್ಯೆ ತಪ್ಪುತ್ತದೆ ಎನ್ನುವ ನಿಟ್ಟಿನಲ್ಲಿ ೩೯ಲಕ್ಷರೂ ವೆಚ್ಚದಲ್ಲಿ ೪೦೦ಮೀ ಶೀಘ್ರದಲ್ಲಿಯೇ ಇಂಟರ್ ಲಾಕ್ ಪಾತ್ ವೇ ಶೀಘ್ರವೇ ನಿರ್ಮಾಣವಾಗುತ್ತದೆ. ಇದರಿಂದ ಯುವಕರ ಕ್ರೀಡೆಗೂ ಉತ್ತೇಜನ ಸಿಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ಮೈದಾನವನ್ನು ತಾಲ್ಲೂಕು ಮಟ್ಟದ ಕ್ರೀಡಾಂಗಣ ಮಾಡಿಕೊಡಲು ಶ್ರಮಿಸಲಾಗುವುದು ಎಂದರು.

    ಪುರಸಭೆ ಪೌರ ಕಾರ್ಮಿಕರು ತ್ಯಾಗಜೀವಿಗಳು, ಬೆಳಗ್ಗೆ ೬ಕ್ಕೆ ಅವರು ಪಟ್ಟಣವನ್ನು ಸ್ವಚ್ಚಗೊಳಿಸಲು ಪ್ರಾರಂಭಿಸಿದರೇ ಸಂಜೆಯ ತನಕ ದುಡಿಯುವ ಈ ಕಾಯಕ ಯೋಗಿಗಳು ವಿಶ್ರಾಂತಿ ತೆಗದುಕೊಳ್ಳಲು ವಿಶ್ರಾಂತಿ ಗೃಹ ಇರಲಿಲ್ಲದನ್ನು ಮನಗಂಡು ಅವರು ಕೆಲಸ ಮುಗಿಸಿ ವಿರಾಮ ವಿದ್ದ ಸಮಯದಲ್ಲಿ ವಿಶ್ರಮಿಸಲು ೨೦ಲಕ್ಷರೂ ಅನುದಾನದಲ್ಲಿ ವಿಶ್ರಾಂತಿ ಗೃಹ ನಿರ್ಮಾಣವಾಗಲಿದ್ದು ಸ್ವಚ್ಚತ ಪೌರನೌಕರರಿಗೆ ಇದು ಸಹಾಯಕವಾಗಲಿದೆ ಎಂದರು.

    ಪುರಸಭೆ ಅಧ್ಯಕ್ಷೆ ವನಿತಮಧು ಬಾವಿಮನೆ ಮಾತನಾಡಿ, ಪಟ್ಟಣದ ಈ ಮೈದಾನಕ್ಕೆ ವಾಕಿಂಗ್ ಟ್ರಾಕ್ ತುಂಬಾ ಅವಶ್ಯಕವಾಗಿದ್ದು, ಶಾಸಕರು ಮಾಡುತ್ತಿರುವುದು ಶ್ಲಾಘನೀಯ, ಆದರೆ ಮೈದಾನದೊಡ್ಡದಿರುವ ಕಾರಣ ಇಲ್ಲಿ ಸಂಜೆ ಪೋಲಿಪೋಕರಿಗೆ ಅಡ್ಡೆಯಾಗದಂತೆ ರಾತ್ರಿ ಸಮಯದಲ್ಲಿ ಕುಡುಕರ ತಾಣವಾಗದಂತೆ ಈ ಮೈದಾನದ ಒಳಭಾಗಕ್ಕೆ ಸುತ್ತಾ ವಿದ್ಯುತ್ ದೀಪ ಅವಳಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

    ಪಟ್ಟಣದಲ್ಲಿ ಬೇಸಿಗೆ ಇರುವುದ್ದರಿಂದ ಭದ್ರಾ ನೀರು ಪೂರೈಕೆ ವ್ಯತ್ಯಾಸವಾದಲ್ಲಿ ಸಾರ್ವಜನಿಕರಿಗೆ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಶಾಸಕರಾದ ತಾವು ಪ್ರತಿ ವಾರ್ಡಗಳಿಗೆ ಬೋರ್ ಕೊರೆಸಿದರೆ ಅನುಕೂಲವಾಗುತ್ತದೆ. ಜೊತೆಗೆ ಭಗವತ್ ನಗರ ಮತ್ತು ಪುರಿಭಟ್ಟಿ ವಾರ್ಡಗಳಿಗೆ ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ ಅದನ್ನು ತಾವು ಮಾಡಿಸಲು ಅನುದಾನ ನೀಡಬೇಕೆಂದರು.

    ಇದಕ್ಕೆ ಪ್ರತಿಕ್ರಿಸಿದ ಶಾಸಕರು, ಈ ಹಿಂದೆ ಬೀರೂರು ಪಟ್ಟಣದ ಪಂಪೌ ಹೌಸ್ ಸುತ್ತಾಮುತ್ತಾ ೫ಬೋರ್ ಕೊರೆಸಲಾಗಿದ್ದು, ಇನ್ನು ನೀರಿನ ಅಭಾವವಿದ್ದರೆ ಮುಂದಿನ ದಿನಗಳಲ್ಲಿ ಕೊಳವೆ ಬಾವಿ ಕೊರೆಸಲಾಗುವುದು. ಪಟ್ಟಣದಲ್ಲಿ ೨೩ ವಾರ್ಡಗಳಲ್ಲಿಯು ಸಹ ರಸ್ತೆ ಸಮಸ್ಯೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ ಆದ್ಯತೆ ಮೇರೆಗೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಮಾಡಿಸಲಾಗುವುದು. ರಾಷ್ಟ್ರಿಯ ಹೆದ್ದಾರಿ ಹಾದುಹೋಗಿರುವ ಪರಿಣಾಮ ಸ್ಮಶಾಣವು ಸಹ ಹಾಳಾಗಿದ್ದು ಅದರ ಅಭಿವೃದ್ದಿಗು ಸಹ ಹಣ ಮೀಸಲಿರಿಸಿದ್ದೇನೆ ಎಂದರು.

    ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಬಿ.ಕೆ.ಶಶಿಧರ್, ರಾಜು, ರವಿಕುಮಾರ್, ಬಿ.ಆರ್.ಮೋಹನ್ ಕುಮಾರ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಆಸಂದಿ ಕಲ್ಲೇಶ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಗುತ್ತಿಗೆದಾರ ಗಿರೀಶ್, ಆಶ್ರಯ ಸಮಿತಿ ಸದಸ್ಯ ಮುಬಾರಕ್, ವಿನಾಯಕ್ ಸೇರಿದಂತೆ ಮತ್ತಿತರರು ಇದ್ದರು.

    MLAs perform Bhoomi Pooja for walking track construction at KLK Maidan

  • ಸ್ಕೂಟಿಗೆ ಪೊಲೀಸ್ ಜೀಪ್ ಡಿಕ್ಕಿ-ಚಾಲಕ ಸಾವು

    ಸ್ಕೂಟಿಗೆ ಪೊಲೀಸ್ ಜೀಪ್ ಡಿಕ್ಕಿ-ಚಾಲಕ ಸಾವು

    ಚಿಕ್ಕಮಗಳೂರು: ಜೀವರಕ್ಷಣೆ ಮಾಡಬೇಕಾದ ಪೊಲೀಸರೇ ಸ್ಕೂಟಿಯಲ್ಲಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಸಂಭವಿಸಿದ್ದು ವೇಗವಾಗಿ ಬಂದ ಪೊಲೀಸ್ ಜೀಪ್ ಹಿಂಬದಿಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ನಿಲ್ಲಿಸಿದೆ ಎಸ್ಕೆಪ್ ಆಗಿದ್ದಾರ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಜೀವ ರಕ್ಷಣೆ ಮಾಡಬೇಕಾದ ಪೊಲೀಸರು ಮಾನವೀಯತೆ ಮರೆತು ವರ್ತಿಸಿರುವ ಘಟನೆ ನಡೆದಿದೆ. ಪೊಲೀಸ್ ಜೀಪ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಈ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸ್ಕೂಟರ್ ಚಾಲಕನನ್ನು ಗಂಗಾಧರ್ (೪೯) ಎಂದು ಗುರುತಿಸಲಾಗಿದೆ.

    ಸಿಂಗಟಗೆರೆ ಪೊಲೀಸ್ ಠಾಣೆಗೆ ಸೇರಿದ ಜೀಪ್ ವೇಗವಾಗಿ ಬಂದು ಸ್ಕೂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಪೊಲೀಸರು ಜೀಪ್ ನಿಲ್ಲಿಸದೆ ಪರಾರಿಯಾಗಿದ್ದಾರೆ. ಈ ಘಟನೆ ಕಡೂರು – ಮರವಂಜಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಮೃತದೇಹ ತೆಗೆಯಲು ಬಿಡುತ್ತಿಲ್ಲ. ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

    ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಸ್ಕೂಟರ್ ಗೆ ಡಿಕ್ಕಿ ಹೊಡೆದು, ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಜೀಪ್ ಚಾಲಕ ಶಿವಕುಮಾರ್ ಅಪಘಾತದ ನಂತರ ವಾಹನ ನಿಲ್ಲಿಸದೆ ಪರಾರಿಯಾಗಿದ್ದನು ಈ ಹಿನ್ನೆಲೆಯಲ್ಲಿ ಆತನನ್ನು ಅಮಾನತ್ತು ಮಾಡಿ ಎಸ್‌ಪಿ ವಿಕ್ರಮ್ ಅಮ್ಮೆ ಆದೇ ಹೊರಡಿಸಿದ್ದಾರೆ.

    ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಅವರ ಆದೇಶದ ಮೇರೆಗೆ ಜೀಪ್ ಚಾಲಕ ಶಿವಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸರು ಜೀಪ್ ಅನ್ನು ವಶಕ್ಕೆ ಪಡೆದು ಶಿವಕುಮಾರ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Police jeep collides with scooty driver dies

  • ದೇವಾಲಯಗಳಲ್ಲಿ ಕಳವು ವ್ಯಕ್ತಿ ಸೆರೆ: ೧ ಲಕ್ಷ ರೂ.ವಶ

    ದೇವಾಲಯಗಳಲ್ಲಿ ಕಳವು ವ್ಯಕ್ತಿ ಸೆರೆ: ೧ ಲಕ್ಷ ರೂ.ವಶ

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಎಂಟು ಪ್ರಕರಣಗಳಲ್ಲಿಆರೋಪಿಯನ್ನು ಬಂಧಿಸಿರುವ ಪೊಲೀಸರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ

    ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಮ್ ಅಮಟೆ, ಉಪಪೊಲೀಸ್ ಮುಖ್ಯಾಧಿಕಾರಿ ಹೆಚ್.ಎಂ.ಶೈಲೇಂದ್ರ,ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ವಿ.ಎಸ್.ಹಾಲಮೂರ್ತಿರಾವ್ ಇವರುಗಳ ಮಾರ್ಗದರ್ಶನದಲ್ಲಿ ಕಡೂರು ವೃತ್ತನಿರೀಕ್ಷಕ ರಫೀಕ್ ನೇತೃತ್ವದಲ್ಲಿ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವಹಿನ್ನಲೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ತಂಡವನ್ನು ರಚಿಸಲಾಗಿತ್ತು.

    ಕಾರ್ಯಪ್ರವೃತ್ತವಾದ ತಂಡವು ವಿವಿಧ ಆಯಾಮಗಳಿಂದ ಮಾಹಿತಿ ಕಲೆ ಹಾಕಿ ವೈಜ್ಞಾನಿಕ ತನಿಖೆ ನಡೆಸಿ ಆರೋಪಿ ಬಳ್ಳಾರಿ ನಗರ ಈಗ ಚಿಕ್ಕಮಗಳೂರು ನಗರದ ಟಿಪ್ಪುನಗರದಲ್ಲಿ ವಾಸವಾಗಿದ್ದ ಮೊಹಮ್ಮದ್ ಸಾಂ ಸದ್ದಾಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈತನ ಮೇಲೆ ಈ ಹಿಂದೆ ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿರುತ್ತದೆ.

    ಈ ವ್ಯಕ್ತಿಯ ತನ್ನ ಸಹಚರನೊಂದಿಗೆ ಕಡೂರು, ಯಗಟಿ, ಬೀರೂರು, ಸಖರಾಯಪಟ್ಟಣ, ಅಜ್ಜಂಪುರ, ಚಿಕ್ಕಮಗಳೂರು ನಗರ, ಬಸವನಹಳ್ಳಿ, ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಲವಾರು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್, ಕಳ್ಳತನ ಮಾಡಿದ್ದ ಕಾಣಿಕೆ ಹುಂಡಿ ಮತ್ತು ವಿವಿಧ ಮುಖಬೆಲೆಯ ಚಿಲ್ಲರೆ ಹಣವನ್ನು ವಶಕ್ಕೆ ಪಡೆಯಲಾಗಿದೆ.

    ಇವುಗಳ ಒಟ್ಟು ಮೌಲ್ಯ ಸುಮಾರು ೧ ಲಕ್ಷ, ರೂ.ಗಳಾಗಿದೆ. ಈತನ ಬಂಧನದಿಂದ ಕಡೂರು ಠಾಣೆಯಲ್ಲಿ ೧ ಕಳ್ಳತನ ಪ್ರಕರಣ. ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿದ ಪೊಲೀಸ್ ಠಾಣೆಗ ಲ್ಲಿ ದಾಖಲಾಗಿದ್ದ ೭ ಪ್ರಕರಣಗಳು ಸೇರಿದಂತೆ ಒಟ್ಟು ೮ ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.

    ಆರೋಪಿ ಪತ್ತೆಕಾರ್ಯದಲ್ಲಿ ಕಡೂರು ಪೊಲೀಸ್ ಠಾಣೆಯ ಪಿಎಸ್‌ಐ ಸಿ.ಸಿ.ಪವನ್‌ಕುಮಾರ್, ಡಿ.ಹೆಚ್.ಧನಂಜಯ್, ಲೀಲಾವತಿ ಮತ್ತು ಸಿಬ್ಬಂದಿಗಳಾದ, ಕುಚೇಲ, ಮಧುಕುಮಾರ್, ಬಿ.ಸಿ. ಹರೀಶ್, ಧನಪಾಲ್ ನಾಯ್ಕ, ಸ್ವಾಮಿ, ಪರಮೇಶ್, ರಬ್ಬಾನಿ ಮತ್ತು ನಯಾಜ್ ತಾಂತ್ರಿಕ ವಿಭಾಗದ ಡಿ ಪಿ ಓ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿರುತ್ತಾರೆ.

    ಪ್ರಕರಣಗಳಲ್ಲಿ ಯಶಸ್ವಿಯಾಗಿ ಆರೋಪಿಯನ್ನು ಪತ್ತೆ ಮಾಡಿ ಕದ್ದ ಮಾಲನ್ನು ವಶಕ್ಕೆ ಪಡೆದು ಜಿಲ್ಲೆಯ ಒಟ್ಟು ೦೮ ಪ್ರಕರಣಗಳನ್ನು ಭೇದಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಶ್ರಮಿಸಿದ ಅಪರಾಧ ಪತ್ತೆ ತಂಡದ ಅಧಿಕಾರಿ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಚಿಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

    Man arrested for stealing from temples: Rs 1 lakh seized

  • ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ

    ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ

    ಚಿಕ್ಕಮಗಳೂರು: ಮನುಷ್ಯನ ಜೀವನದಲ್ಲಿ ಆರೋಗ್ಯವು ಬಹುಮುಖ್ಯ ಪಾತ್ರ ವಹಿಸುತ್ತದೆ. ಉತ್ತಮ ಆರೋಗ್ಯ ಒಂದಿದ್ದರೆ ಏನನ್ನಾದರು ಸಾಧಿಸಬಹುದು ಎಂದು ಕಡೂರು ಪುರಸಭೆ ಅಧ್ಯಕ್ಷರಾದ ಬಂಡಾರಿ ಶ್ರೀನಿವಾಸ್ ಹೇಳಿದರು.

    ಸಖರಾಯ ಪಟ್ಟಣ ಹೋಬಳಿ ನಾಗೇನಹಳ್ಳಿ ಗ್ರಾಮದ ಶ್ರೀ ಆಂಜನೇಯ ವಿದ್ಯಾ ಸಂಸ್ಥೆ,ಆವರಣದಲ್ಲಿ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹಾಸನ ಇವರ ಸಂಯಕ್ತಾಶ್ರಯದಲ್ಲಿ ಕಡೂರಿನ ಮಾಜಿ ಶಾಸಕ ದಿ. ಎನ್.ಕೆ ಹುಚ್ಚಪ್ಪ, ದಿ. ಶಂಕರಮ್ಮ ಹಾಗೂ ದಿ. ಎನ್.ಎಸ್ ಚಂದ್ರಪ್ಪ ಇವರುಗಳ ಸ್ಮರಣಾರ್ಥವಾಗಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಬಹು ಮುಖ್ಯವಾಗಿದೆ. ಅನಾರೋಗ್ಯವು ಸಾಧನೆಗೆ ಅಡ್ಡಿಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆಯು ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಪ್ರತಿಯೊಬ್ಬರು ನಮ್ಮ ಸಾಂಸ್ಕೃತಿಕ ಆಹಾರ ಪದ್ಧತಿಯನ್ನು ಅನುಸರಿಸಿ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ ಎಂದರು.

    ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳು ವಿವಿಧ ರಾಸಾಯನಿಕಗಳಿಂದ ಕೂಡಿ ವಿಷವಾಗಿ ಹೋಗಿದೆ. ಇವುಳಿಂದ ಹಣ್ಣು, ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಲ್ಲಿರಬೇಕಾದ ಉತ್ತಮ ಅಂಶವು ಸಾಯುತ್ತಿದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದರು.

    ಇಂದಿನ ಯುವ ಜನತೆಯು ಆಹಾರದಲ್ಲಿನ ಪೌಷ್ಠಿಕಾಂಶದ ಕೊರತೆಯಿಂದ ಸಣ್ಣ ತಲೆ ನೋವಿಗೂ ಆಸ್ಪತ್ರೆಗೆ ಹೋಗುವ ಪ್ರಸಂಗಗಳು ಉಂಟಾಗುತ್ತದೆ. ಮನೆ ಮದ್ದುಗಳಿಂದ ಅನೇಕ ಕಾಯಿಲೆಗಳನ್ನು ಗುಣ ಪಡಿಸಿಕೊಳ್ಳಬಹುದು ಎಂದ ಅವರು ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲೂ ಹೆಚ್ಚು ಅಸಕ್ತಿ ವಹಿಸಿ ತಮ್ಮ ದೇಹ ಮತ್ತು ಮನಸ್ಸನ್ನು ಸಧೃಡವಾಗಿಸಿಕೊಳ್ಳಿ ಎಂದು ತಿಳಿಸಿದರು

    ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿತಿನ್ ರಾಜು ಮಾತನಾಡಿ. ಆರೋಗ್ಯದ ವಿಷಯದಲ್ಲಿ ಚಿಕಿತ್ಸೆಗಿಂತ ತಡೆಗಟ್ಟುವಿಕೆಯು ಬಹು ಮುಖ್ಯ ಪಾತ್ರ ವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ಪೋಷಕರು ತಮ್ಮ ದಿನನಿತ್ಯದ ಕೆಲಸದ ಒತ್ತಡದಲ್ಲಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗೂ ಯುವಕರು ವೃತ್ತಿ ಅರಸಿ ಹಳ್ಳಿ ತೊರೆದು ಪಟ್ಟಣ ಸೇರುತ್ತಿಸುವುದರಿಂದ ವೃದ್ಧರ ಆರೋಗ್ಯ ಗಮನಿಸುವುದು ಕಡಿಮೆಯಾಗುತ್ತಿದೆ. ಆದ್ಧರಿಂದ ಗ್ರಾಮೀಣ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಆರೋಗ್ಯ ಸುಧಾರಿಸಿ ಉತ್ತಮ ಜೀವನ ನಿರ್ವಹಣೆಗೆ ಸಹಕರಿಸುವುದು ನಮ್ಮ ಕರ್ತವ್ಯ ಎಂದರು.

    ಶ್ರೀ ಆಂಜನೇಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್.ಹೆಚ್ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ವೃದ್ಧರು ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಸಾರ್ವಜನಿಕರು ತಮ್ಮ ಆರೋಗ್ಯ ತಪಾಸಣೆಗಾಗಿ ದೂರದ ನಗರಕ್ಕೆ ತೆರಳುವುದು ಆಯಾಸಕರ ಹಾಗೂ ಕಷ್ಟಕರ ಸಂಗತಿಯಾಗಿದೆ. ಇಂತವರಿಗಾರಿ ಗ್ರಾಮೀಣ ಭಾಗದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುವುದು ಒಂದು ಉತ್ತಮ ಕಾರ್ಯವಾಗಿದೆ ಇದರಿಂದ ಎಂದ ಅವರು ಪ್ರತಿಯೊಬ್ಬ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.

    ಕಾರ್ಯಕ್ರಮದಲ್ಲಿ ಪಂಚಕರ್ಮ ಚಿಕಿತ್ಸಾ ತಜ್ಞ ಡಾ. ಉದಯ್ ಗಣೇಶ್, ಚರ್ಮರೋಗ ತಜ್ಞೆ ಡಾ.ಶಿಲ್ಪ ಕೆ.ಎನ್., ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ದೀಪಾಶ್ರೀ, ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಗೋವರ್ದನ್, ಮದುಮೇಹ ತಜ್ಞ ಡಾ,ವೇಣು ಎಸ್., ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಚಂದ್ರಮ್ಮ, ಹಾಗೂ ವಿವಿಧ ವಿಭಾಗದ ವೈದ್ಯರು, ತಜ್ಞರು ಸೇರಿದಂತೆ ವಿದ್ಯಾರ್ತಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

    Free mass health check-up and bone density testing camp