Category: ರಾಷ್ಟ್ರ

  • ಎ.ಸಿ ಬಸ್‌ ಬೆಂಕಿ ಹೊತ್ತಿ ಉರಿದು 20 ಮಂದಿ ಸಜೀವ ದಹನ

    ಎ.ಸಿ ಬಸ್‌ ಬೆಂಕಿ ಹೊತ್ತಿ ಉರಿದು 20 ಮಂದಿ ಸಜೀವ ದಹನ

    ಕರ್ನೂಲು: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎ.ಸಿ ಬಸ್‌ವೊಂದು ಅಪಘಾತದಲ್ಲಿ ಬೆಂಕಿ ಹೊತ್ತಿ ಉರಿದಿದ್ದರಿಂದ 20 ಮಂದಿ ಸಜೀವ ದಹನಗೊಂಡ ಘಟನೆ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಶುಕ್ರವಾರ ನಡೆದಿದೆ.

    ಮುಂದಿದ್ದ ಬೈಕ್‌ಅನ್ನು ಹಿಂದಿಕ್ಕಲು ಚಾಲಕ ಯತ್ನಿಸಿದಾಗ ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಬಸ್‌ನಲ್ಲಿದ್ದವರ ಪೈಕಿ 19 ಪ್ರಯಾಣಿಕರು ಸಜೀವ ದಹನಗೊಂಡರೆ, ಘಟನೆಯಲ್ಲಿ ಬೈಕ್‌ ಸವಾರ ಕೂಡ ಮೃತಪಟ್ಟಿದ್ದಾರೆ.

    ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೀಪಾವಳಿಗಾಗಿ ಹೈದರಾಬಾದ್‌ ಹಾಗೂ ಇತರ ಸ್ಥಳಗಳಿಗೆ ತೆರಳಿದ್ದವರು, ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದರು.

    ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಮೃತರ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದ್ದು, ವಿಧಿವಿಜ್ಞಾನ ತಜ್ಞರ ತಂಡವೊಂದು ಘಟನಾ ಸ್ಥಳಕ್ಕೆ ತೆರಳಿ ಮಾದರಿಗಳನ್ನು ಸಂಗ್ರಹಿಸಿದೆ.  ಶುಕ್ರವಾರ ಬೆಳಗಿನ ಜಾವ ಈ ಅವಘಡ ಸಂಭವಿಸಿದೆ. ಆಗ ಪ್ರಯಾಣಿಕರು ಗಾಢನಿದ್ರೆಯಲ್ಲಿ ಇದ್ದರು. ಹೀಗಾಗಿ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗಲು ಇದು ಕೂಡ ಒಂದು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಹ ದುರ್ಘಟನೆ ಕುರಿತು ದುಃಖ ವ್ಯಕ್ತಪಡಿಸಿದ್ದಾರೆ.

    20 people burnt alive in AC bus fire

     

  • ಚಿನ್ನದ ಬೆಲೆ10 ಗ್ರಾಂಗೆ 5,080 ರೂ. ರಷ್ಟು ಹೆಚ್ಚಳ

    ಚಿನ್ನದ ಬೆಲೆ10 ಗ್ರಾಂಗೆ 5,080 ರೂ. ರಷ್ಟು ಹೆಚ್ಚಳ

    ನವದೆಹಲಿ: ಚಿನ್ನದ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹5,080ರಷ್ಟು ಹೆಚ್ಚಳ ಕಂಡಿದೆ. ಈ ಮೂಲಕ ಚಿನ್ನದ ಬೆಲೆಯು ಮಂಗಳವಾರದ ಅಂತ್ಯಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1,12,750ಕ್ಕೆ ತಲುಪಿದೆ.

    ಹಳದಿ ಲೋಹದ ಬೆಲೆಯು ಪ್ರತಿ 10 ಗ್ರಾಂಗಳಿಗೆ ಈ ಕ್ಯಾಲೆಂಡರ್ ವರ್ಷದಲ್ಲಿ ₹33,800ರಷ್ಟು (ಅಂದರೆ ಶೇ 43ರಷ್ಟು) ಹೆಚ್ಚಳ ಕಂಡಿದೆ. 2024ರ ಡಿಸೆಂಬರ್‌ 31ರಂದು ಚಿನ್ನದ ಬೆಲೆಯು 10 ಗ್ರಾಂಗೆ ₹78,950 ಆಗಿತ್ತು.

    ಅಖಿಲ ಭಾರತ ಸರಾಫ್ ಒಕ್ಕೂಟ ನೀಡಿರುವ ಮಾಹಿತಿ ಪ್ರಕಾರ ಶೇಕಡ 99.9ರಷ್ಟು ಶುದ್ಧತೆಯ ಚಿನ್ನದ ದರವು ಸೋಮವಾರದ ಅಂತ್ಯಕ್ಕೆ ₹1,07,670 ಆಗಿತ್ತು.

    ಕೆ.ಜಿ. ಬೆಳ್ಳಿಯ ಬೆಲೆಯು ₹2,800ರಷ್ಟು ಹೆಚ್ಚಳ ಕಂಡಿದ್ದು, ಮಂಗಳವಾರದ ಅಂತ್ಯಕ್ಕೆ ₹1,28,800 ಆಗಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯಕ್ಕೆ ಬೆಳ್ಳಿಯ ಬೆಲೆಯು ₹1,26,000 ಆಗಿತ್ತು. ಜಾಗತಿಕ ಮಾರುಕಟ್ಟೆ ಯಲ್ಲಿಯೂ ಚಿನ್ನದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

    ಅಮೆರಿಕದ ಹಣಕಾಸು ನೀತಿಯಲ್ಲಿ ತುಸು ಸಡಿಲಿಕೆ ತರುವ ಲಕ್ಷಣಗಳಿವೆ. ಹೀಗಾಗಿ ಹೂಡಿಕೆದಾರರು ಸುರಕ್ಷಿತವಾದ ಚಿನ್ನದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ತೊಡಗಿಸುತ್ತಿದ್ದಾರೆ. ಡಾಲರ್‌ ಮೌಲ್ಯವು ಇಳಿಕೆ ಕಂಡಿದ್ದುದು ಸಹ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ.

    Gold price increases by Rs 5,080 per 10 grams

     

  •  ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

     ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

    ನವದೆಹಲಿ: ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ, ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ದೇಶದ 17ನೇ ಉಪ ರಾಷ್ಟ್ರಪತಿಯಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ.

    ಇಂದು ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು 452 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿಅವರು 300 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಪರಾಭವಗೊಂಡರು.

    ಫಲಿತಾಂಶಗಳನ್ನು ಪ್ರಕಟಿಸಿದ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಅವರು, ರಾಧಾಕೃಷ್ಣನ್ ಅವರು ವಿರೋಧ ಪಕ್ಷದ ಅಭ್ಯರ್ಥಿ ನ್ಯಾಯಮೂರ್ತಿ(ನಿವೃತ್ತ) ಸುದರ್ಶನ್ ರೆಡ್ಡಿ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದರು.

    ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ಮತ್ತು ಎರಡು ಬಾರಿ ಲೋಕಸಭಾ ಸಂಸದರಾಗಿದ್ದ ರಾಧಾಕೃಷ್ಣನ್ ಅವರು ಈಗ ದೇಶದ 15ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರೂ ಆಗಿರುತ್ತಾರೆ.

    ಅಕ್ಟೋಬರ್ 20, 1957 ರಂದು ತಮಿಳುನಾಡಿನ ಕೊಂಗು ಪ್ರದೇಶದ ತಿರುಪ್ಪೂರಿನಲ್ಲಿ ಜನಿಸಿದ ರಾಧಾಕೃಷ್ಣನ್ ಅವರು, 17ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಸೇರಿದರು. ನಂತರ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ) ಕಾರ್ಯಕರ್ತರಾಗಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ, ಎರಡು ಬಾರಿ ಸಂಸದರಾಗಿ, ಆನಂತರ ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

    C.P. Radhakrishnan elected as new Vice President
  • ಮತದಾರರ ಗುರುತಿನ ದಾಖಲೆಯಾಗಿ ಆಧಾರ್‌ ಸಂಖ್ಯೆ ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ

    ಮತದಾರರ ಗುರುತಿನ ದಾಖಲೆಯಾಗಿ ಆಧಾರ್‌ ಸಂಖ್ಯೆ ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ

    ನವದೆಹಲಿ:  ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮತದಾರರ ಗುರುತಿನ ದಾಖಲೆಯಾಗಿ ಆಧಾರ್‌ ಸಂಖ್ಯೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

    ಪ್ರಸ್ತುತ ಬಿಹಾರದಲ್ಲಿ ಎಸ್‌ಐಆರ್‌ ಪ್ರಕ್ರಿಯೆಗೆ 11 ದಾಖಲೆಗಳನ್ನು ಗೊತ್ತುಪಡಿಸಲಾಗಿದೆ. ಮತದಾರರು ಈ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಅರ್ಜಿ ನಮೂನೆ ಜೊತೆ ಸಲ್ಲಿಸಬೇಕಿದೆ.

    ನ್ಯಾಯಮೂರ್ತಿ ಸೂರ್ಯ ಕಾಂತ್‌ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು, 12ನೇ ದಾಖಲೆಯಾಗಿ ‘ಆಧಾರ್‌’ ಅನ್ನು ಪರಿಗಣಿಸುವಂತೆ ಹೇಳಿದೆ. ಆದಾಗ್ಯೂ, ಆಧಾರ್‌ ಸಂಖ್ಯೆಯು ಪೌರತ್ವಕ್ಕೆ ಪುರಾವೆ ಅಲ್ಲ. ಅದನ್ನು ಗುರುತಿನ ದಾಖಲೆಯಾಗಿ ಪರಿಗಣಿಸಬಹುದಷ್ಟೆ ಎಂದು ನ್ಯಾಯಪೀಠ ಹೇಳಿದೆ.

    ಮತದಾರರ ನೋಂದಣಿಗೆ ಗುರುತಿನ ದಾಖಲೆಯಾಗಿ ಆಧಾರ್ ಅನ್ನು ಪರಿ ಗಣಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ್ದರೂ, ಅದನ್ನು ಪಾಲನೆ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಚುನಾವಣಾ ಆಯೋಗಕ್ಕೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್‌ ಸೋಮವಾರ ವಾಗ್ದಾಳಿ ನಡೆಸಿತು.

    ಇದೇ ವೇಳೆ, ‘ಈ ಚುನಾವಣೆಯು ಆಡಳಿತ ವ್ಯವಸ್ಥೆ ಮತ್ತು ಚುನಾವಣಾ ಆಯೋಗದ ತಿರಸ್ಕಾರ ಧೋರಣೆ ವಿರುದ್ಧದ ಹೋರಾಟ’ ಎಂದು ಹೇಳಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು, ‘ಈ ಕುರಿತು ಸುಪ್ರೀಂ ಕೋರ್ಟ್‌ ಮೂರನೇ ಬಾರಿಗೆ  ನಿರ್ದೇಶನ ನೀಡಿದೆ. ಅರ್ಹ ಮತದಾರರ ನೋಂದಣಿಗೆ ಉದ್ದೇಶಪೂರ್ವಕವಾಗಿ ಅನನುಕೂಲ ಉಂಟುಮಾಡಲು ಚುನಾವಣಾ ಆಯೋಗವು ನಿರಂತರವಾಗಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ’ ಎಂದು ಆರೋಪಿಸಿದರು. ‘

    ರಾಜಕೀಯ ಪಕ್ಷಗಳು ನೇಮಿಸಿದ ಬ್ಲಾಕ್‌ ಮಟ್ಟದ ಏಜೆಂಟ್‌ಗಳನ್ನು ಗುರುತಿಸಲು ಮತ್ತು ಆಧಾರ್‌ ಅನ್ನು ದಾಖಲೆಯಾಗಿ ಸ್ವೀಕರಿಸಲು ಆಯೋಗವು ನಿರಾಕರಿಸಿತ್ತು. ಗೊತ್ತುಪಡಿಸಿದ ದಾಖಲೆಗಳನ್ನು ಮಾತ್ರ ಸ್ವೀಕರಿಸುವಂತೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿತ್ತು’ ಎಂದು  ದೂರಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಇತಿಹಾಸವು ಕ್ಷಮಿಸುವುದಿಲ್ಲ ಎಂದು ಹರಿಹಾಯ್ದರು.

    Supreme Court directs to consider Aadhaar number as voter identification document

  • ಪಂಚ ಪೀಠಗಳು ಒಗ್ಗಟ್ಟಾಗಿ ಹೆಜ್ಜೆ ಹಾಕಲಿ : ಶ್ರೀ ರಂಭಾಪುರಿ ಜಗದ್ಗುರುಗಳು

    ಪಂಚ ಪೀಠಗಳು ಒಗ್ಗಟ್ಟಾಗಿ ಹೆಜ್ಜೆ ಹಾಕಲಿ : ಶ್ರೀ ರಂಭಾಪುರಿ ಜಗದ್ಗುರುಗಳು

    ದಾವಣಗೆರೆ: ಹಿಂದೆ ಏನೇ ನಡೆದಿರಲಿ. ಶ್ರೀ ಜಗದ್ಗುರು ಪಂಚಾಚಾರ್ಯರು ಒಗ್ಗೂಡಿ ಹೆಜ್ಜೆ ಹಾಕಿದಲ್ಲಿ ಸದೃಢ ಸಮಾಜ ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಸೋಮವಾರ ನಗರದ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

    ಕಳೆದ ೧೬ ವರ್ಷಗಳಿಂದ ಭಕ್ತರು ನೀರೀಕ್ಷಿಸುತ್ತಿದ್ದ ಶುಭ ಘಳಿಗೆ ಇಂದು ಕೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಶಿವಾಚಾರ್ಯ ಸಮೂಹ ಭಕ್ತರು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಮುನ್ನಡೆದಿದ್ದಾದರೆ ಸಮಾಜದ ಹಿತದೃಷ್ಟಿಯಿಂದ ಗಟ್ಟಿ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ಶಾಮನೂರು ಶಿವಶಂಕರಪ್ಪನವರ ಒತ್ತಾಸೆಯಿಂದ ಇಂದು ಇದೆಲ್ಲ ಸಾಧ್ಯವಾಗಿದೆ. ಇಂದು ಜಾತಿ ಜಾತಿಗಳ ಹೆಸರಿನಲ್ಲಿ ಸಮಾಜ ಛಿದ್ರ ಛಿದ್ರವಾಗುತ್ತಿರುವುದನ್ನು ನೋಡಿ ಮನಸ್ಸಿಗೆ ಬಹಳ ವೇದನೆಯಾಗುತ್ತಿದೆ.

    ಪೂರ್ವದ ಆಚಾರ್ಯರು ಜಾತಿ ಮತ ಪಂಥಗಳನ್ನು ಮೀರಿ ಭಾವೈಕ್ಯತೆಯನ್ನು ಮೂಡಿಸುವ ದೃಷ್ಟಿಯಿಂದ ದೇಶದಾದ್ಯಂತ ಪಂಚ ಪೀಠಗಳನ್ನು ಸ್ಥಾಪಿಸಿದ್ದಾರೆ. ಅಸ್ಪೃಷ್ಯರ ಉದ್ಧಾರ ಮಹಿಳೆಯರಿಗೆ ಸಮಾನ ಸ್ಥಾನ ಕಲ್ಪಿಸುವ ಕಾರ್ಯವನ್ನು ಸಹಸ್ರಾರು ವರುಷಗಳ ಹಿಂದೆಯೇ ಮಾಡಿದ್ದಾರೆ. ಸಮಾಜದ ಒಳಪಂಗಡಗಳು ಮೂಲ ಸೆಲೆಯಲ್ಲಿ ಬರುವ ಅವಶ್ಯಕತೆಯಿದೆ ಎಂದರು.

    ಸಮಾರಂಭವನ್ನು ಉದ್ಘಾಟಿಸಿದ ಅ.ಭಾ.ವೀ.ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಪಂಚ ಪೀಠಾಧೀಶರನ್ನು ಒಗ್ಗೂಡಿಸುವ ಆಶಯ ಇಂದು ಸಾಧ್ಯವಾಗಿದ್ದು ಸಂತಸ ತಂದಿದೆ ಎಂದರು. ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ ವೀರಶೈವ ಮಹಾಸಭೆಯ ಇತಿಹಾಸದಲ್ಲಿ ಇಂದು ಸುವರ್ಣ ಘಳಿಗೆ. ಇದು ಮೊದಲನೆಯ ಹೆಜ್ಜೆ ಆಗಿದ್ದು ಮುಂದಿನ ದಿನಗಳಲ್ಲಿ ಗುರು ವಿರಕ್ತರು ಮತ್ತು ಶರಣ ಸಂಪ್ರದಾಯವನ್ನು ಒಗ್ಗೂಡಿಸಿ ಭವ್ಯ ಕಾರ್ಯಕ್ರಮ ಮಾಡುವ ಉದ್ದೇಶವಿದೆ. ೧೯೭೫ರ ಪೂರ್ವದಲ್ಲಿ ಆರ್ಥಿಕ ಮೀಸಲಾತಿ ಇದ್ದುದು ನಂತರ ಜಾತಿ ಆಧಾರಿತ ಮೀಸಲಾತಿ ಪ್ರಾರಂಭದ ನಂತರ ಈ ಸಮಸ್ಯೆಗಳು ಉದ್ಭವಿಸಿವೆ ಎಂದರು.

    ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿ ವೀರಶೈವ ಲಿಂಗಾಯತ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಲಿ ಎಂದರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯ ಮಂತ್ರಿ ಡಾ|| ಬಿ.ಎಸ್.ಯಡಿಯೂರಪ್ಪ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ರಾಜ್ಯ ಬಿ.ಜೆ.ಪಿ.ಅಧ್ಯಕ್ಷ-ಶಾಸಕ ಬಿ.ವೈ.ವಿಜಯೇಂದ್ರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಭಾಗವಹಿಸಿ ಮಾತನಾಡಿದರು.

    ಸಾನ್ನಿಧ್ಯ ವಹಿಸಿದ ಶ್ರೀ ಹಿಮವತ್ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳು ಮಾತನಾಡಿ ಜಾತಿ ಜನಗಣತಿ ಸಂದರ್ಭದಲ್ಲಿ ನೀಡುವ ನಮೂನೆಗಳ ಪರಿಷ್ಕರಣೆ ಆಗಬೇಕು. ಧರ್ಮ ಜಾತಿ ಉಪಜಾತಿಗಳನ್ನು ಪ್ರತ್ಯೇಕ ಕಾಲಂನಲ್ಲಿ ತೋರಿಸುವಂತೆ ಜಾತಿ ಗಣತಿ ನಮೂನೆಯಲ್ಲಿ ಪರಿಷ್ಕರಣೆ ಕೇಂದ್ರ ಸರ್ಕಾರದಿಂದ ಆಗಬೇಕು. ಇದನ್ನು ಮನದಟ್ಟು ಮಾಡುವ ಕೆಲಸ ಎಲ್ಲ ಪಕ್ಷಗಳ ಸಂಸದರು ಮಾಡುವ ಅವಶ್ಯಕತೆಯಿದೆ ಎಂದ ಅವರು ಇಂದು ತಮ್ಮ ಅಗಮನ ಭಕ್ತರಿಗಾಗಿ ಎಂದರು. ಸಾನ್ನಿಧ್ಯ ವಹಿಸಿದ ಶ್ರೀಮತ್ಕಾಶಿ ಡಾ. ಚಂದ್ರಶೇಖರ ಜಗದ್ಗುರುಗಳು ಮಾತನಾಡಿ ವೀರಶೈವರನ್ನು ಅವರ ವೇಷ ಭೂಷಣಗಳಿಂದ ಗುರುತಿಸದೇ ಅವರ ಆಚಾರ ವಿಚಾರಗಳಿಂದ ಗುರುತಿಸುವಂತಾಗಬೇಕು. ಅ.ಭಾ.ವೀರಶೈವ ಮಹಾಸಭೆ ತನ್ನ ಕಾರ್ಯ ಕ್ಷೇತ್ರವನ್ನು ದೇಶದ ಉತ್ತರ ಭಾಗಕ್ಕೂ ಪಸರಿಸಬೇಕು ಎಂದರು.

    ಶ್ರೀ ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಮಾತನಾಡಿ ವೀರಶೈವ ಧರ್ಮ ಸನಾತನ ಧರ್ಮವಾಗಿದೆ. ಇಂದು ವೀರಶೈವ ಲಿಂಗಾಯತ ಸಮಜವನ್ನು ಹೆಚ್ಚು ಹೆಚ್ಚಾಗಿ ಸಂಘಟಿಸುವ ಕಾಲ ಬಂದಿದೆ. ಪ್ರತಿಯೊಬ್ಬರೂ ಒಗ್ಗಟ್ಟಾಗಿ ಧರ್ಮ ಕಟ್ಟುವ ಕೆಲಸ ಮಾಡಬೇಕಾಗಿದೆ. ಬರಲಿರುವ ಜಾತಿ ಗಣತಿಯಲ್ಲಿ ಯಾರಿಗೂ ಅನ್ಯಾಯವಾಗದಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಪೀಠಾಚಾರ್ಯರು ಒಂದಾಗಿದ್ದಾರೆ. ಶಿವಾಚಾರ್ಯರು ಮತ್ತು ಸಮಾಜದ ಜನತೆ ಒಗ್ಗಟ್ಟಿನಿಂದ ಕೆಲಸ ಮಾಡಲಿ ಎಂದರು. ಸಾನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ಮಾತನಾಡಿ ಹಲವಾರು ಕಾರಣಗಳಿಂದ ಸಮಾಜ ಕವಲು ದಾರಿಯಲ್ಲಿ ಹೋಗುತ್ತಿದೆ. ಅದನ್ನು ಸರಿಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ವೀರಶೈವ ಲಿಂಗಾಯತ ಸಮಾಜದ ವಿಚಾರ ಬಂದಾಗ ಎಲ್ಲ ಪಕ್ಷ ಭೇದಗಳನ್ನು ಜಾತಿ ಭೇದಗಳನ್ನು ಮರೆತು ಮುನ್ನಡೆಯಬೇಕೆಂದರು.

    ಹಂಪಿಸಾವಿರದೇವರಮಠದ ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ಹೃದಯ ಹಂಬಲ ನುಡಿಗಳನ್ನಾಡಿದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.

    ವಿಶೇಷ ಆಹ್ವಾನಿತರಾಗಿ ಅ.ಭಾ.ವೀ.ಮಹಾಸಭೆ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿ.ಪಂ.ಮಾಜಿ ಸದಸ್ಯರಾದ ಬಿ.ಎಂ.ವಾಗೀಶಸ್ವಾಮಿ ಭಾಗವಹಿಸಿದ್ದರು. ಬೆಂಗಳೂರಿನ ಶಿವಶಂಕರ ಶಾಸ್ತ್ರಿಗಳಿಂದ ಪ್ರಾರ್ಥನೆ, ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ್  ಇವರಿಂದ ಸ್ವಾಗತ, ವಿಶ್ವಪ್ರಭುದೇವ ಶಿವಾಚಾರ್ಯರು ಹಾಗೂ ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.

    Let the five courts step together.

  • ಭಾರತದಲ್ಲಿ ಟೆಸ್ಲಾ ಕಂಪನಿಯು ಕಾರುಗಳ ಮಾರಾಟ ಆರಂಭ

    ಭಾರತದಲ್ಲಿ ಟೆಸ್ಲಾ ಕಂಪನಿಯು ಕಾರುಗಳ ಮಾರಾಟ ಆರಂಭ

    ಮುಂಬೈ: ಇ.ವಿ ಕಾರುಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಸಂಪಾದಿಸಿರುವ ಟೆಸ್ಲಾ ಕಂಪನಿಯು ಭಾರತ ಪ್ರವೇಶಿಸಿದೆ. ₹59.89 ಲಕ್ಷ ಆರಂಭಿಕ ಬೆಲೆಯ ‘ಮಾಡೆಲ್‌ ವೈ’ ಕಾರನ್ನು ಕಂಪನಿಯು ಮುಂಬೈನಲ್ಲಿ ಆರಂಭ ವಾದ ತನ್ನ ಮೊದಲ ಮಳಿಗೆಯಲ್ಲಿ ಮಂಗಳವಾರ ಅನಾವರಣ ಮಾಡಿದೆ.

    ಅಮೆರಿಕದ ಉದ್ಯಮಿ ಇಲಾನ್‌ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯು ಚೀನಾದ ಶಾಂಘೈನ ಘಟಕದಲ್ಲಿ ಪೂರ್ತಿಯಾಗಿ ಸಿದ್ಧಗೊಂಡ ‘ಮಾಡೆಲ್ ವೈ’ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಿದೆ.

    ಮಧ್ಯಮ ಗಾತ್ರದ ವಿದ್ಯುತ್‌ ಚಾಲಿತ ಎಸ್‌ಯುವಿ ಆಗಿರುವ ಈ ಕಾರಿನ ಎರಡು ಅವತರಣಿಕೆಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. ಕಾರಿನ ಗರಿಷ್ಠ ಬೆಲೆಯು ₹67.89 ಲಕ್ಷ ಆಗಿರಲಿದೆ.

    ಈ ವರ್ಷದ ಮೂರನೆಯ ತ್ರೈಮಾಸಿಕದಿಂದ ಕಾರುಗಳು ಗ್ರಾಹಕರಿಗೆ ಸಿಗಲಿವೆ. ಕಾರುಗಳಿಗೆ ನೋಂದಣಿ ಮತ್ತು ಕಾರುಗಳ ವಿತರಣೆಯು ಆರಂಭದಲ್ಲಿ ಮುಂಬೈ, ದೆಹಲಿ ಮತ್ತು ಗುರುಗ್ರಾಮ ದಲ್ಲಿ ಶುರುವಾಗಲಿದೆ ಎಂದು ಕಂಪನಿ ತಿಳಿಸಿದೆ.

    ಕಾರಿನ ಒಂದು ಅವತರಣಿಕೆಯು ಒಂದು ಬಾರಿ ಚಾರ್ಜ್‌ ಮಾಡಿದರೆ 500 ಕಿ.ಮೀ ಸಾಗುತ್ತದೆ, ಇನ್ನೊಂದು ಅವತರಣಿಕೆಯು 622 ಕಿ.ಮೀ. ಸಾಗುತ್ತದೆ. ‘ಮಾಡೆಲ್‌ ವೈ’ ಕಾರು ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು, ಔಡಿ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡಲಿದೆ.

    ಭಾರತೀಯ ಕಾರು ತಯಾರಿಕಾ ಕಂಪನಿಗಳಾದ ಟಾಟಾ ಮೋಟರ್ಸ್‌ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ತಮ್ಮ ಇ.ವಿ. ಕಾರುಗಳ ಬೆಲೆಯನ್ನು ₹30 ಲಕ್ಷಕ್ಕಿಂತ ಕಡಿಮೆ ಇರಿಸಿವೆ.

    Tesla cars start selling in India

  • ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲ

    ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲ

    ನ್ಯೂಯಾರ್ಕ್: ಯಶಸ್ವಿ ಬಾಹ್ಯಾಕಾಶ ಯಾನ ಮುಕ್ತಾಯಗೊಳಿಸಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಅವರಿದ್ದ ತಂಡ ಇಂದು ಡ್ರ್ಯಾಗನ್ ನೌಕೆಯ ಮೂಲಕ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ.

    “ನಾವು ಮನೆಗೆ ಮರಳಿದ್ದೇವೆ” ಆಕ್ಸಿಯಮ್ -4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಜುಲೈ 15 ರಂದು ಪೆಸಿಫಿಕ್ ಮಹಾಸಾಗರದ ಸ್ಯಾನ್ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಡ್ರ್ಯಾಗನ್ ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆ ಇಳಿದ ಸ್ವಲ್ಪ ಸಮಯದ ನಂತರ, ಮಧ್ಯಾಹ್ನ 3.02 ಕ್ಕೆ ಆಕ್ಸಿಯಮ್ ಸ್ಪೇಸ್‌ನ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ತಿಳಿಸಿದ ಸಂದೇಶ ಇದಾಗಿದೆ.

    ಪೆಗ್ಗಿ ವಿಟ್ಸನ್ ಸಂದೇಶಕ್ಕೆ ಕಮಾಂಡ್ ಕೇಂದ್ರ “ಮನೆಗೆ ಸ್ವಾಗತ” ಎಂದು ಉತ್ತರಿಸಿದೆ. ಇದಕ್ಕೆ ಪೆಗ್ಗಿ ಉತ್ತರಿಸುತ್ತಾ, “ಮಹಾ ಸವಾರಿ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಧನ್ಯವಾದಗಳು.” ಗ್ರೇಸ್‌ನಲ್ಲಿರುವ ಸಿಬ್ಬಂದಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    Astronaut Shubhash Shukla returns to Earth

  • ಯುಪಿಐ (UPI) ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆ

    ಯುಪಿಐ (UPI) ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆ

    ನವದೆಹಲಿ: 65 ಕೋಟಿ ರೂ. ವಹಿವಾಟು ನಡೆಸುವ ಮೂಲಕ ವೀಸಾವನ್ನು ಹಿಂದಿಕ್ಕಿ ಯುಪಿಐ (UPI) ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

    ಈ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಅವರು ಎಕ್ಸ್‌ನಲ್ಲಿ (X) ಪೋಸ್ಟ್ ಹಂಚಿಕೊಂಡಿದ್ದು, 2025ರ ಮೇ-ಜೂನ್‌ನಲ್ಲಿ ಯುಪಿಐ ಪ್ರತಿದಿನ 65 ಕೋಟಿ ರೂ.ಯ ವಹಿವಾಟನ್ನು ನಡೆಸಿದ್ದು, ಇದೇ ಅವಧಿಯಲ್ಲಿ ವೀಸಾ 63.9 ಕೋಟಿ ರೂ ವಹಿವಾಟು ನಡೆಸಿದೆ.

    ವೀಸಾ 200 ದೇಶಗಳಲ್ಲಿ ಜಾರಿಯಲ್ಲಿದ್ದು, ಯುಪಿಐ ಕೇವಲ 7 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ವೀಸಾವನ್ನು ಹಿಂದಿಕ್ಕಿರುವುದು ವಿಶೇಷ. ಕಳೆದ ತಿಂಗಳೇ ಈ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಯುಪಿಐ ಮೂಲಕ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ, ಅಮೇಜಾನ್ ಪೇ, ವಾಟ್ಸಾಪ್ ಪೇ ಸೇರಿದಂತೆ ಹಲವು ಡಿಜಿಟಲ್ ಪಾವತಿ ಕಂಪನಿಗಳು ಸೇವೆ ಒದಗಿಸುತ್ತವೆ.

    ಬ್ಯಾಂಕ್ ಖಾತೆಯನ್ನು ಜನರು ಈ ಆ್ಯಪ್‌ಗಳಲ್ಲಿ ಲಿಂಕ್ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಇದರಿಂದ ಹಣ ಪಾವತಿ ಮಾಡಬಹುದು.

    ಜಾರಿಯಾದ 9 ವರ್ಷಗಳಲ್ಲೇ ಈ ಸಾಧನೆ ಮಾಡಿರುವುದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.ಇದನ್ನೂ ಓದಿ: ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

    UPI is the world’s largest digital payment system.

  • ವಿಮಾನ ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

    ವಿಮಾನ ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

    ಅಹಮದಾಬಾದ್‌ನಲ್ಲಿ 265 ಜನರು ಪ್ರಾಣ ಕಳೆದುಕೊಂಡ ಏರ್ ಇಂಡಿಯಾ AI 171 ವಿಮಾನ ಅಪಘಾತದ ಸ್ಥಳಕ್ಕೆ ಇಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಇಲ್ಲಿನ ನಾಗರಿಕ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

    ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಮೋದಿ, ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಿಂದ ನಾವೆಲ್ಲರೂ ತೀವ್ರ ಆಘಾತಗೊಂಡಿದ್ದೇವೆ. ಇಷ್ಟೊಂದು ಹಠಾತ್ ಮತ್ತು ಹೃದಯವಿದ್ರಾವಕ ರೀತಿಯಲ್ಲಿ ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ಪದಗಳಿಗೆ ನಿಲುಕದಷ್ಟು ದೊಡ್ಡ ದುರಂತ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು” ಎಂದು ಬರೆದುಕೊಂಡಿದ್ದಾರೆ.

    ತಮ್ಮವರನ್ನು ಕಳೆದುಕೊಂಡವರ ನೋವು ನಮಗೆ ಅರ್ಥವಾಗುತ್ತದೆ. ವರ್ಷಗಳವರೆಗೆ ಈ ಆಘಾತ ನಮ್ಮನ್ನು ಕಾಡಲಿದೆ ಎಂದಿದ್ದಾರೆ. ನಿನ್ನೆ ಮಧ್ಯಾಹ್ನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಮೇಘನಿನಗರ ಪ್ರದೇಶದ ಬಿಜೆ ವೈದ್ಯಕೀಯ ಕಾಲೇಜಿನ ಸಂಕೀರ್ಣಕ್ಕೆ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ (AI171) ಅಪ್ಪಳಿಸಿದ ಸ್ಥಳವನ್ನು ಇಂದು ಪ್ರಧಾನಿ ಸುಮಾರು 20 ನಿಮಿಷಗಳ ಕಾಲ ಪರಿಶೀಲಿಸಿದರು.

    ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅವರು ವಿಮಾನ ಕಾಲೇಜು ಹಾಸ್ಟೆಲ್ ಹೇಗೆ ಅಪ್ಪಳಿಸಿತು ಎಂಬುದರ ಬಗ್ಗೆ ಮೋದಿಗೆ ವಿವರಿಸಿದರು.

    ನಂತರ ಪ್ರಧಾನಿಯವರು ನಗರದ ಸಿವಿಲ್ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿಯಾದರು. ಒಂದು ದಿನದ ಹಿಂದೆ ನಡೆದ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಶ್‌ಕುಮಾರ್ ರಮೇಶ್ ಅವರನ್ನು ಭೇಟಿಯಾದರು.

    Prime Minister Modi visits the site of the plane crash

  • ಬೆಂಗಳೂರಿನಲ್ಲೆ ಆರ್​ಸಿಬಿಗೆ ಮೊದಲ ಸೋಲು

    ಬೆಂಗಳೂರಿನಲ್ಲೆ ಆರ್​ಸಿಬಿಗೆ ಮೊದಲ ಸೋಲು

    2025 ರ ಐಪಿಎಲ್​ನಲ್ಲಿ (IPL 2025) ಉತ್ತಮ ಆರಂಭ ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮೊದಲ ಸೋಲನ್ನು ಅನುಭವಿಸಿದೆ. ಕೋಲ್ಕತ್ತಾ ಮತ್ತು ಚೆನ್ನೈನಂತಹ ಮೈದಾನಗಳಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿದ್ದ ಬೆಂಗಳೂರು, ತನ್ನ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸೋಲನ್ನು ಅನುಭವಿಸಿದೆ.

    ಶುಭ್​ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಏಕಪಕ್ಷೀಯವಾಗಿ ಆರ್​ಸಿಬಿ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ವಿಶೇಷವೆಂದರೆ ಗುಜರಾತ್ ತಂಡದ ಗೆಲುವಿನ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್, ಈ ಸೀಸನ್​ಗೂ ಮೊದಲು ಸತತ 7 ವರ್ಷಗಳ ಕಾಲ ಆರ್‌ಸಿಬಿ ತಂಡದ ಭಾಗವಾಗಿದ್ದ ಸಿರಾಜ್​ ಈ ಪಂದ್ಯದಲ್ಲಿ ಕೇವಲ 19 ರನ್ ನಿಡಿ ಪ್ರಮುಖ 3 ವಿಕೆಟ್ ಪಡೆದರು.

    ಈ ಪಂದ್ಯಕ್ಕೂ ಮುನ್ನ, ಬೆಂಗಳೂರು ಮತ್ತು ಗುಜರಾತ್ ನಡುವಿನ ಹಣಾಹಣಿಯಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿತ್ತು, ಆಡಿದ 5 ಪಂದ್ಯಗಳಲ್ಲಿ 3ರಲ್ಲಿ ಜಯಗಳಿಸಿತ್ತು. ಆದಾಗ್ಯೂ ಈ ಪಂದ್ಯದಲ್ಲಿ ಗುಜರಾತ್ ತಂಡದ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿ ಪವರ್ ಪ್ಲೇನಲ್ಲಿಯೇ ಬೆಂಗಳೂರಿನ ಅಗ್ರ ಕ್ರಮಾಂಕವನ್ನು ಕೆಡವಿದರು. ಆದಾಗ್ಯೂ, ಗುಜರಾತ್ ತಂಡದ ಫೀಲ್ಡಿಂಗ್ ಖಂಡಿತವಾಗಿಯೂ ನಿರಾಶಾದಾಯಕವಾಗಿತ್ತಾದರೂ ಬೌಲರ್‌ಗಳ ಕರಾರುವಕ್ಕಾದ ದಾಳಿ ಆರ್​ಸಿಬಿ ಬ್ಯಾಟಿಂಗ್‌ ವಿಭಾಗವನ್ನು ಕಟ್ಟಿಹಾಕಿತು.

    ಈ ಪಂದ್ಯದ ಅತ್ಯಂತ ದೊಡ್ಡ ರೋಮಾಂಚನಕಾರಿ ಕ್ಷಣವೆಂದರೆ ಸಿರಾಜ್ ಮತ್ತು ವಿರಾಟ್ ಕೊಹ್ಲಿ ನಡುವಿನ ಮುಖಾಮುಖಿ. ಆದರೆ ಅರ್ಷದ್ ಖಾನ್ ಎಸೆದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಕೊಹ್ಲಿ ಔಟಾದ ಕಾರಣ ಅಂತಹದ್ದೇನೂ ಕಾಣಲಿಲ್ಲ. ಆದಾಗ್ಯೂ, ಸಿರಾಜ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ತನ್ನ ಮತ್ತು ತನ್ನ ಹಳೆಯ ತಂಡದ ಅಭಿಮಾನಿಗಳಿಗೆ ಖಂಡಿತವಾಗಿಯೂ ನೋವುಂಟುಮಾಡಿದರು. ಏಳನೇ ಓವರ್ ವೇಳೆಗೆ ಬೆಂಗಳೂರು 42 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದರಲ್ಲಿ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ನಾಯಕ ರಜತ್ ಪತಿದಾರ್ ಅವರಂತಹ ಬ್ಯಾಟ್ಸ್‌ಮನ್‌ಗಳು ಸೇರಿದ್ದರು. ಇದರಲ್ಲಿಯೂ ಸಿರಾಜ್ 3 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 2 ವಿಕೆಟ್ ಪಡೆದರು.

    ಆ ಬಳಿಕ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ಅವರಂತಹ ಬೌಲರ್‌ಗಳು ಕೂಡ ಸಿರಾಜ್ ದಾಳಿಯ ಲಾಭ ಪಡೆದರು. ಆದಾಗ್ಯೂ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಉತ್ತಮ ಜೊತೆಯಾಟ ಆಡಿದರು. ಆದಾಗ್ಯೂ, ಈ ಸಮಯದಲ್ಲಿ ಗುಜರಾತ್ ಲಿವಿಂಗ್‌ಸ್ಟೋನ್‌ಗೆ 3 ಅವಕಾಶಗಳನ್ನು ನೀಡಿತು. ಇದರ ಲಾಭ ಪಡೆದ ಲಿವಿಂಗ್‌ಸ್ಟೋನ್ 54 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ಟಿಮ್ ಡೇವಿಡ್ ಕೇವಲ 18 ಎಸೆತಗಳಲ್ಲಿ 32 ರನ್ ಗಳಿಸಿ ಬೆಂಗಳೂರು ತಂಡವನ್ನು 169 ರನ್‌ಗಳ ಪಂದ್ಯಕ್ಕೆ ಅರ್ಹವಾದ ಸ್ಕೋರ್‌ಗೆ ಕೊಂಡೊಯ್ದರು.

    ಎರಡು ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಆರ್‌ಸಿಬಿ ಬೌಲರ್‌ಗಳು ಈ ಬಾರಿ ಅದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಹೆಚ್ಚು ರನ್ ಬಿಟ್ಟುಕೊಡದಿದ್ದರೂ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಜೋಡಿ ಉತ್ತಮ ಜೊತೆಯಾಟ ಆಡಿತು. ಆದಾಗ್ಯೂ ಭುವನೇಶ್ವರ್, ಗಿಲ್​ರನ್ನು ಬೇಗನೇ ಪೆವಿಲಿಯನ್​ಗಟ್ಟಿದರು. ಆದರೆ ಇದರ ನಂತರ, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಇನ್ನಿಂಗ್ಸ್ ನಿಭಾಯಿಸಿ, ಆರ್​ಸಿಬಿ ಮತ್ತೆ ಪಂದ್ಯಕ್ಕೆ ಮರಳದಂತೆ ಮಾಡಿದರು.

    ಸಾಯಿ ಸುದರ್ಶನ್ 49 ರನ್​ಗಳಿಗೆ ಔಟಾದರಾದರೂ ಪಂದ್ಯದ ಫಲಿತಾಂಶ ಬಹುತೇಕ ನಿರ್ಧಾರವಾಗಿದ್ದರಿಂದ ಇದು ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಟ್ಲರ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರೆ, ಅವರಿಗೆ ಶರ್ಫನ್ ರುದರ್ಫೋರ್ಡ್ ಉತ್ತಮ ಸಾಥ್ ನೀಡಿದರು. ಈ ಇಬ್ಬರು 63 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಮಾಡಿದರು. ಈ ಮೂಲಕ 17.5 ಓವರ್‌ಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ವೇಳೆ ಬಟ್ಲರ್ ಕೇವಲ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 73 ರನ್ ಗಳಿಸಿದರೆ, ರುದರ್ಫೋರ್ಡ್ 18 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗುಳಿದರು.

    RCB suffers first defeat in Bengaluru