ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗತರಾದ ಆರು ಮಂದಿ ನಕ್ಸಲರಿಗೆ ಸೇರಿದ್ದ ಚಿಕ್ಕಮಗಳೂರು ಜಿಲ್ಲೆ ಜಯಪುರ ಠಾಣೆ ಪೊಲೀಸರು ಕಾಡಿನಲ್ಲಿದ್ದ ನಕ್ಸಲರಿಗೆ ಸೇರಿದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಶರಣಾಗತರಾಗಿರುವ ನಕ್ಸಲರು ನೀಡಿದ ಮಾಹಿತಿ ಮೇರೆಗೆ ಪೊಲೀಸರ ತಂಡ ಜಯಪುರ ಠಾಣೆ ವ್ಯಾಪ್ತಿಯ ಕಿತ್ತಲೆಗುಳಿ ಗ್ರಾಮದ ಸಮೀಪವಿರುವ ದಟ್ಟ ಅರಣ್ಯದಲ್ಲಿದ್ದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಶರಣಾಗತ ನಕ್ಸಲರು ಬಳಸುತ್ತಿದ್ದ ಒಂದು ಎಕೆ ೫೬, ಮೂರು ೩೦೩ ರೈಫಲ್, ಒಂದು ೧೨ ಬೋರ್ ಎಸ್‌ಎಸ್‌ಬಿಎಲ್, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿದಂತೆ ಒಟ್ಟು ಆರು ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. ಇವುಗಳೊಂದಿಗೆ ಹನ್ನೊಂದು ೭.೬೨ ಎಂಎಂನ ಎಕೆ ೫೬ ಮದ್ದುಗುಂಡುಗಳು, ೩೦೩ ರೈಫಲ್‌ನ ೧೩೩ ಮದ್ದುಗುಂಡುಗಳು, ೧೨ ಬೋರ್ ಕಾರ್ಟಿಜ್ಸ್ನ ೨೪, ಕಂಟ್ರಿಮೇಡ್ ಪಿಸ್ತೂಲ್‌ನ ೮ ಮದ್ದುಗುಂಡುಗಳು ಸೇರಿದಂತೆ ಒಟ್ಟು ೧೭೬ ಮುದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಇವುಗಳೊಂದಿಗೆ ಎಕೆ ೫೬ನ ಖಾಲಿ ಮ್ಯಾಗ್ಸಿನ್ ಸಹ ಪತ್ತೆಯಾಗಿದೆ.
ಶಸ್ತ್ರಾಸ್ತ್ರಗಳು ಪತ್ತೆಯಾಗಿರುವ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂ. ೦೪/೨೫ ಅಡಿ ಎಆರ್‌ಎಂಎಸ್ ಆಕ್ಟ್ ೧೯೫೯ರ ಕಲಂ ೩, ೨೫(೧ಬಿ), ೭ ಮತ್ತು ೨೫(೧ಎ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್‌ಪಿ ವಿಕ್ರಮ ಅಮಟೆ ತಿಳಿಸಿದ್ದಾರೆ.
ಶರಣಾಗತರಾದ ನಕ್ಸಲರು ತಮ್ಮೊಂದಿಗೆ ಯಾವುದೇ ಶಸ್ತ್ರಾಸ್ತ್ರ ಅಥವಾ ಉಪಕರಣಗಳನ್ನು ಶರಣಾಗತಿ ಮಾಡಿದರೆ ಪ್ರತಿ ಆಯುಧ ಅಥವಾ ಉಪಕರಣಕ್ಕೆ ಪ್ರೋತ್ಸಾಹ ಧನ ನೀಡುವುದಾಗಿ ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಲ್ಲಿ ಘೋಷಿಸಲಾಗಿತ್ತು. ಅದರಂತೆ ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಆಯುಧಗಳಿಗೂ ಸಂಬಂಧಿಸಿದಂತೆ ಶರಣಾಗತರಾದ ನಕ್ಸಲರಿಗೆ ಪ್ರೋತ್ಸಾಹ ಧನ ಸಿಗಲಿದೆ.
ಎಕೆ ೫೬ಗೆ ೩೦ ಸಾವಿರ (ಒಂದಕ್ಕೆ), ಮೂರು ೩೦೩ ರೈಫಲ್‌ಗಳಿಗೆ ೫೦ ಸಾವಿರ (ಒಂದಕ್ಕೆ), ೧೨ ಬೋರ್ ಎಸ್‌ಎಸ್‌ಬಿಎಲ್ ೫೦ ಸಾವಿರ (ಒಂದಕ್ಕೆ) ಪಿಸ್ತೂಲ್ ೧ಕ್ಕೆ ೧೦ ಸಾವಿರ, ೧೭೬ ಮದ್ದುಗುಂಡುಗಳಿಗೆ ನೂರು ರೂಪಾಯಿ(ಪ್ರತಿ ಮದ್ದು ಗುಂಡಿಗೆ) ಸಾರ್ಕರ ಪ್ರೋತ್ಸಾಹ ಧನ ನಿಗಧಿ ಮಾಡಿದೆ.
Weapons seized from Naxalites in the dense forest of Kittaleguli village

Leave a Reply