ಶೃಂಗೇರಿ: ತಾಲ್ಲೂಕಿನ ಕೆರೆಕಟ್ಟೆ ಸಮೀಪ ಬಳಿ ಅರಣ್ಯಕ್ಕೆ ಸೊಪ್ಪು ತರಲು ಹೋಗಿದ್ದ ಇಬ್ಬರು ಕಾಡಾನೆ ದಾಳಿಗೆ ಸಿಕ್ಕಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆರೆಕಟ್ಟೆ ಸಮೀಪದ ಕೆರೆಗದ್ದೆಯ ಉಮೇಶ್ ಗೌಡ (54) ಮತ್ತ ಹರೀಶ್ ಶೆಟ್ಟಿ (53) ಮೃತಪಟ್ಟವರು. ಹರೀಶ್ ಅವರು ಬಿಜೆಪಿ ಶಕ್ತಿ ಕೇಂದ್ರದ ಕೆರೆಕಟ್ಟೆ ಭಾಗದ ಅಧ್ಯಕ್ಷರಾಗಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇವರ ಮನೆಗಳಿದ್ದು, ಕಾಡಿಗೆ ಸೊಪ್ಪು ತರಲು ಹೋದಾಗ ಅವಘಡ ಸಂಭವಿಸಿದೆ.
ಇಬ್ಬರು ಮೃತಪಟ್ಟಿರುವ ವಿಷಯ ತಿಳಿದಂತೆ, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶೃಂಗೇರಿ–ಕಾರ್ಕಳ ನಡುವೆ ವಾಹನ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು. ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ಸ್ಥಳಕ್ಕೆ ಬಂದು ಪ್ರತಿಭಟನಕಾರರ ಮನವೊಲಿಸಲು ಮುಂದಾದರು.
ಆದರೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಥಳಕ್ಕೆ ಬರಬೇಕು. ಮೃತರ ಕುಟುಂಬಕ್ಕೆ ತಲಾ ₹50 ಲಕ್ಷ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ಬೆಳಿಗ್ಗೆಯಿಂದ ಸಂಜೆ ತನಕ ವಾಹನ ಸವಾರರು ಪರದಾಡಿದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹20 ಲಕ್ಷ, ಶಾಸಕರು ಹಾಗೂ ಸ್ಥಳೀಯರ ನೆರವಿನಿಂದ ತಲಾ ₹5 ಲಕ್ಷ ಪರಿಹಾರ ನೀಡಲು ನಿರ್ಧರಿಸ ಲಾಯಿತು. ಬಳಿಕ ಸ್ಥಳೀಯರು ಪ್ರತಿಭಟನೆ ಹಿಂಪಡೆದರು.
Two farmers die on the spot after being attacked by a wild elephant









