Category: ರಾಜ್ಯ

  • ಚಿಕಿತ್ಸೆ ಫಲಕಾರಿಯಾಗದೆ ಸಾಲುಮರದ ತಿಮ್ಮಕ್ಕ ನಿಧನ

    ಚಿಕಿತ್ಸೆ ಫಲಕಾರಿಯಾಗದೆ ಸಾಲುಮರದ ತಿಮ್ಮಕ್ಕ ನಿಧನ

    ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು.

    ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ತಿಮ್ಮಕ್ಕ ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911 ಜೂನ್‌ 30ರಂದು ಜನಿಸಿದ್ದ  ಅವರು, ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿದ್ದರು. ನಂತರ ಮಾಗಡಿ ತಾಲೂಕಿನ ಚಿಕ್ಕಯ್ಯ ಎಂಬುವವರನ್ನು ವಿವಾಹವಾದರು.

    ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ್ದರು.

    ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರ ಮಹತ್ತರ ಸಾಧನೆಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010ನೇ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ

    2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

    ಮರ, ಗಿಡಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುತ್ತಿದ್ದರು. ತಿಮ್ಮಕ್ಕ ಅವರಿಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ  ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    Saalumaradathimmakka passes away due to ineffective treatment

  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಕರ್ಷಕ ಕಲಾಲೋಕ ಮಳಿಗೆಗೆ ಮುಖ್ಯಮಂತ್ರಿ ಚಾಲನೆ

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಕರ್ಷಕ ಕಲಾಲೋಕ ಮಳಿಗೆಗೆ ಮುಖ್ಯಮಂತ್ರಿ ಚಾಲನೆ

    ಬೆಂಗಳೂರು: ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆ ಹೊಂದಿರುವ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನಲ್ಲಿ ಕೈಗಾರಿಕಾ ಇಲಾಖೆಯ ಮೂಲಕ ನಿರ್ಮಿಸಿರುವ ಆಕರ್ಷಕ ಮತ್ತು ಸುಸಜ್ಜಿತ ಕಲಾಲೋಕ ಮಳಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಕಲಾ ರಚನೆ ಮತ್ತು ಘಂಟಾನಾದದ ಮೂಲಕ ಮಂಗಳವಾರ ಉದ್ಘಾಟಿಸಿದರು.

    ಉದ್ಘಾಡಿಸಿ ಮಾತನಾಡಿದ ಮುಖ್ಯಮಂತ್ರಿಗಳು, `ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಇದೊಂದು ಸಂತಸದ ಕ್ಷಣವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನವು ಜನನಿಬಿಡತೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಪ್ರತೀದಿನವೂ ಇಲ್ಲಿ ಹತ್ತಾರು ಸಾವಿರ ಪ್ರಯಾಣಿಕರು ಬರುತ್ತಿರುತ್ತಾರೆ. ಇಂಥವರಿಗೆ ಇಲ್ಲಿಗೆ ಬಂದ ತಕ್ಷಣವೇ ಕರ್ನಾಟಕದ ಅಭಿಮಾನದ ಪಯಣ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ಕಲಾಲೋಕ ಮಳಿಗೆ ನಿರ್ಮಿಸಲಾಗಿದೆ. ಇದರ ಮೂಲಕ ಕರ್ನಾಟಕದ ಹೆಮ್ಮಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ಮಾರಾಟ ಸಾಧಿಸಲಾಗುವುದು’ ಎಂದರು.‌

    ಸಚಿವ ಎಂ ಬಿ ಪಾಟೀಲ ಮಾತನಾಡಿ, `ಟರ್ಮಿನಲ್-2ರ ಸಮೀಪ ನಿರ್ಮಿತವಾಗಿರುವ ಕಲಾಲೋಕ ಮಳಿಗೆಯಲ್ಲಿ ರಾಜ್ಯದ ಪಾರಂಪರಿಕ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ, ಅಗರಬತ್ತಿ, ಮೈಸೂರು ಸಿಲ್ಕ್, ಚನ್ನಪಟ್ಟಣದ ಬೊಂಬೆ, ಲಿಡ್ಕರ್ ಉತ್ಪನ್ನಗಳು, ಬಗೆಬಗೆಯ ಪರಿಮಳವಿರುವ ಕಾಫಿಪುಡಿ ಮತ್ತು ಪಾನೀಯ, ಕೈಮಗ್ಗದ ಉತ್ಪನ್ನಗಳು, ಇಳಕಲ್ ಸೀರೆ, ಲಂಬಾಣಿ ಉಡುಪು, ಗಂಧದ ಕಲಾಕೃತಿ, ಬಿದರಿ ಕಲಾಕೃತಿ, ಮೈಸೂರು ಶೈಲಿಯ ಕಲಾಕೃತಿಗಳು, ಮುಂತಾದವು ಸಿಗಲಿವೆ. ಒಟ್ಟಾರೆಯಾಗಿ ಜಿ.ಐ. ಮಾನ್ಯತೆ ಹೊಂದಿರುವ ರಾಜ್ಯದ 45 ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಎರಡೂ ಈ ಮಳಿಗೆಯಲ್ಲಿ ನಡೆಯಲಿದೆ’ ಎಂದಿದ್ದಾರೆ.

    ರಾಜ್ಯವೇ ಹೆಮ್ಮೆಪಡುವಂತಹ ಪಾರಂಪರಿಕ ಮತ್ತು ಭೌಗೋಳಿಕ ವಿಶಿಷ್ಟತೆಯ ಮನ್ನಣೆ ಹೊಂದಿರುವ ಉತ್ಪನ್ನಗಳನ್ನು ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಮಳಿಗೆ ಆರಂಭದ ಆಶಯವಾಗಿದೆ. ಇದಕ್ಕೆ ಸರಕಾರಿ ಸ್ವಾಮ್ಯದ ಕೆ.ಎಸ್.ಡಿ.ಎಲ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಯಮಿತ, ಕೆಎಸ್ಐಸಿ, ಕಾಫಿ ಬೋರ್ಡ್ ಮತ್ತು ಲಿಡ್ಕರ್ ಮುಂತಾದ ಉದ್ದಿಮೆಗಳು ಕೈಜೋಡಿಸಿವೆ. ವಿಮಾನ ನಿಲ್ದಾಣಕ್ಕೆ ಬರುವವರಿಗೆ ಮತ್ತು ಇಲ್ಲಿಂದ ಹೋಗುವವರಿಗೆ ಒಂದೇ ತಾಣದಲ್ಲಿ ಕರ್ನಾಟಕದ ಅಸ್ಮಿತೆ ಇಲ್ಲಿ ಅನುಭವಕ್ಕೆ ಸಿಗಲಿದೆ ಎಂದು ಅವರು ಬಣ್ಣಿಸಿದ್ದಾರೆ.

    ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಕಲಾಲೋಕ ಮಳಿಗೆಗೆ ಟರ್ಮಿನಲ್ -2ರ ಡೊಮೆಸ್ಟಿಕ್ ಬೇನಲ್ಲಿ 132 ಚ.ಮೀ. ಜಾಗವನ್ನು ಬಾಡಿಗೆಗೆ ಒದಗಿಸಿದೆ. ಟರ್ಮಿನಲ್-2ರಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರ ನಿರ್ಗಮನ ವಲಯದಲ್ಲಿ 140 ಚ.ಮೀ. ಜಾಗದಲ್ಲಿ ಇಂತಹುದೇ ಮತ್ತೊಂದು ಮಳಿಗೆ ಆರಂಭಿಸಲಾಗುವುದು. ಮಳಿಗೆಯನ್ನು ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪಡಿಯಚ್ಚಿನಂತೆ ಮೋಹಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಹಿಂದೆ ದೂರದೃಷ್ಟಿ ಇದೆ ಎಂದು ಅವರು ನುಡಿದಿದ್ದಾರೆ.

    ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಎಸ್ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ, ಜವಳಿ ಆಯುಕ್ತರಾದ ಜ್ಯೋತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಪಿ.ಬಸವರಾಜು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು.

    Chief Minister inaugurates attractive Kalaloka store at Kempegowda Airport

  • ನಂದಿನಿ ತುಪ್ಪದ ದರ ಪ್ರತಿ ಲೀಟರ್ಗೆ 90 ರೂಪಾಯಿ ಏರಿಕೆ

    ನಂದಿನಿ ತುಪ್ಪದ ದರ ಪ್ರತಿ ಲೀಟರ್ಗೆ 90 ರೂಪಾಯಿ ಏರಿಕೆ

    ಜಿಎಸ್ ಟಿ ಇಳಿಕೆ ಖುಷಿಯಲ್ಲಿದ್ದ ರಾಜ್ಯದ ಗ್ರಾಹಕರಿಗೆ ಕೆಎಂಎಫ್ ಶಾಕ್ ನೀಡಿದ್ದು, ನಂದಿನಿ ತುಪ್ಪದ ದರ ಪ್ರತಿ ಲೀಟರ್ಗೆ 90 ರೂಪಾಯಿ ಏರಿಕೆ ಮಾಡಿದೆ.

    ಇಂದಿನಿಂದಲೇ ಪರಿಷೃತ ದರ ಜಾರಿಯಾಗಿದೆ. ಇತ್ತೀಚಿಗಷ್ಟೇ ಜಿಎಸ್ಟಿ ದರ ಇಳಿಕೆಯಾದ ನಂತರ ಕೆಎಂಎಫ್ ಹಾಲು ಉತ್ಪನ್ನಗಳ ದರ ಇಳಿಕೆ ಮಾಡಿತ್ತು. ನಂದಿನಿ ತುಪ್ಪದ ಬೆಲೆ 40 ರೂಪಾಯಿ ಇಳಿಕೆಯಾಗಿತ್ತು.

    ಈ ಮಧ್ಯೆ, ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸ್ವತಃ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ.

    Nandini ghee price hiked by Rs 90 per litre
  • ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲುವು

    ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲುವು

    ಮೈಸೂರು: ಬಿಹಾರದಲ್ಲಿನ ಅಧಿಕಾರವಿರೋಧಿ ಅಲೆ ಹಾಗೂ ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಅಂಶಗಳು ಪ್ರಮುಖವಾಗಲಿದ್ದು, ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಜಯಸಾಧಿಸುವ ಭರವಸೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ  ಬಿಹಾರ ಚುನಾವಣೆ ಪ್ರಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಬಿಹಾರ ಚುನಾವಣಾ ಪ್ರಚಾರಕ್ಕೆ ಕರೆ ಬಂದರೆ ಅಗತ್ಯವಾಗಿ ತೆರಳುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ. ಬಿಹಾರ ಮತದಾರರಿಗೆ ಮತನೀಡಲು ಕೋರಲಾಗುವುದು ಎಂದರು. ಬಿಹಾರದಲ್ಲಿನ ಅಧಿಕಾರವಿರೋಧಿ ಅಲೆ ಹಾಗೂ ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಅಂಶಗಳು ಪ್ರಮುಖವಾಗಲಿವೆ. ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟವೂ ರಾಜ್ಯದ ಗ್ಯಾರಂಟಿ ಯೋಜನೆಗಳ ಭರವಸೆಗಳ ಮಾದರಿಯನ್ನು ಅನುಸರಿಸಿದೆ.

    ಕರ್ನಾಟಕದಲ್ಲಿ 1.24 ಕೋಟಿ ಮಹಿಳೆಯರಿಗೆ ಪ್ರತಿಮಾಹೆ 2000 ರೂ. ಗೃಹಲಕ್ಷ್ಮಿ ಗ್ಯಾರಂಟಿ ನೀಡಲಾಗುತ್ತಿದೆ. ಇದುವರೆಗೆ ರಾಜ್ಯದಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಲಾಗಿದೆ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದು,ಅವರಿಗೆ ಯಾವುದೇ ಸಿದ್ಧಾಂತವಿಲ್ಲ. ಬಿಹಾರದಲ್ಲಿ ಬಡತನನಿರ್ಮೂಲನೆಯಾಗಿಲ್ಲ. ಆದ್ದರಿಂದ ಬಡವರು, ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪರ ಮತಚಲಾಯಿಸುವ ಭರವಸೆಯಿದೆ ಎಂದರು.

    ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿರುವ ಹಲವು ಸಾಧಕರನ್ನು ಗುರುತಿಸಿ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಬಾರಿ ಪ್ರಶಸ್ತಿಗಾಗಿ ಅರ್ಜಿಯನ್ನು ಕರೆಯದೇ, ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮಾನತೆಯನ್ನು ಗಮನದಲ್ಲಿರಿಸಿ ಪ್ರತಿ ಜಿಲ್ಲೆಯಿಂದಲೂ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ ಎಂದರು.

    ಮೈಸೂರಿನಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೆಸಾರ್ಟ್ ಗಳು ತಲೆ ಎತ್ತುತ್ತಿದ್ದು, ಸಫಾರಿಗಳು ಸೇರಿದಂತೆ ಜನರ ಸಂಚಾರ ಹೆಚ್ಚುತ್ತಿದೆ. ನೀರು ಮತ್ತು ಮೇವಿನ ಕೊರತೆ ಹಾಗೂ ಹುಲಿ ಚಿರತೆಗಳ ಹಾವಳಿಯಿಂದ ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಸಭೆ ಈಗಾಗಲೇ ನಡೆಸಿದ್ದು, ನನ್ನ ಅಧ್ಯಕ್ಷತೆಯಲ್ಲಿಯೂ ಸಭೆ ನಡೆಯಲಿದೆ. ಅಲ್ಲದೇ, ಅಕ್ರಮವಾಗಿ ರೆಸಾರ್ಟ್ ಗಳನ್ನು ನಡೆಸುತ್ತಿರುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರಿಗಾಗಿ ಕೈಗೊಳ್ಳುವ ಸಫಾರಿಗಳ ಸಂಖ್ಯೆಯನ್ನೂ ಕಡಿಮೆ ಮಾಡಲು ಸೂಚನೆ ನೀಡಲಾಗಿದೆ ಎಂದರು.

    ರಾಜ್ಯದಲ್ಲಿ ನೆಲೆಸಿರುವ ಬಿಹಾರಿ ಮತದಾರರು,ಕರ್ನಾಟಕದ ಮುಖ್ಯಮಂತ್ರಿಗಳ ಬದಲಾವಣೆ ಕುರಿತ ಮಾತನಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜನರು ಅಭಿಪ್ರಾಯವೇನೇ ಇದ್ದರೂ, ಹೈಕಮಾಂಡ್ ನ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಈ ಬಗ್ಗೆ ಏನೂ ಹೇಳಿರುವುದಿಲ್ಲ . ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಂಪುಟ ಪುನ್ರಚನೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗುವುದು ಎಂದರು.

    Grand alliance of opposition parties wins Bihar assembly elections

  • ರಾಜ್ಯದ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

    ರಾಜ್ಯದ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

    2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

    # ಎಂ ಸಿದ್ದರಾಜು ಮಂಡ್ಯ
    # ಕೆ ಸುಬ್ರಹ್ಮಣ್ಯ ಬೆಂಗಳೂರು
    # ಅಂಶಿ ಪ್ರಸನ್ನ ಕುಮಾರ್ ಮೈಸೂರು.
    # ಬಿ.ಎಂ. ಹನೀಫ್ ದಕ್ಷಿಣ ಕನ್ನಡ

    2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಅಧಿಕೃತ ಪಟ್ಟಿ ಕರ್ನಾಟಕ ಸರ್ಕಾರದಿಂದ ಪ್ರಕಟವಾಗಿದೆ. ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಆಯ್ಕೆ ಮಾಡಲಾಗಿದೆ.‌ ನಟ ಪ್ರಕಾಶ್‌ ರಾಜ್‌ ಸೇರಿದಂತೆ ವಿವಿಧ ವಲಯಗಳ ಅರ್ಹರಿಗೆ ನಾಡಿನ ಅತ್ಯುನ್ನತ ಗೌರವ ನೀಡಲಾಗುತ್ತಿದೆ.

    ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ‌‌ ಆಯ್ಕೆ ಮಾಡಲಾಗಿದೆ. ನಾಲ್ಕೈದು‌ ಬಾರಿ‌ ಸಭೆ ನಡೆಸಿದ ಸದಸ್ಯರು ಅರ್ಹರನ್ನು ‌ಆಯ್ಕೆ ಮಾಡಲು ಸಹಕರಿಸಿದ್ದಾರೆ ” ಎಂದು ಸಚಿವ ಶಿವರಾಜ್ ತಂಗಡಗಿ ವಿಧಾನಸೌಧದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    . ರಾಜೇಂದ್ರ ಚೆನ್ನಿ – ಶಿವಮೊಗ್ಗ
    ತುಂಬಾಡಿ ರಾಮಯ್ಯ – ತುಮಕೂರು
    ಪ್ರೊ ಅರ್ ಸುನಂದಮ್ಮ – ಚಿಕ್ಕಬಳ್ಳಾಪುರ
    ಡಾ.ಎಚ್.ಎಲ್ ಪುಷ್ಪ – ತುಮಕೂರು
    ರಹಮತ್ ತರೀಕೆರೆ – ಚಿಕ್ಕಮಗಳೂರು
    ಹ.ಮ. ಪೂಜಾರ – ವಿಜಯಪುರ,ಬಸಪ್ಪ ಭರಮಪ್ಪ ಚೌಡ್ಕಿ – ಕೊಪ್ಪಳ
    ಬಿ. ಟಾಕಪ್ಪ ಕಣ್ಣೂರು – ಶಿವಮೊಗ್ಗ
    ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ – ಬೆಳಗಾವಿ
    ಹನುಮಂತಪ್ಪ, ಮಾರಪ್ಪ, ಚೀಳಂಗಿ – ಚಿತ್ರದುರ್ಗ
    ಎಂ. ತೋಪಣ್ಣ – ಕೋಲಾರ
    ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ
    ಸಿಂಧು ಗುಜರನ್‌ – ದಕ್ಷಿಣ ಕನ್ನಡ
    ಎಲ್. ಮಹದೇವಪ್ಪ ಉಡಿಗಾಲ – ಮೈಸೂರು, ದೇವೆಂದ್ರಕುಮಾರ ಪತ್ತಾರ್ – ಕೊಪ್ಪಳ
    ಮಡಿವಾಳಯ್ಯ ಸಾಲಿ – ಬೀದರ್
    ಪ್ರೊ. ಕೆ. ರಾಮಮೂರ್ತಿ ರಾವ್ – ಮೈಸೂರು

    ಚಲನಚಿತ್ರ /ಕಿರುತೆರೆ
    ಪ್ರಕಾಶ್ ರಾಜ್ – ದಕ್ಷಿಣ ಕನ್ನಡ
    ವಿಜಯಲಕ್ಷ್ಮೀ ಸಿಂಗ್ -ಕೊಡಗು

    ಆಡಳಿತ/ ವೈದ್ಯಕೀಯ
    ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) – ಬೆಂಗಳೂರು ದಕ್ಷಿಣ (ರಾಮನಗರ)
    ಡಾ. ಆಲಮ್ಮ ಮಾರಣ್ಣ – ತುಮಕೂರು,. ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ

    ಸಮಾಜ ಸೇವೆ
    ಸೂಲಗಿತ್ತಿ ಈರಮ್ಮ – ವಿಜಯನಗರ
    ಫಕ್ಕೀರಿ – ಬೆಂಗಳೂರು ಗ್ರಾಮಾಂತರ
    ಕೋರಿನ್ ಆಂಟೊನಿಯಟ್ ರಸ್ಕೀನಾ – ದಕ್ಷಿಣ ಕನ್ನಡ
    ಡಾ. ಎನ್. ಸೀತಾರಾಮ ಶೆಟ್ಟಿ – ಉಡುಪಿ
    ಕೋಣಂದೂರು ಲಿಂಗಪ್ಪ – ಶಿವಮೊಗ್ಗ

    ಸಂಕೀರ್ಣ
    ಉಮೇಶ ಪಂಬದ – ದಕ್ಷಿಣ ಕನ್ನಡ
    ಡಾ. ರವೀಂದ್ರ ಕೋರಿಶೆಟ್ಟಿರ್ – ಧಾರವಾಡ
    ಕೆ.ದಿನೇಶ್ – ಬೆಂಗಳೂರು
    ಶಾಂತರಾಜು – ತುಮಕೂರು
    ಜಾಫರ್ ಮೊಹಿಯುದ್ದೀನ್ – ರಾಯಚೂರು
    ಪೆನ್ನ ಓಬಳಯ್ಯ – ಬೆಂಗಳೂರು ಗ್ರಾಮಾಂತರ
    ಶಾಂತಿ ಬಾಯಿ – ಬಳ್ಳಾರಿ
    ಪುಂಡಲೀಕ ಶಾಸ್ತ್ರೀ(ಬುಡಬುಡಕೆ) – ಬೆಳಗಾವಿ

    ಹೊರನಾಡು/ ಹೊರದೇಶ
    ಜಕರಿಯ ಬಜಪೆ (ಸೌದಿ)
    ಪಿ ವಿ ಶೆಟ್ಟಿ (ಮುಂಬೈ)

    ಪರಿಸರ
    ರಾಮೇಗೌಡ – ಚಾಮರಾಜನಗರ
    ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ

    ಕೃಷಿ
    ಡಾ.ಎಸ್.ವಿ.ಹಿತ್ತಲಮನಿ – ಹಾವೇರಿ
    ಎಂ ಸಿ ರಂಗಸ್ವಾಮಿ – ಹಾಸನ

    ಮಾಧ್ಯಮ ಕ್ಷೇತ್ರ
    ಕೆ.ಸುಬ್ರಮಣ್ಯ – ಬೆಂಗಳೂರು
    ಅಂಶಿ ಪ್ರಸನ್ನಕುಮಾರ್ – ಮೈಸೂರು
    ಬಿ.ಎಂ ಹನೀಫ್ – ದಕ್ಷಿಣ ಕನ್ನಡ
    ಎಂ ಸಿದ್ಧರಾಜು – ಮಂಡ್ಯ

    ವಿಜ್ಞಾನ ತಂತ್ರಜ್ಞಾನ
    ರಾಮಯ್ಯ – ಚಿಕ್ಕಬಳ್ಳಾಪುರ
    ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ – ದಾವಣಗೆರೆ
    ಡಾ. ಆರ್. ವಿ ನಾಡಗೌಡ – ಗದಗ

    ಸಹಕಾರ
    ಶೇಖರಗೌಡ ವಿ ಮಾಲಿಪಾಟೀಲ್ – ಕೊಪ್ಪಳ

    ಯಕ್ಷಗಾನ/ ಬಯಲಾಟ/ ರಂಗಭೂಮಿ
    ಕೋಟ ಸುರೇಶ ಬಂಗೇರ- ಉಡುಪಿ
    ಐರಬೈಲ್‌ಆನಂದ ಶೆಟ್ಟಿ – ಉಡುಪಿ
    ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ) – ಉತ್ತರ ಕನ್ನಡ
    ಗುಂಡೂರಾಜ್ – ಹಾಸನ
    ಹೆಚ್.ಎಂ. ಪರಮಶಿವಯ್ಯ – ಬೆಂಗಳೂರು ದಕ್ಷಿಣ (ರಾಮನಗರ)
    ಎಲ್.ಬಿ.ಶೇಖ್ (ಮಾಸ್ತರ್) – ವಿಜಯಪುರ
    ಬಂಗಾರಪ್ಪ ಖುದಾನ್‌ಪುರ – ಬೆಂಗಳೂರು
    ಮೈಮ್ ರಮೇಶ್ – ದಕ್ಷಿಣ ಕನ್ನಡ
    ಡಿ.ರತ್ನಮ್ಮ ದೇಸಾಯಿ – ರಾಯಚೂರು

    ಶಿಕ್ಷಣ ಕ್ಷೇತ್ರ
    ಡಾ. ಎಂ.ಆರ್. ಜಯರಾಮ್ – ಬೆಂಗಳೂರು
    ಡಾ. ಎನ್ ಎಸ್ ರಾಮೇಗೌಡ -ಮೈಸೂರು
    ಎಸ್. ಬಿ. ಹೊಸಮನಿ – ಕಲಬುರಗಿ
    ನಾಗರಾಜು – ಬೆಳಗಾವಿ

    ಕ್ರೀಡೆ
    ಆಶೀಶ್ ಕುಮಾರ್ ಬಲ್ಲಾಳ್ – ಬೆಂಗಳೂರು
    ಎಂ ಯೋಗೇಂದ್ರ – ಮೈಸೂರು
    ಡಾ. ಬಬಿನಾ ಎನ್.ಎಂ (ಯೋಗ) – ಕೊಡಗು

    ನ್ಯಾಯಾಂಗ
    ನ್ಯಾ. ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ) – ಬಾಗಲಕೋಟೆ

    ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ
    ಬಸಣ್ಣ ಮೋನಪ್ಪ ಬಡಿಗೇರ – ಯಾದಗಿರಿ
    ನಾಗಲಿಂಗಪ್ಪ ಜಿ ಗಂಗೂರ – ಬಾಗಲಕೋಟೆ
    ಬಿ. ಮಾರುತಿ – ವಿಜಯನಗರ
    ಎಲ್. ಹೇಮಾಶೇಖರ್ – ಮೈಸೂರು, ರವರಿಗೆ ನೀಡಲಾಗಿದೆ.

    Rajyotsava awards to 70 people from the state

  • ಕಾಗಿನೆಲೆಗೆ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ

    ಕಾಗಿನೆಲೆಗೆ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ

    ಬೆಂಗಳೂರು, ಅಕ್ಟೋಬರ್ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 13ನೇ ಸಭೆಯಲ್ಲಿ ಒಟ್ಟು 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಲಾಯಿತು.

    ಕಾಗಿನೆಲೆಯಲ್ಲಿ ಪ್ರತಿ ವರ್ಷ ಕನಕ ಉತ್ಸವವನ್ನು ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಉತ್ಸವ ಸಂದರ್ಭದಲ್ಲಿ ಜಿಲ್ಲೆಯ ದಾರ್ಶನಿಕರ ಜೀವನಾದರ್ಶಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

    ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಕ ಅಧ್ಯಯನ ಪೀಠ ಸಮನ್ವಯದಿಂದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. ಪ್ರಾಧಿಕಾರದಲ್ಲಿ ಸಂಚಿತ ನಿಧಿಯನ್ನು ಸ್ಥಾಪಿಸಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು. ಪ್ರಾಧಿಕಾರದ ಆದಾಯ ಹೆಚ್ಚಳಕ್ಕೆ ಯೋಜನೆಗಳನ್ನು ರೂಪಿಸಬೇಕು.

    ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕನಕದಾಸರ ಕರ್ಮಭೂಮಿ ಕಾಗಿನೆಲೆ ಮತ್ತು ಜನ್ಮಭೂಮಿ ಸ್ಥಳವಾದ ಬಾಡ ಗ್ರಾಮ ಹಾಗೂ ಸುತ್ತಮುತ್ತಲಿನ ಪರಂಪರೆಯ ತಾಣಗಳನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸುವ ಬಗ್ಗೆ ವಿವಿಧ ಯೋಜನೆಗಳ ಕ್ರಿಯಾ ಯೋಜನೆ ಅನುಮೋದನೆಗೆ ಸಲ್ಲಿಸಲಾಯಿತು.

    ಕನಕ ವಸ್ತು ಸಂಗ್ರಹಾಲಯದಲ್ಲಿ ಒಳವಸ್ತು ಶಿಲ್ಪ ಸಂಗ್ರಹಾಲಯ ನಿರ್ಮಾಣ, ಚೆನ್ನಕೇಶವ ದೇವಾಲಯ, ಮೆಟ್ಟಿಲು, ಗೋಪುರ, ಕಮಾನುಗಳ ನಿರ್ಮಾಣ, ಕದರಮಂಡಲಗಿ ವೆಂಕಟೇಶ್ವರ ದೇವಸ್ಥಾನ, ಸಮುದಾಯ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು.

    ಪ್ರಾಧಿಕಾರದ ವ್ಯಾಪ್ತಿಯ ಉದ್ಯಾನಗಳ ವಾರ್ಷಿಕ ನಿರ್ವಹಣೆ ಗುತ್ತಿಗೆ ನೀಡುವ ಕುರಿತು ಹಾಗೂ ಕನಕ ಪರಿಸರ ಉದ್ಯಾನದಲ್ಲಿ ಖಾಲಿ ಇರುವ ಜಾಗದಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಿಸಲು ನಿರ್ಧರಿಸಲಾಯಿತು. ಕಾಗಿನೆಲೆ ಗ್ರಾಮದ ವ್ಯಾಪ್ತಿಯಲ್ಲಿ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಲು ಚರ್ಚಿಸಲಾಯಿತು.

    ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಸಚಿವರಾದ ಶಿವಾನಂದ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎಂ ರೇವಣ್ಣ,  ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

    Rs 34 crore action plan approved for Kaginele

  • ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಯಾಗಿ ಕೆ.ಎಂ.ಗಾಯಿತ್ರಿ ಅಧಿಕಾರ ಸ್ವೀಕಾರ

    ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಯಾಗಿ ಕೆ.ಎಂ.ಗಾಯಿತ್ರಿ ಅಧಿಕಾರ ಸ್ವೀಕಾರ

    ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

    ಸೆ.30ರಂದೇ ಸಹಕಾರ ಇಲಾಖೆಯು ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅಧಿಕಾರ ದುರ್ಬಳಕೆ, ಹಣಕಾಸು ದುರುಪಯೋಗ ಸೇರಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ವಿರುದ್ಧದ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಈ ನೇಮಕಾತಿ ಮಾಡಲಾಗಿದೆ.

    ಈ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸೋಮವಾರ ನಡೆದ ವಿಚಾರಣೆಯಲ್ಲಿ, ಸರ್ಕಾರವು ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿ ದಂತೆ ಅಗತ್ಯ ದಾಖಲಾತಿಗಳನ್ನು ಕೋರ್ಟ್‌ಗೆ ಸಲ್ಲಿಸಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಕಸಾಪಕ್ಕೆ ಬಂದ ಗಾಯಿತ್ರಿ ಅವರು, ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

    ಆದೇಶ ಹೊರಡಿಸಿದ ದಿನಾಂಕ ದಿಂದ ಮುಂದಿನ ಮೂರು ತಿಂಗಳು ಅಥವಾ ವಿಚಾರಣೆ ಪೂರ್ಣಗೊಳ್ಳು ವವರೆಗೆ ಈ ನೇಮಕಾತಿ ಜಾರಿಯಲ್ಲಿ ಇರಲಿದೆ. ಕಸಾಪದಲ್ಲಿ ಹಣಕಾಸಿನ ಅವ್ಯವಹಾರ, ಅಧಿಕಾರ ದುರ್ಬಳಕೆಯ ಆರೋಪಗಳ ವಿಚಾರಣೆಗೆ ಸಂಬಂಧಿಸಿ ದಂತೆ ಜುಲೈನಲ್ಲಿ ಆದೇಶ ಹೊರಡಿಸಿದ್ದ ಸಹಕಾರ ಇಲಾಖೆ, ವಿಚಾರಣಾಧಿಕಾರಿ ಯನ್ನು ನೇಮಕ ಮಾಡಿತ್ತು.

    ಸೆ. 22ರಂದು ವಿಚಾರಣೆಗೆ ಹಾಜರಾಗುವಂತೆ ಮಹೇಶ ಜೋಶಿ ಅವರಿಗೆ ನೋಟಿಸ್ ನೀಡಿದ್ದ ಇಲಾಖೆ ಕಾರ್ಯದರ್ಶಿ, ‘ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗಿರುವುದರಿಂದ ಏಕೆ ಆಡಳಿತಾಧಿಕಾರಿ ನೇಮಿಸಬಾರದು’ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದರು. ಈ ನೋಟಿಸ್‌ಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದ ಮಹೇಶ ಜೋಶಿ, 15 ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಇಲಾಖೆಗೆ ಲಿಖಿತ ಹೇಳಿಕೆ ಸಲ್ಲಿಸಿದ್ದರು.

    ವಿಚಾರಣೆಗೆ ಸಂಬಂಧಿಸಿದಂತೆ ನಿಗದಿತ ಕಾಲಾವಧಿಯಲ್ಲಿ ಹಾಜರಾಗ ದಿರುವುದು, ಅಗತ್ಯ ದಾಖಲಾತಿಗಳನ್ನು ಒದಗಿಸದಿರುವ ಕಾರಣ ಆಡಳಿತಾಧಿಕಾರಿ ನೇಮಿಸುವಂತೆ ಇಲಾಖೆ ಶಿಫಾರಸು ಮಾಡಿತ್ತು.

    ಪರಿಷತ್ತಿನ ವಿರುದ್ಧದ 17 ಆರೋಪಗಳಿಗೆ ಸಮರ್ಪಕ ಹಾಗೂ ಸಮರ್ಥನೀಯ ಹೇಳಿಕೆ ಅಥವಾ ದಾಖಲಾತಿಯನ್ನು ಸಲ್ಲಿಸಲು ಪರಿಷತ್ತಿನ ಅಧ್ಯಕ್ಷರು ವಿಫಲರಾಗಿದ್ದಾರೆ. ಇಲಾಖೆ ನೇಮಿಸಿದ್ದ ವಿಚಾರಣಾಧಿಕಾರಿಯ ವರದಿ, ಜಿಲ್ಲಾ ನೋಂದಣಾಧಿಕಾರಿಗಳ ಶಿಫಾರಸು ಹಾಗೂ ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವದ ಅನುಸಾರ ವಿಚಾರಣೆಗೆ ಆಡಳಿತಾಧಿಕಾರಿ ನೇಮಕಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    17 ಆರೋಪಗಳ ಪೈಕಿ ಏಳು ಆರೋಪಗಳಿಗೆ ಮಾತ್ರ ವಿಚಾರಣಾ ಅವಧಿಯಲ್ಲಿ ಭಾಗಶಃ ಉತ್ತರವನ್ನು ಕಸಾಪ ಅಧ್ಯಕ್ಷರು ವಿಚಾರಣಾಧಿಕಾರಿಗೆ ನೀಡಿರುತ್ತಾರೆ. ವಿಚಾರಣಾಧಿಕಾರಿ ಕಾಲಾವಕಾಶ ನೀಡಿದರೂ ನಿಗದಿತ ಸಮಯದೊಳಗೆ ದಾಖಲೆಗಳೊಂದಿಗೆ ಉತ್ತರಿಸಲು ವಿಫಲರಾಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.

    K.M. Gayathri assumes office as the Administrator of Kannada Sahitya Parishad
  • ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ

    ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ

    ಬೆಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸನ್ಮಿತ್ರ ಕಾರ್ಯಯೋಜನೆ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

    ನಮ್ಮ ಯುವ ಶಕ್ತಿ, ವಿದ್ಯಾರ್ಥಿ ಯುವಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ದ ನಿಲುವು ತಳೆಯಬೇಕು ಎಂದರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆ, ಅನೈತಿಕ ಪೊಲೀಸ್ ಗಿರಿ ಹೆಚ್ಚಾಗಿತ್ತು. ಹಿಂದಿದ್ದ ಅಧಿಕಾರಿಗಳು ನಿಯಂತ್ರಣ ಮಾಡಲಿಲ್ಲ. ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ನಿಯಂತ್ರಣದಲ್ಲಿದೆ. ಈ ಸಾಧನೆ ಮಾಡಿದ್ದೂ ನಮ್ಮದೇ ಅಧಿಕಾರಿಗಳು ಮತ್ತು ಸಿಬ್ಬಂದಿ. ಇವರೇನು ಬೇರೆ ಗ್ರಹದಿಂದ ಬಂದವರಲ್ಲ. ನಿಮ್ಮವರೇ, ನಮ್ಮವರೇ ಆಗಿದ್ದಾರೆ. ಆದ್ದರಿಂದ ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಸಾಧಿಸಿ ತೋರಿಸಿ ಎಂದು ಕರೆ ನೀಡಿದರು.

    ಇದೇ ರೀತಿ ಇಡೀ ರಾಜ್ಯದಲ್ಲಿ ಮಾದಕ ವಸ್ತು ಹಾವಳಿ ತಪ್ಪಿಸಲು ನಿಮ್ಮಿಂದ ಸಾಧ್ಯವಿದೆ. ನೀವು ಸಾಧ್ಯ ಮಾಡಿದರೆ ಕರ್ನಾಟಕ ಪೊಲೀಸ್ ಘನತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗುತ್ತದೆ ಎಂದರು.

    ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಮಾಡುವವರ ಜೊತೆ, ಡ್ರಗ್ ಜಾಲದ ಜೊತೆ ಶಾಮೀಲಾಗಿರ್ತಾರೆ. ರೌಡಿಗಳನ್ನು ಮೊಳಕೆಯಲ್ಲೆ ಚಿವುಟಿ ಹಾಕುವುದು ನಿಮ್ಮಿಂದ ಸಾಧ್ಯವಿದೆ. ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿದೆ. ಯಾಕೆ ಹೀಗಾಯ್ತು ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡರೆ ಉತ್ತರ ನಿಮಗೇ ಗೊತ್ತಿರುತ್ತದೆ ಎಂದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಆತ್ಮಸಾಕ್ಷಿಯನ್ನು ಕೆದಕಿದರು.

    ಡ್ರಗ್ ಮಾರುವವರು, ತರುವವರು, ಎಲ್ಲಿಂದ ಡ್ರಗ್ಸ್ ಬರುತ್ತದೆ, ಈ ಜಾಲದ ಏಜೆಂಟರು ಯಾರ್ಯಾರು ಎನ್ನುವುದೂ ನಿಮಗೇ ಗೊತ್ತಿರುತ್ತದೆ. ಆದಷ್ಟು ಬೇಗ ರಾಜ್ಯ, “ಡ್ರಗ್ ಮುಕ್ತ ಕರ್ನಾಟಕ” ಆಗಲಿ, ಮಾಡಿ ತೋರಿಸಿ ಎಂದು ಕರೆ ನೀಡಿದರು.

    ಇಂದು ನಾನೇ ಬಿಡುಗಡೆ ಮಾಡಿದ ಪೀಕ್ ಕ್ಯಾಪ್ ಮಾದರಿಯನ್ನೂ ಆಯ್ಕೆ ಮಾಡಿದ್ದು ನಾನೇ. 1956 ರಿಂದ ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿಯ ಕ್ಯಾಪ್ ಅನ್ನು ಇಂದು ಬದಲಾಯಿಸಿದ್ದೇವೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ಒದಗಿಸಲಾಗಿದ್ದು ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿ ಎಂದು ಕರೆ ನೀಡಿದರು.

    ಕೇವಲ ಕ್ಯಾಪ್ ಬದಲಾಗುವುದಲ್ಲ. ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ ಎಂದು ಕರೆ ನೀಡಿದರು.

    The efficiency of the police department gives the government a good name.

  • ಜನಸಂಖ್ಯೆಯಲ್ಲಿ ದೇಶ ನಂಬರ್ ಒನ್. ಒಲಂಪಿಕ್ ಪದಕದಲ್ಲೂ ನಂಬರ್ ಒನ್ ಆಗಬೇಕು

    ಜನಸಂಖ್ಯೆಯಲ್ಲಿ ದೇಶ ನಂಬರ್ ಒನ್. ಒಲಂಪಿಕ್ ಪದಕದಲ್ಲೂ ನಂಬರ್ ಒನ್ ಆಗಬೇಕು

    ಮಂಗಳೂರು: ಜನಸಂಖ್ಯೆಯಲ್ಲಿ ದೇಶ ನಂಬರ್ ಒನ್. ಒಲಂಪಿಕ್ ಪದಕದಲ್ಲೂ ನಂಬರ್ ಒನ್ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

    ನ್ಯೂ ಉರ್ವ ಕ್ರೀಡಾಂಗಣದಲ್ಲಿ ನಡೆದ “ಚೀಫ್ ಮಿನಿಸ್ಟರ್ – ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಪಂದ್ಯಾವಳಿ”ಯನ್ನು ಉದ್ಘಾಟಿಸಿ ಮಾತನಾಡಿದರು.

    ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ಸೇರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದವರಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಎ ಗುಂಪಿನ ಹುದ್ದೆಗಳ ಜೊತೆಗೆ ಇತರೆ ಹುದ್ದೆಗಳನ್ನೂ ಮೀಸಲಿಟ್ಟಿದ್ದೇವೆ.

    DySP ಸೇರಿ ಇತರೆ ಪೊಲೀಸ್ ಹುದ್ದೆಗಳಲ್ಲೂ ಶೇ2 ರಷ್ಟಿದ್ದ ಹುದ್ದೆ ಮೀಸಲಾತಿಯನ್ನು ಶೇ3 ಕ್ಕೆ ಹೆಚ್ವಿಸಿದ್ದೇವೆ. ಜೊತೆಗೆ ಒಲಂಪಿಕ್ ನಲ್ಲಿ ಪದಕ ತಂದು ರಾಜ್ಯದ, ರಾಷ್ಟ್ರದ ಕೀರ್ತಿ ಹೆಚ್ಚಿಸುವವರಿಗೆ 5 ಕೋಟಿ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದೇನೆ. ಇನ್ನೂ ಅಗತ್ಯವಾದ ಅನುಕೂಲಗಳನ್ನೆಲ್ಲಾ ಮಾಡಿಕೊಡಲು ಸರ್ಕಾರ ಸಿದ್ಧವಿದೆ. ಒಟ್ಟಿನಲ್ಲಿ ನೀವು ಪದಕ ತನ್ನಿ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.

    ವಿಶ್ವದ ಅತ್ಯಂತ ಜನಪ್ರಿಯ ಆಟಗಳಲ್ಲಿ ಬ್ಯಾಂಡ್ಮಿಂಟನ್ ಕೂಡ ಒಂದು. ಪ್ರಕಾಶ್ ಪಡುಕೋಣೆ, ಪುಲ್ಲೇಲ ಗೋಪಿಚಂದ್, ಸೈನಾ ನೆಹ್ವಾಲ್, ಪಿ.ವಿ.ಸಿಂಧು ಭಾರತೀಯ ಬ್ಯಾಡ್ಮಿಂಟನ್ ಗೆ ಅಡಿಪಾಯ ಹಾಕಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದರು.

    ಈ ಪಂದ್ಯಾವಳಿ ನಡೆಯುತ್ತಿರುವ ಈ ಉರ್ವ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ಮಾಡಿದ್ದು ನಾನೇ, ಉದ್ಘಾಟನೆ ಕೂಡ ನಾನೇ ಮಾಡಿದೆ. ನಮ್ಮ ಸರ್ಕಾರದ್ದೇ ಹಣ. ಹಿಂದಿನ ಬಿಜೆಪಿ ಸರ್ಕಾರ ಈ ಕ್ರೀಡಾಂಗಣ ಪೂರ್ಣಗೊಳ್ಳಲು ಸಹಕಾರ ನೀಡಲಿಲ್ಲ. ಆದರೆ ಮತ್ತೆ ನಾನೇ ಮುಖ್ಯಮಂತ್ರಿ ಆಗಿ ಬಂದು ಒಟ್ಟು 38 ಕೋಟಿ ರೂಪಾಯಿಗಳನ್ನು ನೀಡಿ ಕ್ರೀಡಾಂಗಣ ಪೂರ್ಣಗೊಳಿಸಲಾಯಿತು ಎಂದು ವಿವರಿಸಿದರು.

    The country is number one in population. Must be number one in Olympic medals

  • “ಶಿವ ಸಾಹಿತ್ಯ ಸೂರ್ಯ ಶ್ರೀ ಜಚನಿ” ಕೃತಿ ಲೋಕಾರ್ಪಣೆ

    “ಶಿವ ಸಾಹಿತ್ಯ ಸೂರ್ಯ ಶ್ರೀ ಜಚನಿ” ಕೃತಿ ಲೋಕಾರ್ಪಣೆ

    ಬೆಂಗಳೂರು: ಮೇಲಿನವರ ಪಾಂಡಿತ್ಯ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದ ಅಧ್ಯಾತ್ಮವನ್ನು ಅಂತ್ಯಜರ ಪ್ರಸಾದವನ್ನಾಗಿಸಿದ್ದು ಜಚನಿ ಶ್ರೀಗಳ ಹೆಗ್ಗಳಿಕೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.

    ಶ್ರೀ ಜಚನಿ‌ ಅಧ್ಯಯನ‌ ಪೀಠ ಮತ್ತು ಸಂಶೋಧನಾ ಸಂಸ್ಥೆಯ ಪ್ರಾರಂಭೋತ್ಸವದಲ್ಲಿ “ಶಿವ ಸಾಹಿತ್ಯ ಸೂರ್ಯ ಶ್ರೀ ಜಚನಿ” ಕೃತಿಯನ್ನು ಜನಾರ್ಪಣೆಗೊಳಿಸಿ ಮಾತನಾಡಿ ಮನುಷ್ಯರನ್ನು ಮುಟ್ಟಿಸಿಕೊಳ್ಳದ ಚರ್ಮಶುದ್ಧಿಯ ಅಧ್ಯಾತ್ಮದ ಗೊಡ್ಡುತನವನ್ನು ಧಿಕ್ಕರಿಸಿ 1948ರಲ್ಲೇ ದಲಿತ ಸಮುದಾಯಕ್ಕೆ ತಮ್ಮ ಮಠವನ್ನು ಮುಕ್ತಗೊಳಿಸಿದ ಜಚನಿ ಶ್ರೀಗಳು ಸಾಮಾಜಿಕ ಮತ್ತು ಅಂತರಂಗದ ಶುದ್ಧಿಯನ್ನೇ ತಮ್ಮ ಅಧ್ಯಾತ್ಮದ ಉದ್ದೇಶವನ್ನಾಗಿಸಿಕೊಂಡಿದ್ದರು ಎಂದು ವಿವರಿಸಿದರು.

    ಆಡು ಮುಟ್ಟದ ಸೊಪ್ಪಿಲ್ಲ, ಜಚನಿ ಶ್ರೀಗಳು ಸಾಹಿತ್ಯ ಕೃಷಿ ಮಾಡದ ವಿಷಯಗಳೇ ಇಲ್ಲ ಎಂದು ಹೇಳಬಹುದು. ಧಾರ್ಮಿಕ, ಅಧ್ಯಾತ್ಮಿಕದಿಂದ ದೇಶದ ತುರ್ತು ಪರಿಸ್ಥಿತಿ, ಸರ್ವಾಧಿಕಾರದವರೆಗೂ ಬರೆದಿದ್ದಾರೆ. ತಮ್ಮ ಬದುಕನ್ನು ಸಾಹಿತ್ಯ ಕೃಷಿ ಮತ್ತು ಅಧ್ಯಾತ್ಮದ ಪ್ರಸಾರಕ್ಕೆ ಮಾತ್ರ ಜಚನಿ ಶ್ರೀಗಳು ಸೀಮಿತಗೊಳಿಸಿಕೊಳ್ಳಲಿಲ್ಲ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಇಡೀ ರಾಜ್ಯ ಸುತ್ತಿದ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರೂ ಆಗಿದ್ದಾರೆ ಎನ್ನುವುದು ಹೊರ ಜಗತ್ತಿಗೆ ಹೆಚ್ಚಾಗಿ ಗೊತ್ತಿಲ್ಲ ಎಂದರು.

    ಭೌತವಿಜ್ಞಾನದಿಂದ ಸಮುದ್ರ ವಿಜ್ಞಾನದವರೆಗೂ, ರೈತರ ಸಮಸ್ಯೆಗಳಿಂದ ಕುಡುಕರ ಸಮಸ್ಯೆಗಳವರೆಗೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಹತ್ತಾರು ಮಂದಿ ಹಲವಾರು ಜೀವಮಾನದಲ್ಲಿ ಮಾಡಬಹುದಾದ ಸಾಧನೆಯನ್ನು ಜಚನಿ ಶ್ರೀಗಳು ಒಂದೇ ಜೀವಮಾನದಲ್ಲಿ ಮಾಡಿ ಮುಗಿಸಿದ್ದಾರೆ ಎಂದರು. ಇಂಥಾ ಜನಮುಖಿ ಅಧ್ಯಾತ್ಮಿಕ ಶಿಖರ ಸೂರ್ಯರ ಕೃತಿಯನ್ನು ಬಿಡುಗಡೆ ಮಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಿಡುಮಾಮಿಡಿ ಶ್ರೀಗಳಿಗೆ ಧನ್ಯತೆಯನ್ನು ಅರ್ಪಿಸುತ್ತೇನೆ.

    12ನೇ ಶತಮಾನದ ವಚನಕ್ರಾಂತಿಯ ರಾಯಭಾರಿಯಾಗಿ 20ನೇ ಶತಮಾನದಲ್ಲಿ ಜಚನಿ ಶ್ರೀಗಳು ಬೆಳಗಿದ್ದಾರೆ. 6000 ಕ್ಕೂ ಹೆಚ್ಚು ಆಧುನಿಕ ವಚನಗಳು, 400ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿರುವುದು ನನ್ನ ಕಲ್ಪನಾ ಶಕ್ತಿಗೂ ನಿಲುಕದ ಅಧ್ಯಾತ್ಮಿಕ‌ ಸಾಧನೆಯಾಗಿದೆ. ಇಂಥಾ ಮಾನವೀಯ ಸಾಧಕ ಗುರುಗಳ ಬಗ್ಗೆ ನಿಡುಮಾಮಿಡಿ ಶ್ರೀಗಳು ಸಂಪಾದಿಸಿರುವ ಈ ಪುಸ್ತಕ ಕೂಡ ಅತ್ಯಂತ ಮೌಲಿಕವಾದದ್ದು. ಈ ಪುಸ್ತಕ ಜಚನಿ ಶ್ರೀಗಳ ಒಟ್ಟಾರೆ ಸಾಧನೆಯನ್ನು ತಿಳಿಯಲು ಮತ್ತು ಅವರ ಮಾರ್ಗದಲ್ಲಿ ಹೋಗಲು ಬಯಸುವವರಿಗೆ ಹೆದ್ದಾರಿಯಾಗಿದೆ ಎಂದು ಹೇಳಲು ಬಯಸುತ್ತೇನೆ.

    ಬೈಲಹೊಂಗಲದ ಅಂಬಡಗಟ್ಟಿ ಗ್ರಾಮದಲ್ಲಿ ಜನಿಸಿ, ನನ್ನ ಕೋಲಾರ ಜಿಲ್ಲೆಯ ಗೂಳೂರಿನ ನಿಡುಮಾಮಿಡಿ ಮಠದ ಪೀಠಾಧಿಪತಿಯಾಗಿ ಕೋಲಾರದ ಮಣ್ಣಿನಲ್ಲಿ ವನಚ ಕ್ರಾಂತಿಯ ಬೆಳಕಿನ ದೀವಿಗೆ ಹಚ್ಚಿರುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು. ಜಗದ್ಗುರು ಚನ್ನಬಸವರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮಿಗಳು “ಜಚನಿ ಶ್ರೀ” ಹೆಸರಿನಲ್ಲಿ ಕನ್ನಡ ಮಣ್ಣಿನಲ್ಲಿ ಶಾಶ್ವತ ನೆಲೆ ಗಳಿಸಿದ್ದಾರೆ. ಇವರ ಪುಸ್ತಕ ಬಿಡುಗಡೆ ಮಾಡುವ ಮೂಲಕ “ಜಚನಿ ಶ್ರೀ” ಗಳು ನನ್ನ‌ ಅಂತರಂಗದಲ್ಲೂ ದಾಖಲಾಗಿದ್ದಾರೆ ಎನ್ನುವ ಧನ್ಯತೆಯನ್ನು ಅರ್ಪಿಸಿ ಮಾತು ಮುಗಿಸುತ್ತೇನೆ.

    “Shiva Sahitya Surya Sri Jachani” book launch